ಇಂಗ್ಲಿಷ್ಗೊಂದು ನ್ಯಾಯ?

ಇಂಗ್ಲಿಷ್ ಬಳಕೆಯು ಗುಲಾಮಗಿರಿಯಲ್ಲ. ಅದು ನಮ್ಮ ಹಿರಿತನದ ಗರಿಯೂ ಅಲ್ಲ. ಕನ್ನಡ ಮತ್ತಿತರ ಭಾಷೆಗಳು ಹೇಗೆಯೋ ಅದೂ ಹಾಗೆಯೇ. ಹೀನೋಪಮೆಯಾಗುತ್ತದೆಯಾದರೂ ಹೀಗನ್ನಿಸಬೇಕು: ಪೊರಕೆ ನಮಗೆ ನಿತ್ಯಬಳಕೆಯ ವಸ್ತು. ಹಾಗೆಂದು ಅದನ್ನು ತಲೆಯ ಮೇಲಿಟ್ಟು ತೂಗಬಾರದು. ನ್ಯಾಯಮೂರ್ತಿಗಳಿಗೆ ಇಂಗ್ಲಿಷ್ ಅವಲಂಬನವೆಂದು ಅನ್ನಿಸಿದ್ದು ಅವರ ದೋಷವೇ ಹೊರತು ಇಂಗ್ಲಿಷಿನದ್ದಲ್ಲ. ಅದು ತನ್ನಷ್ಟಕ್ಕೆ ತಾನೇ ಲಂಗದ ನಿರಿಯನ್ನು ಚಿಮ್ಮಿಸುತ್ತ ನಮ್ಮ ದೇಶೀಭಾಷೆಗಳೊಡನೆ ಸುಖ ಸಂಭಾಷಣೆಯ ಸುಖಗೀತವನ್ನು ಹಾಡುತ್ತಿದೆ. ಬದುಕನ್ನು ಆಧುನಿಕವಾಗಿ ಮಾಡುತ್ತಿದೆ. ನ್ಯಾಯಾಲಯದ ಒಳಾಂಗಣದಲ್ಲಿ ಮತ್ತು ಹೊರಗಿನ ಬಯಲಿನಲ್ಲಿ ಬಳಸುವವರನ್ನು ಪರೀಕ್ಷಿಸುತ್ತಿದೆ.
ಅಲ್ಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗೌತಮ್ ಚೌಧರಿಯವರು ‘‘ನಾವಿನ್ನೂ ನಮ್ಮನ್ನು 300 ವರ್ಷಗಳ ಕಾಲ ಆಳಿದವರ ಇಂಗ್ಲಿಷ್ ಭಾಷೆಯನ್ನು ಯಾಕೆ ಅವಲಂಬಿಸಿದ್ದೇವೆ?’’ ಎಂದು ಹೇಳಿದರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಯಾರೋ ಹೇಳಿದರೆ ಅದನ್ನು ಕೊಡವಿಹಾಕಬಹುದು. ಆದರೆ ಎತ್ತರದ ಸಾಂವಿಧಾನಿಕ ಪೀಠದಲ್ಲಿರುವವರೊಬ್ಬರು ಹೇಳಿದ್ದನ್ನು ಅಲಕ್ಷಿಸಲಾಗುವುದಿಲ್ಲ. ಏಕೆಂದರೆ ಅದು ಅವರು ಯಾರಿಗೋ ಅಥವಾ ಯಾರೋ ಅವರಿಗೆ ನೀಡಿದ ಸೂಚನೆಯಂತಿದೆ. ಅದರಲ್ಲೂ ಈಚೀಚೆಗೆ ನ್ಯಾಯಾಂಗದಲ್ಲಿ ಹೊಣೆಯಿರುವವರು ಹೇಳುವ ಮಾತುಗಳಿಗೆ ರಾಜಕೀಯ ಅಥವಾ ಅಧಿಕಾರಶಾಹಿಯ ಅಥವಾ ಜನಪ್ರಿಯತೆಯ, ಪ್ರಚಾರದ, ಸಂಪರ್ಕದ ವಾಸನೆ ಬಡಿಯಲು ಆರಂಭವಾಗಿದೆ.
