ಮುಪ್ಪದರು

ಯಾವುದೇ ಒಬ್ಬ ಮನುಷ್ಯನ ಜೀವನವು ಮನಸ್ಸು, ದೇಹ ಮತ್ತು ಭಾವನೆಗಳ ಸಮಗ್ರವಾದ ಸಾವಯವ ಅಸ್ತಿತ್ವ ಅಥವಾ ಇರುವಿಕೆ. ಭಾವುಕವಾಗಿರುವ, ಮಾನಸಿಕವಾಗಿರುವ ಮತ್ತು ದೈಹಿಕ ಅನುಭವ ಮೂರು ಪುರಗಳ ಸಾಮ್ರಾಜ್ಯದ ರಾಜಧಾನಿ ಭಾವನೆಗಳೇ.
ಗ್ರಹಿಕೆ, ಮನೋಪ್ರಕ್ರಿಯೆ ಮತ್ತು ಜೈವಿಕ ಪ್ರತಿಕ್ರಿಯೆಗಳಿಗೆ ಭಾವನೆಗಳು ಮುಂಬಾಗಿಲಿನ ರೀತಿಯಲ್ಲಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ನಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ಗ್ರಹಿಸುವುದಷ್ಟು ಮಾತ್ರವಲ್ಲದೇ ಅವನ್ನು ನೋಡುವ ಬಗೆಯನ್ನು, ವ್ಯಾಖ್ಯಾನಿಸುವ ಅಥವಾ ವಿವರಿಸುವ ರೀತಿಯನ್ನೂ ಅದೇ ನಿರ್ವಹಿಸುತ್ತದೆ. ಯಾವುದೇ ಒಂದು ಪ್ರಸಂಗವು ನಡೆದಾಗ ಅದರಿಂದ ಪ್ರೇರಣೆ ಅಥವಾ ಪ್ರಚೋದನೆಗಳನ್ನು ಹೊಂದಿ ಪ್ರತಿಕ್ರಿಯೆ ನೀಡುವುದು, ಸ್ಪಂದಿಸುವುದು, ಸೂಕ್ತರೀತಿಯಲ್ಲಿ ವರ್ತಿಸುವುದಕ್ಕೂ ಹುಟ್ಟುವ ಭಾವನೆಗಳೇ ಕಾರಣವಾಗಿರುತ್ತವೆ. ಅವೇ ಮಾನಸಿಕ ಮತ್ತು ಜೈವಿಕ ವ್ಯವಸ್ಥೆಗಳಲ್ಲಿ ತನ್ನ ಪರಿಣಾಮಕಾರಿಯಾದ ಅಲೆಗಳನ್ನು ಪ್ರಸರಿಸುತ್ತದೆ.
ಮನೋವೈಜ್ಞಾನಿಕವಾಗಿ ಹೇಳುವುದಾದರೆ ಅರಿವು, ಭಾವುಕತೆ ಮತ್ತು ಶರೀರಗಳ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ಇರುತ್ತದೆ. ನಮ್ಮ ಆಲೋಚನೆಗಳು ಭಾವನೆಗಳನ್ನು ಪ್ರಭಾವಿಸುತ್ತವೆ. ಭಾವನೆಗಳು ಮನಸ್ಥಿತಿಯನ್ನು ರೂಪಿಸುತ್ತವೆ. ಮನಸ್ಥಿತಿಯು ಶರೀರದ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ. ಈ ಪ್ರಕ್ರಿಯೆಯ ಮೇಲೆ ಬಹಳ ಮುಖ್ಯವಾದ ಮತ್ತು ಪರಿಣಾಮಕಾರಿಯಾದ ಪಾತ್ರವನ್ನು ವಹಿಸುವುದು ಭಾವ ಕೌಶಲ್ಯ ಅಥವಾ ಎಮೋಶನಲ್ ಇಂಟೆಲಿಜೆನ್ಸ್.
ಪ್ರತಿಯೊಂದನ್ನೂ ಮೊದಲು ನಾವು ಗ್ರಹಿಸುವುದು ಭಾವನೆಗಳ ಮೂಲಕವೇ. ನಂತರವೇ ಅದು ಮನಸ್ಥಿತಿಯಾಗಿ, ವಿಚಾರಗಳಾಗಿ, ಆಲೋಚನೆಗಳಾಗಿ, ನಿರ್ಧಾರಗಳಾಗಿ ಮತ್ತು ವರ್ತನೆಗಳಾಗಿ; ಅಷ್ಟೇ ಅಲ್ಲದೆ ಯಾರೊಟ್ಟಿಗೆ ಎಂತಹ ಸಂಬಂಧವನ್ನು ಹೊಂದುತ್ತೇವೆ ಎಂಬುದೂ ರೂಪುಗೊಳ್ಳುತ್ತವೆ.
