Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ದ್ವೇಷಕ್ಕೆ ರಾಷ್ಟ್ರೀಯತೆಯ ವೇಷ

ದ್ವೇಷಕ್ಕೆ ರಾಷ್ಟ್ರೀಯತೆಯ ವೇಷ

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ25 Dec 2025 7:57 AM IST
share
ದ್ವೇಷಕ್ಕೆ ರಾಷ್ಟ್ರೀಯತೆಯ ವೇಷ

ದೇಶ-ದೇಶಗಳ ನಡುವಣ ಯುದ್ಧದಲ್ಲಿ ಯಾವ ವೈರವೂ ಇಲ್ಲದೆ ಯೋಧರು ಪರಸ್ಪರ ಹಿಂಸಿಸುತ್ತಾರೆ; ಕೊಲ್ಲುತ್ತಾರೆ. ಆದರೆ ದೇಶದೊಳಗೇ ಇದು ನಡೆದರೆ? ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವುದು ಇದೇ. ಕಾರಣವೇ ಇಲ್ಲದೆ ಕೊಲೆಗಿಲೆ ಮುಂತಾದವು ನಡೆಯುತ್ತಿವೆ. ಇದು ಎಲ್ಲ ಸಮಾಜಗಳಲ್ಲಿ ಸಹಜವೆಂದುಕೊಂಡರೆ ಇವಕ್ಕೆ ಪ್ರತಿಕ್ರಿಯೆಯಾಗಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರು (ಅವರು ಆ ಸ್ಥಾನಕ್ಕೆ ಏರಿದ್ದೇ ಇಂತಹ ಮೂಲಭೂತವಾದಿಗಳ ಸಹಕಾರದಿಂದ; ಆ ವಿಚಾರ ಬೇರೆ!) ಆಡುವ ಸ್ಫೋಟಕ, ವಿನಾಶಕಾರೀ ಮಾತುಗಳು ಶ್ರೀರಾಮ ಬಿಡಿ, ಸಾಮಾನ್ಯನಿಗೂ ನಾಚಿಕೆಯಾಗುವಂತಿದೆ.

ನನ್ನ ಹಿರಿಯ ಸ್ನೇಹಿತರೊಬ್ಬರು ಇತ್ತೀಚೆಗೆ ನನಗೊಂದು ಪ್ರಶ್ನೆ ಹಾಕಿದರು: ನಮ್ಮ ದೇಶದಲ್ಲೇಕೆ ಇಷ್ಟೊಂದು ಹಿಂಸೆ ನಡೆಯುತ್ತಿದೆ?

ಅವರ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡಿದೆ. ಅವರು ಮತ್ತೆ ಅದನ್ನು ನೆನಪಿಸುತ್ತಾರೋ ಅಥವಾ ಅವರೇ ಉತ್ತರ ಕಂಡುಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಆದರೆ ನಾನಂತೂ ಇದರಿಂದ ಹೊರಬರಲಾಗಲಿಲ್ಲ. ಒಂದಷ್ಟು ಯೋಚನೆಗಳು ಕಾಡುತ್ತಲೇ ಇರುತ್ತವೆ.

ಜೊತೆಗೇ ಕರ್ನಾಟಕದಲ್ಲಿ ದ್ವೇಷಭಾಷಣವನ್ನು ನಿಯಂತ್ರಿಸುವ ಒಂದು ಕಾಯ್ದೆ ಶಾಸನಸಭೆಯಲ್ಲಿ ಸ್ವೀಕೃತವಾಗಿದೆ. ಅದಿನ್ನೂ ರಾಜ್ಯಪಾಲರ ಅಂಕಿತ ಪಡೆದಿಲ್ಲ. ಮಸೂದೆ ಅಂಗೀಕಾರವಾಗುವ ಮೊದಲು ಮತ್ತು ಆನಂತರ ಭಾರತೀಯ ಜನತಾ ಪಕ್ಷದ ಒಂದಷ್ಟು ಧುರೀಣರು ಮತ್ತು ಅವರ ಶ್ರದ್ಧಾಳುಗಳು ಈ ಮಸೂದೆಯ ವಿರುದ್ಧ ಕಟುವಾದ ಟೀಕೆಯನ್ನು ಮಾಡುತ್ತಿದ್ದಾರೆ. ಇದು ತಮ್ಮನ್ನು ಗುರಿಯಾಗಿರಿಸಿದ ಮಸೂದೆಯೆಂದು ಅವರು ಹೆಗಲಿನಲ್ಲಿ ಕುಂಬಳಕಾಯಿಯನ್ನು ಹೊತ್ತು ಹೇಳುತ್ತಿರುವಾಗ ಅವರ ಕುರಿತು ನಗು ಮತ್ತು ಅನುಕಂಪದ ಹೊರತಾಗಿ ಇನ್ನೇನು ಹುಟ್ಟೀತು?

