Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ಪಹಲ್ಗಾಮ್‌ನ ಭಾರತ

ಪಹಲ್ಗಾಮ್‌ನ ಭಾರತ

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ1 May 2025 1:19 PM IST
share
ಪಹಲ್ಗಾಮ್‌ನ ಭಾರತ
ಸಂಸ್ಕೃತಿ/ನಾಗರಿಕತೆಯ ಅವನತಿಯೆಂದರೆ ಇದೇ. ಪಹಲ್ಗಾಮ್‌ನ ಹಿಂಸೆ ಮತೀಯವಲ್ಲ, ರಾಷ್ಟ್ರೀಯವೆಂದು ಅರ್ಥಮಾಡಿಕೊಳ್ಳಬೇಕು. ನಾವು ಹಿಂದೂಗಳೂ ಅಲ್ಲ, ಮುಸಲ್ಮಾನರೂ ಅಲ್ಲ, ನಾವು ಭಾರತೀಯರು ಎಂಬ ಎಚ್ಚರ ಬರಬೇಕು. ತಕ್ಷಣದ ಪ್ರಸಾರ-ಪ್ರಚಾರ ಮತ್ತು ಲಾಭವನ್ನು ಬಯಸುವ, ಬಳಸುವ ಯಾವ ದೇಶವೂ ತನ್ನ ಈ ಗುಣಗಳನ್ನು ಅಳವಡಿಸಿಕೊಳ್ಳಬೇಕು; ತನ್ನ ದೋಷಗಳನ್ನು ವಿಶ್ಲೇಷಿಸಿಕೊಳ್ಳಬೇಕು. ನಮ್ಮ ನಡೆ ಘನವಾದರೆ ಆಗ ನಮ್ಮ ಕಾಲದ ಸಮಾಜವು ಹೆಮ್ಮೆಪಡಬಹುದು. ಇಲ್ಲವಾದರೆ ಕ್ಷಯಿಸುತ್ತಿರುವ ಈ ಗುಣಗಳ ಮೂಲಕ ನಮ್ಮತನ ಸಾಯುವುದನ್ನು ಕಾಣಬಹುದು. ಶೈಥಿಲ್ಯದ ವೇಗ ಗುರುತ್ವಾಕರ್ಷಣೆಯಂತೆ ತೀವ್ರವಾಗುತ್ತ ಹೋಗುತ್ತದೆಯೆಂಬುದನ್ನು ಮರೆಯಬಾರದು.

ಸಂಸ್ಕೃತಿಯೆಂದರೂ ಅಷ್ಟೇ, ನಾಗರಿಕತೆಯೆಂದರೂ ಅಷ್ಟೇ; ಬದುಕಿನ, ವರ್ತನೆಯ ವಿನ್ಯಾಸದ ಸುತ್ತ ಸುಳಿಯುವ ಈ ಪದಗಳು ನಿಜಚಿತ್ರಗಳು. ಇವು ಘಟನೆಗಳನ್ನು ಮಾತ್ರ ವಿವರಿಸುವುದಿಲ್ಲ; ಅವು ಮನುಷ್ಯನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅವು ನಮ್ಮ ನೆಲೆ-ನೆಲಗಳನ್ನು ಕೂಡ ಸಂಬಂಧಿಸಿದೆ. ಜೊತೆಗೆ ಅವುಗಳಿಗೆ ಮನುಷ್ಯ ಮತ್ತು ಸಮೂಹದ ಸಂಕೇತವಾದ ಸಮಾಜವು ನೀಡುವ ಪ್ರತಿಕ್ರಿಯೆಗಳನ್ನೂ ವಿವರಿಸುತ್ತವೆ. ಆದ್ದರಿಂದ ಸಂಸ್ಕೃತಿ ಅಥವಾ ನಾಗರಿಕತೆಯೆಂದು ಉಲ್ಲೇಖಿಸಲ್ಪಡುವ ಮನುಷ್ಯನ ಗುಣವನ್ನು, ಭಾವನೆಯನ್ನು, ವಿಚಾರವನ್ನು ನಡೆ-ನುಡಿಗಳನ್ನು, ಏರುತಗ್ಗುಗಳನ್ನು ಇತಿಹಾಸ ದಾಖಲಿಸುತ್ತದೆ. ವರ್ತಮಾನವು ಭೂತಕಾಲವನ್ನು ಗಮನಿಸಿ ತನ್ನ ನಡೆಯನ್ನು ಸರಿಪಡಿಸಿಕೊಂಡು ಹೋಗುವ ಕಾಲವೊಂದಿತ್ತೆಂದು ಪುರಾಣಗಳ ಆಧಾರದಲ್ಲಿ ನಂಬಬಹುದು. ಆದರೆ ಚರಿತ್ರೆ ಮತ್ತೆ ಮತ್ತೆ ಹೇಳುವ ಪಾಠವೆಂದರೆ ಚರಿತ್ರೆಯಿಂದ ಮನುಷ್ಯ ಏನೂ ಕಲಿತಿಲ್ಲ ಎಂಬ ವಿಷಾದವನ್ನು.