ಕಾಲಾನಂತರದಲ್ಲಿ ಈ ಮಾನಸಿಕ ಪ್ರಭಾವಗಳು ನಮ್ಮ ಮೇಲೆ ಜೈವಿಕವಾಗಿ; ಅಂದರ ನಮ್ಮ ಒತ್ತಡದ ಮಟ್ಟಗಳ ಮೇಲೆ, ಆರೋಗ್ಯ; ಇನ್ನೂ ಒಂದು ಹಂತಕ್ಕೆ ಮುಂದುವರಿದು ಹೇಳುವುದಾದರೆ ನಮ್ಮ ಆಯಸ್ಸಿನ ಮೇಲೂ ಪ್ರಭಾವ ಬೀರುತ್ತದೆ.
ಹಾಗಾಗಿಯೇ ಭಾವ ಕೌಶಲ್ಯ ಎನ್ನುವುದು ಬಹಳ ಮುಖ್ಯವಾದದ್ದು. ಭಾವನೆಗಳೇ ನಮ್ಮ ಮಾನಸಿಕ ಮತ್ತು ಜೈವಿಕ ಉಳಿವು ಮತ್ತು ಚಟುವಟಿಕೆಗಳ ದ್ವಾರವಾಗಿರುವಾಗ ಅದನ್ನು ಎಚ್ಚರಿಕೆಯಿಂದಲೂ ಮತ್ತು ಜವಾಬ್ದಾರಿಯಿಂದಲೂ ಕಾಯುವುದು ಅಗತ್ಯ.
ನಮ್ಮ ಭಾವನೆಗಳನ್ನು ನಿರ್ವಹಿಸುವ ಕಲೆಯನ್ನು ಕಲಿತಿದ್ದೇ ಆದರೆ ಅನಗತ್ಯವಾಗಿರುವಂತಹ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ದೂರವಿಡಲು ಸಾಧ್ಯವಾಗುತ್ತದೆ. ಎಚ್ಚರಿಕೆ, ಆತ್ಮ ಸಂಯಮ ಮತ್ತು ಹದವರಿತ ಅಥವಾ ಸಮತೂಕದ ಭಾವುಕತೆಯ ನಿರ್ವಹಣೆಗಳು ಈ ಮೂರೂ ಪದರಗಳಲ್ಲಿ ಸಾಮರಸ್ಯವನ್ನು ಉಂಟುಮಾಡುವುದರ ಮೂಲಕ ಆರೋಗ್ಯಕರವಾದ, ಶಕ್ತಿಶಾಲಿಯಾದ ಮತ್ತು ಸಲಿಲತೆ ಅಥವಾ ಸ್ಥಿತಿಸ್ಥಾಪಕತ್ವದ ಗುಣವುಳ್ಳ ತಮ್ಮತನವನ್ನು ಹೊಂದಲು ಸಾಧ್ಯ.
ಭಾವನೆಗಳನ್ನು ನಿರ್ವಹಿಸುವುದೇ ಹೊರತು ನಿಗ್ರಹಿಸುವುದಲ್ಲ. ನಿಗ್ರಹಿಸುವುದರಿಂದ ಅವು ಅಡಗಿ ಕುಳಿತುಕೊಳ್ಳುತ್ತವೆ. ಅದರಿಂದ ಒತ್ತಡ ಉಂಟಾಗುತ್ತದೆ. ಆದರೆ ನಿರ್ವಹಿಸುವುದು ಎಂದರೆ ಭಾವನೆಗಳನ್ನು ರೂಪಾಂತರಿಸಲು ಅಥವಾ ಅವುಗಳನ್ನು ಒಂದು ಬಗೆಯ ಭಾವನೆಯಿಂದ ಮತ್ತೊಂದು ಬಗೆಯ ಭಾವನೆಗೆ ಬದಲಾಯಿಸಲು ಕಲಿಯುವುದು. ಕೋಪವನ್ನು ತಡೆಯುವುದಕ್ಕೂ ಕೋಪವನ್ನು ಕ್ಷಮೆಯನ್ನಾಗಿ ಪರಿವರ್ತಿಸಿಕೊಳ್ಳಲು ಇರುವ ವ್ಯತ್ಯಾಸವಿದು.
ಇದೇ ಭಾವನೆಗಳ ಪ್ರಭಾವದಿಂದ ನಮ್ಮ ದೈಹಿಕವಾದ ಪರಿಣಾಮಗಳೂ ಕೂಡಾ ಉಂಟಾಗುವುದು. ಖುಷಿಯಿಂದ ಇದ್ದಾಗ ದೇಹವು ಪ್ರತಿಕ್ರಿಯಿಸುವ ರೀತಿಗೂ ಮತ್ತು ಬೇಸರ, ಕೋಪ, ದುಃಖವೇ ಮೊದಲಾದ ಭಾವಗಳ ಒತ್ತಡದಲ್ಲಿ ಇದ್ದಾಗ ದೇಹದಲ್ಲಿ ಉಂಟಾಗುವ ವ್ಯತ್ಯಾಸವನ್ನು ಗಮನಿಸಬಹುದು. ನಮ್ಮ ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ, ನರಗಳು ನಿರ್ವಹಿಸುವ ರೀತಿಯಲ್ಲಿ ಕೂಡಾ ವ್ಯತ್ಯಾಸಗಳು ಕಂಡುಬಂದು ಜೈವಿಕವಾದ ಚಟುವಟಿಕೆಯ ಮೇಲೂ ಕೂಡಾ ಪ್ರಭಾವ ಬೀರುತ್ತದೆ.
