Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮಹಿಳಾ...

ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮಹಿಳಾ ಮೀಸಲಾತಿ

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ23 April 2026 11:21 AM IST
share
ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮಹಿಳಾ ಮೀಸಲಾತಿ

ಸಾಮಾನ್ಯ ಸಂದರ್ಭಗಳಲ್ಲಿ ಕೇಂದ್ರ ಸರಕಾರ ತನ್ನ ಸೋಲನ್ನು ಮತ್ತು ಒಟ್ಟಾರೆ ವೈಫಲ್ಯವನ್ನು ಒಪ್ಪಿಕೊಂಡು ರಾಜೀನಾಮೆ ನೀಡಬೇಕಾಗಿತ್ತು ಅಥವಾ ಒಬ್ಬ ಸಚಿವರ ತಲೆದಂಡವನ್ನಾದರೂ ಪಡೆಯಬೇಕಾಗಿತ್ತು. ಆದರೆ ರಾಜಕಾರಣ ಎಷ್ಟು ಅವನತಿಗೆ ಮತ್ತು ನೀಚತನಕ್ಕೆ ಇಳಿದಿದೆಯೆಂದರೆ ಗೌರವ, ಘನತೆ, ಮರ್ಯಾದೆ ಇವೆಲ್ಲ ಈಗ ಬಳಕೆಯಿಂದಲೇ ಮರೆಯಾಗಿವೆ. ರಾಜಕಾರಣದಲ್ಲಿ ಸ್ಪರ್ಧೆಯಿರಬೇಕಾದ್ದು ಸಹಜ. ಆದರೆ ಅದೀಗ ಬದಲಾಗಿ ವೈರವನ್ನು ಅಭ್ಯಾಸ ಮಾಡಿಕೊಂಡಿದೆ.

ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಹೇಳಿದರೆನ್ನಲಾದ ಮತ್ತು ಸಾಕಷ್ಟು ಬಾರಿ ಬಳಕೆಯಾದ ಒಂದು ಉಕ್ತಿ ಹೀಗಿದೆ: ‘‘ನೀವು ಕೆಲವರನ್ನು ಯಾವಾಗಲೂ ಮೂರ್ಖರನ್ನಾಗಿಸಬಹುದು ಮತ್ತು ಎಲ್ಲರನ್ನೂ ಕೆಲವೊಮ್ಮೆ ಮೂರ್ಖರನ್ನಾಗಿಸಬಹುದು, ಆದರೆ ಎಲ್ಲರನ್ನೂ ಯಾವಾಗಲೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.’’

ಭಾರತದ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಕಳೆದ ಒಂದು ದಶಕಕ್ಕೂ ಮಿಕ್ಕಿದ ತಮ್ಮ ಅಧಿಕಾರಾವಧಿಯಲ್ಲಿ ಸುಳ್ಳು ಮಾಡಿದರು ಮತ್ತು ಲಿಂಕನ್ ಮಾತುಗಳನ್ನು ಬಹುತೇಕ ಅಪ್ರಸ್ತುತಗೊಳಿಸಿದರು. ಇದು ಅರ್ಥವಾಗಬೇಕಾದರೆ ಇತ್ತೀಚೆಗಿನ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಕೆಲವು ಹಿನ್ನೆಲೆ ಮತ್ತು ಬೆಳವಣಿಗೆಗಳನ್ನು ಪರಿಗಣಿಸಬೇಕು.

19.09.2023ರಂದು ಮಂಡಿಸಿದ ‘ಸಂವಿಧಾನದ (106ನೇ ತಿದ್ದುಪಡಿಯ) ಮಸೂದೆೆ’ಯ ಮೂಲಕ ಈಗಿರುವ ಸಂಸತ್ತು ಮತ್ತು ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಸನ ಸಭೆಗಳಲ್ಲಿ (ಕೇಂದ್ರ ಮತ್ತು ರಾಜ್ಯಗಳ ಮೇಲ್ಮನೆಗಳನ್ನು ಹೊರತುಪಡಿಸಿ) ಮಹಿಳಾ ಮೀಸಲಾತಿಯ ಕಾಯ್ದೆಯು ‘ನಾರೀಶಕ್ತಿ ವಂದನಾ ಅಧಿನಿಯಮ’ವೆಂಬ ಹೆಸರಿನಲ್ಲಿ ಅವಿರೋಧವಾಗಿ/ಒಮ್ಮತದಿಂದ ಸ್ವೀಕೃತವಾಯಿತು ಮತ್ತು 20.09.2023ರಂದು ವಿಧ್ಯುಕ್ತವಾಗಿ ಶಾಸನವಾಯಿತು. ಆದರೆ ಈ ಶಾಸನವನ್ನು ಮೋದಿ ಸರಕಾರವು 2024ರ ಚುನಾವಣೆಗೆ ಮೊದಲು ಜಾರಿ ಮಾಡಲೇ ಇಲ್ಲ. ಒಂದು ವೇಳೆ ಜಾರಿ ಮಾಡಿದ್ದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ 180 ಮಹಿಳಾ ಸಂಸದರಿರುತ್ತಿದ್ದರು. ಸರಕಾರದ ಸುಳ್ಳುನಡೆಯಿಂದಾಗಿ ಹಾಗಾಗಲಿಲ್ಲ.

