Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ಪ್ರತಿಭಟನೆಗೆ ಯಾರ ಪ್ರಭಾವ?

ಪ್ರತಿಭಟನೆಗೆ ಯಾರ ಪ್ರಭಾವ?

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ15 Oct 2026 11:03 AM IST
share
ಪ್ರತಿಭಟನೆಗೆ ಯಾರ ಪ್ರಭಾವ?

ಈಗ ನಡೆಯುವ ಎಲ್ಲ ಬಗೆಯ ಹೋರಾಟಗಳಲ್ಲಿ ಕಾರ್ಯೋನ್ಮುಖರಾಗಿರುವವರು ಹರೀಶ್ ಸಾಳ್ವೆಯವರ ಟೀಕೆಯನ್ನು ಅನಗತ್ಯವಾಗಿ ಹಳಿಯದೆ ಅದು ನಮಗೆ ಇನ್ನಷ್ಟು ದೊಡ್ಡ ಸವಾಲನ್ನು ಇಟ್ಟಿದೆಯೆಂದು ತಿಳಿಯುವುದು ಉಚಿತ. ನೆರಳನ್ನು ನೋಡಿ ಭಯಪಡುವ ಅಗತ್ಯವಿಲ್ಲ. ವೈರಿ ನೇರ ಪ್ರತ್ಯಕ್ಷವಾಗಲಿ; ಆಗ ಎದುರಿಸುವ ಧೈರ್ಯ, ಚಾಕಚಕ್ಯತೆ ಬೇಕು. ಯಾವ ಹರಿವೂ ವಿಶಾಲವಾಗಿ ಹುಟ್ಟುವುದಿಲ್ಲ. ಚಿಕ್ಕ ಒರತೆ, ಝರಿ, ತೊರೆ ಇವು ಮುಂದೆ ಕ್ರಮಿಸುವಾಗ ಅನೇಕ ಉಪನದಿಗಳು ಸೇರಿಕೊಳ್ಳುತ್ತವೆ. ಕಾಲದ ಹರಿವಿನೊಂದಿಗೆ ಹೋರಾಟದ ಹರಿವೂ ಹೀಗೆಯೇ.

ಹರೀಶ್ ಸಾಳ್ವೆ ಎಂಬ ಲಂಡನ್‌ವಾಸಿ ಹಿರಿಯ ನ್ಯಾಯವಾದಿ ಈಚೆಗೆ ನಡೆದ ದಿಲ್ಲಿಯ ಪ್ರತಿಭಟನೆಗೆ ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಚಳವಳಿಯಲ್ಲಿ ವಿದೇಶೀ ಕೈವಾಡವಿದೆಯೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿ ಭಾರತವನ್ನು ಅಭಿವೃದ್ಧಿಪಥದಲ್ಲಿ ಒಯ್ಯುತ್ತಿರುವಾಗ ಭಾರತವನ್ನು ದ್ವೇಷಿಸುವ ಅಥವಾ ಇಷ್ಟಪಡದ ಕೆಲವು ರಾಷ್ಟ್ರಗಳು, ಮುಖ್ಯವಾಗಿ ಅಮೆರಿಕ, ಭಾರತ ಸರಕಾರವನ್ನು ಅಲ್ಲಾಡಿಸಲು ದೇಶದೊಳಗಣ ಶಕ್ತಿಯನ್ನು ಪ್ರೇರಿಸಿವೆ ಅಥವಾ ಪ್ರಚೋದಿಸಿವೆ ಎಂದಿದ್ದಾರೆ. ಇದನ್ನು ಸಮರ್ಥಿಸಲು ಅವರು ನೆರೆಯ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮುಂತಾದ ದೇಶಗಳ ರಾಜಕೀಯ ಏರುಪೇರನ್ನು ಉದಾಹರಿಸಿದ್ದಾರೆ. ಅಲ್ಲದೆ ವಿದೇಶಗಳಲ್ಲಿರುವ ಅಭಿಜೀತ್ ದೀಪ್ಕೆ, ಸೌರವ್‌ದಾಸ್ ಮುಂತಾದವರಿಗೆ ಭಾರತದ ರಾಜಕೀಯದಲ್ಲಿ ಏಕಿಷ್ಟು ಆಸಕ್ತಿ ಎಂಬ ಮೂಲಕ ಈಗ ಸಿಜೆಪಿಯ ಚಳವಳಿಯ ಮುಖ್ಯರತ್ತ ಬೆಟ್ಟುಮಾಡಿ ತೋರಿಸಿದ್ದಾರೆ.

