ನನ್ನ ನನಸಿನ ಭಾರತ

ಪ್ರಜೆಗಳು ತಮ್ಮ ಪ್ರಭುತ್ವಕ್ಕೆ ಜಾಗ ಕಲ್ಪಿಸಲು ರಾಜರ ಆಡಳಿತವನ್ನು ಕೊನೆಗೊಳಿಸಿದರು. ಆದರೆ ಇಂದು ಆಡಳಿತ ಹೇಗಿದೆ? ಇಂದು ಪ್ರಾಮಾಣಿಕವಾಗಿ, ಮುಗ್ಧವಾಗಿ ಯೋಚಿಸುವವನಿಗೆ ತಾನೊಬ್ಬ ಪೌರಾಣಿಕ ಶ್ವೇತಕುಮಾರನೆಂದು ಅನ್ನಿಸಿದರೆ ಹೆಚ್ಚಲ್ಲ. ನರಕದಲ್ಲಿ ಎಷ್ಟೊಂದು ವಿಧ! ಅವೆಲ್ಲ ಪ್ರಜೆಗಳ ಮುಂದಿದೆ. ಇದನ್ನು ಆಸ್ವಾದಿಸುವ, ಆನಂದಿಸುವ, ಅನುಭವಿಸುವ ಮಂದಿಗೆ ಎಲ್ಲವೂ ಸಹಜ, ಸ್ವಾಭಾವಿಕ, ಒಂದು ವೇಳೆ ಹಾಗನ್ನಿಸುವಷ್ಟೂ ಲೋಕ ವ್ಯವಹಾರದ ಅರಿವು ಇಲ್ಲದಿದ್ದರೆ ಮಹಾಭಾರತದ ಅಭಿಮನ್ಯುವಿನಂತೆ ಅನ್ನಿಸುವುದಂತೂ ಖಾತ್ರಿ.
ಅನೇಕರು ಆದರ್ಶಪ್ರಾಯವಾದ ಮತ್ತು ಸುಳ್ಳು ಸುಖವನ್ನು ನೀಡಬಲ್ಲ ‘ನನ್ನ ಕನಸಿನ ಭಾರತ’ದ ಕುರಿತೇ ಬರೆಯುತ್ತಾರೆ. ಇನ್ನು ಕೆಲವರು ಸೃಜನಶೀಲರು; ಸುಳ್ಳಿನ ಮೂಲಕ ಸತ್ಯವನ್ನು ತೋರಿಸುವ ದುಸ್ಸಾಹಸವನ್ನು ತೋರುತ್ತಾರೆ. ವಾಸ್ತವವನ್ನು ಕಂಡರೂ ನಿರಾಕರಿಸಿ ನೀರಮೇಲಣ ಗುಳ್ಳೆಯ ಫೋಟೊ ಕ್ಲಿಕ್ಕಿಸಿ ಅದನ್ನು ಜನರೆದುರು, ಜಗತ್ತಿನೆದುರು ಪ್ರದರ್ಶಿಸಿ ತಾವೂ ಅದನ್ನು ಸತ್ಯವೆಂದು ಸುಳ್ಳೇ ನಂಬುವವರು ಇನ್ನು ಹಲವರು. ಹೀಗಿರುವ ಭಾರತವನ್ನು ಕೈಬಿಟ್ಟು ನಾನು ‘ನನ್ನ ನನಸಿನ ಭಾರತ’ದ ಕುರಿತು ಕೆಲವು ಮಾತುಗಳನ್ನು ಬರೆಯಬಲ್ಲೆ.
