(ಭಾರತ) ದೇಶ ಅನಾಥವಾಗುತ್ತಿದೆಯೇ?

ಪ್ರಜ್ಞಾವಂತರೆನಿಸಿಕೊಂಡವರು, ಹಾಗೆಂದು ಎನಿಸಿಕೊಳ್ಳಬೇಕೆಂದಿರುವವರು, ಒಂದೋ ಭೋ ಪರಾಕ್ ನಡೆಸುತ್ತಿದ್ದಾರೆ ಇಲ್ಲವೇ ಸುಮ್ಮನಾಗಿದ್ದಾರೆ. ಪ್ರಶಸ್ತಿಗಳ ಮೋಹದಲ್ಲಿ ಮನೆಗೆ ಬೆಂಕಿ ಬಿದ್ದುದನ್ನು ಅದು ಮುಂದೆ ತನ್ನನ್ನೇ ಸುಡುವುದನ್ನೂ ಗಮನಿಸದ ಪ್ರಜ್ಞಾಹೀನ ಸ್ಥಿತಿಯಲ್ಲಿ ನಮ್ಮ ಬುದ್ಧಿಜೀವಿಗಳು ಇದ್ದಾರೆ; ಜೀವಸತ್ವವನ್ನು ಕಳೆದುಕೊಂಡಿದ್ದಾರೆ. ರಾಜಕಾರಣಿಗಳ ಕೈಯಲ್ಲಿ ದೇಶದ ಲಗಾಮನ್ನು ಎಷ್ಟು ಬೇಕೋ ಅಷ್ಟೇ ಕೊಡುವುದು ಪ್ರಜಾಪ್ರಭುತ್ವ. ಆದರೆ ಕುದುರೆ ಓಡಿಸಲು ತಿಳಿಯದವರ ಕೈಯಲ್ಲಿ ಲಗಾಮನ್ನು ಕೊಟ್ಟರೆ ಏನಾಗುತ್ತದೆಯೆಂಬುದು ಈಗಾಗಲೇ ಗೊತ್ತಾಗಿದೆ.
ಭಾರತ ಮಾತೆಯೋ ಪಿತನೋ ಒಂದೂ ಗೊತ್ತಾಗುತ್ತಿಲ್ಲ. ಆದ್ದರಿಂದ ಅಲಿಪ್ತಲಿಂಗ (ನಪುಂಸಕಲಿಂಗ ಎನ್ನಲು ಮನಸ್ಸು ಒಪ್ಪುತ್ತಿಲ್ಲ!) ಚಹರೆಯಾಗಿ ಉಲ್ಲೇಖಿಸಿದ್ದೇನೆ. ಏಕಪೋಷಕ (ಸಿಂಗಲ್ ಪೇರೆಂಟ್) ಯುಗದಲ್ಲಿ ದೇಶವೂ ಹೀಗೇ ಇರಬಹುದೇನೋ?
ಅರಮನೆಯಲ್ಲಿರುವವರೂ ಅಗ್ರಹಾರದಲ್ಲಿರುವವರೂ ಅರಣ್ಯದಲ್ಲಿರುವವರೂ ಹಾಡಿಯಲ್ಲಿರುವವರೂ ಒಂದೇ ರೀತಿಯ ಆತಂಕಗಳನ್ನು ಮತ್ತು ಮಿತಿಯೊಳಗಿನ ಅನುಕೂಲ, ಸುಖ-ದುಃಖ, ಕಷ್ಟಗಳನ್ನು ಎದುರಿಸುತ್ತಿದ್ದ ಮತ್ತು ಅದು ಬದುಕಿನ ಅನಿವಾರ್ಯಗಳಲ್ಲೊಂದೆಂದು ಭಾವಿಸುತ್ತಿದ್ದ ಕಾಲವೊಂದಿತ್ತು.
ಪ್ರಜೆಗಳ ಜೀವನವನ್ನೂ ಸಮಾಜದ ಅಸ್ತಿತ್ವವನ್ನೂ ಲಕ್ಷಣವನ್ನೂ ರಾಜಕೀಯ ಅಥವಾ ಆಡಳಿತವು ಎಂದಿನಿಂದಲೂ ಪ್ರಭಾವಿಸುತ್ತಿತ್ತು. ರಾಜನೇ ಪ್ರತ್ಯಕ್ಷದೇವನಾಗಿದ್ದ ಕಾಲವನ್ನು ಅಳಿಸಿ ಪ್ರಜೆಗಳೂ ದೇವರೆಂದು ಕಾಲವೇ ಭಾವಿಸುವಂತಹ ಪರಿವರ್ತನೆಗೆ ಸಮಾಜವು ಕಾದಿತ್ತು ಮತ್ತು ಅದು ಒಂದಿಷ್ಟು ಸಫಲವೂ ಆಯಿತು. ಆದರೆ ಈ ಪ್ರಜೆಗಳ ಮಧ್ಯದಿಂದ ಉದಿಸುವ ರಾಜರು ಹೆಚ್ಚು ಅಪಾಯಕಾರಿಯಾಗುತ್ತಿರುವುದು ಮಾತ್ರ ವಿಷಾದದ ಸಂಗತಿ.