ಇಂತಹ ಟೀಕೆಗಳು ಪ್ರಜಾಪ್ರಭುತ್ವದಲ್ಲಿ ಸಹಜ. ಸಾಳ್ವೆಯವರು ಸ್ವತಃ ಇಂಗ್ಲಿಷ್ ಬಾರಿನ ಸದಸ್ಯರು. ಕ್ರೈಸ್ತ. ಭಾರತೀಯ ಪತ್ನಿಯನ್ನು ವಿಚ್ಛೇದಿಸಿ ಒಬ್ಬ ಆಂಗ್ಲ ಮಹಿಳೆಯನ್ನು ಮದುವೆಯಾಗಿ ಈಗ ಮತ್ತೆ ಅವರನ್ನೂ ಕೈಬಿಟ್ಟು ಇನ್ನೊಬ್ಬಾಕೆ ಯನ್ನು ಮದುವೆಯಾಗಿದ್ದಾರೆ. ಇರಲಿ; ಇದು ಅವರ ವೈಯಕ್ತಿಕ ವಿಚಾರ.

ಸಾಮಾಜಿಕವಾಗಿ, ಸಾರ್ವಜನಿಕವಾಗಿ ಅವರು ಹಿರಿಯ ಮತ್ತು ದಕ್ಷ ನ್ಯಾಯವಾದಿಗಳು. ಈಗಿನ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗಿಂತ ಮೊದಲು ಭಾರತದ ಸಾಲಿಸಿಟರ್ ಜನರಲ್ ಆಗಿದ್ದವರು. ಅಂಥವರು ತರ್ಕಬದ್ಧವಾಗಿ ಸಾಕ್ಷ್ಯದ ಜೊತೆಗೆ ಸಮರ್ಥಿಸಿದರೆ ಅದಕ್ಕೊಂದು ಅರ್ಥವಿತ್ತು. ಆದರೆ ಅವರು ಸರಕಾರವನ್ನು ಸಮರ್ಥಿಸಿ ಪ್ರತಿಭಟನಾಕಾರರನ್ನು ವಿರೋಧಿಸಿದರೇ ಹೊರತು ಈ ಕುರಿತು ಯಾವ ದತ್ತಾಂಶವನ್ನು, ಅಂಕಿ-ಅಂಶಗಳನ್ನು ನೀಡಲಿಲ್ಲ. ಯಾವ ಅಭಿವೃದ್ಧಿ, ಯಾವುದು ಅಭಿವೃದ್ಧಿ ಎಂದು ಅವರು ಹೇಳಲಿಲ್ಲ. ಅವರ ವ್ಯಕ್ತಿತ್ವದ ಬಲದಿಂದ ಹೇಳಿದ ಈ ಮಾತುಗಳು ಅವರವೇ ಅಥವಾ ಪ್ರಾಯೋಜಿತವೇ ಎಂದು ಸಂಶಯ ಬರುವ ರೀತಿಯಲ್ಲಿ ಅವರು ವರ್ತಿಸಿದ್ದಾರೆ. ಸತ್ಯವನ್ನು ಅವರು ಹೇಳುತ್ತಿದ್ದಾರೆಂಬುದಕ್ಕೆ ಆಧಾರವಿಲ್ಲ. ಅವರು ಹೇಳಿದ್ದೇ ಸತ್ಯವೆಂದರೆ ಅದಕ್ಕೆ ಬೇರೆ ವ್ಯಾಖ್ಯಾನ ಬೇಡ. ಅವರು ಆಸ್ಥಾನ ಪಂಡಿತರೆಂದೇ ಅರ್ಥ. ಎಲ್ಲ ಹೋರಾಟಗಳಲ್ಲೂ ಲಾಗಾಯ್ತಿನಿಂದ ಈ ರೀತಿಯ ತೀಕ್ಷ್ಣ ಪ್ರತಿಕ್ರಿಯೆಗಳು ಸಹಜ.

ಸಾಳ್ವೆ ಅಂತಲ್ಲ, ಈಚೆಗೆ ಭಾರತದ ಅನೇಕ ನಿವೃತ್ತ ಅಧಿಕಾರಿಗಳು, ನ್ಯಾಯಾಧೀಶರು, ಮುಂತಾದ ಸಾಮಾಜಿಕ ಹಿರಿಯರು ಸರಕಾರವನ್ನು ಸಮರ್ಥಿಸಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದು ತಪ್ಪಲ್ಲ. ಇರುವ ಪ್ರಶ್ನೆಯೆಂದರೆ ಇವುಗಳಲ್ಲಿ ಪ್ರಾಮಾಣಿಕತೆಯ ಅಂಶವೆಷ್ಟು ಎಂಬುದು. ತನಗೆ ಸರಿ ಅನಿಸಿದ್ದನ್ನು ಹೇಳುವುದು ತಪ್ಪಲ್ಲ. ಸಭ್ಯತೆಯನ್ನು ಮೀರದ ಟೀಕೆಗಳೂ ತಪ್ಪಲ್ಲ. ಸರಕಾರದ ಕ್ರಮಗಳು ಇಷ್ಟವಾದರೆ ಅದನ್ನು ಹೇಳುವಾಗ ಇರುವ ಪರಿಸ್ಥಿತಿಗೆ ಪೂರಕವಾದ ಅಂಶಗಳನ್ನು ಹೇಳುವುದರೊಂದಿಗೆ ಪ್ರತಿಪಕ್ಷಗಳ ಅಥವಾ ಸರಕಾರದ ವಿರೋಧಿ ನಿಲುವನ್ನು ತಾಳಿ ಪ್ರತಿಭಟಿಸುವವರ ತಪ್ಪೇನು ಎಂಬುದನ್ನು ಹೇಳಬೇಕು.

ಈ ಕೆಲಸವನ್ನು ಪ್ರತಿಭಟನಾಕಾರರೂ ಮಾಡಬೇಕಲ್ಲವೇ ಎಂಬ ಪ್ರಶ್ನೆ ಉದ್ಭವಿಸಬಹುದು. ಸರಿ. ಆದರೆ ಮತೀಯವಲ್ಲದ ಯಾವ ಸಾಧನೆಯನ್ನು ಸಮರ್ಥಿಸಬಹುದು? ಬೆಲೆಯೇರಿಕೆ? ತೈಲಬೆಲೆ? ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಎಡಬಿಡಂಗಿತನ? ವಿದೇಶದಲ್ಲಿರುವ ಭಾರತೀಯರ ಉದ್ಯೋಗಕ್ಕೆ ಕುತ್ತು? ಭಾರತೀಯ ಉದ್ಯಮಗಳ ಕುರಿತು ಹೇರುತ್ತಿರುವ, ವಿಧಿಸುತ್ತಿರುವ ಕಠಿಣ ನಿಬಂಧನೆಗಳು? ಅಥವಾ ಭಾರತದ ಆರ್ಥಿಕ ಸಮಸ್ಯೆಗಳು? ಪ್ರಜೆಗಳ ಜೀವನಾಧಾರಿತ ವ್ಯವಹರಣೆಯ ಕುರಿತು ಹೇರಲಾದ ಎಲ್ಲ ಬಗೆಯ ಒತ್ತಡಗಳು?

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಗ್ಗೆ ಏನೇ ಟೀಕೆಗಳು ಬರಲಿ, ಅದನ್ನು ಭಾರತ ಸರಕಾರ ಖಂಡಿಸುತ್ತದೆ; ಆಯಾಯ ದೇಶಗಳ ಪ್ರತಿನಿಧಿಗಳನ್ನು ಕರೆಸಿ ಖಂಡಿಸುವುದು, ಛೀಮಾರಿ ಹಾಕುವುದು ಮುಂತಾದ ವ್ಯಾಯಾಮಗಳು ಸದಾ ನಡೆಯುತ್ತಿವೆ. ಆದರೆ ಹುತ್ತವ ಬಡಿದರೂ ಹಾವು ಸಾಯುತ್ತಿಲ್ಲ. ನಮ್ಮ ಸಮಸ್ಯೆಗಳು ಎಂದಿನಂತೆ ಆಕಾಶದತ್ತ ಮುಖಮಾಡಿವೆ.

ಹೋಗಲಿ, ಕಾನೂನು ಸುವ್ಯವಸ್ಥೆಯಾದರೂ ಸರಿಯಿದೆಯೇ? ಅದೂ ಇಲ್ಲ. ಸಮೂಹವೇ ಸಮಾಜವೆನ್ನಿಸಿದೆ. ಹಲ್ಲೆಗಳು ಸಹಜ ಪರಿಕ್ರಮಗಳಾಗಿವೆ. ಸರಕಾರದ ಅಂಗಸಂಸ್ಥೆಗಳು ಕೈಯಿಡುವ ಮೊದಲೇ ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಿವೆ. ಸರಕಾರದ ಅಪರೂಪದ ಅಪರಾಧಗಳಾದ ಎನಕೌಂಟರ್ ಎಂಬ ಆಯುಧವನ್ನು ಜನರೇ ಪ್ರಯೋಗಿಸುತ್ತಿದ್ದಾರೆ. ವೈದ್ಯರು, ವಕೀಲರು ಮುಂತಾದ ಸಾರ್ವಜನಿಕರಿಗೆ ತೆರೆದುಕೊಂಡ ಯಾವ ವೃತ್ತಿಯೂ ಸುರಕ್ಷಿತವಲ್ಲ ಎನಿಸಿದೆ. ಈ ಇತಿಹಾಸ ಎಲ್ಲಿಯದು? ಇದರ ಮುನ್ನಡೆ ಎಲ್ಲಿಗೆ?

