ಅಗತ್ಯ-ಅನಗತ್ಯಗಳ ಸುಳಿಯಲ್ಲಿ ಬೆಂದ ಎಸ್.ಎಲ್. ಭೈರಪ್ಪ

ಪ್ರಾಯಃ ಶಿವರಾಮ ಕಾರಂತರ ಬಳಿಕ ತಮ್ಮದೇ ಓದುಗ ವರ್ಗವನ್ನು ಸೃಷ್ಟಿಸಿಕೊಂಡ ಮತ್ತು ನವೋದಯದ ಮಾದರಿಯ ಜನಪ್ರಿಯತೆಯನ್ನು ನವ್ಯದ ಕಾಲದಲ್ಲೂ ಸಾಧಿಸಿದ ಅಪರೂಪದ ವ್ಯಕ್ತಿತ್ವ ಅವರದ್ದು. ತಡವಾಗಿ ಬಿಚ್ಚಿಕೊಂಡ ಅವರ ವೈಯಕ್ತಿಕ ಮತ್ತು ಸಾಮುದಾಯಿಕ ಆದರ್ಶಗಳ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದವರಿಗೂ ಅವರ ಬಹಳಷ್ಟು ಕಾದಂಬರಿಗಳ ಕುರಿತು ಗೌರವವಿದೆ. ‘ವಂಶವೃಕ್ಷ’, ‘ಧರ್ಮಶ್ರೀ’, ‘ತಬ್ಬಲಿಯು ನೀನಾದೆ ಮಗನೇ’, ‘ಅನ್ವೇಷಣ’, ‘ನಿರಾಕರಣರು’, ‘ದೂರ ಸರಿದರು’, ದಾಟು’ ‘ಗ್ರಹಣ’, ‘ಗೃಹಭಂಗ’, ‘ಜಲಪಾತ’, ‘ಭಿತ್ತಿ’, ಮಂದ್ರ,‘ಅಂಚು’, ‘ನಾಯಿ ನೆರಳು’, ‘ಮತದಾನ’, ‘ಪರ್ವ’ ಹೀಗೆ ಹಲವಾರು ಜನಪ್ರಿಯ ಮತ್ತು ಉತ್ತಮ ಕಾದಂಬರಿಗಳನ್ನು ಬರೆದು ಜನಪ್ರಿಯತೆಯ ಔನ್ನತ್ಯವನ್ನು ಸಂಪಾದಿಸಿದವರು.
ಎರಡು ದಶಕಗಳ ಹಿಂದಿನ ಮಾತು. ಮಡಿಕೇರಿಯಲ್ಲಿ ನಾವು ಒಂದಷ್ಟು ಗೆಳೆಯರು ಸೇರಿ ಆಗಾಗ ಸಾಹಿತ್ಯ ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದೆವು. ಇದಕ್ಕೆ ನನ್ನದೇ ನೇತೃತ್ವ. ಈ ಸರಣಿಯಲ್ಲಿ ಕಾರ್ನಾಡರ ನಾಟಕಗಳ ಕುರಿತು ಒಂದು ವಿಚಾರ ಸಂಕಿರಣವೂ ನಡೆದಿತ್ತು. ನಿಸಾರ್ ಅಹಮದ್ ಕೂಡಾ ಒಮ್ಮೆ ಬಂದಿದ್ದರು. ಇಂತಹ ಒಂದು ಸಾಹಿತ್ಯ ಕಾರ್ಯಕ್ರಮವನ್ನು ಯೋಜಿಸಿದ್ದೆವು. ಆಗ ನನ್ನ ಹಿರಿಯ ಸ್ನೇಹಿತರೂ ಹೋಟೆಲ್ ಉದ್ಯಮಿಯೂ ಆಗಿದ್ದ ಮಡಿಕೇರಿಯ ಶ್ರೀ ಎಂ. ವಿಶ್ವನಾಥ ಕಾಮತ್ ನನ್ನಲ್ಲಿ ಭೈರಪ್ಪನವರನ್ನು ಕರೆಸುವುದಾದರೆ ಪೂರ್ತಿ ವೆಚ್ಚವನ್ನು ಭರಿಸುವುದಾಗಿ ವಾಗ್ದಾನ ಮಾಡಿದರು. ಅದಕ್ಕೆ ಮೊದಲು ಭೈರಪ್ಪನವರು ಮಡಿಕೇರಿಗೆ ಬಂದದ್ದು ನನ್ನ ನೆನಪಿನಲ್ಲಿಲ್ಲ.
