ಬೇಕಾಗಿದ್ದಾರೆ: ಒಳ್ಳೆಯದಕ್ಕೆ ಒಟ್ಟಾಗುವವರು!

ಒಟ್ಟಾಗಿಸಬೇಕಾದ ಹಬ್ಬಗಳು ವಿಭಜಿಸುವ ಹಂತಕ್ಕೆ ಬಂದದ್ದಕ್ಕೆ ಇತ್ತೀಚೆಗಿನ ದಶಕಗಳ ನಡೆ, ನಡತೆಗಳೇ ಸಾಕ್ಷಿ. ಸ್ವಾತಂತ್ರ್ಯದಂತಹ ಉದಾತ್ತ, ಅನಿವಾರ್ಯ ಕರ್ತವ್ಯಕ್ಕೆ ಬಾಲಗಂಗಾಧರ ತಿಲಕರು ಕರೆಕೊಟ್ಟು ಜನರನ್ನು ಒಟ್ಟಾಗಿಸಲು ನೆಪವಾದ ಗಣೇಶನ ಹಬ್ಬದ ಸಂಭ್ರಮವು ತಿಲಕರು ಗತಿಸಿದರೂ, ಸ್ವಾತಂತ್ರ್ಯ ಸಿಕ್ಕಿ ಎಂಟು ದಶಕಗಳಾಗುತ್ತ ಬಂದರೂ ಇನ್ನೂ ಆರಿಲ್ಲ. ಆದರೆ ವ್ಯತ್ಯಾಸವೆಂದರೆ ಈ ಬೆಳಕು ಈಗೀಗ ಬೆಂಕಿಯಾಗುತ್ತಲಿದೆ. ಮಾರಕಶಕ್ತಿಗಳು ಹಬ್ಬದ ನೆಪದಲ್ಲಿ ವಾತಾವರಣವನ್ನು ಮಾತ್ರವಲ್ಲ, ಸಮಾಜದ ಏಳಿಗೆಗೆ ಅಗತ್ಯವಾದ ಅನ್ಯೋನ್ಯವನ್ನು ಕೆಡಿಸುತ್ತಿವೆ. ನಮ್ಮ ಹಬ್ಬಗಳು ಮನೆಯೊಳಗೆ ನಡೆಯುವ ಬದಲು ಬೀದಿಗಿಳಿದದ್ದರ ಪ್ರಭಾವ, ವಿಭವ ಇದು.
ಹಬ್ಬಹರಿದಿನಗಳ ಪ್ರಮೇಯಗಳೇ ಬೇರೆ: ವರ್ತಮಾನದ ವಾಸ್ತವವನ್ನು ಧಿಕ್ಕರಿಸಿ ಭರವಸೆಗಳ ಕನಸು ಕಾಣುವುದು; ಸದಾ ಒಳ್ಳೆಯದನ್ನೇ ಆಶಿಸುವುದು. ಗತಕಾಲದ ವೈಭವಗಳನ್ನು ಮತ್ತೆ ಸ್ಮರಿಸಿಕೊಂಡು ಖುಷಿಪಡುವುದಕ್ಕೆ ಇವು ಸಹಕಾರಿ. ನಾನು-ನೀನೆಂಬ ಭೇದವಿಲ್ಲದೆ ಹಾಸುಹೊಕ್ಕಾಗುವುದು; ಬೆರೆಯುವುದು; ನಿಬಂಧನೆಗಳಾಗಲೀ, ನಿರ್ಬಂಧಗಳಾಗಲೀ ಇಲ್ಲದೆ ಉತ್ಸಾಹದಿಂದ, ಸಂಭ್ರಮದಿಂದ ಕಾಲಕಳೆಯುವುದು.
ನಮ್ಮ ಸಮಾಜದ ಹಬ್ಬ ಹರಿದಿನಗಳು ವರ್ಷವಿಡೀ ಹರಡಿಕೊಂಡಿರುತ್ತವೆ. ಅದ್ಯಾಕೋ ಗೊತ್ತಿಲ್ಲ- ಮಳೆಗಾಲದಲ್ಲಿ ಹಬ್ಬಗಳು ಇಲ್ಲವೆಂದಲ್ಲ; ಕಡಿಮೆ. ನೆಲದ, ಮನುಷ್ಯನ ಮನಸ್ಸಿನ ಕೊಳೆಯನ್ನು ತೊಳೆದು ಒಮ್ಮೆ ಮಳೆ ಹಿಂಜರಿಯಿತೆಂದರೆ ಹಬ್ಬಗಳ ಸುಗ್ಗಿ.
ಇವನ್ನು ವಿವಿಧ ರೀತಿಗಳಲ್ಲಿ ಅರ್ಥೈಸಬಹುದು: ಒಂದೊಂದು ಹಬ್ಬಕ್ಕೆ ಒಂದೊಂದು ಅರ್ಥ. ಆದರೆ ಅವೆಲ್ಲ ಸಾಂಕೇತಿಕ. ಒಟ್ಟಾರೆ ಉದ್ದೇಶ ಸಾಮರಸ್ಯ. ಇಲ್ಲವಾದರೆ ಇವಕ್ಕೆ ಮಂದಿ ಕಿಸೆಯಿಂದ ಖರ್ಚು ಮಾಡಿಕೊಂಡು ಒಳಗೊಳ್ಳುವುದೇಕೆ? ವಿಶೇಷವೆಂದರೆ ಹಬ್ಬಗಳು ಒಂದೊಂದು ಜಾತಿ, ಮತದ ಆಚರಣೆಗಳಾದರೂ ಎಲ್ಲರನ್ನೂ ಒಳಗೊಳ್ಳುತ್ತವೆ. ಅಲ್ಲಿ ಬೇರೆ-ಬೇರೆ ಎಂಬ ಮನಸ್ಥಿತಿ ಇರುವುದಿಲ್ಲ; ಇರಬಾರದು.
ಈ ವಿಚಾರ ಈಗ ಕೆಲವು ವರ್ಷಗಳಲ್ಲಿ ತೀವ್ರವಾಗಿ ಬದಲಾಗಿ ಒಡಕುಬಿಂಬವಾದದ್ದು ನಮ್ಮೆದುರಿಗಿದೆ. ಇದು ಯಾವುದೇ ಒಂದು ಮತಧರ್ಮಕ್ಕೆ ಸೀಮಿತವಾಗಿಲ್ಲ. ಈಗ ಬರಲಿರುವ ಗಣೇಶನ ಹಬ್ಬ ಒಂದು ಪ್ರತಿಮೆ, ಸಂಕೇತ, ರೂಪಕ ಅಷ್ಟೇ. ಇದರ ಹಿನ್ನೆಲೆಯಲ್ಲಿ ಜನರನ್ನು ಮತ್ತೆ ಒಟ್ಟಾಗಿಸುವುದು, ಸಾಮರಸ್ಯದ ಬದುಕನ್ನು ಮತ್ತೆ ಮರುಸ್ಥಾಪಿಸುವುದು ಹೇಗೆ ಎಂಬ ಬಗ್ಗೆ ಚಿಂತಿಸಬೇಕಾಗಿದೆ. ಮಹಾಭಾರತ ಕಾಲದ ಕೃಷ್ಣ ಧರ್ಮ ಸಂಸ್ಥಾಪನೆಗಾಗಿ ಯುಗಯುಗಗಳಲ್ಲಿ ತಾನು ಸಂಭವಿಸುವುದಾಗಿ ಹೇಳಿದ್ದಾನೆಂದರೆ ಅದೆಷ್ಟೇ ಕಾಲ್ಪನಿಕವಾಗಿರಲಿ, ಕವಿಸಮಯವಾಗಿರಲಿ, ಧರ್ಮಗ್ಲಾನಿಯಾಗುವುದು, ಪರಸ್ಪರ ಜಗಳವಾಗುವುದು, ಒಳ್ಳೆಯದರ ವಿರುದ್ಧ ದುಷ್ಟಶಕ್ತಿಗಳ ಕೈಮೇಲಾಗಿ ಸಮಾಜವು ವಿಚ್ಛಿದ್ರವಾಗುವುದು, ಆ ಮೂಲಕ ಗೊಂದಲ ಮತ್ತು ವಿನಾಶ ಸಮೀಪಿಸುವುದು ಕಾಲನಿಯಮವೆಂದರ್ಥ.
ಗಣೇಶನ ಹಬ್ಬ ಎದುರಿದೆ. ಯಾವ ಒಂದು ಸಿದ್ಧಾಂತಕ್ಕೂ ಬಗ್ಗದ, ಆದರೆ ಒಗ್ಗುವ ಆಚರಣೆಯಿದು. ವಿದ್ಯುನ್ಮಾನ ಯುಗದಲ್ಲಿ ಎಲ್ಲರನ್ನೂ ಒಳಗೊಳ್ಳುವ ಸಾಧ್ಯತೆಯಿರುವ ಸಂಪ್ರದಾಯದ ಈ ಹಬ್ಬ ಮೂಢನಂಬಿಕೆಯ ಹಂತದ ವರೆಗೂ ಹಿಗ್ಗುತ್ತದಾದರೂ ಅದನ್ನು ಉತ್ಸವವೆಂದಷ್ಟೇ ಪರಿಗಣಿಸಿದರೆ ಯಾವ ಆತಂಕವೂ ಇಲ್ಲದೆ ಅನುಸರಿಸಬಹುದು. ಮುಂದೆ ಬರುವ ಅನೇಕ ಹಬ್ಬಗಳ ಆರಂಭದಂತಿರುವ ಈ ಹಬ್ಬ ಎಲ್ಲ ವಿಘ್ನಗಳನ್ನು ನಿವಾರಿಸುತ್ತದೆಂಬ ಭಾವನೆ ಜನರಿಗಿದೆ. ಇರಲಿ. ನೋವಾಗುವುದು ಹಬ್ಬಕ್ಕಾಗಿ ಸೃಷ್ಟಿಸುವ ಗಣೇಶನ ಪ್ರತಿಮೆಯನ್ನು ಹಬ್ಬದ ಕೊನೆಗೆ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸುವುದು. ಆತ ಸೊಂಡಿಲನ್ನು ನೀರಿನಿಂದ ಮೇಲೆತ್ತಿ ಉಸಿರಾಡಲೂ ಸಾಧ್ಯವಿಲ್ಲದಂತಹ ಮಲಿನ ವಾತಾವರಣವನ್ನು ಸೃಷ್ಟಿಸುವುದು. ಒಂದಲ್ಲ, ಹತ್ತಲ್ಲ, ನೂರಲ್ಲ, ಸಾವಿರಾರು ಇಂತಹ ಗಣೇಶಗಳು ಜಲಗಾಮಿಯಾಗುತ್ತವೆ. ಮನುಷ್ಯನ ಭ್ರಮೆಗಳನ್ನು, ಕೊಳೆಯನ್ನು, ಕಿಲುಬನ್ನು ಕಳೆಯುವ ಜಲಗಾರನಾಗಿ ದೇವರುಗಳು ಧರೆಗಿಳಿಯುವುದು ಯಾವಾಗ?
