Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ಪುನರ್‌ನಾಮಕರಣ ಪರ್ವ

ಪುನರ್‌ನಾಮಕರಣ ಪರ್ವ

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ18 Dec 2025 9:47 AM IST
share
ಪುನರ್‌ನಾಮಕರಣ ಪರ್ವ

ಮಹಾತ್ಮಾಗಾಂಧಿಯವರ ಹೆಸರಿನ ಉದ್ಯೋಗ ಯೋಜನೆಯು ಈಗ ‘ವಿಬಿ-ಜಿ ರಾಮ್-ಜಿ’ಯಾಗಿ ಪರಿವರ್ತನೆಯಾಗಲು ಹೊರಟಿದೆ. ಹೂವಿನ ಎಸಳುಗಳನ್ನು ಕಿತ್ತು ಹಾಕಿ ಅರಳಿಸುವ ವಿಕಸಿತ ಯೋಜನೆಗೆ ಒಕ್ಕೂಟ ಸರಕಾರವು ತುರ್ತಾಗಿ ಹೊರಟಿದೆ. ಇದರ ದುರುದ್ದೇಶವು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಇದನ್ನು ಪ್ರತಿಭಟಿಸದಿದ್ದರೆ ಮುಂದಿನ ಹಂತದಲ್ಲಿ ಭಾರತದ ನೋಟುಗಳಲ್ಲಿ ಮಹಾತ್ಮನ ಚಿತ್ರ ಮರೆಯಾಗುವುದು ಖಚಿತ. ನಮ್ಮ ಜನರು ಎಷ್ಟು ಬುದ್ಧಿವಂತರೆಂದರೆ ಅಂತಹ ಸಂದರ್ಭದಲ್ಲಿ ಹಳೆಯ ಒಂದಷ್ಟು ನೋಟುಗಳನ್ನು ಸಂಗ್ರಹಿಸಿಡಬಹುದೇ ಹೊರತು ಪ್ರತಿಭಟಿಸಲಾರರು.

ಜನಪದ ಕತೆಯೊಂದರಲ್ಲಿ ಮೀನು ಮಾರುವವಳೊಬ್ಬಳು ನಗರಕ್ಕೆ ಹೋಗಿ ದಿನದ ವ್ಯಾಪಾರ ಮುಗಿಸಿ ಬರುವಾಗ ಕತ್ತಲಾಗಿ ಹೂಮಾರುವವಳೊಬ್ಬಳ ಮನೆಯಲ್ಲಿ ಅಶ್ರಯ ಪಡೆದಳಂತೆ. ರಾತ್ರಿ ಅಲ್ಲಿ ಹೂಗಳ ಪರಿಮಳವನ್ನು ತಡೆಯಲಾಗದೆ ಮುಖಕ್ಕೆ ಮೀನಿನ ಬುಟ್ಟಿಯನ್ನು ಮುಚ್ಚಿಕೊಂಡು ಮಲಗಿದಳಂತೆ.

ಮೋದಿ ಸರಕಾರಕ್ಕೆ ಯಾಕೋ ಗಾಂಧಿ-ನೆಹರೂ ಹೆಸರು ಕೇಳಿದರೆ ತಡೆಯಲಾಗದ ತುರಿಕೆ. ಇದೊಂದು ರೀತಿಯ ಮೂಲವ್ಯಾಧಿ. ಈಗ ಮಹಾತ್ಮಾ ಗಾಂಧಿ ಉದ್ಯೋಗ ಯೋಜನೆಯನ್ನು ಮರುನಾಮಕರಣ ಮಾಡಿ ವಿಕಸಿತ ಭಾರತ ಉದ್ಯೋಗ ಯೋಜನೆ ಎಂದೇನೋ ಹೆಸರಿಟ್ಟು ಅದರ ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ಹಂಚಿದೆಯಂತೆ.

ಶೇಕ್ಸ್‌ಪಿಯರ್ ಹೆಸರಿನಲ್ಲೇನಿದೆ? ಎಂದ. ಅವನ ಕಾಲಕ್ಕೆ ಅದು ಸರಿಯಾಗಿತ್ತೇನೋ? ಅಥವಾ ಅದೊಂದು ಕಾವ್ಯಸತ್ಯವಾಗಿ ಉಳಿಯಬಹು ದೇನೋ? ಆದರೆ ಜನರು ಹೆಸರಿನಿಂದಲೇ ಮಾರುಹೋಗು ವುದುಂಟು. ಸರಿಸುಮಾರು ಶೇಕ್ಸ್‌ಪಿಯರ್‌ನ ಕಾಲದಲ್ಲೇ ಇದ್ದ ಪುರಂದರದಾಸರು ‘‘ನಿನ್ನ ನಾಮದ ಬಲವೊಂದಿದ್ದರೆ ಸಾಕು’’ ಎಂದರು. ‘‘ನಾರಾಯಣನೆಂಬೋ ನಾಮವೇ ಕಾಯ್ದು..’’ ಎಂದು ಹಾಡಿದರು ಈ ಮಣ್ಣಿನ ಜನರು. ಶೇಕ್ಸ್‌ಪಿಯರ್ ಅದೃಷ್ಟಶಾಲಿ. ಯುರೋಪಿನಲ್ಲಿ ಬದುಕಿದ. ಇಲ್ಲಾಗಿದ್ದರೆ ಆತನ ಸುತ್ತ ಅನೇಕ ಪವಾಡಗಳು ಸೃಷ್ಟಿಯಾಗುತ್ತಿದ್ದವು, ನಮ್ಮ ಕನಕ-ಪುರಂದರರ ಸುತ್ತ ಹಬ್ಬಿದ ಹುತ್ತಗಳಂತೆ.