1975ರ ತುರ್ತುಸ್ಥಿತಿಯಲ್ಲಿ ಕೆಲವು ನ್ಯಾಯಮೂರ್ತಿಗಳು ಅನುಕೂಲ ಸಿದ್ಧಾಂತವನ್ನು ಹೂಡಿ ಅಧಿಕಾರ ಹೊಂದಿದವರಿಗೆ ಪ್ರಿಯರಾಗುವ ಉದ್ದೇಶದಿಂದ ಪ್ರವಾಹದೊಂದಿಗೆ ಈಸಿದ್ದು ಮತ್ತು ಈ ಪೈಕಿ ಕೆಲವರಾದರೂ ಜಯಿಸಿದ್ದು ಈಗ ಇತಿಹಾಸ. ಅದಾಗಿ ಕೆಲವು ದಶಕಗಳು ಪರಿಸ್ಥಿತಿ ತಿಳಿಯಾಗಿತ್ತು. ಆದರೂ ತುರ್ತುಸ್ಥಿತಿಯಲ್ಲಿ ಪ್ರತಿಪಕ್ಷದ ನಾಯಕರ ಪರವಾಗಿ ವಾದಿಸಿದ್ದೇ ಕಾರಣವಾಗಿ ನ್ಯಾಯಮೂರ್ತಿಗಳಾಗಿ ಆಯ್ಕೆಯಾದವರಿದ್ದರು. ರಾಜ್ಯಪಾಲರಂತಹ ಆಲಂಕಾರಿಕ ಹುದ್ದೆಗಳಿಗೆ ಚುನಾವಣೆಯಲ್ಲಿ ಸೋತವರನ್ನು, ಪೀಠಪ್ರಿಯರನ್ನು, ಪಕ್ಷದೊಳಗೆ ಅಹಿತ ಅನಿವಾರ್ಯರನ್ನು, ಪೀಠಸ್ಥರು ಆರಿಸುವುದು ಮುಂಚಿನಿಂದಲೂ ಬಳಕೆಯಲ್ಲಿತ್ತು. ಆದರೆ ಇವು ರಾಜಕೀಯಕ್ಕೆ, ಹೆಚ್ಚೆಂದರೆ ರಾಜಕಾರಣಕ್ಕೆ ಸೀಮಿತವಾಗಿತ್ತು. ರಾಜಕೀಯದಲ್ಲಿ ನ್ಯಾಯಾಂಗದ ಕುರಿತು ಒಂದು ರೀತಿಯ ಅಸ್ಪಶ್ಯತೆೆಯಿತ್ತು. ಇದಕ್ಕೆ ನ್ಯಾಯಾಂಗದ ಮಡಿವಂತಿಕೆಯೋ ಅಥವಾ ನ್ಯಾಯಾಂಗದ ಕುರಿತ ಅವಿಶ್ವಾಸವೋ ಕಾರಣವಾಗಿತ್ತು.
ಆನಂತರ ಈಗ ಒಂದೆರಡು ದಶಕಗಳಿಂದ ಆಳುವವರಿಗೆ ಪ್ರಿಯರಾದರೆ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸುವುದು ವಾಡಿಕೆಯಾಗಿದೆ. ಇದರಲ್ಲಿ ನ್ಯಾಯಮೂರ್ತಿಗಳು ಮಾತ್ರವಲ್ಲ, ಸಾಲಿಸಿಟರ್ ಜನರಲ್, ಅಡ್ವೋಕೇಟ್ ಜನರಲ್ ಮುಂತಾದ ಹುದ್ದೆಗಳೂ ಇವೆ. ತುಷಾರ್ಮೆಹ್ತಾರಿಂದ ಮೊದಲ್ಗೊಂಡು ರಾಜ್ಯಗಳ ಹುದ್ದೆಗಳೂ ಆಳುವವರ ಪಾನಕ, ಪನಿವಾರ, ಕೋಸಂಬರಿ ಪ್ರಸಾದವನ್ನು ಪಡೆದಿದ್ದರು. ಹಾಗೆಯೇ ಆಡಳಿತವನ್ನು ನಿಷ್ಪಕ್ಷಪಾತವಾಗಿ ಮತ್ತು ಕೆಲವೊಮ್ಮೆಯಾದರೂ ಉಗ್ರವಾಗಿ ಟೀಕಿಸುವವರನ್ನು