ಸಮರ್ಥನೆಯ ತಂತ್ರ

ಭಾರತೀಯರ ಸಂಕಲಿತ ಮನಸ್ಥಿತಿಯ ಮೇಲೆ ಸಿಕ್ಕಾಪಟ್ಟೆ ಭಾರವಾಗಿರುವ ಅಂಶವೊಂದಿದೆ. ಅದೇನೆಂದರೆ ಸಮರ್ಥನೆಯ ಧೋರಣೆ. ತಾವು ಗುರುತಿಸಿಕೊಂಡಿರುವ ಸಮೂಹದ ವಿಷಯದಲ್ಲಿ ಅದೇನೇ ಬಂದರೂ ಸಮರ್ಥಿಸಿಕೊಳ್ಳಲು ಹಾತೊರೆಯುವುದು. ಇದು ಅವಿದ್ಯಾವಂತರಲ್ಲೋ, ಅಶಿಕ್ಷಿತರಲ್ಲೋ ಇರುವಂತಹ ಅನಾಗರಿಕ ಮತ್ತು ಅವಿವೇಕದ ವಿಷಯವಲ್ಲ. ಇದೊಂದು ಮಾನಸಿಕವಾಗಿ ಬೇರೂರಿರುವ ಅಂಶವಾಗಿದ್ದು ಅದನ್ನು ಬಹಳಷ್ಟು ಬಾರಿ ಅವರು ಉದ್ದೇಶಪೂರ್ವಕವಾಗಿಯೇ ಮಾಡುವುದಿಲ್ಲ. ಹಾಗಾಗಿಯೇ ಮನೋವೈಚಾರಿಕವಾಗಿ ಸಮರ್ಥನೆಯ ಮನೋಭಾವವನ್ನು (The Psychology of Justification) ತಿಳಿಯುವ ಅಗತ್ಯವಿದೆ.
ಸಮರ್ಥನೆಯ ಮನೋಭಾವವು ಮೂರು ಆಯಾಮಗಳಿಂದ ಕೆಲಸ ಮಾಡುತ್ತದೆ. ಮೊದಲನೆಯದು ವ್ಯಕ್ತಿಗತವಾದ ನರಜೈವಿಕದ (neurobiology) ವ್ಯವಸ್ಥೆಯಿಂದ, ಎರಡನೆಯದಾಗಿ ಸಮೂಹ ಭಾವಯುಳಿಕೆ (group tribalism) ಮತ್ತು ವ್ಯಕ್ತಿಯ ಮನಸ್ಥಿತಿಯಲ್ಲಿ ಅಡಕವಾಗಿರುವ ಊಳಿಗಮಾನ್ಯ ತಂತ್ರಾಂಶ (feudal software).
ಸ್ವಭಾವದಿಂದ ಮನುಷ್ಯ ಸಂಘಜೀವಿ. ಹಾಗಾಗಿ ಬಹಳಷ್ಟು ಜನ ತೀವ್ರವಾಗಿ ಹೆದರುವುದು ತಾವು ಗುರುತಿಸಿಕೊಂಡಿರುವ ಸಮೂಹದಿಂದ ಹೊರಹಾಕಲ್ಪಟ್ಟರೆ ಹೇಗೆ ಎಂದು. ಇದು ಪ್ರಜ್ಞಾಪೂರ್ವಕವಾಗಿ ಅಥವಾ ಸಾಂದರ್ಭಿಕವಾಗಿ ಬರುವ ಭಯವಲ್ಲ. ಮನಸ್ಸಿನ ಪದರಗಳಲ್ಲಿ ಆಳವಾಗಿ ಬೇರೂರಿರುವ ಆತಂಕ. ಹಾಗಾಗಿ ಒಂದಲ್ಲ ಒಂದು ಗುಂಪಿನಲ್ಲಿ ತಾನು ಸೇರಲು ಹಾತೊರೆಯುತ್ತಾನೆ. ಸಾಮಾನ್ಯವಾಗಿರುವ ಜಾತಿ, ಧರ್ಮ, ದೇಶ, ಭಾಷೆ, ಸಿದ್ಧಾಂತಗಳು ಒಂದೆಡೆ ಇರಲಿ, ಒಂದು