ಸೊಬಗಿನ ಭ್ರಮೆ

ಮನಸ್ಸಿಗೆ ನಶ್ವರತೆ ಎಂದರೆ ಭಯ. ಇಲ್ಲಿಯೇ ಮನಸ್ಸಿನ ಹಳತರ ಒಲವು ಮತ್ತಷ್ಟು ಆಳವಾಗುತ್ತದೆ. ಪ್ರತಿಯೊಂದೂ ಬದಲಾಗುತ್ತದೆ. ವಯಸ್ಸಾದಂತೆ ದೇಹದಲ್ಲಿ ಬದಲಾವಣೆಗಳಾಗುತ್ತವೆ. ವ್ಯಕ್ತಿಗಳೊಂದಿಗೆ, ವಸ್ತುಗಳೊಂದಿಗೆ, ಸನ್ನಿವೇಶ ಮತ್ತು ಪ್ರಸಂಗಗಳೊಂದಿಗೂ ಕೂಡಾ ವ್ಯಕ್ತಿಯ ಸಂಬಂಧಗಳು ಬದಲಾಗುತ್ತವೆ. ವಿಸ್ಮಯಗೊಳಿಸುವ, ವೈಭವದಿಂದ ಮತ್ತು ಕ್ರಮದಲ್ಲಿ ಎಷ್ಟೋ ಕಾಲ ವಿಕಾಸವಾಗಿ ಬಾಳಿ ಬದುಕಿದ ನಾಗರಿಕತೆಗಳು ಕಣ್ಮರೆಯಾಗುತ್ತವೆ. ಎಷ್ಟೆಷ್ಟೋ ವೈಭವೋಪೇತವಾಗಿ ಮೆರೆದ ಸಾಮ್ರಾಜ್ಯಗಳು ಅವಶೇಷಗಳಾಗಿ ಅಧ್ಯಯನಗಳಿಗೆ ಸ್ಮಶಾನಗಳಾಗಿಬಿಡುತ್ತವೆ. ಒಟ್ಟಾರೆ ಮನುಷ್ಯನ ಬದುಕೇ ನಶ್ವರ.
ಅಚೇತನದಲ್ಲಿ ಅಡಗಿರುವ ನಶ್ವರತೆಯ ಅರಿವು ಮನುಷ್ಯನ ಸುಪ್ತಚೇತನದಲ್ಲಿ ಒಂದು ರೀತಿಯ ಆತಂಕವನ್ನು ಸೃಷ್ಟಿಸುತ್ತದೆ. ಆ ಆತಂಕ ಜಾಗೃತಿ ಚೇತನದಲ್ಲಿಯೂ ಕೂಡಾ ತನ್ನ ಚಟುವಟಿಕೆಗಳನ್ನು ತೋರುತ್ತದೆ. ಅಂತಹ ಆತಂಕಿತ ಮನಸ್ಸಿಗೆ ಹಳತರ ಒಲವಿನ ಭಾವ ಶಾಶ್ವತತೆಯ ಭರವಸೆಯನ್ನು ಕೊಡುತ್ತದೆ.
ಯಾವುದೇ ಒಂದು ಪುರಾತನವಾದ ಆಚರಣೆಯ ಹಿಂದಿನ ಹೇಳಿಕೆಯನ್ನು ಗಮನಿಸಿ, ‘‘ಇದನ್ನು ಬಹಳ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದೇವೆ’’. ಶತಶತಮಾನಗಳ ಹಳೆಯ ಆಚರಣೆಗಳನ್ನು ಉಲ್ಲೇಖಿಸುವಾಗ ಇದನ್ನು ಆಗಿನಿಂದಲೂ ಮಾಡಿಕೊಂಡು ಬಂದಿದ್ದೇವೆ ಎನ್ನುವುದರಲ್ಲಿ ತಮ್ಮನ್ನು ಅದರೊಟ್ಟಿಗೆ ಗುರುತಿಸಿಕೊಳ್ಳುತ್ತಾರೆ. ನಾವೇ ಎಂಬುದರಲ್ಲಿ ಕರಗಿರುವ ನಾನೇ ಎಂಬ ಭಾವಕ್ಕೆ ತಾನು ಅಂದಿನಿಂದಲೂ ಇದ್ದೇನೆ ಎಂಬ ಸುಪ್ತವಾಗಿರುವ ಮಾನಸಿಕ ತೃಪ್ತಿ! ಹಾಗೆಯೇ ಇದನ್ನು ಮುಂದುವರಿಸಿಕೊಂಡು ಹೋಗುವ ಪೀಳಿಗೆಗಳಲ್ಲಿಯೂ ತಾನು ಇರುತ್ತೇನೆ ಎಂಬ ಭರವಸೆ!
