ವೆನೆಝುವೆಲಾದ ಪುಟ್ಟ ವೃತ್ತಾಂತ

1823ರಷ್ಟು ಹಿಂದೆ ಸ್ಥಾಪಿತವಾದ ಮೊನ್ರೋ ತತ್ವವು ತನ್ನ ಭೌಗೋಳಿಕ ಮಿತಿಯನ್ನು ಮೀರಿ ಈಗ ಅಮೆರಿಕಕ್ಕೆ ಜಗತ್ತಿನೆಲ್ಲೆಡೆ ವ್ಯಾಪಿಸಲು ಅನುವುಮಾಡಿಕೊಟ್ಟಿದೆ. ಈ ಹಾದಿಯಲ್ಲಿ ಅದು ವಿಶ್ವಸಂಸ್ಥೆಯನ್ನೂ ಲೆಕ್ಕಿಸದು. ನಮ್ಮ ಸಿನೆಮಾ ಹೀರೋಗಳಂತೆ ಎಲ್ಲಿಗೆ ಯಾವಾಗ ಬೇಕಾದರೂ ಜಿಗಿಯಬಲ್ಲುದು. ಒಂದಲ್ಲ ಹತ್ತಾರು ಪ್ರಕರಣಗಳು ಕಳೆದ ಒಂದು ಶತಮಾನದಿಂದ ಅಮೆರಿಕದ ಈ ರಾಕ್ಷಸ ಮನೋಭಾವವನ್ನು ವಿಶ್ವದೆದುರು ಅನಾವರಣಗೊಳಿಸಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಿಲ್ಲದೆ ಭಾರತವೂ ಸೇರಿದಂತೆ ಜಗತ್ತು ಬಡವಾಗಿದೆ.
ರಾಜಕೀಯ ಸಂಬಂಧವನ್ನಿರಿಸಿಕೊಳ್ಳದ, ಆದರೂ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಮಗಳಾಗಿರುವುದರಿಂದ ಹಿಂದೂ ರಾಷ್ಟ್ರಭಕ್ತರಿಂದ ದೇಶದ್ರೋಹದ ಅಪವಾದಕ್ಕೆ ಗುರಿಯಾಗಬಲ್ಲ ಶ್ರೀಮತಿ ಉಪೀಂದರ್ ಸಿಂಗ್ ಎಂಬ ಜೆಎನ್‌ಯುವಿನ ಮಾನವಿಕಶಾಸ್ತ್ರ ವಿಭಾಗದ ಮುಖ್ಯಸ್ಥೆ ಸಂಶೋಧಕರು ಆಂಗ್ಲ ಭಾಷೆಯ ‘ಪೊಲಿಟಿಕಲ್ ವಯಲೆನ್ಸ್ ಇನ್ ಏನ್ಷೆಂಟ್ ಇಂಡಿಯಾ’ ಎಂಬ ಮಹತ್ತರ ಕೃತಿಯನ್ನು 2017ರಲ್ಲಿ ಬರೆದಿದ್ದಾರೆ. ಅದನ್ನು ಕನ್ನಡದ ಹಿರಿಯ ವಿದ್ವಾಂಸ, ಸಾಹಿತಿ ಗೊ.ರು. ಚನ್ನಬಸಪ್ಪನವರು ಕನ್ನಡಕ್ಕೆ ‘ಪ್ರಾಚೀನ ಭಾರತದಲ್ಲಿ ರಾಜಕೀಯ ಹಿಂಸಾಚಾರ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಇದು ಈ ದೇಶದ ಹಿಂಸಾ ಇತಿಹಾಸವನ್ನು ವಿವರವಾಗಿ ಶೋಧಿಸಿದೆ. ಇದರಲ್ಲಿ ಕಾಣುವ ಹಿಂಸಾಚಾರದ ಮುಂದುವರಿದ ಭಾಗ ಈಗ ದೇಶದಲ್ಲಿದೆ. ಹಾಗೆಯೇ ರಕ್ಷಾಂದ ಜಲೀಲ್ ಎಂಬ ಪತ್ರಕರ್ತೆ ಆಂಗ್ಲ ಭಾಷೆಯಲ್ಲಿ ‘ಲವ್ ಇನ್ ದ ಟೈಮ್ ಆಫ್ ಹೇಟ್’ ಎಂಬ ಪುಸ್ತಕವನ್ನು 2024ರಲ್ಲಿ ಬರೆದಿದ್ದಾರೆ. ಭಾರತ, ಬಾಂಗ್ಲಾದೇಶಗಳಲ್ಲಿ ಸದ್ಯ ನಡೆಯುತ್ತಿರುವ ಬಹುಸಂಖ್ಯಾತ ಮತಾಂಧತೆ ಮತ್ತು ಅದರ ಪರಿಣಾಮವಾಗಿ ನಡೆಯುತ್ತಿರುವ ಸಮೂಹ ಹಿಂಸೆ, ಇವನ್ನು ಈ ಕೃತಿಗಳ ಹಿನ್ನೆಲೆಯಲ್ಲಿ ಪರೀಕ್ಷಿಸಬಹುದು. ಆಕೆ ಮುಸ್ಲಿಮ್ ಆಗಿರುವುದರಿಂದ ಆಕೆಯೂ ಹಿಂದೂ ರಾಷ್ಟ್ರಭಕ್ತರ ಇಂತಹದೇ ಟೀಕೆಗೆ ಗುರಿಯಾಗಬಹುದು. ಈ ಎರಡೂ ಪುಸ್ತಕಗಳನ್ನು ಪರಿಚಯ ಮಾಡಿಸಬೇಕೆಂದು ಈಚೆಗೆ ಯೋಚಿಸುತ್ತಿದ್ದೆ. ಈ ಸಂದರ್ಭದಲ್ಲಿ ಇವನ್ನೆಲ್ಲ ಮರೆಸುವಂತಹ ಅಥವಾ ಬದಿಗೆ ಸರಿಸಬಲ್ಲಂತಹ ಅಧಿಕಾರ ಮದೋನ್ಮತ್ತ ಆಕ್ರಮಣವನ್ನು ಅಮೆರಿಕ ತನ್ನ ನೆರೆಯ ಲ್ಯಾಟಿನ್ ಅಮೆರಿಕ ದೇಶವಾದ ವೆನೆಝುವೆಲಾ ದೇಶದ ಮೇಲೆ ನಡೆಸಿ ಕೆಲವೇ ಸಂಖ್ಯೆಯ ಮಿಲಿಟರಿಯ ಮೂಲಕ ಅಲ್ಲಿನ ಅಧ್ಯಕ್ಷರನ್ನೂ ಅವರ ಪತ್ನಿಯನ್ನೂ ಅಪಹರಿಸಿ ತನ್ನ ಕಬ್ಜೆಯಲ್ಲಿರಿಸಿಕೊಂಡಿದೆ. ವಿಶ್ವಾದ್ಯಂತ ಈ ಕುರಿತು ಆಕ್ರೋಶವೆದ್ದಿದ್ದರೂ ಚೀನಾ, ರಶ್ಯ, ಮೆಕ್ಸಿಕೊ, ಉತ್ತರ ಕೊರಿಯಾ ಸೇರಿದಂತೆ ಕೆಲವು ದೇಶಗಳಷ್ಟೇ ತನ್ನ ನಿಲುವನ್ನು ಬಹಿರಂಗವಾಗಿಸಿವೆ. ಇತರ ದೇಶಗಳ ಪೈಕಿ ಕೆಲವು ಹದ್ದುಗಳಂತೆ, ಇನ್ನಷ್ಟು ಹೆಣಗಳು ಬೀಳುವುದನ್ನು ಕಾದು ಕೊಕ್ಕುಗಳನ್ನು ಹರಿತಗೊಳಿಸುತ್ತ ಕುಳಿತರೆ ಇನ್ನು ಕೆಲವು ದೇಶಗಳು ನರಿಗಳಂತೆ ನಾಲಗೆ ಚಪ್ಪರಿಸುತ್ತ ಜಾಗರೂಕತೆಯ ಖಂಡನೆಯ ಕರಡನ್ನು ತಯಾರಿಮಾಡುತ್ತ, ಕಾದು ಕುಳಿತಿವೆ.
ವೆನೆಝುವೆಲಾ ಮತ್ತಿತರ ದೇಶಗಳ ಸಮೀಪ ವೆಸ್ಟ್‌ಇಂಡೀಸ್ ದ್ವೀಪ ಸಮೂಹಗಳಿವೆ. ಕ್ಯಾಸ್ಟ್ರೋ-ಚೆಗೆವೆರಾರ ಕ್ಯೂಬಾವಿದೆ. ಈ ಪರಿಸರದಲ್ಲಿ ಕಡಲ್ಗಳ್ಳರ ಕಥಾನಕವಿದೆ. ಬ್ರೆಝಿಲ್, ಚಿಲಿ, ಮುಂತಾದ ಪ್ರಭಾವಶಾಲೀ ದೇಶಗಳಿವೆ. ಬರ್ಮುಡಾ ರಹಸ್ಯವಿದೆ. ಆದರೆ ಇವೆಲ್ಲದರ ಜೊತೆಗೆ ಈ ಸಣ್ಣ-ದೊಡ್ಡ ರಾಷ್ಟ್ರಗಳೆಲ್ಲ ಒಂದರ್ಥದಲ್ಲಿ ಅಮೆರಿಕ ಎಂಬ ಹಾವಿನ ಹೆಡೆಯಡಿ ತಮ್ಮ ಸ್ವಾತಂತ್ರ್ಯವನ್ನು ಅನುಭವಿಸಿಕೊಂಡು ಬಂದಿವೆ. ಈಗಿನ ಅಮೆರಿಕನ್ನರು ವಲಸೆಹೋಗಿ ಅಲ್ಲಿದ್ದ ಮೂಲನಿವಾಸಿಗಳನ್ನು ಬಹುತೇಕ ನಾಶ ಮಾಡಿ, ಇಲ್ಲವೇ ಗುಲಾಮಗಿರಿಗೆ, ಅದು ನಾಗರಿಕ ಸಮಾಜದಲ್ಲಿ ಅನೂರ್ಜಿತಗೊಂಡಾಗ ದ್ವಿತೀಯ ದರ್ಜೆಯ ಪ್ರಜೆಗಳಾಗಿಸಿ ವಸಾಹತುಶಾಹಿ ಇಲ್ಲವೇ ಪಾಳೇಗಾರಿಕೆಯ ಉದ್ಯಮದಲ್ಲಿ ಜಯಶೀಲರಾದವರು. ಸೂರ್ಯ ಮುಳುಗದ ಆಂಗ್ಲ ಸಾಮ್ರಾಜ್ಯವೆಂಬ ಗುಡ್ಡೆಗೆ ಅಮೆರಿಕದ ಗುಡ್ಡೆಯನ್ನು ಅಡ್ಡವಾಗಿಸಿ ಬೆಳೆದವರು. ಸ್ವಾತಂತ್ರ್ಯದ ಕಿಡಿ ಉರಿಸಿದ ಅನೇಕ ದೇಶಗಳಲ್ಲಿ ರಾಜಕೀಯ ಸ್ವಾತಂತ್ರ್ಯ ಸಿಕ್ಕಿ ಒಂದು ಹಂತದ ತರುವಾಯ ಇಂತಹ ಪಾಳೇಗಾರಿಕೆಯ ನೆರಳಿನಲ್ಲಿ ಬದುಕುವುದು ಸುಖಕರವೆಂದು ಭಾವಿಸಿದ ಅನೇಕ ದೇಶಗಳಿವೆ. ಭಾರತವೂ ಇಂತಹ ದೇಶಗಳಲ್ಲಿ ಒಂದು. ತನ್ನಷ್ಟಕ್ಕೆ ಬೆಳೆಯುವುದನ್ನು ರೂಢಿಸಿಕೊಂಡಿರುವುದು ಜಪಾನ್, ಸಿಂಗಾಪುರ, ಮಧ್ಯಪೂರ್ವ ರಾಷ್ಟ್ರಗಳಾದರೆ, ಸೌದಿ ಅರೇಬಿಯವೂ ಸೇರಿದಂತೆ ಅನೇಕರು ಮಹಾವೃಕ್ಷಗಳಡಿ ಬೆಳೆಯುವುದನ್ನು ಅಭ್ಯಾಸಮಾಡಿಕೊಂಡಿದ್ದಾರೆ. ಭಾರತವಂತೂ ನೆಹರೂ ಕಾಲದಿಂದಲೇ ಅಮೆರಿಕ ಮತ್ತು ಆಗಿನ ಸೋವಿಯೆತ್ ಒಕ್ಕೂಟದ ನಡುವಣ ಶೀತಲ ಸಮರದ ನಡುವೆ ಚಳಿಕಾಯಿಸಿಕೊಂಡು ಒಂದಿಷ್ಟು ಅಲಿಪ್ತತೆಯನ್ನು ಉಳಿಸಿ ಬೆಳೆಸಿಕೊಂಡರೆ ಈಗ ಖೋಖೋ ಆಟದಲ್ಲಿ ತಪ್ಪಿಸಿಕೊಂಡು ಓಡುವ ಆಟಗಾರನಂತೆ ಅಮೆರಿಕ ಮತ್ತು ರಶ್ಯಗಳ ನಡುವೆ ಬದುಕುವ ವಿಫಲ ತಂತ್ರವನ್ನು ಹೂಡಿದೆ. ಈಗಂತೂ ‘ಇತ್ತ ದರಿ ಅತ್ತ ಪುಲಿ’ ಎಂಬಂತಿದೆ. ಬರಿಯ ಅತ್ತಿತ್ತ ಮತ್ತು ಅತ್ತಲಿಂದಿತ್ತ ಹೇಳುವ ಚಾಡಿಖೋರ ಪ್ರವೃತ್ತಿ (ಆತ್ಮನಿರ್ಭರ ಶೈಲಿಯಲ್ಲಿ ನಾರದಪ್ರಕೃತಿ ಎಂದು ಹೇಳಬಹುದು!) ಭಾರತವನ್ನಾಗಲೀ ಇಂತಹ ಇತರ ದೇಶಗಳನ್ನಾಗಲೀ ಬಹಳ ಸಮಯ ಬಾಳಿಕೆ ಬರಲು ಬಿಡಲಾರದು. ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ನಡೆಯುವುದು ಸಾವಿಗೆ ಆಹ್ವಾನವೇ ಹೊರತು ಯಶಸ್ಸಿಗಲ್ಲ.
