ಕುಸಿಯುತ್ತಿರುವ ಪ್ರಜಾಪ್ರಭುತ್ವ

ಈ ದೇಶದಲ್ಲಿ ಪೂರ್ಣಪ್ರಮಾಣದ ಆದರ್ಶವೂ ಪೂರ್ಣಪ್ರಮಾಣದ ಸಿದ್ಧಾಂತವೂ ಚಲಾವಣೆಯಾಗುವುದಿಲ್ಲ. ಸಕ್ಕರೆ ಲೇಪಿಸಿದ ರುಚಿಯೊಂದೇ ಜನರಿಗೆ ಗೊತ್ತು. ಹೀಗೆ ಸಕ್ಕರೆ ಲೇಪಿಸಿ ವಿಷಪ್ರಾಶನ ಮಾಡಿದರೂ ಒಂದು ಬಾರಿಗೆ ಜನರು ಸ್ವೀಕರಿಸಬಹುದು. ಗೊತ್ತಾಗುವಾಗ ಐದು ವರುಷ ಕಳೆದಿರುತ್ತದೆ! ಇನ್ನೊಂದು ಚುನಾವಣೆ ಬಂದಿರುತ್ತದೆ!
ಮೈಡಾಸ್ ರಾಜನ ಕಿವಿ ಕತ್ತೆ ಕಿವಿ ಎಂಬುದು ಕಿವಿಯಿಂದ ಕಿವಿಗೆ ಹಬ್ಬಲು ಬಹಳ ಕಾಲ ಬೇಕಿಲ್ಲ. ಜನರು ತಪ್ಪು ಮಾಡುತ್ತಲೇ ಇರುತ್ತಾರೆ. ಹಾಗೆಂದು ಅವರಿಗೆ ತಪ್ಪಿನ ಅರಿವಿಲ್ಲವೆಂದರ್ಥವಲ್ಲ. ಆದರೆ ವೈಯಕ್ತಿಕ ಲಾಭವು ಸಾಮಾಜಿಕ ಹಿತಕ್ಕಿಂತ ಹೆಚ್ಚು ಸಿಹಿ. ಎಲ್ಲರ ವೈಯಕ್ತಿಕ ಸಿಹಿ ಒಟ್ಟಾರೆ ಸಾಮೂಹಿಕ ವಿಷಾನಿಲವನ್ನೇ ಸೃಷ್ಟಿಸುವುದು ಸಮಾಜದ ಲಕ್ಷಣ.
ರಕ್ತಕ್ರಾಂತಿಯಿಲ್ಲದೆ ಅತೀವೇಗವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವಗಳಲ್ಲಿ ಭಾರತಕ್ಕೆ ಮೊದಲನೇ ಸ್ಥಾನವಿರಬಹುದು. ಲೋಕದ ಕಣ್ಣಿಗೆ ಪ್ರಜಾಪ್ರಭುತ್ವದ ಮಣ್ಣೆರಚಿ ಸ್ವಪ್ರತಿಷ್ಠೆ, ಸ್ವಾರ್ಥಗಳನ್ನು ಸಾಧಿಸುವಲ್ಲಿ ಭಾರತ ಬಹು ದೂರ ಬಂದಿದೆ. ಈಗಲೂ ಕಾಲ ಮಿಂಚಿಲ್ಲ ಎನ್ನುವಂತಿಲ್ಲ. ಏಕೆಂದರೆ ಈ ದೇಶದ ಜನರಿಗೆ ನಮ್ಮೆದುರು ಆಟವಾಡಿ ಬೆಳೆಯುತ್ತಿರುವ ಮುಗ್ಧ ಮಕ್ಕಳು ನಮ್ಮವೇ ಎಂಬ ದೃಢ ವಿಶ್ವಾಸವಿಲ್ಲ. ಆದ್ದರಿಂದ ಅವಕ್ಕೆ ಏನಾದರೂ ಆಗಲಿ, ನಾವು ವಿಕೃತ ಸುಖವನ್ನನುಭವಿಸಬೇಕೆಂಬ ಹಪಹಪಿಕೆಯಿದೆ.