ಸರಿ. ಹಿರಿಯ ವಿದ್ವಾಂಸ ಮತ್ತು ನನ್ನ ಆತ್ಮೀಯ ಹಿತೈಷಿ ಡಾ| ಪ್ರಧಾನ್ ಗುರುದತ್ತ ಅವರೊಂದಿಗೆ ಸಮಾಲೋಚಿಸಿ ಭೈರಪ್ಪನವರನ್ನು ಸಂಪರ್ಕಿಸಿದೆ. (ಅವರಿಬ್ಬರೂ ನಿಕಟ ಗೆಳೆಯರು, ಮೈಸೂರಿನ ಕುವೆಂಪು ನಗರದಲ್ಲಿ ನೆರೆಹೊರೆಯವರು.) ಆಗ ಅವರು ಪೂನಾದ ಯಾವುದೋ ಸಮಾರಂಭಕ್ಕೆ ಹೋಗಿದ್ದರು. ತಾನು ಊರಲ್ಲಿಲ್ಲವೆಂದರು. ಪರವಾಗಿಲ್ಲ ಬಂದ ಬಳಿಕ ಈ ಸಮಾರಂಭ ನಡೆಸುತ್ತೇವೆ ಎಂದೆ. ಮುಂದಿನ ಸಂಭಾಷಣೆ ಹೀಗಿತ್ತು:
‘‘ಆರೋಗ್ಯ ಸರಿಯಿಲ್ಲ, ಪ್ರಯಾಣ ಕಷ್ಟವಾಗುತ್ತದೆ’’
‘‘ನಿಮಗೆ ಯಥಾಯೋಗ್ಯ ಏರ್ಪಾಡು ಮಾಡುತ್ತೇವೆ’’
‘‘ಕಾರಿನಲ್ಲೂ ಕೂರಲು ಕಷ್ಟವಾಗುತ್ತದೆ’’
‘‘ಆಂಬುಲೆನ್ಸ್ ಬೇಕಾದರೆ ಅದೂ ವ್ಯವಸ್ಥೆ ಮಾಡಬಲ್ಲೆ’’
‘‘ಮಡಿಕೇರಿಯಲ್ಲಿ ಜನರು ಸಾಹಿತ್ಯ ಕಾರ್ಯಕ್ರಗಳಿಗೆ ಜನ ಬರುವುದಿಲ್ಲ ಎಂದು ಕೇಳಿದ್ದೇನೆ’’
‘‘ನಿಮಗೆಷ್ಟು ಜನ ಬೇಕೋ ಅಷ್ಟು ವ್ಯವಸ್ಥೆ ಮಾಡುತ್ತೇನೆ’’
‘‘ನಾನೊಬ್ಬನೇ ಬರಲು ಸಾಧ್ಯವಾಗುವುದಿಲ್ಲ’’
‘‘ಪ್ರಧಾನ್ ಗುರುದತ್ತರನ್ನೂ ಆಹ್ವಾನಿಸುತ್ತೇವೆ’’
ನಿರಾಕರಿಸುವುದಕ್ಕೆ ಅವರಿಗೆ ಸಾಧ್ಯವಾಗದ ವ್ಯೆಹವನ್ನು ನಿರ್ಮಿಸಿದ್ದರಿಂದ ಅವರು ಚೆಕ್‌ಮೇಟ್ ಆದರು. ಒಪ್ಪಿದರು. ಕಾರ್ಯಕ್ರಮ ನಿಶ್ಚಯವಾಯಿತು. ಪ್ರಧಾನ್ ಗುರುದತ್ತರೂ ಅವರೂ ಜೊತೆಯಾಗಿಯೇ ಬಂದರು. ಗೆಳೆಯರ ಸಹಕಾರದಿಂದಲೋ, ನನ್ನ ಪ್ರಯತ್ನದಿಂದಲೋ ಅಂದು ಸಭಾಂಗಣ ಕಿಕ್ಕಿರಿದು ಮೇಳೈಸಿತ್ತು. ಜನರು ಒಳಗೆ ಜಾಗವಿಲ್ಲದೆ ಹೊರಗೂ ಜೇನುಗೂಡಿನ ಹಾಗೆ ನಿಂತಿದ್ದರು. ಪ್ರಧಾನ್ ಗುರುದತ್ತರು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. (ನನ್ನನ್ನು ಇವರು ಯಾಕೆ ಇಷ್ಟು ಯಶಸ್ವಿ ನ್ಯಾಯವಾದಿ ಎಂಬುದು ಭೈರಪ್ಪನವರನ್ನು ಒಪ್ಪಿಸಿದ ರೀತಿಯಲ್ಲಿ ನನಗೆ ಗೊತ್ತಾಯಿತು ಎಂದು ನನ್ನನ್ನು ಸ್ವಲ್ಪ ಅತಿಯಾಗಿಯೇ ಹೊಗಳಿದರು!)