ಒಟ್ಟಾಗಿಸಬೇಕಾದ ಹಬ್ಬಗಳು ವಿಭಜಿಸುವ ಹಂತಕ್ಕೆ ಬಂದದ್ದಕ್ಕೆ ಇತ್ತೀಚೆಗಿನ ದಶಕಗಳ ನಡೆ, ನಡತೆಗಳೇ ಸಾಕ್ಷಿ. ಸ್ವಾತಂತ್ರ್ಯದಂತಹ ಉದಾತ್ತ, ಅನಿವಾರ್ಯ ಕರ್ತವ್ಯಕ್ಕೆ ಬಾಲಗಂಗಾಧರ ತಿಲಕರು ಕರೆಕೊಟ್ಟು ಜನರನ್ನು ಒಟ್ಟಾಗಿಸಲು ನೆಪವಾದ ಗಣೇಶನ ಹಬ್ಬದ ಸಂಭ್ರಮವು ತಿಲಕರು ಗತಿಸಿದರೂ, ಸ್ವಾತಂತ್ರ್ಯ ಸಿಕ್ಕಿ ಎಂಟು ದಶಕಗಳಾಗುತ್ತ ಬಂದರೂ ಇನ್ನೂ ಆರಿಲ್ಲ. ಆದರೆ ವ್ಯತ್ಯಾಸವೆಂದರೆ ಈ ಬೆಳಕು ಈಗೀಗ ಬೆಂಕಿಯಾಗುತ್ತಲಿದೆ. ಮಾರಕಶಕ್ತಿಗಳು ಹಬ್ಬದ ನೆಪದಲ್ಲಿ ವಾತಾವರಣವನ್ನು ಮಾತ್ರವಲ್ಲ, ಸಮಾಜದ ಏಳಿಗೆಗೆ ಅಗತ್ಯವಾದ ಅನ್ಯೋನ್ಯವನ್ನು ಕೆಡಿಸುತ್ತಿವೆ. ನಮ್ಮ ಹಬ್ಬಗಳು ಮನೆಯೊಳಗೆ ನಡೆಯುವ ಬದಲು ಬೀದಿಗಿಳಿದದ್ದರ ಪ್ರಭಾವ, ವಿಭವ ಇದು. ತಿಲಕರ ಕಾಲದಲ್ಲಿದ್ದ ಆಶಯ, ಉದ್ದೇಶ ಈಗಿಲ್ಲ. ಆಗ ಸ್ವಾತಂತ್ರ್ಯಕ್ಕಾಗಿ ಜನರು ಒಟ್ಟಾಗಬೇಕಿತ್ತು. ಈಗ ಜನರು ಒಟ್ಟಾಗಿ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ(ಸಿ) ಆಚರಿಸುತ್ತಿದ್ದಾರೆ.
