ಒಂದು ಪುಟ್ಟ ನೆನಪು

ಗಾತ್ರದಲ್ಲಿ ಚಿಕ್ಕದಾದುದರಿಂದ ಶುಂಕಿ ಸಹಜವಾಗಿಯೇ ನಮ್ಮ ಮನೆಯ ಒಳಾಂಗಣ ಸೇರಿತು. ಮಕ್ಕಳಿಗಂತೂ ಮುದ್ದು. ಅದನ್ನು ಪ್ರೀತಿಸುವವರ ಕಿರಿಕಿರಿಯಿಂದ ಅದು ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಇತ್ತು. ಕಾಂಪೌಂಡಿನಿಂದ ಎಲ್ಲಿ ಹೊರಗೆ ಹೋಗುತ್ತದೆಯೋ ಎಲ್ಲಿ ಇತರ ದೊಡ್ಡ ನಾಯಿಗಳ ಬಾಯಿಗೆ ಬಲಿಯಾಗುತ್ತದೆಯೋ ಎಂಬ ಭಯದಿಂದ ಗೇಟನ್ನು ಮುಚ್ಚಿಡಲೇಬೇಕಾದ ಅನಿವಾರ್ಯವನ್ನು ಅದು ತಂದಿತು. ಒಳಗೇ ಇದ್ದು ಅದು ನಮ್ಮ ಬಗ್ಗೆ ತೋರುತ್ತಿದ್ದ ಮೂಕ ಪ್ರೀತಿ ವಿಶ್ವಾಸಕ್ಕೆ ಮನುಷ್ಯರು ಬಳಸುವ ಯಾವ ಪದವೂ ಸಮನಲ್ಲ. ಮಾತಿನಲ್ಲೇ ಮುಳುಗಿಹೋಗಿರುವ ಮನುಷ್ಯರ ಅರ್ಥಕೋಶದಲ್ಲಿ ಅನಿರ್ವಚನೀಯ, ಅವರ್ಣನೀಯ ಎಂಬ ಪದಗಳು ಹುಟ್ಟಿಕೊಂಡದ್ದೇ ಮೂಕಪ್ರಾಣಿಗಳಿಗಾಗಿ ಇರಬೇಕು.
ಮನುಷ್ಯರಿಗೆ ಅತೀ ಹತ್ತಿರದ ಸ್ನೇಹಿತ, ಬಂಧು ಯಾವ ಪ್ರಾಣಿ ಎಂದು ಪ್ರಶ್ನಿಸಿದರೆ ಕೆಲವರು ಹಸುವನ್ನು ಹೆಸರಿಸಬಹುದು. ನಾನೂ ಹಾಗೆ ತಿಳಿದಿದ್ದೆ- ‘ಶುಂಕಿ’ಯೆಂಬ ಡಾಶ್ಹಂಡ್ ನಾಯಿ ನಮ್ಮ ಮನೆಯನ್ನು ಸೇರುವ ವರೆಗೆ. ನಾಯಿಗಳ ಬಗ್ಗೆ ಧಾರ್ಮಿಕರಿಗೆ ಅಪಾರ ಗೌರವ. ಅವು ನಾಲ್ಕು ವೇದಗಳನ್ನು ಸಾಂಕೇತಿಸುತ್ತವಂತೆ. ತ್ರಿಮೂರ್ತಿ ರೂಪ ದತ್ತಾತ್ರೇಯನ ಸುತ್ತ ನಾಲ್ಕು ನಾಯಿಗಳು ಇಲ್ಲದ ಫೋಟೊಗಳೇ ಇಲ್ಲ. ಆದ್ದರಿಂದ ಅವು ವೇದಕಾಲೀನವೆಂಬ ಸಂಭ್ರಮ. ಕಲಾವಿದರು ಅಲ್ಲೂ ಚಿತ್ರಿಸುವುದು ಊರನಾಯಿಗಳನ್ನೇ. ಪಾಶ್ಚಾತ್ಯರು ‘ಕಂಟ್ರಿ’ (Country) ಅಂದರೆ ಹಳ್ಳಿ ಅಥವಾ ಪ್ರಾಕೃತಿಕ ಎಂದು ಉಲ್ಲೇಖಿಸುವುದನ್ನು ನಾವು ‘ಕಂತ್ರಿ’ ಎಂದು ಹೇಳುತ್ತೇವೆಂದು ನಾನು ಭಾವಿಸಿದ್ದೇನೆ. (‘ಕಂಟ್ರಿ ರೋಡ್ಸ್’ ಎಂದು ಹೇಳುತ್ತಾರಲ್ಲ,- ಕಂಟ್ರಿ ರೋಡ್ಸ್, ಟೇಕ್ ಮಿ ಹೋಮ್ ಎಂಬ ಪ್ರಸಿದ್ಧ ಹಾಡಿದೆ; ಹಾಗೆ!) ಹೊರತು