ಭೈರಪ್ಪನವರಿಗೆ ಜನಸಂದಣಿ, ಕಾರ್ಯಕ್ರಮದ ಅದ್ದೂರಿತನ, ಶಿಸ್ತು ಸಮಾಧಾನವಾಗಿರಬೇಕು. ಚೆನ್ನಾಗಿಯೇ ಮಾತನಾಡಿದರು. (ಅವರು ಬಲಪಂಥವನ್ನು, ಹಿಂದುತ್ವವನ್ನು ಓಲೈಸಿದ್ದು ಬಹಳ ನಂತರ!) ತನ್ನ ಭಾಷಣದಲ್ಲಿ ಅವರು ಹೇಳಿದ ಒಂದಂಶ ಈಗಲೂ ನೆನಪಿನಲ್ಲುಳಿಯುವಷ್ಟು ಇಷ್ಟವಾಗಿತ್ತು. ಅವರು ತಾನೊಬ್ಬ ಕಾದಂಬರಿಕಾರ. ಕಾದಂಬರಿ ಬರೆಯುವುದು ತನ್ನ ಕೆಲಸ; ಭಾಷಣಮಾಡುವುದಲ್ಲ; ಅದನ್ನು ಪ್ರಧಾನ್ ಗುರುದತ್ತರಂತಹ ವಿದ್ವಾಂಸರಿಂದ ಮಾಡಿಸಬೇಕು ಎಂದರು. ಕಾದಂಬರಿ ಬರೆಯುವಾಗ ತಾನು ತಾನಾಗಿರುವುದಿಲ್ಲ, ಆ ಕಾದಂಬರಿಯ ಯಾವುದಾದರೊಂದು ಪಾತ್ರವಾಗಿರುತ್ತೇನೆ ಎಂದರು.
ಇದಕ್ಕೆ ಒಂದು ನಿದರ್ಶನವನ್ನು ನೀಡಿದರು. ಒಬ್ಬ ಯುರೋಪಿಯನ್ ನಟ ತಂಡದ ಪ್ರವಾಸವೊಂದರಲ್ಲಿ ಇದ್ದಾಗ ಶೇಕ್ಸ್‌ಪಿಯರ್‌ನ ‘ರೋಮಿಯೋ-ಜ್ಯೂಲಿಯಟ್’ ನಾಟಕದ ರೋಮಿಯೋ ಪಾತ್ರವನ್ನು ಅನುಭವಿಸುತ್ತಿದ್ದ. ಆತ ಅವಿವಾಹಿತ. ಅದೆಷ್ಟು ತಲ್ಲೀನನಾಗಿ ಅಭಿನಯಿಸುತ್ತಿದ್ದನೆಂದರೆ ಒಂದು ಕ್ಯಾಂಪಿನಲ್ಲಿ ನಾಟಕ ನೋಡುತ್ತಿದ್ದ ಅದ್ವಿತೀಯ ಸುಂದರಿಯೊಬ್ಬಳು ಬಂದು ತನ್ನ ಪರಿಚಯ ಮಾಡಿಕೊಂಡು ಆತನನ್ನು ಮೆಚ್ಚಿದಳು. ಆ ಕ್ಯಾಂಪಿನಲ್ಲಿ ಆ ತಂಡ ರೋಮಿಯೋ-ಜ್ಯೂಲಿಯೆಟ್ ನಾಟಕದ ಅದೆಷ್ಟೋ ಪ್ರಯೋಗಗಳನ್ನು ಅಭಿನಯಿಸಿದರು. ಆತನ ಅಭಿನಯ ಪ್ರೇಕ್ಷಕರ ಮನಗೆದ್ದಿತ್ತು. ಆ ಕ್ಯಾಂಪ್ ಮುಗಿಯುವ ವರೆಗೂ ಆಕೆ ನಿತ್ಯ ನಾಟಕ ನೋಡಲಾರಂಭಿಸಿದಳು. ಆತನನ್ನು