ಭಾರತದ ಮನಸ್ಸಿಗೇನು ಬೇಕು?

ಒಬ್ಬ ವಯಸ್ಕ ವ್ಯಕ್ತಿ ಅವನ ಶಕ್ತಿ ಮತ್ತು ಮಾನಸಿಕ ಸ್ಥಿತಿ ಬಲವಾಗಿ ಪ್ರದರ್ಶನಗೊಳ್ಳುವ ಸಮಯದಲ್ಲಿ ಅವನಿಗೇ ಅರಿವಿಲ್ಲದಂತೆ ಅವನ ಬಾಲ್ಯದ ಗಾಢ ಪ್ರಭಾವಗಳು ಪರಿಣಾಮಕಾರಿಯಾಗಿ ಕ್ರಿಯಾಶೀಲವಾಗಿರುತ್ತವೆ ಎಂಬುದನ್ನು ಗಮನಿಸಬೇಕಿದೆ. ಮಗು ಪ್ರಶ್ನಿಸಿದಾಗ ‘ಬಾಯಿ ಮುಚ್ಚು’ ಅಥವಾ ‘ದೊಡ್ಡವರನ್ನು ಪ್ರಶ್ನಿಸಬೇಡ, ಹೇಳಿದಷ್ಟು ಕೇಳಿಕೊಂಡು ಹೋಗು’ ಎನ್ನುವ ಕುಟುಂಬದಿಂದ ಪ್ರಶ್ನಿಸುವ ನಾಗರಿಕ ಹುಟ್ಟುವುದು ಕಷ್ಟ. ಮಗುವು ಶಾಲೆಯಲ್ಲಿ ಕೊಟ್ಟ ತಪ್ಪು ಉತ್ತರಕ್ಕೆ ಅವಮಾನಿಸುವ ವ್ಯವಸ್ಥೆಯಿಂದ ಬೌದ್ಧಿಕ ಧೈರ್ಯ (intellectual courage) ಬೆಳೆಯುವುದು ಕಷ್ಟ. ಮನೆಯೊಳಗೆ ಭಿನ್ನಾಭಿಪ್ರಾಯವನ್ನು ಸಹಿಸದವರು ಸಾರ್ವಜನಿಕ ಬದುಕಿನಲ್ಲಿ ಬಹುತ್ವವನ್ನು (pluralism) ಹೇಗೆ ಬದುಕುತ್ತಾರೆ?
ಸಹಾನುಭೂತಿ ಅಥವಾ ಪರಾನುಭೂತಿ (Empathy) ಕೂಡ ಒಂದು ಸಾಮಾಜಿಕ ನರಶಕ್ತಿಯೇ ಆಗಿರುತ್ತದೆ. ಸಾಮಾನ್ಯವಾಗಿ ನಮ್ಮವರ ನೋವಿಗೆ ಮರುಗುವುದು ಸುಲಭ. ಆದರೆ ನಮ್ಮ ಗುಂಪಿಗೆ ಸೇರದವನ ನೋವನ್ನೂ ನೋವೆಂದು ಗುರುತಿಸುವುದು; ನಿಜವಾಗಿಯೂ ಅದು ನಾಗರಿಕ ಪ್ರಬುದ್ಧತೆ.
ಒಬ್ಬ ಹಿಂದೂವಿನ ನೋವು ನನಗೆ ಅರ್ಥವಾಗಬೇಕು. ಒಬ್ಬ ಮುಸ್ಲಿಮನ ಭಯವೂ ಅರ್ಥವಾಗಬೇಕು. ದಲಿತನ ಅವಮಾನವೂ, ಆದಿವಾಸಿಯ ಸ್ಥಳಾಂತರವೂ, ಮಹಿಳೆಯ ಅಸುರಕ್ಷತೆಯೂ, ರೈತನ ಆತಂಕವೂ, ನಿರುದ್ಯೋಗಿ ಯುವಕನ ಹತಾಶೆಯೂ; ಯಾವ ಗುರುತಿನವನ ನೋವಾದರೂ ಮೊದಲು ಮಾನವನ ನೋವು ಎಂದು ಗ್ರಹಿಸುವ ಮನಸ್ಸು ಬೇಕು. ನಿಸ್ಸಂಶಯವಾಗಿ ಇದು ಆರಂಭವಾಗುವುದು ಮನೆಯಲ್ಲಿ ಮತ್ತು ಬೆಳೆಯುವುದು ಅವನ ಸ್ಥಳೀಯ ಪರಿಸರದಲ್ಲಿ. ಸಹಾನುಭೂತಿ ಎಂದರೆ ಅವರ ಎಲ್ಲ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವುದಲ್ಲ. ಅವರ ಮಾನವತ್ವವನ್ನು ರದ್ದುಪಡಿಸದೆ ವಿರೋಧಿಸುವ ಸಾಮರ್ಥ್ಯ.
