ಮನೋವೈಚಾರಿಕವಾಗಿ ಧರ್ಮ

ಕಣ್ಣಿಗೆ ಕಾಣದ ಅದೃಶ್ಯ ಶಕ್ತಿಯೊಂದು ಮನುಷ್ಯನ ಹೊರಗೂ ಮತ್ತು ಒಳಗೂ ಕೆಲಸ ಮಾಡುತ್ತಿದೆ ಎಂಬುದನ್ನೇನೋ ನಮ್ಮ ಹಿರೀಕರು ತಮ್ಮ ಅರಿವು, ಗಮನ, ಗ್ರಹಿಕೆ ಮತ್ತು ಅನುಭವಗಳಿಂದ ಕಂಡುಕೊಂಡಿದ್ದರು. ಆದರೆ ಆ ವಿಷಯವು ಅದೃಶ್ಯವಾಗಿರುವ ಕಾರಣದಿಂದಲೇ ಅಸ್ಪಷ್ಟವೂ ಆಗಿತ್ತು. ಆದರೂ ಅಸ್ಪಷ್ಟದಲ್ಲೇ ಸ್ಪಷ್ಟತೆಯನ್ನು ಕಂಡುಕೊಳ್ಳಲು ಪರಿಕಲ್ಪನೆಗಳ ನೆರವನ್ನು ಪಡೆಯಲು ಯತ್ನಿಸಿದ್ದರು. ಮನುಷ್ಯನ ಒಳಗಿನ ಅದೃಶ್ಯ ಶಕ್ತಿಯನ್ನು ಮನಸ್ಸು ಎಂದೂ, ಹೊರಗಿನ ಅದೃಶ್ಯ ಶಕ್ತಿಗೆ ದೇವರು ಎಂದೂ ಒಂದು ಹಂತಕ್ಕೆ ಒಮ್ಮತಕ್ಕೆ ಬಂದಿದ್ದರು. ತಾತ್ವಿಕವಾಗಿ ಮತ್ತು ತಾಂತ್ರಿಕವಾಗಿ ಭಿನ್ನ ಭಿನ್ನ ನೋಟಗಳಿಂದ, ಆಯಾಮಗಳಿಂದ ಮತ್ತು ನಿರೂಪಣೆಗಳನ್ನು ಕಟ್ಟಿಕೊಟ್ಟರು. ಅವರವರ ಕಾಲದಲ್ಲಿ, ಅವರವರ ದೇಶಗಳಲ್ಲಿ ಇದ್ದಂತಹ ಸಾಮಾಜಿಕ ಒತ್ತಡ, ಶೋಷಣೆ, ದೌರ್ಜನ್ಯವೇ ಮೊದಲಾದ ವಿಷಯಗಳಿಂದ ಅಸಹಾಯಕರನ್ನು, ಬಳಲಿದವರನ್ನು ವಿಮೋಚನೆ ಮಾಡಲೆಂದೇ ಒಂದು ನೈತಿಕತೆಯ ಆಯಾಮಗಳ ರಚನೆಗಳನ್ನು ರೂಪಿಸಲು ಯತ್ನಿಸಿದರು. ಅವುಗಳನ್ನು ನಾವು ಇಂದು ಧರ್ಮಗಳು ಎನ್ನುತ್ತೇವೆ. ಮಾನವ ಇತಿಹಾಸದಲ್ಲಿ ಧರ್ಮಗಳು ಹುಟ್ಟಿಕೊಂಡದ್ದು ಭಯ ಹುಟ್ಟಿಸಲು ಅಲ್ಲ, ಭಯದಿಂದ ಮನುಷ್ಯನ ಮನಸ್ಸನ್ನು ಮುಕ್ತಗೊಳಿಸಲು. ಅವುಗಳ ಮೂಲ ಉದ್ದೇಶ ವ್ಯಕ್ತಿಯನ್ನು ಶೋಷಣೆಯಿಂದ, ಅಪರಾಧ ಭಾವದಿಂದ ಮತ್ತು ಅಸಹಾಯಕತೆಯಿಂದ ಬಿಡಿಸಿ ಮಾನಸಿಕ ಸ್ವಾತಂತ್ರ್ಯ (psychological freedom) ನೀಡುವುದು.