ಯುದ್ಧ, ದಂಗೆ ಮುಂತಾದ ಸಂದರ್ಭಗಳಲ್ಲಿ ಹಿಂಸೆ ಸಹಜವೆಂಬಂತೆ ಕಾಣುವ, ಕಾಣಿಸಬಲ್ಲ ಅಥವಾ ಅಪೇಕ್ಷಿತ, ಅಗತ್ಯ. ಅನಿವಾರ್ಯವಲ್ಲ. ಅಹಿಂಸೆಯ ಎಲ್ಲ ಕಾಲದಲ್ಲೂ ಹಿಂಸೆ ತಾಂಡವವಾಡಿದೆ. ಅದು ಬುದ್ಧನ, ಮಹಾವೀರನ, ಯೇಸುವಿನ, ಕಾಲ-ದೇಶದಲ್ಲೂ ಅಷ್ಟೇ. ಶರಣ ಚಳವಳಿಯ ಕಾಲದಲ್ಲೂ ಅಷ್ಟೇ. ಗಾಂಧಿ ಅಹಿಂಸಾ ಚಳವಳಿಯನ್ನು ನಡೆಸುತ್ತಿದ್ದಾಗಲೂ ಕೆಲವರು ಹಿಂಸೆಯನ್ನು ವೈಭವೀಕರಿಸುತ್ತಲೇ ಹೋದರು. ಭಾರತ-ಪಾಕಿಸ್ತಾನಗಳ ವಿಭಜನೆ ಕಾಲದಲ್ಲಿ ಮಹತ್ತರ ಹಿಂಸೆ ನಡೆಯಿತು. ಆದರೂ ಸ್ವಾತಂತ್ರ್ಯಾನಂತರ ಎಲ್ಲ ಬಗೆಯ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಬಹುದೆಂಬುದನ್ನು ಆ ತಲೆಮಾರಿನ ನಾಯಕರು ಕಂಡುಕೊಂಡಿದ್ದರಿಂದ ಭಾರತದ ಮೊದಲ ಕೆಲವು ದಶಕಗಳು ಸ್ವಲ್ಪ ಮಟ್ಟಿಗೆ ಗಾಂಧಿಮಾರ್ಗದಲ್ಲಿ ನಡೆದವು.

ಆದರೆ ಆನಂತರದ ದಶಕಗಳು ಇಂದಿರಾ, ರಾಜೀವ್ ಹತ್ಯೆಗಳೂ ಸೇರಿದಂತೆ ಹಲವು ರಾಜಕೀಯ ಹತ್ಯೆಗಳನ್ನು ಕಂಡವು; ಈ ದೇಶದ ಕಾಹಿಲೆಗಳ ಪರ್ವಗಳಾಗಿ ಗುರುತಿಸಿಕೊಂಡವು. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನಡೆದಷ್ಟು ಹಿಂಸೆ ದೈನಂದಿನ ಜೀವನದಲ್ಲಿ ಹಿಂದೆಂದೂ ನಡೆದಿರಲಾರದು. ‘ದೇಶ’ವೆಂಬ ಪದವು ಕೈತಪ್ಪಿ ‘ದ್ವೇಷ’ವೆಂಬುದೇ ಕೆಲವು ಮಂದಿಗೆ ಕೈತುತ್ತಾಗಿದೆ. ಇದರಿಂದಾಗಿ ದೇಶದಲ್ಲಿ ಶಾಂತಿ ನೆಲೆಸುವುದಿಲ್ಲವೆಂದು ಅವರಿಗೂ ಗೊತ್ತಿದೆ. ಆದರೆ ಅವರ ಉದ್ದೇಶವೇ ಅದು: ದ್ವೇಷದ ಮೂಲಕ ಸಮಾಜ ನುಚ್ಚುನೂರಾಗುವುದು; ಮತ್ತು ಈ ದ್ವೇಷದ ನಡುವೆ ತಾವು ಅಧಿಕಾರದಲ್ಲಿ ಹಾಯಾಗಿರುವುದು.