ಹೇಗಿದೆ ನನ್ನ ಭಾರತ? ಈ ಭಾರತದೊಳಗೆ ನಾನೆಲ್ಲಿದ್ದೇನೆ? ಒಂದೊಂದು ಕ್ಷೇತ್ರವೂ ಒಂದೊಂದು ವಿಧ. ಜ್ಞಾನಿಗಳೂ, ಸುಜ್ಞಾನಿಗಳೂ, ಅಜ್ಞಾನಿಗಳೂ, ವಿಜ್ಞಾನಿಗಳೂ ಹೀಗೆ ಬೇರೆ ಬೇರೆ ಮಾನದಂಡದ ಜನರೂ ಇದ್ದಾರೆ; ಹಾಗೆಯೇ ಸಂತರೂ ಇದ್ದಾರೆ; ಅಂಗುಲಿಮಾಲರೂ ಇದ್ದಾರೆ; ಬುದ್ಧ ಮಾತ್ರ ಇಲ್ಲ. ಒಬ್ಬ ವಿಜ್ಞಾನಿ, ತತ್ವಜ್ಞಾನಿ ‘‘ನನಗೊಂದು ಸನ್ನೆ ಮತ್ತು ಭೂಮಿಯಿಂದ ಹೊರಗೆ ನಿಲ್ಲಲೊಂದಷ್ಟು ಜಾಗ ಕೊಡಿ; ನಾನು ಭೂಮಿಯನ್ನು ಎತ್ತಬಲ್ಲೆ’’ ಎಂದನಂತೆ. ಸನ್ನೆಯೂ ಇಲ್ಲ, ಜಾಗವೂ ಇಲ್ಲ. ನಮ್ಮಲ್ಲೊಬ್ಬರು ಅಯ್ಯೋ ‘‘ಹಲಸಿನಹಣ್ಣು ಇಲ್ವೇ, ಜೇನಿದ್ದಿದ್ದರೆ ಅದರಲ್ಲದ್ದಿ ತಿನ್ನುತ್ತಿದ್ದೆ’’ ಎನ್ನುತ್ತಿದ್ದರು. ಅದೂ ಇಲ್ಲ; ಇದೂ ಇಲ್ಲ; ಆದರೂ ಕೇಳುಗರ ಬಾಯಲ್ಲಿ ಜೊಲ್ಲು!
ಹಳತರ ಕುರಿತು ಕೇಳಿ. ಈ ವಿವರಣೆ ಉಗಮವಾಗುತ್ತದೆ: ಬೆಳಗಾಗೆದ್ದು ನೋಡಿದರೆ ಪ್ರಕೃತಿಯ, ನದಿನದಗಳ, ಕಾಡುಗುಡ್ಡಗಳ, ಪ್ರಾಣಿಪಕ್ಷಿಗಳ, ದುಡಿಯುವ ಜನಪದರ ವಿಹಂಗಮ, ರಮ್ಯಸುಂದರ ನೋಟವಿತ್ತು. ಸಂಜೆ ಸಹಜ ಸಂಧ್ಯಾಕಾಲ, ಹಸುಗಳು ಹಿಂದಿರುಗುವ ಗೋಧೂಳಿಯ ಮುಹೂರ್ತ ಬದುಕನ್ನು ಅನನ್ಯವಾಗಿಸುತ್ತಿತ್ತು. ‘ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು’ ಎಂಬ ಕವಿವಾಣಿ ಅಂತಹ ಸತ್ಯದ ಇತಿಹಾಸವನ್ನು ಹೇಳುತ್ತಿತ್ತು. ಆಂಗ್ಲ ಬರೆಹಗಾರನೊಬ್ಬ ‘bliss was it to be in that world, to be young was very heaven’ (ಆ ಪ್ರಪಂಚದಲ್ಲಿರುವುದೇ ಪರಮಸುಖ, ಎಳೆಯನಾಗಿರುವುದಂತೂ ಸ್ವರ್ಗ) ಎಂದು ಹೇಳಿದ್ದು ಇಂತಹ ನೆನಪಿನೊಂದಿಗೆ.
ಆ ಬಾಲ್ಯಕಾಲದ ಸಖ/ಖಿ ಮರೆಯಾಗಿದ್ದಾನೆ/ಳೆ. ಈಗ ಏನಿದ್ದರೂ ಕೊಚ್ಚಿಕೊಂಡು ಹೋಗುವ ಬದುಕಿನ ಪ್ರವಾಹದಲ್ಲಿ ಈಸುವ ನಟನೆಯನ್ನು ಮಾಡುವುದು- ಪ್ರಜ್ಞಾವಂತರ ಅನುಕಂಪಕ್ಕೆ ಪಾತ್ರವಾಗುವುದು. ನಗು ದಟ್ಟ ದರಿದ್ರನಿಗೂ ಒಮ್ಮೊಮ್ಮೆ ಬರುವುದುಂಟು. ತುಂಬಾ ಸಿಟ್ಟು ಬಂದಾಗ, ದುಃಖವಾದಾಗ ನಗುವ ಪಾತ್ರವೊಂದನ್ನು ಒಂದು ಹಿಂದಿ ಚಲನಚಿತ್ರ ಸೃಷ್ಟಿಸಿತ್ತು. ಆ ಕ್ಷಣ ಮುಂದುವರಿದರೆ ಅದೃಷ್ಟ. ಆ ಕ್ಷಣವನ್ನೇ ಬದುಕೆಂದು ಭ್ರಮಿಸುವವರಿಗೆ ಹೇಳುವುದಕ್ಕೇನಿಲ್ಲ.