ಹೆಸರಿನ ಸುತ್ತ ಭಾರತೀಯರ ಚಿತ್ತ ಕೇಂದ್ರೀಕರಿಸಿದೆಯೆಂಬುದು ಒಂದು ಜಾಗತಿಕ ಸತ್ಯ. (ಈ ಸುತ್ತ, ಚಿತ್ತ, ಹುತ್ತ ಇವೆಲ್ಲ ಇವತ್ತಿನ ಮಾಧ್ಯಮ ಪದಗಳು! ಅವನ್ನು ಕೈಬಿಡಲು ಮನಸ್ಸಾಗದೆ ಬಳಸಿದ್ದೇನೆ!) ತಾವಿರುವ ಜಾಗದಲ್ಲೇ ವಿಶ್ವವಿಖ್ಯಾತಿ ಗಳಿಸಿದವರು ಎಷ್ಟಿಲ್ಲ! ತಮ್ಮೂರಿನಿಂದ ಹೊರಹೋದರೆ ಅವರನ್ನು ಕೇಳುವವರೇ ಇಲ್ಲ; ಆದರೂ ಅವರು ವಿಶ್ವವಿಖ್ಯಾತಿಗಳು! ಹೀಗೆ ತಮ್ಮ ಮನೆಯ ಕನ್ನಡಿಯಲ್ಲೇ ನಿತ್ಯ ಮುಖ ನೋಡಿಕೊಂಡು ಸೊರಗಿ ಸತ್ತವರು ಬೇಕಷ್ಟಿದ್ದಾರೆ.

ಇದು ಭಾರತದಲ್ಲಂತೂ ಮರುನಾಮಕರಣದ ಯುಗ. ಈಗಷ್ಟೇ ಹುಟ್ಟಿದವರಿಗೆ ಹೆಸರಿಡುವುದು ಸಹಜ. ಹುಟ್ಟಿ ಹೆಸರನ್ನು ಹೊಂದಿದವರನ್ನು ಹೊಸ ಹೆಸರಿನಿಂದ ಕರೆಯುವುದು ಒಂದು ಮೋಜು. ಅದು ಅವರ ಗುಣವನ್ನಾಗಲೀ, ಖ್ಯಾತಿ/ಅಪಖ್ಯಾತಿಯನ್ನಾಗಲೀ ಬದಲಾಯಿಸದು. ಆದರೆ ನಮ್ಮ ರಾಷ್ಟ್ರೀಯತೆ, ಆತ್ಮನಿರ್ಭರತೆ, ದೇಶಭಕ್ತಿ ಹೇಗಿದೆಯೆಂದರೆ, ಹೆಸರನ್ನು ಬದಲಾಯಿಸಿದರೆ ಸಾಕು ಅದೇ ಮೋಕ್ಷಕ್ಕೆ ಹಾದಿಯೆಂದು ನಂಬಲಾಗಿದೆ.

ಕಾಲಕಾಲಕ್ಕೆ ಯಾವುದೋ ಒಂದು ಹೆಸರಿಡುತ್ತಾರೆ. ಅದರ ಹಿಂದೆ ಸ್ವಲ್ಪ ಕಳಕಳಿ, ಸ್ವಲ್ಪ ರಾಜಕೀಯ, ಸ್ವಲ್ಪ ಸ್ವಾರ್ಥವಿರಬಹುದು. ಆದರೆ ಸಂಖ್ಯಾನಾಮಕ್ಕಿಂತ ಪದನಾಮ ಒಳಿತೆಂದು ಯಾವುದೋ ಹೆಸರಿಡುತ್ತಾರೆ. ಋತುಮಾನದಲ್ಲಿ ಪ್ರಕೃತಿಯೂ ಬದಲಾಗುತ್ತದೆ. ಹಾಗೆಂದು ಮಾವಿಗೆ ಬೇವೆಂದು ನಾಮಕರಣ ಮಾಡಿದ ಉದಾಹರಣೆಯಿಲ್ಲ. ಗುಣಲಕ್ಷಣಗಳನ್ನು ವಿವರಿಸುವಾಗ ಸಿಹಿಕಹಿಗಳಿಗೆ ಅವುಗಳದ್ದೇ ಆದ ಸಹಿಗಳಿರುತ್ತವೆ. ಜಗತ್ತಿನಲ್ಲಿ ಒಬ್ಬರಂತೆ ಏಳು ಜನರಿರುತ್ತಾರೆಂಬ ಮಾತು ವಾಡಿಕೆಯಲ್ಲಿದೆ. ಆದರೆ ಹೆಬ್ಬೆರಳಿನ ಗುರುತು ಅವರವರದ್ದೇ. ಆದ್ದರಿಂದ ಹೆಸರಷ್ಟೇ ಸಾಕಾಗುವುದಿಲ್ಲ ಮನುಷ್ಯನ ಚಹರೆಯನ್ನು ನಿರ್ದಿಷ್ಟಗೊಳಿಸುವುದಕ್ಕೆ.