ಇಂತಹ ಸ್ಥಿತಿಯಲ್ಲಿ ಪ್ರಜೆಯೊಬ್ಬ ಆಡಳಿತಕ್ಕೆ ಜೈಹಿಡಿದು ಇಲ್ಲವೇ ತಲೆಗೆ ಕೈಹಿಡಿದು ಕೂರುವ ಹೊರತು ಏನು ಮಾಡಬೇಕು?

ಗಾಂಧಿ (ಕನಸು) ಕಂಡ ರಾಮರಾಜ್ಯ ಅಥವಾ ಗ್ರಾಮರಾಜ್ಯದ ಕಲ್ಪನೆಯಲ್ಲಿ ಎಲ್ಲರೂ ಸುಖಿಗಳಾಗಬಹುದಿತ್ತು. ನಡುರಾತ್ರಿಯಲ್ಲೂ ಹೆಣ್ಣುಮಗಳೊಬ್ಬಳು ಏಕಾಂಗಿಯಾಗಿದ್ದರೂ ಸುರಕ್ಷಿತವಾಗಿ ಅಡ್ಡಾಡಬಹುದಿತ್ತು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಎಂಟು ದಶಕಗಳಾಗುವ ಈ ಹೊತ್ತಿನಲ್ಲಿ ಸುಖವೆಂಬುದು ಕೆಲವೇ ಜನರ ನಿರೂಪಣೆ ಮತ್ತು ಒಡೆತನಕ್ಕೊಳಪಟ್ಟಿದೆ. ಹೆಣ್ಣುಮಗಳಿರಲಿ, ಅಧಿಕಾರವಿರುವ ಇಲ್ಲದಿರುವ ಎಲ್ಲ ಜನನಾಯಕರೂ ಝಡ್‌ಪ್ಲಸ್ ಭದ್ರತೆಯೊಂದಿಗೆ ನಡೆಯಬೇಕಾಗಿದೆ. ಇಡೀ ಭಾರತವೇ ನಮ್ಮ ಸಂಘಟನೆಯ ಅಧೀನದಲ್ಲಿದೆ, ಗಡಿಯಾಚೆಗಿನ ಮತ್ತು ಆಂತರಿಕ ಭಯೋತ್ಪಾದನೆಯನ್ನು ನಾವು ಮಟ್ಟಹಾಕಬಲ್ಲೆವು, ಬಹುಸಂಖ್ಯಾತರ ಇಚ್ಛೆಯಂತೆ ಇತರರು ಬದುಕಿಬಾಳಬೇಕಾದ ಅನಿವಾರ್ಯತೆ ಈ ದೇಶಕ್ಕಿದೆ ಮುಂತಾದ ಹಿಂದುತ್ವ ಪತಾಕೆೆಯನ್ನು ಎತ್ತರಕ್ಕೊಯ್ಯುವ ಹಪಹಪಿಕೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮೋಚ್ಚ ನಾಯಕರಾದ ಸರಸಂಘಚಾಲಕ ಭಾಗವತರೇ ಭದ್ರತೆಯಿಲ್ಲದೆ ಎಲ್ಲೂ ನಡೆಯ ಲಾರದ ಕರುಣಾಜನಕ ಸ್ಥಿತಿಯನ್ನು ತಲುಪಿದ್ದಾರೆ. ಇದರರ್ಥವೇನು? ಅವರಿಗೆ ಧೈರ್ಯ ಕುಸಿದಿದೆ; ಅಥವಾ ಹೆದರಿ ಹೇಡಿಗಳಾಗಿದ್ದಾರೆ ಎಂಬುದೇ ಅರ್ಥ.

ದೇಶ ವಿಶ್ವದ ಅತ್ಯುತ್ತಮ, ಅತ್ಯುನ್ನತ ಸ್ಥಾನವನ್ನು ತಲುಪುವುದರ ಬದಲು ಗೊತ್ತುಗುರಿಯಿಲ್ಲದೆ ಕೆನೆಯುತ್ತಿದೆ. ಭಾರತೀಯ ಸೇವೆಯ ಕೆಲವರು ಧನಿಗಳನ್ನು ಮೆಚ್ಚಿಸುವ ಗುಲಾಮರಂತೆ ಅಸಂಗತ ಚಿತ್ರಗಳನ್ನು ರಚಿಸಿ ಅದರ ಅಸಂಬದ್ಧತೆಯನ್ನು ಜನರೆದುರು ಇಟ್ಟು ಒಪ್ಪಿಸುವ ಹಣಾಹಣಿಯಲ್ಲಿದ್ದಾರೆ. ನಮಗಿಷ್ಟವಾದದ್ದು ಸರಿ ಮತ್ತು ನಮಗಿಷ್ಟವಾದ್ದನ್ನು ಮಾಡುವವರೇ ಸರಿ ಎಂಬ ಸರಕಾರಗಳ ಹಠದಲ್ಲಿ ಜನರು ತಮ್ಮತನವನ್ನು ಮರೆತು ಬಲಿಸ್ತಂಬಕ್ಕೆ ಕೊರಳನ್ನು ಅನಾಯಾಸವಾಗಿ ಒಡ್ಡುತ್ತಿದ್ದಾರೆ.