ಕಳೆದ ಒಂದು ದಶಕಕ್ಕೂ ಮಿಕ್ಕಿ ನಡೆಯುತ್ತಿರುವ ರಾಜಕೀಯದ ವೈಭವವನ್ನು ಮಸಾಲೆ ಸಿನೆಮಾದ 18 ರೀಲುಗಳಲ್ಲಿ 15-17 ರೀಲು ನಡೆಯುವ ಖಳನಾಯಕರ ಅಟ್ಟಹಾಸಕ್ಕೆ ಹೋಲಿಸಬಹುದು. ಇದನ್ನು ರಾಜಕಾರಣವೆಂದು ಹೇಳುವಂತಿಲ್ಲ, ರಾಜಕಾರಣಕ್ಕೊಂದು ಘನತೆಯಿದೆ; ಗೌರವವಿದೆ. ಹೆಚ್ಚೆಂದರೆ ಅದು ಚದುರಂಗ; ಆದರೆ ರಾಜಕೀಯವೆಂದರೆ ಜೂಜಾಟ. ಆದ್ದರಿಂದ ಚಾಣಕ್ಯ (ಈತನಿಗೆ ‘ಕೌಟಿಲ್ಯ’ ಎಂಬ ಅನ್ವರ್ಥಪೂರ್ಣ ಹೆಸರೂ ಇದೆ!), ಅಮಾತ್ಯರಾಕ್ಷಸರಂತಹ ಪಾತ್ರಗಳಿಂದ ಇತ್ತೀಚೆಗಿನ ದಿವಾನ್ ಪೂರ್ಣಯ್ಯನವರ ವರೆಗೂ ಹರಿದು ಬಂದ ತಂತ್ರಗಾರಿಕೆಯು ಬದಲಾಗಿ ಈಗ ಶಕುನಿಯ ಪೌರಾಣಿಕ ವ್ಯವಹಾರವೇ ಈ ದೇಶದ ಪರಂಪರೆಯನ್ನು ಪ್ರತಿನಿಧಿಸುವಂತಿದೆ; ಪ್ರತಿಬಿಂಬಿಸುವಂತಿದೆ.
ಹಾಗಾದರೆ ಈ 10-12 ವರ್ಷಗಳಿಗಿಂತ ಮೊದಲು ವಿಷಮಯ ರಾಜಕಾರಣವಿರಲಿಲ್ಲವೇ? ಇತ್ತು. ಹಳೆಯ ಸಾಂಸಾರಿಕ, ಮನೆಮಂದಿಯೆಲ್ಲ ನೋಡಬಹುದಾದ ಚಲನಚಿತ್ರ, ನಾಟಕಗಳಲ್ಲಿ ವಿಷವಿಟ್ಟು ಕೊಲ್ಲುವ, ಸೌಮ್ಯವಾಗಿ ಚಾರಿತ್ರ್ಯಹನನದ ಮೂಲಕ ಅಳಿಸುವ ಪ್ರಸಂಗಗಳಿದ್ದವು. ಅವು ಬದುಕಿಗೆ ಸಹಜವೆಂಬಂತೆ (ಪ್ರ)ದರ್ಶಿಸಲಾಗುತ್ತಿತ್ತು. ಜನರು ಅದನ್ನು ನೋಡಿ ಕಣ್ಣೀರಿಟ್ಟು ಆನಂದಿಸುತ್ತಿದ್ದರು. ಈಗ ಹಾಗಲ್ಲ, ಎಲ್ಲವೂ ಪ್ರತ್ಯಕ್ಷ. ಅಂಕದ ಪರದೆ ಜಾರಿದೆ. ಎಲ್ಲವೂ ಸ್ವೀಕಾರ್ಹ. ನಿಮಗೆ ಗೊತ್ತಾಗಬಾರದೆಂದರೆ ನೀವೇ ನಿಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳಿ; ಕಿವಿ ಮುಚ್ಚಿಕೊಳ್ಳಿ; ಬಾಯಿಗೆ ಬೀಗಹಾಕಿಕೊಳ್ಳಿ. ನ್ಯಾಯಾಲಯಗಳೂ ಇವನ್ನು ಮಾನ್ಯ ಮಾಡಿವೆಯೆಂಬುದಕ್ಕೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು ‘‘ಗೋಲೀ ಮಾರೋ ಸಾಲೋಂಕೋ...’’ ಖ್ಯಾತಿಯ ರಾಜಕಾರಣಿ ಹಾಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರಕರಣದಲ್ಲಿ ನೀಡಿದ ವ್ಯಾಖ್ಯಾನವು ನಿದರ್ಶನವಾಗಬಹುದು.
