ಅಧಿಕಾರವೇ ಅರಿವು, ಗುರಿ, ಗುರು ಎಲ್ಲ!

ರಾಜಕೀಯ, ರಾಜಕಾರಣ ಇವೆಲ್ಲ ಒಂದೊಮ್ಮೆ ಅಯೋಗ್ಯರ ಸ್ವರ್ಗವೆಂದು ನಮ್ಮ ಜ್ಞಾನಿಗಳು ಟೀಕಿಸುತ್ತಿದ್ದರು. ಈಗ ಅದಿಲ್ಲದೇ ತಾವು ಸಂಪಾದಿಸಿದ ಜ್ಞಾನ ವ್ಯರ್ಥವೆಂಬ ಜ್ಞಾನೋದಯ ಎಲ್ಲ ಬುದ್ದಿವಂತರನ್ನು, ಚಿಂತಕರನ್ನು, ಕಲಾವಿದರನ್ನು ಆವರಿಸಿದೆ. ಕೆಲವು ದಶಕಗಳ ಹಿಂದೆ ಒಳಹೊರಗನ್ನು ವ್ಯಾಪಿಸಿದ ವಿಸ್ಮತಿ ಕಳೆದಿದೆ. ಹೊಸ ಹಗಲು ಬಂದಿದೆ. ಬೆಳಕಾಗಿದೆ. ಈಗ ನವ ಉತ್ಸಾಹದಿಂದ, ಅಧಿಕಾರವಲ್ಲದಿದ್ದರೂ ಅದರ ಬಳಿ ಸಾಯುಜ್ಯ, ಸಾಮೀಪ್ಯ, ಸಾನ್ನಿಧ್ಯಗಳನ್ನು ಒಟ್ಟಾಗಿ ಎದೆಗೊಡ್ಡುವ ಸಾಮರ್ಥ್ಯವನ್ನು ನಮ್ಮ ಸಮಕಾಲೀನ ಜ್ಞಾನಿಗಳು ಪಡೆದಿದ್ದಾರೆ.
ಒಂದು ಕಾಲದಲ್ಲಿ ಅರಿವೇ ಗುರು ಎಂದ ಅಲ್ಲಮ ಅಧಿಕಾರ ಕೇಂದ್ರಕ್ಕೆ ಅಂಟಿಕೊಂಡ ಶರಣರನ್ನು ಗಮನಿಸಿರಲಾರ. ಬಿಜ್ಜಳನಿಗೆ ಬಹು ಸಮೀಪವಿದ್ದ ಬಸವಣ್ಣ ಭಕ್ತಿ ಭಂಡಾರದ ಜೊತೆಗೆ ಅರಮನೆಯ ಭಂಡಾರದ ಹೊಣೆಯನ್ನೂ ಹೊತ್ತಿದ್ದ. ಹಣದ ಹೊಣೆ ಬಲು ಅಪಾಯಕರ. ಸತ್ಪಾತ್ರ ದಾನವಾದರೂ ಸಾರ್ವಜನಿಕ ಸಂಪತ್ತನ್ನು ಹೀಗೆ ಬಳಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಲು ಬಸವಣ್ಣನೂ ಕಷ್ಟಪಟ್ಟ. ಒಳ್ಳೆಯ ಕೆಲಸವೂ ದುಷ್ಪರಿಣಾಮಕ್ಕೆ ಎಡೆಕೊಟ್ಟಿತು. ರಾಜ್ಯವನ್ನೇ ಕ್ಷೋಭೆ, ಗೊಂದಲ ಮುಂತಾದ ಅವ್ಯವಸ್ಥೆ, ಅಸಮಾಧಾನಕ್ಕೆ ತಳ್ಳಿತು. ಬಿಜ್ಜಳನ ಕೊಲೆಯಾಯಿತು. ಬಸವಣ್ಣ ಕೂಡಲಸಂಗಮದಲ್ಲಿ ಶಿವೈಕ್ಯನಾಗಬೇಕಾಯಿತು.