ಆದರೂ ಮನುಷ್ಯನ ವಿಕೃತಿಯಿಂದಾಗಿ ಚರಿತ್ರೆ ಅನೇಕ ಸಂಗತಿಗಳಿಗೆ ಮೂಕ ಸಾಕ್ಷಿಯಾಗಬೇಕಾಗಿದೆ. ಅರಮನೆಯ ಒಳಗೆ ನಡೆಯುವ ದುರಂತಗಳು ಹೊರ ಪ್ರಪಂಚಕ್ಕೆ ಕಾಣದಿರುವ, ಕಂಡರೂ ಅದು ಬೆಳಕಿಗೆ ಬಾರದಂತಿರುವ ಕಬ್ಬಿಣದ ಬೇಲಿಯನ್ನು ಎಲ್ಲ ದೇಶಗಳು ಅನುಭವಿಸಿವೆ. ಬಡವರು, ಅಸಹಾಯಕರು, ದೀನದಲಿತರು ಮತ್ತಿತರ ಶೋಷಿತ ವರ್ಗಗಳು ಮೌನವಾಗಿಯೇ ಉಳಿದು ಅಳಿಯಬೇಕಾಗಿ ಬಂದ ಸಂದರ್ಭಗಳು ಬೇಕಾದಷ್ಟಿವೆ. ಹೀಗಾಗಿ ಮನುಷ್ಯ ಸಂಸ್ಕೃತಿಯೆಂದರೆ ಸುಖ-ಕಷ್ಟ-ದುಃಖಗಳ ಕತೆಯಾಗಿಯೇ ಉಳಿಯುತ್ತದೆ. ಅವುಗಳನ್ನು ಸೋಸಿ ಪಡೆಯುವ ರಸದಲ್ಲಿ ಒಳ್ಳೆಯದೇ ಹೆಚ್ಚಿದ್ದರೆ ಅದನ್ನು ಒಳ್ಳೆಯ ಸಂಸ್ಕೃತಿ/ನಾಗರಿಕತೆಯೆನ್ನಬಹುದು; ಕಹಿ ಹೆಚ್ಚಿದ್ದರೆ ಕೆಟ್ಟ ಸಂಸ್ಕೃತಿ/ನಾಗರಿಕತೆಯೆನ್ನಬಹುದು.

ಇವುಗಳನ್ನು ಪಹಲ್ಗಾಮ್‌ನ ಪ್ರಕರಣದ ಅಧ್ಯಯನದ (case study) ಮೂಲಕ ಚರ್ಚಿಸಬಹುದು:

ಪಹಲ್ಗಾಮ್‌ನಲ್ಲಾದ ದುರಂತದ ಬಳಿಕದ ಪ್ರತಿಕ್ರಿಯೆಗಳು ಈ ದೇಶದ ನೈಜ ದುರಂತವನ್ನು ಅನಾವರಣಗೊಳಿಸಿದೆ. ಈಗ ಸತ್ತವರಿಗೆ ಮಾತ್ರವಲ್ಲ ಅವರ ಅವಲಂಬಿತ ಮತ್ತಿತರ ವಾರಸುದಾರರಿಗೂ, ಬದುಕುಳಿದವರಿಗೂ, ಮತೀಯ ಸಮಾಧಿ ಕಟ್ಟಲಾಗುತ್ತಿದೆ. ಮಾಧ್ಯಮಗಳಲ್ಲಿ ಬರುವ ಪ್ರತಿಕ್ರಿಯೆಗಳಲ್ಲಿ ನೂರಕ್ಕೆ ಹತ್ತರಷ್ಟೂ ಒಳಿತಿನ ಬಯಕೆಗಳಿಲ್ಲ. ಈಗ ಮುತ್ಸದ್ದಿಗಳಿಲ್ಲ; ರಾಜಕಾರಣಿಗಳು ಮಾತ್ರ. ಅವರು ಮುಂದಿನ ತಲೆಮಾರನ್ನಾಗಲೀ ನಾವು ಮುಂದಿನ ತಲೆಮಾರಿಗೆ ಉಳಿಸಿಹೋಗುವ ಮೌಲ್ಯಗಳನ್ನಾಗಲೀ ಗಮನಿಸುವುದಿಲ್ಲ. ಗಮನಿಸಿದರೆ ಅದು ಸೈದ್ಧಾಂತಿಕ ರಾಜಕೀಯ. ಗಮನಿಸದಿರುವುದು, ಅಥವಾ ಅಧಿಕಾರ ಪಡೆಯುವುದಕ್ಕೆ, ಮತ್ತು ಅಧಿಕಾರದಲ್ಲಿದ್ದರೆ ಅದನ್ನು ಉಳಿಸಿಕೊಳ್ಳುವುದಕ್ಕೆ ಬೇಕಾದ ಅಡ್ಡಮಾರ್ಗೋಪಾಯಗಳನ್ನಷ್ಟೇ ಚಿಂತಿಸುವುದು ಅಧಿಕಾರ ರಾಜಕೀಯ.

