ಉಳಿತಾಯ-ಇಳಿತಾಯ

ಅಡುಗೆಯಲ್ಲಿ ಬಳಸುವ ಎಣ್ಣೆಯನ್ನು ಕಡಿಮೆಮಾಡಲು ಭಾರತೀಯ ಪರಂಪರೆ ಒಪ್ಪಲಾರದು. ಅದರಿಂದ ಹೊಟ್ಟೆಯ ಗಾತ್ರ ಕಡಿಮೆಯಾಗಬಹುದಾದರೂ ಬಾಯಿರುಚಿ ಕೆಡಬಹುದು. ಮಾನಸಿಕ ಅಸ್ವಸ್ಥತೆ ಮೂಡಬಹುದು. ಪ್ರಧಾನಿ ಈ ವಿಚಾರದಲ್ಲಿ ಒಂದು ಮಹದುಪಕಾರ ಮಾಡಿದ್ದಾರೆ. ಅವರು ‘ಎಣ್ಣೆಯ ಬಳಕೆ ಕಡಿಮೆ ಮಾಡಿ’ ಎಂದಿದ್ದರೆ ನಮ್ಮ ಬಾರ್‌ಗಳು ಬಿಕೋ ಎಂಬಂತೆ ಬಳಲಿ ಸರಕಾರಗಳ ಆದಾಯದಲ್ಲಿ ಖೋತಾವಾಗುತ್ತಿತ್ತು. ಪ್ರಧಾನಿ ಬಹಳ ಬುದ್ಧಿವಂತರು: ಮದ್ಯಪಾನವನ್ನಾಗಲೀ, ಧೂಮಪಾನವನ್ನಾಗಲೀ ತ್ಯಜಿಸಿ ಎಂಬ ಸುಂಕವಂಚಕ ಹುಂಬ ಸಲಹೆಯನ್ನು, ಉಪದೇಶವನ್ನು ನೀಡಲು ಅವರು ಪ್ರಯತ್ನಿಸಲಿಲ್ಲ! ಈಗ ಈ ಎರಡೂ ಬಳಕೆದಾರರು ಹಾಯಾಗಿರಬಹುದು.
ಮೇ10ರಂದು ತೆಲಂಗಾಣದ ರ್ಯಾಲಿಯೊಂದರಲ್ಲಿ ಮೋದಿ ದೇಶವಾಸಿಗಳಿಗೆ ನೀಡಿದ ಕರೆ ಭಾರೀ ಸುದ್ದಿ ಮಾಡಿತು; ಮಾಡಿದೆ; ಮಾಡುತ್ತಿದೆ. ಮೋದಿಭಕ್ತರಿಗೆಲ್ಲ ಆರ್ಥಿಕ ದೇಶಭಕ್ತರಾಗಲು ಕೊಟ್ಟ ಕರೆ ಅದು. ಅದು ಎಲ್ಲರಿಗೂ ಅಚ್ಚರಿ ತಂದ ಘಳಿಗೆ. ಏಕೆಂದರೆ ಕೆಲವೇ ದಿನಗಳ ಮೊದಲು ಮೋದಿ-ಶಾ ಪಂಚರಾಜ್ಯಗಳಲ್ಲಿ ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಚುನಾವಣಾ ರ್ಯಾಲಿಗಳನ್ನು ನಡೆಸುತ್ತಿದ್ದರು. ಆಗ ಅಮೆರಿಕ-ಇಸ್ರೇಲ್-ಇರಾನ್ ಈ ತ್ರಿಕೋನ ಯುದ್ಧದ ಪ್ರಸ್ತಾವವೇ ಇರಲಿಲ್ಲ. ಪಶ್ಚಿಮ ಬಂಗಾಳದ ಚುನಾವಣೆಯಂತೂ ಒಂದು ಯುದ್ಧದಂತಿತ್ತು.