ಭಾರತದ ಅಂತಲ್ಲ ವಿಶ್ವದ ಬೇರೆ ಬೇರೆ ಭಾಗಗಳಲ್ಲಿರುವ ನೆಲ-ಜಲಗಳ, ಹೂ-ಹಣ್ಣುಗಳ, ರೀತಿ-ರಿವಾಜುಗಳ ಗ್ರಾಮ-ನಗರಗಳ ಹೆಸರು ಕಾಲಾನುಕಾಲದಲ್ಲಿ ಬದಲಾದದ್ದು ಚರಿತ್ರೆಯಲ್ಲಿದೆ. ಒಂದೊಂದು ಭಾಷೆಯಲ್ಲಿ ಒಂದೊಂದು ಹೆಸರು ಇರುವುದೂ ಇದೆ. ಒಬ್ಬೊಬ್ಬ ಆಳುವವನ ಕಾಲದಲ್ಲಿ ಆತನ ಇಷ್ಟಾನಿಷ್ಟಗಳಿಗನುಗುಣವಾಗಿ ಹೆಸರು ಬದಲಾದದ್ದಿದೆ. ಇವುಗಳ ಅಧ್ಯಯನವೇ ಒಂದಲ್ಲ ಹತ್ತಾರು ಪಿಎಚ್‌ಡಿಗಳಿಗೆ ವಸ್ತುವಾದೀತು. ಕರಾವಳಿಯ ಮಂಗಳೂರಿಗೆ ತುಳುವಿನಲ್ಲಿ ‘ಕುಡ್ಲ’ ಎಂದು ಹೇಳುತ್ತಾರೆ; ಮಲಯಾಳಿಗಳು ‘ಮಂಗಳಾಪುರಂ’ವೆನ್ನುತ್ತಾರೆ. ಬೆಂಗಳೂರಿಗೆ ‘ಬೆಂದಕಾಳೂರು’ ಎನ್ನುತ್ತಿದ್ದರಂತೆ. ಕರ್ನಾಟಕ ಸರಕಾರವು ಸ್ಥಳಗಳ ಹೆಸರುಗಳನ್ನು ಬದಲಾಯಿಸಿದೆ. ಗುಲ್ಬರ್ಗಾ ‘ಕಲಬುರಗಿ’ಯಾಗಿದೆ. ಸಣ್ಣಪುಟ್ಟ ಬದಲಾವಣೆಯಾದದ್ದೂ ಇದೆ. ಬ್ಯಾಂಗಲೂರ್ ಈಗ ‘ಬೆಂಗಳೂರು’ ಆಗಿದೆ; ಮೈಸೂರ್ ಈಗ ‘ಮೈಸೂರು’ ಆಗಿದೆ; ಬಿಜಾಪುರ ಈಗ ‘ವಿಜಯಪುರ’ವಾಗಿದೆ. ಈ ಬದಲಾವಣೆ ಏನು ಸಾಧಿಸಿದೆಯೋ ಗೊತ್ತಿಲ್ಲ. ಅದನ್ನು ಎಷ್ಟು ಜನರು ಅನಿವಾರ್ಯವಲ್ಲದ ಸಂದರ್ಭಗಳಲ್ಲಿ ಬಳಸುತ್ತಾರೋ ಗೊತ್ತಿಲ್ಲ. ಆದರೆ ಮುದ್ರಕರಿಗೆ, ಫಲಕ ಬರೆಯುವವರಿಗೆ ಇವು ಉದ್ಯೋಗ ನೀಡಿದ್ದಂತೂ ನಿಜ. ಸರಕಾರಿ ಸಂಸ್ಥೆಗಳಿಗೂ ಹೆಸರು ಬದಲಾಯಿಸಲಾಗಿದೆ. ಜಿಲ್ಲಾ ‘ಪರಿಷತ್’ ಜಿಲ್ಲಾ ‘ಪಂಚಾಯತ್’ ಆಗಿದೆ. ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ನಮ್ಮ ಐಎಎಸ್‌ಗಳಿಗೆ ಮತ್ತು ಅವನ್ನು ಸಲಹುವ ಮತ್ತು ಪೋಷಿಸುವ ರಾಜಕಾರಣಿಗಳಿಗೆ ಮಾಡುವುದಕ್ಕೆ ಇದಕ್ಕಿಂತ ಬೇರೆ ಕೆಲಸವಿದ್ದಂತಿಲ್ಲ. ಮಾಡಬೇಕಾದ್ದನ್ನು ಮಾಡದಿದ್ದರೆ ಮಾಡಬಾರದ ಕೆಲಸಗಳಿಗೆ ಮನಸೋಲುವುದೇ ಹೆಚ್ಚು.