ಪಹಲ್ಗಾಮ್‌ನ ಹತ್ಯಾಕಾಂಡ ನಡೆದಾಗ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿತು. ಭಯೋತ್ಪಾದನೆಯು ಲಾಭವಿಲ್ಲದ ಒಂದು ಕ್ರೌರ್ಯ. ಹಾಗೆ ಹೇಳುವಂತಿಲ್ಲ. ಏಕೆಂದರೆ ಅದರ ಹೆಸರೇ ಭಯೋತ್ಪಾದನೆ. ಅಲ್ಲಿ ಉತ್ಪಾದನೆಯಾಗುವ ಸರಕು ಭಯ. ಇದನ್ನು ಯಾರು ಯಾರಿಗೆ ಮಾರಬಹುದು? ಅದರ ಮಾರುಕಟ್ಟೆ ಯವುದು?

ದೇವರ ಭಯವೇ ಜ್ಞಾನದ ಆರಂಭ ಎಂಬ ಉಕ್ತಿಯಿದೆ. ಅದನ್ನು ನಾಣ್ಣುಡಿಯಾಗಿ ಸ್ವೀಕರಿಸೋಣ. ಅದನ್ನು ತರ್ಕಕ್ಕೆ ಒಡ್ಡಿದರೆ ಅಲ್ಲೇ ಒಂದು ವಿಚಾರಶೂನ್ಯ, ಭಾವನಾತ್ಮಕ ವಿವಾದ ಆರಂಭವಾಗಬಹುದು. ಆದರೆ ಸಾವಿನ ಭಯವು ಯಾವುದರ ಆರಂಭ? ಸಾವಿನದ್ದೇ ಆರಂಭ. ಆದರೆ ಸಾವಿನ ಭಯವನ್ನು ನಗದೀಕರಿಸುವುದು ದ್ವೇಷಸಾಧನೆಗೆ ಮತ್ತು ಅದರಿಂದ ಪ್ರಾಪ್ತಿಯಾಗಬಲ್ಲ ಅಧಿಕಾರಕ್ಕೋ ನಿಯಂತ್ರಣಕ್ಕೋ ಒಟ್ಟಾರೆ ದುಷ್ಟತನಕ್ಕೆ.

ಪಹಲ್ಗಾಮ್‌ನ ಭಯೋತ್ಪಾದನೆಗೆ ಜಾತಿ-ಮತ-ಧರ್ಮಗಳ ಹಂಗಿರಲಿಲ್ಲ. ಬಂದವರು ಯಾರೆಂದು ಇನ್ನೂ ಗೊತ್ತಿಲ್ಲ. ಸರಕಾರದ ಅವಲೋಕನದ ಪ್ರಕಾರ ಅವರಲ್ಲಿ ಭಾರತೀಯರೂ ಇದ್ದರು; ನೆರೆಯ ಪಾಕಿಸ್ತಾನದವರೂ ಇದ್ದರು. ಇವರಿಗೆ ಈ ಸಾಧನೆಗೆ ಮೈಯೊಡ್ಡಬೇಕಾದ ಕಾರಣವೇನು? ಅಥವಾ ಈ ಸಾವುಗಳ ಬಳಿಕ ಸಾಧಿಸಿದ್ದಾದರೂ ಏನು? ಇದಕ್ಕೆ ತಾರ್ಕಿಕ ಕಾರಣಗಳಿಲ್ಲ. ನೆಪಗಳು ಸಾವಿರವಿರಬಹುದು. ಪಹಲ್ಗಾಮ್‌ನ ಹತ್ಯೆಗೆ ಪಾಕಿಸ್ತಾನ ನೇರ ಹೊಣೆಯೆಂಬುದಕ್ಕೆ ಒಕ್ಕೂಟ ಸರಕಾರದಲ್ಲೂ ಸಮರ್ಥನೀಯ ಆಧಾರಗಳಿಲ್ಲ. ಆದರೆ ಅದು ನಡೆದ ಪ್ರದೇಶ, ಸಂದರ್ಭಗಳನ್ನು ಅಳೆದೂ ಸುರಿದೂ ಮತ್ತು ಅದು ಪಾಕ್ ನೆಲದಿಂದಲೇ ಬರಬಹುದಾದ್ದರಿಂದ ಅದಕ್ಕೆ ಪಾಕ್‌ನ ಕುಮ್ಮಕ್ಕಿರಬಹುದೆಂದು ಭಾವಿಸಲಾಗಿದೆ. ಸದ್ಯಕ್ಕೆ ಅದನ್ನು ನಂಬುವುದಕ್ಕೂ ಅಲ್ಲಗಳೆಯುವುದಕ್ಕೂ ಕಾರಣಗಳಿಲ್ಲ. ಆದರೆ ದೇಶದ ಹಿತಾಸಕ್ತಿಯಿಂದ ಇದನ್ನು ಭಾರತದ ಮೇಲೆ ಮತ್ತು ಭಾರತೀಯರ ಮೇಲೆ ಪಾಕಿಸ್ತಾನದ ಭಯೋತ್ಪಾದಕರ ಆಕ್ರಮಣವೆಂದೇ ನಂಬಬೇಕಾಗಿದೆ. ಈ ಭಯೋತ್ಪಾದಕರನ್ನು ಪಾಕಿಸ್ತಾನ ಸರಕಾರವೇ ಪ್ರಾಯೋಜಿಸಿತೇ ಅಥವಾ ಅದಕ್ಕೂ ನಿಯಂತ್ರಿಸಲಾಗದ ಶಕ್ತಿಗಳು ಪ್ರಭಾವಿಸಿದವೇ ಎಂಬುದನ್ನು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ತನಿಖೆ ಬಯಲು ಮಾಡಬೇಕಾಗಿದೆ.