ಈಗಿನ್ನೂ ಗಣೇಶನ ಹಬ್ಬ. ಮೊನ್ನೆ ಮೊನ್ನೆ ನಡೆದ ಗೋಕುಲಾಷ್ಟಮಿಯಾಗಲೀ, ಮೀಲಾದುನ್ನಬಿ ಆಗಲೀ ಎಲ್ಲ ಧರ್ಮೀಯರ ಇನ್ನಿತರ ಹಬ್ಬಗಳಾಗಲೀ ಗಣೇಶನ ಮುಂದೆ ಮಸುಕಾಗುತ್ತವೆ. ಗಣೇಶ ಎಲ್ಲ ಆಚರಣೆಗಳ ಅಗ್ರಮಾನ್ಯ ಮೂರ್ತಿ. ಆತ ವಿಘ್ನ ವಿನಾಶಕ ಎಂಬ ಬಿರುದಿದ್ದರೂ ವಿಘ್ನಾರಂಭಿಯೋ ಎಂಬಂತೆ ಹಬ್ಬ ಆರಂಭವಾಗುತ್ತದೆ. ಇದಕ್ಕಾಗಿ ಎಲ್ಲ ಕಡೆ ತಯಾರಿ ನಡೆಯುತ್ತಿದೆ. ಇವರಲ್ಲಿ ಎಷ್ಟು ಮಂದಿ ಧಾರ್ಮಿಕ ಉದ್ದೇಶವನ್ನು, ಎಷ್ಟು ಮಂದಿ ಮುಗ್ಧ ಭಕ್ತಿಯನ್ನು, ಎಷ್ಟು ಮಂದಿ ವ್ಯಾಪಾರೀ/ವ್ಯವಹಾರೀ ಉದ್ದೇಶವನ್ನು, ಎಷ್ಟು ಮಂದಿ ರಾಜಕೀಯ ದುರುದ್ದೇಶವನ್ನು ಮತ್ತು ಎಷ್ಟು ಮಂದಿ ಇವೆಲ್ಲದಕ್ಕಿಂತ ಭಿನ್ನವಾದ ವಿಘ್ನಸಂತೋಷದ ಅಥವಾ ದರ್ಪದ/ಅಹಂಕಾರದ ಗೂಂಡಾ ಪ್ರವೃತ್ತಿಯ ಮೂಲಕ ಅಶಾಂತಿಯ ಉದ್ದೇಶವನ್ನು ಹೊಂದಿದ್ದಾರೆ ಎಂಬುದನ್ನು ಕರಾರುವಾಕ್ಕಾಗಿ ಹೇಳುವುದು ಕಷ್ಟವಾದರೂ ಆ ಕುರಿತ ಮುನ್ಸೂಚನೆ ಅನೇಕ ವರ್ಷಗಳಿಂದ ಇವೆ.
ಹಬ್ಬಗಳೆಂದರೆ ಮಾಲಿನ್ಯಕಾರಕವಾದ ಆಚರಣೆಯಲ್ಲ. ಆದರೆ ಹಬ್ಬಗಳಲ್ಲಿ ಪೂಜೆ, ಹೋಮ, ಹವನ ಮುಂತಾದ ಮಾಲಿನ್ಯಕಾರಕವೆನ್ನಬಹುದಾದ ವಿಧಿಗಳು ಯಾರು ಒಪ್ಪಲಿ, ಬಿಡಲಿ, ಸಾಂಪ್ರದಾಯಿಕವೆಂಬಂತೆ ನಡೆದುಬಂದಿದೆ. ಇವುಗಳ ಆಚರಣೆ ದೇವಸ್ಥಾನಗಳಲ್ಲಿ ಅಥವಾ ನಿಗದಿತ ಆವರಣದಲ್ಲಿ ನಡೆಸಲಾಗುತ್ತದೆ. ಹಾಗಾದರೂ ಇರಲಿ; ಸಕಲ ಸಮುದಾಯಗಳು ಒಟ್ಟಿಗೇ ಬದುಕುವಲ್ಲಿ ಅನೇಕ ಸಂಗತಿಗಳನ್ನು ವೈಚಾರಿಕವಾಗಿ, ವೈಜ್ಞಾನಿಕವಾಗಿ ನೋಡದೆ ಭಾವನಾತ್ಮಕವಾಗಿ ನೋಡಬೇಕಾಗುತ್ತದೆ. ಈ ದೇಶದ ‘ಜಾತ್ಯತೀತತೆ’ಯೆಂದರೆ ‘ಧರ್ಮನಿರಪೇಕ್ಷತೆ’. ಎಲ್ಲ ಧರ್ಮಾಚರಣೆಗಳನ್ನೂ ಸಮಾನವಾಗಿ ನೋಡುವುದು (ಅಂದರೆ ಸಹಿಸುವುದು ಎಂದರ್ಥ!) ಆದರೆ ಇದಕ್ಕೆ ಸಾಮಾಜಿಕವೆಂಬಂತೆ ಸೇರಿಸಲ್ಪಟ್ಟ ಮೆರವಣಿಗೆಗಳು, ಸಿಡಿ-ಮದ್ದು-ಗುಂಡು ಮುಂತಾದ ಸದ್ದಿನ, ಹೊಗೆಯ, ಕೆಲವು ಬಾರಿ ಬೆಂಕಿಯ ವೈಭವ ಈಗ ಪ್ರಮುಖ ಸಮಸ್ಯೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಹಬ್ಬಗಳಿಗೆ ಡಿಜೆಯ ಸದ್ದನ್ನು ಹೂಡುವ ಭಯಾನಕ ಪದ್ಧತಿ ನಡೆಯುತ್ತಿದೆ. ಇವೆಲ್ಲವೂ ವಾತಾವರಣವನ್ನು ಮಲಿನಗೊಳಿಸುವ ಸಾಧನಗಳು. ಆದರೆ ಜನರಿಗೆ ಭಕ್ತಿಯ ಹೆಸರಲ್ಲಿ ಇವನ್ನು ನಡೆಸಲೇಬೇಕೆಂಬ ಉತ್ಸಾಹ. ಅದೀಗ ಉನ್ಮಾದದ ಸ್ಥಿತಿ ತಲುಪಿದೆ. ಇವನ್ನು ನ್ಯಾಯಾಲಯಗಳು ನಿಯಂತ್ರಣದ ಮಿತಿಗೊಳಪಡಿಸಿವೆ. ಆದರೆ ಜನತಾ ನ್ಯಾಯಾಲಯದ ಮುಂದೆ ಈ ತೀರ್ಪುಗಳು ಉಳಿಯುತ್ತಿಲ್ಲ. ಯಾವ ಮಿತಿಯೂ ಇಲ್ಲದೆ ಇವು ನಡೆಯುತ್ತಿವೆ. ಮಾಧ್ಯಮಗಳಲ್ಲಿ ಕಾನೂನು ಪಾಲಕ ಪ್ರಾಧಿಕಾರಗಳು, ಅಧಿಕಾರಿಗಳು ಈ ಕುರಿತು ಮತ್ತೆಮತ್ತೆ ಸಂಘಟಕರನ್ನೂ, ಸಾರ್ವಜನಿಕರನ್ನು ಎಚ್ಚರಿಸುವ ಪದ್ಧತಿಯಿದೆಯಾದರೂ ಅದು ಮಾತು ಮತ್ತು ಫಲಕಗಳಲ್ಲೇ ಉಳಿದಿದೆ.
ಹಬ್ಬಗಳಿಗೆ ಚಂದಾ ವಸೂಲು ನಡೆಯುತ್ತದೆ. ಹೇಳಿಕೇಳಿ ಇವು ಸಾರ್ವಜನಿಕ ಆಚರಣೆ. ಸಹಜವಾಗಿಯೇ ಎಲ್ಲರೂ ಸಹಕಾರ ನೀಡಬೇಕು, ನೀಡುತ್ತಾರೆ. ಆದರೆ ಈ ಸಂಗ್ರಹದ ಹಿಂದೆ ಭಾರೀ ವಂಚನೆಯ ಜಾಲವಿರುವುದೂ ಉಂಟು. ವಂತಿಗೆಯನ್ನು ಹಫ್ತಾ ವಸೂಲಿಯಂತೆ ಸಂಗ್ರಹಿಸುವ ದೊಡ್ಡ ಪಡೆಯೇ ಇದೆ. ಇವರನ್ನು ವಿರೋಧಿಸುವ ಧೈರ್ಯ, ಸಾಮರ್ಥ್ಯ ಸಮಾಜದ ಬಹುಪಾಲು ಜನರಿಗಿಲ್ಲ. ಅನೇಕರ ಬಳಿಯಿರುವ ರಶೀದಿ ಪುಸ್ತಕಗಳಿಗೆ ಯಾವ ಅಧಿಕೃತತೆಯೂ ಪ್ರಾಪ್ತವಾಗುವುದಿಲ್ಲ. ದೇವರಿಗೆ ತಲುಪಿದೆಯೆಂದು ನಂಬಬೇಕಷ್ಟೇ. ಹೀಗೆ ಸಂಗ್ರಹವಾದ ಮೊತ್ತದ ವಿವರಗಳನ್ನು ಕೆಲವು ಸಂಘಟನೆಗಳಷ್ಟೇ ಸಾರ್ವಜನಿಕರ ಮುಂದಿಡುತ್ತವೆ.
ಹಬ್ಬಗಳ ಸಮಯದಲ್ಲಿ ಮದ ಮಾರಾಟವನ್ನು ನಿಷೇಧಿಸುವುದು ಗಲಭೆಯನ್ನು ತಡೆಯಲು ಆಡಳಿತದ ಒಂದು ಸೂತ್ರ. ಆದರೆ ಇದು ಸಂಬಂಧಿಸಿದ ‘ಭಕ್ತ’ರಿಗೆ ಮೊದಲೇ ತಿಳಿದಿರುವುದರಿಂದ ಅವರು ಸಾಕಷ್ಟು ಮದ್ಯವನ್ನು, ಮನೆಯಲ್ಲೋ ಇನ್ನೆಲ್ಲೋ ಶೇಖರಿಸಿಟ್ಟು ಹಬ್ಬಕ್ಕಾಗಿ ವಿನಿಯೋಗಿಸುತ್ತಾರೆ. ಗಣೇಶನಿಗೆ ಇದು ಪ್ರಿಯವೋ ಅಲ್ಲವೋ, ಬಹಳಷ್ಟು ‘ಭಕ್ತ’ರಿಗೆ ಅದು ಪ್ರಿಯ. ‘ದೇಹೋ ದೇವಾಲಯ ಪ್ರೋಕ್ತೋ ಜೀವೋ ದೇಹ ಸನಾತನ..’ ಎಂಬ ಶ್ಲೋಕದ ಭಾವದಂತೆ ಈ ಆತ್ಮಪ್ರಿಯರು ತಮ್ಮ ಪೂಜೆಯನ್ನು ತಮಗೇ ಮಾಡಿಕೊಂಡು ಈ ಮೂಲಕ ಅಭಿಷೇಕಗೊಳಿಸುತ್ತಾರೆ. ಹೀಗಾಗಿ ಮದ್ಯಮಾರಾಟವನ್ನು ನಿಷೇಧಿಸುವ ಬದಲು ಅಧಿಕೃತಗೊಳಿಸುವುದೇ ಸುಖವೆಂದು ಕಾಣುತ್ತದೆ.