ಆಧುನಿಕರ ಮನೆಗಳಲ್ಲಿರುವ ಆಲ್ಸೇಶಿಯನ್, ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್, ಮುಧೋಳ ಮುಂತಾದ ಜಾಗತಿಕ ತಳಿಗಳನ್ನಲ್ಲ. ಒಂದು ವಿಷಯ ಸತ್ಯ: ಆತ್ಮೀಯತೆಗೆ ವ್ಯಾವಹಾರಿಕ ಉಪಯೋಗದ ಹಂಗಿಲ್ಲ. ರಂತಿದೇವನ ಕಥೆಯಲ್ಲಿ ಬರಗಾಲದಲ್ಲಿ ಆತ ಸಂಸಾರಸಹಿತ ಗುಳೆ ಹೋದಾಗ ಆತನಲ್ಲಿದ್ದ ರೊಟ್ಟಿಯಲ್ಲಿ ಪಾಲುಕೇಳಲು ಬಂದದ್ದು ಒಂದು ನಾಯಿ. ಆತ ಅದನ್ನು ನೀಡಿದಾಗ ಅದು ದೇವತೆಯಾಗಿ ಪ್ರತ್ಯಕ್ಷವಾಗಿ ಆತನನ್ನು ಹರಸಿತಂತೆ. ಧರ್ಮರಾಜನೊಂದಿಗೆ ಸ್ವರ್ಗದ ಬಾಗಿಲಿಗೂ ಬಂದದ್ದು ನಾಯಿ. ಅದು ಯಮಧರ್ಮನ ಅವತಾರವೆಂದರೂ ಆತ ಧರ್ಮರಾಜನ ತಂದೆಯೇ ಎಂದರೂ ಯಮನಿಗೆ ಎಲ್ಲ ಪ್ರಾಣಿಗಳ ಪೈಕಿ ನಾಯಿಯ ರೂಪವನ್ನೇ ಧರಿಸಬೇಕೆಂದು ಅನ್ನಿಸಿದ್ದು ಏಕೆ?
ಎ.ಜಿ. ಗಾರ್ಡಿನರ್ ಎಂಬ ಬ್ರಿಟಿಷ್ ಪತ್ರಕರ್ತ-ಲೇಖಕ ‘ಆಲ್ ಅಬೌಟ್ ಎ ಡಾಗ್’ All about a Dog) ಎಂಬ ಸುಂದರ ಪ್ರಬಂಧವನ್ನು ಬರೆದಿದ್ದಾನೆ. ಇದು ಕಥೆಯೂ ಹೌದು. ಚಳಿಗಾಲದ ಒಂದು ಇರುಳು ತನ್ನ ಮುದ್ದಿನ ಸಾಕುನಾಯಿಯನ್ನು ಕರೆದುಕೊಂಡು ಒಬ್ಬಾಕೆ ಬಸ್ ಹತ್ತುತ್ತಾಳೆ. ಆದರೆ ಬಸ್ ನಿರ್ವಾಹಕ ನಾಯಿಯನ್ನು ಬಸ್‌ನಲ್ಲಿ ಕರೆದುಕೊಂಡು ಹೋಗುವಂತಿಲ್ಲ ಎಂಬ ನಿಯಮಕ್ಕನುಸಾರವಾಗಿ ಆಕ್ಷೇಪಿಸುತ್ತಾನೆ. ತುಂಬಾ ಚಳಿಯಿದೆ ಎಂಬ ಕಾರಣದಿಂದ ಆಕೆ ಇಳಿಯುವುದಿಲ್ಲ. ವಾಗ್ವಾದ ನಡೆದು ಕೊನೆಗೂ ಆಕೆಗೆ ಬಸ್‌ನ ಮಾಳಿಗೆಯಲ್ಲಿ ಜಾಗ ಕಲ್ಪಿಸಲಾಗುತ್ತದೆ. ಮುಂದೆ ಬಸ್ ನಿಂತಾಗ ಆಕೆ ಮತ್ತೆ ಮುಂದಕ್ಕೆ ಬರುತ್ತಾಳೆ. ಮತ್ತೆ ವಾಗ್ವಾದ ನಡೆಯುತ್ತದೆ. ಆಕೆ ಮಾಳಿಗೆಯಲ್ಲಿ ಪ್ರಯಾಣ ಮುಂದುವರಿಸುತ್ತಾಳೆ. ಇದು ನಿಯಮಗಳ ಅನುಷ್ಠಾನದ ಕುರಿತು ಒಂದು ವ್ಯಂಗ್ಯವನ್ನೂ ಕಾಣಿಸುವ ಕಥೆ. ಇಲ್ಲಿ ನಾಯಿ ಕಥೆಯ ಕೇಂದ್ರ ಪಾತ್ರವಲ್ಲವಾದರೂ ಕಥೆಯ ಕಾರ್ಯಕಾರಣ.