ರಾಜಕೀಯ ಪಕ್ಷದವನಾಗಿ, ಒಬ್ಬ ಪ್ರಭಾವಶಾಲಿ ಮತ್ತು ಪ್ರಖ್ಯಾತ ವ್ಯಕ್ತಿಯ ಅಭಿಮಾನಿಯಾಗಿ, ಯಾವುದೋ ಒಂದು ಗುಂಪಿನ ಜೊತೆಯಲ್ಲಿ ಅವನಿಗೊಂದು ಗುರುತು ಬೇಕು. ಗುರುತುಗಳು ಅದೆಷ್ಟರ ಮಟ್ಟಿಗೆ ಹೆಮ್ಮೆ ಮತ್ತು ಅಭಿಮಾನವನ್ನು ತೋರುವುದೋ ಬಿಡುವುದೋ ಎರಡನೆಯ ವಿಷಯ. ಮನೋವೈಚಾರಿಕವಾಗಿ ಅದನ್ನು ಗಮನಿಸಿದಾಗ ತೋರುವ ಅಂಶವೆಂದರೆ, ತಮ್ಮ ಗುರುತನ್ನು ಉಳಿಸಿಕೊಳ್ಳುವ ಸಲುವಾಗಿ ಸಾಮಾನ್ಯ ತಿಳಿವಳಿಕೆಯನ್ನು ಮೊಟಕುಗೊಳಿಸುವುದು. ಒಬ್ಬ ತನ್ನ ಗುರುತನ್ನು ರಾಜಕೀಯ ವ್ಯಕ್ತಿಯೊಂದಿಗೆ, ಅಭಿಮಾನದ ನಟನೊಂದಿಗೆ ಅಥವಾ ಜಾತಿ ಹಾಗೂ ಸಿದ್ಧಾಂತಗಳ ಗುಂಪಿನೊಂದಿಗೆ ಗಾಢವಾಗಿ ಬೆರೆಸಿಕೊಂಡಾಗ, ಅದು ಆ ವ್ಯಕ್ತಿಯ ತನ್ನತನದ ಅಥವಾ ತನ್ನ ಅಹಂಕಾರದ (ಇಗೋ) ವಿಸ್ತೃತ ಭಾಗವಾಗಿ ಭಾವಿಸಲು ತೊಡಗುತ್ತಾನೆ.
ಅವನ ಆಂತರಿಕ ಬೆದರಿಕೆ ಏನೆಂದರೆ, ತಾನು ಒಪ್ಪಿರುವ ನಾಯಕ ಅಥವಾ ಸಿದ್ಧಾಂತವು ದೊಡ್ಡ ಪ್ರಮಾದವನ್ನು ಮಾಡಿದೆ ಅಥವಾ ದೋಷಪೂರಿತವಾಗಿದೆ ಎಂದರೆ, ತಾನು ತಪ್ಪಾದ ಆಯ್ಕೆ ಮಾಡಿದ್ದೇನೆಂದು ಅರ್ಥ. ಹಾಗೆ ತನ್ನ ಆಯ್ಕೆ ದೋಷಪೂರಿತವಾಗಿದೆ ಅಥವಾ ಪ್ರಮಾದಕ್ಕೆ ಎಡೆ ಮಾಡಿದೆ ಎಂದರೆ ತಾನೊಬ್ಬ ಮೂರ್ಖ. ಅಹಂ ತಾನು ದಡ್ಡ ಎಂಬ ನೋವನ್ನು ತಾಳಿಕೊಳ್ಳಲಾರದು. ಆಗ ಗೊಂದಲಕ್ಕೆ ಈಡಾಗುವ ಮನಸ್ಸು ಬಳಸಿಕೊಳ್ಳುವ ರಕ್ಷಣಾತಂತ್ರವೆಂದರೆ, ಸಮರ್ಥಿಸಿಕೊಳ್ಳುವುದು. ಹುಸಿಯಾಗಾದರೂ ಸಮರ್ಥಿಸಿಕೊಳ್ಳುವುದು. ವಿತಂಡ ವಾದದ ಮೂಲಕವಾದರೂ ತಾನು ಆರಾಧಿಸುವ ತನ್ನ ಗುರುತಿನ ದೋಷಗಳನ್ನು ರಕ್ಷಿಸಿಕೊಳ್ಳುತ್ತಾ, ತನ್ನ ಅಹಂಕಾರನ್ನೂ ಕೂಡಾ ಕಾಪಾಡಿಕೊಳ್ಳುವುದು.