ಪುರಾತನವಾದ ಧರ್ಮವೂ ಕೂಡಾ ಧ್ವನಿಸುವುದು, ‘ಈ ಸತ್ಯ ಸಾವಿರಾರು ವರ್ಷಗಳಿಂದ ಅಚಲವಾಗಿ ಇದೆ’ ಎಂಬುದಾಗಿ. ಒಂದು ಪುರಾತನ ವಸ್ತುವೂ ಕೂಡಾ ನಾನು ಅದೆಷ್ಟೋ ಪೀಳಿಗೆಗಳನ್ನು ದಾಟಿ ಉಳಿದುಕೊಂಡು ಬಂದಿದ್ದೇನೆ ಎಂದು ಮೌನವಾಗಿಯೇ ಧ್ವನಿಸುತ್ತದೆ.
ಮನುಷ್ಯನ ಮನಸ್ಸು ಅವುಗಳೊಂದಿಗೆ ಗುರುತಿಸಿಕೊಳ್ಳುವುದರಲ್ಲಿ ದೃಢವಾಗಿರುವಂತಹ ಹಿತವನ್ನು ಕಂಡುಕೊಳ್ಳುತ್ತದೆ.
ಒಂದು ಮಾತು ವಾಸ್ತವ ಮತ್ತು ಸ್ಪಷ್ಟ. ಅದೇನೆಂದರೆ, ಹಳತರ ಒಲವು ಅಥವಾ ಭೂತದಗೀಳು ಭಾವನಾತ್ಮಕವೇ ಹೊರತು ತಾರ್ಕಿಕವಲ್ಲ. ಸಾಮಾನ್ಯವಾಗಿ ಜನರು Old is gold ಅಥವಾ ಹಳತೆಂಬುದು ಹೊನ್ನು ಎಂದು ಹೇಳುವಾಗ ಅವರು ತಾರ್ಕಿಕವಾಗಿರುವ ವಾಸ್ತವಕ್ಕಿಂತ ಹೊರತಾಗಿ ತಮ್ಮ ಹಳತರ ವ್ಯಾಮೋಹ ಅಥವಾ ಭೂತದ ಗೀಳು ಅಥವಾ ಹಳೇಬೇರನ್ನು ಪ್ರದರ್ಶಿಸುತ್ತಿರುತ್ತಾರೆ.
ಹಳೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಥವಾ ವ್ಯಕ್ತಿಗತ ಸಂಗತಿಗಳಲ್ಲಿ ಮನಸ್ಸು ತನಗೆ ಮುದವಾಗುವಂತಹ, ಸುಪ್ತವಾಗಿರುವ ಭಯಕ್ಕೆ ಸಮಾಧಾನ ಕೊಡುವಂತಹ, ಅನಿಶ್ಚಿತ ಭರವಸೆಗಳಿಗೆ ತೃಪ್ತಿಕೊಡುವಂತಹ ವಿಷಯಗಳನ್ನು ಮಾತ್ರ ಆಯ್ದುಕೊಂಡು ತೊಂದರೆ ಆದಂತಹ, ಕೆಡುಕಾಗಿರುವಂತಹ ವಿಷಯಗಳ ಬಗ್ಗೆ ಜಾಣ ಮರೆವು ತೋರುತ್ತದೆ.
ಹಳೆಯ ಗ್ರಾಮೀಣ ಜೀವನದ ಸೊಗಸನ್ನು, ಆರೋಗ್ಯ ಮತ್ತು ಆನಂದವನ್ನು ಮೆಚ್ಚುತ್ತಾ, ಕೊಂಡಾಡುತ್ತಾ ಹಳ್ಳಿಗಳಲ್ಲಿ ನಡೆಯುತ್ತಿದ್ದ ಜಾತಿ ದೌರ್ಜನ್ಯಗಳನ್ನು, ವರ್ಗ ತಾರತಮ್ಯವನ್ನು, ಸೌಲಭ್ಯವಂಚಿತ ಕಷ್ಟದ ದಿನಗಳನ್ನು ಜನ ಮರೆಯುತ್ತಾರೆ. ಹಳೆಯ ಅವಿಭಕ್ತ ಕುಟುಂಬಗಳ ಕೂಡುಬಾಳ್ವೆಯನ್ನು ಹೊಗಳುತ್ತಾ, ಆ ಮೌಲ್ಯವನ್ನು ಮೆಲುಕು ಹಾಕುತ್ತಾ ಹೆಂಗಸರಿಗೆ ಇದ್ದಂತಹ ನಿರ್ಬಂಧಗಳನ್ನು, ಕಿರಿಯ ಪೀಳಿಗೆಗಳಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಂತಹ ಒತ್ತಡಗಳನ್ನು ಬದಿಗೆ ಸರಿಸಿಬಿಡುತ್ತಾರೆ. ಹಳೆಯ ಸಂಪ್ರದಾಯಗಳನ್ನು ಹೊಗಳುತ್ತಾ, ಅವುಗಳಿಗೆ ಅಂಟಿಕೊಂಡಿರುವ ಕಾರಣದಿಂದಲೇ ತಾವು ಬಳಲುತ್ತಿರುವುದನ್ನು ಗಮನಿಸುವುದೇ ಇಲ್ಲ.