ಭೇಟಿಯಾಗಿ ಕಾಲಕಳೆಯುತ್ತಿದ್ದಳು. ಕ್ಯಾಂಪ್ ಮುಗಿದು ಮುಂದಿನ ನಗರಕ್ಕೆ ತೆರಳುವ ಹೊತ್ತಿನಲ್ಲಿ ಅವರಿಬ್ಬರೂ ಪರಸ್ಪರ ಗಾಢವಾಗಿ ಪ್ರೀತಿಸಲಾರಂಭಿಸಿದ್ದರು. ಆತನ ಪ್ರೀತಿ ಕೇಳಬೇಕೇ ರೋಮಿಯೋನಂತೆ ಉತ್ಕಟವಾಗಿತ್ತು. ‘‘ನೀನೇ ನನ್ನ ಜ್ಯೂಲಿಯೆಟ್’’ ಎಂದಿದ್ದ. ಆಕೆ ಆತನನ್ನು ವಿವಾಹವಾಗಲು ಬೇಡಿಕೆಯಿಟ್ಟಾಗ ‘‘ಈಗ ಬೇಡ, ಪ್ರವಾಸ ಮುಗಿಸಿ ಮತ್ತೆ ಬಂದಾಗ ವಿವಾಹವಾಗೋಣ’’ ಎಂದ. ಹೀಗೆ ಅವರ ತಂಡ ವಿವಿಧ ನಗರಗಳನ್ನು ಸುತ್ತಿ ಅಲ್ಲಿಗೆ ಮರಳಿತು. ಈ ಸುದ್ದಿ ಕೇಳಿ ಆಕೆ ಬಂದಳು. ಎಂದಿನ ಪ್ರೀತಿಯನ್ನು ವ್ಯಕ್ತಪಡಿಸಿದಳು. ಆದರೆ ಆತ ವ್ಯಗ್ರನಾಗಿದ್ದ; ವಿಲಕ್ಷಣ ಪ್ರವೃತ್ತಿಯನ್ನು ತೋರಿಸುತ್ತಿದ್ದ. ಆಕೆಗೆ ಏನೂ ಅರ್ಥವಾಗದೆ ಆ ತಂಡದ ಹಿರಿಯರೊಬ್ಬರನ್ನು ಆತನ ಪ್ರವೃತ್ತಿ ಬದಲಾಗಿದೆಯೇಕೆ, ಆತ ತನ್ನನ್ನೇಕೆ ಇಷ್ಟಪಡುತ್ತಿಲ್ಲ ಎಂದು ಕೇಳಿದಳು. ಅದಕ್ಕೆ ಅವರು ‘‘ಇಲ್ಲಮ್ಮ, ಆತ ತನ್ನ ಪಾತ್ರವೇ ಆಗುತ್ತಾನೆ. ಈಗ ಆತ ಅಭಿನಯಿಸುತ್ತಿರುವುದು ಒಥೆಲೋ ಪಾತ್ರವನ್ನು. ನೀನು ಆತನಿಗೆ ಡೆಸ್ಡಿಮೋನಾಳಂತೆ ಕಾಣುತ್ತೀಯೆಂದು ಅನ್ನಿಸುತ್ತದೆ’’ ಎಂದರು. ಆಕೆ ನಿರಾಶಳಾಗಿ ವಿದಾಯ ಹೇಳಿ ಮರಳಿದಳು.
ಇಂತಹ ಮಾರ್ಮಿಕ ನಿದರ್ಶನಗಳು ಅವರ ಬುತ್ತಿಯಲ್ಲಿ ಸಾಕಷ್ಟಿದ್ದವು. ತಮ್ಮ ಅಧ್ಯಯನಕ್ಕೆ ತಕ್ಕುದಾದ ತಾತ್ವಿಕ ನಿಲುವು ಅವರದಿತ್ತು. (ಅವರು ತತ್ವಶಾಸ್ತ್ರ ಓದಿದವರು.)
ನಾಡಿನ ಅಷ್ಟು ಮಾತ್ರವಲ್ಲ ದೇಶದ ಬಹುಖ್ಯಾತ ಕಾದಂಬರಿಕಾರರಲ್ಲೊಬ್ಬರಾದ ಎಸ್.ಎಲ್. ಭೈರಪ್ಪನವರು ನಿನ್ನೆಯಷ್ಟೇ ಗತಿಸಿದ್ದಾರೆ. ಪ್ರಾಯಃ ಶಿವರಾಮ ಕಾರಂತರ ಬಳಿಕ ತಮ್ಮದೇ ಓದುಗ ವರ್ಗವನ್ನು ಸೃಷ್ಟಿಸಿಕೊಂಡ ಮತ್ತು ನವೋದಯದ ಮಾದರಿಯ ಜನಪ್ರಿಯತೆಯನ್ನು ನವ್ಯದ ಕಾಲದಲ್ಲೂ ಸಾಧಿಸಿದ ಅಪರೂಪದ ವ್ಯಕ್ತಿತ್ವ ಅವರದ್ದು. ತಡವಾಗಿ ಬಿಚ್ಚಿಕೊಂಡ ಅವರ ವೈಯಕ್ತಿಕ ಮತ್ತು ಸಾಮುದಾಯಿಕ ಆದರ್ಶಗಳ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದವರಿಗೂ ಅವರ ಬಹಳಷ್ಟು ಕಾದಂಬರಿಗಳ ಕುರಿತು ಗೌರವವಿದೆ. ‘ವಂಶವೃಕ್ಷ’, ‘ಧರ್ಮಶ್ರೀ’, ‘ತಬ್ಬಲಿಯು ನೀನಾದೆ ಮಗನೇ’, ‘ಅನ್ವೇಷಣ’, ‘ನಿರಾಕರಣರು’, ‘ದೂರ ಸರಿದರು’, ದಾಟು’ ‘ಗ್ರಹಣ’, ‘ಗೃಹಭಂಗ’, ‘ಜಲಪಾತ’, ‘ಭಿತ್ತಿ’, ಮಂದ್ರ,‘ಅಂಚು’, ‘ನಾಯಿ ನೆರಳು’, ‘ಮತದಾನ’, ‘ಪರ್ವ’ ಹೀಗೆ ಹಲವಾರು ಜನಪ್ರಿಯ ಮತ್ತು ಉತ್ತಮ ಕಾದಂಬರಿಗಳನ್ನು ಬರೆದು ಜನಪ್ರಿಯತೆಯ ಔನ್ನತ್ಯವನ್ನು ಸಂಪಾದಿಸಿದವರು. ಅವರ ಕೆಲವಾದರೂ ಕಾದಂಬರಿಗಳು ಜಿ.ವಿ.ಅಯ್ಯರ್, ಕಾರ್ನಾಡ್, ಬಿ.ವಿ. ಕಾರಂತ ಮುಂತಾದವರ ಸಖ್ಯದಲ್ಲಿ ಅಥವಾ ಅಭಿಮಾನದಲ್ಲಿ ಚಲನಚಿತ್ರಗಳಾದವು. ಪುರಸ್ಕಾರಗೊಂಡವು. ಕೇಂದ್ರ ಸಾಹಿತ್ಯ ಅಕಾಡಮಿಯ ಕೃತಿಪ್ರಶಸ್ತಿ ಮಾತ್ರವಲ್ಲ, ಪದ್ಮಭೂಷಣ ಮುಂತಾದ ಪ್ರಶಸ್ತಿಗಳು ಅವರಿಗೆ ಬಂದವು.
ನಮ್ಮೂರಿನಲ್ಲಿ ಆಗ ಪುಸ್ತಕದಂಗಡಿಗಳಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ, ಗ್ರಂಥಾಲಯಗಳಲ್ಲಿ ಹೆಚ್ಚು ಬೇಡಿಕೆಯಿದ್ದ ಕೃತಿಗಳು ಭೈರಪ್ಪನವರದ್ದು. ಕೃಷಿಕರ ಮನೆಗಳಲ್ಲಿ ಕೇವಲ ಪ್ರಾಥಮಿಕ ಶಿಕ್ಷಣವನ್ನೂ ಹೊಂದದ ಹೆಂಗಸರು ಮಧ್ಯಾಹ್ನ ಊಟವಾದ ಬಳಿಕ ಗಂಡಸರು ನಿದ್ರೆಹೊಡೆಯುವ ಹೊತ್ತಿನಲ್ಲಿ ಸಂಜೆಯ ಕಾಫಿಯವರೆಗೂ ಭೈರಪ್ಪನವರ ಕಾದಂಬರಿಗಳನ್ನು ಓದುವುದನ್ನು ಕಂಡಿದ್ದೇನೆ. ಅಂತಹ ಅಸಾಧಾರಣ ಆಕರ್ಷಣೆಯನ್ನು ಅವರ ಕೃತಿಗಳು ಹೊಂದಿದ್ದವು. ಅವು ಬಹುತೇಕ ಭಾರತೀಯ ಭಾಷೆಗಳಿಗೆ ಮತ್ತು ಇಂಗ್ಲಿಷಿಗೆ ಅನುವಾದಗೊಂಡಿವೆ.
ಈ ಹೊತ್ತಿನಲ್ಲಿ ಭೈರಪ್ಪನವರು ಯಾವೊಂದು ರಾಜಕೀಯ ಪಕ್ಷದ ವಕ್ತಾರರಂತೆ ಬರೆಯುತ್ತಿರಲಿಲ್ಲ. ಬಳಿಕ ಅವರ ಸೃಜನಶೀಲತೆ ಬತ್ತಿಹೋಯಿತೇನೋ. ಅಂತೂ ಆವರಣದಿಂದ ಆರಂಭವಾದ ಅವರ ಕೊನೆಯ ಕಾದಂಬರಿಗಳು ಬದ್ಧ ರಾಜಕೀಯ ಸಿದ್ಧಾಂತದ ಅಗ್ಗದ ಸಂಗ್ರಹಾಲಯಗಳಾದವು. ಅವು ಅನಗತ್ಯ ವಿವಾದದ ಧೂಳೆಬ್ಬಿಸಿದವು. ಜೊತೆಗೇ ಅವರ ಸ್ಥಾನ-ಮಾನಗಳಿಗೆ ಅಗತ್ಯವಿಲ್ಲದ ಓಲೈಕೆಯಲ್ಲಿ ತಲ್ಲೀನರಾದರು.
ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬರುತ್ತದೆಂದು ಸಾರಸ್ವತಲೋಕ ನಿರೀಕ್ಷಿಸಿತ್ತು. ಅನೇಕರು ಅಪೇಕ್ಷಿಸಿದ್ದರು. ಅವರ ರಾಜಕೀಯ ನಿಲುಮೆ ಸ್ಪಷ್ಟವಾದಾಗ ಅವರಿಗೆ ಮೇಲ್ಮನೆ ಸದಸ್ಯತ್ವ, ರಾಜ್ಯಸಭಾ ಸ್ಥಾನ, ಇನ್ನುಕೆಲವರು ಉಪರಾಷ್ಟ್ರಪತಿ ಹುದ್ದೆ ಹೀಗೆ ಕನಸು ಕಾಣುತ್ತಿದ್ದರು. (ರಾಜಕೀಯ ಪಕ್ಷಗಳ ಹಿಂದೆ ಹೋಗಿ ಇಂತಹ ಸ್ಥಾನಾಲಂಕೃತ ಸಾಹಿತಿಗಳು ಕನ್ನಡದಲ್ಲಿದ್ದರು ಮತ್ತು ಇದ್ದಾರೆ!) ಆದರೆ ಯಾಕೋ ಅವರು ಇದರಿಂದ ವಂಚಿತರಾದರು.
ಒಂದು ಸಂದರ್ಭವನ್ನು ಇಲ್ಲಿ ನೆನಪಿಸುತ್ತೇನೆ: ಭೈರಪ್ಪನವರು ಮಡಿಕೇರಿಯ ಮೂಲಕ ಪ್ರಯಾಣಿಸುವಾಗ ನನ್ನ ಮನೆಗೆ ಬರುತ್ತಿದ್ದರು. ಅವರಿಗೆ ಬೆನ್ನು ನೋವಿದ್ದುದರಿಂದ ಸೋಫಾದಂತಹ ಮೆತ್ತನೆ ಆಸನದಲ್ಲಿ ಕೂರಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ನಾನು ಗಟ್ಟಿತಳದ ಕುರ್ಚಿಯೊಂದನ್ನು ತರಿಸಿದ್ದೆ. ಬೆಳಗ್ಗೆ, ರಾತ್ರಿ ಮಾತ್ರವಲ್ಲ, ಮಧ್ಯಾಹ್ನ ಊಟವಾದ ತಕ್ಷಣ ಹಲ್ಲುಜ್ಜುವ ಅಭ್ಯಾಸ ಅವರಿಗಿತ್ತು. (ನಾನೂ ಮೈಸೂರಿನ ಅವರ ಮನೆಗೆ ಹೋಗಿದ್ದೇನೆ)
ಒಮ್ಮೆ ಹೀಗಾಯಿತು: ಅವರ ‘ಆವರಣ’ ಕಾದಂಬರಿಯು ಪ್ರಚಾರದ ಪರಾಕಾಷ್ಠೆಯಲ್ಲಿದ್ದಾಗ ಅದರ ಕುರಿತು ಬೆಂಗಳೂರಿನ ಗೋಖಲೆ ಸಭಾಂಗಣದಲ್ಲಿ ಒಂದು ಸಮಾರಂಭವನ್ನು ಏರ್ಪಡಿಸಿದ್ದರು. (ಯಾರು ಏರ್ಪಡಿಸಿದ್ದೆಂದು ನೆನಪಾಗುತ್ತಿಲ್ಲ.) ಕೃತಿಯ ಕುರಿತು ಭಾಷಣ ಮಾಡಲು ನನಗೆ ಸಂಘಟಕರು ಹೇಳಿದ್ದರು. ಸಭೆಯಲ್ಲಿ ಸ್ವತಃ ಭೈರಪ್ಪನವರೇ ಉಪಸ್ಥಿತರಾಗಿದ್ದರು. ಅವರ ಅಭಿಮಾನಿಗಳು, ಟೀಕಾಕಾರರು ಅಲ್ಲದೆ ಕನ್ನಡದ/ಬೆಂಗಳೂರಿನ ಸಾಕಷ್ಟು ಪ್ರತಿಷ್ಠಿತರು (ಇನ್‌ಫೋಸಿಸ್ ನಾರಾಯಣಮೂರ್ತಿ, ಶ್ರೀನಿವಾಸ ವೈದ್ಯ, ಪ್ರಧಾನ್‌ಗುರುದತ್ತ, ಬೊಳುವಾರು, ‘ಚರ್ಚೆಗೊಂದು ಚಾವಡಿ’ಯ ಬಿ.