ಯಾವಾಗ ಓರ್ವ ವ್ಯಕ್ತಿಯು ತನ್ನ ನಾಯಕನನ್ನು ಪ್ರಶ್ನಿಸದೆಯೇ ಅನುಸರಿಸುವನೋ ಆಗ ಮೆದುಳು ಆ ಭಾವನಾತ್ಮಕತೆಯನ್ನು ವಸ್ತುಕೇಂದ್ರಿತವಾದ ವಿಷಯವನ್ನಾಗಿ ನೋಡದೆಯೇ, ಅದನ್ನು ಖಂಡಿಸುವ, ಪ್ರಶ್ನಿಸುವ ಎಲ್ಲವನ್ನೂ ತನ್ನ ಅಸ್ತಿತ್ವಕ್ಕೇ ಧಕ್ಕೆಯೇನೋ ಎಂಬಂತೆ ನೋಡಲು ತೊಡಗುತ್ತದೆ. ತನಗೇ ಉಂಟಾಗುವ ಬೆದರಿಕೆ ಎಂದು ಭಾವಿಸತೊಡಗುತ್ತಾನೆ.
ಪ್ರಶ್ನೆಯನ್ನು ಅಥವಾ ವಿಚಾರಣೆಯನ್ನು ಎದುರಿಸುವುದು ಎಂದರೆ ನೋವಿನ ಸಂಗತಿ ಮಾತ್ರವಲ್ಲದೆ ಒಪ್ಪಿಕೊಳ್ಳಲು ಮಾನಸಿಕವಾಗಿ ಸಿದ್ಧವಾಗಿಯೇ ಇರುವುದಿಲ್ಲ. ನಾನೊಬ್ಬ ಮೂರ್ಖನಾದೆ, ನನ್ನ ನಿರ್ಣಯ ಮತ್ತು ಆಯ್ಕೆಗಳು ತಪ್ಪಾಗಿದ್ದವು; ಈ ಒತ್ತಡದಿಂದ ಪಾರಾಗಲು ಮೆದುಳಿನ ರಕ್ಷಣಾತಂತ್ರವು ಯಾವುದೇ ಟೀಕೆಗಳು ಬಂದರೆ ತಕ್ಷಣವೇ ತನ್ನ ನಾಯಕನನ್ನು ಎಂದಲ್ಲ, ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಜಾಲಗಳನ್ನು ಹೆಣೆಯತೊಡಗುತ್ತದೆ. ಅದರಲ್ಲೂ ಹುಸಿ ಸಮರ್ಥನೆಗಳನ್ನು ಅತಾರ್ಕಿಕವಾಗಿ, ಅವೈಜ್ಞಾನಿಕವಾಗಿ ಮತ್ತು ಅವೈಚಾರಿಕವಾಗಿ ಮಂಡಿಸಲು ತೊಡಗುತ್ತಾರೆ. ತಾರ್ಕಿಕವಾಗಿ ಮತ್ತು ವೈಚಾರಿಕವಾಗಿ ಮುಂದಾದರೆ ತಮ್ಮ ನಾಯಕ ಅಥವಾ ಸಿದ್ಧಾಂತವೇ ದೋಷಪೂರಿತವಾಗಿರುವ ವಿಷಯ ಮುಂದಾಗುವ ಭಯ ಮತ್ತು ಆ ಮೂಲಕ ತಾನೇ ಖಂಡನೆ ಮತ್ತು ವೈಫಲ್ಯವನ್ನು ಒಪ್ಪಿಕೊಳ್ಳುವ ಭಯ ಅಲ್ಲಿರುತ್ತದೆ.