ಚುನಾವಣೆ ಮುಗಿದದ್ದೇ ತಡ, ಮೋದಿ ಈ ಕರೆ ನೀಡಿದರು: ಸುಮಾರಾಗಿ ಯುದ್ಧ ಅಥವಾ ಆರ್ಥಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶನಾಯಕರು ನೀಡುವ ಕರೆ ಅದು. ಅದರ ಅಧಿಕೃತ ಸಾರ ಹೀಗಿದೆ: ಒಂದು ವರ್ಷ ಚಿನ್ನವನ್ನು ಕೊಳ್ಳಬೇಡಿ. ಅನಗತ್ಯ ವಿದೇಶ ಪ್ರವಾಸವನ್ನು ಕೈಬಿಡಿ. ಮನೆಯಿಂದಲೇ ದುಡಿಯಿರಿ. ಮೆಟ್ರೋ, ರೈಲು, ಬಸ್, ಹಂಚಿಕೆ ವಾಹನಗಳನ್ನು ಬಳಸಿ. ಬೆಂಗಾವಲು ವಾಹನಗಳನ್ನು ಕಡಿಮೆಮಾಡಿ. ಆಹಾರಯೋಗ್ಯ ತೈಲದ ಬಳಕೆಯನ್ನು ಕನಿಷ್ಠ ಶೇ. 10ರಷ್ಟಾದರೂ ಇಳಿಸಿ. ರಾಸಾಯನಿಕ ಗೊಬ್ಬರದ ಬಳಕೆಯನ್ನು ಶೇ. 50ಕ್ಕೆ ಇಳಿಸಿ. ನೇರ ಹಾಜರಾತಿಯನ್ನು ಬಿಟ್ಟು ವಿಸಿಯನ್ನು ಉಪಯೋಗಿಸಿ.
ಮೋದಿ ಮರುದಿನ ಇದೇ ಕರೆಯನ್ನು ಗುಜರಾತ್‌ನಲ್ಲೂ ಸೋಮನಾಥನ ಮೇಲೆ ಆಣೆ ಹಾಕಿ ಪುನರುಚ್ಚರಿಸಿದರು. ಈ ಸಪ್ತಪದಿ ದೇಶದ ಒಂದು ಭಾಗವನ್ನು ರೋಮಾಂಚಗೊಳಿಸಿತು. ಟೀಕಾಕಾರರು ತಮ್ಮ ಬತ್ತಳಿಕೆಯಿಂದ ಅಸ್ತ್ರಗಳನ್ನು ಪುಂಖಾನುಪುಂಖವಾಗಿ ಪ್ರಯೋಗಿಸಿದರು. ರಾಜಕೀಯವಾಗಿ ಹೇಗೂ ಇರಲಿ, ಇದರ ಪರ-ವಿರೋಧದ ನೆಲೆಗಳು ಎಲ್ಲೇ ಇರಲಿ, ಈ ಕರೆಯ ಮಹತ್ವ ಮತ್ತು ಉದ್ದೇಶಗಳನ್ನು ಭಾರವಾಗಿ, ಹಗುರವಾಗಿ, ಅಧ್ಯಯನ ಮಾಡಬಹುದು; ಚರ್ಚಿಸಬಹುದು; ಅರ್ಥಮಾಡಿಕೊಳ್ಳಬಹುದು.
ಮೋದಿ ಭಕ್ತರು ಏನೇ ಹೇಳಲಿ, ಹೇಗೇ ಹೇಳಲಿ, ದೇಶದ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಡಾಲರ್ ಎದುರಿಗೆ ರೂಪಾಯಿ ತೀರ ಕ್ಷೀಣವಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ಅದು ಶತಕವನ್ನು ಬಾರಿಸಲಿದೆ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಇಳಿದಾಗಲೂ ಭಾರತದಲ್ಲಿ ಮಾತ್ರ ಅದು ಕಳೆದ ಹಲವು ವರ್ಷಗಳಿಂದ ಅತೀವ ಹೆಚ್ಚಿದೆ. ಅಡುಗೆ ಅನಿಲದ ಬೆಲೆ -ಗೃಹಬಳಕೆ ಹಾಗೂ ವಾಣಿಜ್ಯ- ತೀವ್ರ ಏರಿಕೆಯನ್ನು ಕಂಡಿದೆ. ಆದರೆ ಇದು ದೇಶದ ಜನರಿಗೆ ಭಾರೀ ಹೊಡೆತ ನೀಡಿದಂತಿಲ್ಲ. ವಾಹನಗಳ ಮಾರಾಟ ಬಹಳಷ್ಟು ಏರಿದೆ. ಹಿಂದೆಲ್ಲ ಮೈಲುಗಟ್ಟಲೆ (ಆಗ ಕಿಲೋಮೀಟರ್ ಬಳಕೆಯಿರಲಿಲ್ಲ!) ನಡೆಯುವವರು ಈಗ ಒಂದು ಕಿಲೋಮೀಟರ್ ಪ್ರಯಾಣ ಮಾಡಬೇಕಾದರೂ ವಾಹನವನ್ನೇ ಬಳಸುವ ಆರಾಮಗಿರಿ ಮತ್ತು ಸೋಮಾರಿಗಿರಿ ಬೆಳೆಸಿಕೊಂಡಿದ್ದಾರೆ.