ರಾಮಾಯಣದಲ್ಲಿ (ಯಥಾರ್ಥವೋ ಪ್ರಕ್ಷಿಪ್ತವೋ ಎಂದು ಹೇಳಲು ವ್ಯವಧಾನವಿಲ್ಲ) ಶ್ರೀರಾಮಚಂದ್ರನ ಅಧಿಕಾರ ವ್ಯಾಪ್ತಿಯ ಕುರಿತು ಒಂದು ಉಲ್ಲೇಖವಿದೆ. ವಾಲಿವಧೆಗೆ ಆತ ಕಾರಣನಾದಾಗ ಯಾವುದೇ ವೈರವಿಲ್ಲದೆ, ಕಿಷ್ಕಿಂಧೆಯೆಂಬ ಇನ್ನೊಂದು ಸಾರ್ವಭೌಮ ರಾಷ್ಟ್ರದ ವಿವಾದದಲ್ಲಿ ಅದೂ ಯಾವ ವಿಚಾರಣೆಯೂ ಇಲ್ಲದೆ ರಾಮನು ಹಸ್ತಕ್ಷೇಪ ಮಾಡಿದ್ದು ಸರಿಯೇ ಎಂಬ ಜಿಜ್ಞಾಸೆಯಿದೆ. ಇದಕ್ಕೆ ರಾಮನು ನೀಡುವ ಸಮಾಧಾನವೆಂದರೆ ಸೂರ್ಯವಂಶದ ಅರಸುಗಳಿಗೆ ಸೂರ್ಯರಶ್ಮಿ ಬೀರುವಲ್ಲೆಲ್ಲ ಅಧಿಕಾರವಿದೆಯೆಂಬುದು. ಇದು ಸರಿಯೋ ತಪ್ಪೋ ಬೇರೆ. ಆದರೆ ತನ್ನ ಸಮರ್ಥನೆಗೆ ರಾಮ ಕಂಡುಕೊಂಡ ಸಮಾಧಾನವನ್ನು ವಾಲಿ ಒಪ್ಪಿದನೆಂಬಲ್ಲಿಗೆ ಆ ಪ್ರಸಂಗ ಮುಗಿಯುತ್ತದೆ.
ಈಗ ಭಾರತೀಯ ಸಾಂಪ್ರದಾಯಿಕ ಮೂಢ ನಂಬಿಕೆಯಲ್ಲಿ ಕಲಿಯುಗ. ಇಲ್ಲಿ ರಾಜಕೀಯ ಅಗತ್ಯಗಳಿಗಲ್ಲದೆ ಸರ್ವಶಕ್ತ ರಾಮನಿಲ್ಲ. ರಾಮನನ್ನು ನಂಬಿ ಭಾರತವು ಇತರ ರಾಷ್ಟ್ರಗಳಲ್ಲಿ-ಹೋಗಲಿ, ತನ್ನ ಸುತ್ತಮುತ್ತಲಿನ ದೇಶಗಳಲ್ಲೂ ಹಸ್ತಕ್ಷೇಪ ಮಾಡುವಂತಿಲ್ಲ. ಆ ಸಾಮರ್ಥ್ಯವೂ ಭಾರತಕ್ಕೆ ನಮ್ಮ ಎದೆತಟ್ಟುವಿಕೆಯ ಹೊರತಾಗಿಯೂ ಇಲ್ಲ. ಆದ್ದರಿಂದ ರಾಮನ ಅನುಕರಣೆಯೂ ನಮಗೆ ಸಾಧ್ಯವಿಲ್ಲ.