ರಾಜಕೀಯದ ಮೇಲಾಟದಲ್ಲಿ ಸೋಲು-ಗೆಲುವು ಸಹಜ. ಗೆದ್ದವರೆಲ್ಲ ಒಳ್ಳೆಯವರಾಗಿದ್ದಾರೆಂಬ, ಸಮರ್ಥರಾಗಿದ್ದಾರೆಂಬ ಅಥವಾ ಸೋತವರೆಲ್ಲ ಕೆಟ್ಟವರೆಂಬ ಅಥವಾ ಅಸಮರ್ಥರೆಂಬ ಪ್ರಮೇಯವೇನಿಲ್ಲ. ಒಂದು ಗೊತ್ತಾದ ಕಾಲಘಟ್ಟ ಮತ್ತು ಭೌಗೋಳಿಕ ಮಿತಿಯಲ್ಲಿರುವ ಜನರ ಪೈಕಿ ಬಹುಪಾಲು ಸಂಖ್ಯೆಯ ಮನಸ್ಥಿತಿ ಹೀಗಿತ್ತೆಂದಷ್ಟೇ ಅರ್ಥ. ಅದು ಸರಿಯಿರಬೇಕೆಂದಿಲ್ಲ. ಆದರೆ ಸಮಾಜವು ತನ್ನ ಪ್ರತಿನಿಧಿಗಳ ಆಯ್ಕೆಗೆ ನಿಗದಿಪಡಿಸಿದ ಸೂತ್ರದನ್ವಯ ಅವರು ಆರಿಸಿಬರುತ್ತಾರೆ. ನಾಯಕರಿಗೂ ಪ್ರತಿನಿಧಿಗಳಿಗೂ ವ್ಯತ್ಯಾಸವಿದೆ. ಇಂದಿನ ಪ್ರತಿನಿಧಿ ಮುಂದೆ ಪ್ರತಿನಿಧಿಯಾಗಿರುತ್ತಾನೆಂಬ ಖಾತ್ರಿಯಿಲ್ಲ. ಆತ ತನ್ನ ಅವಧಿಗೆ ಅಧಿಕಾರಶಾಹಿಯ ಒಂದು ಭಾಗವಾಗಿರುತ್ತಾನೆ, ಅಷ್ಟೇ. ಮುನ್ನಡೆದರೂ ಹಿನ್ನಡೆದರೂ ಆತ ಜನಪ್ರತಿನಿಧಿ. ನಾಯಕತ್ವ, ನಾಯಕತನ ಒಂದು ಗುಣ, ಪ್ರತಿಭೆ. ಅದಕ್ಕೆ ಸೋಲು-ಗೆಲುವಿನ ಹಂಗಿಲ್ಲ. ಅದು ಆದರ್ಶದ ಆಧಾರದಲ್ಲಿ, ಸಿದ್ಧಾಂತದ ಆಧಾರದಲ್ಲಿ ಉಳಿಯಬಹುದು. ಜನಪ್ರತಿನಿಧಿಗಳು, ಅಧಿಕಾರಶಾಹಿಗಳು ಸಾಕ್ರೆಟಿಸನಿಗೆ ವಿಷವುಣಿಸಿದರು. ಆದರೆ ಇಂದಿಗೂ ಆತ ತತ್ವಶಾಸ್ತ್ರದಲ್ಲಿ ಅನಭಿಷಿಕ್ತ ದೊರೆ. ಒಳ್ಳೆಯವರಾಗಿ ದುಡಿದರೆ ಶಾಪಗ್ರಸ್ತ ದೇವತೆಯಂತೆ ಅವಧಿ ಮುಗಿದಾಗ ನೆಮ್ಮದಿಯ ಸ್ವರ್ಗಸುಖ; ಕೆಟ್ಟವನಾದರೆ ಅವಧಿಯ ಬಳಿಕ ಅಧೋನರಕ.
ಇದನ್ನು ವಿಷದ ಪಡಿಸಲು ಈಗಷ್ಟೇ ನಡೆದ ಪಂಚರಾಜ್ಯ ಚುನಾವಣೆಯ ಪರಿಕ್ರಮವನ್ನು ಅಭ್ಯಸಿಸಬಹುದು. ಒಂದಷ್ಟು ಮಂದಿ ಗೆದ್ದು ಬೀಗಿದರು. ಒಂದಷ್ಟು ಮಂದಿ ಸೋತು ಸುಣ್ಣವಾದರು. ಜೊತೆಗೆ ದೇಶದ ಪ್ರಜಾತಂತ್ರ ಸೋತಿತು. ಸಂವಿಧಾನವನ್ನು ಎಲ್ಲರೂ ಮರೆತರು.
