ಸಂಬಂಧ ಯೋಗ

ಯೋಗ ಎಂದರೆ ಸಾಮಾನ್ಯರ ಕಣ್ಣಳತೆಯಲ್ಲಿ ಕಾಣುವುದು ಸರಾಗವಾಗಿ ಬಾಗುವ, ಏಳುವ, ದೇಹವನ್ನು ಸುಲಲಿತವಾಗಿ ಮಡಚುವ, ಹಿಗ್ಗಿಸುವ, ಕುಗ್ಗಿಸುವ ವ್ಯಾಯಾಮ. ಈ ವ್ಯಾಯಾಮದ ಭಂಗಿಗಳೆಲ್ಲವೂ ಆಸನಗಳು. ಅದು ಯೋಗ ಮತ್ತು ಆಸನ. ಆದರೆ ಯೋಗಾಸನದಲ್ಲಿ ಆಸನವನ್ನು ಮೊಟಕುಗೊಳಿಸಿ ಯೋಗ ಮಾಡಿಕೊಂಡು ಬಿಟ್ಟಿದ್ದಾರೆ. ವಾಸ್ತವವಾಗಿ ಯೋಗ ಎಂಬುದು ‘ಯುಜ್’ ಎಂಬ ಮೂಲಪದದಿಂದ ಬಂದಿದ್ದು, ಅದರ ಅರ್ಥ ಸೇರಿಸು ಎಂದಾಗಿದೆ. ಎರಡನ್ನು ಸೇರಿಸುವುದು, ಸಂಯೋಜಿಸುವುದು, ಬಂಧಿಸುವುದು, ಬೆಸುಗೆಯಾಗುವುದೇ ಇತ್ಯಾದಿ ಅರ್ಥಗಳಿವೆ.
ನಮ್ಮ ಹಿರಿಯರು ಮಾತಾಡುವಾಗ ಹೇಳುತ್ತಿದ್ದರು, ‘‘ಯೋಗ ಕೂಡಿ ಬಂದಾಗ ಅದಾಗುತ್ತೆ’’ ಎಂದು ಯೋಗದ ಮೂಲ ಅರ್ಥಕ್ಕೆ ಸಮೀಪವಾಗಿ ಮಾತಾಡುತ್ತಿದ್ದರು. ಕೂಡುವುದೇ ಯೋಗ. ಯಾವುದು ಪೆಡುಸಾಗಿರುತ್ತದೆಯೋ ಅಥವಾ ಬಿಗಿತದಲ್ಲಿ ಇರುತ್ತದೆಯೋ ಅದು ಕೂಡುವುದಕ್ಕೆ ಒಲ್ಲದು. ಯಾವುದು ಸಲಿಲತೆಯಿಂದ ಅಥವಾ ನಮ್ಯತೆಯಿಂದ ಇರುತ್ತದೆಯೋ ಅದು ಕೂಡುವುದು.
ಮನಸ್ಸು ಹಟಮಾರಿತನದಲ್ಲಿ ಪೆಡುಸಾಗಿದ್ದರೆ ಮತ್ತೊಂದು ಮನಸ್ಸಿನ ಜೊತೆಗೆ ಕೂಡದು. ಅಂದರೆ ಬಿಗಿತದ ವ್ಯಕ್ತಿತ್ವವುಳ್ಳ ಮನುಷ್ಯರು ಮತ್ತೊಂದು ವ್ಯಕ್ತಿಯೊಂದಿಗೆ ಕೂಡರು. ಸಂಬಂಧ ಬೆಸೆದುಕೊಳ್ಳರು. ಮನಸ್ಸಿನ ಪೆಡಸುತನಕ್ಕೆ ಮೂಲ ಮತ್ತು ಮಹಾ ಕಾರಣವೆಂದರೇನೇ ಅಹಂಕಾರ. ಅಹಂಕಾರದಿಂದ ಸಂಪರ್ಕವೂ ಸಾಧ್ಯವಾಗದು, ಹಾಗಾಗಿ ಸಂಬಂಧ ಬೆಸೆಯದು ಅಥವಾ ಕೌಟುಂಬಿಕ ಅಥವಾ ಸಾಮಾಜಿಕ ಕಾರಣಗಳಿಂದ ಸಂಬಂಧಗಳು ಏರ್ಪಟ್ಟಿದ್ದರೂ ಮನಸ್ಸುಗಳು ಪೆಡಸುತನದಿಂದ ಕೂಡಿದ್ದರೆ ಸಂಪರ್ಕ ಸಾಧಿಸಲಾರರು.
ಸಂಬಂಧ ಯೋಗವೆಂದರೆ ವ್ಯಕ್ತಿಗಳ ಔಪಚಾರಿಕ ಅಥವಾ ಅನೌಪಚಾರಿಕ ಸಂಬಂಧಗಳು ಸಲಿಲತೆಯಿಂದ ಇದ್ದು, ನಮ್ಯತೆಯಿಂದ ಕೂಡಿದ್ದು ಪರಸ್ಪರ ಬೆಸೆದುಕೊಳ್ಳುವುದು. ಇದೇ ಮೈತ್ರಿಭಾವ ಕೂಡಾ. ಬರೀ ವ್ಯಕ್ತಿ ವ್ಯಕ್ತಿಗಳು ಮಾತ್ರವಲ್ಲ, ಇಡೀ ಜೀವರಾಶಿಯೊಡನೆ, ಗಿಡ, ಮರ, ಗಾಳಿ, ನೀರು, ಭೂಮಿ, ಆಕಾಶ; ಒಟ್ಟಾರೆ ಪ್ರಕೃತಿಯೊಡನೆ ಸಂಬಂಧವನ್ನು ಬೆಸೆದುಕೊಳ್ಳಲು ಸಾಧ್ಯ. ಅದು ವಾಸ್ತವ ಕೂಡಾ. ನಾವು ಪರಸ್ಪರ ಪರಿಚಿತರಾಗಿರದಿದ್ದರೂ, ಒಡನಾಡದಿದ್ದರೂ ಪ್ರತಿಯೊಬ್ಬರೂ, ಪ್ರತಿಯೊಂದು ಜೀವಿಯೂ ಈ ಸೃಷ್ಟಿಯಲ್ಲಿ ಸಾವಯವ ಸಂಬಂಧವನ್ನು ಹೊಂದಿದೆ. ಇದನ್ನು ಇನ್ನೂ ಮಣ್ಣಿನ ಕಣ್ಣಿಂದ ನೋಡುವುದಾದರೆ ಒಂದೇ ಭೂಮಿ ತಾಯಿಯ ಕಳ್ಳುಬಳ್ಳಿಗಳು.
ನಿಜವಾದ ಆನಂದ ಭೇದಗಳನ್ನು ಮಾಡುವುದರಲ್ಲಿ ಖಂಡಿತ ಇಲ್ಲ. ಬೆಸೆದುಕೊಳ್ಳುವುದರಲ್ಲಿ ಇದೆ, ಎಲ್ಲರನ್ನೂ ಒಳಗೊಳ್ಳುವುದರಲ್ಲಿ ಇದೆ. ‘‘ಹತ್ತಿರವಿದ್ದರೂ ದೂರ ನಿಲ್ಲುವೆವು ನಮ್ಮ ಅಹಮಿನ ಕೋಟೆಯಲಿ’’ ಎಂದು ಜಿ.ಎಸ್. ಶಿವರುದ್ರಪ್ಪನವರು ಹೇಳುವುದು ಇದನ್ನೇ. ನಮ್ಮ ನಮ್ಮ ಅಹಂಕಾರದ ಕೋಟೆಗಳಲ್ಲಿ ನಾವೇ ಬಂಧಿತರಾಗಿ ಒಬ್ಬಂಟಿಗಳಾಗುತ್ತೇವೆ. ಜನಗಳೊಂದಿಗೆ ಇದ್ದರೂ ಆಪ್ತತೆ, ಪ್ರಾಮಾಣಿಕ ಆತ್ಮೀಯತೆಯಿಲ್ಲದೆ, ಆರ್ದ್ರತೆ ಇಲ್ಲದೇ ಲೌಕಿಕ ಮತ್ತು ಸಾಮಾಜಿಕ ಸಂಬಂಧಗಳ ಬರಿದೇ ಹೆಸರುಗಳ ಬಲದಲ್ಲಿ ಯಾಂತ್ರಿಕವಾಗುತ್ತೇವೆ ಎಂಬುದು ಇಲ್ಲಿನ ವಿಷಯ.