ಇದಾಗಿ ಸಾವಿರ ವರ್ಷ ಸಮೀಪಿಸುತ್ತಿದೆ. ಅನುಭವವಿರುವ ಸಾಹಿತಿಗಳು, ಚಿಂತಕರು, ವಿದ್ವಾಂಸರು, ಯಾರೂ ಅನುಭವ ಮಂಟಪವನ್ನು ಕಟ್ಟಹೊರಟಿಲ್ಲ. ಬದಲಾಗಿ ತಮ್ಮ ಪಾರವೋ ಅಪಾರವೋ ತಿಳಿವಳಿಕೆಯನ್ನು ಅಧಿಕಾರದ ಪದತಲದಲ್ಲಿ ಸಮರ್ಪಣೆ ಮಾಡಿ ಅದರ ಫಲವನ್ನು ಉಂಡು ಮತ್ತು ತಮ್ಮ ಅನುಯಾಯಿಗಳಿಗೆ ಬಡಿಸಿ ಕೃತಾರ್ಥರಾಗಿದ್ದಾರೆ. ಆನರು ಒಂದು ಕಡೆ, ಈ ಬುದ್ಧಿವಂತರು ಇನ್ನೊಂದು ಕಡೆ. ಮುಗ್ಧ ಹುಲುಮಾನವರು ನೋಡುವ ಹಕ್ಕಿಯಾದರೆ ಈ ಬುದ್ಧಿವಂತರು ಉಣ್ಣುವ ಹಕ್ಕಿಯಾಗಿದ್ದಾರೆ. ದ್ವಾ ಸುಪರ್ಣಾ ಮರುಕಳಿಸುತ್ತಿದೆ!
ಇಂದಿನ ವಾತಾವರಣದಲ್ಲಿ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಯಾವ ಚೇತನವೂ ಹೋಗುವುದಿಲ್ಲ. ಒಂದು ಕಾಲದಲ್ಲಿ ಬೇಕೆಂಬುದು ಅಳಿದು ಬೇಡವೆಂಬ ವಯಸ್ಸು ಮನುಷ್ಯನಿಗೆ ಬರುತ್ತಿತ್ತು. ಐಹಿಕ ಸುಖಭೋಗದಲ್ಲಿರುವವರೂ ತಲೆ ನರೆತಿದೆ, ಸಾಕಿನ್ನು ಈ ಸಂಸಾರ ಎಂದು ವಾನಪ್ರಸ್ಥಕ್ಕೆ ಹೋಗುತ್ತಿದ್ದರಂತೆ. ಆದರೆ ಈಗ ಅಂತಹ ವಯಸ್ಸಿನಲ್ಲಿ ಊರು ಹೋಗೆಂದು, ಕಾಡು ಬಾರೆಂದುಕರೆಯುವ ಹೊತ್ತಿನಲ್ಲಿ ಎಲ್ಲವೂ ಬೇಕೆಂಬ ಆಮಿಷವನ್ನು ಮನುಷ್ಯ ಎಣಿಸುತ್ತಿದ್ದಾನೆ. ಮಗುವಿಗೆ ಅತಿಥಿಯೊಬ್ಬ ಪ್ರೀತಿಯಿಂದ ಚಾಕಲೇಟು ನೀಡಿದರೆ ಅದನ್ನು ಆ ಮಗುವಿನ ಕೈಯಿಂದ ಕಿತ್ತು ಮೆಲ್ಲುವ ಜಾಯಮಾನ ಹಿರಿಯರಿಗೆ ಬಂದಿದೆ. ನಾನು ಎಂಬ ಮಮಕಾರ ಹದ್ದು ಮೀರಿ ಹರಿಯುತ್ತಿದೆ.
ಅಧಿಕಾರ ಕೇಂದ್ರವು ಎಲ್ಲವನ್ನೂ ಹಿಡಿದಿಡುವ ತವಕದಲ್ಲಿದೆ. ಒಂದೊಮ್ಮೆ ಅರಿವೇ ಗುರುವಾಗಿತ್ತು. ಈಗ ಅಧಿಕಾರವೇ ಗುರಿ, ಪರಮಗುರಿ; ಅಧಿಕಾರವೇ ಗುರು; ಅಧಿಕಾರವೇ ಅರಿವಿನ ಪದನಿಮಿತ್ತ ಸ್ಥಾನವಾಗಿದೆ. ಅಧಿಕಾರ ಕೇಂದ್ರದಲ್ಲಿರುವವರನ್ನು ಅರಿವಿನ ದ್ರವ್ಯವನ್ನು ಹೊತ್ತವರು ಹೆತ್ತವರು ಮಕ್ಕಳನ್ನು ಕೊಂಡಾಡುವಂತೆ ಕೊಂಡಾಡುವ ವೈಖರಿಯನ್ನು ಗಮನಿಸಿದರೆ ಹೆಗ್ಗಣಕ್ಕೆ ತನಗೂ ಹೆತ್ತವರಿದ್ದಾರೆ. ಅವರು ತನ್ನನ್ನು ಮುದ್ದುಮಾಡಿದರೆ ಮೆಚ್ಚಿದರೆ ಅಚ್ಚರಿಯಿಲ್ಲ ಎಂಬಂತೆ ಸಂತೋಷವಾಗಬೇಕು.