ಹಿಂಸೆಯೆಂದರೆ ದೈಹಿಕಹಿಂಸೆ, ಸಾವು-ನೋವು ಇವೇ ಆಗಬೇಕಿಲ್ಲವೆಂಬುದನ್ನು ಇತಿಹಾಸ ಹೇಳಿದೆ. ಜನ್ನನ ಯಶೋಧರ ಚರಿತೆ ಮಾನಸಿಕ ಗ್ರಹಿಕೆಯ ಹಿಂಸೆಗೆ ಒಳಗಾದವರ ಕಥೆ. ಶಾಂತಿಯ ಬದಲು, ದ್ವೇಷ, ಒಗ್ಗಟ್ಟಿನ ಬದಲು ಬಿಕ್ಕಟ್ಟು ಇವನ್ನು ಮತ್ತು ಇವುಗಳ ಮೂಲಕ ಶಾಶ್ವತ ಅಧಿಕಾರವನ್ನು ಸ್ಥಾಪಿಸಲು ದ್ವೇಷಕಾರಣಿಕರು ದ್ವೇಷದ, ಹಿಂಸೆಯ ಮಾತನ್ನೇ ಆಡಬೇಕಿಲ್ಲವೆಂಬುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮೋಚ್ಚ ನಾಯಕ ಭಾಗವತರು ಸಾಬೀತುಪಡಿಸಿದ್ದಾರೆ. ಅವರು ಎಲ್ಲೂ ಹೊಡೆಯಿರಿ, ಬಡಿಯಿರಿ, ಕಡಿಯಿರಿ ಎಂದು ಹೇಳಿದ್ದೇ ಇಲ್ಲ. ಆದರೆ ಒಂದು ಹನಿ ರಕ್ತವೂ ಸೋರದಂತೆ ಸಾಮಾಜಿಕ ಸಾಮರಸ್ಯದ ಕತ್ತನ್ನು ಕುಯ್ಯುವುದರಲ್ಲಿ ತನ್ನ ನಿಸ್ಸೀಮತನವನ್ನು ಸಾರಿ ತೋರಿದ್ದಾರೆ. ಈಗ ಅವರು ಬಿಚ್ಚಿಟ್ಟಿರುವುದು ಕಳೆದ ನೂರು ವರ್ಷಗಳಿಂದ ಬಗಲೊಳಗೆ ಬಚ್ಚಿ

ಟ್ಟಿದ್ದ ಹಿಂದೂರಾಷ್ಟ್ರದ ಕಲ್ಪನೆಯನ್ನು. ಅದಕ್ಕೆ ಸಾಂವಿಧಾನಿಕ ಅನುಮೋದನೆಯು ಅಗತ್ಯವಿಲ್ಲವೆಂದಿದ್ದಾರೆ.

ಇಂತಹ ತರ್ಕಗಳು ಆರೆಸ್ಸೆಸ್‌ಗೆ ಸಹಜ. ಚಿವುಟುತ್ತಲೇ ಸಮಾಧಾನ ಮಾಡುವ ತಂತ್ರವನ್ನು ಅವರು ಚೆನ್ನಾಗಿ ಸಿದ್ಧಿಸಿಕೊಂಡಿದ್ದಾರೆ. ರಾಮಾಯಣದ ಶ್ರೀರಾಮನ ಹೆಸರು ಹೇಳುತ್ತಲೇ ಮಾತು ಹೇಗಿರಬೇಕು ಎಂಬುದರ ಕುರಿತು ವಾಲ್ಮೀಕಿಯ ಕಲ್ಪನೆಯ ರಾಮನ ‘ಅನುದ್ವೇಗಕರಂ ವಾಕ್ಯಂ’ನ್ನು ಧಿಕ್ಕರಿಸಿ ‘ಉದ್ವೇಗಕರಂ ವಾಕ್ಯಂ’ ಎಂಬ ಹೊಸ ಭಾಷ್ಯದಲ್ಲಿ. ರಾಮರಾಜ್ಯದ ಆದರ್ಶವನ್ನು ಎಲ್ಲ ರೀತಿಯಲ್ಲೂ ಸದೆಬಡಿಯುವ ಗುಣ ಸಿದ್ಧಿಸಿದ್ದು ರಾಷ್ಟ್ರೀಯತೆಯ ಮತ್ತು ರಾಷ್ಟ್ರೀಯ ಸಂಘಟನೆಯ ಹೆಸರಿನಲ್ಲಿ; ಸಮಾಜವನ್ನು, ರಾಷ್ಟ್ರವನ್ನು ಒಡೆಯುವುದರಲ್ಲಿ; ದ್ವೇಷದ ವಿಷವನ್ನು ಹರಡುವುದರಲ್ಲಿ. ಮುದ್ರಾಮಂಜೂಷದ ಅಮಾತ್ಯರಾಕ್ಷಸನ ವಿಷಕನ್ಯೆಯ ತಂತ್ರ ಭಾಗವತರ ತಂತ್ರದೆದುರು ಏನೂ ಅಲ್ಲ.