ರಾಮಾಯಣದ ದರ್ಶನ ಮತ್ತು ನಿದರ್ಶನವಿಲ್ಲದೆಯೂ ಅಮೆರಿಕ ಸಂಯುಕ್ತ ಸಂಸ್ಥಾನವು ರಾಕ್ಷಸಶಕ್ತಿಯೊಂದಿಗೆ ವಿಶ್ವದೆಲ್ಲೆಡೆ ತನ್ನ ಅಧಿಕಾರವನ್ನಲ್ಲದಿದ್ದರೂ ಶಕ್ತಿಯನ್ನು ತೋರಿಸುತ್ತಲೇ ಬಂದಿದೆ. ಸೂರ್ಯರಶ್ಮಿ ಏಕಕಾಲಕ್ಕೆ ಭೂಮಿಯೆಂಬ ಈ ವಿಶ್ವದೆಲ್ಲೆಡೆ ಏಕಕಾಲಕ್ಕೆ ಬೀಳುವುದಿಲ್ಲವೆಂಬ ವೈಜ್ಞಾನಿಕ ಅಥವಾ ಜ್ಞಾನಿಕ ಶಕ್ತಿಯು ರಾಮಾಯಣ ನಡೆದಿದೆಯೆಂಬ ಕಾಲದಲ್ಲಿರಲಿಲ್ಲ. ಇದಕ್ಕೆ ಕಾರಣವೂ ಇದೆ: ಭೂಮಿ ಸೂರ್ಯನ ಒಂದು ಗ್ರಹವಾದದ್ದು ಇತ್ತೀಚೆಗೆ. ನಮ್ಮ ಪ್ರಾಚೀನರಿಗೆ ಭೂಮಿಯೇ ಜಗತ್ತು; ಭೂಮಿಯೇ ಸರ್ವಸ್ವ. ಭಗವಂತ ಹುಟ್ಟುವುದೇನಿದ್ದರೂ ಇಲ್ಲೇ. ಈಗ ಇದನ್ನು ನಂಬಿಸಿದರೆ ನಂಬುವುದು ಭಾರತೀಯರು ಮಾತ್ರ. ಇತರರಿಗೆ ವಿಜ್ಞಾನವೆಂಬ ಪಾಠವಿದೆ. ಆದರೆ ಅಮೆರಿಕ ಈ ಹೊಸ ಶಕ್ತಿಯ ಮೂರ್ತಸ್ವರೂಪದಂತೆ ಎಲ್ಲೆಡೆ ಆಕ್ಟೋಪಸ್ಸನ್ನೂ ನಾಚಿಸುವಂತೆ ಕೈಕಾಲುಗಳನ್ನು ಚಾಚುತ್ತಿದೆ ಮತ್ತು ತನ್ನ ಆರೋಗ್ಯಕ್ಕೆ ಬೇಕಾದದ್ದನ್ನು ಅಪೇಕ್ಷಿಸಿ ಪಡೆಯುವ ಸಾಧನವನ್ನು ಹೊಂದಿದೆ. ಇದಕ್ಕೆ ಅಮೆರಿಕದಲ್ಲಿ ಯಾವ ಸರಕಾರವಿದೆ, ಯಾರು ಅಧ್ಯಕ್ಷರಾಗಿದ್ದಾರೆ ಎಂಬುದರ ಲಗಾವಿಲ್ಲ. ಅದು ಅಮೆರಿಕ. ಸರ್ವರ ಸ್ವರ್ಗ. ಕಲಿತವರೂ ಹೋಗುವುದೂ, ಹೋಗಬಯಸುವುದೂ ಅಲ್ಲಿಗೇ. ಅಲ್ಲಿಯ ಗುಲಾಮಗಿರಿ ಇಲ್ಲಿನ ಆಧಿಪತ್ಯಕ್ಕಿಂತ ಹಿರಿದು. ಈ ಮತ್ತು ಇಂತಹ ಹತ್ತು ಹಲವು ವಿಚಾರಗಳು ಅಮೆರಿಕವನ್ನು ಜಗತ್ತಿನೊಳಗಣ ಹೂರಣವಾಗಿಸಿದೆ. ಉಳಿದದ್ದೆಲ್ಲ ತೊಗಟೆ, ಸಿಪ್ಪೆ ಮತ್ತು ಕಸ. ಆದ್ದರಿಂದ ಅಮೆರಿಕ ಹೇಳಿದ್ದೇ ಎಲ್ಲರಿಗೂ ಪ್ರಸಾದ, ಹಸಾದ.
ಇದಕ್ಕನುಗುಣವಾಗಿ ಚಿನ್ನ-ಬೆಳ್ಳಿ-ವಜ್ರಗಳು, ಇತರ ಬೆಲೆಬಾಳುವ ಖನಿಜದ ಅದಿರುಗಳು ಎಷ್ಟೇ ಇದ್ದರೂ ಆಧುನಿಕ ಜಗತ್ತಿನಲ್ಲಿ ತೈಲಸಮೃದ್ಧಿ ಭೂಭಾಗವೇ ಭೂಸಂಪತ್ತಿನ ಅಲಕಾವತಿ. ಬಿಳಿಯರು ಇದಕ್ಕಾಗಿ ಹಲವಾರು ಭೂಭಾಗಗಳನ್ನು ಲೂಟಿಮಾಡಿದರೆ ಅದೀಗ ಅಮೆರಿಕದ ಸರದಿ. ಯುರೋಪಿಯನ್ನರ ಹಿಂದೇಯೇ ನಿಕಟ ದ್ವಿತೀಯ ಸ್ಥಾನದಲ್ಲಿ ಹಿಂಬಾಲಿಸಿಕೊಂಡಿದ್ದ ಅಮೆರಿಕವು 20ನೇ ಶತಮಾನದಲ್ಲಿ ಎಲ್ಲರನ್ನೂ ದ್ವಿತೀಯ ಮತ್ತು ಆನಂತರದ ಸ್ಥಾನಕ್ಕೆ ತಳ್ಳಿ ಅಗ್ರ ಓಟಗಾರನಾಗಿದೆ. ಉದ್ದಿಮೆಯೇ ಅದರಲ್ಲೂ ಶಸ್ತ್ರಾಸ್ತ್ರಗಳ ಮಾರಾಟವೇ ಅಮೆರಿಕವನ್ನು ಜಗತ್ತನ್ನು ಆಳುವ ಶಕ್ತಿಯಾಗಿ ಮಾಡಿದೆ. ಇದಕ್ಕಾಗಿಯೇ ಅಮೆರಿಕವು ತನ್ನೆಲ್ಲ ಸಾಮರ್ಥ್ಯವನ್ನು ಅಡವಿರಿಸಿದೆ. ರಶ್ಯ-ಚೀನಾಗಳಂತಹ ಶಕ್ತಿಗಳನ್ನು ಧಿಕ್ಕರಿಸಿ ಅಮೆರಿಕವು ವಿಶ್ವದ ದೊಡ್ಡಣ್ಣನೆಂಬ ಖ್ಯಾತಿಗೆ ಪಾತ್ರವಾಗಿದೆ. ಯಾವುದೇ ದೇಶದ ಸಂಪತ್ತನ್ನು ಕೈವಶಮಾಡಿಕೊಳ್ಳಲು ಅಮೆರಿಕಕ್ಕೆ ರಾಜಕೀಯ ಸೈದ್ಧಾಂತಿಕ ಯೋಚನೆಗಳು, ಯೋಜನೆಗಳು ಕೈಗೆ ಸಿಗುತ್ತವೆ. ಆಯಾಯ ದೇಶದ ಮಾನವ ಹಕ್ಕುಗಳು, ಅಲ್ಲಲ್ಲಿನ ಆಡಳಿತ ಲೋಪಗಳು, ವಿವಾದಗಳು ಅಮೆರಿಕಕ್ಕೆ ಗೋಚರಿಸುತ್ತವೆ. ಅದನ್ನು ಸರಿಪಡಿಸಲು ಅದು ಸೂರ್ಯರಶ್ಮಿಯ ಶ್ರೀರಾಮನೀತಿಯನ್ನು ಬಳಸುತ್ತದೆ. 1823ರಷ್ಟು ಹಿಂದೆ ಸ್ಥಾಪಿತವಾದ ಮೊನ್ರೋ ತತ್ವವು ತನ್ನ ಭೌಗೋಳಿಕ ಮಿತಿಯನ್ನು ಮೀರಿ ಈಗ ಅಮೆರಿಕಕ್ಕೆ ಜಗತ್ತಿನೆಲ್ಲೆಡೆ ವ್ಯಾಪಿಸಲು ಅನುವುಮಾಡಿಕೊಟ್ಟಿದೆ. ಈ ಹಾದಿಯಲ್ಲಿ ಅದು ವಿಶ್ವಸಂಸ್ಥೆಯನ್ನೂ ಲೆಕ್ಕಿಸದು. ನಮ್ಮ ಸಿನೆಮಾ ಹೀರೋಗಳಂತೆ ಎಲ್ಲಿಗೆ ಯಾವಾಗ ಬೇಕಾದರೂ ಜಿಗಿಯಬಲ್ಲುದು. ಒಂದಲ್ಲ ಹತ್ತಾರು ಪ್ರಕರಣಗಳು ಕಳೆದ ಒಂದು ಶತಮಾನದಿಂದ ಅಮೆರಿಕದ ಈ ರಾಕ್ಷಸ ಮನೋಭಾವವನ್ನು ವಿಶ್ವದೆದುರು ಅನಾವರಣಗೊಳಿಸಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಿಲ್ಲದೆ ಭಾರತವೂ ಸೇರಿದಂತೆ ಜಗತ್ತು ಬಡವಾಗಿದೆ. ಅಮೆರಿಕದ ಹೊರತಾಗಿ ಜಗತ್ತೇ ಇಲ್ಲವಾಗಿದೆ. ಇದರ ಕೊನೆಯ ತುಗಲಕ್‌ನಂತೆ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಬ ಡಾನ್ ಕ್ಯುಕ್ಸೋಟ್ ಯಾವ ದುಸ್ಸಾಹಸಕ್ಕೂ ಸರಿ. ನೆನಪಿಸಿಕೊಳ್ಳುವುದಾದರೆ, ಇರಾಕ್, ಲಿಬಿಯಾ, ಕ್ಯೂಬಾ, ಹೀಗೆ ಪುಟ್ಟ, ದೊಡ್ಡ ರಾಷ್ಟ್ರಗಳ ಸಾಲೇ ನಮ್ಮೆದುರಿಗಿದೆ. ಸದ್ದಾಮ್, ಗದ್ದಾಫಿಯವರ ಸಹಿತ ಅನೇಕ ಸಾರ್ವಭೌಮ ರಾಷ್ಟ್ರನಾಯಕರನ್ನು ಖಳನಾಯಕರಾಗಿಸಿದ ಹಿರಿಮೆ ಅಮೆರಿಕದ್ದು. ಇತಿಹಾಸ ಸತ್ಯವನ್ನು ಕಂಡುಕೊಳ್ಳುವಾಗ ಯಾವಾಗಲೂ ತಡವಾಗುತ್ತದೆ.
ಸದ್ಯ ಅಮೆರಿಕದ ಬಾಯಿಗೆ ತುತ್ತಾದ ವೆನೆಝುವೆಲಾ ಎಂಬ ತೈಲಸಮೃದ್ಧ ಮತ್ತು ಖನಿಜಸಂಪತ್ತಿನ ಆಗರವಾದ, ದೇಶದ ಕುರಿತು ಅಮೆರಿಕ ನಡೆದುಕೊಂಡ ಕ್ರಮವನ್ನು ಗಮನಿಸಿದರೆ ಎರಡು ಕಾಲಿನ ಹೋಮೋ ಸೇಪಿನ್ಸ್ ಎಂಬ ಪ್ರಾಣಿಯ ಕುರಿತು ಜಿಗುಪ್ಸೆ ಬರಬಹುದು. ಆದರೆ ಅಮೆರಿಕವು ಒಂದು ಸಾರ್ವಭೌಮ ರಾಷ್ಟ್ರದ ಅಧ್ಯಕ್ಷರನ್ನು (ಮತ್ತು ಅವರ ಪತ್ನಿಯನ್ನು) ಸೀತಾಪಹರಣದ ಶೈಲಿಯಲ್ಲಿ ಹೊತ್ತು ತಂದು ಸಾಧಾರಣ ಅಪರಾಧಿಗಳಂತೆ ನಡೆಸಿಕೊಂಡು ಅವರನ್ನು ವಿಚಾರಿಸಿ ಶಿಕ್ಷಿಸುವ ನಿರ್ಲಜ್ಜ ಹಂತಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಏನು ಬೇಕಾದರೂ ನಡೆಯಬಹುದು. ವಿಶ್ವದ ಒತ್ತಾಯ, ಒತ್ತಡಕ್ಕೆ ಬಾಗಿ ವೆನೆಝುವೆಲಾದ ರಾಜಕೀಯದಿಂದ ಅಮೆರಿಕ ಹಿಂದೆಬರಬಹುದು; ಅಥವಾ ಸದ್ದಾಮ್ ಹುಸೇನ್, ಗದ್ದಾಫಿ ಮಾದರಿಯಲ್ಲಿ ಬಂಧಿತ ವೆನೆಝುವೆಲಾ ಮೊದಲಪ್ರಜೆಗಳ ಹತ್ಯೆಯನ್ನೂ ಮಾಡಬಹುದು. ವೆನೆಝುವೆಲಾ ಎಂಬ ದೇಶದಲ್ಲಿ ಏನು ಅನ್ಯಾಯ ನಡೆದರೂ ಅದನ್ನು ಅಲ್ಲಿನ ಪ್ರಜೆಗಳೇ ಅಥವಾ ವ್ಯವಸ್ಥೆಯೇ ಇತ್ಯರ್ಥಪಡಿಸಬೇಕು. ಅಥವಾ ವಿಶ್ವಸಂಸ್ಥೆಯು ಹಸ್ತಕ್ಷೇಪ ಮಾಡಬೇಕು. ಇದಕ್ಕೊಂದ ದೇಶೀ ಮತ್ತು ಅಂತರ್‌ರಾಷ್ಟ್ರೀಯ ಕಾನೂನಿದೆ. ಸೂಕ್ತ ವೇದಿಕೆಗಳಿವೆ. ಇದಲ್ಲದೆ ಯಾವುದೊಂದು ದೇಶಕ್ಕೂ ಅಲ್ಲಿ ಕೈಹಾಕುವ ಹಕ್ಕಿಲ್ಲ. ತೋಳ-ಕುರಿಮರಿ ಪ್ರಕರಣವು ಮನುಷ್ಯರಿಗೆ ನೀತಿಪಾಠಕ್ಕಾಗಿ ಸೃಷ್ಟಿಯಾದ ಕಥೆಯೇ ಹೊರತು ಅದು ನಡೆದಿದೆಯೆಂದಲ್ಲ. ಉದಾಹರಣೆಗಾಗಿ ಭಾರತದಲ್ಲಿ ಆಡಳಿತವು ಹೇಗೇ ಇರಲಿ, ಅದನ್ನು ಸರಿಪಡಿಸುವ ಭಾರ, ಹೊಣೆ, ಕರ್ತವ್ಯ ಹಕ್ಕು, ನಮ್ಮದೇ ಹೊರತು ಇತರ ದೇಶಗಳದ್ದಲ್ಲ. ನಾಳೆ ಅಮೆರಿಕವು ಇಲ್ಲಿನ ಯಾವುದಾದರೊಂದು ಲೋಪವನ್ನೋ, ಲಕ್ಷಣವನ್ನೋ ಗುರಿಯಾಗಿಸಿ ನಮ್ಮ ರಾಷ್ಟ್ರದೊಳಗೆ ಹಠಾತ್ತನೆ ಪ್ರವೇಶಿಸಿ ನಮ್ಮ ನಾಯಕರುಗಳಿಗೆ ಆಪತ್ತೆಸೆದರೆ ಅದನ್ನು ನಾವು ಎದುರಿಸಬಲ್ಲೆವೇ? ಜೀರ್ಣಿಸಿಕೊಳ್ಳಬಲ್ಲೆವೇ? ಇಷ್ಟು ಅರ್ಥವಾದರೆ ಸಾಕು-ಇಂದು ಅಮೆರಿಕ ನಡೆಸುವುದನ್ನು ಧೈರ್ಯವಾಗಿ ಎದುರಿಸಬಹುದು. ಇದು ವೆನೆಝುವೆಲಾಕ್ಕೆ ಬಂದ ಆಪತ್ತು ನಮಗಲ್ಲ ಎಂದು ಭ್ರಮಿಸಿ ಚಳಿಕಾಯಿಸುತ್ತ ಕುಳಿತವರಿಗೆ ಪಾದದ ಬುಡಕ್ಕೆ ಈ ಬೆಂಕಿ ವ್ಯಾಪಿಸಿದಾಗಷ್ಟೇ ಅದರ ಉರಿ ತಟ್ಟೀತು.
ಗಾಝಾದ ಹಣೆಬರೆಹವನ್ನು ವಿಶ್ವಸಂಸ್ಥೆಗೆ ತಿದ್ದಲಾಗಲಿಲ್ಲ. ನೆತನ್ಯಾಹು ಎಂಬ ಲಂಪಟ ನಾಯಕನ ವಿರುದ್ಧ ಅಂತರ್‌ರಾಷ್ಟ್ರೀಯ ನ್ಯಾಯಾಲಯವು ದಸ್ತಗಿರಿ ವಾರಂಟನ್ನು ನೀಡಿದರೂ ಆತನ ರೋಮವನ್ನೂ ಅದು ಸೋಂಕಿಲ್ಲ. ಉಕ್ರೇನಿನ ವಿರುದ್ಧದ ದಾಳಿಗೆ ಪುಟಿನ್ ಶಿಕ್ಷಾರ್ಹನಾಗಿದ್ದರೂ ಆತನ ವಿರುದ್ಧದ ಕ್ರಮವು ಒಂದು ಪ್ರಹಸನವಾಗಿದೆ. ಜಗತ್ತಿನ ಎಲ್ಲ ಕಡೆಯೂ ನಿಯಮಗಳು, ನ್ಯಾಯಪದ್ಧತಿ, ಕಾನೂನು ಹಾಸ್ಯಾಸ್ಪದವಾಗುತ್ತಿದೆ. ತನ್ನ ಸುಖಕ್ಕಾಗಿ ಯಾರನ್ನೇ ಆಗಲಿ ಬಲಿನೀಡುವ ನಾಯಕತ್ವದ ಕ್ರೌರ್ಯಕ್ಕೆ ಸಮಾಜ ಬೆಂಬಲ ನೀಡುವಂತಿದೆ. ವಿಶ್ವ ಸಂಸ್ಥೆಗೆ ಶ್ರದ್ಧಾಂಜಲಿ ನೀಡುವ ದಿನ ದೂರವಿಲ್ಲ.
ಇವನ್ನೆಲ್ಲ ಗಮನಿಸಿ ಕಾಡುಮೃಗಗಳು ಸಂತಸಪಡಬಹುದು. ತಾವೇ ವಾಸಿ ಎಂದುಕೊಂಡು ನರಿಗಳೂ ಕುರಿಗಳೂ ನಿರಾಳವಾಗಬಹುದು. ನಮ್ಮ ಶ್ರೀರಾಮಚಂದ್ರ ಒಂದು ವೇಳೆ ಅವತಾರವೆತ್ತಿ ಬಂದರೆ ತನ್ನ ನೀತಿಯನ್ನು ಭಾರತವೂ ಸೇರಿದಂತೆ ಆಧುನಿಕ ಜಗತ್ತು ಅರ್ಥವಿಸಿಕೊಳ್ಳುವ ನೈಪುಣ್ಯವನ್ನು ಕಂಡು ಬೆಕ್ಕಸಬೆರಗಾಗಬಹುದು: ಅಮೆರಿಕದ ಶಕ್ತಿಸಾಮರ್ಥ್ಯವನ್ನೂ ನೀತಿಯನ್ನೂ ಕಂಡು ಬೆಚ್ಚಿಬೀಳಬಹುದು; ನಾಚಿ ಮತ್ತೆ ಮರೆಯಾಗಬಹುದು.