ಇಂದು ಅಧಿಕಾರದಲ್ಲಿರುವವರ ಗುಣಗಳನ್ನು ಹೊಗಳುವವರು ಅವರಲ್ಲಿ ದೋಷವನ್ನೇ ಕಾಣುವುದಿಲ್ಲ. ಶಾಪ ತಿಂದ ಇಂದ್ರ ಸಹಸ್ರಾಕ್ಷನಾದರೂ ಆತನೇ ಸುಧರ್ಮ ಸಭೆಯ ಮಾಲಕ. ಅದೊಂದು ಯಜ್ಞಯಾಗಾದಿಗಳ ಫಲವುಣ್ಣುವ ಸ್ಥಾನ. ನೂರು ಅಶ್ವಮೇಧ ಮಾಡಿದರೆ ಯಾರೂ ಇಂದ್ರರಾಗಬಹುದು. ಹೀಗೆ ಇಂದ್ರರಾದವರೆಲ್ಲ ಸಹಸ್ರಾಕ್ಷರೆಂಬ ವ್ಯಾಖ್ಯಾನವಿಲ್ಲ. ಅಪರೂಪಕ್ಕೆ ಒಬ್ಬೊಬ್ಬರು ಪ್ರತ್ಯೇಕ ತ್ರಿಶಂಕು ಸ್ವರ್ಗವನ್ನು ಅನುಭವಿಸಬಹುದು. ವಿಶ್ವಾಮಿತ್ರರು ‘ನಡೆ ಸ್ವರ್ಗಕ್ಕೆ’ ಎಂದರೆ ಕೊಲೆಗಾರನೂ ರಾಜ್ಯಪಾಲನೋ ಇನ್ನೇನೋ ಆಗಬಹುದು! ಬೇಕಾದರೆ ಅಂಕಿತ ಭಂಡಾರಿ ಪ್ರಕರಣವನ್ನೇ ವಿಚಾರಿಸಿ!
ಚಂದ್ರನ ಮೇಲ್ಮೈಯಲ್ಲೂ ದೋಷಗಳಿವೆಯಾದರೂ ಚಂದಕ್ಕೆ ಚಂದಮಾಮನೇ ರೂಪಕವಲ್ಲ್ಲವೇ? ಹಾಗಾಗಿ ಅಧಿಕಾರದಲ್ಲಿರುವವರೆಲ್ಲರೂ ಇಂದ್ರಚಂದ್ರರೇ! ನೀಲ್ಆರ್ಮ್ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ ಒಂದು ವ್ಯಂಗ್ಯಚಿತ್ರ ಬಂದಿತ್ತು. ಅದರಲ್ಲಿ ಕೈಲಾಸಪತಿ ಶಿವನು ಚಂದ್ರನನ್ನು ಹೊತ್ತಂತೆಯೂ ಚಂದ್ರನು ಈ ಗಗನಯಾತ್ರಿಯನ್ನು ಹೊತ್ತಂತೆಯೂ ಚಿತ್ರಿಸಲಾಗಿತ್ತು. ಜನ ಏನಂದುಕೊಂಡರೋ ಗೊತ್ತಿಲ್ಲ. ಇಂದಿನ ಸಾಮಾಜಿಕ ಮಾಧ್ಯಮವಿದ್ದಿದ್ದರೆ ಅದು ಲೋಕಕ್ಷೋಭೆಯನ್ನು ಭಾರತದಲ್ಲಂತೂ ಸೃಷ್ಟಿಸುತ್ತಿತ್ತು. ಕೆಲವು ಬಾರಿ ಸಪಂರ್ಕದ ಕೊರತೆಯು ಸಾಮಾಜಿಕ ಆರೋಗ್ಯವನ್ನು ಕಾಪಾಡುತ್ತದೆ.