ಪಶ್ಚಿಮ ಬಂಗಾಳದಲ್ಲಿ ಮಮತಾ ವರ್ಸಸ್ ಮೋದಿ-ಶಾ ಹಣಾಹಣಿಯಾದದ್ದು ಗುಟ್ಟಿನ ಸಂಗತಿಯೇನಲ್ಲ. ಯಾರು ಸರಿ ಯಾರು ತಪ್ಪು ಎಂಬುದಕ್ಕಿಂತಲೂ ಅಸಮತೋಲ ಸಂಘರ್ಷವೇ ಈ ಹೋರಾಟದ ಮುಖ್ಯ ಲಕ್ಷಣ. ಕೇಂದ್ರ ಸರಕಾರವು ತನ್ನೆಲ್ಲ ಸರಕುಗಳನ್ನು ಆಯುಧಗಳಂತೆ ಪ್ರಯೋಗಿಸಿ ಮಮತಾರ ಹೋರಾಟವನ್ನು ಕ್ಷೀಣಿಸಿತು. ಹಿಂದೆ ರಾಜಮಹಾರಾಜರು ಹುಲಿಯನ್ನು ತಮ್ಮ ಪಡೆಯಿಂದ ಕಟ್ಟಿಹಾಕಿ ಬಳಿಕ ಅದನ್ನು ಕೊಂದು ಅದರ ಶವದ ಮೇಲೆ (ಅಥವಾ ಪಕ್ಕದಲ್ಲಿ) ಮೀಸೆ ತಿರುವಿಕೊಂಡು ತಮ್ಮ ಕೋವಿಯ ಸಹಿತ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರಂತೆ! ಮೋದಿ-ಶಾ ಮಾಡಿದ್ದು ಇದನ್ನೇ! ಅವರ ಪಡೆಯಾಗಿ ಚುನಾವಣಾ ಆಯೋಗ, ನ್ಯಾಯಾಂಗ, ಅರೆಸೇನಾಪಡೆ, ಈ.ಡಿ., ಸಿಬಿಐ, ಚುನಾವಣಾ ವೀಕ್ಷಕರು ಮತ್ತಿತರ ಕಾರ್ಯಾಂಗ, ಪೂರ್ಣಾಂಗ ಸೇವೆ ಸಲ್ಲಿಸಿದವು. ಪರಿಣಾಮವಾಗಿ ಮತಗಳಿಕೆಯ ಪ್ರಮಾಣ ಹೇಗೇ ಇರಲಿ, ಬಿಜೆಪಿ ಗೆದ್ದಿತು. ತಮಾಷೆಯೆಂದರೆ ಭಾರತದ ಇತಿಹಾಸ ಇಲ್ಲೂ ಮರುಕಳಿಕೆಯಾಗುವ ಲಕ್ಷಣವಿದೆ. ಫಲಿತಾಂಶವನ್ನು ತಿರಸ್ಕರಿಸುವ ಮಮತಾ ಪ್ರಹಸನ ನಿರಾಶಾದಾಯಕ ಅಂತ್ಯದತ್ತ ನಡೆಯುತ್ತಿದೆ. ಮಮತಾ ಅವರ ಬೆಂಬಲಿಗರಾಗಿದ್ದ ಸುವೇಂದು ಅಧಿಕಾರಿ ಮುಂದಿನ ಮುಖ್ಯಮಂತ್ರಿಯಾಗುವಂತಿದೆ. ದ್ರೋಹಿಗಳೇ ಈ ದೇಶವನ್ನು ಬಹಳ ಕಾಲ ಆಳುತ್ತಾರೆ ಬ್ರಿಟಿಷರು ಒಡೆದು ಆಳುತ್ತಿದ್ದರು. ಒಡೆದು ಗೆಲ್ಲುತ್ತಿದ್ದರು. ಆದರೆ ಎದುರಾಳಿಗೆ ದ್ರೋಹ ಬಗೆದು ತಮಗೆ ಬೆಂಬಲ ನೀಡಿದವರನ್ನು ಮನ್ನಿಸುತ್ತಿರಲಿಲ್ಲ. ಮೀರ್ ಸಾದಿಕ್‌ತನಕ್ಕೆ ಸಾವಿನ ಶಿಕ್ಷೆಯನ್ನು ನೀಡುತ್ತಿದ್ದರು. ಆದರೆ ಭಾರತದಲ್ಲಿ ದ್ರೋಹ ಬಗೆದವರನ್ನು ಸತ್ಕರಿಸಿ ನಾಯಕತ್ವವನ್ನು ನೀಡಲಾಗುತ್ತಿದೆ.
ಅಸ್ಸಾಮಿನಲ್ಲಿ ನಡೆದದ್ದು ಇದೇ: ಕಾಂಗ್ರೆಸ್‌ನಲ್ಲಿದ್ದ ಹಿಮಂತ ಬಿಸ್ವಾ ಶರ್ಮಾ ಪಕ್ಷಾಂತರ ಮಾಡಿ ಈಗ ಬಿಜೆಪಿಯ ಮಹಾನ್ ನಾಯಕ. ಈ ಬಾರಿಯ ಚುನಾವಣೆಯಲ್ಲೂ ವಿಜೇತ. ಅಲ್ಲಿ ಫಲಿತಾಂಶ, ಪರಿಣಾಮ ನಿರೀಕ್ಷಿತ.
ಪುದುಚೇರಿಯಲ್ಲಿ ಹೆಚ್ಚು ಕಡಿಮೆ ಫಲಿತಾಂಶ ಪುನರಾವರ್ತನೆಯಾದಂತಿದೆ. ಆದರೆ ಅದು ದೇಶದ ರಾಜಕೀಯದಲ್ಲಿ ಯಾವ ಮಹತ್ವವನ್ನೂ ಪಡೆಯದ ಪ್ರದೇಶ.
ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ಇನ್ನೇನು ಮುಖ್ಯ ಮಂತ್ರಿಯಾಗುವುದರಲ್ಲಿದ್ದಾರೆ. ತನ್ನ ಪಕ್ಷದಿಂದ ಅಭ್ಯರ್ಥಿಗಳನ್ನು ಆರಿಸಲು ಸೂಕ್ತ ವ್ಯಕ್ತಿ ಸಿಕ್ಕದಿದ್ದಾಗ ತನ್ನ ಕಾರ್‌ಡ್ರೈವರ್‌ನ ಮಗನನ್ನೇ ಅಭ್ಯರ್ಥಿಯಾಗಿಸಿದರೂ ಆತ ಗೆದ್ದಿದ್ದಾರೆ. ಮುಟ್ಟಿದ್ದೆಲ್ಲಾ ಚಿನ್ನವಾಗುವ ಯೋಗವಿದ್ದಾಗ ಅದಕ್ಕೆ ಸರಿಯಾದ ಮನಸ್ಥಿತಿಗೆ ಜನರು ಒಳಗಾಗುತ್ತಾರೆ. ನೀವೇನೇ ಸಂಕಲ್ಪಿಸಿದರೂ ಅದನ್ನು ಸಾಧಿಸುವಲ್ಲಿ ಇಡೀ ಜಗತ್ತು ನಿಮ್ಮೊಡನೆ ಶ್ರಮಿಸುತ್ತದೆಯೆಂಬ ಕಾದಂಬರಿಕಾರ ಪೌಲೊಕೊಯೆಲ್ಹೊ ಮಾತು ಇಲ್ಲಿ ವ್ಯಂಗ್ಯವಾಗಿ ರೂಪುಗೊಂಡಿದೆ. ಸ್ಟಾಲಿನ್ ನಾಯಕತ್ವದಲ್ಲಿ ತಮಿಳುನಾಡು ಸರಕಾರ ಅಭೂತಪೂರ್ವ ಯೋಜನೆಗಳನ್ನು ಕೈಗೆತ್ತಿಕೊಂಡಿತು. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಇಂತಹ ಅನೇಕ ಕ್ಷೇತ್ರಗಳಲ್ಲಿ ಪರಿಶ್ರಮಪಟ್ಟು ದೇಶದ ಗಮನ ಸೆಳೆಯಿತು. ಆದರೆ ಕೇಂದ್ರ ಸರಕಾರಕ್ಕೆ ಸೆಡ್ಡು ಹೊಡೆಯಿತು. ಕರ್ನಾಟಕದಂತಹ ರಾಜ್ಯಗಳು ಇಬ್ಬಂದಿತನದಲ್ಲಿ ಕೈಹೊಸಕಿಕೊಳ್ಳುವುದರಲ್ಲೇ ಮಗ್ನವಾಗಿದ್ದಾಗ ಸ್ಟಾಲಿನ್‌ರ ತಮಿಳುನಾಡು ಉತ್ತರ-ದಕ್ಷಿಣಗಳ ನಡುವಿನ ಭಾಷೆ, ಒಕ್ಕೂಟ ವ್ಯವಸ್ಥೆ, ರಾಜ್ಯಪಾಲರ ಅಧಿಕಾರ ಮುಂತಾದವುಗಳ ವಿವಾದದಲ್ಲಿ ನೇರಾನೇರ ದಕ್ಷಿಣ ಭಾರತದ ರಾಜ್ಯಗಳಿಗೆ ಮಾದರಿ ನಾಯಕತ್ವ ನೀಡಿತು, ಹಾಗೆಯೇ ಮತ-ಧರ್ಮಗಳ ವಿಚಾರದಲ್ಲಿ ಸ್ಪಷ್ಟ ಜಾತ್ಯತೀತ ನಿಲುವನ್ನು ತಾಳಿತು. ಆದರೆ ಜನರು ಉದ್ಯೋಗ, ಬೆಳವಣಿಗೆ, ಬೆಲೆಯೇರಿಕೆಗಳಂತಹ ವಿಚಾರಗಳಲ್ಲಿ ವಿಶೇಷ ಆಸ್ಥೆ ವಹಿಸುವುದಿಲ್ಲ. ಸರಕಾರ ಮಾಡಬೇಕಾದ್ದನ್ನು ಮಾಡಿದೆಯೆಂಬ ನಿರ್ಲಿಪ್ತ ನಿಲುವನ್ನು ತಾಳುತ್ತಾರೆ. ಇದಕ್ಕೆ ಪರ್ಯಾಯವಾಗಿ ಜಾತಿ-ಮತ-ಧರ್ಮ ಮುಂತಾದವುಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ಸೂಕ್ಷ್ಮಜೀವಿಗಳಾಗಿ ಅದನ್ನು ಆಡಳಿತವು ಒಡ್ಡಿದ ಸವಾಲೆಂದು ತಿಳಿಯುತ್ತಾರೆ. ಅದಲ್ಲವಾದರೆ ಸ್ಟಾಲಿನ್ ಸರಕಾರವು ಸೋಲುವುದಕ್ಕಾಗಲೀ, ವೈಯಕ್ತಿಕವಾಗಿ ಸ್ಟಾಲಿನ್ ಸೋಲುವುದಕ್ಕಾಗಲೀ ಕಾರಣವಿಲ್ಲ. ವಿಶೇಷವೆಂದರೆ ಈ ಕಾರಣಗಳೇ ಆಗಿದ್ದರೆ ಬಿಜೆೆಪಿ ಗೆಲ್ಲಬೇಕಾಗಿತ್ತು. ಆದರೆ ಗೆದ್ದದ್ದು ಅನಿರೀಕ್ಷಿತವೆಂಬಂತೆ ವಿಜಯ್ ನೇತೃತ್ವದ ಟಿವಿಕೆ ಪಕ್ಷ. ತಮಾಷೆಯೆಂದರೆ ವಿಜಯ್ ಹೊರತಾಗಿ ಅಲ್ಲಿ ಯಾವ ಜನಪ್ರಿಯರೂ ಇಲ್ಲ. ವಿಜಯ್ ಸೇರಿದಂತೆ ಅನುಭವಸ್ತರಂತೂ ಇಲ್ಲವೇ ಇಲ್ಲ. ಹಾಗಾದರೆ ರಾಜಕೀಯ ನಾಯಕತ್ವದ ಅನುಭವವೇ ಇಲ್ಲದ ಅವರನ್ನು ಗೆಲ್ಲಿಸಿದ ಸೂತ್ರವು ಯಾವುದು? ‘ತಾರಾಮೌಲ್ಯ’ ಇಲ್ಲಿ ಅಕ್ಷರಶಃ ವ್ಯಾಪಾರಗೊಂಡಿದೆ; ‘ಜನಪ್ರಿಯತೆ’ಗೆ ಅರ್ಥ ಸಿಕ್ಕಿದೆ.
