ಸಾಹಿತ್ಯ ಮತ್ತು ಬೌದ್ಧಿಕತೆ

ತುಂಬ ದಿನಗಳಿಂದ ತಲೆ ತಿನ್ನುವ ವಿಚಾರವೊಂದನ್ನು ಮಂಡಿಸುತ್ತಿದ್ದೇನೆ. ಸಾಹಿತ್ಯದ ಪರಿಚಯವಿರುವವರು ಒಟ್ಟು ಸಮಾಜದಲ್ಲಿ ತೀರಾ ಸಣ್ಣ ಸಂಖ್ಯೆಯ ಜನ. ಆದರೂ ಅದು ಯಾಕೋ ಗೊತ್ತಿಲ್ಲ, ಸಾಹಿತಿಗಳೆಲ್ಲ ಬುದ್ಧಿವಂತರು ಇಲ್ಲವೇ ಬುದ್ಧಿಜೀವಿಗಳು ಎಂಬ ಭ್ರಮೆ ಜನರಲ್ಲಿದೆ. ಜನರೆನ್ನುವಾಗ ಮೊದಲು ಹೇಳಿದ ಅಲ್ಪಸಂಖ್ಯಾತರೆಂದು ನೆನಪಿಟ್ಟುಕೊಳ್ಳಬೇಕು. ಅವರೂ ಮನುಷ್ಯರು, ಅವರಿಗೂ ಮನುಷ್ಯಸಹಜ ದೋಷ ದುಮ್ಮಾನಗಳಿವೆ ಎಂದು ತಿಳಿಯುವವರು ಕಡಿಮೆ.
ಅದು ಯಾಕೋ ಗೊತ್ತಿಲ್ಲ ಎಂದರೂ ನನ್ನ ಮನಸ್ಸಿನಲ್ಲಿ ಕೆಲವು ನಂಬಿಕೆಗಳಿವೆ. ಇವನ್ನು ನಂಬಿಕೆಗಳು ಎಂದರೂ ಸರಿಯೆ, ಸಂದೇಹಗಳು ಎಂದರೂ ಸರಿಯೆ. ಇವೊಂದು ರೀತಿಯಲ್ಲಿ ಅರ್ಧ ಖಾಲಿ-ಅರ್ಧ ತುಂಬಿದ ಎಂದಂತೆ ಅಥವಾ ಆಳ-ಎತ್ತರ ಎಂದಂತೆ. ಗ್ರಹಿಕೆ ಅಷ್ಟೇ.
ಜ್ಞಾನಪೀಠ ಎಂಬುದನ್ನು ಸಾಹಿತ್ಯಕ್ಕೆ ಮಾತ್ರ ನೀಡುತ್ತಾರಲ್ಲ, ಯಾಕೆ? ಸಂಗೀತ, ವಿಜ್ಞಾನ, ಕ್ರೀಡೆ, ಕಾನೂನು ಇತ್ಯಾದಿ ಜ್ಞಾನಶಾಖೆಗಳಲ್ಲವೇ? ಆದರೂ ಜ್ಞಾನಪೀಠ ಎಂಬುದು ಸಾಹಿತ್ಯಕ್ಕೆ ಅಂಟಿದ ಒಂದು ಬಿರುದು-ಬಾವಲಿ. ಒಂದು ಖಾಸಗಿ ಸಂಸ್ಥೆ ಇದನ್ನು ಕೊಡುವುದರಿಂದ ಅವರಿಷ್ಟಾನಿಷ್ಟಕ್ಕೆ ತಕ್ಕಂತೆ ಹೆಸರಿಟ್ಟಿದ್ದಾರಾದರೂ ಅದು ಗಳಿಸಿದ ಪ್ರಚಾರದಿಂದಾಗಿ ಭಾರತೀಯ ಸಮಾಜದಲ್ಲಿ ಅದರಲ್ಲೂ ಎಳೆ ಮನಸ್ಸುಗಳಲ್ಲಿ ಈಗಾಗಲೇ ಸಾಕಷ್ಟು ಹಾನಿಯನ್ನುಂಟುಮಾಡಿದೆ. ಸಿ.