ಈ ದೇಶದಲ್ಲಿ ಬಂಗಾರದ ಕುರಿತು ಭಾವನಾತ್ಮಕ ಸಂಬಂಧವಿದೆ. ಅದು ಸಮೃದ್ಧಿಯ, ಪ್ರತಿಷ್ಠೆಯ ಸಂಕೇತ. ಸ್ಥಿರಾಸ್ತಿ ಮಾರಿದರೂ ಬಂಗಾರವನ್ನು ಮಾರಲಾರರು. ಗೌರವದ ಶವಪೆಟ್ಟಿಗೆಯ ಮೇಲೆ ಹೊಡೆವ ಕೊನೆಯ ಮೊಳೆಯೆಂಬ ಅಪಖ್ಯಾತಿಯಿದೆ. ಬಂಗಾರದ ಖರೀದಿ ಎಂದಿಗಿಂತ ಹೆಚ್ಚಾಗಿದೆ. 2022-23ರ ಖರೀದಿ ಮೂರೇ ವರ್ಷಗಳಲ್ಲಿ ದುಪ್ಪಟ್ಟಾಗಿದೆ. ಹಿಂದೂ ಮದುವೆಗಳಲ್ಲಿ ವಧುವಿಗೆ ಒಂದು ತಾಳಿ, ಎರಡು ಕಿವಿಯೋಲೆಗಳು, ಎರಡು ಬಳೆಗಳು, ಒಂದಾದರೂ ಉಂಗುರ, ಅನುಕೂಲವಿದ್ದರೆ ಸರ, ನೆಕ್ಲೇಸ್ ಇತ್ಯಾದಿ ಇವು ಬಂಗಾರದೊಡವೆಯ ಸಂಭ್ರಮವನ್ನು ಹೇಳುವ ವಿವರಗಳು. ಇತರ ಮತಗಳಲ್ಲೂ ಚಿನ್ನದ ಕುರಿತ ಮೋಹ ಕಡಿಮೆಯೇನಲ್ಲ. ಇಂತಹ ಸಂಭ್ರಮ ತರುವ ಚಿನ್ನದ ಖರೀದಿಯನ್ನು ಒಂದು ವರ್ಷ ಮುಂದೂಡಿ ಎಂದರೆ ಮನೆಮಕ್ಕಳ ಮದುವೆಯನ್ನೇ ಮುಂದೂಡಿ, ಬದುಕಿನ ಸಂತೋಷವನ್ನೇ ಮುಂದೂಡಿ ಎಂದಂತೆ. ಪ್ರಾಯಃ ಸನಾತನ ಧರ್ಮ ಇದನ್ನು ಒಪ್ಪಲಾರದು. ಭಾರತದ ಜೀವನ ಪದ್ಧತಿಯೂ ಇದನ್ನು ಒಪ್ಪಲಾರದು. ದೇಶಭಕ್ತಿಯನ್ನು ಮೀರಿದ ವಿಚಾರ ಇದು. ಈಗ ಬಂಗಾರದ ಬಳಕೆ ನಿಂತ ಹಾಗಿಲ್ಲ. ಮೋದಿಯವರ ಕರೆ ಕೇಳಿದ ಬಳಿಕ ‘‘ಬಂಗಾರದೊಡವೆ ಬೇಕೇ?’’ ಎಂದು ಚಿನ್ನದ ವ್ಯಾಪಾರಿಗಳು ಮನೆಬಾಗಿಲಿಗೆ ಬರುವ ಸಂದರ್ಭ ಬರಬಹುದು ಅಥವಾ ಎಲ್ಲಾ ಸ್ವರ್ಣಾಭರಣದಂಗಡಿಗಳು ಮುಚ್ಚಬಹುದು ಎಂದು ನಾವು ಊಹಿಸಿದರೆ ಮೊನ್ನೆಯ ಅಕ್ಷಯ ತೃತೀಯದಷ್ಟು ಮಾರಾಟವನ್ನು ಈಗ ನಿತ್ಯ ಕಾಣುತ್ತಿದ್ದೇವೆ. ಬ್ಯಾಂಕಿನಲ್ಲಿದ್ದ ಹಣವನ್ನು ತಂದು ಮನೆಯನ್ನು ಬಂಗಾರದ ಮನೆಯಾಗಿ ಮಾಡುವ ತವಕದಲ್ಲಿದ್ದಾರೆ ಭಾರತೀಯರು.