ತಮಿಳು, ತೆಲುಗು ರಾಜಕೀಯಕ್ಕೆ ಈ ತಾರಾಮೌಲ್ಯ ಹೊಸದೇನಲ್ಲ. ತಮಿಳುನಾಡಿನಲ್ಲಿ ಅಣ್ಣಾದುರೈ, ನಂತರ ಕರುಣಾನಿಧಿ, ಎಂಜಿಆರ್, ಜಯಲಲಿತಾ ಇವರೆಲ್ಲ ಬೆಳ್ಳಿತೆರೆಯ ಸಂಬಂಧಿಕರೇ. ಆಂಧ್ರಪ್ರದೇಶದ ಎನ್‌ಟಿಆರ್ ಚಲನಚಿತ್ರದ ದಂತಕಥೆ. ಉಳಿದವರು ಸಿನೆಮಾದವರಲ್ಲದಿದ್ದರೂ ಸಾಕಷ್ಟು ಪ್ರಭಾವಿಗಳು ಅಥವಾ ಪ್ರಭಾವಿಗಳೊಂದಿಗೇ ಬೆಳೆದವರು. ರಾಜಕಾರಣಕ್ಕೆ ಬಂದ ಮೇಲೆ ಅಲ್ಲಿನ ಆಟಗಳನ್ನು ಕಲಿತವರು. ಹಾಗೆ ನೋಡಿದರೆ ಕನ್ನಡದ ರಾಜ್‌ಕುಮಾರ್ ಈ ನಾಯಕರಿಗೆ ಸರಿಸಮವಾಗಿ ಬೆಳೆದರೂ ತಮ್ಮ ಭವಿಷ್ಯವನ್ನು ರಾಜಕೀಯಕ್ಕೆ ವಿಸ್ತರಿಸಲು ಮನಸ್ಸು ಮಾಡಲೇ ಇಲ್ಲ. ಪ್ರಾಯಃ ಇದರಿಂದಾಗಿ ರಾಜ್ ವಿವಾದಾತೀತರಾಗಿ ಕನ್ನಡದಲ್ಲಿ ತನ್ನ ವಿಶಿಷ್ಟ ಸ್ಥಾನವನ್ನು ಉಳಿಸಿಹೋಗಿದ್ದಾರೆ. ಮಲಯಾಳಂನ ಅನೇಕರು ಚಲನಚಿತ್ರದಲ್ಲಿ ಎಷ್ಟೇ ಮುನ್ನಡೆಯನ್ನು ಸಾಧಿಸಿದರೂ ಅದನ್ನು ಬೆಳ್ಳಿಪರದೆಯಿಂದೀಚೆಗೆ ಎಳೆದು ತರಲಿಲ್ಲ ಮತ್ತು ಈ ಮೂಲಕ ಅಲ್ಲಿನ ಚಲನಚಿತ್ರರಂಗ ತನ್ನ ಘನತೆಯನ್ನು ಉಳಿಸಿಕೊಂಡಿದೆ.
ಹೀಗಾಗಿ ಡಿಎಂಕೆ ಸೋಲಿಗೆ ಯಾವುದೇ ಆದರ್ಶವಾಗಲೀ ಸಿದ್ಧಾಂತವಾಗಲೀ ಕಾರಣವಲ್ಲ. ಯಾವುದೇ ಆಡಳಿತವು ಆದರ್ಶ ಮತ್ತು ಸಿದ್ಧಾಂತಗಳ ಹಿಂದೆ ಹೋಗುವಾಗ ಜನರ ತಾರ್ಕಿಕ ಮತ್ತು ಅತಾರ್ಕಿಕ ಅಗತ್ಯಗಳನ್ನು ಮರೆಯಬಾರದೆಂಬುದಕ್ಕೆ ಡಿಎಂಕೆ ಒಂದು ಉದಾಹರಣೆ. ಜನರು ತಮ್ಮ ಭಾವನಾತ್ಮಕ ಅಗತ್ಯಗಳನ್ನು ಸರಕಾರ ಪೂರೈಸುತ್ತಿಲ್ಲವೆಂದು ಬಗೆದರು; ಹಾಗೆಂದು ಕೋಮುವಾದವನ್ನು ಸ್ವೀಕರಿಸರು. ಇದರ ಲಾಭವನ್ನು ವಿಜಯ್ ಪಡೆದುಕೊಂಡರು. ಬದಲಾವಣೆ ಬೇಕೆಂಬ ಸಮೂಹಸನ್ನಿಯ ಗತಿ ಇದು.