ಒಂದು ಕಾಲಘಟ್ಟದಲ್ಲಿ ಸಮಾಜಗಳು ಅಸಮಾನತೆ, ಹಿಂಸೆ ಮತ್ತು ಶೋಷಣೆಯಿಂದ ಕೂಡಿದ್ದವು. ಬಲಹೀನರು ವೌನವಾಗಿದ್ದರು, ಶಕ್ತಿಶಾಲಿಗಳು ನಿಯಂತ್ರಿಸುತ್ತಿದ್ದರು. ಈ ಪರಿಸ್ಥಿತಿ ವ್ಯಕ್ತಿಗಳಲ್ಲಿ ಅಸಹಾಯಕತೆಯ ರೂಢಿಯನ್ನು (learned helplessness) ಮತ್ತು ಕೀಳರಿಮೆಯ ಗುರುತನ್ನು (shame-based identity) ಬೆಳೆಸಿತ್ತು.
ಅಂತಹ ಸಂದರ್ಭದಲ್ಲಿ ಧರ್ಮಗಳು ಒಂದು ಕ್ರಾಂತಿಕಾರಿ ಸಂದೇಶವನ್ನು ತಂದವು: ‘ನೀನು ಮಾನವ; ನಿನ್ನ ಜೀವನ ವೌಲ್ಯವುಳ್ಳದ್ದು’. ಈ ಸಂದೇಶವು ವ್ಯಕ್ತಿಯ ಒಳಜಗತ್ತಿನಲ್ಲಿ ದೊಡ್ಡ ಬದಲಾವಣೆ ತಂದಿತು. ‘ನಾನು ಪಾಪಿ’, ‘ನಾನು ಕೀಳು’, ‘ನಾನು ಪ್ರಶ್ನಿಸಬಾರದು’’ ಎಂಬ ಆಂತರಿಕವಾಗಿ ಬಂದಿಯಾಗಿರುವುದನ್ನು (internalized oppression) ಒಡೆಯಿತು.
ಮನಸ್ಸಿಗೆ ಮೊದಲ ಬಾರಿ ಧರ್ಮ ಭರವಸೆ ನೀಡಿದ್ದು, ‘‘ನಿನ್ನ ಅಂತರಾತ್ಮವೂ ಪವಿತ್ರ; ನಿನ್ನ ನೋವಿಗೂ ಮಾನ್ಯತೆ ಇದೆ’’ ಎಂದು. ಧರ್ಮಗಳ ಮನೋವೈಜ್ಞಾನಿಕ ಪಾತ್ರ ಇಲ್ಲಿ ಆರಂಭವಾಗುತ್ತದೆ.
ಅವು ವ್ಯಕ್ತಿಯನ್ನು ಅಪರಾಧಿ ಪ್ರಜ್ಞೆ ಮತ್ತು ಭಯದ ಹಿಡಿತದಿಂದ ಬಿಡಿಸಿ, ಆತ್ಮ ಗೌರವ, ನೈತಿಕ ಬಲ ಮತ್ತು ತನ್ನರಿವು ಬೆಳೆಸಲು ಬಂದವು. ವಾಸ್ತವ ದಲ್ಲಿ ಇದು ವ್ಯಕ್ತಿಯನ್ನು ಅಧೀನವಾಗಿಸುವುದಲ್ಲ, ಬದಲಿಗೆ ಜಾಗೃತ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿಯಾಗಿಸುವ ಪ್ರಕ್ರಿಯೆಯಾಗಿತ್ತು.
psychological healing ಭಾವನಾತ್ಮಕವಾಗಿ, ಧರ್ಮಗಳು ಕರುಣೆ ಮತ್ತು ಕ್ಷಮೆಯನ್ನು ಭಾವನೆಗಳ ನಿಯಂತ್ರಣ ಮತ್ತು ಸ್ವಕರುಣೆ ರೂಪದಲ್ಲಿ ಕಲಿಸಿವೆ. ತಪ್ಪು ಮಾಡಿದ ವ್ಯಕ್ತಿಯನ್ನು ದಂಡಿಸಲು ಅಲ್ಲ, ಅವನನ್ನು ಮಾನಸಿಕವಾಗಿ ಗುಣಮುಖನನ್ನಾಗಿಸಲು ಅಥವಾ ಕಡೆಗೆ ಕರೆದೊಯ್ಯಲು.
ಇಲ್ಲಿ ವ್ಯಕ್ತಿಯನ್ನು ತನ್ನ ತಪ್ಪಿನಿಂದ ಗುರುತಿಸದೆ, ತನ್ನ ಮಾನವೀಯತೆಯಿಂದ ಗುರುತಿಸಲಾಗುತ್ತದೆ.