ನಮ್ಮ ಮನೆಯ ನಾಯಿ ‘ಶುಂಕಿ’ ಮೊನ್ನೆ ಅಕ್ಟೋಬರ್ 1ನೇ ತಾರೀಕು ರಾತ್ರಿ ಸುಮಾರು 9:45ಕ್ಕೆ ಕೊನೆಯುಸಿರೆಳೆಯಿತು. ಇದು ಪ್ರಪಂಚಕ್ಕೇನೂ ದೊಡ್ಡ ಸುದ್ದಿಯಲ್ಲ. ನಾಯಿ ಸತ್ತಂತೆ ಎಂಬ ಉಕ್ತಿಯಿದೆ. ಅದು ಸಾಯುವುದಕ್ಕೇ ಇರುವ ಪ್ರಾಣಿ ಎಂಬಂತೆ ಮತ್ತು ಅದಕ್ಕೆ ಸಾಯುವುದಕ್ಕೆ ಕಾರಣ ಬೇಕಾಗಿಲ್ಲ ಮತ್ತು ಅದು ಯಾವ ವರ್ಚಸ್ಸನ್ನೂ ಹೊಂದದ ಮತ್ತು ಗುಲಾಮನಂತೆ ಊಳಿಗಮಾನ್ಯ ಪದ್ಧತಿಯನ್ನು ಸಾಂಕೇತಿಸುವ ಮತ್ತು ಆಶ್ರಯವಿಲ್ಲದಿದ್ದರೆ ಬೀದಿಪಾಲಾಗಿಯೇ ಇರುವ ಪ್ರಾಣಿ. ಅದು ಮನುಷ್ಯರಿಗಾಗಿ ಇರುವ ಪ್ರಾಣಿ. ಅದು ನಮಗೆ ಎಷ್ಟು ಉಪಯೋಗ, ಸಂತೋಷ ನೀಡುತ್ತದೆ ಎಂಬುದರ ಆಧಾರದಲ್ಲಿ ಅದರ ಅಸ್ತಿತ್ವದ ಬೆಲೆ. ಇಲ್ಲವಾದರೆ ನಾಯಿ ಬೊಗಳಿದರೂ ಸತ್ತರೂ ನಾವು ಕಾಣದ ಆದರೆ ನಮ್ಮ ಸಾವಿನ ಬಳಿಕ ನಮಗೇ ಮೀಸಲಾಗಿದೆಯೆಂದು ನಾವು ಭಾವಿಸುವ ದೇವಲೋಕ ಹಾಳಾಗುವುದಿಲ್ಲ. ಎಂದರೆ ಮನುಷ್ಯರೇನಾದರೂ ಸತ್ತರೆ ಅದೊಂದು ಘಟನೆ. ಆದರೆ ನಿತ್ಯ ಸಾಯುವ ಮನುಷ್ಯರಿಗೇ ದುಃಖಿಸುವವರು ಕಡಿಮೆಯಾಗುತ್ತಿರುವಾಗ ಇದೇನೂ ಸುದ್ದಿಯಲ್ಲ. ಸಂಬಂಧ, ಒಡನಾಟ ನಿಕಟವಾದಂತೆ ಸಣ್ಣ ವಿಚಾರವೂ ದೊಡ್ಡದಾಗುತ್ತದೆ. ಮೆಕ್ಸಿಕೋದಲ್ಲಿ ವಿಮಾನಪತನವಾಗಿ ನೂರಾರು ಜನರು ಸತ್ತರೆ ಆ ಸುದ್ದಿಯನ್ನು ಓದುತ್ತಲೇ ಮುಂದಿನ ಕಾಲಮಿನ ಸುದ್ದಿಗೆ ಅಣಿಯಾಗುತ್ತೇವೆ. ಅದೇ ಪಕ್ಕದ ಮನೆಯಲ್ಲಿ ಏನಾದರೂ ದುರಂತ ಸಂಭವಿಸಿದರೆ ಸಂಪರ್ಕದ ಅಂತರವನ್ನು ಅನುಸರಿಸಿ ಆಘಾತವಾಗುತ್ತದೆ. (ನಗರ-ಮಹಾನಗರಗಳಲ್ಲಿ ಪರಸ್ಪರ ಸಂಪರ್ಕವೇ ಕಡಿದಂತಿರುವ ವಾತಾವರಣದಲ್ಲಿ ಈ ಪರಿಸ್ಥಿತಿ ಇರದು.) ಆದರೆ ನಮ್ಮ ಮನೆಯಲ್ಲೇ ದುರಂತವಾದರೆ ಅದು ತಡೆಯಲಾಗದ ನೋವನ್ನು ನೀಡುತ್ತದೆ. ಏಕಾಂತ ಬೇರೆ; ಲೋಕಾಂತ ಬೇರೆ.