ಈಗ ಲೋಕಸಭೆಯಲ್ಲಿ 74 ಅಂದರೆ ಶೇ. 14 ಮಹಿಳಾ ಸಂಸದರಿದ್ದಾರೆ. ಭಾಜಪ-240ರಲ್ಲಿ 31, ಕಾಂಗ್ರೆಸ್-99ರಲ್ಲಿ 13, ಟಿಎಂಸಿ-29ರಲ್ಲಿ 11, ಎಸ್‌ಪಿ-37ರಲ್ಲಿ 5, ಡಿಎಂಕೆ-22ರಲ್ಲಿ 3, ಮುಖ್ಯವಾದವು; ಇತರ ಅಂದರೆ ಜೆಡಿಯು-2. ಎಲ್‌ಜೆಪಿ-2, ಟಿಡಿಪಿ, ಎನ್‌ಸಿಪಿ-ಶರದ್ ಪವಾರ್, ಆರ್‌ಜೆಡಿ, ಜೆಎಂಎಂ ತಲಾ 1 ಮಹಿಳಾ ಸಂಸದರನ್ನು ಹೊಂದಿವೆ. ರಾಜ್ಯವೊಂದರ ಪ್ರಾತಿನಿಧ್ಯವನ್ನು ಗಮನಿಸಿದರೆ ಪಶ್ಚಿಮ ಬಂಗಾಳವು 11 ಮಹಿಳಾ ಸಂಸದರನ್ನು ಮತ್ತು 1/3ಕ್ಕಿಂತ ಹೆಚ್ಚು ಪ್ರಾತಿನಿಧ್ಯವನ್ನು ನೀಡಿದ ಹೆಗ್ಗಳಿಕೆಯನ್ನು ಪಡೆದಿದೆ. (ಆದರೂ ಯತ್ರ ನಾರ್ಯಸ್ತು ಪೂಜ್ಯಂತೇ ಮಾತ್ರ ಪುಸ್ತಕದೊಳಗೇ ಉಳಿದಿದೆ!)

ಪ್ರಧಾನಿಯವರ ಕೂಗೊಂದು; ನಡೆಯೊಂದು. ವಿಶೇಷವೆಂದರೆ ಪ್ರತಿಪಕ್ಷಗಳೂ ಇದನ್ನು ಕಳೆದ ಮಹಾಚುನಾವಣೆಯಲ್ಲಿ ಮತದಾರರ ವಿಶೇಷವಾಗಿ ಮಹಿಳೆಯರ ಗಮನಕ್ಕೆ ತರಲೇ ಇಲ್ಲ. ಒಂದು ವೇಳೆ ಇದನ್ನೊಂದು ಚುನಾವಣಾ ವಿಷಯವನ್ನಾಗಿಸಿದ್ದರೆ ಆಡಳಿತ ಪಕ್ಷ ಮತ್ತು ಮತದಾರರ ಪ್ರತಿಕ್ರಿಯೆಯು ಹೇಗಿರುತ್ತಿತ್ತೆಂಬ ಬಗ್ಗೆ ಕುತೂಹಲವಿತ್ತು. ದುರದೃಷ್ಟವೆಂದರೆ ಯಾವ ಪಕ್ಷವೂ ಈ ತಿದ್ದುಪಡಿ ಕಾಯ್ದೆಯನ್ನು ತಾತ್ವಿಕವಾಗಿಯೂ ಅನುಸರಿಸಲಿಲ್ಲ. ಅನುಸರಿಸಿದ್ದರೆ ಸಾಂಕೇತಿಕವಾಗಿಯಾದರೂ ತಮ್ಮ ಅಭ್ಯರ್ಥಿಗಳಲ್ಲಿ ಮೂರನೇ ಒಂದು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದವು. ಇಂತಹ ವಿರೋಧಾಭಾಸದ ದುರಂತಗಳು ಭಾರತೀಯ ಪ್ರಜಾಪ್ರಭುತ್ವದ ಸಹಜ ಲಕ್ಷಣಗಳು.