ದೂರವಿಡುತ್ತಿದ್ದರು. ಸರ್ವೋಚ್ಚ ನ್ಯಾಯಮೂರ್ತಿಗಳಾಗಿ ಏರಬೇಕಾದ ನ್ಯಾಯಮೂರ್ತಿ ಖುರೇಷಿ, ಮುರಳೀಧರ್ ಮುಂತಾದವರು ಇಂತಹ ವಂಚನೆಯನ್ನು ಅನುಭವಿಸಿದರು. ಇನ್ನು ಕೆಲವರು ನಿವೃತ್ತಿಯ ಸಮೀಪದಲ್ಲಿರುವಾಗ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ರಾಜಕಾರಣಿಗಳ ಸುತ್ತಮುತ್ತ ಸುಳಿದೋ ಅಥವಾ ಅವರಿಗೆ ಅಗತ್ಯವಾದ ಮತ್ತು ತಮಗೆ ತೊಂದರೆಯಾಗದ ಉಪಕಾರವೈಭವವನ್ನು ನೀಡಿಯೋ ಅಂತೂ ನಿವೃತ್ತಿಯ ನಂತರ ಆಯಕಟ್ಟಿನ ಸೌಲಭ್ಯವನ್ನು ಹೊಂದಿದರು. ಇದು ನಮಗೆ ಗೊತ್ತಿದ್ದಂತೆ ಇಲ್ಲವೇ ಗೊತ್ತಿಲ್ಲದಂತೆ ನಡೆಯುತ್ತಲೇ ಇದೆ. ನಮ್ಮ ಸಮಾಜದ ಮಾಮೂಲು ‘ಏನು ಮಹಾ? ಇದೆಲ್ಲ ಸಾಮಾನ್ಯ’ ಎಂಬ ಉದ್ಗಾರದ ನಡುವೆ ಯಾರಾದರೂ ತೀವ್ರವಾಗಿ ಘಾಸಿಗೊಂಡಾಗ ಮಾತ್ರ ಸಾರ್ವಜನಿಕರು ಹುಬ್ಬೇರಿಸುತ್ತಾರೆ.
ಶಾಸಕಾಂಗ, ಕಾರ್ಯಾಂಗದ ವಿಧಿವಿಧಾನಗಳು ಎಲ್ಲಿಯ ವರೆಗೆ ಕಾನೂನಿನ ಪರಿಧಿಯೊಳಗಿರುತ್ತವೆಯೋ ಅಲ್ಲಿಯ ವರೆಗೆ ನ್ಯಾಯಾಂಗವು ಆ ಕುರಿತು ಮೌನವಾಗಿಯೇ ಇರುತ್ತದೆ; ಇರಬೇಕಾದ್ದೇ ವಿವೇಕ. ಯಾರಾದರೂ ಅದನ್ನು ಕಾನೂನಿನ ಮೂಸೆಯಲ್ಲಿ ಪರೀಕ್ಷಿಸಲು ಹೊರಟಾಗ ಮಾತ್ರ ನ್ಯಾಯಾಂಗವು ಆ ಕುರಿತು ಕಾನೂನಿನ ತಕ್ಕಡಿಯಲ್ಲಿ ಅಳೆದು ಪುರಸ್ಕಾರ-ತಿರಸ್ಕಾರಗಳ ಕುಲುಮೆಯಲ್ಲಿ ಅವುಗಳ ಮೌಲ್ಯಶೋಧನೆಯನ್ನು ಮಾಡುತ್ತದೆ. ಆ ತೀರ್ಪಿಗೆ ಪಕ್ಷ ರಾಜಕಾರಣವಿಲ್ಲ; ಅದು ಜನತಾ ನ್ಯಾಯಾಲಯದ ತೀರ್ಪಲ್ಲ. ಅದು ಸರಕಾರದ ಪರ-ವಿರೋಧ ನೀಡಿದ ತೀರ್ಪಲ್ಲ; ಅದು ಪ್ರಕರಣವೊಂದರ ತೀರ್ಪು, ಅಷ್ಟೇ. ಅಲ್ಲಿಗೆ ಅದರ ಕಾರ್ಯೋದ್ದೇಶ ಮುಗಿಯಿತು. ಮತ್ತೆ ಯಥಾಪ್ರಕಾರ ನ್ಯಾಯನಿರ್ಣಯ.