ಭಾರತದ ರಾಜಕೀಯ ಸ್ವಾತಂತ್ರ್ಯಕ್ಕೆ ಮೊದಲು ಸಾಕಷ್ಟು ಶತಮಾನಗಳ ಕಾಲ ವಿದೇಶೀಯರ ಗುಲಾಮನಂತೆ ಈ ಭೂಪ್ರದೇಶ ಸಾಯಲಾರದೆ ಬದುಕಿತ್ತು. ಆನಂತರ ಒಂದು ಮಧ್ಯರಾತ್ರಿ ತ್ರಿವರ್ಣ ಧ್ವಜಾರೋಹಣದ ಮೂಲಕ ಇಲ್ಲೊಂದು ‘ಇಂಡಿಯಾ ಅರ್ಥಾತ್ ಭಾರತ’ ಸೃಷ್ಟಿಯಾಯಿತು. ಹೈದರಾಬಾದ್, ಗೋವಾವೂ ಸೇರಿದಂತೆ ಈ ಉಪಖಂಡದ ಇನ್ನುಳಿದ ಭೂಭಾಗಗಳು ಅಲ್ಲಲ್ಲೇ ಭಾರತವನ್ನು ಸೇರಿಕೊಂಡವು. ಕಾಶ್ಮೀರವು ಪಾಲಾಗಿ ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ವೂ ಸೃಷ್ಟಿಯಾಯಿತು; ಒಂದಷ್ಟು ಚೀನಾದ ಪಾಲಾಯಿತು; ಉಳಿದದ್ದು ನಮ್ಮಲ್ಲೇ ಉಳಿಯಿತು.
ಆನಂತರದ ಸುಮಾರು ಏಳು ದಶಕಗಳು ಭಾರತವು ಒಂದು ಜಾತ್ಯತೀತ ಸಮಾಜವಾದೀ ಪ್ರಜಾಪ್ರಭುತ್ವವೆಂದು ದೇಶೀಯವಾಗಿ, ಬಡದೇಶ, ಅಭಿವೃದ್ಧಿಶೀಲ ದೇಶವೆಂದು ಜಾಗತಿಕವಾಗಿ ಗುರುತಾಯಿತು. ವಿದೇಶದಿಂದ ಬೇಡಿ ತಂದ ಆಹಾರ ನಮ್ಮ ಬದುಕಾದದ್ದೂ ನಮ್ಮ ಸಂಪತ್ತು ಇತರರ ಪಾಲಾದದ್ದೂ ಉಂಟು. ಸಾಕಷ್ಟು ಭಾರತೀಯರು ಉನ್ನತಿಗಾಗಿ ವಿದೇಶಗಳಲ್ಲಿ ನೆಲೆನಿಂತರು. ಇಲ್ಲಿ ಬೃಹದಾಕಾರದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆಯಿಂದಾಗಿ ಹೀಗೆ ರಫ್ತಾದ ಮಂದಿ ದೇಶದ ಗಣನೆಗೆ ಸಿಗಲೇ ಇಲ್ಲ. ಅವರಲ್ಲಿ ಕೆಲವರಾದರೂ ಭಾರತದಲ್ಲಿರುವ ತಮ್ಮ ಮಣ್ಣಿಗೆ, ತಮ್ಮವರಿಗೆ ಹಣಕಳುಹಿಸಿದರು. ಅದು ದೇಶದ ಆಡಳಿತಕ್ಕೆ ಅಳಿಲ ಸೇವೆಯಾಯಿತು. ಅಶಕ್ತ ಪಾಕಿಸ್ತಾನದೊಂದಿಗೆ ಒಂದೆರಡು ಮತ್ತು ಶಕ್ತ ಚೀನಾದೊಂದಿಗೆ ಒಂದು, ಹೀಗೆ ಯುದ್ಧಗಳಾದವು. ಬಾಂಗ್ಲಾದೇಶವೆಂಬ ನೆರೆಯ ಸೃಷ್ಟಿಯಾಯಿತು. ಸಿಕ್ಕಿಂ ಎಂಬ ಸ್ವತಂತ್ರ ದೇಶವು ಭಾರತಕ್ಕೆ ಸೇರಿ ಒಂದು ರಾಜ್ಯವಾಯಿತು. ಇದೆಲ್ಲದರ ನಡುವೆ ಹಲವಾರು ಬದಲಾವಣೆಗಳಾದವು. ಸಣ್ಣ-ದೊಡ್ಡ ಉದ್ಯಮಗಳು, ಸಂಸ್ಥೆಗಳು ತಲೆಯೆತ್ತಿದವು. ಭಾರತವೆಂಬ ಭೂಭಾಗವು ಜಾಗತಿಕವಾಗಿ ಭಾರತದೇಶವಾಗಿ ಗುರುತಾಯಿತು. ನಮ್ಮದೇ ಕಟ್ಟುಕಟ್ಟಳೆಗಳಿಗೆ ನಾವು ಬದ್ಧವಾದೆವು.
ವರ್ತಮಾನದ ಬದಲಾವಣೆ ತೀವ್ರ ಮತ್ತು ಶೀಘ್ರ. ಜಾತಿ ಮತ್ತು ಭ್ರಷ್ಟಾಚಾರವೆಂಬ ಕೇಡುಗಳು ವ್ಯಾಪಕವಾಗಿ ದೇಶದ ಹಣೆಬರೆಹವನ್ನು ನಿರ್ಧರಿಸಿದರೂ ಇಂತಹ ಇನ್ನೊಂದು ಕೇಡಾದ ಮತವೆಂಬುದು ಗುರುತಿನ ಚೀಟಿಯಾಗಿರಲಿಲ್ಲ. ಇದನ್ನು ನಮ್ಮ ಕಲೆಗಳು ಮುಖ್ಯವಾಗಿ ಸಿನೆಮಾಗಳು ಪ್ರತಿಫಲಿಸಿದವು. ಬೆಳಗಾಯಿತೆಂಬುದನ್ನು ಸೂಚಿಸಬೇಕಾದರೆ ದೇವಸ್ಥಾನದ ಸುಪ್ರಭಾತ, ಇಗರ್ಜಿಯ ಗಂಟೆ, ಮಸೀದಿಗಳ ಪ್ರಾರ್ಥನೆ ಮುಂತಾದವು ಮೊಳಗುವುದು ಸಹಜವಾಗಿದ್ದವು. ಪಠ್ಯಗಳಲ್ಲಿ ಒಂದೇ ಮತಪ್ರಚಾರ ನಡೆಯುತ್ತಿರಲಿಲ್ಲ. ಎಲ್ಲ ರಾಜಕೀಯ ಪಕ್ಷಗಳು, ರಾಜಕಾರಣಿಗಳು ತಮ್ಮ ತಮ್ಮ ಬಗ್ಗೆ ವಿಸ್ತಾರವಾದ ಪ್ರಚಾರವನ್ನು ಕೈಗೊಂಡರೂ ಎರಚಿಕೊಳ್ಳುವುದಕ್ಕೆ ಬೇಕಾದಷ್ಟು ಕೆಸರು ಸೃಷ್ಟಿಯಾಗಿರಲಿಲ್ಲವಾದ್ದರಿಂದ ಪರಸ್ಪರ ಕೆಸರೆರಚಿಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದರು.
ಕಳೆದ ಒಂದು ದಶಕದಿಂದಾಚೆಗೆ ಈ ದೇಶದಲ್ಲಿ ಶಿಕ್ಷಣ, ಅಭಿವೃದ್ಧಿ, ಉದ್ಯೋಗ, ಅಗತ್ಯ ವಸ್ತುಗಳ ಬೆಲೆ ಇವು ಹಿಂದೆ ಸರಿದಿವೆ. ಮತಧರ್ಮ ರಾಜಕೀಯ ಮುನ್ನೆಲೆಗೆ ಬಂದು ನಿಂತಿದೆ. ತನ್ನ ಅಥವಾ ತನ್ನ ಇಷ್ಟದ ವ್ಯಕ್ತಿ ಅಥವಾ ಸಮೂಹದ ಅಧಿಕಾರವೇ ಬಹಳಷ್ಟು ಜನರಿಗೆ ಸರ್ವಸ್ವವಾಗಿದೆ. ಹೌದು. ಅಧಿಕಾರ ಒಬ್ಬನಲ್ಲೇ ಕೇಂದ್ರೀಕೃತವಾದರೂ ಆಡಳಿತ ಚೆನ್ನಾಗಿದ್ದರೆ ವೈಜ್ಞಾನಿಕ ಪ್ರಜ್ಞೆ ಜನರ ನಡುವೆ ಪ್ರವಹಿಸುವುದಾದರೆ ಅಂತಹ ಸರ್ವಾಧಿಕಾರವನ್ನೂ ಸಹಿಸಿಕೊಳ್ಳಬಹುದು. ಕರ್ನಲ್ ಗದ್ದಾಫಿ ಲಿಬಿಯಾದಲ್ಲಿ ಸರ್ವಾಧಿಕಾರಿಯಾಗಿದ್ದಾಗ ಅಲ್ಲಿ ಆದಾಯಕರವಿರಲಿಲ್ಲ, ಶಿಕ್ಷಣ ಉಚಿತವಾಗಿತ್ತೆಂಬುದನ್ನು ಮತ್ತು ಜನರು ಗುಲಾಮರಾದರೂ ತಮ್ಮ ಗುಲಾಮೀತನವನ್ನು ಸಹಿಸಿಕೊಳ್ಳುತ್ತಿದ್ದರೆಂಬುದನ್ನು ಮತ್ತು ಆತ ಬಲಿಯಾದದ್ದು ಅಮೆರಿಕದ ಸಂಚಿಗೇ ಹೊರತು ತನ್ನ ಪ್ರಜೆಗಳ ಅಸಮಾಧಾನಕ್ಕೆ ಅಲ್ಲ ಎಂಬುದನ್ನು ನೆನಪಿಸಬಹುದು. ಪ್ರಾಯಃ ಮನುಷ್ಯನಿಗೆ ಈ ಮತ್ತು ಇಂತಹ ಪ್ರಾಣಿಜನ್ಯ ಗುಣವೇ ಒಳಿತೆನ್ನಿಸುತ್ತದೆಯೇನೋ?