ಆದರೆ ಬಹು ಹೀನ ಕೆಲಸವೆಂದರೆ ರಾಜಕೀಯ ಅನುಕೂಲಕ್ಕಾಗಿ ಚರಿತ್ರೆಯನ್ನು ಅಳಿಸಿಹಾಕಿ ಹೊಸ ಬರೆಹವನ್ನು ಸ್ಥಾಪಿಸುವುದು. ಚರಿತ್ರೆ ನಾವು ಇಷ್ಟಪಟ್ಟು ಸೃಷ್ಟಿಸಿದ್ದಲ್ಲ. ಅದರ ಪಾಲಿಗೆ ಅದು ನಡೆದದ್ದು. ಕೆಲವು ಕ್ರೂರಿಗಳ, ಕೆಲವು ಮೂಲಭೂತವಾದಿಗಳ ಕೈಗೆ ಯಾವುದು ಸಿಕ್ಕಿದರೂ ಅದನ್ನು ಹೊಸಕಿ ಹಾಕುತ್ತಾರೆ. ಹಿಂದೆ ರಾಜಸತ್ತೆಯಿದ್ದಾಗ ರಾಜನೇ ಪ್ರತ್ಯಕ್ಷ ದೇವರಾಗಿದ್ದಾಗ, ಕಾಲಸ್ಯ ಕಾರಣನಾಗಿದ್ದಾಗ ಆತನ ಅನುಕೂಲ- ಅದೆಷ್ಟೇ ಮೂರ್ಖತನವಾದ್ದೇ ಇರಲಿ-ಈಡೇರುತ್ತಿತ್ತು. ಅದನ್ನು ಟೀಕಿಸುವ ಧೈರ್ಯ ಸಾಮಾನ್ಯರಿಗೆ ಇರುತ್ತಿರಲಿಲ್ಲ. ಹೇಳುವ ಧೈರ್ಯ ತೋರಿದವರು ಅಪಾಯಕ್ಕೆ ಆಹ್ವಾನ ನೀಡುತ್ತಾರೆ. ಕೆಲವರಂತೂ ಹೀಗಿರುವ ಮೂರ್ಖತನವನ್ನು ಹೊಗಳಿ ಆಡಳಿತಕ್ಕೆ ಹತ್ತಿರವಾಗುತ್ತಿದ್ದರು. ಈ ಸಾಮೀಪ್ಯ, ಸಾನ್ನಿಧ್ಯ, ಸಾಯುಜ್ಯವು ದೇವರುಗಳ ಕಾಲವೆಂದು ಕಲ್ಪಿಸಲಾದ ಕಾಲದಿಂದಲೂ ಇತ್ತೆಂದು ಪುರಾಣಗಳು ಹೇಳುತ್ತವೆ. ಮಾರೀಚನೆಂಬವನು ರಾವಣನಿಗೆ ಹಿತ ನುಡಿದು ತನ್ನ ಪ್ರಾಣವನ್ನೇ ಒತ್ತೆಯಿಡಬೇಕಾಯಿತು. ವಿಭೀಷಣನು ತತ್ಕಾಲಕ್ಕಾದರೂ ದೇಶಭ್ರಷ್ಟನಾದ. ಇವು ನಡೆದಿವೆಯೋ ಇಲ್ಲವೋ ಅಂತೂ ಉದಾಹರಣೆಗಳಾಗಿ ನಿಲ್ಲುತ್ತವೆ.

ಭಾರತವೆಂಬ ಈ ಭೂಭಾಗವು ಬಹಳ ಕಾಲ ಭಿನ್ನಭಿನ್ನ ರಾಜ್ಯಗಳನ್ನು, ಸಾಮ್ರಾಜ್ಯಗಳನ್ನು ಹೊಂದಿತ್ತು. ಅವರವರ ಇಷ್ಟಾನುಸಾರ ಅವರವರ ದೇವರುಗಳನ್ನು ಹೊಂದಿರುತ್ತಿದ್ದರು. ಆದರೆ ಹರನಿಗೆ ಹರಿಯೆಂದು, ಹರಿಗೆ ಹರನೆಂದು ಮರುನಾಮಕರಣ ಮಾಡಿದ ಉದಾಹರಣೆಗಳಿಲ್ಲ. ಪೂಜಾಸ್ಥಳಗಳನ್ನು ತಮ್ಮಿಷ್ಟಕ್ಕೆ ತಕ್ಕಂತೆ ಕಟ್ಟಿಕೊಂಡದ್ದು ಇದೆ. ಹಳೆಯ ಪೂಜಾಸ್ಥಾನಗಳಿದ್ದಲ್ಲಿ ಹೊಸ ಪೂಜಾಸ್ಥಾನಗಳು ಹುಟ್ಟಿವೆ. ಆಗೆಲ್ಲ ಧಾರ್ಮಿಕ ಕಾರಣಗಳಿಗಿಂತ ತನ್ನಿಚ್ಛೆಯೇ ಕಾರಣವಾಗಿತ್ತೆನ್ನಬಹುದು.

ಅನೇಕ ಶತಮಾನಗಳ ಕಾಲ ಭಾರತವೆಂಬ ಈ ಭೂಭಾಗವು ಪರಕೀಯರೆಂದು ನಾವಂದುಕೊಳ್ಳುವ ಮಂದಿಯ ಆಕ್ರಮಣಕ್ಕೆ ತುತ್ತಾಗಿದೆ. ರಾಜರಾಜಚೋಳ ಶ್ರೀಲಂಕಾ, ಮಲೇಶ್ಯ, ಇಂಡೋನೇಶ್ಯದ ವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದಾಗ ಆತನನ್ನು ದುರಾಕ್ರಮಣಮಾಡಿದನೆಂದು, ಪಂಜಾಬಿನ ರಣ್‌ಜಿತ್‌ಸಿಂಗ್ ಅಫ್ಘಾನಿಸ್ತಾನದವರೆಗೂ ತನ್ನ ಆಡಳಿತವನ್ನು ವಿಸ್ತರಿಸಿದಾಗ ನಾವದನ್ನು ಆಕ್ರಮಣವೆಂದು ಹೇಳುವುದಿಲ್ಲ. ಆದ್ದರಿಂದ ಈ ಆಕ್ರಮಣ, ವಿದೇಶ, ಪರಕೀಯ ಇವೆಲ್ಲ ಅಳಿಸಿಹಾಕಬಹುದಾದ ಕಲ್ಪನೆಗಳು. ನಾವೆಲ್ಲಿ ನಿಂತು ಹೇಳುತ್ತೇವೆಂಬುದು ಇವುಗಳ ತಳಹದಿ.

ಆದರೆ ಹೀಗೆಲ್ಲ ಚರಿತ್ರೆ ಸಾಗಿದಾಗ ಮೂಲ ಚೌಕಟ್ಟು ಬದಲಾದದ್ದು ಕಡಿಮೆ. ಮೊಗಲರು ಭಾರತದ ಬಹುಭಾಗವನ್ನು ಆಕ್ರಮಿಸಿ ತಮ್ಮ ಆಡಳಿತವನ್ನು ಸ್ಥಾಪಿಸಿದಾಗ ಕೆಲವೊಂದು ಬದಲಾವಣೆಯನ್ನು ಮಾಡಿದರು. ಕಾಶಿ ಬನಾರಸ್ ಆಯಿತು. ದೇವಗಿರಿಯು ದೌಲತಾಬಾದ್, ಪ್ರಯಾಗವು ಅಲ್ಲಹಾಬಾದ್, ಆದರೂ ಅದರ ಚಾರಿತ್ರಿಕ ಹೊಳಹು ಬದಲಾಗಲಿಲ್ಲ. ಆಳುವವರ ವಿಕೃತಿ ಬಯಲಾಗಲಿಲ್ಲ. ಬಹಳಷ್ಟು ಸ್ಥಳಗಳು ಅದೇ ಹೆಸರಿನಲ್ಲಿ ಉಳಿದವು ಎಂಬುದು ಚರಿತ್ರೆಯ ಹೆಗ್ಗಳಿಕೆ. ನಮ್ಮ ನದಿಗಳ ಹೆಸರನ್ನು ಯಾವ ಆಕ್ರಮಣ ಆಡಳಿತವೂ ಬದಲಾಯಿಸಲಿಲ್ಲ. ಮೊಗಲರ ಬಳಿಕ ಬ್ರಿಟಿಷರು ಆಳಿದಾಗಲೂ ಈ ನದಿಗಳು ಹಾಗೆಯೇ ಉಳಿದುಕೊಂಡವು. ಗಂಗೆ ಇಂಗ್ಲಿಷ್‌ನ ಅಪಭ್ರಂಶದಲ್ಲಿ ಗ್ಯಾಂಜಸ್ ಆಯಿತೇ ಹೊರತು ತನ್ನ ಗುರುತನ್ನು, ಚಹರೆಯನ್ನು, ಲಕ್ಷಣವನ್ನು ಕಳೆದುಕೊಳ್ಳುವ ಬದಲಾವಣೆಯನ್ನು ಹೊಂದಲಿಲ್ಲ. ಇದು ಬಹುತೇಕ ನಗರಗಳಿಗೂ ಅನ್ವಯಿಸುತ್ತದೆ. ಇದಕ್ಕೆ ಕಾರಣವೆಂದರೆ ಈ ಆಳುವವರು ಇಲ್ಲಿನ ‘ಸಂಸ್ಕೃತಿ’ಯೆಂದು ನಾವು ಹೇಳುವ ಜೀವನವಿಧಾನವನ್ನು ತಿರಸ್ಕರಿಸದೇ ಇದ್ದದ್ದು. ಅದೊಂದು ರೀತಿಯ ರಾಸಾಯನಿಕ ಸಂಯುಕ್ತವನ್ನು ಸೃಷ್ಟಿಸಿತೇ ಹೊರತು ಮಿಶ್ರಣವನ್ನಲ್ಲ. ಈ ರೀತಿಯಲ್ಲಿ ಜೀವನವಿಧಾನಗಳು ಹೆಚ್ಚು ವಿಶ್ವಾತ್ಮಕವಾದವೇ ಹೊರತು ಒಂದನ್ನೊಂದು ನುಂಗುವ ವಿಕೃತಿಯಾಗಲಿಲ್ಲ. ಪ್ರಾಯಃ ಸಂಸ್ಕೃತ ಶಿಕಣವೊಂದೇ ತನ್ನ ಮಡಿವಂತಿಕೆಯನ್ನು ಉಳಿಸಿಕೊಂಡು ಜನರಿಂದ ದೂರವಾದದ್ದು. ಬದಲಾಗಿ ಮೆಕಾಲೆಯ ಶಿಕ್ಷಣ ಪದ್ಧತಿಯು ಈ ದೇಶದ ಜನಜೀವನವನ್ನು ವಿಸ್ತರಿಸಿ ಯಾರಿಗೆ ಈ ಹಿಂದೆ ಶಿಕ್ಷಣ, ಉದ್ಯೋಗ, ಪ್ರಾಶಸ್ತ್ಯ, ಪ್ರತಿಷ್ಠೆ ಮುಂತಾದವು ಗಗನಕುಸುಮವಾಗಿತ್ತೋ ಅವರಿಗೆ ಹೊಸ ಜಗತ್ತಿನ ಪರಿಚಯ ಮಾಡಿಕೊಟ್ಟಿತು. ಕುವೆಂಪು ಹೇಳಿದಂತೆ ಇಂಗ್ಲಿಷ್ ಶಿಕ್ಷಣವು ಅವರಿಗೆ ಬದುಕನ್ನು ಕೊಟ್ಟಿತು.