ಕರ್ನಾಟಕದ ಉಚ್ಚ ನ್ಯಾಯಮೂರ್ತಿಯೊಬ್ಬರು ಈಚೆಗೆ ಹಾಲು, ಬಸ್ ಪ್ರಯಾಣ ದರ ಮುಂತಾದ ಬೆಲೆಯೇರಿಕೆಯ ಕುರಿತು ಜೋರಾಗಿ ಟೀಕಿಸಿದರೆಂದು ವರದಿಯಾಗಿದೆ. ಇದು ಅಗತ್ಯವಿರಲಿಲ್ಲ ಮತ್ತು ಸಾಧುವೂ ಅಲ್ಲ. ಕಳೆದ ಕೆಲವು ವರ್ಷಗಳಲ್ಲಿ, ತೈಲಬೆಲೆಯು ಹೇಗೆ ಏರಿದೆಯೆಂಬುದು ಮತ್ತು ಅದು ರಸ್ತೆಯಿಂದ ಅಡುಗೆಮನೆಯವರೆಗೆ ಜನರ ಆರ್ಥಿಕತೆಯ ಮೇಲೆ ಎಂತಹ ಪರಿಣಾಮವನ್ನು ಬೀರಿದೆಯೆಂಬುದು ಬಹಿರಂಗ ರಹಸ್ಯ. ಈ ಬಗ್ಗೆ ವೈಯಕ್ತಿಕವಾಗಿ ಅಭಿಪ್ರಾಯವನ್ನು ನ್ಯಾಯಮೂರ್ತಿಗಳು ನೀಡಿರಬಹುದಾದರೂ ಅವರ ತೀರ್ಪಿನಲ್ಲಿ ಅಥವಾ ನ್ಯಾಯಾಲಯದ ಪ್ರಕರಣಗಳಲ್ಲಿ ಇದನ್ನು ವ್ಯಕ್ತಪಡಿಸಿರಲಾರರು. ಅಲ್ಲಿ ಏನನ್ನೂ ಹೇಳದಿರುವುದು ನ್ಯಾಯಾಂಗದ ಹೆಗಲಹೊಣೆಯ ಸಾರ್ಥಕತೆ. ಆದರೆ ಅಲ್ಲಿ ಏನೂ ಹೇಳದೆ ಇಲ್ಲಿ ಕ್ರಾಂತಿಕಾರಿ ನುಡಿಗಳನ್ನು ಹೇಳಹೊರಟಿರುವುದು ನ್ಯಾಯಮೂರ್ತಿಗಳ ವ್ಯಕ್ತಿತ್ವದ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ಬಗ್ಗೆ ತೀರ್ಪು ನೀಡುವರೇ? ಅಥವಾ ಪ್ರತಿಭಟನೆ ಮಾಡುವರೇ? ಎರಡೂ ಇಲ್ಲದಿರುವಾಗ ಅದರ ಗೋಜಿಗೋಜಲುಗಳೇಕೆ?
ನ್ಯಾಯಾಲಯಗಳಲ್ಲಿ ದಿನವೂ ನೂರಾರು ಪ್ರಕರಣಗಳು ವಿಚಾರಣೆಗೆ, ವಾದಕ್ಕೆ ಬರುತ್ತವೆ. ನ್ಯಾಯಮೂರ್ತಿಗಳಿಗೆ ನ್ಯಾಯವಾದಿಗಳಿಗಿರುವ ಸ್ವಾತಂತ್ರ್ಯವಿಲ್ಲ. ಹೀಗಿದ್ದೂ ನ್ಯಾಯವಾದಿಗಳು ನ್ಯಾಯಾಲಯದೊಳಗೆ ಪ್ರಕರಣಕ್ಕೆ ಪ್ರಸ್ತುತವಲ್ಲದ ವಾದವನ್ನು ಮಾಡಲಾರರು, ಮಾಡಬಾರದು. ಒಂದಿಷ್ಟು ವ್ಯತ್ಯಸ್ತವಾದರೂ ನ್ಯಾಯಾಲಯಗಳು ಅವನ್ನು ಗಮನಿಸಿ ವಾದವೈಖರಿಯನ್ನು ದಾರಿಗೆ ತರುತ್ತವೆ. ಅರ್ಹತೆ, ಯೋಗ್ಯತೆ, ಗಾಂಭೀರ್ಯ, ಪ್ರಸ್ತುತತೆ, ಸಜ್ಜನಿಕೆ, ಸಭ್ಯತೆ ಮುಂತಾದವೇ ನ್ಯಾಯಾಲಯದೊಳಗೆ ಚಲಾವಣೆಯಲ್ಲಿರುವ ನಾಣ್ಯಗಳು. ಇವುಗಳನ್ನು ಹೊರತುಪಡಿಸಿ ಲೋಕಹಿತಕ್ಕಾಗಿ ನಡೆಸುವ ಭಾಷಣಗಳಿಗೆ ನ್ಯಾಯಾಲಯಗಳಲ್ಲಿ ಎಡೆಯಿಲ್ಲ. ಆದ್ದರಿಂದ ನ್ಯಾಯಾಲಯಗಳಿಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಕಾಣಬರುವ ಸಂಗತಿಗಳೆಲ್ಲವೂ ನ್ಯಾಯನಿರ್ಣಯದಲ್ಲಿ ಭಾಗೀದಾರರಾಗುವುದಿಲ್ಲ. ವೃತ್ತಿ, ಪ್ರವೃತ್ತಿ, ವ್ಯಷ್ಟಿ, ಸಮಷ್ಟಿ ಈ ವಿಚಾರಗಳ ಸೂಕ್ಷ್ಮ ಅಂತರವನ್ನು ಕಾಪಾಡಿಕೊಳ್ಳದಿದ್ದರೆ ನ್ಯಾಯಾಲಯಗಳು ಸಂವಿಧಾನದ ಮೂರನೆಯ ಅಂಗವಾಗುವ ಬದಲು ರಾಜಕಾರಣದ ಇನ್ನೊಂದು ಅಂಗಳವಾದೀತು.