ಇಂತಹ ಸಂದರ್ಭದಲ್ಲಿ ಸರಕಾರವೂ ಆಸಕ್ತ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಶ್ರೇಯಸ್ಸಿಗೆ ಯಾವುದು ಅನುಕೂಲವೋ ಅಂತಹ ವಾದವನ್ನು ಹೂಡುತ್ತಾರೆ. ಸದ್ಯ ದೇಶದಲ್ಲಿ ತಾಂಡವವಾಡುತ್ತಿರುವುದು ಕೋಮುವಾದ. ಆದ್ದರಿಂದ ಇದನ್ನು ಪಾಕಿಸ್ತಾನದ ಭಯೋತ್ಪಾದಕರು ಭಾರತೀಯರ ಮೇಲೆ ವಿನಾಕಾರಣ ಮಾಡಿದ ದ್ವೇಷಪೂರಿತ ಅಮಾನುಷ ಆಕ್ರಮಣವೆಂದು ಹೇಳುವುದರ ಬದಲು ಮುಸ್ಲಿಮರಿಂದ ಹಿಂದೂಗಳ ಮೇಲಿನ ಆಕ್ರಮಣವೆಂದು ಈ ದೇಶದ ಬಹಳಷ್ಟು ಹಿಂದೂಗಳು ಹೇಳಿದರು. ಇದಕ್ಕೆ ಬೇಕಾದ ಉದಾಹರಣೆಗಳನ್ನು, ನಿದರ್ಶನಗಳನ್ನು, ನಾಟಕೀಯವಾಗಿ ಬಣ್ಣಿಸಲಾಯಿತು. ಸತ್ತವರನ್ನು, ಗಾಯಗೊಂಡವರನ್ನು ಭಾರತೀಯರೆಂದು ತಿಳಿದವರು ಅಪರೂಪ. ಅವರ ಧರ್ಮ, ಮತ ಮಖ್ಯವಾಯಿತೇ ವಿನಾ ರಾಷ್ಟ್ರೀಯತೆಯಲ್ಲ. ವಿಶೇಷವೆಂದರೆ ಒಕ್ಕೂಟ ಸರಕಾರವು ಇದು ಹೇಗೆ ಮತ್ತು ಯಾಕೆ ನಡೆಯಿತು, ಇದನ್ನು ನಡೆಸಿದವರು ಯಾರು ಎಂಬ ಬಗ್ಗೆ ದಕ್ಷ ಪ್ರತಿಕ್ರಿಯೆಯನ್ನು ನೀಡುವುದರ ಬದಲು ಪ್ರಚೋದಿಸುವ ಮಾತುಗಳನ್ನೇ ಆಡಿತು. ಇದಕ್ಕೆ ಪ್ರಬಲ ಉತ್ತರವನ್ನು ನೀಡಬೇಕು; ನೀಡುವುದಾದರೆ ಯಾರ ವಿರುದ್ಧ ಎಂಬುದನ್ನು ಸಾಧಾರವಾಗಿ ಮಂಡಿಸುವುದರ ಬದಲು ಮಾಧ್ಯಮ ತನಿಖೆಗೆ/ವಿಚಾರಣೆಗೆ ಆದ್ಯತೆ ನೀಡಲಾಯಿತು. ಈ ಘಟನೆ ನಡೆದಾಗ ಸೌದಿ ಅರೇಬಿಯದ ಭೇಟಿಗೆ ಹೋದ ಪ್ರಧಾನಿಯವರ ಸೂಚನೆಯ ಮೇರೆಗೆ ನಮ್ಮ ದೇಶದ ಗೃಹಸಚಿವರು ಕಾಶ್ಮೀರಕ್ಕೆ ಭೇಟಿಕೊಟ್ಟರು. ಅವರಿಂದ ತಾಳ್ಮೆಯ, ಜವಾಬ್ದಾರಿಯುತ ಉತ್ತರವನ್ನು ಈಗಿನ ಅಂತಲ್ಲ ಯಾವ ಪರಿಸ್ಥಿತಿಯಲ್ಲೂ ನಿರೀಕ್ಷಿಸಬಾರದೆಂಬುದನ್ನು ಕಳೆದ ಒಂದೆರಡು ದಶಕಗಳ ಅವರ ರಾಜಕೀಯ ನಡೆ ತೋರಿಸಿಕೊಟ್ಟಿದೆ. ಯಾವುದನ್ನು ಪ್ರಚೋದಿಸಿದರೆ ಮತ ಗಿಟ್ಟೀತು ಎಂಬುದನ್ನಷ್ಟೇ ಅವರು ಬಲ್ಲರು. ಆದ್ದರಿಂದ ಅವರು ಎಲ್ಲರನ್ನೂ ಅಲ್ಲ- ತಮಗೆ ಅನುಕೂಲವಾದವರನ್ನು ಭೇಟಿ ಮಾಡಿ ಮರಳಿದರು. ವಿಶೇಷವೆಂದರೆ ದೇಶದ ರಕ್ಷಣಾಸಚಿವರನ್ನು, ವಿದೇಶಾಂಗ ವ್ಯವಹಾರದ ಸಚಿವರನ್ನು, ಹೋಗಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಅಲ್ಲಿಗೆ ಹೋಗುವಂತೆ ಪ್ರಧಾನಿ ಸೂಚಿಸಲೇ ಇಲ್ಲ. ಒಂದು ವರದಿಯ ಪ್ರಕಾರ ಈ ಘಟನೆ ನಡೆಯುವ ಒಂದೆರಡು ದಿನಗಳ ಮೊದಲು ಅಂದರೆ ಸೌದಿ ಅರೇಬಿಯ ಭೇಟಿಯ ಮೊದಲು ಪ್ರಧಾನಿ ಯಾವುದೋ ಕಾರಣಕ್ಕೆ ಕಾಶ್ಮೀರಕ್ಕೆ ಭೇಟಿ ನೀಡುವವರಿದ್ದರಂತೆ; ಆದರೆ ಯಾಕೋ ರದ್ದು ಮಾಡಿದರಂತೆ! (ಸತ್ಯ ಯಾವುದು, ಸುಳ್ಳು ಯಾವುದು ಎಂಬ ಅಂತರವನ್ನು ಕಾಣದಂತೆ ವ್ಯವಹರಿಸುವ ಮಾಧ್ಯಮಗಳಿಂದಾಗಿ ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಎಂದು ಅರ್ಥವಾಗದ ಪರಿಸ್ಥಿತಿಯಿದೆ.)