ಅನಗತ್ಯ ವಿದೇಶ ಪ್ರವಾಸವನ್ನು ಕೈಬಿಡಿ ಎಂಬ ವಿಚಾರ ರಾಜಕಾರಣಿಗಳಿಗೆ, ಅಧಿಕಾರಶಾಹಿಗೆ, ರಜಾಪ್ರಯಾಣ ಸುಖಿಗಳಿಗೆ, ಲೋಕಸಂಚಾರವನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡ ಇತರರಿಗೆ ಕಹಿ. ಪ್ರಧಾನಿಯಂತೂ ನೂರಾರು ಸಲ ವಿದೇಶ ಪ್ರವಾಸ ಮಾಡಿ ದಾಖಲೆ ಸ್ಥಾಪಿಸಿದ ವೀರ. ಅವರು ಈ ಕರೆಕೊಟ್ಟು ತಕ್ಷಣದಲ್ಲೇ ವಿದೇಶಕ್ಕೆ ಹಾರಿದರು. ಮಾವಿನಮಿಡಿ ಉಪ್ಪಿನಕಾಯಿ ಹೇಗೆ ಮಾಡುವುದು, ಸೀರೆಯನ್ನು ಹೇಗೆ ಉಡುವುದು, ಕನ್ನಡವನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬುದನ್ನು ಕಲಿಯಲೂ ತರಬೇತಿಗೆ ಸಾರ್ವಜನಿಕ ವೆಚ್ಚದಲ್ಲಿ ವಿದೇಶಕ್ಕೆ ಹೋಗುವ ಮಂದಿಯಿದ್ದಾರೆ. ವಿದೇಶಕ್ಕೆ ಹೋದರೆ ಇರುವ ಇನ್ನೂ ಒಂದು ಅನುಕೂಲವೆಂದರೆ ಬಂದ ತಕ್ಷಣ ಒಂದು ಪುಸ್ತಕವನ್ನಂತೂ ಬರೆಯಬಹುದು! ಕಳೆದ ವರ್ಷ ಭಾರತದಿಂದ 3.27 ಕೋಟಿ ಜನರು ವಿದೇಶಗಳಿಗೆ ಹೋದರೆ, ಬಂದ ಪ್ರವಾಸಿಗರ ಸಂಖ್ಯೆ 90.20 ಲಕ್ಷ ಮಾತ್ರ! ಫಾಯಿಯಾನ್, ಹ್ಯುಯೆನ್‌ತ್ಸಾಂಗ್, ವಾಸ್ಕೋಡಾಗಾಮಾ ಬಂದ ಈ ದೇಶಕ್ಕೆ ಈಗ ಆಮದಾಗುವ ಪ್ರವಾಸಿಗರು ಕಡಿಮೆಯಾದ್ದರಿಂದ ನಮ್ಮ ಹಣದ ಕೊರತೆ ಇನ್ನಷ್ಟು ಕಡಿಮೆಯಾಗಿದೆ. ನಿಜಕ್ಕೂ ವಿದೇಶಪ್ರವಾಸವನ್ನು ಮೊಟಕುಗೊಳಿಸಬೇಕೆಂದರೆ ಎಲ್ಲರ ಪಾಸ್‌ಪೋರ್ಟ್‌ಗಳನ್ನು ಒಂದು ವರ್ಷದ ವರೆಗೆ ಮುಟ್ಟುಗೋಲು ಹಾಕುವುದು. ಇದು ಸಾಧ್ಯವೋ ಎಂದು ಕೇಳಲು ಸಾಧ್ಯವಿಲ್ಲ. ಏಕೆಂದರೆ ಭಾರತೀಯತೆಗೆ ಗೊಬ್ಬರ ಸಿಗುವುದೇ ವಿದೇಶಗಳಲ್ಲಿ!