ವಿ. ರಾಮನ್ ಆಗಲೀ, ಬರೆಯದಿರುವ ಯಾವ ಮೇಧಾವಿಯಾಗಲೀ ಜ್ಞಾನಿಗಳು ಎಂಬ ಸಾಮಾನ್ಯ ತಿಳಿವಳಿಕೆ ನಮ್ಮ ಎಳೆಯರಿಗಿಲ್ಲ. ಇದಕ್ಕೆ ಸಹಕಾರಿಯಾಗಿ ಶಾಲಾ -ಕಾಲೇಜುಗಳಲ್ಲಿ ಅವರ ಭಾವಚಿತ್ರಗಳನ್ನು ನೇತಾಡಿಸುವುದು ಅಧಿಕೃತವಾಗಿದೆ. ಈ ಪೀಠಿಗಳನ್ನು ಪರಿಚಯಿಸುವುದೇ ಜ್ಞಾನಪೀಠ ಪ್ರಶಸ್ತಿ ವಿಜೇತ ಎಂದೇ. ಹಾಗೆ ನೋಡಿದರೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ನಿಜಕ್ಕೂ ಸಾಹಿತ್ಯದ ಮಟ್ಟಿಗೆ ದೇಶದ ಅಧಿಕೃತ ಮನ್ನಣೆ. ಹೀಗೆ ಇತರ ಅಕಾಡಮಿಗಳ ಪ್ರಶಸ್ತಿಗಳೂ ಅಧಿಕೃತವೇ. ಕೆಲವು ರಾಜ್ಯಗಳು ನೀಡುವ ಕಾಳಿದಾಸ್ ಸಮ್ಮಾನ್ ಮುಂತಾದ ಪ್ರಶಸ್ತಿಗಳು ಅಧಿಕೃತವೇ. ಹಾಗಾದರೆ ಈ ಜ್ಞಾನಪೀಠವು ಈ ಅಧಿಕೃತ ಮನ್ನಣೆಗಿಂತ ದೊಡ್ಡದು ಅನ್ನಿಸುವುದೇಕೆ? ಅನ್ನಿಸದವರು ಅದೃಷ್ಟವಂತರು; ಬುದ್ಧಿವಂತರು. ಇದೇ ಸಮಸ್ಯೆ ನೊಬೆಲ್, ಬೂಕರ್ ಮತ್ತಿತರ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳಿಗೂ ಇವೆ.
ಸಾಹಿತಿಗಳು ಅನಭಿಷಿಕ್ತ ಜನಪ್ರತಿನಿಧಿಗಳು ಎನ್ನುತ್ತೇವೆ. ಅನಧಿಕೃತ ಎಂದಾಗಬೇಕಿತ್ತೇನೋ ಗೊತ್ತಿಲ್ಲ. ಆದರೆ ಜನಮನ್ನಣೆ ಮತ (ವೋಟ್) ಗಳಾಗಿ ಪರಿವರ್ತನೆಯಾಗುವುದಿಲ್ಲ ಮತ್ತು ಈ ಅನಭಿಷಿಕ್ತತೆ ಒಂದು ಪುಟ್ಟ ಸಮುದಾಯದ್ದು ಎಂದು ಅರ್ಥವಾದರೆ ನಮ್ಮ ಅಂದರೆ ಸಾಹಿತಿಗಳ ಮತ್ತು ಅಭಿಮಾನಿಗಳ ಮಿತಿ ಗೊತ್ತಾಗುತ್ತದೆ. ಆಗ ನಮಗೆ ಶಿವರಾಮ ಕಾರಂತರಾಗಲೀ, ಅಡಿಗರಾಗಲೀ ಚುನಾವಣೆಗಳಲ್ಲಿ ಸೋತದ್ದು ದೊಡ್ಡ ವಿಷಯವೆನ್ನಿಸುವುದಿಲ್ಲ. ಸಾಹಿತ್ಯಕ್ಕೂ ಮಿತಿಯಿದೆ ಮತ್ತು ಅದು ಬದುಕಿಗಿಂತ ದೊಡ್ಡದಲ್ಲ ಎಂದು ತಿಳಿದರೆ ಬಹುತೇಕ ಸಮಸ್ಯೆಗಳು ಬಗೆಹರಿಯಬಹುದು.