ಅವರ ಹೇಳಿಕೆ ಬಂದಿರುವುದು ಕ್ರಿಸ್ಮಸ್, ಬ್ರಿಟಿಷ್ ಕ್ಯಾಲೆಂಡರಿನ ಹೊಸವರ್ಷದ ಕಾಲದಲ್ಲಿ. ಈ ಸಂದರ್ಭಕ್ಕೆ ಭಾಗವತರು ಹೊಸ ಮಂತ್ರ ಸೃಷ್ಟಿಸಿದ್ದಾರೆ: ‘ಸಂಘ ಮುಸ್ಲಿಮ್ ವಿರೋಧಿ ಅಲ್ಲ’ವೆಂದು ಹೇಳಿದ್ದಾರೆ. ಕ್ರೈಸ್ತರನ್ನು ಉದ್ದೇಶಪೂರ್ವಕವಾಗಿಯೇ ಉಲ್ಲೇಖಿಸಿಲ್ಲ. ಏಕೆಂದರೆ ಈ ಸಂದರ್ಭ ಅಂತಹದ್ದು. ಇದರ ತಕ್ಷಣದ ಪರಿಣಾಮವನ್ನು ಉತ್ತರ ಭಾರತ ಎದುರಿಸುತ್ತಿದೆ: ಕ್ರಿಸ್ಮಸ್ ಸಂದರ್ಭಕ್ಕೆ ಮಾರಾಟವಾಗುವ ಸಾಂತಾಕ್ಲಾಸ್ ಗೊಂಬೆಗಳ, ಉಡುಗೆಗಳ, ಮಾರಾಟವನ್ನು ಕೆಲವು ಹಿಂದುತ್ವ ಮತೀಯ ಮೂಲಭೂತವಾದಿಗಳು ತಡೆದು ಬೆದರಿಸಿ ನಿಲ್ಲಿಸಿದ್ದಾರೆ. ಇದಕ್ಕೆ ಪ್ರಚೋದನೆಯು ಬೇರೆ ಯಾವ ದ್ವೇಷಭಾಷಣವೂ ಅಲ್ಲ; ಭಾಗವತರ ಉತ್ತರಾದಿ ಹಿಂದೂರಾಷ್ಟ್ರರಾಗ. ದಕ್ಷಿಣಭಾರತದಲ್ಲಿ ಈ ಮಾತುಗಳು ದಿನನಿತ್ಯದ ಮತ್ತು ಹಬ್ಬಹರಿದಿನಗಳನ್ನು ಬಾಧಿಸುವುದಿಲ್ಲ ಅಥವಾ ಬಾಧಿಸಲಾರದು ಎಂಬ ಅಭಿಪ್ರಾಯ ಅವರಿಗೂ ಇದೆ. ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಪ್ರತಿಪಕ್ಷಗಳ ಆಡಳಿತವಿರುವುದರಿಂದ ದ್ವೇಷವನ್ನು ಸಮೂಹ ಮೂಲಕ ಕಾರ್ಯರೂಪಕ್ಕೆ ಅಂದರೆ ಕ್ರೌರ್ಯರೂಪಕ್ಕೆ ತರಲಾಗುವುದಿಲ್ಲವೆಂಬ ಆತಂಕದಿಂದಲೇ ಭಾಗವತರು ಈಗ ಹೊಸ ಧಾಟಿಯಲ್ಲಿ ಮಾತನಾಡಿದ್ದಾರೆ. ಭಾಗವತರ ಜೊತೆಗೆ ದತ್ತ್ತಾತ್ರೇಯ ಹೊಸಬಾಳೆ ಮುಂತಾದ ಇತರ ಹಿಮ್ಮೇಳದವರು ಹಿಂದೂಯೇತರರು ಹಿಂದೂ ರೀತಿರಿವಾಜುಗಳನ್ನು, ಹಿಂದೂ ನೈತಿಕಮೌಲ್ಯಗಳನ್ನು ಅನುಸರಿಸಬೇಕೆಂದು ಕರೆಕೊಟ್ಟಿದ್ದಾರೆ. ಆದರೆ ವಾಸ್ತವದ ಪ್ರಜ್ಞೆಯಿರುವವರಿಗೆ ರಾಷ್ಟ್ರ ಮತ್ತು ರಾಷ್ಟ್ರೀಯತೆಯು ಯಾವ ದಿಕ್ಕಿನಲ್ಲಿ ನಡೆಯುತ್ತಿದೆಯೆಂಬುದು ಅರ್ಥವಾಗುತ್ತಿದೆ; ಅರ್ಥವಾಗದವರಿಗೂ ಅನುಭವವಾಗುತ್ತಿದೆ.