ನ್ಯಾಯಮೂರ್ತಿಗಳು ವ್ಯಕ್ತಪಡಿಸುವ ಪ್ರತಿಯೊಂದು ಮಾತಿಗೂ ಅದರದ್ದೇ ಆದ ಅರ್ಥವಿರುವುದರಿಂದ ನ್ಯಾಯಾಲಯಗಳು ಬಹಳ ಎಚ್ಚರಿಕೆ, ಜಾಗರೂಕತೆ ವಹಿಸುವುದು ಅಗತ್ಯ. ಅಧಿಕೃತವಾಗಿ ನೀಡುವ ತೀರ್ಪು ಬೇರೆ, ಅನಧಿಕೃತವಾಗಿ ಮತ್ತು ಅನವಶ್ಯಕವಾಗಿ ನೀಡುವ ಅಭಿಪ್ರಾಯಗಳು ಬೇರೆ. ಹಿಂದೊಂದು ಕಾಲವಿತ್ತು. ನ್ಯಾಯಾಲಯದೊಳಗೆ ನಡೆಯುವ ವ್ಯವಹರಣೆಗಳು ಹೊರಹೋಗುತ್ತಿರಲಿಲ್ಲ ಮತ್ತು ಅಲ್ಲಿ ಒಳಗೊಳ್ಳುವ ಪ್ರತಿಯೊಬ್ಬರೂ ತಾವಾಡುವ ಮಾತಿಗೆ ಜವಾಬ್ದಾರರಂತೆ ವ್ಯವಹರಿಸುತ್ತಿದ್ದರು. ತಪ್ಪಿ ಆಡಿದ ಮಾತಿಗೆ ಪಶ್ಚಾತ್ತಾಪ ಪಡುವ ಸಂದರ್ಭಗಳು ಸೃಷ್ಟಿಯಾಗುತ್ತಿದ್ದವು.
ಈಗ ಕಾಲ ಬದಲಾಗಿದೆ. ಮಾಧ್ಯಮಾಭಿವ್ಯಕ್ತಿಯು ಕ್ಷಣಾರ್ಧದಲ್ಲಿ ಲೋಕಮುಖಕ್ಕೆ ತಲುಪುತ್ತದೆ. ಸ್ವತಂತ್ರ, ಸ್ವೇಚ್ಛಾ ವೇದಿಕೆಗಳು ಎಲ್ಲೆಂದರಲ್ಲಿ ಸೃಷ್ಟಿಯಾಗುತ್ತಿರುವುದರಿಂದ ಯಾರು ಬೇಕಾದರೂ ಯಾರ ಬಗ್ಗೆಯೂ ಏನನ್ನೂ ಹೇಳಬಹುದು. ಮನುಷ್ಯನಿಗೆ ಇಂದು ಹಿಂದೆ ಇದ್ದ ಸಂಯಮವಿಲ್ಲ. ನಾಲಗೆಗೆ ಎಲುಬಿಲ್ಲವೆಂಬುದು ನಾಣ್ಣುಡಿಯಷ್ಟೇ ಅಲ್ಲ, ವೈಜ್ಞಾನಿಕ ಸತ್ಯವೂ ಆಗಿರುವುದರಿಂದ ಅದು ಇಂದು ಎಂದಿಗಿಂತಲೂ ಹೆಚ್ಚು ಬಳಕೆಯಾಗುತ್ತಿದೆ. ಹೇಳಬೇಕಾದ್ದನ್ನು ಮಾತ್ರ ಹೇಳಬೇಕೇ ಹೊರತು ಹೇಳಬಹುದಾದ್ದನ್ನೆಲ್ಲ ಹೇಳಬಾರದು. ಆದರೆ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ. ಇದಕ್ಕೆ ಯಾರು ಕಾರಣರಾದರೂ ನ್ಯಾಯಾಂಗವು ಕಾರಣವಾಗಬಾರದು.