ಈಚೆಗೆ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳ ಚುನಾವಣೆ ಘೋಷಣೆೆಯಾಯಿತು. ಆಗಲೂ ಈ ಪ್ರಶ್ನೆ ಉದ್ಭವಿಸಲಿಲ್ಲ. ಆದರೆ ನಮ್ಮ ಪ್ರಧಾನಿ ದಾರಿತಪ್ಪಿಸುವ ಮತ್ತು ವಿಭಜನ ರಾಜಕಾರಣದಲ್ಲಿ ನಿಪುಣ. ಪ್ರತಿಪಕ್ಷಗಳನ್ನು ಟೀಕಿಸುವುದು ಅವರ ಕೈಲಾಸ ಕಾಯಕ, ಪ್ರತಿಪಕ್ಷಗಳ ರಾಜಕಾರಣಿಗಳನ್ನು ಸಾಧ್ಯವಾದರೆ ಖರೀದಿಸುವುದು, ಇಲ್ಲವೇ ತಮ್ಮ ನಿಯಂತ್ರಣದಲ್ಲಿರುವ ಈ.ಡಿ., ಸಿಬಿಐ, ಐಟಿ ಮುಂತಾದ ಕೇಂದ್ರಾಡಳಿತ ಸಂಸ್ಥೆಗಳ ಮೂಲಕ ತೊಂದರೆ ನೀಡಿ ಅವರನ್ನು ಬಗ್ಗಿಸಿ, ಬಾಗಿಸಿ, ತಮ್ಮವರನ್ನಾಗಿಸುವುದು ಅವರ ಆಡಳಿತದ ಕ್ರಮ. ಬಿಜೆಪಿಯೆಂದರೆ ಎಂತಹ ಕೊಚ್ಚೆಕೊಳೆಯನ್ನೂ ತೊಳೆಯುವ ಗಂಗೆಯಾಗಿಸಿದ್ದು ಅವರ ರಾಜಕೀಯ ಶ್ರಮ. ಬಹಳಷ್ಟು ಪ್ರತಿಪಕ್ಷ ರಾಜಕಾರಣಿಗಳು ಯಾವುದಾದರೊಂದು ಆರೋಪಕ್ಕೆ ಸಿಕ್ಕಾಗ ಗುದ್ದಾಡುವುದಕ್ಕಿಂತ ಶರಣಾಗುವುದು ಲೇಸೆಂದು ಅವರ ಜೊತೆಗೂಡುವುದು ಕಳೆದ ಒಂದು ದಶಕದ ದೃಶ್ಯಗಳು, (ಮಾಜಿ ಪ್ರಧಾನಿ ದೇವೇಗೌಡರೂ ಇದಕ್ಕೆ ಬಲಿಯಾಗಿದ್ದಾರೆ!) ಆದರೂ ಪ್ರಮುಖ ಎದುರಾಳಿಗಳಾದ ಕಾಂಗ್ರೆಸ್, ಟಿಎಂಸಿ, ಆಪ್, ಡಿಎಂಕೆ, ಎಡಪಕ್ಷಗಳನ್ನು ಹಣಿಯುವಲ್ಲಿ ಮೋದಿ ನಿರೀಕ್ಷಿತ ಯಶಸ್ಸನ್ನು ಪಡೆಯಲಿಲ್ಲ. ಕಾಂಗ್ರೆಸ್ ಎಂದರೆ ಹಾವು ಮೆಟ್ಟಿದಂತೆ ವರ್ತಿಸುವುದು ಅವರ ಚಾತುರ್ಯ. ಆಯಾಯ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಇನ್ನೊಮ್ಮೆ ಹುಟ್ಟಿದರೆ ಇಲ್ಲೇ ಹುಟ್ಟಬೇಕು ಎನ್ನುವುದು ಅಥವಾ ಆಯಾಯ ಆಡಳಿತದ ಕುರಿತು ಕುತ್ಸಿತ ಸಂಶಯಗಳನ್ನು ಹುಟ್ಟುಹಾಕುವುದು, ವಿನಾಕಾರಣ ಅಳುವುದು ಮತ್ತು ಆ ಮೂಲಕ ಅನುಕಂಪದ ಅಲೆಗಳ ಮೇಲೆ ತೇಲಾಡುವುದು ಅವರ ತಂತ್ರಗಾರಿಕೆ, ಶೈಲಿ. ಈ ರೀತಿಯಲ್ಲಿ ಮಾತನಾಡುವವರನ್ನು ನಂಬುವುದು ಈ ದೇಶದ ಬಹುಸಂಖ್ಯಾತರ ಹುಟ್ಟುಗುಣ. ರಾಜಕಾರಣದಲ್ಲಿ ಯಾರು ಯಾರನ್ನು ಯಾಕೆ ನಂಬುತ್ತಾರೆಂಬ ಬಗ್ಗೆ ಕಾರಣ ಹುಡುಕಬಾರದು. ಅಂತೂ ಲಿಂಕನ್ ಸೋತರು.