ಮಾಧ್ಯಮಗಳಲ್ಲಿ ಬರುವ ಮಾರ್ಗದರ್ಶನವನ್ನು ನೋಡಿದರೆ ಕೊರೋನ ಕಾಲದ ನಿಯಂತ್ರಣಗಳು ನೆನಪಾಗಬೇಕು. ಕಾನೂನನ್ನು ನಿರ್ದೇಶಿಸುವ ಅಧಿಕಾರಿಗಳಿಗಂತೂ ಇದೊಂದು ಸವಾಲು. ಗಣೇಶ ಹಬ್ಬದ ಶುಭಾಶಯಗಳನ್ನು ಹೇಳಲು ಗಣೇಶನ ವಿಗ್ರಹ/ಮೂರ್ತಿಗಿಂತಲೂ ದೊಡ್ಡದಾಗಿ, ಎತ್ತರವಾಗಿ ಸಿನೆಮಾ ಹೀರೋಗಳನ್ನೂ ನಾಚಿಸುವಂತೆ ತಮ್ಮ ಬೃಹದಾಕಾರದ ಕಟೌಟ್‌ಗಳನ್ನು ಪ್ರದರ್ಶಿಸಲು ರಾಜಕಾರಣಿಗಳು ಪರಸ್ಪರ ಸ್ಪರ್ಧಿಸುತ್ತಾರೆ. ಇದಕ್ಕಾಗಿಯೇ ಹೊಡೆದಾಟಗಳೂ ನಡೆಯುವುದುಂಟು. ಗಣೇಶನ ಹೆಸರಿನಲ್ಲಿ ಅಂತಲ್ಲ ಯಾವುದೇ ದೇವದೇವತೆಗಳ ನೆಪದಲ್ಲಿ ಪ್ರದರ್ಶನ-ಪ್ರಚಾರ ರಾಜಕೀಯ ಹೊಸತಲ್ಲ. ಆದರೆ ಈಗೀಗ ಇವು ಲಜ್ಜಾಹೀನ ಹಂತವನ್ನು ತಲುಪಿವೆ.
ಪೊಲೀಸರು ಅಗಾಧ ತಾಳ್ಮೆಯನ್ನು ತೋರಿಸಿ ಗಣೇಶೋತ್ಸವಗಳನ್ನು ಶಿಸ್ತುಬದ್ಧವಾಗಿ ನಡೆಯುವಂತೆ ನಿರ್ದೇಶನವನ್ನು ನೀಡುತ್ತಾರೆ. ಆದರೆ ಜನರು ಕೇಳಬೇಕಲ್ಲ! ತಮಾಷೆಯೆಂದರೆ ಗಣೇಶನ ಮೆರವಣಿಗೆಯು ಇಂತಹ ದಾರಿಯಲ್ಲೇ ಹೋಗಬೇಕೆಂದು ಪೊಲೀಸರು ಹೇಳಬೇಕಾದ ಸ್ಥಿತಿಯಿದೆ. ಇದಕ್ಕೆ ಕಾರಣವೆಂದರೆ ಈ ಆಚರಣೆಯಲ್ಲಿ ರಾಜಕೀಯ, ಮತಾಂಧತೆ, ಗೂಂಡಾಗಿರಿ ಇವೆಲ್ಲವೂ ತಲೆತೂರಿಸುತ್ತವೆ. ಗೋಕುಲಾಷ್ಟಮಿಗೂ ಇಮಾಂಸಾಬಿಗೂ ಏನು ಸಂಬಂಧವೆಂದು ಕೇಳುವ ಕಾಲವೊಂದಿತ್ತು. ಅದು ಯಾರನ್ನೂ ಟೀಕಿಸುವ ಹಳಿಯುವ ಮಾತಾಗಿರಲಿಲ್ಲ. ಆದರೆ ಈಗ ಆ ಸಂಬಂಧಕ್ಕೊಂದು ಹೊಸ ಅರ್ಥ, ವಿನ್ಯಾಸ ಸೃಷ್ಟಿಯಾಗಿದೆ. ಗಣೇಶೋತ್ಸವ ಬಂತೆಂದರೆ ಮಸೀದಿಗಳು, ಚರ್ಚುಗಳು ಆತಂಕದ ಸ್ಥಿತಿಯಲ್ಲಿರುತ್ತವೆ. ಇಮಾಂಸಾಬಿಗೆ ತನ್ನ ಮೇಲೆ ತನ್ನ ಮಸೀದಿಯ ಮೇಲೆ ಯಾರು ಎಲ್ಲಿ ಕಲ್ಲೆಸೆಯುತ್ತಾರೋ ಎಂಬ ಭಯವಿದೆ. ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಇದರ ಸಂಭವನೀಯತೆಯನ್ನು ಅರಿತ ಪೊಲೀಸರು ಹಬ್ಬದ ಮೆರವಣಿಗೆಯು ಮಸೀದಿಗಳೆದುರು ಹೋಗುವುದನ್ನು, ಹೋದರೂ ಅಲ್ಲಿ ಮೆರವಣಿಗೆಯನ್ನು ನಿಲ್ಲಿಸಿ ಪಟಾಕಿ-ಮತಾಪುಗಳನ್ನು ಸಿಡಿಸುವುದನ್ನು ನಿಷೇಧಿಸಲು ಮುನ್ನೆಚ್ಚರಿಕೆಯನ್ನು ನೀಡುತ್ತಿದ್ದಾರೆ. ಇವನ್ನು ಮೀರಿ ಹಿಂಸಾಚಾರಗಳು ನಡೆಯುತ್ತವೆ; ಆ ಮೂಲಕ ಹಬ್ಬದ ನೆಪದಲ್ಲಿ ಸಮಾಜವನ್ನು ಅಡ್ಡಾನೀಟಾ ವಿಭಜಿಸುವ, ಪ್ರತ್ಯೇಕಿಸುವ ದುರುದ್ದೇಶಗಳು ಯಶಸ್ವಿಯಾಗುತ್ತವೆ. ಗಣೇಶ ನೀರಿನಲ್ಲಿ ಮುಳುಗಿದರೂ ದ್ವೇಷವು ನೀರಮೇಲೆ ಹೊಗೆಯಾಡುತ್ತಲೇ ಇರುತ್ತದೆ. ಆಸ್ಪತ್ರೆಗಳಿಗೂ, ನ್ಯಾಯಾಲಯಗಳಿಗೂ, ಶ್ಮಶಾನಗಳಿಗೂ ಗಿರಾಕಿಗಳು ಸೃಷ್ಟಿಯಾಗುತ್ತವೆಂಬುದು ವರ್ತಮಾನದ ಹಾಸ್ಯಾಸ್ಪದ, ದುರಂತ ವಾಸ್ತವ.
ಇಂತಹ ಮನುಷ್ಯನಿರ್ಮಿತ ಅಸಂಬದ್ಧಗಳು ನಿಜಕ್ಕೂ ನಂಬುವ ಜನರಿಗೂ ನಂಬುವವರಿಗೆ ಇಂಬು ನೀಡುವವನೆಂಬ ಬಿರುದನ್ನು ಹೊತ್ತ ಗಣೇಶನಿಗೂ ಅವಮಾನ. ಎಲ್ಲರನ್ನೂ ಕಾಪಾಡಬೇಕಾದ ದೇವರ ಉತ್ಸವವು ಜನರನ್ನು ಜನರಿಂದಲೇ ಕಾಪಾಡುವುದಕ್ಕೆ ಪೊಲೀಸ್ ಜನರ, ಆಡಳಿತಯಂತ್ರದ ಮೊರೆಹೋಗಬೇಕಾದ್ದು ಗಣೇಶನ ದುರ್ದೈವ.