ಸಾಮಾಜಿಕವಾಗಿ, ಧರ್ಮಗಳ ಗುರಿ ವಿಭಜನೆ ಅಲ್ಲ. ಅವು ಪರಾನುಭೂತಿ (empathy), ಸಾಮಾಜಿಕ ಬೆಸುಗೆ (social bonding) ಮತ್ತು ಸಂಕಲಿತ ಸ್ಥಿತಿಸ್ಥಾಪಕತ್ವ ಗುಣ (collective resilience) ನಿರ್ಮಿಸಲು ಬಂದವು.
ಬಲವಂತದ ಶಾಂತಿ ಅಲ್ಲದೆ, ನ್ಯಾಯ ಮತ್ತು ಗೌರವದಿಂದ ರೂಪುಗೊಂಡ ಶಾಂತಿಯೇ ಧರ್ಮಗಳ ಸಾಮಾಜಿಕ ಸಂವೇದನೆಯ ಮನೋವೈಜ್ಞಾನಿಕ ಉದ್ದೇಶವಾಗಿತ್ತು. ಈ ವೌಲ್ಯಗಳನ್ನು ಜೀವನದಲ್ಲಿ ತರಲು ಧರ್ಮಗಳು ನೈತಿಕ ಶಿಸ್ತುಗಳನ್ನು ಮುಂದಿಟ್ಟವು. ಇವು ಅವರನ್ನು ಹೊರಗಿನಿಂದ ನಿಯಂತ್ರಿಸಲು ಅಲ್ಲ. ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಮತ್ತು ಚಾರಿತ್ರ್ಯವನ್ನು ಕಟ್ಟಿಕೊಳ್ಳುವುದಕ್ಕಾಗಿ. ನೈತಿಕತೆ ಎಂದರೆ ಭಯದಿಂದ ನಡೆಯುವ ಬದುಕಲ್ಲ; ಅದು ಅರಿವು ಮತ್ತು ಜವಾಬ್ದಾರಿಯಿಂದ ರೂಪುಗೊಂಡ ಬದುಕು.
ಹೀಗಾಗಿ ಧರ್ಮಗಳ ನಿಜವಾದ ಕರ್ತವ್ಯ ಜೀವನವನ್ನು ಕುಗ್ಗಿಸುವುದಲ್ಲ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಜೀವನವನ್ನು ಅರಳಿಸುವುದು. ವ್ಯಕ್ತಿಯ ಮನಸ್ಸನ್ನು ಮುಕ್ತಗೊಳಿಸುವುದು, ಸಾಮೂಹಿಕ ಮನಸ್ಸಿನಲ್ಲಿ ಸಹಾನುಭೂತಿ ಬೆಳೆಸುವುದು ಮತ್ತು ಸಮಾಜವನ್ನು ಮಾನವೀಯತೆಯ ನೆಲೆಯ ಮೇಲೆ ಕಟ್ಟುವುದು.
ಯಾವ ನಂಬಿಕೆ ಈ ಕೆಲಸ ಮಾಡುತ್ತದೋ, ಅದೇ ಮನಸ್ಸಿಗೆ ಸ್ನೇಹಿ, ಜೀವನಪರ ಧರ್ಮ.
ಮನೋವೈಜ್ಞಾನಿಕವಾಗಿ ಒಂದು ಸಾಲಿನಲ್ಲಿ ಹೇಳುವುದಾದರೆ, ಮಾನಸಿಕವಾಗಿ ಆರೋಗ್ಯಕರ ಧರ್ಮ ಭಯದಿಂದಲ್ಲ, ಜಾಗೃತಿಯಿಂದ ಬದುಕಲು ಕಲಿಸುವ ಉದ್ದೇಶದ್ದಾಗಿರಬೇಕು. ಆದರೆ ಯಾವುದೇ ಧರ್ಮಕ್ಕೆ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಸಂವೇದನೆ ಇಲ್ಲದಿದ್ದರೆ ಅದು ನಿರರ್ಥಕವಾಗುತ್ತದೆ. ಧರ್ಮಗಳು ಹುಟ್ಟಿಕೊಂಡದ್ದು ಮಾನವನ ಜೀವನವನ್ನು ಸುಧಾರಿಸಲು. ಮನಸ್ಸಿಗೆ ನೆಮ್ಮದಿ, ಹೃದಯಕ್ಕೆ ಕರುಣೆ, ಸಮಾಜಕ್ಕೆ ನ್ಯಾಯ ತರುವ ಉದ್ದೇಶವೇ ಅದರ ಬೇರು.