ಬೇರು ಮೇಲೆ; ಕಾಂಡ-ಕೊಂಬೆ-ರೆಂಬೆ-ಚಿಗುರು-ಹಣ್ಣು ಕೆಳಗೆ (ಊರ್ಧ್ವಮೂಲಂ ಅಧಶಾಖಃ) ಇದು ಪರಂಪರೆಯಲ್ಲೇ ಇತ್ತು. ಹಾಗಾದರೆ ಬದಲಾವಣೆ ಯಾವುದು? ಅಭಿವೃದ್ಧಿ ಯಾವುದು? ಗತಕಾಲದಿಂದ ಗತಿಸಿದ್ದು ಹೊಸ ಸೃಷ್ಟಿಯಾದದ್ದು ಯಾವುದು?
ನಾನಿಂದು ಹುಟ್ಟಬೇಕಾಗಿತ್ತು ಎಂದು ಆಸೆಪಡುವ ಹಿರಿಯರಿದ್ದಾರೆ. ಅದೇ ಚೆನ್ನಾಗಿತ್ತು ಎಂದು ನಿಟ್ಟುಸಿರಿಡುವ ಹಿರಿಯರೂ ಇದ್ದಾರೆ. ಆದರೆ ಯಾವುದೇ ಅವಸ್ಥೆ ಕ್ಷಣಿಕವೆಂದು ಮುನ್ನಡೆದ ಕಾಲ ಹೇಳಿತು. ಪುನರಪಿ ಜನನಂ ಪುನರಪಿ ಮರಣಂ ಅಲ್ಲ; ಬದುಕಿನ ಗತಿ ಅದಲು ಬದಲು. ಈಗ ಮತ್ತೆ ಅದರ ಸರದಿ. ನನ್ನ ನನಸಿನ ಭಾರತದಲ್ಲಿ ಎಲ್ಲವೂ ವ್ಯತ್ಯಸ್ತ ಇಲ್ಲವೇ ಅಸ್ತವ್ಯಸ್ತ.
ನಮ್ಮನ್ನಾಳುವ ದೊರೆಗಳ ಮರ್ಜಿಯಲ್ಲಿ ಪ್ರಜೆಗಳು ಬದುಕುತ್ತಿದ್ದ ಕಾಲವೊಂದಿತ್ತು. ಈಗ ಏನಿದ್ದರೂ ನಮ್ಮದೇ ಅಂದರೆ ಪ್ರಜೆಗಳದ್ದೇ ಕಾಲ. ಪ್ರಜೆಗಳೇ ಪ್ರಭುಗಳು. ಹಿಂದೆ ಒಬ್ಬರು ಕಿರೀಟ ಧರಿಸಿ ಸಿಂಹಾಸನಾಲಂಕೃತರಾದರೆ ಇಂದು ಎಲ್ಲರೂ ಕಿರೀಟಧಾರಿಗಳು. ಅವರವರ ತಲೆ, ಹೊಣೆಯ ಗಾತ್ರಕ್ಕೆ ತಕ್ಕಂತೆ.