ಆನಂತರ ಮರಳಿದ ಪ್ರಧಾನಿ ಕಾಶ್ಮೀರಕ್ಕೆ ಭೇಟಿ ನೀಡಲೇ ಇಲ್ಲ. ಅವರು ಬೆಂಕಿಯಿರುವಲ್ಲಿಗೆ ಹೋಗರೆಂಬುದನ್ನು ಮಣಿಪುರ ಸಾಬೀತುಮಾಡಿದೆ. ಹಾಗೆಯೇ ಸಾವಿಗೀಡಾದವರ ಕುಟುಂಬಸ್ಥರನ್ನು, ಗಾಯಗೊಂಡವರನ್ನು, ಈ ದಾಳಿಯಿಂದ ಪಾರಾದರೂ ಅಲ್ಲಿ ಬದುಕುಳಿದ ಎಲ್ಲರೂ ಆಘಾತಕ್ಕೊಳಗಾದವರನ್ನು ಕಾಣುವುದೂ ಅವರ ಆದ್ಯತೆಯ ಪಟ್ಟಿಯಲ್ಲಿರಲಿಲ್ಲ. ಸತ್ತವರನ್ನು ಇನ್ನೂ ಅಂತ್ಯಕ್ರಿಯೆಗೆ ಒಳಪಡಿಸುವ ಮೊದಲೇ ಪ್ರಧಾನಿ ತುರ್ತಾಗಿ ಬಿಹಾರ ರಾಜ್ಯದ ಚುನಾವಣಾ ಪ್ರಚಾರಕ್ಕೆ ತೆರಳಿದರು. ಪಹಲ್ಗಾಮ್‌ನ ದುರಂತಕ್ಕಿಂತಲೂ ಬಿಹಾರದ ಚುನಾವಣೆ ಮುಖ್ಯವೆಂಬ ಸಂದೇಶವನ್ನು ಅವರು ಬಹಿರಂಗವಾಗಿಯೇ ಕೊಟ್ಟರು. ಆದರೆ ಅಲ್ಲಿ ಸುರಕ್ಷಿತವಾಗಿ ಪಹಲ್ಗಾಮ್‌ನ ಭಯೋತ್ಪಾದನೆಯನ್ನು ಉಲ್ಲೇಖಿಸಿ ಆ ನೆಪದಲ್ಲಿ ತಮ್ಮ ಪಕ್ಷ/ಬಳಗ/ಪಂಗಡಕ್ಕೆ ಮತಕೋರಿದರು. ಮತದಾರರು ಏನು ಯೋಚಿಸಿದರೋ ಗೊತ್ತಿಲ್ಲ, ಆದರೆ ಆಡಳಿತಕ್ಕೆ ಯಾವುದು ಮುಖ್ಯವೆಂಬುದನ್ನು ಇತಿಹಾಸ ದಾಖಲಿಸಿತು.