ಮನೆಯಿಂದಲೇ ದುಡಿಯಬಹುದು. ಈಗಾಗಲೇ ಸಾಫ್ಟ್‌ವೇರ್ ಕಂಪೆನಿಗಳು ತಾವು ಭರಿಸುವ ತಮ್ಮ ಕ್ಯಾಂಟೀನ್ ವೆಚ್ಚ, ಉದ್ಯೋಗಿಗಳ ಪ್ರಯಾಣವೆಚ್ಚ ಮುಂತಾದವುಗಳನ್ನು ಕಡಿಮೆಮಾಡಲು ಈ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದು ಸರಕಾರೀ ಉದ್ಯೋಗಿಗಳಿಗೂ ಅನ್ವಯಿಸಿದರೆ ಅವರು ಒಪ್ಪುತ್ತಾರೆಂದು ಖಾತ್ರಿಯಿಲ್ಲ. ಇದಕ್ಕೆ ಎರಡು ಕಾರಣಗಳಿವೆ: ಒಂದು, ಕಚೇರಿಯಲ್ಲಿ ಪೆನ್ನನ್ನು ಕನ್ನಡಕವನ್ನು ಮೇಜಿನಲ್ಲಿಟ್ಟು ಸುತ್ತಲು ಹೋಗುವ ಅವಕಾಶ, ನಿದ್ರಿಸುವ ಅವಕಾಶ ತಪ್ಪಿಹೋಗುತ್ತದೆ; ಮನೆಯಲ್ಲಿ ಕುಟುಂಬದವರಿಗೆ ಉದ್ಯೋಗದ ಇತರೇ ಗುಟ್ಟು ಗೊತ್ತಾಗುತ್ತದೆ; ಕಚೇರಿ ವಾಹನದ ಖಾಸಗಿ ಬಳಕೆ ತಪ್ಪಿಹೋಗುತ್ತದೆ. ಎರಡು, ಭ್ರಷ್ಟಾಚಾರದ ಅನಧಿಕೃತ ಆದಾಯಕ್ಕೂ ಕುತ್ತು! ಆದ್ದರಿಂದ ಇದನ್ನು ಹೇಗೆ ನಿಭಾಯಿಸುತ್ತಾರೋ ನೋಡಬೇಕು. ಈಗಾಗಲೇ ಮಧ್ಯಪ್ರದೇಶದ ನ್ಯಾಯಮೂರ್ತಿಯೊಬ್ಬರು ಮನೆಯಿಂದ ನ್ಯಾಯಾಲಯಕ್ಕೆ ಸೈಕಲ್‌ನಲ್ಲಿ ಪ್ರಯಾಣಿಸಿ ಪ್ರಚಾರಗಿಟ್ಟಿಸಿದ್ದಾರೆ. ಪೊಲೀಸರೂ ಸೈಕಲ್‌ನಲ್ಲಿ ಸಂಚರಿಸಿದ್ದಾರೆ. ಕಾರು, ಮೋಟರ್‌ಸೈಕಲ್‌ನಲ್ಲಿ ಓಡಾಡುವ ಖದೀಮರನ್ನು ಹಿಡಿಯಲು ಸೈಕಲ್ ಅತ್ಯುತ್ತಮ ವಾಹನವೆಂಬುದನ್ನು ಭಾರತವು ಜಗತ್ತಿಗೇ ಸಾರಿ ಹೇಳಬಹುದು! ನ್ಯಾಯಾಲಯಗಳಲ್ಲಿ ಈಗಾಗಲೇ ಈ ಕ್ರಮವಿದೆ. ಬೀರ್ ಹಿಡಿದ ವಕೀಲರೊಬ್ಬರು ವಿಸಿಯ ನೈಜ ಪ್ರಯೋಜನವನ್ನು ವಾದಿಸಿರಬಹುದು! ಕೆಲವೊಮ್ಮೆ ಮನೆಯ ಟಾಯ್ಲೆಟ್ಟಿನಿಂದಲೂ ಪಕ್ಷಕಾರರೋ ವಕೀಲರೋ ಪ್ರತ್ಯಕ್ಷರಾದ್ದಿದೆ! ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ಎರಡು ದಿನಗಳನ್ನು ವಿಸಿಗೆ ನಿಗದಿಪಡಿಸಿದೆ; ಇನ್ನು 24x7 ಪದ್ಧತಿಯನ್ನು ಜಾರಿಗೊಳಿಸಿದರೆ ರವಿಚಂದ್ರನ್ ಮಾದರಿಯಲ್ಲಿ ‘‘ನೋಡ್ದೆ ನೋಡ್ದೆ, ನೋಡ್ಬಾರ್ದೆಲ್ಲಾ ನೋಡ್ದೆ’’ ಎಂಬ ಹಾಡು ಜಗತ್ಪ್ರಸಿದ್ಧವಾದೀತು!
ಮೆಟ್ರೋ, ಬಸ್, ರೈಲು ಮುಂತಾದವು ಈಗಾಗಲೇ ತುಂಬಿ ತುಳುಕುತ್ತಿವೆ. ಈಗ ಆರಾಮಾಗಿ ಸಂಚರಿಸುವವರಿಗೆ ಈ ಹೊಸ ಬದುಕು ಹಿಡಿಸೀತೇ? ಕಚೇರಿಗೆ ಬೆವರಿಕೊಂಡು ಹೋಗುವುದಕ್ಕೆ ಯಾರು ಇಷ್ಟಪಡುತ್ತಾರೆ? ಒಂದೇ ಸಂಸ್ಥೆಯಲ್ಲಿ ದುಡಿಯುವ ಹಲವರು ಒಂದೇ ವಾಹನದಲ್ಲಿ ಹೋದರೆ ಅಲ್ಲೂ ಪೈಪೋಟಿ, ಮತ್ಸರ ಇವು ಕೆಲಸಮಾಡವೇ? ಯಾರ ವಾಹನ? ಕೊನೆಗೆ ಗಾಂಪಶಿಷ್ಯರು ಸೂಜಿಯನ್ನು ಮರದ ದಿಮ್ಮಿಗೆ ಹಚ್ಚಿ ಹೊತ್ತುಕೊಂಡು ಹೋದಂತೆ ವೆಚ್ಚ ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು.