ಪ್ರಾಯಃ ಸಾಹಿತ್ಯದಿಂದ ಸಿಗುವ ಅಗ್ಗದ ಪುಟ್ಟ ಜನಪ್ರಿಯತೆಯೇ ಈ ಸಮಸ್ಯೆಗೆ ಕಾರಣವಿರಬಹುದು. ನಮ್ಮ ಸಾಹಿತ್ಯ ಸಮ್ಮೇಳನಗಳಲ್ಲಿ ಬಲಿಪಶುವಿನಂತೆ ಮೆರವಣಿಗೆಗೊಳ್ಳುವುದನ್ನು ನಾವು ಜನಪ್ರಿಯತೆಯೆಂದು ತಿಳಿಯುತ್ತೇವೆ. ಅದನ್ನು ದಿನಪತ್ರಿಕೆಯಂತೆ ಜನರು ಮರುದಿನ ಮರೆತು ತಮ್ಮ ದೈನಂದಿನ ಕಾಯಕದಲ್ಲಿ ತೊಡಗಿಕೊಳ್ಳುವುದನ್ನು ನೋಡಿದರೆ ನಮಗೆ ಈ ಜನಪ್ರಿಯತೆಯ ಅರ್ಥ ಗೊತ್ತಾಗಬಹುದು. ದೇವಸ್ಥಾನದ ಜಾತ್ರೆಯಲ್ಲಾದರೂ ಅದೇ ದೇವರನ್ನು ವರ್ಷಂಪ್ರತಿ ಮತ್ತೆ ಮತ್ತೆ ಮೆರವಣಿಗೆಗೊಳಿಸುತ್ತೇವೆ. ಸಾಹಿತಿಗಳಿಗೆ ಈ ಭಾಗ್ಯವಿಲ್ಲ. ಅವರಿಗೆ ಕಳೆದ ಬಾರಿ ಅವಕಾಶ ನೀಡಿದ್ದೇವೆ. ಇನ್ನು ಹೊಸಬರನ್ನು ಹುಡುಕೋಣ ಎನ್ನುವ ಸಹಜ ನೀತಿಯಿಂದಾಗಿ ಈ ಜನಪ್ರಿಯತೆಯು ಎಷ್ಟು ಕ್ಷಣಿಕವೆಂದು ಗೊತ್ತಾಗುತ್ತದೆ. ಅಂದರೆ ಸಾಹಿತಿಗೆ ಸಿಗುವ ಗೌರವವು ಶಾಶ್ವತವಾದದ್ದಲ್ಲ, ಮನ್ನಣೆಯು ಆತನ ಏಕಸ್ವಾಮ್ಯವಲ್ಲ, ಒಂದು ವೇಳೆ ಗೌರವ ಸಿಕ್ಕಿದರೂ ಅದು ಸಾಹಿತ್ಯಕ್ಕೇ ಹೊರತು ಸಾಹಿತಿಗಲ್ಲ ಎಂದು ತಿಳಿಯಬಹುದು.