ಎಸ್. ವೆಂಕಟಲಕ್ಷ್ಮಿ ಸೇರಿದಂತೆ) ಹಾಜರಿದ್ದರು. ನಾನು ‘ಆವರಣ’ ಕುರಿತು ಸುಮಾರು ಅರ್ಧ ಗಂಟೆಗೂ ಮಿಕ್ಕಿ ಮಾತನಾಡಿದೆ. ಅದು ಅತ್ತ ಚರಿತ್ರೆಯೂ ಆಗದೆ, ಇತ್ತ ಕಾದಂಬರಿಯೂ ಆಗದೆ, ಬಲಪಂಥೀಯ ಸಂಘಟನೆಗಳ ಬಲದಲ್ಲಷ್ಟೇ ಪ್ರಚಾರ ಪಡೆಯುತ್ತಿದೆಯಾದರೂ ಭೈರಪ್ಪನವರ ಹೆಸರನ್ನು ಕೆಡಿಸಿದೆ ಎಂದೆ. ಜೊತೆಗೆ ಅದರಲ್ಲಿ ಮತಾಂತರ ಕಾನೂನನ್ನು ಅವಲಂಬಿಸಿದ ವಿಶ್ಲೇಷಣೆಯು ಕಾನೂನಿನ ವಸ್ತುಸ್ಥಿತಿಗೆ ವಿರೋಧವಾಗಿದೆ ಎಂದೆ. ನಾನು ಉಲ್ಲೇಖಿಸಿದ ಭಾಗಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಹೆಸರಿಸಿದೆ. ಮತ್ತು ಭಾಷಣವನ್ನು ಕೊನೆಗೊಳಿಸಿ ಅವುಗಳ ಫೋಟೊಪ್ರತಿಯನ್ನು ಭೈರಪ್ಪನವರಿಗೆ ನೀಡಿದೆ. ಗದ್ದಲವಾಗದಿದ್ದರೂ ನನ್ನ ಮಾತುಗಳು ಬಿಸಿವಾತಾವರಣವನ್ನು ಸೃಷ್ಟಿಸಿದ್ದವು.
ಅದಾದ ಬಳಿಕ ಅನೇಕ ತಿಂಗಳುಗಳ ಕಾಲ ಭೈರಪ್ಪನವರು ನನ್ನಲ್ಲಿಗೆ ಬರಲಿಲ್ಲ. ಮಡಿಕೇರಿಯನ್ನು ದಾಟಿ ಹೋಗಿದ್ದರು. ಅಸಮಾಧಾನವಾದಂತಿತ್ತು. ನಾನು ನನ್ನ ವೃತ್ತಿ-ಪ್ರವೃತ್ತಿಗಳಲ್ಲಿ ಮುಳುಗಿದ್ದೆ. ಈ ಪ್ರಸಂಗ ಮರೆತೇ ಹೋದಂತಿತ್ತು. ಒಮ್ಮೆ ಪ್ರಧಾನ್ ಗುರುದತ್ತ ಅವರು ಬಂದಾಗ ನಾನು ಭೈರಪ್ಪನವರು ನನ್ನ ವಿಶ್ಲೇಷಣೆಯನ್ನು ವೈಯಕ್ತಿಕವಾಗಿ ಸ್ವೀಕರಿಸಿರಬೇಕೆೆಂದು ಹೇಳಿದೆ. ಆಗ ಅವರು ಸ್ವಲ್ಪ ಸಮಯ ಹಾಗಿದ್ದರಿರಬಹುದು, ಆದರೆ ಮತ್ತೊಂದು ಆವೃತ್ತಿಯಲ್ಲಿ ಅದನ್ನು ಬದಲಾಯಿಸಿದ್ದಾರೆಂದು ಹೇಳಿದರು. ಇದು ನನಗೆ ಸಂದ ಮನ್ನಣೆಯೆಂದು ಮತ್ತು ವಾಸ್ತವವನ್ನು ಭೈರಪ್ಪನವರು ಮರೆಯುವುದಿಲ್ಲವೆಂದು ಹೇಳಿದರು. ಇರಬಹುದು ಎಂದೆ.