‘ಶುಂಕಿ’ 2010ರ ಫೆಬ್ರವರಿ 10ರಂದು ಮೈಸೂರಿನಲ್ಲಿ ನಮ್ಮ ಆತ್ಮೀಯರೊಬ್ಬರ ಮನೆಯಲ್ಲಿ ಹುಟ್ಟಿ 6 ತಿಂಗಳ ಮಗುವಾಗಿದ್ದಾಗ ನಮ್ಮ ಮನೆಗೆ ಬಂತು. ಅದಾಗಿ ಬಂದದ್ದಲ್ಲ. ಅವರು ಕೊಟ್ಟರು, ನಾವು ಪಡೆದೆವು. ಅದಕ್ಕೆ ತನ್ನ ಹೆತ್ತವಳ ಆರೈಕೆ ಬೇಡವೇ, ತನ್ನವರು ಅದಕ್ಕೆ ನೆನಪಾಗುವುದಿಲ್ಲವೇ ಮುಂತಾದ ಪ್ರಶ್ನೆಗಳು ನಮಗೆ ಮನುಷ್ಯರಿಗೆ ಹೊಳೆಯುವುದಿಲ್ಲ. ಪಂಜರದ ಪಕ್ಷಿಯೊಂದು ‘ನಾನು ಪಂಜರದ ಪಕ್ಷಿ ನನಗಿನ್ನಾರು ಗತಿ, ಕೇಳಬಯಸುವಿಯೇನು ನನ್ನ ಕತೆಯ?’ ಎಂದು ಪದ್ಯದಲ್ಲಿ ಹೇಳುತ್ತದೆ. ನಾಯಿಗಳ ಬಗ್ಗೆ ಇಂತಹ ಪದ್ಯ ಬಂದದ್ದು ನನಗೆ ನೆನಪಾಗುವುದಿಲ್ಲ. ನಮಗೆ ನೆನಪಾಗುವುದು ಬಾಲ್ಯದಲ್ಲಿ ಕಲಿತ, ಹಾಡಿದ ‘ನಾಯಿಮರಿ, ನಾಯಿಮರಿ, ತಿಂಡಿಬೇಕೇ?’ ಎಂದು ಪ್ರಶ್ನೆ ಕೇಳಿ ನಮಗೆ ಬೇಕಾದಂತಹ ಉತ್ತರವನ್ನು ಪಡೆದ ಹಾಡು. ಇದು ಮುಗ್ಧ ಪುಟ್ಟ ನಾಯಿಗಳ ಪದ್ಯ. ಅದು ದೊಡ್ಡ ನಾಯಿಗಳಿಗೆ ಅನ್ವಯಸುತ್ತದೆಯೇ ಅಥವಾ ಅವುಗಳ ಬಗ್ಗೆ ಬರೆಯುವ ಪದ್ಯ ಹೆಚ್ಚು ಗಂಭೀರ ಮತ್ತು ವೈಚಾರಿಕವಾಗಿರಬೇಕೇ? ಗೊತ್ತಿಲ್ಲ. ಆದರೆ ದಾಸರು ನಮ್ಮ ನಾಯಕರನ್ನು ‘ಡೊಂಕು ಬಾಲದ ನಾಯಕರೇ’ ಎಂದು ಉದ್ದೇಶಿಸಿದ್ದಾರಲ್ಲ, ಅದು ನಾಯಿಗಳ ಕುರಿತಲ್ಲ ಬದಲು ನಾವು ಅಂಧಶ್ರದ್ಧೆಯಿಂದ (ಈಚೀಚೆಗೆ ಅಂಧಭಕ್ತಿಯಿಂದ) ಅನುಸರಿಸುತ್ತೇವಲ್ಲ, ಅನುಕರಿಸುತ್ತೇವಲ್ಲ ಅಂತಹ ಅಯೋಗ್ಯರ ಬಗ್ಗೆ ಎಂಬುದು ಮನವರಿಕೆಯಾದೀತು!