ಮನೋವಿಜ್ಞಾನಿಗಳು ಇದನ್ನು rosy retrospection ಅಥವಾ ಭೂತಕಾಲದ ಸೊಬಗಿನ ಭ್ರಮೆ ಎಂದು ಕರೆಯುತ್ತಾರೆ. ಅಂದರೆ, ಮನಸ್ಸು ಹಿಂದಿನದ್ದನ್ನು ಇದ್ದಂತೆಯೇ ಅವಲೋಕಿಸುವ ಬದಲು, ಇದ್ದದ್ದಕ್ಕಿಂತ ಸುಂದರವಾಗಿ ಚಿತ್ರಿಸಿಕೊಳ್ಳುವ ಪ್ರವೃತ್ತಿ ಇದಾಗಿರುತ್ತದೆ. ಉದಾಹರಣೆಗೆ ಹೇಳುವುದಾದರೆ, ಭಾರತದ ಇತಿಹಾಸದಲ್ಲಿ ಗುಪ್ತರ ಕಾಲದ ಸುವರ್ಣಯುಗ ಎಂದು ಹೇಳುವರು. ಆದರೆ, ಯಾರಿಗೆ ಅದು ಸುವರ್ಣಯುಗವಾಗಿತ್ತು, ಯಾರಿಗೆ ಆಗಿರಲಿಲ್ಲ, ಆ ಕಾಲದ ಸಮಸ್ಯೆಗಳೇನಿದ್ದವು ಅಥವಾ ಸಂಘರ್ಷಗಳೇನಿದ್ದವು ಎಂದು ಗಮನಿಸುವುದಿಲ್ಲ. ವಿಜಯನಗರ ಸಾಮಾಜ್ರ್ಯದ ಗತವೈಭವವನ್ನು ನೆನೆಯುತ್ತಾ ಅರಮನೆಯೊಳಗೇ ನಡೆಯುತ್ತಿದ್ದಂತಹ ಸಂಚುಗಾರಿಕೆಗಳನ್ನು, ಪಿತೂರಿಗಳನ್ನು ತಿಳಿಯಲು ಹೋಗುವುದಿಲ್ಲ.
ವ್ಯಕ್ತಿ ತನ್ನ ಬಾಲ್ಯದ ದಿನಗಳು ಅದೆಷ್ಟು ಸುಂದರವಾಗಿದ್ದವು ಎಂದು ಹೇಳುತ್ತಾ, ಅದೆಂದಿಗೂ ಮತ್ತೆ ಸಿಗುವುದಿಲ್ಲ ಎಂದೂ ಭಾವನಾತ್ಮಕವಾಗಿ ಗಾಢಗೊಳಿಸಿಕೊಳ್ಳುತ್ತಾ ತಾನು ಪಡೆಯುತ್ತಿದ್ದ ಪೆಟ್ಟುಗಳನ್ನು, ತನಗಿದ್ದ ಕೊರತೆಗಳನ್ನು ಮರೆಯುತ್ತಾರೆ. ಒಂದುವೇಳೆ ಅವು ನೆನಪಿಗೆ ಬಂದರೂ ಆ ನೋವು ಮತ್ತು ಅಂತಹ ಭಾವನೆಗಳು ಈಗ ಇಲ್ಲದೇ ಇರುವುದರಿಂದ ಅವನ್ನೂ ಕೂಡಾ ರಮ್ಯಗೊಳಿಸುವಂತಹ ಒಲವನ್ನು ತೋರುತ್ತಾನೆ.