ಇದ್ದಕ್ಕಿದ್ದಂತೆಯೇ ಜ್ಞಾನೋದಯವಾದಂತೆ ಮೋದಿ ಸರಕಾರವು ಒಂದು ವಿಶೇಷ ಅಧಿವೇಶನವನ್ನು ಕರೆದು 16/4/2026ರಂದು ಸಂವಿಧಾನ (131ನೇ ತಿದ್ದುಪಡಿ) ಮಸೂದೆಯನ್ನು ಮಂಡಿಸಿತು. ಈ ಮಸೂದೆಯನ್ನು ಮೋದಿ ಸರಕಾರ ಮಹಿಳಾ ಮೀಸಲಾತಿ ಮಸೂದೆಯೆಂದು ಬೊಗಳೆ ಬಿಟ್ಟಿತಾದರೂ ಅದು ಇನ್ನೊಂದು ಅಪಾಯಕಾರಿ ವಿಚಾರವನ್ನೊಳಗೊಂಡಿತ್ತು. ಅದರಂತೆ ಸಂಸತ್ತಿನ ಸದಸ್ಯರ ಸಂಖ್ಯೆಯನ್ನು ಈಗಿರುವ 543ರಿಂದ 850ನ್ನು ಮೀರದಂತೆ ಏರಿಸುವುದನ್ನು ಸೇರಿಸಿತ್ತು ಮತ್ತು ಅದರ ಆಧಾರದಲ್ಲಿ 2029ರ ಚುನಾವಣೆಯಲ್ಲಿ ಮಹಿಳಾ ಮೀಸಲಾತಿಯನ್ನು ನೀಡಲು ಉದ್ದೇಶಿಸಿತು. ಇದು ವಿಳಂಬ ತಂತ್ರವೂ ಹೌದು; ಬಿಜೆಪಿಯ ಪ್ರಭಾವವಿರುವ ಉತ್ತರಭಾರತದ ಸ್ಥಾನಗಳನ್ನು ಗಣನೀಯವಾಗಿ ಹೆಚ್ಚಿಸುವ ಕುತಂತ್ರವೂ ಹೌದು.

ಕೇಂದ್ರ ಸರಕಾರವು ಈ ಮಸೂದೆಯನ್ನು ಮಹಿಳಾ ಮೀಸಲಾತಿಯ ಸುವರ್ಣ ವರ್ಷವೆಂಬಂತೆ ಪ್ರಚಾರ ಮಾಡಿತು. ಈ ವಂಚನೆ ಪ್ರಜ್ಞಾವಂತ ಮತದಾರರಿಗೆ ಮಾತ್ರ ಗೊತ್ತಾಗುವಂತಿತ್ತು. ಈ ಹಿಂದೆ 2023ರಲ್ಲಿ ಸ್ವೀಕೃತವಾದ ತಿದ್ದುಪಡಿಯನ್ನು ಜಾರಿಗೆ ತರುವುದಕ್ಕೆ ಏನು ಅಡ್ಡಿಯೆಂದು ಕೇಂದ್ರ ಸರಕಾರದ ಬೆಂಬಲಿಗರು ಕೇಳಲು ಅಸಮರ್ಥರಾದರೋ ಪಕ್ಷಪ್ರೀತಿಯೋ ಅಂತೂ ಸುಮ್ಮನಿದ್ದರು. ಮಾಮೂಲಿನಂತೆ ಗೋದಿಮಾಧ್ಯಮಗಳು ಕೇಂದ್ರ ಸರಕಾರದ ಪರವಾಗಿ ತುತ್ತೂರಿ ಊದಿದವು.