‘ಶುಂಕಿ’ ಎಂಬ ಹೆಸರಿನ ಬಗ್ಗೆ ಬಹಳಷ್ಟು ಕುತೂಹಲವನ್ನು ನಮ್ಮನ್ನು ಬಲ್ಲವರು ವ್ಯಕ್ತಪಡಿಸಿದರು. ಈ ಪದದ ಅರ್ಥವೇನು ಎಂಬ ಕುತೂಹಲ. ಏನೂ ಇಲ್ಲ ಎಂದೆ. ಹಾಗಿರಲಿಕ್ಕಿಲ್ಲ. ಏನೂ ಅರ್ಥವಿಲ್ಲದೆ ನೀವು ಅಂತಹ ಪದವನ್ನು ಬಳಸುವವರಲ್ಲ, ಸೃಷ್ಟಿಸುವವರಲ್ಲ ಎಂದು ಕೇಳಿದರು. ಹಾಗಾದರೆ ಕೇಳಿ: ಶುಕ-ಪಿಕ ಎನ್ನುತ್ತೇವೆ; ‘ಪಿಂಕಿ’ ಎಂಬ ಪದವನ್ನು ಬೇಕಾಗಿಯೋ ಬೇಡದೆಯೋ ಬಳಸುತ್ತೇವೆ. ಅದರ ಅಮಳ ಪದ ‘ಶುಂಕಿ’ ಎಂದುಕೊಳ್ಳಿ ಎಂದೆ. ಈ ಕಾರಣ ಯಾಕೋ ಸಮರ್ಪಕವಾಗಿದೆಯೆಂದು ಅವರಿಗೂ ಅನಿಸಿರಬೇಕು; ನನಗೂ ಅನ್ನಿಸಿತು. ಅಲ್ಲಿಗೆ ಈ ಪದ ತನ್ನ ಉದ್ಧರಣ ಚಿಹ್ನೆಯನ್ನು ಕಳೆದುಕೊಂಡಿತು. ಸಾಮಾನ್ಯವಾಯಿತು; ನಮ್ಮ ಶಬ್ದ ಭಂಡಾರ ಬೆಳೆಯಿತು; ನಮ್ಮೊಳಗಾಯಿತು. ಭಾಷೆ ಬೆಳೆಯುವುದೇ ಹೀಗೆ ಇರಬಹುದು.
ಶುಂಕಿ ಶುದ್ಧ ಕಾಫಿಹುಡಿಯ ಬಣ್ಣದ್ದು. ಚಿಕೋರಿ ಮಿಶ್ರ ಮಾಡಿದ ಕಾಫಿಹುಡಿ. ಮೊದಲು ‘ಕಾಫಿ’ ಎಂದೇ ಕರೆದೆವು. ಇದಕ್ಕೆ ಎರಡು ಕಾರಣಗಳಿದ್ದವು. ಇದರೊಂದಿಗೆ ಇನ್ನೊಂದು ನಾಯಿಮರಿಯನ್ನೂ ತಂದಿದ್ದೆವು. ಅದು ಹಾಲುಬೆರೆಸಿದ ಚಹಾದ ಬಣ್ಣವಿತ್ತು. ಅದಕ್ಕೆ ‘ಟೀ’ ಎಂದು ಕರೆದಿದ್ದೆವೋ ನೆನಪಿಲ್ಲ. ಅದನ್ನು ಬಯಸಿದ ನಮ್ಮ ಗೆಳೆಯರೊಬ್ಬರಿಗೆ ನೀಡಿದೆವು. (ಅದು ಈಗ ಒಂದೆರಡು ವರ್ಷಗಳಿಗೆ ಮೊದಲು ಸತ್ತುಹೋಯಿತೆಂದು ಕೇಳಿದೆ.) ಆನಂತರ ನಾವು ಕಾಫಿಯಿಂದ ಶುಂಕಿಗೆ ಬದಲಾದದ್ದು. ನಾನಿರುವುದು ಕಾಫಿ ಬೆಳೆಯುವವರ, ಕಾಫಿತೋಟಗಳ, ನಡುವಲ್ಲಿ. ಕೆಲವು ದಶಕಗಳ ಹಿಂದೆ ‘ಕಂದು ಬಂಗಾರ’ (Brown Gold) ವೆಂಬ ಘನತೆಗೆ ಪಾತ್ರವಾಗಿದ್ದ, ಕಾಫಿಯ ಹೆಸರನ್ನು ನೀಡುವುದು ಹೀನೋಪಮೆಯಾಗಬಾರದೆಂದು ಈ ಪುನರ್ನಾಮಕರಣ. ಹೇಗೂ ಇರಲಿ, ಶುಂಕಿ ಆನಂತರ 16ವರ್ಷಗಳಿಗೂ ಮಿಕ್ಕಿ ನಮ್ಮೊಂದಿಗೆ ಬದುಕಿ ಬಾಳಿತು.