ಕೇರಳದ ಕಥೆಯೇ ಬೇರೆ. ಅಲ್ಲಿ ಬಹುಕಾಲದಿಂದ ಎಡ-ಬಲ ಕವಾಯತು ನಡೆಯುತ್ತಲೇ ಇತ್ತು. ಆದರೆ ಕೋಮುವಾದಕ್ಕೆ ಕೇರಳದ ಜನತೆ ದಾರಿಬಿಟ್ಟಿರಲಿಲ್ಲ. ಅಲ್ಲಿನ ಹಿಂದುತ್ವವೂ ಮತಾತೀತ; ಜಾತ್ಯತೀತ ಎಂಬಂತಿದೆ. ಕಳೆದ ಬಾರಿ ಎಡರಂಗ ಮತ್ತೆ ಪ್ರತಿಷ್ಠಾಪನೆಯಾಯಿತು. ದೇಶದಲ್ಲಿ ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಕೇರಳ ಈ ರಾಜ್ಯಗಳಷ್ಟೇ ಎಡ ಸಿದ್ಧಾಂತ/ಆದರ್ಶಗಳಿಗೆ ಕಿವಿಕೊಟ್ಟ ರಾಜ್ಯಗಳು. ರಾಜಕಾರಣದ ಎಡವಟ್ಟುಗಳಿಂದಾಗಿ ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ರಾಜ್ಯಗಳು ಕೈಬಿಟ್ಟಾಗಲೂ ಕೇರಳ ಎಲ್‌ಡಿಎಫ್ ಎಡರಂಗವನ್ನು ಕೈಹಿಡಿದಿತ್ತು. ದೇಶದ ಅನೇಕ ಕ್ಷೇತ್ರಗಳಲ್ಲಿ ಅದು ಮುಂಚೂಣಿಯಲ್ಲಿತ್ತು. ಅಲ್ಲಿ ಶೈಲಜಾರಂತಹ ಶಿಕ್ಷಣ ಮಂತ್ರಿ ಎಲ್ಲೆಡೆ ಜನಪ್ರಿಯರಾದರು. ಪ್ರಾಯಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅತೀವ ವಿಶ್ವಾಸವನ್ನು ಹೊಂದಿದರೋ ಅಥವಾ ರಾಜಕಾರಣಕ್ಕೆ ಸಿದ್ಧಾಂತವನ್ನು ಬಲಿಕೊಟ್ಟರೋ ಅಂತೂ ತಳಮಟ್ಟದ ಸತ್ಯ (ground reality)ರೈಲುಗಾಡಿಯ ಸದ್ದು ಹಳಿಗಳಲ್ಲಿ ಮಲಗಿದ ಜಾನುವಾರುಗಳಿಗೆ ಗೊತ್ತಾಗುವಂತೆ ಜನರಿಗೆ ಗೊತ್ತಾಗಿರಬೇಕು. ವಿಜಯನ್ ದಾಖಲೆಯ ಹ್ಯಾಟ್ರಿಕ್ ಗೆಲುವು ಪಡೆಯುವುದರಲ್ಲಿ ವಿಫಲರಾದರು. ಆದರೆ ಜನರು ಎಚ್ಚರ ವಹಿಸಿ ಕೋಮುವಾದ ತಲೆಯೆತ್ತದಂತೆ ಜಾಗ್ರತೆ ವಹಿಸಿದರು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬಲರಂಗವು ಅಲ್ಲಿ ವಿಜಯಿಯಾಯಿತು. ವ್ಯಂಗ್ಯವೆಂದರೆ ಕೇರಳದಲ್ಲಿ ಯುಡಿಎಫ್ ‘ಬಲರಂಗ’ -ಬಹುತೇಕ ಪ್ರಗತಿಪರರಂತೆ!