ಆಡುವ ಭಾಷೆಯೂ ಅರ್ಥಪೂರ್ಣವಾಗಿರಬೇಕು. ರಾಜಕಾರಣಿಗಳು ಭಾಷೆಯನ್ನು ಬಳಕೆಗೆ ತರುವುದಕ್ಕೂ ನ್ಯಾಯಾಲಯಗಳು ಭಾಷೆಯನ್ನು ಬಳಸುವುದಕ್ಕೂ ಬಹಳ ವ್ಯತ್ಯಾಸವಿದೆ. ರಾಜಕಾರಣದಲ್ಲಿ ಮತಗಳಿಕೆಯೇ ಅಂತಿಮ ಉದ್ದೇಶ. ಅದನ್ನು ಸಾಧಿಸಲು ಯಾವ ಮತ್ತು ಎಂತಹ ಭಾಷೆಯಾದರೂ ಸರಿ. ಹಾಗೆಯೇ ಅದರ ಮೂಲಕ ಏನನ್ನು ಸಾಧಿಸಬೇಕು ಎಂಬುದರ ಆಧಾರದಲ್ಲಿ ಭಾಷೆ ಬಳಕೆಯಾಗುತ್ತದೆ. ಪ್ರಾಯಃ ಪ್ರಚಾರಕ್ಕೆ ಅನುಕೂಲವಾದ ಭಾಷೆ ಅವರಿಗಿಷ್ಟ.
ನ್ಯಾಯಾಲಯಗಳಲ್ಲಿ ಇಂದಿಗೂ ಸಂವಿಧಾನದಂತೆ ಕೇಂದ್ರ ಭಾಷೆ ಇಂಗ್ಲಿಷ್. ಅದರ ಆಧಾರದಲ್ಲಿ ಎಲ್ಲವನ್ನೂ ವಿವರಿಸಲಾಗುತ್ತದೆ, ಅರ್ಥವಿಸಲಾಗುತ್ತದೆ. ಅದು ಇಂಗ್ಲಿಷಿನ ಮೇಲೆ ಅನಗತ್ಯ ಅವಲಂಬನೆಯಲ್ಲ; ಅನಿವಾರ್ಯವಾಗಿರುವುದು ವಸ್ತುಸ್ಥಿತಿ ಮತ್ತು ಇತರ ಪರಿಕರಗಳೊಂದಿಗೆ ಅದರ ಸಾಮರಸ್ಯ. ಔಷಧಗಳಿಗೆ ಹೇಗೆ ಇಂಗ್ಲಿಷ್ ಪದಗಳು ಅನಿವಾರ್ಯವೋ ಹಾಗೆಯೇ ಕಾನೂನಿನ ಪದಗಳಿಗೂ ಇಂಗ್ಲಿಷ್ ಅನಿವಾರ್ಯ. ನ್ಯಾಯಾಲಯಗಳಲ್ಲಿ ಕನ್ನಡ ಅಥವಾ ಆಯಾಯ ದೇಶೀ ಭಾಷೆಗಳು ಬಳಕೆಯಾಗಬೇಕು ನಿಜ; ಆದರೆ ಅದರಿಂದ ನ್ಯಾಯನಿರ್ಣಯಕ್ಕೆ ತೊಡಕುಂಟಾಗುವುದಾದರೆ ಆಗ ಭಾಷೆ ಗೌಣವಾಗುತ್ತದೆ. ಏಕೆಂದರೆ ನ್ಯಾಯಾಲಯಗಳು ನ್ಯಾಯನೀಡುವುದಕ್ಕಾಗಿ ಸೃಷ್ಟಿಯಾಗಿವೆಯೇ ವಿನಾ ಭಾಷಾಡಂಬರಕ್ಕಲ್ಲ. ಅದು ಸಾಹಿತ್ಯದ ವೇದಿಕೆಯಲ್ಲ. ನೂರಾರು ಭಾಷೆಗಳಿರುವ ಈ ದೇಶದಲ್ಲಿ ಇದೇ ಅಥವಾ ಇಂಥದ್ದೇ ಭಾಷೆಯನ್ನು ಬಳಸಬೇಕು ಎಂದು ತೀರ್ಮಾನಿಸುವುದು ಅಸಂಗತವಾದೀತು.