ಇದು ಈ ಒಂದು ಹಬ್ಬಕ್ಕೆ ಮೀಸಲಾಗಿಲ್ಲ. ಮುಂದೆ ದಸರಾ, ದೀಪಾವಳಿ ಮುಂತಾದ ಅನೇಕ ರಾಷ್ಟ್ರೀಯ ಹಬ್ಬಗಳಿವೆ. ಇಲ್ಲೆಲ್ಲ ಹಿಂಸೆಯೆಂಬುದು ಸಹಜ ಬೆಳವಣಿಗೆಯಾಗಿದೆ. ಹಿಂಸೆ ನಡೆಯಿತೆಂದರೆ ಜನರು ಅಷ್ಟೇನಾ ಎಂದು ವಿಚಾರಿಸಿ ಮುಖ ತಿರುಗಿಸುವ ಕಾಲವಿದು. ರಾಮಲೀಲೆಯಲ್ಲಿ ರಾವಣ ಮಾತ್ರವಲ್ಲ ಅನೇಕ ಮುಗ್ಧರು ಬಲಿಯಾಗುತ್ತಾರೆ. ದೀಪಾವಳಿಯಲ್ಲಿ ನರಕಾಸುರನೊಂದಿಗೆ ಅನೇಕ ಮುಗ್ಧರ ಹತ್ಯೆಯೂ ನಡೆಯುತ್ತದೆ. ಹಬ್ಬಗಳೆಂದರೆ ಸಂಸಾರಸ್ಥರಿಗೆ ಭಯ, ಆತಂಕ. ಈ ಹಬ್ಬಗಳು ಯೋಜಿಸುವ ಮೆರವಣಿಗೆಗಳಿಗೆ- ಅದರಲ್ಲೂ ರಾತ್ರಿ ನಡೆಯುವ ಸಂಭ್ರಮಗಳಿಗೆ ಹೆಂಗಸರು ಮಕ್ಕಳೊಂದಿಗೆ ಹೋಗುವ ಮೊದಲು ಸಾಕಷ್ಟು ಎಚ್ಚರವನ್ನು ವಹಿಸುವುದು ಒಳ್ಳೆಯದು. ಹಿಂದೆಲ್ಲ ನಡೆಯುವ ಉತ್ಸವಗಳಿಗೆ ಜಾತ್ರೆಯೆಂಬ ಅಭಯಕಾರೀ ಹೆಸರಿತ್ತು. ಈಗ ಎಲ್ಲವೂ ಉತ್ಸವಗಳಾಗಿ ಬದಲಾಗಿವೆ. ಅದರಲ್ಲಿ ‘ಭರ್ಜರಿ’, ‘ಅದ್ದೂರಿ’ ಮುಂತಾದ ವಿಶೇಷಣಗಳೆಂದರೆ ಎಲ್ಲರೂ ಭಯಪಡಬೇಕು. ದೇವರ ಭಯವೇ ಜ್ಞಾನದ ಆರಂಭವೆಂಬ ಸೂಕ್ತಿಯ ಬದಲು ಉತ್ಸವಗಳು ಭಯದ ಆರಂಭವೆಂಬ ಮಾತು ನಡೆಯಬಹುದಾಗಿದೆ.
ಹಬ್ಬಗಳು ನಿರಾಕರಿಸಲಾಗದ ವಾಸ್ತವಗಳು. ಎಲ್ಲ ಧರ್ಮಗಳಿಗೂ; ಎಲ್ಲ ಮತಗಳಿಗೂ. ಬೇಕಾದ್ದಿಷ್ಟೇ: ಇವು ಸಾಂಕೇತಿಸುವ ಸಂಭ್ರಮದ ಹಿಂದೆ ಒಂದು ಇತ್ಯಾತ್ಮಕ ಬದುಕಿದೆಯೆಂಬುದನ್ನು ಸಮಾಜ ಅರಿಯುವುದು. ಇವು ಒಳ್ಳೆಯವು ಹೌದಾದರೆ ಅದಕ್ಕಾಗಿ ಎಷ್ಟೇ ರಾಜಕೀಯ ನಡೆಗಳಿರಲಿ, ಕೆಟ್ಟ ಮನಸ್ಥಿತಿಯ ನೇಪಥ್ಯದ ಪ್ರಭಾವಿಗಳಿರಲಿ, ಸಮಾಜ ಒಟ್ಟಾಗಬೇಕು. ಕ್ರೀಡೋತ್ಸವದಲ್ಲಿ, ಸಿನೆಮಾ ನಟರ ಮೆರವಣಿಗೆಯಲ್ಲಿ ಕಾಲ್ತುಳಿತ ನಡೆದರೆ ಅದು ಉನ್ಮಾದದ ಪ್ರತಿಫಲವೆನ್ನಬಹುದು; ಜಗನ್ನಾಥನ ರಥಯಾತ್ರೆಯಲ್ಲಿ ಕಾಲ್ತುಳಿತ ನಡೆದರೆ? ಅದು ಉತ್ಸವದ ಅಡ್ಡ ಪರಿಣಾಮವೆನ್ನಬೇಕಾಗುತ್ತದೆ. ಅಂತಹದ್ದು ನಡೆಯದಿದ್ದರೆ ಈ ಉತ್ಸವಗಳಿಗೆ ಒಂದು ಅರ್ಥ ಬರುತ್ತದೆ. ಅದು ಬದುಕನ್ನು ಬೆಳಕಾಗಿಸುವ ಅರ್ಥ. ಇದನ್ನು ರೂಪಿಸುವವರು ಬೇಕಾಗಿದ್ದಾರೆ. ಬುದ್ಧಿವಂತ ಧೂರ್ತರಿಂದ ಇದು ಸಾಧ್ಯವಿಲ್ಲ. ಬುದ್ಧಿವಂತರಲ್ಲದಿದ್ದರೂ ಸಜ್ಜನರು ಮಾತ್ರ ಇದನ್ನು ಸಾಧಿಸಬಹುದು.
(ಅಂಕಣಕಾರರು ಸಾಹಿತಿ, ಹಿರಿಯ ವಕೀಲರು)