ಈ ಮಸೂದೆಯ ಚರ್ಚೆಗೆ ಕೇವಲ ಒಂದು ದಿನ ಮಾತ್ರ ನಿಗದಿಪಡಿಸಿ 17/04/2026ರಂದು ಮತದಾನಕ್ಕೆ ಒಡ್ಡಲಾಯಿತು. ನಾರೀ ಸೆರಗಿನ ಹಿಂದೆ ಪುನರ್‌ವಿಂಗಡಣೆಯ ನೆಪದಲ್ಲಿ ತನ್ನ ಸ್ಥಾನಗಳನ್ನು ವೃದ್ಧಿಸುವುದು ಮೋದಿಪಕ್ಷದ ಹುನ್ನಾರವಾಗಿತ್ತು. ಆದರೆ ಇದರ ದುರುದ್ದೇಶ ಪ್ರತಿಪಕ್ಷಗಳಿಗೆ ಅರಿವಾದ್ದರಿಂದ ಅವು ಬೆಂಬಲವನ್ನು ಕ್ರೋಡೀಕರಿಸಿ ವಿರೋಧಿಸಿದ್ದರಿಂದ ಅದು ಸಾಂವಿಧಾನಿಕ ತಿದ್ದುಪಡಿಗೆ ಬೇಕಾದ 2/3 ಬಹುಮತವನ್ನು ಪಡೆಯಲು ವಿಫಲವಾಗಿ (298-230) ಸೋತಿತು. ಈ ಸಂದರ್ಭದಲ್ಲಿ 543 ಸದಸ್ಯರ ಲೋಕಸಭೆಯಲ್ಲಿ 528 ಮಂದಿ ಹಾಜರಿದ್ದರು. ಒಂದು ವೇಳೆ ಎಲ್ಲರೂ ಹಾಜರಿದ್ದರೂ ಮಸೂದೆಗೆ ಸೋಲಾಗುತ್ತಿತ್ತು. ಸಾಂವಿಧಾನಿಕ ತಿದ್ದುಪಡಿಯೊಂದು ಲೋಕಸಭೆಯಲ್ಲಿ ಸೋಲುವುದೆಂದರೆ ಸರಕಾರಕ್ಕೆ ಸೋಲೆಂದೇ ಅರ್ಥ.

ಈ ಸೋಲಿನ ಬಗ್ಗೆ ಮೋದಿ ಸರಕಾರಕ್ಕೆ ಅರಿವಿತ್ತು. ಹಾಗಾದರೆ ಮಸೂದೆಯನ್ನು ಮಂಡಿಸಿದರೇಕೆ? ಕೆಲವು ಸಾಧ್ಯತೆಗಳಿವೆ: ಒಂದು, ಪ್ರತಿಪಕ್ಷಗಳ ಸದಸ್ಯರು ಒಟ್ಟಾಗದೆ ಕೆಲವರು ರಾಜ್ಯ ಚುನಾವಣೆಗಳಲ್ಲಿ ಭಾಗಿಯಾಗಿ, ಇನ್ನು ಕೆಲವರು ಗೈರುಹಾಜರಾಗಿ, ಹಾಜರಿದ್ದವರ ಪೈಕಿ 2/3 ಬಹುಮತ ಸಿಕ್ಕಲೂಬಹುದು: ಎರಡು, ಕೆಲವಾದರೂ ಸದಸ್ಯರಿಗೆ ಈ ಮಸೂದೆಯ ಆಂತರ್ಯದ ಅರಿವಿಲ್ಲದಿರಬಹುದು ಅಥವಾ ಮಸೂದೆಯನ್ನು ವಿರೋಧಿಸಿದರೆ ಅದು ಮಹಿಳಾ ವಿರೋಧಿ ನಿಲುವೆಂಬ ಅಂಜಿಕೆಯಿಂದ ಮಸೂದೆಯನ್ನು ಬೆಂಬಲಿಸಬಹುದು; ಮೂರು, ಒಂದು ವೇಳೆ ಮಸೂದೆಯು ಗೆಲುವನ್ನು ಪಡೆಯಲು ವಿಫಲವಾದರೆ ಅದು ಮಹಿಳಾ ವಿರೋಧಿ ನಿಲುವಿನಿಂದ ಎಂದು ಪ್ರಚಾರ ಮಾಡಿ ದೇಶದ ತುಂಬ ಇರುವ ಹುಂಬ ಮತದಾರರ ಅನುಕಂಪವನ್ನು ಪಡೆದು ಅದನ್ನು ಸದ್ಯದ ವಿಧಾನಸಭಾ ಚುನಾವಣೆಯಲ್ಲಿ ನಗದೀಕರಿಸಬಹುದು.