ನರಮಂಡಲದ ಸಲಲಿತೆಯು (Neuroplasticity) ನಮಗೆ ಒಂದು ಆಶಾವಾದವನ್ನು ಕೊಡುತ್ತದೆ. ಮಾನವ ಮೆದುಳಿನ ಅದ್ಭುತ ಗುಣವೆಂದರೆ ಅದು ಅನುಭವದೊಂದಿಗೆ ಬದಲಾಗಬಲ್ಲದು. ಅಭ್ಯಾಸಗೊಂಡ ಪ್ರತಿಕ್ರಿಯೆಗಳು ಶಾಶ್ವತ ವಿಧಿಯಲ್ಲ, ಶಿಲಾಶಾಸನವಲ್ಲ. ಇದು ವ್ಯಕ್ತಿಗೆ ಸಾಧ್ಯವಾದರೆ, ಸಂಸ್ಕೃತಿಗೂ ಕಲಿಕೆಯ ಮೂಲಕ ಬದಲಾವಣೆ ಸಾಧ್ಯ.
ಮಕ್ಕಳಿಗೆ ವೈಚಾರಿಕವಾಗಿ ಆಲೋಚಿಸುವುದನ್ನು (critical thinking) ಕಲಿಸಬಹುದು. ಕುಟುಂಬಗಳಲ್ಲಿ ಸೌಹಾರ್ದಯುತ ಮತ್ತು ಆರೋಗ್ಯಕರವಾದ ನಿರಾಕರಣೆಯನ್ನು (healthy disagreement) ಅಭ್ಯಾಸ ಮಾಡಬಹುದು. ಮಾಧ್ಯಮ ಸಾಕ್ಷರತೆಯನ್ನು ಬೆಳೆಸಬಹುದು. ಕಲೆ, ಸಾಹಿತ್ಯ, ಸಂಗೀತ ಮತ್ತು ಸಂವಾದಗಳ ಮೂಲಕ ಮತ್ತೊಬ್ಬರ ಅನುಭವದೊಳಗೆ ಪ್ರವೇಶಿಸಲು ಕಲಿಸಬಹುದು. ಸದ್ಯದ ನಮ್ಮ ಸಾಮಾಜಿಕ ಸ್ಥಿತಿಗತಿಗೆ ಅಂದರೆ ಭಾರತದ ಮನಸ್ಸಿಗೆ ಬೇಕಿರುವ ದೊಡ್ಡ ಕ್ರಾಂತಿ ಬಹುಶಃ ಮತ್ತೊಂದು ಘೋಷಣೆಯ ಕ್ರಾಂತಿಯಲ್ಲ. ಅದು ಸ್ವನಿಯಂತ್ರಣದ ಕ್ರಾಂತಿ. ಭಯವನ್ನು ನಿರಾಕರಿಸದೆ ಅದನ್ನು ಅರ್ಥಮಾಡಿಕೊಳ್ಳುವ, ಕೋಪವನ್ನು ಹತ್ತಿಕ್ಕದೆ ಅದಕ್ಕೆ ದಿಕ್ಕು ಕೊಡುವ, ಗುರುತನ್ನು ಅಳಿಸದೆ ಅದನ್ನು ಮಾನವತ್ವಕ್ಕಿಂತ ದೊಡ್ಡದಾಗದಂತೆ ನೋಡಿಕೊಳ್ಳುವ ಕ್ರಾಂತಿ. ಒಂದು ಆರೋಗ್ಯಕರ ಸಮಾಜ ಎಂದರೆ ಎಂದಿಗೂ ಉದ್ವಿಗ್ನವಾಗದ ಸಮಾಜವಲ್ಲ. ಉದ್ವಿಗ್ನವಾದ ನಂತರ ಮತ್ತೆ ಸಮತೋಲನಕ್ಕೆ ಮರಳಬಲ್ಲ ಸಮಾಜ. ಭಾರತದ ಮನಸ್ಸಿಗೆ ಈಗ ಇನ್ನಷ್ಟು ಉದ್ರೇಕ ಬೇಕಿಲ್ಲ. ಅದಕ್ಕೆ ವಿರಾಮ ಬೇಕು. ಸಂವಾದ ಬೇಕು. ಕುತೂಹಲ ಬೇಕು. ಕರುಣೆ ಬೇಕು.