ಭಾರತದಲ್ಲಿ ಇಂತಹ ಒಳಿತು ಕೂಡಾ ಇಲ್ಲದಾದಾಗ ಯೋಚಿಸಬಲ್ಲವರಿಗೆ ಆತಂಕವಾಗುವುದು ಸಹಜ. ಇತ್ತೀಚೆಗಿನ ಬೆಳವಣಿಗೆಗಳು ಒಂದಿಷ್ಟು ಭರವಸೆಗಳನ್ನು ನೀಡುತ್ತಿವೆ. ಆದರೆ ಅಷ್ಟೇ ಅಲ್ಲ ಎಂಬುದನ್ನು ಮುಂದೆ ಗಮನಿಸೋಣ.
ಮೊನ್ನೆ ಮೊನ್ನೆ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯು ಸೋರಿಹೋದದ್ದನ್ನು ಪ್ರತಿಭಟಿಸಿ ಜಂತರ್-ಮಂತರ್‌ನ ಮಾಟದಲ್ಲಿ ವಿದ್ಯಾರ್ಥಿಸಾಗರವನ್ನು ಸೇರಿಸಿದ್ದು ಬಹುದೊಡ್ಡ ಸಾಧನೆ. ಅದನ್ನು ನಿರ್ಲಕ್ಷಿಸುವ ಹಠದಲ್ಲಿ ತೊಡಗಿದ್ದ ಕೇಂದ್ರ ಸರಕಾರವು ಕೊನೆಗೂ ಅನಿವಾರ್ಯವಾಗಿ ಶಿಕ್ಷಣ ಸಚಿವರನ್ನು ಬಲಿಕೊಟ್ಟಿತು. ಆದರೆ ಅದಕ್ಕೆ ಮೊದಲು ನಡೆದ ಘಟನಾವಳಿ ನಾಚಿಕೆಗೇಡಿನ ವಿಚಾರ. ರಾಜಕಾರಣಿಗಳ ಅಧಿಕಾರ ಮೋಹ ಮತ್ತು ಲೋಲುಪತೆಗೆ ಪೊಲೀಸ್ ಕ್ರೌರ್ಯವು ಆಧಾರವಾಯಿತು; ಅದರ ಮೂಲಕ ಪ್ರತಿಭಟನಾಕಾರರ ಮೇಲೆ ವ್ಯಾಪಕ ಹಿಂಸೆ ನಡೆಯಿತು. ತಮ್ಮದೇ ಮಕ್ಕಳ ಭಾವನೆಗಳಿಗೆ ಬೆಲೆಕೊಡಲು ಅಧಿಕಾರ ರಾಜಕಾರಣ ಅಡ್ಡಿಯಾಯಿತು. ಅದೀಗ ಸರ್ವೋಚ್ಚ ನ್ಯಾಯಾಲಯದಲ್ಲಿರುವುದರಿಂದ ಆ ಕುರಿತು ಹೆಚ್ಚು ಹೇಳಹೋದರೆ ಅದು ನಮ್ಮ ಮಾಧ್ಯಮಗಳ ಹಾಗೆ ಊಹಾಪೋಹಗಳ ಪ್ರಪಂಚವಾದೀತು. ಆದರೆ ದೇಶದ ಪ್ರಧಾನಿ ಪ್ರತಿಭಟನಾಕಾರರಲ್ಲಿ ದೇಶದ ಪರವಾಗಿ ಕ್ಷಮೆ ಯಾಚಿಸುವುದರ ಬದಲಾಗಿ ತಾನು ಈ ಪ್ರತಿಭಟನಾಕಾರರನ್ನು ಕ್ಷಮಿಸಿದ್ದೇನೆಂದು ಹೇಳುವಾಗ ಅವರ ಅವಿವೇಕತನ ತನ್ನ ಪರಮಾವಧಿ ನೆಲೆಯನ್ನು ಕಂಡುಕೊಂಡಿತು. ಇದು ನ್ಯಾಯವಾದರೆ ಹಿಟ್ಲರ್ ತಾನು ಜಗತ್ತನ್ನೇ ಕ್ಷಮಿಸಿದ್ದೇನೆಂದು ಹೇಳಿ ತನ್ನ ಅಪರಾಧ ಪ್ರಜ್ಞೆಯಿಂದ ಮುಕ್ತನಾಗಬಹುದಿತ್ತು!