ಮನಸ್ಸಿನ ಪೆಡಸುತನ ಸಹಾನುಭೂತಿಯನ್ನು ಇಲ್ಲವಾಗಿಸುವುದಲ್ಲದೆ ಭಾವ ಸಂವೇದನೆಯನ್ನೂ ಬತ್ತಿಸುತ್ತದೆ. ಎಮೋಶನಲ್ ಸೆನ್ಸಿಟಿವಿಟಿ ಅಥವಾ ಭಾವ ಸಂವೇದನೆಯೇ ಪರಸ್ಪರರನ್ನು ಕೂಡಿಸಿ ಸಂಬಂಧ ಎನಿಸುವುದು.
ಮನಶಾಸ್ತ್ರದ ಅಧ್ಯಯನಗಳು ಹೇಳುವಂತೆ ಉತ್ತಮ ಸಂಬಂಧಗಳು ಪದೇ ಪದೇ ಸಾಬೀತಾಗುವುದು ಸಂಪತ್ತು ಅಥವಾ ಖ್ಯಾತಿಯಿಂದ ಅಲ್ಲ, ನಮ್ಯತೆಯಿಂದ ಕೂಡಿದ್ದು, ಪೆಡಸುತನ ಇಲ್ಲದ ಭಾವಸಂವೇದನೆಯ ಮನಸ್ಸುಗಳಿಂದ ಎಂದು.
ಭಾವ ಸಂವೇದನೆಯ ಮನಸ್ಸುಗಳ ಮೊಟ್ಟ ಮೊದಲ ಗುಣವೆಂದರೆ ಆಕ್ರಮಣಕಾರಿ ಯಾಗಿರದೇ ತೆರೆದುಕೊಳ್ಳುವುದು. ತೆರೆದುಕೊಂಡಂತಹ ಮುಕ್ತ ಮನಸ್ಸು ಇನ್ನೊಬ್ಬ ವ್ಯಕ್ತಿಯನ್ನು ಸಹಾನುಭೂತಿಯಿಂದ ನೋಡುತ್ತದೆ. ಆತ ಅಥವಾ ಆಕೆ ತನ್ನ ಅಜ್ಞಾನ ಅಥವಾ ಹಿಂದಿನ ಪ್ರಭಾವಗಳಿಂದ ಈಗ ತೋರುತ್ತಿರುವ ವರ್ತನೆಗೆ ಕಾರಣವನ್ನು ಕಂಡುಕೊಳ್ಳುತ್ತದೆ. ಹಾಗಾಗಿ ಆ ವ್ಯಕ್ತಿಯ ವರ್ತನೆಗಳಿಗೆ ಆ ವ್ಯಕ್ತಿಯನ್ನೇ ನೇರವಾಗಿ ಹೊಣೆಯನ್ನಾಗಿಸಿ ಆರೋಪಿಸುತ್ತಾ ದೂರುವುದರ ಬದಲು ಅಂತಹ ವರ್ತನಾ ಸಮಸ್ಯೆಯನ್ನು ತಾನು ಹೇಗೆ ನಿಭಾಯಿಸಬೇಕೆಂದು ನೋಡಿಕೊಳ್ಳಲಾಗುವುದು.