ಹೀಗೆ ನಮ್ಮ ಭಾವನೆಗಳ ಮೇಲೆ ಒಡೆತನವನ್ನು ಸಾಧಿಸಿದ್ದೇ ಆದರೆ ನಮ್ಮ ಜೀವನದ ಮೇಲೂ ಒಡೆತನವನ್ನು ಸಾಧಿಸಿದ ಹಾಗೆ ಆಗುತ್ತದೆ.
ಭಾವುಕ, ಮಾನಸಿಕ ಮತ್ತು ಜೈವಿಕ ಸ್ತರಗಳ ಸಂಕೀರ್ಣ ಜಾಲವನ್ನು ಸಮರ್ಥವಾಗಿ ನಿರ್ವಹಿಸಲು ಭಾವಕೌಶಲ್ಯ ಅಥವಾ ಎಮೋಶನಲ್ ಇಂಟಲಿಜೆನ್ಸ್ ಬಹಳ ಮುಖ್ಯವಾಗಿ ಬೇಕಾಗುತ್ತದೆ.
ತನ್ನನ್ನು ತಾನು ಗಮನಿಸಿಕೊಳ್ಳುವ ತನ್ನರಿವು, ಭಾವುಕತೆಯ ಒತ್ತಡಗಳ ನಿರ್ವಹಣೆ, ಸಹಾನುಭೂತಿ ಇವುಗಳ ಮೂಲಕ ನಾವು ಸ್ಪಂದಿಸುವ ರೀತಿಯನ್ನು ನಮ್ಮ ಅಧೀನಕ್ಕೆ ತೆಗೆದುಕೊಳ್ಳುತ್ತಾ ಮಾನಸಿಕ ಮತ್ತು ಜೈವಿಕ ಚಟುವಟಿಕೆಗಳನ್ನು ಆರೋಗ್ಯಕರ ರೀತಿಯಲ್ಲಿ ತೊಡಗುವುದಕ್ಕೆ ತರಬೇತಿ ನೀಡಬಹುದು.
ಪರಸ್ಪರ ಹೆಣೆದುಕೊಂಡು ಪೂರಕವಾಗಿರುವ ಸ್ತರಗಳಿಂದ ಕೂಡಿರುವ ನಮ್ಮತನದ ಅನುಭವಗಳನ್ನು ಸೂಕ್ಷ್ಮತೆಯಿಂದಲೂ ಮತ್ತು ಪರಿಣಾಮಕಾರಿಯಾಗಿಯೂ ಅರಿತುಕೊಳ್ಳಲು ಭಾವ ಕೌಶಲ್ಯ ಎಂಬುದು ಒಂದು ಕೀಲಿಕೈ.
ನಾವು ಗುರುತಿಸುವ, ಗ್ರಹಿಸುವ ಮತ್ತು ಅನುಭವಿಸುವ ವಿಷಯಗಳ ವಿಚಾರದಲ್ಲಿ ಭಾವನೆಗಳು ಮೂರುಸ್ತರಗಳ ಹೆಣಿಗೆಯ ಮೊದಲ ಎಳೆ.
ಭಾವ ಕೌಶಲ್ಯವು ತನ್ನರಿವನ್ನು, ಭಾವುಕತೆಯ ನಿರ್ವಹಣೆಯನ್ನು, ಪರಸ್ಪರ ಬೆಸೆದುಕೊಂಡಿರುವ ಭಾವುಕತೆ, ಮಾನಸಿಕ ಮತ್ತು ದೈಹಿಕವಾದ ಸ್ತರಗಳ ಸಂಕೀರ್ಣತೆಯ ಸಿಕ್ಕುಗಳನ್ನು ಬಿಡಿಸುವ ಬಗೆಯನ್ನು ಹೊಂದಿರುತ್ತದೆ. ಮನುಷ್ಯನ ಸಾವಯವ ಚಟುವಟಿಕೆಯನ್ನು ಹದಗೊಳಿಸುವ ಸಮಗ್ರ ವಿಧಾನ ಭಾವಕೌಶಲ್ಯವಾಗುತ್ತದೆ. ಇದೇ ಮಾನಸಿಕ ಮತ್ತು ಜೈವಿಕ ಸವಾಲುಗಳನ್ನು ಎಚ್ಚರಿಕೆಯಿಂದ ಎದುರಿಸಲೂ ಸಾಧ್ಯವಾಗುತ್ತದೆ. ಭಾವನೆಗಳು ನಮ್ಮಲ್ಲಿ ಒತ್ತಡ ಅಥವಾ ಭಾವುಕತೆಯನ್ನು ಉಂಟು ಮಾಡುವುದು ಮಾತ್ರವಲ್ಲದೆ ಅವು ಭದ್ರಕೋಟೆಯಾಗಿ ಅಥವಾ ರಕ್ಷಣಾಕವಚವಾಗಿಯೂ ಕೂಡಾ ಸಲ್ಲುತ್ತವೆ.