ಶುಂಕಿ ‘ಡಾಶ್ಹಂಡ್’ (Dashund) ಎಂಬ ಜರ್ಮನಿಯ ತಳಿಗೆ ಸೇರಿದ್ದು. ಇದು ಗಾತ್ರದಲ್ಲಿ ತುಂಬಾ ಚಿಕ್ಕದು. ಯುರೋಪ್‌ನಲ್ಲಿ ‘ಬ್ಯಾಜರ್’ (Badger) ಎಂಬ ಹಾವಳಿ ಮಾಡುವ ಪುಟ್ಟ ಪ್ರಾಣಿಯನ್ನು ಹಿಡಿಯುವುದಕ್ಕಾಗಿ ಇದನ್ನು ಸಾಕುತ್ತಾರೆಂದು ಕೇಳಿದೆ. ಈ ತಳಿಯ ನಾಯಿ ಮೊಲಗಳನ್ನೂ ಹಿಡಿಯುತ್ತದೆಯಂತೆ. ನಮ್ಮಲ್ಲಿ ಬ್ಯಾಜರ್‌ನ ಅಥವಾ ಈ ನಾಯಿ ಹಿಡಿಯಬಲ್ಲ ಪ್ರಾಣಿಗಳ ಕಾಟವಿಲ್ಲ.
ಗಾತ್ರದಲ್ಲಿ ಚಿಕ್ಕದಾದುದರಿಂದ ಶುಂಕಿ ಸಹಜವಾಗಿಯೇ ನಮ್ಮ ಮನೆಯ ಒಳಾಂಗಣ ಸೇರಿತು. ಮಕ್ಕಳಿಗಂತೂ ಮುದ್ದು. ಅದನ್ನು ಪ್ರೀತಿಸುವವರ ಕಿರಿಕಿರಿಯಿಂದ ಅದು ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಇತ್ತು. ಕಾಂಪೌಂಡಿನಿಂದ ಎಲ್ಲಿ ಹೊರಗೆ ಹೋಗುತ್ತದೆಯೋ ಎಲ್ಲಿ ಇತರ ದೊಡ್ಡ ನಾಯಿಗಳ ಬಾಯಿಗೆ ಬಲಿಯಾಗುತ್ತದೆಯೋ ಎಂಬ ಭಯದಿಂದ ಗೇಟನ್ನು ಮುಚ್ಚಿಡಲೇಬೇಕಾದ ಅನಿವಾರ್ಯವನ್ನು ಅದು ತಂದಿತು. ಒಳಗೇ ಇದ್ದು ಅದು ನಮ್ಮ ಬಗ್ಗೆ ತೋರುತ್ತಿದ್ದ ಮೂಕ ಪ್ರೀತಿ ವಿಶ್ವಾಸಕ್ಕೆ ಮನುಷ್ಯರು ಬಳಸುವ ಯಾವ ಪದವೂ ಸಮನಲ್ಲ. ಮಾತಿನಲ್ಲೇ ಮುಳುಗಿಹೋಗಿರುವ ಮನುಷ್ಯರ ಅರ್ಥಕೋಶದಲ್ಲಿ ಅನಿರ್ವಚನೀಯ, ಅವರ್ಣನೀಯ ಎಂಬ ಪದಗಳು ಹುಟ್ಟಿಕೊಂಡದ್ದೇ ಮೂಕಪ್ರಾಣಿಗಳಿಗಾಗಿ ಇರಬೇಕು.
ಈ ಮನುಷ್ಯ-ಪ್ರಾಣಿ ಸಂಬಂಧ ಎಷ್ಟು ಗಾಢವಾಗಿತ್ತೆಂದರೆ ನಾವೇನಾದರೋ ಅದನ್ನು ಬಿಟ್ಟು ಹೋದರೆ ಅದು ಪಡುವ ವ್ಯಥೆ ನಾನೀಗ ಹೇಳಿದ ಅನಿರ್ವಚನೀಯ, ಅವರ್ಣನೀಯ. ಅದನ್ನು ಬಿಟ್ಟು ಹೋಗುವ ಅನಿವಾರ್ಯತೆಯ ಸಂಕಟವನ್ನು ನಾವು ಅನುಭವಿಸಿದ್ದೇವೆ. ನಾವು ಮರಳಿದಾಗ ಅದು ತನ್ನ ಹಾವಭಾವದಿಂದ ಹೇಳಿದ್ದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ.