ಎದುರಿನ ವ್ಯಕ್ತಿಯ ನಕಾರಾತ್ಮಕ ವರ್ತನೆಗೆ ‘ಏಟು ಎದಿರೇಟು’ ಎಂಬಂತೆ ವರ್ತಿಸುವ ಬದಲು, ತಮ್ಮ ವರ್ತನೆಯಿಂದ ಅವರ ನಕಾರಾತ್ಮಕ ಗುಣಗಳನ್ನು ಮತ್ತಷ್ಟು ಜಿದ್ದುಗೇಡಿತನಕ್ಕೆ ತಳ್ಳುವ ಬದಲು, ಉಪಶಮನ ಮಾರ್ಗವನ್ನು ಕಂಡುಕೊಳ್ಳಲು ಯತ್ನಿಸಲಾಗುವುದು. ಬೆಂಕಿಯಿಂದ ಬೆಂಕಿಯನ್ನು ಆರಿಸಲಾಗದು ಎಂಬ ಸಾಮಾನ್ಯ ತತ್ವವಿದು. ಸಂಬಂಧ ಯೋಗವೆಂಬುದು ಆಗ ಸಾಧ್ಯವಾಗುತ್ತದೆ.
ಸಂಬಂಧ ಯೋಗದ ಸೂತ್ರವೆಂದರೇನೇ, ಸಹಾನುಭೂತಿಯಿಂದ ಕೂಡಿರುವ ಭಾವಸಂವೇದನೆ. ತರ್ಕ, ವಾದ, ವಿವಾದ, ಗೆಲುವು, ಜಿದ್ದು, ಹಟಮಾರಿತನಗಳಾವುವೂ ಕೂಡಿಸುವ ಬದಲು ವಿಭಜಿಸುತ್ತವೆ. ವ್ಯಕ್ತಿ ವ್ಯಕ್ತಿಗಳ ನಡುವಾಗಲಿ, ಸಮೂಹ ಸಮೂಹಗಳ ನಡುವಾಗಲಿ, ಸಮುದಾಯ ಸಮುದಾಯಗಳ ನಡುವಾಗಲಿ ಅಥವಾ ದೇಶ ದೇಶಗಳ ನಡುವಾಗಲಿ. ವ್ಯಕ್ತಿಗಳು ವೈಯಕ್ತಿಕ ಸಂಬಂಧ ಯೋಗ ಸಾಧಿಸುತ್ತಾ ಜಗಳಗಳನ್ನು ಇಲ್ಲವಾಗಿಸುವಂತೆ ದೇಶಗಳು ಯುದ್ಧಗಳನ್ನೂ ಇಲ್ಲವಾಗಿಸಿಕೊಳ್ಳಬಹುದು. ಅದೇ, ಸಹನೂಭೂತಿಯುಳ್ಳ ಭಾವಸಂವೇದನೆಯದ್ದೇ ಬಹುದೊಡ್ಡ ಕೊರತೆ ಅಷ್ಟೇ!
ಹಿರಿಯರು ಯೋಗ ಕೂಡಿ ಬಂದಾಗ ಅನ್ನುತ್ತಿದ್ದದ್ದು, ನಾವು ತೆರೆದುಕೊಂಡ ಮನಸ್ಸು ಮತ್ತು ಹೃದಯಕ್ಕೆ ಅದ್ಯಾವುದೋ ನಮ್ಮ ಬಯಕೆಯ ವ್ಯಕ್ತಿ, ವಸ್ತು ಅಥವಾ ವಿಷಯವೂ ನಮಗೆ ತೆರೆದುಕೊಂಡು ಕೂಡಿಕೊಳ್ಳುವುದರ ಬಗ್ಗೆ.