ಎಲ್ಲಕ್ಕಿಂತ ಮುಖ್ಯವಾಗಿ, ತನ್ನ ಭಯಕ್ಕೆ ಶತ್ರುವಿನ ಮುಖ ಕೊಡುವ ಮೊದಲು, ಆ ಭಯ ಎಲ್ಲಿಂದ ಬಂತು ಎಂದು ತನ್ನೊಳಗೆ ನೋಡಿಕೊಳ್ಳುವ ಧೈರ್ಯ ಬೇಕು. ಬಹುಶಃ ಭಾರತದ ಮುಂದಿನ ಮಹಾನ್ ಸ್ವಾತಂತ್ರ್ಯ ಹೋರಾಟ ಹೊರಗಿನ ಯಾವುದೋ ಶತ್ರುವಿನಿಂದಲ್ಲ ತನ್ನದೇ ನಿರ್ಬಂಧಿತ ಭೀತಿಯಿಂದ (conditioned fear) ಮುಕ್ತವಾಗುವುದಾಗಿರಬಹುದು.
ಭಾರತದ ಮನಸ್ಸಿಗೆ ಈಗ ಏನು ಬೇಕಿದೆ ಎಂದು ನೋಡಿಕೊಂಡರೆ, ಭಾರತಕ್ಕೆ ಈಗ ಇನ್ನಷ್ಟು ಮಾಹಿತಿ ಬೇಕಿಲ್ಲ; ಮಾಹಿತಿಯ ಪ್ರವಾಹವೇ ಇದೆ. ಇನ್ನಷ್ಟು ಅಭಿಪ್ರಾಯಗಳೂ ಬೇಕಿಲ್ಲ; ಪ್ರತಿಯೊಬ್ಬರ ಕೈಯಲ್ಲೂ ಅಭಿಪ್ರಾಯ ಪ್ರಕಟಿಸುವ ವೇದಿಕೆ ಇದೆ. ಬಹುಶಃ ಭಾರತಕ್ಕೆ ಈಗ ಅತ್ಯಂತ ಅಗತ್ಯವಾಗಿರುವುದು ತನ್ನ ಮನಸ್ಸನ್ನು ತಾನು ಗಮನಿಸುವ ಸಾಮರ್ಥ್ಯ.
ಭಾರತವೆಂದರೆ ಕೇವಲ ಭೂಪಟವಲ್ಲ. ಕೋಟ್ಯಂತರ ವ್ಯಕ್ತಿಗಳ ನೆನಪು, ಭಯ, ನಂಬಿಕೆ, ಗಾಯ, ಹೆಮ್ಮೆ, ಆಸೆ, ಸಂಬಂಧ ಮತ್ತು ಕನಸುಗಳು ಸೇರಿ ರೂಪಿಸಿಕೊಂಡಿರುವ ಒಂದು ಸಾಮೂಹಿಕ ಮನೋಲೋಕ.
ಮನೋವೈಜ್ಞಾನಿಕವಾಗಿ ಹೇಳುವುದಾದರೆ ಪ್ರತಿಕ್ರಿಯೆಯಿಂದ ಪ್ರತಿಸ್ಪಂದನೆಗೆ ಹೊರಳುವ ರೂಢಿ ಮಾಡಿಕೊಳ್ಳಬೇಕಿದೆ. ನಮ್ಮ ಮನಸ್ಸು ಬಹಳ ವೇಗವಾಗಿ ನಾವು ಅವರು ಎಂದು ವಿಭಜಿಸಿಕೊಳ್ಳುತ್ತದೆ. ಜಾತಿ, ಧರ್ಮ, ಭಾಷೆ, ಪ್ರದೇಶ, ಪಕ್ಷ, ಸಿದ್ಧಾಂತ; ಯಾವುದಾದರೂ ಗುರುತಿನ ಸುತ್ತ ತನ್ನ ಸುರಕ್ಷತೆಯನ್ನು ಕಟ್ಟಿಕೊಳ್ಳಬಹುದು. ಗುರುತು ತಪ್ಪಲ್ಲ; ಆದರೆ ಗುರುತೇ ನಮ್ಮ ಸಂಪೂರ್ಣ ಮನಸ್ಸನ್ನು ಆಕ್ರಮಿಸಿಕೊಂಡಾಗ ಇನ್ನೊಬ್ಬ ಮನುಷ್ಯ ವ್ಯಕ್ತಿಯಾಗಿ ಕಾಣದೆ ಒಂದು ಗುಂಪಿನ ಪ್ರತಿನಿಧಿಯಾಗಿ ಕಾಣತೊಡಗುತ್ತಾನೆ.