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮತ್ತು ಸ್ವತಂತ್ರ ಭಾರತದ ಮೊದಲ ಸುಮಾರು ಏಳು ದಶಕಗಳ ಕಾಲ (ವಾಜಪೇಯಿ ಆಡಳಿತವೂ ಸೇರಿ) ಭಾರತವು ಎಚ್ಚರಿಕೆಯಿಂದ ಕಾಲಿಟ್ಟಿತ್ತು. ಎಲ್ಲಿಯೂ ವಿಶ್ವದ ಅಂಗವಾಗುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಭಾರತವು ಒಂದು ಜಾತಿ-ಮತದ ದೇಶವಲ್ಲ, ಬದಲಾಗಿ ವೈವಿಧ್ಯವನ್ನು ತನ್ನ ವಿಶಿಷ್ಟ ಗುರುತೆಂಬಂತೆಯೇ ನಡೆದುಕೊಂಡಿತು. ಪಂಥಗಳು, ಸಿದ್ಧಾಂತಗಳು-ತತ್ವಗಳು ರಾಜಕೀಯದ ಕುಲಗೆಡಿಸಿರಲಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಣಾಳಿಕೆಯನ್ನು ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಮಾತ್ರ ಬಲಪಂಥೀಯ ಭಾಜಪವು ಸ್ವೀಕರಿಸಿತ್ತು. ಆದರೆ ಮೋದಿ ಸರಕಾರ ಬಂದ ನಂತರ ಇವೆಲ್ಲ ಬದಲಾಗಿ ರಾಷ್ಟ್ರೀಯತೆಯ ಈ ಮೂಲಭೂತವಾದವು ಚಿಗುರಿತು. ಈಗ ಅಭಿವೃದ್ಧಿ, ಉದ್ಯೋಗ, ಸುಖ ಸಮೃದ್ಧಿ, ವಿಶ್ವಾತ್ಮಕತೆ ಇವೆಲ್ಲ ಮೂಲೆಪಾಲಾಗಿ ಅಧಿಕಾರವನ್ನು ಯಾವ ರೀತಿ ಉಳಿಸಿ ಬೆಳೆಸಿಕೊಳ್ಳಬೇಕೆಂಬುದೇ ರಾಮಮಂತ್ರವಾಯಿತು. ಜಾತಿ-ಮತಗಳ ಆಧಾರದಲ್ಲಿ ಜನರನ್ನೊಡೆದು ಆಳುವ ತಂತ್ರವನ್ನು ಬ್ರಿಟಿಷರಿಗಿಂತಲೂ ಚೆನ್ನಾಗಿ ಬಲಪಂಥೀಯ ಹಿಂದುತ್ವದ ರಾಜಕಾರಣದ ಮೂಲಕ ಈಗಿನ ಮೋದಿ ಸರಕಾರ ಮಾಡುತ್ತಿದೆ. ಪ್ರಾಯಃ ಇವತ್ತಿನ ಈ ಪ್ರವೃತ್ತಿಯ ಕಾಲದಲ್ಲಿ ಡಿವಿಜಿಯವರಿದ್ದಿದ್ದರೆ ‘ಮನ್ನಣೆಯ ದಾಹ’ಕ್ಕಿಂತ ಅಧಿಕವಾಗಿ ‘ಅಧಿಕಾರ ದಾಹ’ವನ್ನು ಕಾಣುತ್ತಿದ್ದರು. ಅಧಿಕಾರದಾಹದ ಮುಖ್ಯಾಂಗವಾಗಿ ಚರಿತ್ರೆಯನ್ನು ಅಳಿಸುವುದು, ಕೃತಕ ಚರಿತ್ರೆಯನ್ನು ಕಟ್ಟುವುದು, ಜನರಿಗೆ ಸುಳ್ಳು ಹೇಳಿ ಅವರನ್ನು ತಪ್ಪುಹಾದಿಗೆಳೆಯುವುದು ಈಗಿನ ತಂತ್ರ. ಇದರ ಒಂದಂಗವಾಗಿ ಹಿಂದಿನ ಆದರ್ಶಗಳನ್ನು ಮೂಲೆಗುಂಪು ಮಾಡುವುದು. ಇದಕ್ಕಾಗಿ ಬಹಳಷ್ಟು ಪುನರ್‌ನಾಮಕರಣಗಳಾದವು. ನೀತಿ ಆಯೋಗದ ಹೆಸರಿನಲ್ಲಿ ಅನೀತಿಗಳನ್ನು ಪ್ರಚುರಪಡಿಸಲಾಯಿತು. ಜನರಿಗೆ ಇದೇನೂ ಅಡ್ಡಿಯಾಗಲಿಲ್ಲ. ಇದು ಪರೋಕ್ಷವಾಗಿ ಸರಕಾರಕ್ಕೆ ಇನ್ನಷ್ಟು ಕೆಟ್ಟದಾಗಿ ನಡೆದುಕೊಳ್ಳಲು ಮಣೆಹಾಕಿದಂತಾಗಿದೆ. ಜೊತೆಗೆ ತಾವೇನು ಮಾಡಿದರೂ ಅದನ್ನು ಬೆಂಬಲಿಸುವ ಒಂದು ಮಹಾನ್ ಮೂರ್ಖಗುಂಪು-ಸಮುದಾಯ ಈ ಮಣ್ಣಲ್ಲಿದೆಯೆಂಬುದು ಒಕ್ಕೂಟ ಸರಕಾರಕ್ಕೆ ಅರ್ಥವಾಗಿದೆ. ಇದರ ಮೊದಲ ಪ್ರಧಾನ ಹೆಜ್ಜೆ ಸರಕಾರದ ಯೋಜನೆಗಳಿಗೆ ಹೊಸಹೆಸರಿಡುವುದು. ಯಾರದ್ದೋ ಮಕ್ಕಳಿಗೆ ತಂದೆಯೆನಿಸುವ ಮೋದಿ ಸರಕಾರದ ಹುನ್ನಾರವು ಕಳೆದ ಕೆಲವು ವರ್ಷಗಳಿಂದಲೇ ನಡೆಯುತ್ತಿತ್ತು. ಪಠ್ಯ ಪುಸ್ತಕದಿಂದ ಪುಟಗಳನ್ನು ತೆಗೆದುಹಾಕುವ, ಅಲ್ಲಿಗೆ ತಮಗೆ ಬೇಕಾದ ಪುಟಗಳನ್ನು ಸೇರಿಸುವ ಕಾಯಕವು ಸಾಕಷ್ಟು ನಡೆದಿದೆ. ಪ್ರವೃತ್ತಿ ಆದರೆ ಈಗ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆಂದು ಜನರು ನಿರೀಕ್ಷಿಸಿದರೆ ರಾಜಕಾರಣವು ತನ್ನ/ತಮ್ಮನ್ನು ಹೆತ್ತವರ ಹೆಸರನ್ನೇ ಬದಲಾಯಿಸುವ ಯೋಜನೆ ಆರಂಭವಾಗಿದೆ. ಮೀನಿನ ಬಗ್ಗೆ ತಿರಸ್ಕಾರ ಬೇಡ. ಆದರೆ ಅದರ ವಾಸನೆಗೆ ಒಗ್ಗಿದವರು ಹೂವಿನ ವಾಸನೆಯನ್ನು ಸಹಿಸಲಾರರಾದರೆ ಮತ್ತು ಹೂವಿನ ವಾಸನೆಗೆ ಪ್ರತಿಯಾಗಿ ಇಡೀ ಸಮಾಜವೇ ಮೀನಿನ ಬುಟ್ಟಿಯನ್ನು ಮೂಗಿಗೆ ಮುಚ್ಚಿಕೊಳ್ಳುತ್ತದೆಯಾದರೆ ಅದು ಮಾರಕರೋಗಗಳಿಗಿಂತಲೂ ಅಪಾಯಕಾರಿ. ಆಗ ಚಿಕಿತ್ಸೆ ಅಗತ್ಯ.