ಪ್ರಜಾಪ್ರಭುತ್ವ ಹೇಗೆ ನಡೆಯಬೇಕು? ಹೇಗೆ ಆಚರಿಸಿಕೊಳ್ಳಬೇಕು? ಹಿಂಸೆಯಿಂದಲ್ಲ, ದ್ವೇಷದಿಂದಲ್ಲ. ಬದಲು ಸಹಕಾರದಿಂದ. ಹಾಗೆಂದು ಎಲ್ಲರೂ ಒಂದನ್ನೇ ಅಥವಾ ಒಂದೇ ಸಿದ್ಧಾಂತವನ್ನು, ಒಂದೇ ಪಕ್ಷವನ್ನು ಒಬ್ಬನೇ ವ್ಯಕ್ತಿಯನ್ನು, ಒಪ್ಪಿಕೊಳ್ಳಬೇಕು ಎಂಬುದರಿಂದಲ್ಲ. ಒಪ್ಪದಿರುವ ಸ್ವಾತಂತ್ರ್ಯವನ್ನು ಗೌರವಿಸುವುದರಿಂದ. ಅದನ್ನು ಭಿನ್ನಮತ ಎಂದು ಹೇಳುತ್ತಾರೆ. ಆದರ್ಶ ರಾಜ್ಯವೆಂದರೆ ಶತಾಂಶ ಒಂದೇ ಎಂಬುದರಿಂದಲ್ಲ. ಎಲ್ಲಿಯ ವರೆಗೆ ಸಮಾಜ ಮನುಷ್ಯರಿಂದ ರಚಿತವಾಗಿರುತ್ತದೆಯೋ ಅಲ್ಲಿಯ ವರೆಗೆ ಮನುಷ್ಯನ ರಾಗದ್ವೇಷಗಳು ಕೆಲಸಮಾಡುತ್ತಿರುತ್ತವೆ. ತಾನು ಹೇಳಿದ್ದನ್ನೇ ಎಲ್ಲರೂ ಒಪ್ಪಬೇಕು ಎನ್ನುವುದಾದರೆ ಎಲ್ಲ ನರಜೀವಿಗಳಿಗೂ ಮೆದುಳೆಂಬ, ಮನಸ್ಸೆಂಬ, ಬುದ್ಧಿಯೆಂಬ ದೇಹಭಾಗವಿರುತ್ತಿರಲಿಲ್ಲ ಅಥವಾ ಅವು ಬಳಕೆಗೆ ಬರುತ್ತಿರಲಿಲ್ಲ. ರಾಜಸತ್ತೆಯಿದ್ದಾಗ ಪ್ರಾಯಃ ಅಂತಹ ಒಂದು ವ್ಯವಸ್ಥೆಯಿತ್ತು. ಅಲ್ಲೂ ರಾಜನಿಗೆ ಸಲಹೆ ನೀಡುವ ವ್ಯಕ್ತಿಗಳಿದ್ದರು. ಅವರನ್ನು ಮಂತ್ರಿಗಳೆಂದು ಕರೆಯುತ್ತಿದ್ದರು. ಒಳ್ಳೆಯ ರಾಜನು ಇಂತಹ ಮತಿವಂತರನ್ನು ಆಯ್ಕೆ ಮಾಡಬೇಕಿತ್ತು ಮತ್ತು ಮಾಡುತ್ತಾನೆಂದು ಆಶಿಸಲಾಗಿತ್ತು. ಹೀಗೆ ಆಯ್ಕೆಯಾದವರಲ್ಲಿ ಬಹುಪಾಲು ವಿವೇಕಿಗಳಿದ್ದರೆ ಮತ್ತು ಅಂಥವರ ಮಾತಿಗೆ ರಾಜನು ಬೆಲೆಕೊಟ್ಟರೆ ಜನಹಿತ/ಪ್ರಜಾಹಿತ ಸಾಧಿತವಾಗುತ್ತದೆ. ಆದರೆ ರಾಜನೇ ಕೆಟ್ಟವನಾದರೆ? ಆತನ ಸುತ್ತ ದುಷ್ಟಚತುಷ್ಟಯ ಸೃಷ್ಟಿಯಾಗುತ್ತದೆ. ಮಹಾಭಾರತದಲ್ಲಿ ದುರ್ಯೋಧನನ ಸುತ್ತ ಹೀಗಿತ್ತೆಂದು ಓದುತ್ತೇವೆ. (ಅಲ್ಲೂ ಪಾಂಡವದ್ವೇಷಕ್ಕೆ ಅವರು ನೀರೆರೆದರೇ ಹೊರತು ಪ್ರಜೆಗಳಿಗೆ ಅಹಿತವಾಯಿತೆಂಬ ಮಾತು ಬರುವುದಿಲ್ಲ.) ಒಟ್ಟಾರೆ ಮೇಲೆ ಏಕವ್ಯಕ್ತಿ ಸ್ವಾಮ್ಯ, ಹಿಡಿತ, ಪ್ರಭಾವ, ನಿರ್ಧಾರ ಸಮಾಜದ ಮೇಲಿತ್ತು ಎಂದರ್ಥ.