ವಂದಿಮಾಗಧರೆಂಬ ಒಂದು ವ್ಯವಸ್ಥೆಯಿತ್ತು. ಮೂರಡಿ ಆರಡಿ ಜಾಗದಲ್ಲಿ ಮನೆಮಾಡಿದವನನ್ನೂ ಜಗದೊಡೆಯನೆಂದು ಹಾಡಿ ಹೊಗಳಲಾಗುತ್ತಿತ್ತು. ಆದರೆ ಈ ರಾಜಾಧಿರಾಜರು ಪರವೂರಿಗೆ ಹೋದಾಗ ಅಲ್ಲಿ ತನ್ನ ಧ್ವಜವನ್ನೂರಲು ಹೇಳಿದರೆ ಜಾಗವಿಲ್ಲವೆಂದು ಬಂದು ಹೇಳುವವರಿದ್ದರು. ಭರತ ಚಕ್ರವರ್ತಿಗೂ ಹೀಗಾಗಿತ್ತಂತೆ ಅಲ್ಲವೇ? ಈಗ ಹಾಗಲ್ಲ; ಫ್ಲೆಕ್ಸಿ ಬ್ಯಾನರುಗಳು ರಾರಾಜಿಸುತ್ತವೆ. ಹಬ್ಬ ಹರಿದಿನಗಳಲ್ಲಿ ರಾಜರಸ್ತೆ ಮಾತ್ರವಲ್ಲ, ಮುಖ್ಯರಸ್ತೆ, ಅಡ್ಡರಸ್ತೆ ಹೀಗೆ ಜಾಗವಿದ್ದ ಎಲ್ಲೆಡೆ ನಾಯಕರ ಫೋಟೊಗಳು ರಾಜಿಸುವುದು ಮಾತ್ರವಲ್ಲ ಮುಖಕ್ಕೆ ರಾಚುವಂತೆ ರಾರಾಜಿಸುತ್ತವೆ. ನಾವೇ ನಿಮ್ಮ ನಾಯಕರು ಎಂಬ ಪಾಳೆಗಾರಿಕೆ ಸಮಾಜದ ಮೂಲ ತಳಹದಿಯಿಂದ ಮೆರವಣಿಗೆಗೊಳ್ಳುತ್ತದೆ. ಆನರು ಒಂದೆಡೆ ತಮ್ಮ ಗ್ರಾಮವನ್ನು, ತಾಲೂಕನ್ನು, ಜಿಲ್ಲೆ-ರಾಜ್ಯವನ್ನು ಬರಪೀಡಿತವೆಂದು ಘೋಷಿಸಬೇಕೆಂದು ಕಿರುಚುವುದರ ಜೊತೆಗೇ ಕುರುಡು ಕಾಂಚಾಣದ ಕರಡಿಯನ್ನು ಕುಣಿಸುತ್ತಾ ಜಾತ್ರೆ ನಡೆಸುತ್ತಾರೆ.
ಇದು ಸರಿಯಲ್ಲ, ಅದು ಸರಿಯಲ್ಲ ಎಂಬವರು ಯಾವಾಗಲೂ ಮಹಾತ್ಮರಾಗುವುದಿಲ್ಲ. ಬಹುಪಾಲು ಹುತಾತ್ಮರಾಗುತ್ತಾರೆ. ಇಷ್ಟಕ್ಕೂ ಸಮಾಜವನ್ನು ತಿದ್ದುವ ಕೆಲಸ ಯಾಕೆ? ಬೇಕಾದರೆ ಅದೇ ತಿದ್ದಿಕೊಳ್ಳುವುದಿಲ್ಲ್ಲವೇ? ಉಕ್ತಿಯೇ ಇದೆ: ಸಮಾಜವನ್ನು ತಿದ್ದಹೊರಟವನು ಬುದ್ಧಿವಂತ; ಆದರೆ ಸಮಾಜ ಹೇಗಿದೆಯೋ ಹಾಗೆ ಇರಗೊಡುವವನು ಜಾಣ.