ಇಡೀ ದೇಶ ಚರ್ಚಿಸುವ ಕಾರಣ ಪ್ರತ್ಯೇಕವಾದದ್ದೇನನ್ನೂ ಹೇಳುವಂತಿಲ್ಲ: ಮಹಾತ್ಮಾಗಾಂಧಿಯವರ ಹೆಸರಿನ ಉದ್ಯೋಗ ಯೋಜನೆಯು ಈಗ ‘ವಿಬಿ-ಜಿ ರಾಮ್-ಜಿ’ಯಾಗಿ ಪರಿವರ್ತನೆಯಾಗಲು ಹೊರಟಿದೆ. ಹೂವಿನ ಎಸಳುಗಳನ್ನು ಕಿತ್ತು ಹಾಕಿ ಅರಳಿಸುವ ವಿಕಸಿತ ಯೋಜನೆಗೆ ಒಕ್ಕೂಟ ಸರಕಾರವು ತುರ್ತಾಗಿ ಹೊರಟಿದೆ. ಇದರ ದುರುದ್ದೇಶವು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಇದನ್ನು ಪ್ರತಿಭಟಿಸದಿದ್ದರೆ ಮುಂದಿನ ಹಂತದಲ್ಲಿ ಭಾರತದ ನೋಟುಗಳಲ್ಲಿ ಮಹಾತ್ಮನ ಚಿತ್ರ ಮರೆಯಾಗುವುದು ಖಚಿತ. ನಮ್ಮ ಜನರು ಎಷ್ಟು ಬುದ್ಧಿವಂತರೆಂದರೆ ಅಂತಹ ಸಂದರ್ಭದಲ್ಲಿ ಹಳೆಯ ಒಂದಷ್ಟು ನೋಟುಗಳನ್ನು ಸಂಗ್ರಹಿಸಿಡಬಹುದೇ ಹೊರತು ಪ್ರತಿಭಟಿಸಲಾರರು.