ಈ ವೈಯಕ್ತಿಕ ಸ್ವಾತಂತ್ರ್ಯವನ್ನೇ ‘ಅಭಿಪ್ರಾಯ’ ಎಂದೋ ‘ಅಭಿಮತ’ ಎಂದೋ ಗುರುತಿಸುತ್ತೇವೆ. ಅನೇಕರು ಒಂದೇ ರೀತಿಯಲ್ಲಿ ಯೋಚಿಸಬಾರದೆಂದಿಲ್ಲ ಎಂಬುದರಿಂದ ಸಮಾಜಕ್ಕೆ ದಿಕ್ಕು ನಿರ್ಧರಿಸಲ್ಪಡುತ್ತದೆ. ಮನುಷ್ಯ ಶಾಶ್ವತವಲ್ಲದಿರುವಾಗ ಮತ್ತು ಇಂದಿದ್ದವನು ನಾಳೆ ಏನಾಗುತ್ತಾನೆೆಂಬುದು ಖಚಿತವಲ್ಲದಿರುವಾಗ ಮಾಡಬೇಕಾದ್ದಾದರೂ ಏನು? ಎಂಬ ಬಗ್ಗೆ ದಿಕ್ಸೂಚಿ ಎಲ್ಲಿದೆ?

ಅಭಿಪ್ರಾಯ, ಅಭಿಮತಗಳು ಯಾರನ್ನಾದರೂ ಪ್ರೇರೇಪಿಸಬೇಕೇ ಹೊರತು ಪ್ರಚೋದಿಸಬಾರದು. ಒಪ್ಪದಿರಲು ಒಪ್ಪಿಕೊಳ್ಳೋಣ (Let’s agree to disgree) ಎಂಬುದು ಸಾರ್ವಜನಿಕ ಬದ್ಧತೆಯಾಗಿರಬೇಕು. ಹಾಗಿಲ್ಲದೇ ಹೋದಾಗ ಅಥವಾ ಇಂತಹ ವ್ಯಕ್ತಿಗಳನ್ನು, ಗುಂಪನ್ನು, ಕಂಡು ಭಯಪಡಬೇಕಾದ ವಾತಾವರಣವು ಎದುರಾದಾಗ ಸಾಮಾಜಿಕ ಪಲ್ಲಟ ನಡೆಯುತ್ತದೆ. ನೆಮ್ಮದಿಯ ವಿಷಯವೆಂದರೆ ಎಲ್ಲದಕ್ಕೂ ಕೊನೆಯಿದೆ.

ಯಾವುದೇ ವಿಚಾರದ ಬಗ್ಗೆ ಒಂದು ನಿರ್ಧಾರವನ್ನು ಕೈಗೊಂಡಾಗ, ಅದನ್ನು ಸಮಾಜದ ಮುಂದಿಟ್ಟು ಸಹಮತವನ್ನು ಯಾಚಿಸುವುದು ಸಜ್ಜನಿಕೆಯ ಸೂಚನೆ. ನೀವು ಒಪ್ಪಿ-ಬಿಡಿ, ನಾನು/ವು ಈ ತೀರ್ಮಾನಕ್ಕೆ ಬದ್ಧರು ಎನ್ನುವವರು ಭಿನ್ನಮತವನ್ನು ಸಹಿಸರು. ಅಧಿಕಾರದಲ್ಲಿದ್ದಷ್ಟು ದಿನ ತಾನು ಅದರಲ್ಲಿ ಉಳಿಯಬೇಕು ಎಂಬುದೇ ರಾಜಕಾರಣದ ಮತ್ತು ಅಧಿಕಾರಶಾಹಿಯ ಮುಖ್ಯ ಗುಣವಾಗಿರುತ್ತದೆ.