ಪ್ರಜೆಗಳು ತಮ್ಮ ಪ್ರಭುತ್ವಕ್ಕೆ ಜಾಗ ಕಲ್ಪಿಸಲು ರಾಜರ ಆಡಳಿತವನ್ನು ಕೊನೆಗೊಳಿಸಿದರು. ಆದರೆ ಇಂದು ಆಡಳಿತ ಹೇಗಿದೆ? ಇಂದು ಪ್ರಾಮಾಣಿಕವಾಗಿ, ಮುಗ್ಧವಾಗಿ ಯೋಚಿಸುವವನಿಗೆ ತಾನೊಬ್ಬ ಪೌರಾಣಿಕ ಶ್ವೇತಕುಮಾರನೆಂದು ಅನ್ನಿಸಿದರೆ ಹೆಚ್ಚಲ್ಲ. ನರಕದಲ್ಲಿ ಎಷ್ಟೊಂದು ವಿಧ! ಅವೆಲ್ಲ ಪ್ರಜೆಗಳ ಮುಂದಿದೆ. ಇದನ್ನು ಆಸ್ವಾದಿಸುವ, ಆನಂದಿಸುವ, ಅನುಭವಿಸುವ ಮಂದಿಗೆ ಎಲ್ಲವೂ ಸಹಜ, ಸ್ವಾಭಾವಿಕ, ಒಂದು ವೇಳೆ ಹಾಗನ್ನಿಸುವಷ್ಟೂ ಲೋಕ ವ್ಯವಹಾರದ ಅರಿವು ಇಲ್ಲದಿದ್ದರೆ ಮಹಾಭಾರತದ ಅಭಿಮನ್ಯುವಿನಂತೆ ಅನ್ನಿಸುವುದಂತೂ ಖಾತ್ರಿ. ಯಾವ ಸಂದರ್ಭವನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ನಮ್ಮಲ್ಲಿರುವುದು ಅರ್ಧಜ್ಞಾನ. ಹೀಗಾಗಿ ಬದುಕೆಂಬ ಚಕ್ರವ್ಯೆಹವನ್ನು ಒಳಹೊಕ್ಕರೆ ಹೊರಬರುವುದು ಹೇಗೆ? ಇನ್ನೂ ಕಷ್ಟವೆಂದರೆ ಈಗ ನಮ್ಮೆದುರು ಇರುವುದು ಬರಿಯ ಚಕ್ರವ್ಯೆಹವಲ್ಲ; ಅದಕ್ಕಿಂತಲೂ ಸಂಕೀರ್ಣವಾದ ವಕ್ರವ್ಯೆಹ. ಸಮಾಜದ ವಿವಿಧ ಕ್ಷೇತ್ರಗಳನ್ನು ಗಮನಿಸಿದರೆ ಸ್ಪರ್ಧಿಸುವುದಕ್ಕಿಂತ ಆದಷ್ಟು ಬೇಗ ಬದುಕು ಕೊನೆಗೊಳ್ಳಲಿ ಎಂದನ್ನಿಸುವುದೇ ಹೆಚ್ಚು. ಯಾವುದೂ ಶಾಶ್ವತವಲ್ಲ; ಎಷ್ಟು ಮೇಲಕ್ಕೇರಿದವನೂ ಒಂದು ದಿನ ಬದುಕಿನಿಂದ ಮರೆಯಾಗುತ್ತಾನೆ. ಬಳಿಕ ಜನರ ಮನಸ್ಸಿನಿಂದಲೂ ಮರೆಯಾಗುತ್ತಾನೆ.
ರಾಜಕೀಯವು ಒಂದು ಭಯಾನಕ ಭೂಗತ ಜಗತ್ತು. ಒಂದಷ್ಟು ಅವಧಿಗೆ ಆಯ್ಕೆ ಮಾಡಿದರೆ ಡಾಕ್ಟರ್ ಫಾಸ್ಟಸ್‌ನ ಹಾಗೆ ರಾಜಕೀಯ ಮೆಫಿಸ್ಟೋಫಿಲಿಸ್‌ಗಳ, ಫ್ರಾನ್ಕನ್‌ಸ್ಟೈನ್ ಮತ್ತು ಅವರ ಜೊತೆ ಅಂಡಲೆಯುವ ಸ್ವರತಿಸಂಪ್ರೀತ ಜೀವಿಗಳ ಅಂಕೆಯಲ್ಲಿ ಉಳಿಯ/ಸಾಯಬೇಕಾದ ಗೋಳು ಪ್ರಜೆಗಳದ್ದು. ಇಲ್ಲಿ ಹಾಡಿಲ್ಲ; ಪಾಡು ಮಾತ್ರ. ಇದಕ್ಕೆ ಬದುಕು ಎಂಬ ಉದಾರ ಹೆಸರನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ- ಸಂವಿಧಾನದಂತೆ. ನಿದರ್ಶನಗಳು