ಅದು ಎಷ್ಟರಮಟ್ಟಿಗೆ ಗೊಂದಲಪೂರ್ಣವಾಗಿರುತ್ತದೆ ಎಂದರೆ ತಾರ್ಕಿಕವಾಗಿ ಮತ್ತು ವಾಸ್ತವತೆಯ ನೆಲೆಗಟ್ಟಿನಿಂದ ಮಾತಾನಾಡುವವರೂ ಕೂಡಾ ಅವರ ಅತಾರ್ಕಿಕ ಮತ್ತು ಅವಾಸ್ತವದ ವಾದಗಳನ್ನು ಎದುರಿಸಲಾರರು.
ಅವಾಸ್ತವದ ಸಮರ್ಥನೆಗಳ ಪದರಗಳು ಗಟ್ಟಿಯಾಗಿ ಬೆಳೆಯುತ್ತಿದ್ದಂತೆ ವ್ಯಕ್ತಿಯು ತನ್ನ ಅಂತರಂಗದಲ್ಲಿಯೂ ಕೂಡಾ ಅದನ್ನು ಒಪ್ಪಿಕೊಳ್ಳಲು ಪ್ರಾರಂಭಿಸುತ್ತಾನೆ. ಮೆದುಳಿನ ರಕ್ಷಣಾ ತಂತ್ರ ಸದಾ ಅದರ ವಿಷಯದಲ್ಲಿಯೇ ಕೆಲಸ ಮಾಡಲು ಮುಂದಾಗಿ ಸುಳ್ಳುಗಳನ್ನೇ ವಾಸ್ತವವೆಂದು ನಂಬಿ ಮತ್ತು ವಾಸ್ತವತೆಯಿಂದ ಸಂಪೂರ್ಣವಾಗಿ ದೂರಾಗಿಬಿಡುತ್ತಾರೆ.
ತನ್ನನ್ನು ತಾನೇ ಗಮನಿಸಿಕೊಂಡು ಈ ಹುಸಿ ಮತ್ತು ವಿಷ ವರ್ತುಲದಿಂದ ಹೊರಗೆ ಬರುವುದಕ್ಕೆ ಸಿದ್ಧವಾಗಬೇಕು. ಏಕೆಂದರೆ ಮನಸ್ಸಿನ ಒಂದು ಸ್ವಭಾವ ಏನೆಂದರೆ, ಅದು ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ವಾಸ್ತವದ ಬಗ್ಗೆ ಅರಿವೂ ಇರುವುದಿಲ್ಲ. ಬದಲಾಗಿ ಯಾವ ವಿಷಯವನ್ನು ಪದೇ ಪದೇ ಆಲೋಚಿಸುತ್ತಿರುತ್ತಿರುವುದನ್ನು ಗಟ್ಟಿಯಾಗಿ ಹಿಡಿಯುತ್ತದೆ. ಪುನರಾವರ್ತನೆ ಆಗುವ ವಿಷಯಗಳನ್ನು ನಿಜವೆಂದು ನಂಬುತ್ತದೆ. ನಮ್ಮಲ್ಲಿ ಯಾವು ಒಳಚಾಳಿಯಂತೆ ಪುನರಾವರ್ತನೆಯಾಗುತ್ತಿದೆ ಎಂದು ನೋಡಿಕೊಳ್ಳದೇ ಹೋದರೆ ಖಂಡಿತ ಹುಸಿ ಸಮರ್ಥನೆಯ ವರ್ತುಲದಿಂದ, ಅದರ ಜಾಲದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.
(ಅಂಕಣಕಾರರು: ಹಿರಿಯ ಬರಹಗಾರರು, ಚಿಂತಕರು)