ಎಲ್ಲ ಜೀವಿಗಳಂತೆ ಶುಂಕಿಗೂ ವಯಸ್ಸಾಗುತ್ತಾ ಬಂತು. ಅದರ ಚಲನವಲನಗಳು ನಿಧಾನವಾದವು. ‘ನಾಯಿಗೆ ನರೆ ಬಂದರೆ ಅದು ಅಜ್ಜಿ ಅನ್ನಿಸಿಕೊಂಡೀತೇ’ ಎಂಬ ಮಾತಿದೆ. ಆದರೆ ಪ್ರೀತಿ ಮತ್ತು ಮುಗ್ಧತೆ! ಹಾಗೆಯೇ. ನಿತ್ಯನೂತನ. ಒಮ್ಮೆ ನಾನು ಉಪ್ಪರಿಗೆಯಿಂದ ಇಳಿಯುವಾಗ ಅದನ್ನು ಬಿಟ್ಟುಹೋಗುತ್ತೇನೆಂದು ತಿಳಿಯಿತೋ ಏನೋ ನೇರ ಅಲ್ಲಿಂದ ಸಿನೆಮಾ ಹೀರೋಗಳ ಹಾಗೆ ನೆಲಮಹಡಿಗೆ ಜಿಗಿಯಿತು. ಬಿದ್ದ ರಭಸಕ್ಕೆ ಮೂಗಿನಲ್ಲೆಲ್ಲ ರಕ್ತಸ್ರಾವವಾಯಿತು. ಸತ್ತೇಹೋಯಿತೇನೋ ಎಂದುಕೊಂಡಾಗ ಇಲ್ಲ ಬದುಕಿದೆ, ತೀವ್ರ ಏಟಾಗಿದೆ ಎಂದು ನನ್ನ ಪತ್ನಿ ಹೇಳಿದಳು. ಆನಂತರ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಅದರ ಮುಂದಿನ ಬಲಕಾಲು (ಇದನ್ನು ಬಲಗೈ ಎನ್ನಬಹುದೇನೋ?) ಮುರಿದಿತ್ತು. ನಡೆಯಲು ಸಾಧ್ಯವಿರಲಿಲ್ಲವಾದರೂ ಅದು ಕುಂಟುತ್ತ ನಮ್ಮ ಬಳಿ ಬರುವ ಚಿತ್ರ ಈಗಲೂ ಕಣ್ಣಿಗೆ ಕಟ್ಟುತ್ತದೆ. ಅದನ್ನು ಬೆಂಗಳೂರಿಗೆ ಕರೆದೊಯ್ದು ಒಂದು ರಾಡ್ ಹಾಕಿಸಿ ಸರಿಮಾಡಿದೆವೆಂದು ತೃಪ್ತಿಪಟ್ಟೆ ವಾದರೂ ಅದು ಆನಂತರ ಸುಮಾರು 10 ವರ್ಷ ಕುಂಟುತ್ತಲೇ ಬದುಕಿತು.
ಕೊನೆಯ ಸುಮಾರು 6 ತಿಂಗಳು ಅದು ನಿಜಕ್ಕೂ ಅಸಹಾಯಕವಾಗಿತ್ತು. ಅದರ ದಿನಚರಿಯ ಬಗ್ಗೆ ಅದಕ್ಕೆ ನಿಯಂತ್ರಣವಿರಲಿಲ್ಲ. ವೈದ್ಯರಲ್ಲಿ ವಿಚಾರಿಸಿದಾಗ ಈ ತಳಿಗಳು 12-13 ವರ್ಷಗಳಷ್ಟೇ ಬಾಳುತ್ತವೆ. ಇಷ್ಟುಕಾಲ ಬದುಕಿದ್ದೇ ಹೆಚ್ಚು ಎಂದರು. ‘ನಮಗೆ ಅದರ ಅಗತ್ಯ ತುಂಬಾ ಇದೆ, ಅದಿಲ್ಲದೆ ದಿನ ಸಾಗುವುದಿಲ್ಲ’ ಎಂದಾಗ ನಮ್ಮ ಮನೆಯಲ್ಲಿ ಕೆಲಸಮಾಡುತ್ತಿದ್ದವಳೊಬ್ಬಳು ‘ಅದಕ್ಕೆ ನಿಮ್ಮ ಅಗತ್ಯ ಅದಕ್ಕಿಂತಲೂ ಹೆಚ್ಚು ಇದೆ, ಆದ್ದರಿಂದಲೇ ಅದು ಇನ್ನೂ ಬದುಕಿದೆ’ ಎಂದಳು. ಯಾವುದು ಸರಿ? ಗೊತ್ತಿಲ್ಲ.