ಭಾರತದ ಮನಸ್ಸಿಗೆ ಈಗ ಬೇಕಿರುವುದು ಮಾನಸಿಕ ಸಲಿಲತೆ (psychological flexibility). ನನ್ನ ನಂಬಿಕೆ ನನ್ನದಾಗಿದ್ದರೂ ಮತ್ತೊಬ್ಬನ ಅನುಭವವನ್ನು ಕೇಳಬಲ್ಲ ಸಾಮರ್ಥ್ಯ; ನಾನು ತಪ್ಪಿರಬಹುದೆಂಬ ಸಾಧ್ಯತೆಯನ್ನು ಸಹಿಸಿಕೊಳ್ಳುವ ವಿನಯ; ಭಿನ್ನಾಭಿಪ್ರಾಯವನ್ನು ಶತ್ರುತ್ವವೆಂದು ಗ್ರಹಿಸದ ಮನೋಪ್ರಬುದ್ಧತೆ. ಅಂದರೆ ಪ್ರತಿಕ್ರಿಯೆ (reaction) ಗಿಂತ ಪ್ರತಿಸ್ಪಂದನೆ (response), ಕೋಪಕ್ಕಿಂತ ವಿಚಾರಣೆ, ತೀರ್ಪಿಗಿಂತ ಕುತೂಹಲ.
ನರವೈಜ್ಞಾನಿಕವಾಗಿ ಹೇಳುವು ದಾದರೆ, ಸದಾ ಎಚ್ಚರಿಕೆಯಲ್ಲಿರುವ ಮೆದುಳಿಗೆ ವಿಶ್ರಾಂತಿ ಬೇಕಿದೆ. ಭಯ, ಅವಮಾನ, ಅಪಾಯ, ಕೋಪವನ್ನು ಪ್ರಚೋದಿಸುವ ವಿಷಯಗಳಿಗೆ ಮಾನವ ಮೆದುಳು ಸಹಜವಾಗಿಯೇ ಹೆಚ್ಚು ಗಮನ ಕೊಡುತ್ತದೆ. ಇಂದಿನ ನಿರಂತರ ಸುದ್ದಿ, ಸಾಮಾಜಿಕ ಮಾಧ್ಯಮ, ರಾಜಕೀಯ ಉದ್ವಿಗ್ನತೆ, ಸ್ಪರ್ಧೆ ಮತ್ತು ಆರ್ಥಿಕ ಅನಿಶ್ಚಿತತೆಗಳು ನಮ್ಮ ನರಮಂಡಲದ ವ್ಯವಸ್ಥೆಯನ್ನು ಮತ್ತೆ ಮತ್ತೆ ಉದ್ರೇಕಿಸುತ್ತವೆ.
ನಿರಂತರ ಉದ್ರೇಕದಲ್ಲಿರುವ ಮೆದುಳು ಆಳವಾಗಿ ಆಲೋಚಿಸು ವುದಕ್ಕಿಂತ ತಕ್ಷಣ ಪ್ರತಿಕ್ರಿಯಿಸಲು ಹೆಚ್ಚು ಸಿದ್ಧವಾಗುತ್ತದೆ. ಆದ್ದರಿಂದ ಭಾರತದ ಮನಸ್ಸಿಗೆ ನರವ್ಯವಸ್ಥೆಯ ಶಾಂತಿ ಬೇಕಿದೆ. ಮೌನ, ನಿದ್ರೆ, ಪ್ರಕೃತಿ, ಸಂಗೀತ, ಕಲೆ, ಆಟ, ಓದು, ಆತ್ಮೀಯ ಸಂಭಾಷಣೆ; ಇವು ಐಷಾರಾಮವಲ್ಲ. ಇವು ಆರೋಗ್ಯಕರ ಸಾಮಾಜಿಕ ಮೆದುಳಿನ ಅಗತ್ಯಗಳು. ಶಾಂತವಾದ ನರಮಂಡಲವೇ ಸಂಕೀರ್ಣ ಸತ್ಯವನ್ನು ಸಹಿಸಬಲ್ಲದು; ಮತ್ತೊಬ್ಬರ ನೋವನ್ನು ಗಮನಿಸಬಲ್ಲದು.
(ಅಂಕಣಗಾರರು: ಹಿರಿಯ ಬರಹಗಾರರು, ಚಿಂತಕರು)