ಆರಂಭದಲ್ಲಿ ಪ್ರಸ್ತಾಪಿಸಲಾದ ಅಂಶಗಳಿಗೆ ಪೂರಕವಾಗಿ ಇವನ್ನು ಉದಾಹರಿಸಿದ್ದೇನೆ. ನಮ್ಮನ್ನಾಳಿದ ಬ್ರಿಟಿಷರ ಭಾಷೆಯೆಂಬುದಕ್ಕಾಗಿ ಇಂಗ್ಲಿಷನ್ನು ದ್ವೇಷಿಸಬೇಕಿಲ್ಲ. ವಸಾಹತುಶಾಹಿ ಭಾಷೆಯೆಂದರೆ ನಮ್ಮ ನಿತ್ಯಜೀವನದಲ್ಲೂ ನಮ್ಮನ್ನಾಳುತ್ತದೆಯೆಂದು ನಾವು ದೇಶೀಭಾಷೆಗಳ ಹರಿಕಾರರು ಭಾವಿಸಬಾರದು. ಅದೂ ಒಂದು ಭಾಷೆ. ತಾನೂ ಬೆಳೆದು, ಇತರರನ್ನೂ ಬೆಳೆಸುವುದು ನಿಜಭಾಷೆಯ ಲಕ್ಷಣ. ಇಂಗ್ಲಿಷ್ ಭಾರತದಲ್ಲಿ ವಸಾಹತುಶಾಹಿ ಭಾಷೆಯೆಂಬ ಬಿಂಕಬಿಗುಮಾನದಿಂದ ನಮ್ಮನ್ನು ಗಮನಿಸುತ್ತಿಲ್ಲ ಅಥವಾ ನಮಗೆ ಹಾಗನ್ನಿಸಬಾರದು.
ಈ ಅಭಿವ್ಯಕ್ತಿಗೆ ರಾಜಕೀಯದ ವಾಸನೆಯಿದೆಯೆಂದೆ. ದೇಶದಲ್ಲಿ ಹಿಂದಿಯನ್ನು ಹೇರುವ ಯತ್ನ ಅಹರ್ನಿಶಿ ಮುಂದುವರಿದಿದೆ. ಇದರಲ್ಲಿ ಭಾಷಾ ಬೆಳವಣಿಗೆಗಿಂತ ಹೆಚ್ಚಾಗಿ ರಾಜಕೀಯದ, ಅಧಿಕಾರದ, ಮೇಲರಿಮೆಯ ಕೀಳಿದೆ. ಈಚೆಗೆ ಮೂರು ಕಾನೂನುಗಳನ್ನು ಪಲ್ಲಟಗೊಳಿಸಿ ‘ಭಾರತೀಯ’ ಕಾನೂನುಗಳಾಗಿ ಪರಿವರ್ತಿಸಿದಾಗ ವಸಾಹತುಶಾಹಿಯ ಮಹಾಪ್ರಾಣವನ್ನು, ಹಲ್ಲುಗಳನ್ನು ಮುರಿದೆವೆಂಬಂತೆ ದೇಶದ ಆಡಳಿತ ವರ್ತಿಸಿತು. ಈ ಒಂದು ಪ್ರದರ್ಶನವು ಮದುವೆಯ ಪೇಟವಾಯಿತೇ ವಿನಾ ನಿತ್ಯದ ಉಡುಪಾಗಲಿಲ್ಲ. ದೇಶದಲ್ಲಿ ಈಗಲೂ ಪ್ರಚಲಿತವಿರುವ, ಜಾರಿಯಲ್ಲಿರುವ ನೂರಾರು ಕಾನೂನುಗಳು (ಸುಮಾರು ಶೇ. 90ಕ್ಕೂ ಹೆಚ್ಚು!) ಬ್ರಿಟಿಷ್ ಬಳುವಳಿಗಳಾಗಿ ಉಳಿದಿವೆಯೇ ಹೊರತು ನಮ್ಮ ಸೀಮೆಯ ಬದನೆಕಾಯಿಗಳಾಗಿಲ್ಲ. ಹಾಗಿರುವಾಗ ಇಂಗ್ಲಿಷನ್ನು ದೂಷಿಸುವವರು ತಾವು ಮತ್ತು ತಾವಿರುವ, ಬೆಳೆದು ಬಂದ ಸಂದರ್ಭ ಮತ್ತು ವಾತಾವರಣವನ್ನು ಮತ್ತು ತಮ್ಮ ಮೈಯನ್ನು ಮತ್ತೊಮ್ಮೆ ಮುಟ್ಟಿ ನೋಡಿಕೊಳ್ಳುವುದು ಉತ್ತಮ. ನಾವು ಇಂಗ್ಲಿಷರನ್ನು ಅವಲಂಬಿಸಿಕೊಂಡಿಲ್ಲ, ನಾವು ನಮ್ಮ ಅನುಕೂಲಕ್ಕೆ ಬೇಕಾಗಿ, ಸಂಪರ್ಕಭಾಷೆಯಾಗಿ ಇಂಗ್ಲಿಷನ್ನು ಇಟ್ಟುಕೊಂಡಿದ್ದೇವೆಯೇ ಹೊರತು ಅದಕ್ಕೆ ಅಡಿಯಾಳುಗಳಾಗಿ ಅಲ್ಲ. ಅವರು ನೆನಪಿಡಬೇಕಾದ್ದೆಂದರೆ ಭಾರತ ಎಂಬ ಗಣರಾಜ್ಯವು ಉದಿಸಿದ್ದು ಬ್ರಿಟಿಷ್ ಆಡಳಿತದ ಬಳಿಕವೇ; ಮತ್ತು ನಮಗೆ ನಮ್ಮದೇ ಎಂಬ ಸ್ವತಂತ್ರ ದೇಶಭಾಷೆಯಿಲ್ಲ. ನಾವು ಇಂಗ್ಲಿಷನ್ನು ಬ್ರಿಟನ್ನಿಂದ ಆಮದು ಮಾಡಕೊಂಡಿಲ್ಲ. ಅದು ನಮ್ಮ ಸುತ್ತ ಸುಳಿಯಿತು. ವಿಶ್ವದ ಅನೇಕ ಸಂಗತಿಗಳಿಗೆ ಕಣ್ಣಾಯಿತು; ಕಿವಿಯಾಯಿತು. ಪಂಚೇಂದ್ರಿಯಗಳನ್ನು ತೆರೆದು ವಿಶ್ವದ ಅನುಭವಗಳನ್ನು ಸ್ವೀಕರಿಸಲು ಇದೂ ಒಂದು ಮಾಧ್ಯಮವಾಯಿತು. ಇದು ಭಾಷೆಯ ತಪ್ಪಲ್ಲ. ಬಳಸುವವನ ತಪ್ಪೂ ಅಲ್ಲ. ಇದು ಕಾಲದ ನಿಯಮ.
ನಾವು ಯಾವುದನ್ನು ದೇಶಭಾಷೆಯಾಗಿ ಹೇರಿದರೂ ಅದು ಒಂದು ವಿಫಲ ಪಯಣವಾದೀತು. ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲಿ ಸಹಜಮೂರ್ಖತನಕ್ಕೆ ನಾವು ದಾರಿಮಾಡಿಕೊಡಬಾರದು. ಇಂಗ್ಲಿಷ್ ಬಳಕೆಯು ಗುಲಾಮಗಿರಿಯಲ್ಲ. ಅದು ನಮ್ಮ ಹಿರಿತನದ ಗರಿಯೂ ಅಲ್ಲ. ಕನ್ನಡ ಮತ್ತಿತರ ಭಾಷೆಗಳು ಹೇಗೆಯೋ ಅದೂ ಹಾಗೆಯೇ. ಹೀನೋಪಮೆಯಾಗುತ್ತದೆಯಾದರೂ ಹೀಗನ್ನಿಸಬೇಕು: ಪೊರಕೆ ನಮಗೆ ನಿತ್ಯಬಳಕೆಯ ವಸ್ತು. ಹಾಗೆಂದು ಅದನ್ನು ತಲೆಯ ಮೇಲಿಟ್ಟು ತೂಗಬಾರದು. ನ್ಯಾಯಮೂರ್ತಿಗಳಿಗೆ ಇಂಗ್ಲಿಷ್ ಅವಲಂಬನವೆಂದು ಅನ್ನಿಸಿದ್ದು ಅವರ ದೋಷವೇ ಹೊರತು ಇಂಗ್ಲಿಷಿನದ್ದಲ್ಲ. ಅದು ತನ್ನಷ್ಟಕ್ಕೆ ತಾನೇ ಲಂಗದ ನಿರಿಯನ್ನು ಚಿಮ್ಮಿಸುತ್ತ ನಮ್ಮ ದೇಶೀಭಾಷೆಗಳೊಡನೆ ಸುಖ ಸಂಭಾಷಣೆಯ ಸುಖಗೀತವನ್ನು ಹಾಡುತ್ತಿದೆ. ಬದುಕನ್ನು ಆಧುನಿಕವಾಗಿ ಮಾಡುತ್ತಿದೆ. ನ್ಯಾಯಾಲಯದ ಒಳಾಂಗಣದಲ್ಲಿ ಮತ್ತು ಹೊರಗಿನ ಬಯಲಿನಲ್ಲಿ ಬಳಸುವವರನ್ನು ಪರೀಕ್ಷಿಸುತ್ತಿದೆ.
(ಅಂಕಣಕಾರರು ಸಾಹಿತಿ, ಹಿರಿಯ ವಕೀಲರು)