ಹೀಗೆಲ್ಲ ಕೊಂಕಣ ಸುತ್ತಿ ಮೈಲಾರ ತಲುಪುವ ಹೊತ್ತಿಗೆ ಆಮೆ ಮತ್ತು ಮೊಲದ ಓಟದ ಸ್ಪರ್ಧೆ ನಡೆದಿರುತ್ತದೆ. ಆದರೆ ಇಲ್ಲಿ ಫಲಿತಾಂಶ ಅದಲು ಬದಲು. ಆಮೆ ಇಡೀ ಪ್ರಪಂಚದ ಭಾರವನ್ನು ಹೊತ್ತು ಕೂರ್ಮಾವತಾರವಾಗುವ ಹೊತ್ತಿಗೆ ಮೊಲವು ಗುರಿಮುಟ್ಟಿ ಅಧಿಕಾರಸ್ಥರ ಆಪ್ತ ಕಾರ್ಯದರ್ಶಿಯಾಗಿ ಅಲ್ಲಿಂದಲೇ ನಿರ್ದೇಶನಗಳನ್ನು ನೀಡುತ್ತಿರುತ್ತದೆ. ಇದನ್ನು ವಿಪರ್ಯಾಸವೆನ್ನಬೇಡಿ; ಸಹಜ ಬೆಳವಣಿಗೆಯೆನ್ನಿ; ವಿಕಾಸದ ಅಂತಿಮ ಘಟ್ಟವೆನ್ನಿ.
ಕಲೆ, ಕಲಾವಂತಿಕೆ ಇವು ಅಧಿಕಾರ ಹೊಂದಿದವರಿಗೆ ಒಳಗೇ ಮೊಳೆತು ಬರುವ ಗುಣ. ಇವನ್ನು ಕಾಣುವ ಕಣ್ಣು ಬೇಕು. ಸ್ಪರ್ಶಿಸುವ ಒಳದಾರಿ ಗೊತ್ತಿರಬೇಕು. ಅಧಿಕಾರ ಹೊಂದಿದ ಕಾರಣಕ್ಕೇ ಪ್ರಶಸ್ತಿಗಳೂ ಬರುತ್ತವೆ. ಏಕೆಂದರೆ ಅಧಿಕಾರ ಹೊಂದಬೇಕಾದರೆ ಪ್ರತಿಭೆ, ಪಾಂಡಿತ್ಯ ಇರಬೇಕಾದ್ದೇ. ಎಲ್ಲ ಅಜ್ಞಾನದ ಬಣ್ಣವನ್ನು ಅಧಿಕಾರವೆಂಬ ಮಸಿ ನುಂಗಿ ಅಲ್ಲಿಂದ ಶಕ್ತ ಹೊಗೆಯನ್ನುಗುಳುತ್ತದೆ. ಅದೃಷ್ಟವೆಂಬುದು ಹೋದರೆ ಅದರೊಂದಿಗೆ ಇತರ ಎಲ್ಲ ಅಗತ್ಯಗಳೂ- ಸಂಪತ್ತು, ವಿದ್ಯೆ, ಹೋಗುವಂತೆ ಇಲ್ಲಿ ಅಧಿಕಾರದೊಂದಿಗೇ ಮನುಷ್ಯನ ನಡೆನುಡಿಗಳು ಬದಲಾಗುತ್ತ ಹೋಗುತ್ತವೆ.
ಗುರುವು ಮಾರ್ಗದರ್ಶಿಯಾಗಿದ್ದ ಕಾಲವೊಂದಿತ್ತು. ಈಗ ಗುರು ನಿಮ್ಮ ಹಣೆಬರೆಹವನ್ನು ತಿದ್ದಬಹುದು. ಯಾವುದೇ ಆಯ್ಕೆಗೂ ಗುರುವಿನ ಗುಲಾಮನಾಗಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ! ಈಗ ಪಿಎಚ್ಡಿ ಪದವಿಯೂ ಹೀಗೆಯೇ ಎಂದು ಕುಹಕಿಗಳು ಹೇಳಬಹುದು. ಆದರೆ ಅವರಿಗೂ ಸತ್ಯ ಗೊತ್ತಿದೆಯೆಂದಾಯಿತು. ಅಧಿಕಾರದಲ್ಲಿ ಅರ್ಥಾತ್ ಆಯಕಟ್ಟಿನ ಸ್ಥಾನದಲ್ಲಿರುವವರನ್ನು ಮೆಚ್ಚಿದರೆ, ಮೆಚ್ಚಿಸಿದರೆ ಮುಂದಿನ ಹಾದಿ ಸುಗಮ.