ಎಲ್ಲರಿಗೂ ಅನುಕೂಲವಾದ, ಹಿತವಾದ ಕಾರ್ಯವೆಂದರೆ ಎಲ್ಲರೂ ಒಪ್ಪಿದ್ದೆರೆನ್ನಲಾಗದು. ಬಹುಮತದ ವಿಚಾರ ಬಂದದ್ದು ಇಲ್ಲೇ. ಬಹುಮತವೆಂದರೆ ಬರೀ ಹೆಚ್ಚು ಸಂಖ್ಯೆಯೆಂದರ್ಥವಲ್ಲ. ಸಮಾಜದ ಹೆಚ್ಚು ಜನರು ಈ ನಿರ್ಧಾರವೇ ಒಳ್ಳೆಯದು ಎಂದು ತಿಳಿದರೆ ಉಳಿದವರು ಅದನ್ನು ಅನುಸರಿಸುತ್ತಾರೆ. ಅದು ಸರಿಯೆಂದಲ್ಲ ಅಥವಾ ಅದೊಂದೇ ಸರಿಯೆಂದಲ್ಲ. ಬದಲಿಗೆ ಅದಕ್ಕಿಂತ ಒಳ್ಳೆಯ ಆಕೃತಿ, ವಿಚಾರ ಸದ್ಯ ನಮ್ಮೆದುರು ಇಲ್ಲ ಎಂಬುದಕ್ಕಾಗಿ ಮತ್ತು ಬಂದಾಗ ನೋಡೋಣ ಎಂಬುದಕ್ಕಾಗಿ.

ಕಲಹ, ಗಲಾಟೆ, ನಡೆಯುವಾಗ ದೂರದಿಂದ ನೋಡಿ ಸುಮ್ಮನಾಗುವವರು ಇದ್ದಾರೆ. ಹತ್ತಿರ ಹೋಗಿ ವಿಚಾರಿಸುವವರೂ ಇದ್ದಾರೆ. ಅದನ್ನು ನಿಲ್ಲಿಸಲು ಪ್ರಯತ್ನಿಸುವವರಿದ್ದಾರೆ. ಲೋಕೋ ಭಿನ್ನ ರುಚಿ! ದಿಲ್ಲಿಯಲ್ಲಿ ಮೊನ್ನೆ ನಡೆದ ಪ್ರತಿಭಟನೆ ಸಹಜವಾಗಿ ಮೂಡಿಬಂದದ್ದೆಂದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ವಿಶೇಷವೆಂದರೆ ಸರಕಾರದ ಕುರಿತು ಟೀಕಿಸುವವರಿಗಿಂತ ಹೆಚ್ಚು ಮಂದಿ ಸರಕಾರದ ಪರ ನಿಲ್ಲುತ್ತಾರೆ. ಹೀಗೆ ನಿಲ್ಲುವವರು ರಾಜಕಾರಣಿಗಳೇ ಅಗಿರಬೇಕಾಗಿಲ್ಲ, ಅವರು ಗುತ್ತಿಗೆದಾರರಿರಬಹುದು, ಮೇಲೆ ಹೇಳಿದಂತೆ ನಿವೃತ್ತರೂ ಇರಬಹುದು. ಹೀಗೆ ಪರಸ್ಪರ ಅವಲಂಬಿಸುವ, ವಿಚಾರವೇನು ಅಥವಾ ವೈಚಾರಿಕ ಗುಟ್ಟೇನು?

ಇವರಲ್ಲಿ ಬಹುಜನರು ಯಥಾಸ್ಥಿತಿವಾದಿಗಳು. ಹೀಗೇ ಇರಲಿ, ನಾವೇನು ಕೆಟ್ಟದ್ದನ್ನು ಇಲ್ಲವಾಗಿಸುವ ಸಾಮರ್ಥ್ಯದವರಲ್ಲ. ಹೀಗಂದಮೇಲೆ ಅಥವಾ ಹೀಗಾದ ಮೇಲೆ ಇದನ್ನು ಬದಲಾಯಿಸುವುದಾದರೂ ಯಾಕೆ? ಬದಲಾಯಿಸಿ ತನಗಾಗಬೇಕಾದ್ದೇನು? ಇರಲಿ, ಹೀಗೇ ಇರಲಿ. ಇದು ಆಡಳಿತಕ್ಕೆ ಸುರಕ್ಷಿತವಾದ ನೆರವು. ನೇರವಾಗಿ ಬೆಂಬಲಿಸುವ ಒಂದು ಗುಂಪು-ಅವು ಸ್ವಾರ್ಥಿಗಳಿರಬಹುದು, ವ್ಯವಹಾರಸ್ಥ ಲಾಭಗಳಿಕೆಯ ಮಂದಿಯಿರಬಹುದು ಮತ್ತು ಸುಮ್ಮನೇ ಒಪ್ಪುವ ವ್ಯಕ್ತಿಗಳಿರಬಹುದು. ಇಂತಹವರಿಂದ ಸಮಾಜ ಎತ್ತಿನಗಾಡಿಯಂತೆ ಅತ್ತಿತ್ತ ಓಲಾಡುತ್ತಿದ್ದರೂ ಮುಂದುವರಿಯಬಹುದು.