ಆದರೆ ಸರಕಾರವು ಸೋತರೂ ಮೀಸೆಗೆ ಮಣ್ಣಾಗಲಿಲ್ಲವೆಂಬ ಲಹರಿಯಲ್ಲಿದೆ. ಕಳೆದ ಒಂದು ದಶಕಕ್ಕೂ ಮೀರಿದ ಆಡಳಿತಾವಧಿಯಲ್ಲಿ ಅಜೇಯರಾಗಿ ಉಳಿದ ಮೋದಿಗೆ ಇದು ಹಿಮಾಲಯ ಸೋಲು. ಸತತ ನೆಹರೂ-ಗಾಂಧಿಗಳನ್ನು ಬೈದೇ ಅಧಿಕಾರವನ್ನು ಮುಂದುವರಿಸಿಕೊಂಡು ಬಂದ ಕೇಂದ್ರ ಸರಕಾರಕ್ಕೆ ಈಗ ಜಂತರ್-ಮಂತರ್ ಮಾಟದಲ್ಲಿ ಅಂತರಾಳದ ಆಟ ಆರಂಭವಾಗಿದೆ, ತಾನುಳಿಯಬೇಕೋ ಪಕ್ಷ ಉಳಿಯಬೇಕೋ ದೇಶ ಉಳಿಯಬೇಕೋ ಎಂಬ ಪ್ರಶ್ನೆಗಳನ್ನು ಹಾಕಲು ಮೋದಿಗೂ ಅವರ ಅಪಾರ ಬೆಂಬಲಿಗರಿಗೂ ಸರಕಾರಕ್ಕೂ ಇದರಿಂದ ಒಳ್ಳೆಯ ಅವಕಾಶವು ಇನ್ನು ಸಿಗದು. ಇದನ್ನು ಅಲಕ್ಷಿಸಿದರೆ ಮುಂದೆ ಇದು ದೇಶಾದ್ಯಂತ ಹರಡಿ ಗ್ಯಾಂಗ್ರೀನ್ ಆಗಬಹುದೆಂಬ ಮುನ್ನೆಚ್ಚರಿಕೆ ಸರಕಾರದ ಎದುರಿದೆ.
ಇದನ್ನು ಪುಷ್ಟೀಕರಿಸುವಂತೆ ಬಿಹಾರದ ಚುನಾವಣೆ ಉತ್ತರಿಸಿದೆ. ಕೇಂದ್ರ ಸಚಿವರುಗಳು ಮೋದಿಯ ಹೆಸರಿನಲ್ಲಿ ನಾಯಿ-ಬೆಕ್ಕುಗಳೂ ಚುನಾವಣೆಯಲ್ಲಿ ಗೆಲ್ಲಬಹುದೆಂಬ ಭ್ರಮಾಲೋಕದಲ್ಲಿರುವಾಗ ಕೀರ್ತಿಯ ಬೊಟ್ಟಿನಂತಿದ್ದ ಪ್ರತಿಷ್ಠಿತ ಕ್ಷೇತ್ರವೊಂದು ಕೈಬಿಟ್ಟಿದೆ. ಒಟ್ಟಾರೆ ದೇಶದಲ್ಲಿ ನಡೆದ ಮೂರು ಕ್ಷೇತ್ರಗಳಲ್ಲಿ ಆಡಳಿತ ಪಕ್ಷವು ಒಂದು ಸ್ಥಾನವನ್ನಷ್ಟೇ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ವಿದ್ಯಾರ್ಥಿಗಳ ಈ ಮಹಾಂದೋಲನವನ್ನು ಗಮನಿಸಿಯೂ ಮೋದಿಯವರ ರಥವು ಎತ್ತ ಸಾಗುತ್ತಿದೆಯೆಂಬುದನ್ನು ಕಂಡುಹಿಡಿಯಲು ಮತ್ತು (ಅವರ) ಆಡಳಿತವನ್ನು ವಿಶ್ಲೇಷಿಸುವಲ್ಲಿ, ವಿಮರ್ಶಿಸುವಲ್ಲಿ, ಜನ ಸೋತಿದ್ದಾರೆ. ಸುರಕ್ಷಿತ ವಿಧಾನವನ್ನು ಅನುಸರಿಸುವುದು ಭಾರತೀಯರ ಜೀವನವಿಧಾನವಾಗಿದೆ. ಇದರಿಂದಾಗಿ ಸಾಮಾಜಿಕ ಸ್ಥಾನಮಾನಗಳನ್ನು ಪಡೆಯಬಲ್ಲ ಸಾಮಾಜಿಕ ಹಿತವನ್ನು ಬಯಸಬೇಕಾದವರು ಸಾಷ್ಟಾಂಗ ನಮಸ್ಕಾರದ ಭಂಗಿಯಲ್ಲಿ ಕವುಚಿ ಬಿದ್ದು ಅಲ್ಲಿಂದ ಮತ್ತು ಅಲ್ಲೇ ತೆವಳುತ್ತ ಯೋಗದಿನಾಚರಣೆಯನ್ನು ಮಾಡುತ್ತಿದ್ದಾರೆ.
ಇಷ್ಟು ದಿನ ಈ ವೈಕುಂಠ ಎಂದು ಹಾಡುತ್ತ ಬಂದಿದ್ದ ದಾಸರು, ದಾಸಾನುದಾಸರಾಗಿ ಲಕ್ಷ್ಮೀಕಟಾಕ್ಷಕ್ಕಾಗಿ ಅಧಿಕಾರಸಿಂಹಾಸನಕ್ಕೆ ದುಂಬಾಲು ಬೀಳುತ್ತಿರುವುದು ವಿಶೇಷ. ತಪ್ಪುದಾರಿಗೆ ಜಾರುತ್ತಿರುವವರನ್ನು ತಿದ್ದಬೇಕಾದವರೆಲ್ಲ ತಮ್ಮ ರೊಟ್ಟಿ ಜಾರಿ ತುಪ್ಪಕ್ಕೆ ಬೀಳುವ ಆಸೆಯನ್ನು ಇನ್ನೂ ಇಟ್ಟುಕೊಂಡಿದ್ದಾರೆ. ಅದೀಗ ಅಮೇಧ್ಯದ ಗುಂಡಿಗೆ ಬೀಳಬಹುದೆಂಬ ಊಹೆ ಜನರಿಗಿಲ್ಲ.
ನ್ಯಾಯಾಂಗವು ಈಗ ನಿಜಕ್ಕೂ ತಕ್ಕಡಿಯಂತಿದೆ. ಒಂದು ವಿಪರೀತದಿಂದ ಇನ್ನೊಂದು ವಿಪರೀತಕ್ಕೆ ಸಾಗುತ್ತಿದೆ. ಎಲ್ಲರಿಗೂ ಒಂದೇ ರೀತಿ-ನೀತಿಯಲ್ಲಿ ಅನ್ವಯಿಸಬೇಕಾದ ಕಾನೂನು ತನ್ನದೇ ಆದ ವ್ಯತ್ಯಸ್ತತೆಗಳನ್ನು ಕಾಪಾಡಿಕೊಂಡಿದೆ. ಇಷ್ಟವಾದಲ್ಲಿ ಸಂವಿಧಾನದ 142ನೇ ವಿಧಿಯನ್ವಯವೂ ನ್ಯಾಯಕೊಡಿಸಬಹುದಾದ ಸರ್ವೋಚ್ಚ ನ್ಯಾಯಾಲಯವು ವರ್ಷಾನುಗಟ್ಟಲೆ ಬಂಧನದಲ್ಲಿರುವ, ಇನ್ನೂ ವಿಚಾರಣೆಯನ್ನು ಎದುರಿಸದಿರುವ, ಸೈದ್ಧಾಂತಿಕ ನೆಲೆಯಲ್ಲಿ ಅಪರಾಧಿಗಳಾದ ಪತ್ರಕರ್ತರನ್ನು, ಜೆಎನ್‌ಯು ಹೋರಾಟಗಾರರನ್ನು ಮತಧರ್ಮಕ್ಕನುಗುಣವಾಗಿ ತಾರತಮ್ಯ ಧೋರಣೆಗೆ ಬಲಿಯಾಗಿಸಿದೆ.