ಕೇರಳದಲ್ಲಿ ಯಾವಳೋ ಒಬ್ಬಳಿಗೆ ‘ಸೋನಿಯಾ ಗಾಂಧಿ’ ಎಂದು ಹೆಸರಿಟ್ಟು ಆಕೆ ಭಾಜಪದ ಪರವಾಗಿ ಸ್ಪರ್ಧಿಸಿದ್ದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಮುಂದೆ ನಮ್ಮ ಪ್ರಧಾನಿಯವರ ಹೆಸರು ‘ಮಹಾತ್ಮಾಗಾಂಧಿ’ ಎಂದು ಬದಲಾದರೆ ಮತ್ತು ಅವರ ಚಿತ್ರ ನಮ್ಮ ನೋಟುಗಳಲ್ಲಿ ಮುದ್ರಿತವಾದರೆ ಅಚ್ಚರಿಯಿಲ್ಲ. ವಿಕಸಿತ ಭಾರತವಾಗುವ ಕಾರಣ ಅವುಗಳ ಜಾಹೀರಾತಿಗೆ ಹೊಸ ವಿನ್ಯಾಸ ಮೂಡಬಹುದು. ನಮ್ಮ ಜನರು ಎಷ್ಟು ಮುಗ್ಧರೆಂದರೆ ಗಾಂಧಿಗೂ ಗೋಡ್ಸೆಗೂ ಅಂತರವನ್ನು ಅರಿಯಲಾರರು. ಚತುರ್ವೇದಗಳನ್ನೂ ಬಲ್ಲ ಬ್ರಾಹ್ಮಣ ರಾವಣನಿಗೆ ರಾಮನೆಂದು ಹೆಸರು ಬದಲಾಯಿಸುವ ಕಾಲದಲ್ಲಿ ಎಲ್ಲರೂ ಮಾಜಿ ರಾವಣನ ಪದತಲದಲ್ಲಿ ಭಜನೆ ಮಾಡುತ್ತ ಕುಳಿತಾರು. ಪ್ರಾಯಃ ಅದು ಸನಿಹದಲ್ಲಿದೆ.

ತಾವು ಮತ್ತು ತಮ್ಮ ಅಧಿಕಾರ ಶಾಶ್ವತವೆಂದು ನಂಬಿದವರಿಂದ ಏನೂ ನಡೆಯಬಹುದು. ಹಿಟ್ಲರ್ ಇದನ್ನು ನಂಬಿದ್ದ. ಆತನ ನಂಬಿಕೆ ಆತನ ಪಾಲಿಗೆ ಹುಸಿಯಾದರೂ ಭಾರತದ ಪಾಲಿಗೆ ಈಗ ಹುಸಿಯಾಗದೆಂದು ಬದುಕುವ ಹಕ್ಕು ತಮಗೆ ಮಾತ್ರ ಇದೆಯೆಂದು ಒಂದು ಸಮುದಾಯ ಈಗಲೂ ನಂಬಿದೆ. ಆದ್ದರಿಂದಲೇ ಗುಂಪು ಹಲ್ಲೆಗೆ ಮಾನ್ಯತೆ ಲಭಿಸುವ ಕಾಲ ಬಂದಿದೆ.

ಇದನ್ನು ಒಪ್ಪದವರಿಗೆ, ಪ್ರತಿಭಟಿಸುವವರಿಗೆ ಕೊನೆಗೂ ಬದುಕು ಇರುವುದೇ ಭರವಸೆಯಲ್ಲಿ; ಎಲ್ಲ ಕೇಡಿಗೂ ಕೊನೆಯಿದೆಯೆಂದು ನಂಬುವುದರಲ್ಲಿ.

share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X