ಇದನ್ನು ವಿರೋಧಿಸಿ, ನೇರ ಬದಲಾವಣೆಯ ಹಂತಕ್ಕೆ ಸಮಾಜವನ್ನು ಕರೆದೊಯ್ಯುತ್ತೇವೆನ್ನುವ ಕ್ರಾಂತಿಕಾರಿ ಮಾದರಿಯ ಇನ್ನೊಂದು ಸಮೂಹವಿರುತ್ತದೆ. ಅವರಿಗೆ ಹೆಚ್ಚು ಕೆಲಸವಿರುತ್ತದೆ. ನಿರಾಶೆಬಡಿದವರನ್ನು ಎಚ್ಚರಿಸಿ ಸಕ್ರಿಯರನ್ನಾಗಿಸವುದು, ತಾವೂ ಬರುತ್ತೇನೆನ್ನುವವರ ಸತ್ವ, ಪ್ರಾಮಾಣಿಕತೆಯನ್ನು ಪರೀಕ್ಷಿಸಿ ಜೊತೆಗಾರರನ್ನಾಗಿಸುವುದು, ಅದರಲ್ಲೂ ವಿಚಲಿತರಾಗದಂತೆ ನೋಡಿಕೊಳ್ಳುವುದು. ಇಂದಿನ ಸಂದರ್ಭಗಳಲ್ಲಿ ಹೀಗೆ ಬಂದವರನ್ನು ಅರ್ಧಹಾದಿಯಲ್ಲಿ ಬಿಟ್ಟುಹೋಗದಂತೆ ಸಮಾಧಾನ ಹೇಳುವುದೂ ಅಗತ್ಯ. ಅದೊಂದು ಸಾಹಸ.

ಯಾವುದೇ ಬದಾವಣೆ ಈ ಹಗ್ಗಜಗ್ಗಾಟದಲ್ಲಿ ಯಾರು ಗೆಲ್ಲುತ್ತಾರೆನ್ನುವುದನ್ನು ಅವಲಂಬಿಸಿದೆ. ಗೆದ್ದವರನ್ನು ಬೆಂಬಲಿಸುವವರು ಯಾವಾಗಲೂ ಇರುತ್ತಾರೆ. ಆದರೆ ಗೆಲ್ಲುತ್ತಾರೆಂಬ ಸೂಚನೆ ಸಿಗುವಾಗಲೇ ಬೆಂಬಲಿಸುವ ಒಂದು ವರ್ಗವೂ ಇದೆ. ಉತ್ಸಾಹದಿಂದ ಇಂತಹ ಹೋರಾಟಗಳಿಗೆ ಧುಮುಕಿದವರು ನಾಯಕತ್ವದ ಆಸೆಯಿರುವವರೇ ಆಗಿರಬೇಕಾಗಿಲ್ಲ. ಈ ಹೋರಾಟದ ಗೆಲುವು ತನ್ನದೂ ಎಂಬ ನಂಬಿಕೆಯಿದ್ದರೆ ಸಾಕು. ಅದು ಸಮರ್ಪಣೆಯ ಭಾಗವೆನಿಸುತ್ತದೆ.

ಈಗ ನಡೆಯುವ ಎಲ್ಲ ಬಗೆಯ ಹೋರಾಟಗಳಲ್ಲಿ ಕಾರ್ಯೋನ್ಮುಖರಾಗಿರು ವವರು ಸಾಳ್ವೆಯವರ ಟೀಕೆಯನ್ನು ಅನಗತ್ಯವಾಗಿ ಹಳಿಯದೆ ಅದು ನಮಗೆ ಇನ್ನಷ್ಟು ದೊಡ್ಡ ಸವಾಲನ್ನು ಇಟ್ಟಿದೆಯೆಂದು ತಿಳಿಯುವುದು ಉಚಿತ. ನೆರಳನ್ನು ನೋಡಿ ಭಯಪಡುವ ಅಗತ್ಯವಿಲ್ಲ. ವೈರಿ ನೇರ ಪ್ರತ್ಯಕ್ಷವಾಗಲಿ; ಆಗ ಎದುರಿಸುವ ಧೈರ್ಯ, ಚಾಕಚಕ್ಯತೆ ಬೇಕು. ಯಾವ ಹರಿವೂ ವಿಶಾಲವಾಗಿ ಹುಟ್ಟುವುದಿಲ್ಲ. ಚಿಕ್ಕ ಒರತೆ, ಝರಿ, ತೊರೆ ಇವು ಮುಂದೆ ಕ್ರಮಿಸುವಾಗ ಅನೇಕ ಉಪನದಿಗಳು ಸೇರಿಕೊಳ್ಳುತ್ತವೆ. ಕಾಲದ ಹರಿವಿನೊಂದಿಗೆ ಹೋರಾಟದ ಹರಿವೂ ಹೀಗೆಯೇ.

(ಅಂಕಣಕಾರರು ಸಾಹಿತಿ, ಹಿರಿಯ ವಕೀಲರು)

share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X