ಭಾಗವತರು ಇನ್ನೂ ಒಂದು ಮಾತನ್ನು ಹೇಳಿದ್ದಾರೆ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ರಾಜಕೀಯ ಕಾರ್ಯಸೂಚಿಯಿಲ್ಲ. ಇದು ಶತಮಾನದ ನಗೆಗಡಲು. ನೂರು ವರ್ಷದ ದಿಕ್ಸೂಚಿ. ಈ ಮಾತನ್ನು ಅನೇಕರು ತಮ್ಮ ಜೀವನದುದ್ದಕ್ಕೂ ನಂಬಿಕೊಂಡೇ ಬಂದಿದ್ದರು. ಅಂತಹ ಮೂರು ತಲೆಮಾರು ಈಗ ಕಳೆದಿದೆ. ಮೊದಮೊದಲು ಹೀಗಿರಬಹುದೇನೋ ಎಂಬ ಭ್ರಮೆಯ ಪರದೆಯಾದರೂ ಇತ್ತು. ಈಗ ಅದೂ ಕಳಚಿದೆ. ಸ್ವತಂತ್ರ ಭಾರತದ ಇತಿಹಾಸದ ಪುಟಗಳನ್ನು ಮಗುಚಿದರೆ, 1975ರಲ್ಲಿ ಇಂದಿರಾ ಸರಕಾರವು ತುರ್ತುಸ್ಥಿತಿಯನ್ನು ಘೋಷಿಸಿದಾಗ ಆನಂತರದ 18 ತಿಂಗಳ ಹೋರಾಟದಲ್ಲಿ ಸರ್ವಾಧಿಕಾರವನ್ನು ವಿರೋಧಿಸುವ ಎಲ್ಲ ಸಮುದಾಯ-ಸಮೂಹಗಳು ಒಟ್ಟಾದವು. ಎಡ-ಬಲ ಎಲ್ಲವೂ ಒಂದೇ ವಿಚಾರದಲ್ಲಿ ಸರ್ವಾಧಿಕಾರದ ವಿರುದ್ಧ ಕೇಂದ್ರೀಕೃತವಾಗಿದ್ದವು. ಹೀಗಾಗಿ ಯಾರ ಕಾರ್ಯಸೂಚಿ ಯಾವುದು ಎಂಬುದು ಪ್ರವಾಹದ ಕೆಂಪುನೀರಲ್ಲಿ ಗೊತ್ತಾಗುತ್ತಿರಲಿಲ್ಲ. ಆದರೆ ಚುನಾವಣೆ ನಡೆದು ಜನತಾಸರಕಾರ ಅಧಿಕಾರಕ್ಕೆ ಬಂದಾಗ ಈ ಅವಕುಂಠನವು ಹರಿಯಿತು. ಕೇವಲ ಎರಡೂವರೆ ವರ್ಷಗಳಲ್ಲಿ ಸರಕಾರ ಬಿದ್ದುಹೋಯಿತು. ಅದು ಕುಸಿದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಒಂದು ಗುಂಪು ತೋರಿದ ದ್ವಂದ್ವನಿಷ್ಠೆಯಲ್ಲಿ. ಅಧಿಕಾರವನ್ನು ನಿರಂಕುಶವಾಗಿ ನಡೆಸುವ ಮಹತ್ವಾಕಾಂಕ್ಷೆಯಲ್ಲಿ ತನ್ನ ಹಿಡಿತದಲ್ಲಿ ಇಲ್ಲದ ಸರಕಾರ, ಅಧಿಕಾರವು ಮುಂದುವರಿಯುವುದು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಬೇಡವಾಯಿತು. ಅಧಿಕಾರದ ವಿಚಾರದಲ್ಲಿ ಸೈದ್ಧಾಂತಿಕವಾಗಿ ತನ್ನ ಮತೀಯ ಪ್ರತ್ಯೇಕತಾವಾದವನ್ನು ಎಂದೂ ಬಿಟ್ಟುಕೊಡದ ಆರೆಸ್ಸೆಸ್‌ಗೆ

ಜಾತ್ಯತೀತತೆಯ ಉದಾರವಾದವು ಹಿಡಿಸದ್ದರಿಂದ ಸರ್ವಾಧಿಕಾರದ ವಿರುದ್ಧದ, ಅಭೇದ್ಯವೆಂದು ಕಂಡ, ಪ್ರಜಾಪ್ರಭುತ್ವದ ಕೋಟೆ ಛಿದ್ರವಾಯಿತು.