ಇನ್ನು ನರಮಂಡಲದ ಆಯಾಮದಿಂದ ನೋಡುವುದಾದರೂ ಕೂಡಾ ನೆನಪುಗಳು ಭಾವನಾತ್ಮಕವಾಗಿ ಬಹಳ ಗಾಢವಾಗಿಯೂ, ಪ್ರಭಾವಶಾಲಿಯಾಗಿಯೂ, ಶಕ್ತಿಶಾಲಿಯಾಗಿಯೂ ಮತ್ತು ಪರಿಣಾಮಕಾರಿಯಾಗಿಯೂ ಇರುತ್ತವೆ. ಮೆದುಳು ನೆನಪುಗಳನ್ನು ಭಾವನೆಗಳ ಮಡಿಕೆಗಳಲ್ಲಿ ಕಾಪಿಡುವುದೇ ಹೊರತು ವೀಡಿಯೊ ರೆಕಾರ್ಡರ್ ರೀತಿಯಲ್ಲಿ ದಾಖಲಿಸಿ ಇಡುವುದಿಲ್ಲ.
ತಮ್ಮ ಮೆಚ್ಚಿನ ಹಳೆಯ ಹಾಡು, ಗಮಲು, ಜಾಗ, ಆಚರಣೆಗಳೆಲ್ಲವೂ ಮೆದುಳಿನಲ್ಲಿ ಬರಿದೇ ನೆನಪುಗಳ ನಿರ್ಜೀವ ಕಡತಗಳಾಗಿರದೆ ಭಾವನೆಗಳೊಂದಿಗೆ ಸಚೇತನಗೊಳ್ಳುತ್ತವೆ. ಅವುಗಳಿಂದ ವ್ಯಕ್ತಿಯ ಮನಸ್ಸು ನೆಚ್ಚಗಾಗುತ್ತದೆ, ಬೆಚ್ಚಗಾಗುತ್ತದೆ, ತಾದ್ಯತ್ಮತೆ ಉಂಟಾಗುತ್ತದೆ, ಮುದವಾಗಿರುತ್ತದೆ, ಅರ್ಥವಂತಿಕೆಯಿಂದ ಕೂಡಿರುತ್ತದೆ. ಹಾಗಾಗಿಯೇ ಕೆಲವರಿಗೆ ಹಳೆಯ ಭಾವಚಿತ್ರಗಳನ್ನು ನೋಡಿದಾಗ ಅಳುವಂತಾಗುತ್ತದೆ. ಸಂಕಟದ್ದೋ, ಸಂತೋಷದ್ದೋ ಕಣ್ಣೀರು ಸುರಿಯುತ್ತದೆ. ಮಗುವಾಗಿರುವ ನಾನು ಮತ್ತು ನನ್ನ ತಾಯಿಯ ಚಿತ್ರಪಟ ವಾಸ್ತವದಲ್ಲಿ ಒಂದು ನಿರ್ಜೀವವಾದ ದಾಖಲೆ. ಅದು ಯಾರದೋ ಅಪರಿಚಿತರ ಕೈ ಸೇರಿ ಕಣ್ಣಿಗೆ ಬಿದ್ದರೂ ಬರಿಯ ಚಿತ್ರವಾಗಿರುತ್ತದೆ ಹೊರತು ಭಾವಚಿತ್ರವಾಗಿರುವುದಿಲ್ಲ. ಅದು ನನಗೋ, ನನಗೆ ಸಂಬಂಧಪಟ್ಟವರ ಕೈಗೋ ಸೇರಿದರೆ ಮಾತ್ರ ಚಿತ್ರ ಭಾವುಕತೆಯಲ್ಲಿ ಸಚೇತನವಾಗುತ್ತದೆ. ಮನಸ್ಸಿನ ಭಾವಲಹರಿ ಯಾವಾಗಲೂ ಗಾಢವಾಗಿರುತ್ತದೆ.
ಹೀಗಾಗಿ, ಹಳತನ್ನು ಪ್ರೀತಿಸುವುದರಲ್ಲಿ ತಪ್ಪಿಲ್ಲ. ಆದರೆ ಹಳತನ್ನು ಪರಿಶೀಲಿಸುವ ಬದಲು, ಅಧ್ಯಯನಕ್ಕೆ ಆಕರವಾಗಿಸಿಕೊಳ್ಳುವ ಬದಲು ಆರಾಧಿಸಲು ಆರಂಭಿಸಿದಾಗ ಅದು ಅರಿವು ಆಗಿರದೇ ವ್ಯಾಮೋಹವಾಗುತ್ತದೆ. ಪರಂಪರೆಯನ್ನು ಉಳಿಸಿಕೊಳ್ಳುವುದು, ಗೌರವಿಸುವುದು ಒಂದು ಸಹ್ಯ ಮತ್ತು ಮಾನ್ಯವಾದ ವಿಷಯವಾದರೆ, ಪರಂಪರೆಗೇ ಬಂಧಿತವಾಗುವುದು ಅಸಹನೀಯ ಮತ್ತು ಅಪ್ರಾಯೋಗಿಕವಾದ ವಿಷಯವಾಗಿರುತ್ತದೆ.