ಅಡುಗೆಯಲ್ಲಿ ಬಳಸುವ ಎಣ್ಣೆಯನ್ನು ಕಡಿಮೆಮಾಡಲು ಭಾರತೀಯ ಪರಂಪರೆ ಒಪ್ಪಲಾರದು. ಅದರಿಂದ ಹೊಟ್ಟೆಯ ಗಾತ್ರ ಕಡಿಮೆಯಾಗಬಹುದಾದರೂ ಬಾಯಿರುಚಿ ಕೆಡಬಹುದು. ಮಾನಸಿಕ ಅಸ್ವಸ್ಥತೆ ಮೂಡಬಹುದು. ಪ್ರಧಾನಿ ಈ ವಿಚಾರದಲ್ಲಿ ಒಂದು ಮಹದುಪಕಾರ ಮಾಡಿದ್ದಾರೆ. ಅವರು ‘ಎಣ್ಣೆಯ ಬಳಕೆ ಕಡಿಮೆ ಮಾಡಿ’ ಎಂದಿದ್ದರೆ ನಮ್ಮ ಬಾರ್‌ಗಳು ಬಿಕೋ ಎಂಬಂತೆ ಬಳಲಿ ಸರಕಾರಗಳ ಆದಾಯದಲ್ಲಿ ಖೋತಾವಾಗುತ್ತಿತ್ತು. ಪ್ರಧಾನಿ ಬಹಳ ಬುದ್ಧಿವಂತರು: ಮದ್ಯಪಾನವನ್ನಾಗಲೀ, ಧೂಮಪಾನವನ್ನಾಗಲೀ ತ್ಯಜಿಸಿ ಎಂಬ ಸುಂಕವಂಚಕ ಹುಂಬ ಸಲಹೆಯನ್ನು, ಉಪದೇಶವನ್ನು ನೀಡಲು ಅವರು ಪ್ರಯತ್ನಿಸಲಿಲ್ಲ! ಈಗ ಈ ಎರಡೂ ಬಳಕೆದಾರರು ಹಾಯಾಗಿರಬಹುದು. ಬಳಕೆ ಕಡಿಮೆ ಮಾಡಬೇಕಾದ ಅಗತ್ಯವಿಲ್ಲದ ವಸ್ತುಗಳ ಸಾಲಿಗೆ ಗಾಂಜಾ ಮುಂತಾದ ಅಮಲು ಪದಾರ್ಥಗಳನ್ನೂ ಸೇರಿಸಬಹುದು.
ರಾಸಾಯನಿಕ ಗೊಬ್ಬರದ ಬಳಕೆಯನ್ನು 50 ಶೇಕಡಾ ಕಡಿತಗೊಳಿಸಿ ಎಂಬ ಕರೆ ನಿಜಕ್ಕೂ ಅರ್ಥಪೂರ್ಣ. ದಶರಥನಿಗೆ ಪುತ್ರಶೋಕದಿಂದ ಸಾಯಿ ಎಂದು ಋಷಿ ಶಾಪಕೊಟ್ಟಾಗ ಮಕ್ಕಳಿಲ್ಲದ ಆತ ತನಗೆ ಮಕ್ಕಳಾಗುತ್ತವೆಂಬ ವಿಶ್ವಾಸಹೊಂದಿದನಂತೆ. ಹಾಗೆಯೇ ಈಗಾಗಲೇ ಬೆಲೆ ಸಾಕಷ್ಟು ಏರಿ ಅದರ ಖರೀದಿಗಿರುವ ನಿಯಮಾವಳಿಗಳ ನೇಣಿಗೆ ಸಿಕ್ಕಿ ಶೇ. 50 ಬಿಡಿ, ಶೇ. 10ನ್ನೂ ಕೊಳ್ಳಲು ಶಕ್ತರಲ್ಲದ ಕೃಷಿಕರು ಸರಕಾರ ಶೇ. 50 ಗೊಬ್ಬರವನ್ನಾದರೂ ಒದಗಿಸೀತೆಂಬ ಅರ್ಥವಿವರಣೆಯ ಭರವಸೆ ಹೊಂದಿದ್ದಾರೆ. ಭಾರತದ ಭೂಮಿ ನಮ್ಮ ರಾಜಕಾರಣದಂತೆ ಫಲವತ್ತಾಗಿದೆ. ನಿಜಕ್ಕೂ ಗೊಬ್ಬರದ ಅಗತ್ಯವಿಲ್ಲ. ನಮ್ಮ ಕೃಷಿಕರು ದೇಶದ ರಾಜಕೀಯಕ್ಕೆ, ಮೆರವಣಿಗೆ, ಪ್ರತಿಭಟನೆ, ರ್ಯಾಲಿ, ಸಭೆ-ಸಮಾರಂಭಗಳಿಗೆ ದೇಣಿಗೆ, ನೀಡುವುದಕ್ಕೆ ಕಡಿತಗೊಂಡ ಶೇ. 50 ಗೊಬ್ಬರದ ಹಣವನ್ನು ಬಳಸಬಹುದು! ಅಲ್ಲಿಗೆ ಶೇ. 100 ಶೇ. 0 ಆದ ತೃಪ್ತಿ ಕೃಷಿರಂಗಕ್ಕೆ. ವಿತ್ತ ಸಚಿವರ ಬಜೆಟ್‌ನಲ್ಲಿ ಕೃಷಿಗೆ ಇನ್ನೂ ಕಡಿಮೆ ಹಣವನ್ನು ಕಾದಿರಿಸಬಹುದುು ಇಲ್ಲವೇ ಅದನ್ನು ಶೇ. 0ಕ್ಕೆ ಇಳಿಸಬಹುದು!