ಬೇಕಿಲ್ಲ. ದಿನನಿತ್ಯದ ಮಾಧ್ಯಮ ಸಾಕು. ಅರಣ್ಯರೋದನಗಳನ್ನು 24x7 ಉಚಿತವಾಗಿ ಕೇಳಬಹುದು; ನೋಡಬಹುದು; ಅನುಭವಿಸಬಹುದು. ರಾಜಕಾರಣವಿರುವುದು ಪ್ರಜೆಗಳ ಒಳಿತಿಗೆ. ಆದರೆ ಈ ದೇಶದ ರಾಜಕಾರಣವು ಒಂದು ರಾಜಸತ್ತೆಯನ್ನು ಸೃಷ್ಟಿಸಿದೆ. ಸಿಂಹಾಸನಾಧೀಶ ರಾಜಕಾರಣಿಗಳಿಗೆ ಮತದಾರರ, ಒಟ್ಟಿನಲ್ಲಿ ಪ್ರಜೆಗಳ ಮೌಢ್ಯದ ಕುರಿತು ಎಷ್ಟು ವಿಶ್ವಾಸವಿದೆಯೆಂದರೆ ಅವರ ರಾಜಕೀಯ ಭವಿಷ್ಯವಿರುವುದೇ ಪ್ರಜೆಗಳ ಅಜ್ಞಾನದಲ್ಲಿ, ಮೂರ್ಖತನದಲ್ಲಿ, ದಡ್ಡತನದಲ್ಲಿ. ರಾಜಕಾರಣವು ಒಂದು ವೃತ್ತಿಯಾಗಿರುವುದೇ ಆಧುನಿಕ ಜಗತ್ತಿನ ವಿಸ್ಮಯ. ಇಂದು ಈ ಪಕ್ಷದಲ್ಲಿದ್ದವನು ನಾಳೆ ಇನ್ನೊಂದು ಪಕ್ಷದಲ್ಲಿರುತ್ತಾನೆ. ಇದು ಮತದಾರರಿಗೆ ಗೊತ್ತಿಲ್ಲವೆಂದಲ್ಲ. ಅದು ಅವರವರ ಸ್ವಾತಂತ್ರ್ಯವೆಂಬಲ್ಲಿಗೆ ಅವರು ಮೌನಸಮ್ಮತಿ ತಾಳುತ್ತಾರೆ. ಮತದಾರರು ಕುರಿಗಳೆಂದರೆ ಕುರಿಗಳಿಗೇ ಅವಮಾನ. ಮತದಾರರು ಕುರಿಗಳಲ್ಲ. ತಮ್ಮ ವೈಯಕ್ತಿಕ ಲಾಭ, ಇಲ್ಲವೇ ಅನುಕೂಲಕ್ಕೆ ಅವರು ಬದುಕನ್ನು ಮುಡಿಪಾಗಿಟ್ಟವರು. ಆದ್ದರಿಂದ ಯಾವುದು, ಯಾರು ಅನುಕೂಲವೋ ಅದೇ ಸರಿ; ಅದೇ ಸತ್ಯ.
ಆದರೆ ರಾಜಕಾರಣದಿಂದಷ್ಟೇ ದೇಶ ಹಾಳಾಗುತ್ತಿದೆಯೇ? ಇಲ್ಲ. ಅವರ ಜೊತೆಗೆ ಅಧಿಕಾರಶಾಹಿಯೆಂಬ ಅಮಾತ್ಯರಾಕ್ಷಸರ ಪಕ್ಕವಾದ್ಯಗಳಿವೆ. ದೇಶದ ಮತ್ತು ರಾಜ್ಯಗಳ ಆಡಳಿತ ಸೇವೆಯೆಂಬುದಿದೆ: ಲೋಕಸೇವೆಯಿಂದ ಹುಟ್ಟಿ ಭರ್ಜರಿ ಹಣವೆಣಿಸುವ ಆಕರ್ಷಕ ಹುದ್ದೆಗಳು. ಇದರಿಂದಾಗಿ ನಿಜಕ್ಕೂ ಮಾನ್ಯ ಸಂಸ್ಥೆಗಳಲ್ಲಿ ಓದಿ ಕೀರ್ತಿ ಪಡೆದವರು ಕಲಿತದ್ದನ್ನು ಹಣಕ್ಕೆ ಅಡವಿಟ್ಟು ಸೇವಾ ದುರಂಧರರಾಗಬಯಸುತ್ತಾರೆ. ಒಳ್ಳೆಯವರಿಲ್ಲವೆಂದಲ್ಲ. ಆದರೆ ಅವರು ಓಯಸಿಸ್‌ಗಳು. ಅವರಿರುವುದಕ್ಕೇ ಇನ್ನೂ ಒಂದಷ್ಟು ಮಳೆ-ಬೆಳೆ ಬರುತ್ತಿದೆ. ಉಳಿದವರೆಲ್ಲ ವಿಪತ್ತಿನ ನಿರ್ವಾಹಕರು. ಬಹುತೇಕ ಅಧಿಕಾರಿಗಳು ರಾಜಕಾರಣಿಗಳ ಜಯವಿಜಯರೇ ಆಗಿ ಜೀವನ ಸವೆಸುತ್ತಾರೆ. ಆದರೆ ಇವರಿಗೆ ಮೂರು ಜನ್ಮದ ಮೋಕ್ಷ ಬೇಕಿಲ್ಲ. ಗುಲಾಮಗಿರಿಗೆ ಭಕ್ತಿ, ನಿಷ್ಠೆಯೆಂಬ ಹೆಸರಿಟ್ಟು ನಿವೃತ್ತಿಯ ವರೆಗೂ ಅಧಿಕಾರ ಕೇಂದ್ರಿತ ದೀನರಾಗಿರುತ್ತಾರೆ. ಜೋಳವಾಳಿಗೆಯ ಈ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಉಂಡೆಸೆದ ಉಳಿದ ಊಟವೆಲ್ಲ ಇವರಿಗೇ. ಲೋಕಸೇವೆಯ ಹುದ್ದೆಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ಒಬ್ಬ ಅಧಿಕಾರಿ ‘‘ಭ್ರಷ್ಟತೆಯನ್ನು ತೊಡೆದುಹಾಕಬಹುದು; ತೊಡೆದುಹಾಕಬೇಕು’’ ಎಂಬ ಅಮೂಲ್ಯ ವಚನಗಳನ್ನು ಹೇಳಿದರು. ಇಂತಹ ಮಾತುಗಳನ್ನು, ಆದರ್ಶಗಳನ್ನು ನಂಬಿ ಇವರಲ್ಲಿ ನಿಗದಿತ ಭೌಗೋಳಿಕ ಮಿತಿಯೊಳಗೆ (ತಾಲೂಕು, ಜಿಲ್ಲೆ ಇತ್ಯಾದಿ!) ಅಧಿಕಾರ ಚಲಾಯಿಸಲು ಗೊತ್ತುಮಾಡುತ್ತಾರೆ. ಉದಾಹರಣೆಗೆ ಈ ಮಂದಿಗಳು ಜಿಲ್ಲಾ ಹೊಣೆಯ, ವ್ಯಾಪ್ತಿಯ ಅಧಿಕಾರಿಗಳಾಗಿರುವ ವ್ಯಾಪ್ತಿಯಲ್ಲಿ ಎಗ್ಗಿಲ್ಲದ ಭ್ರಷ್ಟಾಚಾರ. ಇದೇನು ಎಂದು ಕೇಳಿದರೆ, ದೂರುಕೊಡಿ, ವಿಚಾರಿಸುತ್ತೇವೆ ಎನ್ನುತ್ತಾರೆ. ಅವರಿಗೆ ಈ ಭ್ರಷ್ಟಾಚಾರದ ಅರಿವಿಲ್ಲವೆಂದಲ್ಲ. ಭ್ರಷ್ಟರನ್ನು ಗುರುತಿಸಲು ಹಗಲು ದೀವಟಿಗೆ ಬೇಡ. ಎಲ್ಲೇ ಕಲ್ಲೆಸೆದರೂ ಅದು ಒಬ್ಬ ಭ್ರಷ್ಟನ ತಲೆಯ ಮೇಲೆ ಬೀಳುವಷ್ಟು ಸಾಂಕ್ರಾಮಿಕವಾದ ರೋಗದಲ್ಲಿ ಪರಿಹಾರವೆಲ್ಲಿದೆ? ಇನ್ನು ಇವರ ಕೈಕೆಳಗೆ ಉದ್ಯೋಗದಲ್ಲಿರುವ ಇತರ ಸೇವಾಕರ್ತರು ಈ ಭ್ರಷ್ಟಾಚಾರದ ಕೊನೆಯ ಬಿಂದುಗಳು. ಹಿರಿ-ಕಿರಿ ಅಧಿಕಾರಿಗಳು ರಾಜಕಾರಣಿಗಳೆದುರು ಬಾಯಿಗೆ ಬೀಗ ಹಾಕಿಕೊಂಡು ತನ್ನ ಅವಧಿಯನ್ನು ಪೂರೈಸಿ ವರ್ಗವಾಗಿ ಹೋಗುತ್ತಾರೆ. ಮೇಲಧಿಕಾರಿಗಳು ಪ್ರಾಮಾಣಿಕತೆಯ ಸೋಗು ಹಾಕಿ ತಮ್ಮ ಕೈಕೆಳಗೆ ನಡೆಯುವ ಭ್ರಷ್ಟಾಚಾರವನ್ನು ಸಹಿಸಿಕೊಂಡು, ಕೆಲವೊಮ್ಮೆ ಪ್ರೋತ್ಸಾಹಿಸಿ, ಕಾಲಕಳೆಯುತ್ತಾರೆ. ಪ್ರಾಮಾಣಿಕರೆಂದು ತೋರಿಸಿಕೊಳ್ಳುವ ಸಲುವಾಗಿ ದರ್ಪ ತಾಳುತ್ತಾರೆ. ಬೆಳಗ್ಗೆ ಭ್ರಷ್ಟಾಚಾರದ ವಿರುದ್ಧ ಭಾಷಣ ಬಿಗಿದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಯೊಬ್ಬರು ಸಂಜೆ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ವರದಿಯು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಹೀಗಿರುವಾಗ ಇದಕ್ಕೆ ತಡೆಯೆಲ್ಲಿ? ಭಗವಂತ ನೂರು ಅವತಾರವೆತ್ತಿ ಬಂದರೂ ಇದಕ್ಕೆ ಪರಿಹಾರವಿಲ್ಲವೇನೋ?
ಈ ಜಾಡ್ಯ ಬರಿಯ ಅಧಿಕಾರಶಾಹಿಯಲ್ಲಿ ಮಾತ್ರವಲ್ಲ, ಇತರ ‘ಸ್ವಾಯತ್ತ’ ಅಥವಾ ‘ಅರೆಸರಕಾರಿ’ ಸಂಸ್ಥೆಗಳಲ್ಲೂ ಇದೆ. ನಮ್ಮ ವಿಜ್ಞಾನ ಸಂಸ್ಥೆಗಳಲ್ಲಿ ಆಗಾಗ ಆತ್ಮಹತ್ಯೆಗಳು ಸಂಭವಿಸಿದರೆ ಜನರಿಗೆ ಏನೂ ಅನ್ನಿಸುವುದಿಲ್ಲ. ಆಳುವವರ ಕೃಪಾಕಟಾಕ್ಷದಲ್ಲಿರುವವರು ರಾಕೆಟುಗಳಂತೆ ಮೇಲೆ ಉಡ್ಡಯಣ ಮಾಡುವುದು ಸರ್ವೇಸಾಮಾನ್ಯ. ಕ್ರೀಡಾ ಸಂಸ್ಥೆಗಳಂತೂ ರಾಜಕಾರಣದ ಅಕ್ರಮಶಿಶುಗಳು. ಅಧಿಕಾರದ ದುರುಪಯೋಗ ರಾಜಕಾರಣಿಗಳಿಗೆ ಅಕ್ಷರಶಃ ಕ್ರೀಡೆ. ಜಯ್‌ಶಾ ಎಂಬ, ಗೃಹಮಂತ್ರಿಗಳ ಮಗ ಕ್ರಿಕೆಟಿನ ಅತ್ಯುಚ್ಚ ಪದವಿಗೇರಿದರು. ಹಾಗೆಂದು ಇದು ವಿಶೇಷವೇನಲ್ಲ. ಹಿಂದೆಯೂ ರಾಜಕಾರಣಿಗಳೇ ಈ ಕ್ರೀಡಾಂಗಣದ ಅಧ್ವರ್ಯುಗಳು. ಇನ್ನು ಇವುಗಳಿಗಿಂತ ಹೆಚ್ಚು ಸಂವೇದನಾಶೀಲವೆನ್ನಿಸುವ ಕಲೆ, ಸಾಹಿತ್ಯ ಮುಂತಾದವುಗಳ ಹಣೆಬರೆಹವೂ ಇದೇ. ರಾಜಕಾರಣಿಗಳ ಬೆಂಗಾವಲಿನ ಭಟರೇ ಇವುಗಳ ನಾಯಕರಾಗಿ ಆಯ್ಕೆ/ನಾಮನಿರ್ದೇಶನಗೊಳ್ಳುತ್ತಾರೆ. ಅವರ ಭಟ್ಟಂಗಿಗಳು ಪ್ರಶಸ್ತಿ ಪಡೆಯುತ್ತಾರೆ. ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿರುತ್ತದೆಯೋ ಅದರ ಹಿತೈಷಿಗಳಿಗೇ ಪ್ರಶಸ್ತಿ. ಇದನ್ನು ಟೀಕಿಸುವಂತಿಲ್ಲದಂತೆ ಕೆಲವಾದರೂ ಅರ್ಹರು, ಯೋಗ್ಯರು ತಮ್ಮ ಯೋಗ್ಯತೆಗಿಂತಲೂ ತಮ್ಮ ಸಹವಾಸ ಮತ್ತು ಅಧಿಕಾರದ ನಿಕಟತೆಯನ್ನಾಧರಿಸಿ ಆ ಮೂಲಕ ಪ್ರಶಸ್ತಿ ಪಡೆಯುತ್ತಾರೆ.