ಕೃತಿಗಳನ್ನು ಓದುತ್ತೇವೆ. ಒಳ್ಳೆಯ ಸಾಹಿತ್ಯವೆಂದು ಗುರುತಿಸುತ್ತೇವೆ, ಆದರೆ ಜನಪ್ರಿಯತೆಗೆ ಅದೇ ಮಾನದಂಡವಲ್ಲವೆಂಬುದು ನಿರ್ವಿವಾದ. ಸಾಹಿತಿಯ ಜನಪ್ರಿಯತೆ ಗೊತ್ತಾದ ಸಂದರ್ಭಗಳಲ್ಲಿ ಮಾತ್ರ. ಒಬ್ಬ ರಾಜಕಾರಣಿ ಬಂದಾಗ ಸಾಹಿತ್ಯ ಅಂತಲ್ಲ ಸಮಾಜದಲ್ಲಿ ಯಾವುವು ವಿಶೇಷ ಕ್ಷೇತ್ರಗಳೆಂದು ಗುರುತಾಗಿವೆಯೋ ಅವೆಲ್ಲ ಮತ್ತು ಅವರೆಲ್ಲ, ಹಿಂದೆ ಸರಿಯುತ್ತವೆ. ಕುಲಪುರೋಹಿತರಿಗೆ ಶರಣೆನ್ನುವ, ಆಸ್ಥಾನ ವಿದ್ವಾಂಸರನ್ನು ಗೌರವಿಸುವ ಅರಸ ಉಳಿದ ಸಂದರ್ಭಗಳಲ್ಲಿ ಅದೇ ಪುರೋಹಿತರು, ವಿದ್ವಾಂಸರು, ಆಡಳಿತದಲ್ಲಿ ಮೂಗು ತೂರಿಸುವುದನ್ನು ಸಹಿಸುವುದಿಲ್ಲ. ತನ್ನೆಲ್ಲ ಕಲಾಭಿಮಾನ, ಧರ್ಮಾಭಿಮಾನದೊಂದಿಗೂ ಆತ ತನ್ನ ನಿರ್ಧಾರದೊಂದಿಗೆ ರಾಜಿಮಾಡಿಕೊಳ್ಳುವುದಿಲ್ಲ. ಇದು ರಾಜಸತ್ತೆಯಲ್ಲಿಯೂ ಇಂದಿನ ಪ್ರಜಾತಂತ್ರದಲ್ಲೂ ಒಂದೇ ನೀತಿಯಾಗಿ ಉಳಿದಿದೆಯೆಂದರೆ ಒಂದು ಐತಿಹಾಸಿಕ ಸತ್ಯವೆಂದು ನಂಬಬಹುದು.
ಎಲ್ಲ ಕಲೆಗಳಂತೆ ಬರೆಯುವುದೂ ಒಂದು ಕಲೆ. ಆದರೆ ಅದರ ಮೂಲಕವೇ ಒಬ್ಬನು ಇತರರಿಗಿಂತ ಶ್ರೇಷ್ಠನಾಗುವುದಿಲ್ಲ. ಆತ ಎಲ್ಲರಂತೆ ಬಳಲುತ್ತಾನೆ, ದ್ವೇಷಿಸುತ್ತಾನೆ, ಲಾಭಕ್ಕೆ ಹಪಹಪಿಸುತ್ತಾನೆ. ಯಾವುದೋ ಸಂದರ್ಭದಲ್ಲಿ ತನ್ನನ್ನು ಒಂದು ಗುಂಪು, ಸಮುದಾಯ ಗೌರವಿಸಿತೆಂದರೆ, ಹಾಡಿಹೊಗಳಿದರೆಂದರೆ ಅದು ತನ್ನ ಸರ್ವಶ್ರೇಷ್ಠತೆಗೆ ಸಂದ ಸಾರ್ವಕಾಲಿಕ ಮನ್ನಣೆಯೆಂದು ತಿಳಿಯಬಾರದು. ನಮ್ಮ ಪ್ರಶಸ್ತಿಗಳೂ ಅಷ್ಟೇ. ಪ್ರತೀವರ್ಷ ಅಥವಾ ನಿಗದಿತ ಅವಧಿಯಲ್ಲಿ ಆ ಸಾಲಿನ, ಅಗ್ರ ಪೀಠವನ್ನು ಗುರುತು ಹಾಕಲಾಗುತ್ತದೆಯೇ ಹೊರತು ಆತನೇ ಎಂದಿಗೂ ಶ್ರೇಷ್ಠನೆಂದು ಅರ್ಥವಲ್ಲ. ಒಂದು ಗೊತ್ತಾದ ಅವಧಿಯಲ್ಲಿ ಸ್ಪರ್ಧೆ ನಡೆದಾಗ ಅಲ್ಲಿ ಯಾವುದೋ ಕಾರಣಕ್ಕೆ ಆತನಿಗೆ ಪ್ರಶಸ್ತಿ ಸಿಗದಿರಬಹುದು. ಇದರರ್ಥ ಆತ ಶ್ರೇಷ್ಠನಲ್ಲವೆಂದಲ್ಲ. ಪ್ರಶಸ್ತಿಯ ಮಾನದಂಡ ಆತನಿಗೆ ಹೊಂದಿಕೆಯಾಗಲಿಲ್ಲವೆಂದಷ್ಟೇ ಅರ್ಥ. ಡಾ. ಯು.ಆರ್ ಅನಂತಮೂರ್ತಿಯವರಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಸಿಗಲೇ ಇಲ್ಲ. ಇದರಿಂದಾಗಿ ಅವರ ಕತೆಗಳ ಶ್ರೇಷ್ಠತೆ ಕಡಿಮೆಯಾಗುವುದಿಲ್ಲ ಅಥವಾ ಅಂತಹ ಪ್ರಶಸ್ತಿಯನ್ನು ಗಳಿಸಿದ ಇತರರು ಅವರಿಗಿಂತ ಶ್ರೇಷ್ಠರೆಂದಲ್ಲ. ಅನುವಾದಕ್ಕೆ ಬೂಕರ್ ಪ್ರಶಸ್ತಿ ಬಂದಾಕ್ಷಣ ಬಾನು ಮುಷ್ತಾಕ್ ಕನ್ನಡದ ಸರ್ವಶ್ರೇಷ್ಠ ಕತೆಗಾರ್ತಿ ಎಂದು ನಂಬುವುದು ಮೂರ್ಖತನವಾಗುತ್ತದೆ. ಪ್ರಶಸ್ತಿಗಳು ಮತ್ತು ಪ್ರಶಸ್ತಿ ವಿಜೇತರು ಈ ಮತ್ತು ಇಂತಹ ಕಾರಣಕ್ಕೆ ತಮ್ಮ ಮೌಲ್ಯದ ಮಿತಿಯನ್ನರಿತಿರಬೇಕು. ಅನಂತ ಮೂರ್ತಿಯವರಿಗೆ ಜ್ಞಾನಪೀಠ ಬಂದಾಗ ಅವರು ಇದು ತನಗೆ ಬರುವುದಕ್ಕಿಂತ ಕನ್ನಡದವರೇ ಆದ ಇನ್ನೊಬ್ಬ ಶ್ರೇಷ್ಠ ಸಾಹಿತಿ ಪು.ತಿ.ನ. ಅವರಿಗೆ ಬಂದಿದ್ದರೆ ತಾನು ಹೆಚ್ಚು ಸಂತೋಷ ಪಡುತ್ತಿದ್ದೆ ಎಂದರಂತೆ. ಪ್ರಶಸ್ತಿ ನೀಡುವವರಿಗೆ ಅಥವಾ ಆಯ್ಕೆ ಮಾಡುವವರಿಗೆ ಇಂತಹ ಸೂಕ್ಷ್ಮ ಗೊತ್ತಾಗಿರಲಿಕ್ಕಿಲ್ಲವೆಂದೇ ಹೇಳಬೇಕು; ಅಥವಾ ಅವರ ಬಾಯಿರುಚಿ ಬೇರೆಯಾಗಿದ್ದಿರಬಹುದು. ತೌಲನಿಕ ಅಧ್ಯಯನವು ಒಬ್ಬರು ಇನ್ನೊಬ್ಬರಿಗಿಂತ ಶ್ರೇಷ್ಠರೆಂದು ಹೇಳದು. ಒಂದು ರೀತಿಯಲ್ಲಿ ಪರಸ್ಪರ ಹೋಲಿಕೆಯೇ ಸಲ್ಲದು.