ಆದರೆ ಇದಿಷ್ಟೇ ದೇಶದ ಭವಿಷ್ಯವನ್ನು ಕಾಡುತ್ತಿದೆಯೆಂದು ತಿಳಿದರೆ ತಪ್ಪಾದೀತು. ಪ್ರಜ್ಞಾವಂತರೆನಿಸಿಕೊಂಡವರು, ಹಾಗೆಂದು ಎನಿಸಿಕೊಳ್ಳಬೇಕೆಂದಿರುವವರು, ಒಂದೋ ಭೋ ಪರಾಕ್ ನಡೆಸುತ್ತಿದ್ದಾರೆ ಇಲ್ಲವೇ ಸುಮ್ಮನಾಗಿದ್ದಾರೆ. ಪ್ರಶಸ್ತಿಗಳ ಮೋಹದಲ್ಲಿ ಮನೆಗೆ ಬೆಂಕಿ ಬಿದ್ದುದನ್ನು ಅದು ಮುಂದೆ ತನ್ನನ್ನೇ ಸುಡುವುದನ್ನೂ ಗಮನಿಸದ ಪ್ರಜ್ಞಾಹೀನ ಸ್ಥಿತಿಯಲ್ಲಿ ನಮ್ಮ ಬುದ್ಧಿಜೀವಿಗಳು ಇದ್ದಾರೆ; ಜೀವಸತ್ವವನ್ನು ಕಳೆದುಕೊಂಡಿದ್ದಾರೆ. ರಾಜಕಾರಣಿಗಳ ಕೈಯಲ್ಲಿ ದೇಶದ ಲಗಾಮನ್ನು ಎಷ್ಟು ಬೇಕೋ ಅಷ್ಟೇ ಕೊಡುವುದು ಪ್ರಜಾಪ್ರಭುತ್ವ. ಆದರೆ ಕುದುರೆ ಓಡಿಸಲು ತಿಳಿಯದವರ ಕೈಯಲ್ಲಿ ಲಗಾಮನ್ನು ಕೊಟ್ಟರೆ ಏನಾಗುತ್ತದೆಯೆಂಬುದು ಈಗಾಗಲೇ ಗೊತ್ತಾಗಿದೆ.
ಹಾಗೆಂದು ಇತರ ರಾಜಕೀಯ ಪಕ್ಷಗಳೂ ಅಷ್ಟೇನೂ ಭರವಸೆ ಹುಟ್ಟಿಸುತ್ತಿಲ್ಲ. ಅವರಿಗೂ ಪ್ರಜೆಗಳ ಕ್ಷೇಮವಾಗಲೀ ಹಿತವಾಗಲೀ ಮುಖ್ಯವೆನಿಸುತ್ತಿಲ್ಲ. ಈಗ ಆಡಳಿತ ನಡೆಸುವವರನ್ನು ಇಳಿಸಿ ತಾವು ಅಧಿಕಾರ ಸೂತ್ರವನ್ನು ಹಿಡಿಯಬೇಕೆಂಬ ಆತುರದ ಹೊರತಾಗಿ ಬೇರೇನೂ ಇರುವಂತಹ ವಾತಾವರಣವಿಲ್ಲ. ಎಲ್ಲ ಪಕ್ಷಗಳೂ ಉಳಿದಿರುವುದು ಅಧಿಕಾರಮೋಹದ ರಾಜಕಾರಣಿಗಳಿಂದ ಹೊರತು ದೇಶಪ್ರೇಮಿಗಳಿಂದಲ್ಲ. ಮೊನ್ನೆಯ ವಿದ್ಯಾರ್ಥಿ ಪ್ರತಿಭಟನೆಯಲ್ಲೂ ಹೀಗೇ ಆಗಿದೆ. ಅವರಿಗೆ ಮುಂದಾಳುತನ ನೀಡುವುದರ ಬದಲಾಗಿ ಅವರ ಮೂಲಕ ಅಧಿಕಾರದ ಗದ್ದುಗೆಯನ್ನೇರುವುದು ಹೇಗೆಂಬ ಚಿಂತಾಕ್ರಾಂತಿಯನ್ನು ಪ್ರತಿಪಕ್ಷಗಳ ರಾಜಕಾರಣಿಗಳು ಯೋಚಿಸುತ್ತಿದ್ದರು; ಯೋಜಿಸುತ್ತಿದ್ದರು. ವಿದ್ಯಾರ್ಥಿಗಳು ಚುನಾವಣಾ ವಸ್ತುಗಳಲ್ಲ. ಸಮಸ್ಯೆಗಳನ್ನು ಎದುರಿಸಲು ಯೋಜಿಸಬೇಕಾದ ಪ್ರತಿಪಕ್ಷ ರಾಜಕಾರಣಿಗಳು ಸಂಸತ್ತಿನಲ್ಲಿ ಇಂತಹ ಸ್ಫೋಟಕ ವಿಷಯಗಳನ್ನೆತ್ತಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾತರರಾಗಿದ್ದಾರೆ. ಇದನ್ನು ಪರಿಶೀಲಿಸಬೇಕಾದರೆ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ಗಮನಿಸಬೇಕು. ಅಲ್ಲೂ ಇನ್ನೊಬ್ಬರನ್ನು ಕೆಡಹುವುದಕ್ಕೆ ಬೇಕಾದ ವ್ಯೆಹ ರಚನೆಯಾಗುತ್ತಿದೆಯೇ ವಿನಾ ಜನಹಿತವಲ್ಲ ವಿದ್ಯಾರ್ಥಿ ಹಿತವಂತೂ ಅಲ್ಲ. ಕರ್ನಾಟಕದ ರಾಜಕೀಯವೂ ಇದಕ್ಕೆ ಹೊರತಲ್ಲ. ಪಂಜಾಬ್‌ನ ರಾಜಕೀಯವೂ ಬೇರಲ್ಲ. ಉತ್ತಮ ಪ್ರಭುತ್ವಕ್ಕೆ ತಿಲಾಂಜಲಿಯಿಟ್ಟ ಪಕ್ಷಗಳು ‘ಹೇಗಾದರೂ’ ಅಧಿಕಾರಕ್ಕೆ ಬರುತ್ತವೆ; ಅದೇ ರೀತಿ ‘ಹೇಗಾದರೂ’ ಅಧಿಕಾರ ನಡೆಸುತ್ತವೆ. ಪ್ರಜೆಗಳ ಮಾತಿಗೆ, ಅಭಿಪ್ರಾಯಕ್ಕೆ ಬೆಲೆಯಿಲ್ಲ; ಪ್ರಜೆಗಳನ್ನು ಪ್ರತಿನಿಧಿಸುತ್ತಾರೆಂದು ನಂಬಲಾದ ಶಾಸಕರಿಗೂ ಯಾವ ಬೆಲೆಯೂ ಇಲ್ಲ. ಅವರು ಕೇವಲ ಸಂಖ್ಯಾಬಲವಾಗಿದ್ದಾರೆ. ನಾವು ನೋಡುವಂತೆ ಶಾಸಕರ ಬೆಂಬಲವಿದ್ದರೂ ಒಬ್ಬ ರಾಜಕಾರಣಿ ನಾಯಕನಾಗಲಾರ ನಾಯಕನಾದರೂ ಅಧಿಕಾರದಲ್ಲಿ ಉಳಿಯಲಾರ. ಆತನಿಗೆ ‘ಹೈಕಮಾಂಡ್’ ಎಂಬ ನೇಪಥ್ಯದ ‘ಅದೃಶ್ಯಹಸ್ತ’ದ ಆಶೀರ್ವಾದವೇ ಶ್ರೀರಕ್ಷೆಯಾಗುತ್ತದೆ.
ಆದ್ದರಿಂದ ಉತ್ತಮ ಆಡಳಿತವೆಂಬುದು ನೀರ ಮೇಲಣ ಗುಳ್ಳೆ; ಯಾರೋ ಒಬ್ಬರನ್ನು ಅಥವಾ ಒಂದು ಸಮೂಹವನ್ನು ಎತ್ತಿ ಹಿಡಿಯಿರಿ, ಆತ ನಿಮ್ಮನ್ನು ತುಳಿಯುವುದಕ್ಕೆ ಅನುವು ಮಾಡಿಕೊಡಿ.
ಇಂತಹ ರಾಜಕಾರಣದ ಮಧ್ಯೆ ಭಾರತವೆಂಬ ಈ ದೇಶಕ್ಕೆ ಗತಿಯಿಲ್ಲದಾಗುತ್ತಿದೆ. ಎಂದೋ ಪುರಾಣಕಾಲದಲ್ಲಿ ರಾಮಾಯಣದ ಕವಿಗಳ ಭಾರದಲ್ಲಿ ಫಣಿರಾಯ ತಿಣಿಕಿದನಂತೆ. ಈಗ ಈ ರಾಜಕಾರಣಿಗಳ ಭಾರದಲ್ಲಿ ಭಾರತ ದೇಶವೇ ತಿಣುಕುತ್ತಿದೆ. ಶ್ರೀಮಂತರ ಪಾದದಡಿ ದೇಶ ಬಡವಾಗುತ್ತಿದೆ. ಅನಾಥವಾಗುತ್ತಿದೆ. ಪಾರುಮಾಡಬಲ್ಲವರು ಬೇಕಾಗಿದ್ದಾರೆ.