ಇದೇ ಮೊದಲ ನಾಯಿಯಲ್ಲ ನಮ್ಮ ಮನೆಯಲ್ಲಿದ್ದದ್ದು; ಅನೇಕ ಇತರ ತಳಿಗಳು ಇದ್ದವು. ಅವು ಯಾವುವೂ ಇಷ್ಟುಕಾಲ ಬದುಕಿರಲಿಲ್ಲ. ಆದ್ದರಿಂದ ಇದರ ಮೋಹ ನಮಗೆ ಹೆಚ್ಚಾಗಿತ್ತು ಅನ್ನಿಸುತ್ತದೆ. ಆದರೆ ಅದರ ದೃಷ್ಟಿ ಮಂದವಾಗುತ್ತ, ಉಣಲಾಗದೆ ನರಳುತ್ತಿತ್ತು. ಮನೆಯ ಸೊಬಗನ್ನು, ಅಚ್ಚುಕಟ್ಟು ವ್ಯವಸ್ಥೆಯನ್ನು ಹಾಳುಮಾಡುತ್ತಿತ್ತು. ಕೊನೆಯ ದಿನವೂ ವೈದ್ಯರು ಬಂದು ನೋಡಿದರು. ನನ್ನ ಪತ್ನಿ ಮಾಮೂಲು ಮಮಕಾರದಿಂದ ಇನ್ನೆಷ್ಟು ದಿನ ಬದುಕೀತು ಎಂದು ಕೇಳಿದಾಗ ಅವರಿಗೆ ಸತ್ಯಕ್ಕಿಂತಲೂ ಮನನೋಯದಂತೆ ಹೇಳುವುದು ಮುಖ್ಯವಾಗಿ ಪರವಾಗಿಲ್ಲ, ಹೀಗೇ ಇದ್ದೀತು, ದ್ರವಗಳನ್ನಷ್ಟೇ ನೀಡಿ ಎಂದರು. ಅದೇ ದಿನ ರಾತ್ರಿ ನಾವು ಊಟ ಮಾಡಿ ಕಪನೆಯಲ್ಲಿ ಅದಕ್ಕಿನ್ನು ಗ್ಲೂಕೋಸ್ ಅಥವಾ ಒಆರ್‌ಎಸ್ ನೀಡಬಹುದೇನೋ ಎಂದು ಯೋಚಿಸುತ್ತ ಅದರ ಬಳಿಹೋದಾಗ ಅದು ನಿರಾಳವನ್ನು ದಿಟ್ಟಿಸುತ್ತ ಕಣ್ಣುಮುಚ್ಚಿತ್ತು. (ಕಣ್ಣುಮುಚ್ಚುವ ರೂಪಕ ಎಷ್ಟು ಮಾರ್ಮಿಕ!)
ಕಳೆಯಿತಾ ಶುಂಕಿಯ ರಾತ್ರಿ. ಬೆಳಗ್ಗೆ ಅದರ ಅಂತ್ಯಕ್ರಿಯೆಗೆ ಸಜ್ಜಾದೆವು. ನಮ್ಮ ತೋಟದಲ್ಲಿ ಎಲ್ಲ ಏರ್ಪಡು ಮಾಡಿದೆವು. ಬಿಳಿಬಟ್ಟೆಯಲ್ಲಿ ಅದನ್ನು ಸುತ್ತಿದೆವು. ನನ್ನ ಪತ್ನಿ ಅದರ ಪರಲೋಕ ಯಾತ್ರೆಗಾಗಿ ಎರಡು ಬಿಸಿ ಚಪಾತಿಗಳನ್ನು ಮಾಡಿದಳು. ಒಂದಿಷ್ಟು ಹೂವುಗಳನ್ನು, ಒಂದು ಸಣ್ಣ ಪಾತ್ರೆಯಲ್ಲಿ ಕುಡಿಯುವ ನೀರು, ರಸ್ಕ್ ಹೀಗೆ ಅದಕ್ಕೆ ಇಷ್ಟವಾದದ್ದನ್ನು ತುಂಬಿಕೊಟ್ಟಳು. ಅವೆಲ್ಲದರೊಂದಿಗೆ ಅದನ್ನು ಮಣ್ಣುಮಾಡಿದೆವು. ಆದರೆ ಆ ಹೊತ್ತಿಗೆ ಅದು ನಾಯಿಯಾಗಿರಲಿಲ್ಲ. ಒಂದು ಜೀವಿಯಾಗಿತ್ತು. ಬಂಧುವಾಗಿತ್ತು. ಆತ್ಮಸಖನಾಗಿತ್ತು.
ಚಿಕ್ಕ, ಖಾಸಗಿ ವಿಚಾರಗಳನ್ನು ಅಂಕಣದಲ್ಲಿ ಬಿಂಬಿಸಿ ಪ್ರಚಾರ ಮಾಡುವುದು ಸರಿಯೇ? ಆದರೆ ಏಕಾಂತವನ್ನು ಲೋಕಾಂತಗೊಳಿಸಿ ನೆನಪುಗಳನ್ನು ಕಳಚಿಕೊಳ್ಳುವುದು, ನಮ್ಮನ್ನು ನಾವು ನೆನಪುಗಳಿಂದ ಕಳೆದುಕೊಳ್ಳುವುದು ಈ ಮೂಲಕ ಮಾತ್ರ ಸಾಧ್ಯವೇನೋ?
(ಅಂಕಣಕಾರರು ಸಾಹಿತಿ, ಹಿರಿಯ ವಕೀಲರು)