ಇದನ್ನೇ ಗೌರವ ಡಾಕ್ಟರೇಟ್ ಮುಂತಾದ ಮನ್ನಣೆಗಳಿಗೂ ಹೋಲಿಸಬಹುದು. ಅದಕ್ಕೆ ಹತ್ತಾರು ಕಾರಣಗಳಿರುತ್ತವೆ. ಈಚೀಚೆಗೆ ಅವುಗಳ ಗೌರವೂ ಕಡಿಮೆಯಾಗಿದೆ. ಪ್ರಶಸ್ತಿ ವಿಜೇತರನ್ನು ಸಂಶಯದಿಂದ ಕಾಣುವ ವರೆಗೂ ಈ ಮನ್ನಣೆಗಳು ಹಗುರಾಗುತ್ತಿವೆ. ಕೆಲವು ವಿಶ್ವವಿದ್ಯಾನಿಲಯಗಳು ಮುಂಗಡ ಪ್ರತಿಫಲವನ್ನು ಪಡೆದೇ ಈ ಗೌರವವನ್ನು ನೀಡುತ್ತಿವೆಯೆಂಬ ವದಂತಿಯಿದೆ. ಇಷ್ಟೇ ಅಲ್ಲ ವಿಶ್ವವಿದ್ಯಾನಿಲಯಗಳಿಗೆ ಮಹಾಪ್ರಬಂಧಗಳನ್ನು ಸಲ್ಲಿಸಿ ಪಡೆಯುವ ಡಾಕ್ಟರೇಟುಗಳೂ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ. ಮಹಾಪ್ರಬಂಧಕ್ಕೆ ಯಾವುದೂ ಯಾರೂ ವಸ್ತುವಾಗಬಲ್ಲ ಸಂದರ್ಭಗಳನ್ನು ಎದುರಿಸುವುದು ಇಂದಿನ ತಲೆಮಾರಿನ ದುರಂತ.
ಇದೊಂದು ವಿಚಾರವಾದರೆ ಸಾಹಿತಿಗಳು ತಾವು ಬುದ್ಧಿಜೀವಿಗಳೆಂದು ಗುರುತುಪಡಿಸಿಕೊಳ್ಳುವುದು ಸಮಾಜದ ಗ್ರಹಚಾರ. ಬಹಳಷ್ಟು ಸಾಹಿತಿಗಳು ಬರೆಯುವುದನ್ನು ಬಿಟ್ಟು ತನ್ನ ಕಾಲ, ಸಮಾಜಕ್ಕೆ ಯಾವುದೊಂದೂ ಏನೊಂದೂ ಕಾಣಿಕೆ ನೀಡುವುದಿಲ್ಲ. ಸಾಮಾಜಿಕ ತಳಮಳಗಳಿಗೆ ಯಾವ ರೀತಿಯಲ್ಲಿಯೂ ಪ್ರತಿಕ್ರಿಯಿಸುವುದಿಲ್ಲ, ಸ್ಪಂದಿಸುವುದಿಲ್ಲ. ಇದಕ್ಕೆ ಹತ್ತಾರು ಕಾರಣಗಳಿರಬಹುದು: ತನ್ನ ಸಾಹಿತ್ಯವೇ ತನ್ನ ಪ್ರಾಯೋಜಕನೂ ರಕ್ಷಕನೂ ಆಗಿರಬೇಕೆಂದು ಬಯಸುವುದು; ಸಾಹಿತ್ಯದ ಮೂಲಕ ಸಾಧಿಸಿದ ಪ್ರಸಿದ್ಧಿ, ಪ್ರಚಾರ, ಪ್ರತಿಷ್ಠೆ, ಪ್ರಶಸ್ತಿ, ಮುಂತಾದವುಗಳನ್ನು ಇತರ ಹಗರಣ, ಗೊಂದಲ, ವಿವಾದಗಳಲ್ಲಿ ಭಾಗವಹಿಸಿ ಕಳೆದುಕೊಳ್ಳುವುದು ಅಥವಾ ‘ಕೆಡಿಸಿಕೊಳ್ಳುವುದು’ ಯಾಕೆಂಬ ಸುರಕ್ಷಿತ ವಿಧಾನ; ಅಥವಾ ಇತರ ವಿಚಾರಗಳ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದಿರುವುದು. ಈ ಮೂರನೇ ವರ್ಗ ಬಹಳಷ್ಟಿದೆ. ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಸಂಬಂಧಿತರ ಸಾಹಿತ್ಯವಿರುವುದಿಲ್ಲ. ಇಂದಿನ ಬಹಳಷ್ಟು ಸಾಹಿತಿಗಳು ವಿದ್ಯಾವಂತರು. ಆದರೆ ಈ ವಿದ್ಯೆ ನಮ್ಮ ಮಾಮೂಲು ಅಕಡಮಿಕ್ ವಿದ್ಯೆಗಳಂತೆ ಹೊಟ್ಟೆಹೊರೆಯುವುದಕ್ಕೆ ಅಥವಾ ಹೆಸರು ಗಳಿಸುವುದಕ್ಕೆ ಇರುತ್ತವೆಯೇ ವಿನಾ ಬದುಕಿನ ಅರ್ಥಪೂರ್ಣ ಸಂದಿಗ್ಧಗಳೊಂದಿಗೆ ಮುಖಾಮುಖಿಯಾಗಲು ಅವಕಾಶ ಕೊಡುವುದಿಲ್ಲ ಮತ್ತು ಅಂತಹ ಅವಕಾಶಗಳನ್ನು ಎದುರಿಸಲು ಶಿಕ್ಷಣ ಅವಕಾಶಮಾಡಿಕೊಡುವುದಿಲ್ಲ. ಇಂದು ಯಶಸ್ಸು ಎಂಬುದನ್ನು ಗಳಿಕೆ ಮತ್ತು ಜನಪ್ರಿಯತೆಯಿಂದ ಅಳೆಯಲಾಗುತ್ತದೆಯೇ ಹೊರತು ಬದುಕನ್ನು ಎದುರಿಸಿದ ಮತ್ತು ಇತರರಿಗೆ ಮಾದರಿಯಾದ ಬದುಕಿನ ಮೂಲಕ ನಿರ್ಧರಿಸಲಾಗುವುದಿಲ್ಲ. ಒಳ್ಳೆಯ ವೈದ್ಯ, ವಕೀಲ ಎಂದರೆ ಎಷ್ಟು ಸಂಪಾದಿಸಿದರು ಎಂಬುದರ ಮೇಲೇ ಅಳೆಯಲಾಗುವ ಹಾಗೆ ಸಾಹಿತಿಯನ್ನೂ ಅವರಿಗೆ ಬಂದ ಪ್ರಶಸ್ತಿ, ವೈಭವಗಳೊಂದಿಗೆ ಬೆಸೆಯಲಾಗುತ್ತದೆ. ಒಂದು ಪ್ರಶಸ್ತಿ ಬಂದ ಬಳಿಕ ‘...