ಯಾವುದು ಅರಿವು? ಅದಕ್ಕಾಗಿ ದುರ್ಗಮದಾರಿಯನ್ನು ಹುಡುಕುವುದೇಕೆ? ಒಂದಷ್ಟು ಜನರು ಎಲ್ಎಲ್ಪಿಗಳನ್ನು ಸ್ಥಾಪಿಸಿಕೊಂಡು ಎಲ್ಲ ಪ್ರತಿಭಾನ್ವೇಷಣೆಗಳೂ ತಮ್ಮ ಮೂಲಕವೇ ನಡೆಯಬೇಕೆಂದು ತಾಕೀತು ಮಾಡಿದರೆ ಮತ್ತು ಅದಕ್ಕೆ ಅಧಿಕಾರದ ಅನುಗ್ರಹವಿದ್ದರೆ ಈ ಸಾರಮತಿಗಳು ರಾಜ್ಯದೊಳಗೆ, ದೇಶದೊಳಗೆ ತಮ್ಮ ಸಮಾನಾಂತರ ಪಾಳೆಯಗಳನ್ನು ಸ್ಥಾಪಿಸಬಹುದು. ನಾವೆಲ್ಲ ನೋಡನೋಡುತ್ತಿದ್ದಂತೆಯೇ ರಾಕೇಟಿನೋಪಾದಿಯಲ್ಲಿ ಇಲ್ಲಿಂದ ಅಲ್ಲಿಗೆ ಸುರ್ರನೇ ಏರಬಹುದು. ಎಂತಹ ಬುದ್ಧಿವಂತ ಎಂದು ಹೇಳುತ್ತ ಬುದ್ಧಿವಂತಿಕೆಯನ್ನು ವ್ಯಕ್ತಿಯ ಆರಾಧನೆಗೆ ಸರಿಯಾಗಿ ಬಳಸಿದರೆ ವಸ್ತುವಿನ ಬದಲು ವ್ಯಕ್ತಿಯೇ ಕಥಾನಾಯಕನಾಗಬಹುದು.
ನೀವು ಮಾಡುವ ಎಲ್ಲ ಕೆಲಸಗಳನ್ನೂ ಅಧಿಕಾರಸ್ಥರು ಸ್ವೀಕರಿಸಬೇಕಾಗಿಲ್ಲ. ಬುದ್ಧಿವಂತರು ಮಾಡಿಕೊಟ್ಟದ್ದನ್ನೆಲ್ಲ ಅಂಗೀಕರಿಸುತ್ತೇವೆಂದು ಯಾವ ಅಧಿಕಾರವೂ ಹೇಳಿಲ್ಲ. ಆದರೆ ಈ ಪ್ರಮೇಯ ಜನಸಾಮಾನ್ಯರಿಗೆ ಗೊತ್ತಿಲ್ಲ. ಈತ ಅಲ್ಲಿಗೆ ತಲುಪಿದ್ದಾನಲ್ಲ ಎಂದು ಮತ್ಸರವೋ ಮೆಚ್ಚಿಗೆಯೋ ತೋರ್ಪಡಿಸಲ್ಪಟ್ಟಾಗ ಆತ ಅಲ್ಲಿ ತನ್ನ ಒಡೆಯನಡಿ ಬಿಸ್ಕೆಟ್ ಮೆಲ್ಲುತ್ತ ಕುಳಿತಿರುತ್ತಾನೆ. ಜೋಳವಾಳಿಗೆಯ ಸುಖ ಗುಲಾಮನಿಗಲ್ಲದೆ ಇತರರಿಗೇನು ಗೊತ್ತು? ಈ ಗುಲಾಮಗಿರಿಯ ಮಕ್ಕಳೋ ಮೊಮ್ಮಕ್ಕಳೋ ಮುಂದೊಂದು ದಿನ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಸ್ವೀಕರಿಸಿ ಪ್ಯಾನ್ ಇಂಡಿಯಾ ಆದಾಗ ತಾತಮುತ್ತಾತರಿಗೆ ಬಿಸ್ಕೆಟ್ ಸವಿದ ನೆನಪು. ಅರಿವೆಂದರೆ ವೈಯಕ್ತಿಕ ಸ್ಥಾನವನ್ನು, ವರ್ಚಸ್ಸನ್ನು ಬೆಳೆಸಿಕೊಂಡು ಗಟ್ಟಿಮಾಡಿಕೊಂಡು ಅದನ್ನು ಸಮಾಜಸೇವೆ, ಕಲಾಸೇವೆ ಮುಂತಾದ ಸಿಹಿ ಪದಗಳೊಂದಿಗೆ ಮಿಶ್ರಮಾಡಿ ಪ್ರಿಯರಿಗೆ ಬಡಿಸುವ ಸುಖಕ್ಕಿಂತ ದೊಡ್ಡ ಸಮಾಜಸೇವೆ, ಜನಸೇವೆ ಬೇರೇನಿದೆ?