ಆರೆಸ್ಸೆಸ್ ಈಗಲೂ ತನಗೆ ಅಧಿಕಾರದ ದಾಹ- ಮೋಹವಿಲ್ಲವೆಂದು ಘೋಷಿಸುತ್ತಲೇ ಬಂದಿದೆ. ತನ್ನ ಸಿದ್ಧಾಂತವನ್ನು ಒಪ್ಪುವ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಲು ಸಿದ್ಧವೆಂದು ಸೂಚಿಸುತ್ತಿದೆ. ಆದರೆ ಅದು ಭಾಜಪವನ್ನು ಹೊರತುಪಡಿಸಿ ಇತರ ಪಕ್ಷಗಳನ್ನು ಬೆಂಬಲಿಸಿದ ಇತಿಹಾಸವಿಲ್ಲ. 1975ರಲ್ಲೂ ಅದು ಭಾಜಪವನ್ನು ಅಧಿಕಾರಕ್ಕೇರಿಸಲು ಮಾತ್ರವೇ ಸರ್ವಧಿಕಾರದ ವಿರುದ್ಧ ಹೋರಾಡಿತೆಂಬುದನ್ನು ಆನಂತರದ ಈ ಸುಮಾರು ಐದು ದಶಕಗಳ ಭಾರತೀಯ ಇತಿಹಾಸ ತೋರಿಸಿ ಕೊಟ್ಟಿದೆ. 90ರ ದಶಕದಲ್ಲೂ ಅಯೋಧ್ಯೆಯ ಮೂಲಕ ದಿಲ್ಲಿಯ ಕುರ್ಚಿಯನ್ನು ಹಿಡಿಯಿತೇ ಹೊರತು ತನ್ನ ಪ್ರಕಟಿತ ರಾಷ್ಟ್ರೀಯ ಸಿದ್ಧಾಂತದ ಮೇಲಲ್ಲ. ಈ ಅವಧಿಯಲ್ಲಿ ಆದ ಅದರ ಕ್ರಾಂತಿಕಾರಕ ಬೆಳವಣಿಗೆಯೆಂದರೆ ಬದಲಾವಣೆಯಲ್ಲ; ಬದಲಿಗೆ ಯಾರು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕೆಂದು ನಿರೀಕ್ಷಿಸಲಾಗಿತ್ತೋ ಅಂತಹವರನ್ನು ಮತೀಯತೆಯ ಹಳ್ಳಹಿಡಿಸಿದ್ದು. ಇದು ನಮ್ಮ ಇತರ ವಿದ್ಯಾವಂತರನ್ನು, ವಿಷಯತಜ್ಞರನ್ನು, ಸಾಹಿತಿಗಳನ್ನು, ಚಿಂತಕರನ್ನು ಮಾತ್ರವಲ್ಲ ನ್ಯಾಯಾಧೀಶರನ್ನೂ ನ್ಯಾಯಮೂರ್ತಿಗಳನ್ನೂ ಬಿಟ್ಟಿಲ್ಲ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಬಿರುಕು ಬಿಡಿಸುವುದು ಮತು ಅಲ್ಲಿ ಮತೀಯತೆಯ ಕೊತ್ತಂಬರಿ ಸೊಪ್ಪನ್ನು ನೆಡುವುದು (ಎ.ಕೆ.ರಾಮಾನುಜನ್ ಕ್ಷಮೆ ಕೋರಿ ಈ ರೂಪಕ!) ಈ ಅವಧಿಯಲ್ಲಿ ನಡೆದ ನಿತ್ಯ ಕಾಯಕ.

ಭಾರತೀಯತೆಯೆಂದರೆ ಓಬಿರಾಯನ ಕಾಲದ ಕುರುಡು ಸಂಪ್ರದಾಯವಲ್ಲ. ಆರೆಸ್ಸೆಸ್‌ಗೆ ಮತ್ತು ಮುಖ್ಯವಾಗಿ ಅದರ ಮುನ್ನೆಲೆಯ ಮುಂದಾಳುಗಳಿಗೆ ಗೊತ್ತಿದೆ. ಅವರಿಗೆ ವಿಶ್ವ ರಾಜಕೀಯದಲ್ಲಿ ಅತಿಮೋಹಕತೆಯ ಸಿದ್ಧಾಂತಗಳು ಹೆಚ್ಚು ಕಾಲ ಬಾಳುವುದಿಲ್ಲವೆಂಬ ಯಥಾರ್ಥಸತ್ಯವೂ ಗೊತ್ತಿದೆ. ಆದ್ದರಿಂದ ಅದು ತನ್ನ ಒಂದುಕಾಲದ ರಾಷ್ಟ್ರೀಯತೆಯನ್ನು ಈಗ ಅಧಿಕಾರಸತ್ಯವಾಗಿ ಕಾಣಲು ಆರಂಭಿಸಿದೆ. ದೇಶದ ಪ್ರಧಾನಿ ದೇಶದ ಪ್ರತಿನಿಧಿ, ಆತ ನಾಯಕನೇ ಹೊರತು ಒಂದು ಸಂಕುಚಿತ ಗುಂಪಿನ ನಾಯಕನಲ್ಲವೆಂಬುದನ್ನು ಮರೆತು ಆತನ ಪ್ರೀತಿ, ದ್ವೇಷಗಳು ಸಮಾನವಾಗಿರಬೇಕೇ ಹೊರತು ಧ್ರುವನನ್ನು ಕಾಡಿಗೆ ಅಟ್ಟುವ ಉತ್ತಾನಪಾದನ ನೀತಿಯಾಗಬಾರದೆಂಬುದನ್ನು ಮರೆತು ಪ್ರಧಾನಿಗೂ ಚಡ್ಡಿಹಾಕಿಸುವ ದುರಂತಕ್ಕಿಂತ ಬೇರೇನಿದೆ? ಪ್ರಧಾನಿಯ ಪಟ್ಟಕ್ಕೇರಿದ ವ್ಯಕ್ತಿಯು ತನ್ನ ಯೋಗ್ಯತೆಯನ್ನು ನಡೆನುಡಿಯಲ್ಲಿ ಪ್ರದರ್ಶಿಸಬೇಕೇ ಹೊರತು ಸಿಂಹಾಸನದಲ್ಲಿ ಕುಳಿತ ಬೆಕ್ಕು ಇಲಿಯನ್ನು ಕಂಡಾಕ್ಷಣ ನೆಗೆಯುವ ಪ್ರವೃತ್ತಿಯಲ್ಲಿ ಅಲ್ಲ.

ದೇಶವಿದೇಶಗಳಲ್ಲಿ ಸರಕಾರದ ಹೆಸರಿನಲ್ಲಿ ಪ್ರಜೆಗಳನ್ನೊಡೆದು ಬೆಣ್ಣೆ-ಸುಣ್ಣಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಈ ನೀತಿಯು ಭ್ರಷ್ಟಾಚಾರಕ್ಕಿಂತಲೂ ಕಳಪೆಯ ನೀತಿ. ಪ್ರಾಯಃ ಬ್ರಿಟಿಷರಿಗೆ ಈ ಕಲೆ ಗೊತ್ತಿದ್ದರೆ ಅವರು ಇನ್ನೂ ಹಲವು ಕಾಲ ಭಾರತವೆಂಬ ಈ ಭೂಭಾಗವನ್ನು ಅದರ ಅಸಂಖ್ಯ ಸಾಮ್ರಾಜ್ಯಗಳ ಸಹಿತ ತಮ್ಮ ನಿಯಂತ್ರಣದಲ್ಲಿ ಹಿಡಿದಿಡುತ್ತಿದ್ದರು. ಅವರು ನಾಚುವ ಪರಿಸ್ಥಿತಿ ಈಗ ದೇಶದಲ್ಲಿದೆ.