ಮೋದಿ ಸರಕಾರಕ್ಕೆ ಮೊದಲ ಎರಡು ಸಾಧ್ಯತೆಗಳ ಅದೃಷ್ಟವಿರಲಿಲ್ಲ. ಆದ್ದರಿಂದ ಮೋದಿ 18/4/2026ರ ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಒಂದು ಪ್ರಸಾರ ಭಾಷಣ ಮಾಡಿದರು. ಇದು ನಿಜಕ್ಕೂ ಪ್ರಸಾರ ಭಾಷಣವಾಗದೆ ಪ್ರಚಾರ ಭಾಷಣವಾಗಿತ್ತು. ಈಗಾಗಲೇ ಕೆಲವಾದರೂ ಮಾಧ್ಯಮಗಳಲ್ಲಿ ವರದಿಯಾದಂತೆ ಇಂತಹ ಪ್ರಸಾರ ಭಾಷಣಗಳು ವಿಶೇಷ ಸಂದರ್ಭಗಳಲ್ಲಿ ದೇಶದ ವಿಕಾಸಕ್ಕೆ ಮತ್ತು ಆಕಸ್ಮಿಕ ಆಘಾತಗಳನ್ನೆದುರಿಸಲು ಜನರಿಗೆ ವಿವರಣೆ, ಸಹಾಯ ಮತ್ತು ಭರವಸೆಯನ್ನು ನೀಡಲು ಆಡಳಿತಕ್ಕೆ ಇರುವ ಸೌಲಭ್ಯಗಳು. ಇದನ್ನು ದುರುಪಯೋಗಪಡಿಸಿಕೊಳ್ಳಲು ಪ್ರಧಾನಿಗಾಗಲಿ, ರಾಷ್ಟ್ರಪತಿಗಾಗಲಿ ಅಧಿಕಾರವಿಲ್ಲ. ಹಾಗೆಯೇ ಇದು ಇತರರನ್ನು ದೂಷಿಸಲು ಮತ್ತು ರಾಜಕೀಯ ಸ್ವಾರ್ಥವನ್ನು ಸಾಧಿಸಲು ಇರುವ ಸಂದರ್ಭ-ಅವಕಾಶವಲ್ಲ. ಆದರೆ ಪ್ರಧಾನಿ ಇದನ್ನು ಮಸೂದೆಯ ಕುರಿತು ಮತದಾರರ ದಾರಿ ತಪ್ಪಿಸಲು ಮತ್ತು ಪ್ರತಿಪಕ್ಷಗಳನ್ನು ಮತ್ತು ಮುಖ್ಯವಾಗಿ ಕಾಂಗ್ರೆಸ್ ಪಕ್ಷವನ್ನು ದೂಷಿಸಲು ಬಳಸಿಕೊಂಡರು. (ಪ್ರಧಾನಿ ತನ್ನ ಮನ್ ಕೀ ಬಾತ್‌ನ್ನೂ ಇದಕ್ಕೇ ಬಳಸಿಕೊಂಡಿದ್ದಾರೆ!) ಪ್ರಜ್ಞಾವಂತರಿಗೆ ಪ್ರಧಾನಿಯ ಈ ಹಾದಿ ಗೊತ್ತಿತ್ತು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸೇರಿದಂತೆ ದೇಶ ಒಟ್ಟಾಗಿರಬೇಕಾದ ವೇದಿಕೆಗಳಲ್ಲೂ ಪ್ರಧಾನಿ ಮಾತ್ರವಲ್ಲ ರಾಷ್ಟ್ರಪತಿಯೂ 2014ರಿಂದ ದೇಶವನ್ನು ಒಡೆಯುವ ಕೆಲಸವನ್ನೇ ಮಾಡುತ್ತ ಬಂದಿದ್ದಾರೆ. ರಾಜ್ಯಗಳ ಚುನಾವಣೆ ನಡೆಯುತ್ತಿರುವಾಗ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯ ಸಂದರ್ಭದಲ್ಲಿ ಪ್ರಧಾನಿ ಈ ರೀತಿಯ ಸ್ವಾರ್ಥ ರಾಜಕೀಯ ಭಾಷಣವನ್ನು ಮಾಡುವುದು ಅಪ್ಪಟ ಅಕ್ರಮ.

ಈ ಸಂದರ್ಭಕ್ಕೆ ಇನ್ನೂ ಒಂದು ಮುಖವಿದೆ: ಕೇಂದ್ರ ಸರಕಾರದ ಅಂಗ ಸಂಸ್ಥೆಯಾದರೂ ಆಕಾಶವಾಣಿಯು ಕಾಗದದಲ್ಲಾದರೂ ಸ್ವಾಯತ್ತವೆಂಬ ಮುಖವಾಡವನ್ನು ಧರಿಸಿದೆ/ಹೊದ್ದಿದೆ. ಅದು ಇಂತಹ ಭಾಷಣಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ನೀಡಿದರೂ ಅದನ್ನು ಉತ್ತರಿಸಲು ಪ್ರತಿಪಕ್ಷ ನಾಯಕರಿಗೂ ಅವಕಾಶ ನೀಡಬೇಕು. ಆದರೆ ಈಗಿನ ಆಕಾಶವಾಣಿಯನ್ನು ಗಮನಿಸಿದರೆ ಅದು ತನ್ನತನವನ್ನು ಕಳೆದುಕೊಂಡಿರುವುದು ಮತ್ತು ಸರಕಾರದ ಗುಲಾಮನಾಗಿರುವುದು ಮಾತ್ರವಲ್ಲ ಆಡಳಿತ ಪಕ್ಷದ ಮುಖವಾಣಿಯಾಗಿರುವುದೂ ಸ್ಪಷ್ಟವಾಗಿದೆ.

ಪ್ರಧಾನಿ ದೇಶದಲ್ಲಿ ತಾನೊಬ್ಬ ನಾರೀರಕ್ಷಕನ ಪೋಸ್‌ನಲ್ಲಿ ಮಾತನಾಡಿ ಪ್ರತಿಪಕ್ಷಗಳನ್ನು ಅದರಲ್ಲೂ ಕಾಂಗ್ರೆಸನ್ನು ದೂಷಿಸಿದರು. ಎಷ್ಟು ಬಾರಿ ಕಾಂಗ್ರೆಸ್‌ನ ಹೆಸರನ್ನು ಹೇಳಿದರೆಂಬುದನ್ನು ಹಲವರು ಲೆಕ್ಕ ಹಾಕಿದರು. ತಮಾಷೆಯೆಂದರೆ ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸುವ ಘೋಷಣೆ ಹಾಕಿ ತನ್ನ ಅಧಿಕಾರವನ್ನು ಆರಂಭಿಸಿದ ಪ್ರಧಾನಿ ಮೋದಿ ಈಗ ಕಾಂಗ್ರೆಸನ್ನು ಮಟ್ಟಹಾಕಲು ಏದುಸಿರು ಬಿಡುತ್ತಿದ್ದಾರೆ. ಕಾಂಗ್ರೆಸ್ ತನ್ನಪಾಡಿಗೆ ತಾನು ನಿತ್ರಾಣವಾಗುತ್ತ ಹೋಗುತ್ತಿದ್ದರೂ ಅದಕ್ಕೆ ಜೀವರಸ ನೀಡಿ ಶಕ್ತವಾಗಿಸಿದ ಕೀರ್ತಿ ಮೋದಿಯವರಿಗೇ ಸಲ್ಲುತ್ತದೆ. ಕಂಸನ ಕನಸಲ್ಲಿ ಕೃಷ್ಣ ಬಂದಂತೆ ಮೋದಿಯವರಿಗೆ ರಾಹುಲ್ ಗಾಂಧಿ ಬರುವ ಚಿಹ್ನೆಗಳಿವೆ.

ತನ್ಮಧ್ಯೆ ಸಂವಿಧಾನದ 106ನೇ ತಿದ್ದುಪಡಿಯನ್ನು ಜಾರಿಮಾಡಲು ಬೇಕಾದ ಆದೇಶವನ್ನು ಈ ವರೆಗೂ ಪ್ರಕಟಿಸದೆ 3 ವರ್ಷಗಳ ಬಳಿಕ ಮೊನ್ನೆ ಎಪ್ರಿಲ್ 16ರಂದು ಪ್ರಕಟಿಸಿದೆ. ಇದನ್ನು ಮೊದಲೇ ಯಾಕೆ ಮಾಡಲಿಲ್ಲವೆಂಬುದನ್ನು ಪ್ರಧಾನಿ ತನ್ನ ಭಾಷಣದಲ್ಲಿ ದೇಶಕ್ಕೆ ಹೇಳಬೇಕಾಗಿತ್ತು. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತು ಮಹಿಳಾ ಮೀಸಲಾತಿಯನ್ನು ಎಷ್ಟು ಸಾಧ್ಯವೋ ಅಷ್ಟೂ ವಿಳಂಬಿಸಲು ಮೋದಿ ಸರಕಾರ ಹಾಕಿಕೊಂಡ ಸಂಚು ವಿಫಲವಾದದ್ದು ಮಾತ್ರವಲ್ಲ, ಬಯಲಾಗಿದೆ.