ಇನ್ನೂ ಪ್ರಧಾನಿ ಕಾಶ್ಮೀರಕ್ಕೆ ಹೋಗುವ ಧೈರ್ಯವನ್ನು ಮಾಡಿದಂತಿಲ್ಲ. ನಿಜಕ್ಕೂ ಮಣಿಪುರ, ಪಹಲ್ಗಾಮ್ ಮುಂತಾದ ಯುದ್ಧರಂಗಗಳಿಗೆ ಪ್ರಧಾನಿ ಭೇಟಿ ನೀಡದಿರುವುದಕ್ಕೆ ಭಯದ ಹೊರತಾಗಿ ಯಾವ ಕಾರಣವೂ ಇಲ್ಲವೆನ್ನಿಸುತ್ತದೆ. ಜೊತೆಗೆ ಅವರು ಹೋಗದಿದ್ದರೆ ಅದನ್ನು ಅವರ ಬೆಂಬಲಿಗರಾಗಲೀ, ಅಭಿಮಾನಿಗಳಾಗಲೀ ಗಂಭೀರವಾಗಿ ಪರಿಗಣಿಸುವುದಿಲ್ಲವೆಂಬುದನ್ನು ಅವರು ಅರಿತಂತಿದೆ. ಎಲ್ಲಿಯ ವರೆಗೆ ಇಂತಹ ಪ್ರಶ್ನೆಗಳನ್ನು ಹಾಕದೆ ಜನರು ಮತ ಮತ್ತು ಅಧಿಕಾರ ನೀಡುತ್ತಾರೋ, ಅಲ್ಲಿಯ ವರೆಗೆ ಪ್ರಧಾನಿಗಾಗಲೀ ಅವರ ಪ್ರತಿನಿಧಿಗಳಿಗಾಗಲೀ ಅಧಿಕಾರ ಸಿಗದೆಂಬ ಬಗ್ಗೆ ಯಾವುದೇ ಭಯವಿಲ್ಲ. ನಾವು ಭಯೋತ್ಪಾದನೆಯೆಂದು ಕರೆಯುವ ನೇತ್ಯಾತ್ಮಕ ಸಂಗತಿಗಳು ಅವರಿಗೆ ಭಯ ತರುವುದಿಲ್ಲ. ಅದರ ಲಾಭ ಪಡೆದುಕೊಳ್ಳುವುದಷ್ಟೇ ಅವರಿಗೆ ಮುಖ್ಯವೆಂದು ಕಾಣುತ್ತದೆ.

ಇಂತಹ ಸಂದರ್ಭದಲ್ಲಿ ವಿಶ್ವದ ಬಲಾಢ್ಯ ದೇಶಗಳ ಮೂಲಕ ನಾವು ಸಂಶಯಿಸುವ ಪಾಕಿಸ್ತಾನದ ಮೇಲೆ ಒತ್ತಡ ತರುವುದು ಮುಖ್ಯ. 1971ರಲ್ಲಿ ಬಾಂಗ್ಲಾ ವಿಮೋಚನೆಯ ಯುದ್ಧ ನಡೆಯುವ ಮೊದಲು ಆಗಿನ ಪ್ರಧಾನಿ ಇಂದಿರಾ ವಿಶ್ವದ ಎಲ್ಲ ದೊಡ್ಡ ನಾಯಕರನ್ನು ಭೇಟಿಯಾದರು. ಅವರ ವಿಶ್ವಾಸ ಗಳಿಸಲು ಪ್ರಯತ್ನಿಸಿದರು. ಪ್ರಯತ್ನ ವಿಫಲವಾದಾಗ ಅಮೆರಿಕದಂತಹ ದೇಶದೆದುರು ‘‘ಮಿ.ನಿಕ್ಸನ್, ನಿಮ್ಮ ಅಭಿಪ್ರಾಯ ತಪ್ಪು’’ (You are wrong Mr.Nixon!) ಎಂದು ಸವಾಲೆಸೆದರು.