ಆದರೆ ಇವಿಷ್ಟೇ ಆಗಿದ್ದರೆ ಅದನ್ನು ಹಾಳಾಗಿ ಹೋಗಲಿ ಇವರ ಯೋಗ್ಯತೆಯಿಷ್ಟೇ ಇದು ಕಾಲಕ್ರಮದಲ್ಲಿ ಸರಿಯಾಗಬಹುದೆಂದುಕೊಳ್ಳಬಹುದು. ರಾಮನ ಪಾದಸ್ಪರ್ಶಕ್ಕೆ ಕಾದ ಅಹಲ್ಯೆಯಂತೆ ನಿರ್ಜೀವ ಕಲ್ಲಾಗಿ ಸಹಿಸಿಕೊಳ್ಳಬಹುದು. ಆದರೆ ಇದರ ಪರಿಣಾಮದ ಹಿಂಸೆ ಸಹಿಸಲಸಾಧ್ಯ. ಪುನರ್ಜನ್ಮದ ಕಥೆಗಳು ಸುಂದರ. ಆದರೆ ಅವು ಅವಾಸ್ತವ. ಆದ್ದರಿಂದ ಇರುವ ಒಂದೇ ಒಂದು ಜನ್ಮವನ್ನು ಶಾಂತಿಯುತವಾಗಿ, ನೆಮ್ಮದಿಯಿಂದ ಬಾಳುವೆಮಾಡುವ ಆಸೆ, ನಿರೀಕ್ಷೆ ಜಾತಿ-ಮತ-ಧರ್ಮವನ್ನು ಮೀರಿ ಎಲ್ಲರದ್ದು. ದೇಶ-ದೇಶಗಳ ನಡುವಣ ಯುದ್ಧದಲ್ಲಿ ಯಾವ ವೈರವೂ ಇಲ್ಲದೆ ಯೋಧರು ಪರಸ್ಪರ ಹಿಂಸಿಸುತ್ತಾರೆ; ಕೊಲ್ಲುತ್ತಾರೆ. ಆದರೆ ದೇಶದೊಳಗೇ ಇದು ನಡೆದರೆ? ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವುದು ಇದೇ. ಕಾರಣವೇ ಇಲ್ಲದೆ ಕೊಲೆಗಿಲೆ ಮುಂತಾದವು ನಡೆಯುತ್ತಿವೆ. ಇದು ಎಲ್ಲ ಸಮಾಜಗಳಲ್ಲಿ ಸಹಜವೆಂದುಕೊಂಡರೆ ಇವಕ್ಕೆ ಪ್ರತಿಕ್ರಿಯೆಯಾಗಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರು (ಅವರು ಆ ಸ್ಥಾನಕ್ಕೆ ಏರಿದ್ದೇ ಇಂತಹ ಮೂಲಭೂತವಾದಿಗಳ ಸಹಕಾರದಿಂದ; ಆ ವಿಚಾರ ಬೇರೆ!) ಆಡುವ ಸ್ಫೋಟಕ, ವಿನಾಶಕಾರೀ ಮಾತುಗಳು ಶ್ರೀರಾಮ ಬಿಡಿ, ಸಾಮಾನ್ಯನಿಗೂ ನಾಚಿಕೆಯಾಗುವಂತಿದೆ. ಒಂದು ಸುಖೀಸಮಾಜವನ್ನು ಕಟ್ಟುವುದೆಂದರೆ ಇನ್ನೊಬ್ಬರನ್ನು ಜಾತಿ-ಮತಾಧಾರಿತವಾಗಿ ಹಿಂಸಿಸುವುದು ಎಂಬ ತರ್ಕವನ್ನು ಆರೆಸ್ಸೆಸ್ ಮತ್ತು ಅದನ್ನು ಬೆಂಬಲಿಸುವವರು ಮತ್ತು ಅದು ಬೆಂಬಲಿಸುವ ಸಂಘಟನೆಗಳು ಹೇಳುತ್ತಲೇ ಬಂದಿವೆ.

ದೇಶ ಸಾಗುತ್ತಿರುವ ದಿಕ್ಕು ಈಗ ಸದ್ಯಕ್ಕೆ ಬದಲಾಗದು. ಜಾತ್ಯಾಧಾರಿತವಾಗಿಯಾದರೂ ಈ ‘ಹಿಂದೂ ರಾಷ್ಟ್ರ’ ಸುಖವಾಗಿರದು ಎಂಬುದನ್ನು ಸಾಕ್ಷೀಕರಿಸುವಂತೆ ಜಾತ್ಯಾಧಾರಿತ ಹಿಂಸೆ ನಿತ್ಯ ನಡೆಯುತ್ತಲೇ ಇದೆ. ಅಂತರ್ಜಾತೀಯ ವಿವಾಹವಾದ್ದಕ್ಕೇ ಮಗಳನ್ನು ಕೊಂದ ಮೇಲ್ಜಾತಿಯ ‘ಹಿಂದೂ ರಾಷ್ಟ್ರ’ವೂ ಇಲ್ಲಿದೆ.

(ಎಲ್ಲ ಜಾತಿ ಮತಗಳಲ್ಲೂ ಈ ಪರಿಯ ಸಣ್ಣ-ಕೀಳು ದ್ವೇಷದ ಮನಸ್ಸು ಇದ್ದೇ ಇದೆ!) ಪ್ರಾಯಃ ಭಾಗವತರು ಇದರ ಮುಂದಾಳತ್ವವನ್ನು ವಹಿಸಿ ಸೂಚಿಸಿದ್ದು ‘ಹಿಂದೂ ರಾಷ್ಟ್ರ’ವನ್ನಲ್ಲ. ಬದಲಿಗೆ ಅದಕ್ಕೂ ಕಿರಿದಾದ, ಸಂಕುಚಿತವಾದ, ಅಧಿಕಾರದಾಹದ, ಉದರವೈರಾಗ್ಯದ, ಜಾತಿತಾರತಮ್ಯದ ಕುತ್ಸಿತ ನರಭಕ್ಷಕ ಸಮಾಜದ ‘ರಾಷ್ಟ್ರ’ ವನ್ನು.


share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X