ಸಾಮಾನ್ಯ ಸಂದರ್ಭಗಳಲ್ಲಿ ಕೇಂದ್ರ ಸರಕಾರ ತನ್ನ ಸೋಲನ್ನು ಮತ್ತು ಒಟ್ಟಾರೆ ವೈಫಲ್ಯವನ್ನು ಒಪ್ಪಿಕೊಂಡು ರಾಜೀನಾಮೆ ನೀಡಬೇಕಾಗಿತ್ತು ಅಥವಾ ಒಬ್ಬ ಸಚಿವರ ತಲೆದಂಡವನ್ನಾದರೂ ಪಡೆಯಬೇಕಾಗಿತ್ತು. ಆದರೆ ರಾಜಕಾರಣ ಎಷ್ಟು ಅವನತಿಗೆ ಮತ್ತು ನೀಚತನಕ್ಕೆ ಇಳಿದಿದೆಯೆಂದರೆ ಗೌರವ, ಘನತೆ, ಮರ್ಯಾದೆ ಇವೆಲ್ಲ ಈಗ ಬಳಕೆಯಿಂದಲೇ ಮರೆಯಾಗಿವೆ. ರಾಜಕಾರಣದಲ್ಲಿ ಸ್ಪರ್ಧೆಯಿರಬೇಕಾದ್ದು ಸಹಜ. ಆದರೆ ಅದೀಗ ಬದಲಾಗಿ ವೈರವನ್ನು ಅಭ್ಯಾಸ ಮಾಡಿಕೊಂಡಿದೆ.

ಈ ದೇಶದ ಮತದಾರರನ್ನು ಮತ್ತು ಒಟ್ಟಿನಲ್ಲಿ ಜನರನ್ನು ಗಮನಿಸಿದರೆ ಕನ್ನಡದ ಕವಿ ನಿಸಾರ್ ಅಹಮದ್ ಬರೆದ ‘ಕುರಿಗಳು ಸಾರ್, ಕುರಿಗಳು’ ಕವಿತೆ ನೆನಪಾಗದಿರದು.

ಮೋದಿಯವರು ತನ್ನ ಅವರೋಹಣಗತಿಯಲ್ಲಿದ್ದಾರೆ. ದುರಂತವೆಂದರೆ ಅವರು ಸಮರ್ಥರಾಗಿದ್ದಾಗಲೇ ಕಿರೀಟವನ್ನು ಇನ್ನೊಬ್ಬರ ಹೆಗಲಿಗಿರಿಸಿದ್ದರೆ ತನ್ನ ಪಕ್ಷವನ್ನಾದರೂ ಉಳಿಸಿಕೊಳ್ಳಬಹುದಿತ್ತು. ಆದರೆ ಅವರು ಕೋತಿ ತಾನು ಕೆಟ್ಟದ್ದಲ್ಲದೆ ಕಾಡನ್ನೂ ಕೆಡಿಸಿತು ಎಂಬ ಹಾಗೆ ತನ್ನ ಅಧಿಕಾರವನ್ನು ಮತ್ತು ತನ್ನ ಪಕ್ಷವನ್ನು ತನ್ನೊಂದಿಗೇ ರಾಜಕೀಯದ, ಅಧಿಕಾರದ, ಕಾಲಪ್ರವಾಹದಲ್ಲಿ ಒಯ್ಯುತ್ತಾರೆಂದು ಅನ್ನಿಸುತ್ತದೆ.

ಎಲ್ಲ ಸರ್ವಾಧಿಕಾರ/ರಿಗಳೂ ಕೊನೆಯಾಗುವುದು ಹೀಗೆಯೇ. ಪ್ರಜಾಪ್ರಭುತ್ವದ, ಪ್ರಚಾರದ ಹೊದಿಕೆ ಕಾಲದ ಬಿರುಗಾಳಿಯೆದುರು ನಿಲ್ಲುವುದಿಲ್ಲ. ಕ್ಷೇತ್ರ ಪುನರ್‌ವಿಂಗಡಣೆಯನ್ನು ಮಹಿಳಾ ಮೀಸಲಾತಿಯ ಹೊದಿಕೆೆಯಡಿ ಅಡಗಿಸಿದರೆ ಅದು ತನ್ನನ್ನು ಧರಿಸಿದವನನ್ನು ಬೆತ್ತಲೆ ಮಾಡುತ್ತದೆ ಹಾಗೂ ಮೆಫಿಸ್ಟೋಫಿಲಿಸ್ ಫಾಸ್ಟಸ್‌ನನ್ನು ಎಳೆದೊಯ್ಯುವ ದೃಶ್ಯವನ್ನು ತೆರೆಯಲ್ಲಿ ಮೂಡಿಸುತ್ತದೆ.

Tags

delimitationconstituenciesWomen's Reservation
share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X