ಆದರೆ ಈಗಿನ ಪ್ರಧಾನಿ ಪಾಕಿಸ್ತಾನದೊಂದಿಗಿನ ಸಿಂಧೂನದಿ ನೀರಿನ ಮತ್ತಿತರ ಒಪ್ಪಂದಗಳನ್ನು ರದ್ದುಪಡಿಸಿದರು; ಕಾನೂನು ಬದ್ಧವಾಗಿ ಭಾರತಕ್ಕೆ ಭೇಟಿ ನೀಡಿದ ಪಾಕ್ ಪ್ರಜೆಗಳನ್ನು ಕೂಡಲೇ ಮರಳುವಂತೆ ಆದೇಶಿಸಿದರು. ಕೊನೆಗೆ ಅಲ್ಲಿನ ಯುಟ್ಯೂಬ್ ತಾಣಗಳನ್ನೂ ನಿರ್ಬಂಧಿಸಿದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು 1972ರ ಶಿಮ್ಲಾ ಒಪ್ಪಂದವನ್ನು ರದ್ದುಮಾಡಿತು. ಇವೆಲ್ಲ ಭಾರತದ ಮಾಧ್ಯಮಗಳಲ್ಲಿ ಚಂದ್ರಯಾನದ ಸಾಧನೆಗಳಂತೆ ಬಿಂಬಿತವಾದವು. ಇವೆಲ್ಲ ಬಿಹಾರದ ಚುನಾವಣೆಯಲ್ಲಿ ಅನುಕೂಲವಾಗಲೂಬಹುದು. ಅಷ್ಟರ ಮಟ್ಟಿಗೆ ಒಕ್ಕೂಟ ಸರಕಾರವು ಪುಲ್ವಾಮಾ ದುರಂತದಂತೆ ಈ ಆಕ್ರಮಣವನ್ನೂ ಕೃತಜ್ಞತೆಯಿಂದ ಸ್ಮರಿಸಬಹುದು.

ಆದರೆ ಇವು ಗಂಭೀರ ಪ್ರತಿರೋಧಗಳಲ್ಲ. ಚೀನಾ ಭಾರತದ ಮೇಲೆ ಆಕ್ರಮಣ ಮಾಡುತ್ತದೆಂಬ ಪರಿಸ್ಥಿತಿಯಲ್ಲಿ ಭಾರತವು ಟಿಕ್‌ಟಾಕ್ ಆ್ಯಪ್‌ನ್ನು ನಿಷೇಧಿಸಿದಷ್ಟೇ ಪರಿಣಾಮ ಇವುಗಳದ್ದು. ಇದಕ್ಕೆ ಭಾರೀ ಪ್ರಸಾರ- ಪ್ರಚಾರ ನೀಡಿದ ನಿಷ್ಠ ಮಧ್ಯಮಗಳು ಈ ನಂತರದ ಅವಧಿಯಲ್ಲಿ ಭಾರತಕ್ಕೆ ಚೀನಾದ ಸರಕುಗಳ ರಫ್ತು ಭಾರೀ ಏರಿಕೆ ಕಂಡದ್ದನ್ನು ಹೇಳಲೇ ಇಲ್ಲ.

ಈಗ ಭಾರತೀಯತೆಯ ಪ್ರತಿಕ್ರಿಯೆ ಬಹುಪಾಲು ಶೂನ್ಯ. ಮತೀಯ ಪ್ರತಿಕ್ರಿಯೆಗಳೇ ಹೆಚ್ಚು. ಇದಕ್ಕೆ ಪ್ರತೀಕಾರವೆಂಬಂತೆ ಭಾರತದ ಕೆಲಭಾಗಗಳಲ್ಲಿ ಮುಸ್ಲಿಮರ ಮೇಲೆ ಹಲ್ಲೆಯಾದ ವರದಿಗಳಿವೆ. ಇದನ್ನು ಅಪಚಾರವೆಂದು ವರದಿಮಾಡುವ ಬದಲು ಇದೊಂದು ಹೆಮ್ಮೆಯ ನಡೆಯೆಂದು ಬಣ್ಣಿಸಿದ ಮಾಧ್ಯಮಗಳೇ ಹೆಚ್ಚು. ಕಾನೂನನ್ನು ಎತ್ತಿಹಿಡಿಯ ಬೇಕಾದ ಮತ್ತು ಉತ್ತರ ದಾಯಿತ್ವವನ್ನು ಹೊಂದಿರಬೇಕಾದ ಸರಕಾರವು ಪಹಲ್ಗಾಮ್ ಪ್ರಕರಣದ ಭದ್ರತಾ ಲೋಪವನ್ನು ಮುಚ್ಚಿಟ್ಟಿದೆ. ತನ್ನ ಮುಂದಿನ ನಡೆಯೇನೆಂಬುದನ್ನು ವಿವರಿಸುವ ಬದಲು ಸೇಡಿಗಾಗಿ ಕುಮ್ಮಕ್ಕು ನೀಡುತ್ತಿದೆ. ಪ್ರಚೋದನಾ ತ್ಮಕವಾಗಿ ಮಾತನಾಡುವವರನ್ನು ದೇಶಭಕ್ತರೆಂದೂ, ಕಾರಣವನ್ನೂ ಉತ್ತರವನ್ನೂ ಕೇಳುವವರನ್ನು ದೇಶದ್ರೋಹಿಗಳೆಂದೂ ಬಿಂಬಿಸುತ್ತಿದೆ. ನಾವು ನೆನಪಿಡಬೇಕಾದ್ದೆಂದರೆ ಜಲಿಯನ್‌ವಾಲಾಬಾಗಿನ ಹತ್ಯೆಗೂ ಈ ಹಂಗಿರಲಿಲ್ಲ. ಅದರ ಖಳನಾಯಕರು ಬ್ರಿಟಿಷರೇ ಹೊರತು ಕ್ರೈಸ್ತರಲ್ಲ.