ಇಷ್ಟಕ್ಕೂ ಸಂಸ್ಕೃತಿಯ ಹೆಸರಿನಲ್ಲಿ ನಡೆಸುವ ಭಾರತೀಯರ ಮೂಲ ಪ್ರವೃತ್ತಿಯೇ ಬದಲಾಗಬೇಕು. ವಿಶ್ವ ಶ್ರೇಷ್ಠರೆಂದು ಹೇಳಿಕೊಳ್ಳುವ ಈ ದೇಶದ ಜನರು ಸಭ್ಯತೆ, ಸೌಜನ್ಯ, ನಾಗರಿಕತೆ ಇವಕ್ಕೆ ತಿಲಾಂಜಲಿ ನೀಡಿದಂತಿದೆ. ದಿನನಿತ್ಯ ನಡೆಯುವ ಮಹಿಳೆಯರ ಮತ್ತು ಮಕ್ಕಳ ಅಪಹರಣ, ಅತ್ಯಾಚಾರ ಮುಂತಾದವು ಭಾರತವನ್ನು ಸುಳ್ಳುಗೊಳಿಸುತ್ತವೆ. ಅರಾಜಕತೆಯೆಂದರೆ ಆಡಳಿತದ ಕುಸಿತ ಮಾತ್ರವಲ್ಲ, ಜನಜೀವನದ ಮೌಲ್ಯ ಕುಸಿತ. ನಾವೂ ಮಾತ್ರವೇ ಹೀಗಲ್ಲ, ವಿಶ್ವದ ಎಲ್ಲ ದೇಶಗಳೂ ಜನರೂ ಹೀಗೆಯೇ ಎಂದು ಸಬೂಬು ಹೇಳಬಹುದು. ಇತರರು ಹೇಗೇ ಇರಲಿ, ನಾವು ಇರಬೇಕಾದದ್ದು ಹೇಗೆ? ಹೀಗೆ ಯೋಚಿಸುವವರು ಯಾರು? ಪ್ರತಿಯೊಂದು ಮುನ್ನಡೆಯ ಹೆಜ್ಜೆಯೊಂದಿಗೆ ಹಿಂದೆ ಸರಿಯುವ, ಜಾರುವ, ಹೆಜ್ಜೆ ಕಾಣಿಸುತ್ತಿದೆ.
ದೇಶದ ಬಗ್ಗೆ ಯೋಚಿಸುವವರು ಮೌನವಾಗಿದ್ದಾರೆ. ಮಾತನಾಡಿದವರು ಜೈಲು ಸೇರುವ ಅಪಾಯವನ್ನು ಎದುರಿಸುತ್ತಾರೆ. ಇಂಥ ಸಂದರ್ಭದಲ್ಲಿ ಬದುಕಿನ ಹಾದಿ ಯಾವುದು?
ದೇಶಕ್ಕೊಂದು ಹಣೆಬರೆಹವಿದೆ. ಅದನ್ನು ಮೀರುವುದು ಸದ್ಯಕ್ಕಂತೂ ಕಷ್ಟಸಾಧ್ಯ. ಹೇಳುತ್ತಲೇ ಇರಬೇಕು. ಸರಿಯಾಗುತ್ತದೆಂದಲ್ಲ; ಹೇಳದೇ ಇರುವುದು ಹೇಗೆ?
ಕನಸಿನ ಭಾರತವು ದೂರದಲ್ಲಿದೆ. ಅದು ಆದರ್ಶ. ಎದುರಿರುವುದು ನನಸಿನ ಭಾರತ. ಅದು ವಾಸ್ತವ.