ಪ್ರಶಸ್ತಿ ವಿಜೇತ’ ಎಂಬುದರೊಂದಿಗೇ ಪರಿಚಯಿಸಲಾಗುತ್ತದೆ. ಶಿಕ್ಷಣವು ಕೆಟ್ಟವನನ್ನು ಒಳ್ಳೆಯವನಾಗಿಸುತ್ತದೆಯೆಂಬುದೊಂದು ಭ್ರಮೆ. ಅದು ಗಿಡಕ್ಕೆ ಗೊಬ್ಬರ ಹಾಕಿದಂತೆ. ಹಾಗಲಕಾಯಿ ಗಿಡಕ್ಕೆ ಹಾಕಿದ ಗೊಬ್ಬರ ಇನ್ನಷ್ಟು ಕಹಿಯನ್ನು ನೀಡಬಹುದೇ ಹೊರತು ಅದನ್ನು ಸಿಹಿಯಾಗಿಸದು. ಮೂಲ ವ್ಯಕ್ತಿತ್ವದ ಆಧಾರದಲ್ಲೇ ಅದು ತೀರ್ಮಾನವಾಗುತ್ತದೆ. ಬರೆಹಗಾರ, ಚಿಂತಕ, ಹೋರಾಟಗಾರ, ವೈದ್ಯ ಎಲ್ಲವೂ ಆಗಿದ್ದ ಚೆಗೆವಾರ ಈ ಬಗೆಯಲ್ಲಿ ಸರ್ವಶ್ರೇಷ್ಠ. ಅನ್ಯಾಯಕ್ಕೆ ಸಿಟ್ಟುಗೊಳ್ಳದವರು ಗುಲಾಮಗಿರಿಯನ್ನು ಒಪ್ಪಿಕೊಂಡಂತೆ ಎಂದು ಆತ ಹೇಳುತ್ತಾನೆ. ಎಂತಹ ದೊಡ್ಡ ಸಾಹಿತಿಯ ಬರೆಹಕ್ಕಿಂತಲೂ ಅಂಥವನ ಬರೆಹ ಇಷ್ಟವಾಗುವುದು ಈ ಕಾರಣಕ್ಕೇ. ಆದರೆ ಆತನ ಹಾದಿ ಹಿಡಿಯುವ ಬುದ್ಧಿಜೀವಿ ಸಾಹಿತಿ ನಮ್ಮಲ್ಲಿಲ್ಲ. ಉದಾಹರಣೆಗೆ ಸಾಕೇತರಾಜನ್‌ನಂತಹ ಪ್ರತಿಭಾವಂತ ಯುವಕನನ್ನು ಕೊಲ್ಲುವವರಿಗೆ ಮತ್ತು ಆತನನ್ನು ಗೊತ್ತಿದ್ದು, ಆತನ ಸಾವು ಗೊತ್ತಾಗಿಯೂ ನೊಂದುಕೊಳ್ಳದವರಿಗೆ ಆತನ ವ್ಯಕ್ತಿತ್ವವು ಅರ್ಥವಾಗದು. ಅಂತಹ ನಿಲುವಿಗೆ ತುಡಿಯದವರನ್ನು ಬುದ್ಧಿಜೀವಿಗಳೆಂದು ಒಪ್ಪಿಕೊಳ್ಳಲಾಗದು.
ಬೌದ್ಧಿಕತೆ ಬರೆಹದ ಶ್ರೇಷ್ಠತೆಯಲ್ಲಿಲ್ಲ. ಅದು ಎಷ್ಟರ ಮಟ್ಟಿಗೆ ಸಮಾಜವನ್ನು ಪ್ರಭಾವಿಸಿತು ಮತ್ತು ಪರಿಣಾಮವನ್ನು ಬೀರಿತು ಎಂಬುದರಲ್ಲಿದೆ. ಇತರರೆಲ್ಲ ತಮ್ಮ ಬರೆಹಗಳನ್ನು ಪ್ರಕಟಿಸಿದವರಿಗೆ, ಭಾಷಣಕ್ಕೆ ವೇದಿಕೆ ಕಲ್ಪಿಸಿದವರಿಗೆ ಧನ್ಯವಾದಗಳನ್ನು ಹೇಳುವ ಹಂತಕ್ಕಿಂತ ಮೇಲೇಳಲಾರರು. ಸಾಹಿತ್ಯವನ್ನು ಸರಕೆಂದು ಭಾವಿಸದವರಿಗೆ ಅದರ ಜಿಎಸ್‌ಟಿ ಮೌಲ್ಯ ಗೊತ್ತಾದೀತೇ ಹೊರತು ಬೆಲೆಯಲ್ಲ.