ಅಮೆರಿಕದ ಟ್ರಂಪ್ ನಡೆಯಿಂದಾಗಿ ಶಕ್ತಿಕುಂದಿದ ಅರ್ಥಹೀನ ಅಸ್ತಿತ್ವವನ್ನು ಹೊಂದಿದ ವಿಶ್ವಸಂಸ್ಥೆಯು ಪಾಕಿಸ್ತಾನವನ್ನು ಖಂಡಿಸಿದೆ. ಆದರೆ ಅಮೆರಿಕವೂ ಸೇರಿದಂತೆ ಇತರ ದೊಡ್ಡ ದೇಶಗಳು ಈ ಆಕ್ರಮಣವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಅವು ಮಾತುಕತೆಯನ್ನು ಸೂಚಿಸುತ್ತಿವೆ. ಯಾವುದೇ ದೇಶವು ತನ್ನ ಸ್ವಂತ ಶಕ್ತಿಯ ಆಧಾರದಲ್ಲಿ ವೈರಿ ದೇಶದ ಮೇಲೆ ಆಕ್ರಮಣ ಮಾಡುವುದು, ಯುದ್ಧ ಘೋಷಿಸುವುದು ಇಂದಿನ ಅಂತರ್‌ರಾಷ್ಟ್ರೀಯ ರಾಜಕಾರಣದಲ್ಲಿ ಸಾಧ್ಯವಿಲ್ಲ. ಇಸ್ರೇಲ್‌ನಂತಹ ಇಸ್ರೇಲ್ ಕೂಡಾ ಅಮೆರಿಕದ ಹೊರತಾಗಿ ಮಧ್ಯಪೂರ್ವದಲ್ಲಿ ಸುರಕ್ಷಿತವಾಗಿರಲಾರದು. ಬಲಿಷ್ಠವೆಂದು ಹೇಳಿಕೊಳ್ಳಬಲ್ಲ ದೇಶಗಳು ತಮ್ಮ ಬೆಂಬಲವನ್ನು ಘೋಷಿಸಬೇಕಾದರೆ ನಾವು ಅವರ ಎಷ್ಟು ಬೆಲೆಯ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತೇವೆ ಎಂಬುದನ್ನೇ ಚಿಂತಿಸುತ್ತವೆ. ಉಪಭೋಗವಾದವೂ ವಿನಾಶಕಾರಿಯಾಗುವುದು ದೇಶವು ಬಳಸುವ ಸರಕುಗಳು ಆಹಾರವೋ ಶಸ್ತ್ರಾಸ್ತ್ರಗಳೋ ಎಂಬ ಆಧಾರದಲ್ಲಿ.

ಸಂಸ್ಕೃತಿ/ನಾಗರಿಕತೆಯ ಅವನತಿಯೆಂದರೆ ಇದೇ. ಪಹಲ್ಗಾಮ್‌ನ ಹಿಂಸೆ ಮತೀಯವಲ್ಲ, ರಾಷ್ಟ್ರೀಯವೆಂದು ಅರ್ಥಮಾಡಿಕೊಳ್ಳಬೇಕು. ನಾವು ಹಿಂದೂಗಳೂ ಅಲ್ಲ, ಮುಸಲ್ಮಾನರೂ ಅಲ್ಲ, ನಾವು ಭಾರತೀಯರು ಎಂಬ ಎಚ್ಚರ ಬರಬೇಕು. ತಕ್ಷಣದ ಪ್ರಸಾರ-ಪ್ರಚಾರ ಮತ್ತು ಲಾಭವನ್ನು ಬಯಸುವ, ಬಳಸುವ ಯಾವ ದೇಶವೂ ತನ್ನ ಈ ಗುಣಗಳನ್ನು ಅಳವಡಿಸಿಕೊಳ್ಳಬೇಕು; ತನ್ನ ದೋಷಗಳನ್ನು ವಿಶ್ಲೇಷಿಸಿಕೊಳ್ಳಬೇಕು. ನಮ್ಮ ನಡೆ ಘನವಾದರೆ ಆಗ ನಮ್ಮ ಕಾಲದ ಸಮಾಜವು ಹೆಮ್ಮೆಪಡಬಹುದು. ಇಲ್ಲವಾದರೆ ಕ್ಷಯಿಸುತ್ತಿರುವ ಈ ಗುಣಗಳ ಮೂಲಕ ನಮ್ಮತನ ಸಾಯುವುದನ್ನು ಕಾಣಬಹುದು. ಶೈಥಿಲ್ಯದ ವೇಗ ಗುರುತ್ವಾಕರ್ಷಣೆಯಂತೆ ತೀವ್ರವಾಗುತ್ತ ಹೋಗುತ್ತದೆಯೆಂಬುದನ್ನು ಮರೆಯಬಾರದು.

share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X