ಬೆಂಗಾವಲಿನ ವಾಹನಗಳ ಕಡಿತವನ್ನು ಸಾಂಕೇತಿಕವಾಗಿ ನಮ್ಮ ರಾಜಕಾರಣಿ ಗಳು ಈಗಾಗಲೇ ಆಚರಿಸುತ್ತಿದ್ದಾರೆ. ಆದರೆ ಇವರ ಸರಳತೆಗೆ ನಾವು ಬೆಂಗಾವಲು ವಾಹನಗಳಿಗಿಂತ ಹೆಚ್ಚು ಬೆಲೆ ತೆರಬೇಕಾದೀತು! ಒಂದು ಸಂಶಯ: ಹೀಗೆ ಬೆಂಗಾವಲಿನ ಉದ್ದುದ್ದ ಪಡೆ ಅಗತ್ಯವಿಲ್ಲದ ಸೌಕರ್ಯವಾಗಿದ್ದರೆ ಇಷ್ಟು ದಿನ ಈ ಮಳ್ಳರೆಲ್ಲ ಇದನ್ನು ಸಾರ್ವಜನಿಕವಾಗಿ ಯಾಕೆ ಬೇಡವೆನ್ನಲಿಲ್ಲ! ಇದು ಭಾರತ: ಧರ್ಮಕ್ಕೆ ಸಿಕ್ಕುವುದಿದ್ದರೆ ನನಗೂ ಇರಲಿ, ನಮ್ಮಪ್ಪನಿಗೂ ಇರಲಿ ಎಂಬ ದಾಹ, ಹಸಿವು. ಯಾರದ್ದೋ ದುಡ್ಡು, ಎಲ್ಲವ್ವನ ಜಾತ್ರೆ ಎಂಬ ಗಾದೆ ನಮ್ಮದೇ ತಾನೇ? ಹೋಗಲಿ, ಸಚಿವರ, ಸಂಸದರ, ರಾಜ್ಯಪಾಲರ, ಶಾಸಕರ ಸಂಬಳ ಸಾರಿಗೆಯಲ್ಲಿ ಈ ಕಡಿತ ಯಾಕಿಲ್ಲ? ಒಂದು ಅನುಕೂಲವಿದೆ: ಈ ಬೆಂಗಾವಲಿನ ಭಟರು ಮೆರವಣಿಗೆಯ ಮದುಮಗನಿಗಿಂತ ಹೆಚ್ಚು ತೊಂದರೆ ನೀಡುವವರೆಂಬ ಅಪಖ್ಯಾತಿಗೂ ಒಳಗಾಗಿದ್ದಾರೆ!
ಇಷ್ಟೆಲ್ಲಾ ಆದರೂ ನನಗೆ ಅರ್ಥವಾಗದ್ದು ಈ ಯುದ್ಧವೆಂಬ ಭೂತವನ್ನು ಮೋದಿ ಚುನಾವಣೆಯ ಮೊದಲು ಈ ಮಿತವ್ಯಯಕ್ಕೆ ಹೆಣೆಯಲಿಲ್ಲ ಯಾಕೆ? ಚುನಾವಣೆಯ ಗೌಜಿ ಮುಗಿದ ತಕ್ಷಣ ಈ ಯುದ್ಧ ವಕ್ಕರಿಸಿತೇಕೆ?
ಮೊಂಬತ್ತಿ ಭಕ್ತರು ಈಗ ವಿಶ್ವಚಿಂತಕರಾಗಿದ್ದಾರೆ: ನಮಗಿಂತ ಕೆಲವು ವಾರಗಳ ಮೊದಲೇ-ದಕ್ಷಿಣ ಕೊರಿಯಾದಲ್ಲಿ ವಾರಕ್ಕೊಮ್ಮೆ ವಾಷಿಂಗ್ ಮೆಷಿನ್, ವ್ಯಾಕ್ಯುಮ್ ಕ್ಲೀನರ್ ಬಳಸಲು ಆದೇಶಿಸಿದ್ದಾರಂತೆ; ಶ್ರೀಲಂಕಾದಲ್ಲಿ ಬುಧವಾರವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿದ್ದಾರಂತೆ; ಇಟಲಿಯಲ್ಲಿ ಏರ್ ಕಂಡಿಷನರ್‌ಗಳಲ್ಲಿ ಉಷ್ಣತೆಯು ಶೇ. 27 ಡಿಗ್ರಿಗಿಂತ ಕಡಿಮೆಯಾಗಬಾರದಂತೆ; ಫ್ರಾನ್ಸ್‌ನಲ್ಲಿ ದೇಶೀ ವಿಮಾನಯಾನ ರದ್ದುಪಡಿಸಲಾಗಿದೆಯಂತೆ; ಬಾಂಗ್ಲಾದೇಶದಲ್ಲಿ ಸಂಜೆ 7 ಗಂಟೆಗೆ ಎಲ್ಲಾ ಷಾಪಿಂಗ್ ಮಾಲ್‌ಗಳು ಮುಚ್ಚಬೇಕಂತೆ; ಹೀಗಿರುವಾಗ ನಮ್ಮ ಪ್ರಧಾನಿ ಹೇಳಿದರೆ ತಪ್ಪೇನು?
ಹೌದು. ಅವರು ಇದನ್ನು ಹೇಳಿದ್ದು ಸರಿಯೇ ಹೌದು. ಈ ಸರಿಗಳಲ್ಲಿ ಎರಡು ವಿಧ: ಒಂದು ಖಾಸಗಿ; ಇನ್ನೊಂದು ಸಾರ್ವಜನಿಕ. ಚುನಾವಣೆಗಳಿಲ್ಲದಿದ್ದರೆ ಅವರೂ ಮೊದಲೇ ಇವನ್ನು ಹೇಳುತ್ತಿದ್ದರು. ಮೇಲೆ ಹೇಳಿದ ದೇಶಗಳಲ್ಲಿ ಚುನಾವಣೆ ಇರಲಿಲ್ಲವಲ್ಲ! ಇದ್ದಿದ್ದರೆ ಅವರೂ ನಮ್ಮ ಪ್ರಧಾನಿಯ ಹಾಗೆ ಚಿಂತಿಸುತ್ತಿದ್ದರೆನೋ? ಆದರೇನು ಮಾಡೋಣ? ಅವರಿಗೆ ಮುಖ್ಯ ಚುನಾವಣಾ ಆಯುಕ್ತರು ಕೊಟ್ಟ ಭರವಸೆಯ ಮೇಲೆ, ಸರ್ ಯೋಜನೆಯ ಮೇಲೆ ಪೂರ್ಣ ನಂಬಿಕೆಯಿರಲಿಲ್ಲವೋ ಏನೋ? ಆದ್ದರಿಂದ ಈ ಉಳಿತಾಯ-ಇಳಿತಾಯಗಳ ಘೋಷಣೆಯನ್ನು ಮಾಡಲು ಚುನಾವಣೆ ಮುಗಿಯುವವರೆಗೆ ಕಾಯುವುದು ಅನಿವಾರ್ಯವಾಯಿತು.
ಹೇಗೂ ಇರಲಿ; ಮೋದಿಯವರು ಮಾಡಿದ ಮೋಡಿ ನೋಟು ಅಪಮೌಲ್ಯೀಕರಣ, ಕೊರೋನ ಮುಂತಾದವುಗಳಿಗಿಂತ ಸೌಮ್ಯವಾದದ್ದು. ಈ ಬಾರಿ ಗಂಟೆ, ಜಾಗಟೆ, ವಾದ್ಯಗಳ ಸದ್ದಿಲ್ಲ; ಪತ್ರಿಕಾಗೋಷ್ಠಿಯ ಸುದ್ದಿ ಹೇಗೂ ಇಲ್ಲ. ಮುಂದಿನ ದಿನಗಳು ಹಿತವಾಗುತ್ತವೆಂಬ ಭರವಸೆಯೊಂದಿಗೆ ಸುಖವಾಗಿರೋಣ.