ಮನುಷ್ಯನ ಗುರಿಯೇನಿರಬೇಕು? ಮಹಾಭಾರತದಲ್ಲಿ ಇಂತಹ ಒಂದು ಸ್ಪರ್ಧೆ ನಡೆಯಿತಂತೆ. ಮರದ ತುದಿಯ ಹಸಿರಿನ ನಡುವೆ ಒಂದು ಹಕ್ಕಿಯ ಗೊಂಬೆೆಯನ್ನು ನಿಲ್ಲಿಸಿ ಬಾಣ ಬಿಡಲು ಹೇಳಿದರಂತೆ. ಮರಕಂಡವರು ಕೆಲವರು. ಮರದ
ತುದಿಯನ್ನು ಕಂಡವರು ಕೆಲವರು, ಮರದ ತುದಿಯ ಹಕ್ಕಿಯನ್ನು ಕಂಡವರು ಇನ್ನು ಕೆಲವರು, ಕೊನೆಗೆ ಹಕ್ಕಿಯ ತಲೆಯನ್ನು ಕಂಡವರೂ ಇದ್ದರು. ಆದರೆ ಅರ್ಜುನನೆಂಬವನೊಬ್ಬ ಇನ್ನೇನನ್ನೂ ಕಾಣದೆ ಹಕ್ಕಿಯ ಕಣ್ಣನ್ನಷ್ಟೇ ಕಂಡನಂತೆ. ಬಾಣ ಎಸೆದ; ಅದು ಹಕ್ಕಿಯ ಕಣ್ಣಿಗೆ ತಗಲಿತು. ಅರ್ಜುನನ್ನು ಗೆಲ್ಲಿಸಿತು. ಗುರಿಯನ್ನು ನೋಡಿ ಅಲ್ಲಿಯ ವರೆಗೆ ತಲುಪಬೇಕಾದರೆ ಅರ್ಜುನ ದೃಷ್ಟಿ ಬೇಕು. ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೀಗೆ ಹಂತಹಂತವಾಗಿ ನೋಡುವ ಬದಲು ದೃಷ್ಟಿಯನ್ನು ನೇರ ಕೇಂದ್ರಾತಿಕೇಂದ್ರಕ್ಕೆ ಒಡ್ಡಬೇಕು. ಅದಷ್ಟೇ ಸಾಧನೆ; ಆಗಷ್ಟೇ ಗೆಲುವು. ನಮ್ಮ ಅನೇಕ ಬುದ್ಧಿವಂತರಿಗೆ ಅರಿವೇ ಗುರುವೆಂದ ಅಲ್ಲಮನಿಂದ ಅಧಿಕಾರವೇ ಅರಿವು, ಗುರಿ, ಗುರು ಎಂಬ ವರ್ತಮಾನದ ವರೆಗೆ ದೀರ್ಘ ಪಯಣ ಸಾಗಿ ಬಂದಿದೆ.