ಎಲ್ಲೆಡೆ ದೇಶದಲ್ಲಿ ಎಡಪಕ್ಷಗಳ ಒಂದೂ ಸರಕಾರವಿಲ್ಲವೆಂದು ಇತರರು ಹೇಳುತ್ತಿದ್ದಾರೆ. ಅದು ನೋವಿನಿಂದಲ್ಲ; ವ್ಯಂಗ್ಯ ಸಂತೋಷದಿಂದ. ಪ್ರಾಯಃ ಆದರ್ಶ, ಸಿದ್ಧಾಂತ ಮತ್ತು ರಾಜಕಾರಣವನ್ನು ಹದನಿಧಾನದಿಂದ ಸಂಯುಕ್ತಗೊಳಿಸಿ ಜನರನ್ನು ಗೆಲ್ಲುವುದಕ್ಕೆ ಎಡಪಕ್ಷಗಳಿಗೆ ಇದು ಒಳ್ಳೆಯ ಅವಕಾಶ. ಎಡಪಕ್ಷಗಳು ಮಾತ್ರವಲ್ಲ, ಎಡಪಂಥೀಯರೂ ಎಚ್ಚರವಾಗಬೇಕು. ಕನ್ನಡದ ಕವಿತೆಯೊಂದರಲ್ಲಿ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಬುದ್ಧನ ವಿಗ್ರಹವನ್ನು ಕಂಡು ಅದರ ಬೆಲೆತೆರಲು ಸಾಧ್ಯವಿಲ್ಲದವಳೊಬ್ಬಳು ಮನೆಗೆ ಬಂದು ಒಳ್ಳೆಯದೇ ಆಯಿತು, ಕೊಂಡಿದ್ದರೆ ಅದು ತನ್ನ ಶೋಕೇಸಿನಲ್ಲಿರುತ್ತಿತ್ತು, ಅದೀಗ ತನ್ನ ಹೃದಯದಲ್ಲಿದೆ ಎಂದು ಸಮಾಧಾನಪಟ್ಟುಕೊಳ್ಳುತ್ತಾಳೆ. ಮೂರ್ತವಾದ ಅಧಿಕಾರವಿಲ್ಲದಿದ್ದಾಗ ಸೈದ್ಧಾಂತಿಕ ಬೆಳವಣಿಗೆಗೆ ಒಳ್ಳೆಯ ಸಂದರ್ಭ. ಜಳ್ಳೆಲ್ಲ ತೂರಿಹೋಗುತ್ತದೆ. ಗಟ್ಟಿಕಾಳುಗಳು ಉಳಿಯುತ್ತವೆ. ಎಡಪಕ್ಷಗಳು ಈ ನಿಟ್ಟಿನಲ್ಲಿ ತಮ್ಮ ವೇದಿಕೆಯನ್ನು ಕೊಂಚ ವಿಶಾಲಗೊಳಿಸಿ ಜನರತ್ತ ನಡೆದರೆ ಪುನರುತ್ಥಾನ ಅಸಾಧ್ಯವಲ್ಲ. ಸಾವು ಬೇರೆ; ಸೋಲು ಬೇರೆ. ಮಾರ್ಕ್ಸ್ ಮಾತ್ರವಲ್ಲ, ಚೆಗೆವರಾ ಕೂಡಾ ಎಂದೂ ಸೋತದ್ದಿಲ್ಲ. ಪ್ರಜಾಪ್ರಭುತ್ವವು ಎಡಪಕ್ಷಗಳಿಗೆ ಎಂದೂ ನಿಷಿದ್ಧವಾಗಿರಲಿಲ್ಲ. ಅರ್ಥವಿವರಣೆ ಬೇರೆಬೇರೆ. ಎಲ್ಲ ಕ್ರಾಂತಿಯನ್ನು ಮಾಡಿದ್ದೂ ಪ್ರಜೆಗಳೇ. ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಾದ್ದೂ ಪ್ರಜೆಗಳೇ!
ಈ ದೇಶದಲ್ಲಿ ಪೂರ್ಣಪ್ರಮಾಣದ ಆದರ್ಶವೂ ಪೂರ್ಣಪ್ರಮಾಣದ ಸಿದ್ಧಾಂತವೂ ಚಲಾವಣೆಯಾಗುವುದಿಲ್ಲ. ಸಕ್ಕರೆ ಲೇಪಿಸಿದ ರುಚಿಯೊಂದೇ ಜನರಿಗೆ ಗೊತ್ತು. ಹೀಗೆ ಸಕ್ಕರೆ ಲೇಪಿಸಿ ವಿಷಪ್ರಾಶನ ಮಾಡಿದರೂ ಒಂದು ಬಾರಿಗೆ ಜನರು ಸ್ವೀಕರಿಸಬಹುದು. ಗೊತ್ತಾಗುವಾಗ ಐದು ವರುಷ ಕಳೆದಿರುತ್ತದೆ! ಇನ್ನೊಂದು ಚುನಾವಣೆ ಬಂದಿರುತ್ತದೆ!
ಮೈಡಾಸ್ ರಾಜನ ಕಿವಿ ಕತ್ತೆ ಕಿವಿ ಎಂಬುದು ಕಿವಿಯಿಂದ ಕಿವಿಗೆ ಹಬ್ಬಲು ಬಹಳ ಕಾಲ ಬೇಕಿಲ್ಲ. ಜನರು ತಪ್ಪು ಮಾಡುತ್ತಲೇ ಇರುತ್ತಾರೆ. ಹಾಗೆಂದು ಅವರಿಗೆ ತಪ್ಪಿನ ಅರಿವಿಲ್ಲವೆಂದರ್ಥವಲ್ಲ. ಆದರೆ ವೈಯಕ್ತಿಕ ಲಾಭವು ಸಾಮಾಜಿಕ ಹಿತಕ್ಕಿಂತ ಹೆಚ್ಚು ಸಿಹಿ. ಎಲ್ಲರ ವೈಯಕ್ತಿಕ ಸಿಹಿ ಒಟ್ಟಾರೆ ಸಾಮೂಹಿಕ ವಿಷಾನಿಲವನ್ನೇ ಸೃಷ್ಟಿಸುವುದು ಸಮಾಜದ ಲಕ್ಷಣ.