ರಾಜಕೀಯ, ರಾಜಕಾರಣ ಇವೆಲ್ಲ ಒಂದೊಮ್ಮೆ ಅಯೋಗ್ಯರ ಸ್ವರ್ಗವೆಂದು ನಮ್ಮ ಜ್ಞಾನಿಗಳು ಟೀಕಿಸುತ್ತಿದ್ದರು. ಈಗ ಅದಿಲ್ಲದೇ ತಾವು ಸಂಪಾದಿಸಿದ ಜ್ಞಾನ ವ್ಯರ್ಥವೆಂಬ ಜ್ಞಾನೋದಯ ಎಲ್ಲ ಬುದ್ದಿವಂತರನ್ನು, ಚಿಂತಕರನ್ನು, ಕಲಾವಿದರನ್ನು ಆವರಿಸಿದೆ. ಕೆಲವು ದಶಕಗಳ ಹಿಂದೆ ಒಳಹೊರಗನ್ನು ವ್ಯಾಪಿಸಿದ ವಿಸ್ಮತಿ ಕಳೆದಿದೆ. ಹೊಸ ಹಗಲು ಬಂದಿದೆ. ಬೆಳಕಾಗಿದೆ. ಈಗ ನವ ಉತ್ಸಾಹದಿಂದ, ಅಧಿಕಾರವಲ್ಲದಿದ್ದರೂ ಅದರ ಬಳಿ ಸಾಯುಜ್ಯ, ಸಾಮೀಪ್ಯ, ಸಾನ್ನಿಧ್ಯಗಳನ್ನು ಒಟ್ಟಾಗಿ ಎದೆಗೊಡ್ಡುವ ಸಾಮರ್ಥ್ಯವನ್ನು ನಮ್ಮ ಸಮಕಾಲೀನ ಜ್ಞಾನಿಗಳು ಪಡೆದಿದ್ದಾರೆ. ಅವರ ಕಾಲದಲ್ಲಿ ನಾವೂ ಬದುಕಿದ್ದೇವಲ್ಲ ಎಂಬ ಕೃತಾರ್ಥತೆಯ ಸಂತೋಷದಿಂದ ನಾವಿದ್ದೇವೆ. ಕೊನೆಗೂ ನಮ್ಮ ಅವತಾರಗಳೆಲ್ಲ ಇದೇ. ರಾಮನ ಜೊತೆ, ಕೃಷ್ಣನ ಜೊತೆ, ಬುದ್ಧನ ಜೊತೆ, ಗಾಂಧಿಯ ಜೊತೆಗಿರುವುದು ಮತ್ತು ಅವರೊಂದಿಗಿನ ಭಾವಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತೇಲಿಬಿಡುವುದು, ತೇಲಿ ಬಂದ ಜಾಸ್ ಗಾನದ, ನಿಯೋನ್ ಬೆಳಕಿನಡಿಯಲ್ಲಿ, ಮೂಡಿ ಬಂದ ವರ್ಚಸ್ಸಿನ ಮೂಲಕ ಇತರರನ್ನು ಮುಳುಗಿಸಿಬಿಡುವುದು, ಮಾಧ್ಯಮ ಪ್ರಕಾಶಿತರಾಗುವುದು, ಪ್ರಶಸ್ತಿಗಳನ್ನು ನಮ್ಮದಾಗಿಸುವುದು, ವಿನೀತ ಭಾವದಿಂದ ಅವನ್ನು ಸ್ವೀಕರಿಸಿ ಅದರೊಂದಿಗೆ ಬರುವ ನಗದು ಮತ್ತು ಬಂಗಾರವನ್ನು ಉಳಿಸಿಕೊಂಡು ಗೌರವವನ್ನು ಬಿಟ್ಟುಕೊಡುವುದು.
ಇವೆಲ್ಲ ಅಡ್ಡ ಪಂಕ್ತಿಯಲ್ಲಿ ಕುಳಿತವರಿಗಷ್ಟೇ ಕಾಣಬಹುದು. ಸರದಿಯ ಸಾಲಿನಲ್ಲಿ ಮುನ್ನುಗ್ಗುವವರಿಗೆ ಯಾವಾಗ ಗುರಿಮುಟ್ಟಿಯೇನೋ ಎಂಬ ಅವಸರ, ತವಕ.
ಇಷ್ಟೆಲ್ಲ ಆದ ಮೇಲೆ ಅಧಿಕಾರ ಕೇಂದ್ರ ಬದಲಾದರೆ? ನಾವೂ ಮಗ್ಗುಲು ಬದಲಾಯಿಸಿದರಾಯಿತು. ಗಾಳಿ ಬಂದಾಗ ತೂರಿಕೊಳ್ಳುವಲ್ಲಿಂದ ಗಾಳಿ ಬಂದಾಗ ಹಾರಿಕೋ, ಜಾರಿಕೋ ಎಂಬುದೇ ಸರಿ. ಸಂವಿಧಾನವಿರುವಲ್ಲಿ ಭಗವದ್ಗೀತೆ ಅಥವಾ ಮನುಸ್ಮತಿಯನ್ನು ಹಿಡಿದರಾಯಿತು. ಮನುಷ್ಯ ಪಕ್ಷ-ಪಾತಿಯಾಗಬಾರದು. ನಾವೂ ಅವರೂ ಮನುಷ್ಯರೇ. ಎಲ್ಲರೂ ಕೇವಲ ಮನುಷ್ಯರೇ!