ಹೀಗೆ ಅವರು ತಿಳಿಯಲೂ ಬಲಪಂಥೀಯ ರಾಜಕಾರಣ ಮತ್ತು ಪಂಥಪ್ರಧಾನ ಮನ್ನಣೆಯೇ ಕಾರಣವಿರಬಹುದು. ಆರೆಸ್ಸೆಸ್ ಸಂಘಟನೆಯ ಕಚೆೇರಿಗಳಲ್ಲಿ, ಶಾಖೆೆಗಳಲ್ಲಿ ಆವರಣ ಮಾರಾಟವಾಗುತ್ತಿತ್ತು. ಒಮ್ಮೆ ಒಬ್ಬ ಸ್ವಯಂಸೇವಕ ನನ್ನಲ್ಲಿ ಬಂದು ‘‘ಸರ್, ‘ಆವರಣ’ ಹೇಗಿದೆ’’ ಎಂದು ಕೇಳಿದ. ‘‘ನಾನು ಓದಿದ್ದೇನೆ, ನೀವು ಓದಿ’’ ಎಂದೆ. ‘‘ಇಲ್ಲ ಸರ್, ನಮಗೆಲ್ಲ ಅದು ಅರ್ಥವಾಗಲಿಕ್ಕಿಲ್ಲ’’ ಎಂದ. ‘‘ಮತ್ತೆ ಅದು ಹೇಗಿದ್ದರೆ ನಿಮಗೇನು?’’ ಎಂದು ಮರುಸವಾಲು ಹಾಕಿದೆ. ‘‘ಹಾಗಲ್ಲ ಸರ್, ನೀವಾದರೆ ಅದನ್ನು ಓದಿರುತ್ತೀರಿ, ನೀವು ಚೆನ್ನಾಗಿದೆ ಎಂದು ಹೇಳಿದರೆ ನಾನದನ್ನು ಇತರರಿಗೆ ಹೇಳುತ್ತೇನೆ, ಪುಸ್ತಕ ಮಾರಾಟವಾಗುತ್ತದೆ’’ ಎಂದ. ಆತನ ಈ ಮನಸ್ಥಿತಿ ಕಂಡು ನನಗೆ ಭೈರಪ್ಪನವರ ಕುರಿತು ಅನುಕಂಪ ಮೂಡಿತು.
ಏನೇ ಇರಲಿ, ಭೈರಪ್ಪನವರ ಹೊರತಾಗಿ ಆಧುನಿಕ ಕನ್ನಡ ಸಾಹಿತ್ಯದ ಚರ್ಚೆ ನಡೆಯದು. ಅನಂತಮೂರ್ತಿಯವರಿಗೂ ಅವರಿಗೂ ಇದ್ದ ಭಿನ್ನಾಭಿಪ್ರಾಯ ಪ್ರಸಿದ್ಧವಾದದ್ದು. ‘ಧರ್ಮಶ್ರೀ’ಯಲ್ಲಿ ಆರೆಸ್ಸೆಸ್‌ನ ಕೃಷ್ಣಪ್ಪನವರನ್ನು ಹೋಲುವ ಪಾತ್ರವೊಂದನ್ನು ಸೃಷ್ಟಿಸಿದ ಅವರು ‘ಆವರಣ’ದಲ್ಲಿ ಅನಂತಮೂರ್ತಿಯವರನ್ನು ಹೋಲುವ ಪಾತ್ರವೊಂದನ್ನು ಸೃಷ್ಟಿಸಿದರೆಂದೂ ಹೇಳಲಾಗಿದೆ. ಕೃತಿ ಮತ್ತು ವ್ಯಕ್ತಿ ಈ ಎರಡೂ ಪ್ರಕಾರಗಳಲ್ಲಿ ಮೌಲ್ಯ ಮತ್ತು ವಿವಾದ ಎರಡನ್ನೂ ಸೃಷ್ಟಿಸಿದ ವ್ಯಕ್ತಿತ್ವ ಭೈರಪ್ಪನವರದು. ಇತ್ತೀಚೆಗೆ ಅವರು ತಮ್ಮ ತಂದೆಯ ಕುರಿತೇ ಬೇಜವಾಬ್ದಾರಿಯ ವ್ಯಕ್ತಿಯೆಂದು ಟೀಕಿಸಿದ ಸುದ್ದಿಯೂ ಇತ್ತು. ಇದು ಎಷ್ಟರ ಮಟ್ಟಿಗೆ ಸರಿ ಮತ್ತು ಎಷ್ಟರ ಮಟ್ಟಿಗೆ ನ್ಯಾಯವೆಂದು ಹೇಳುವಂತಿಲ್ಲ. ಅಂತಹ ವ್ಯಕ್ತಿಯ ಮಗ ತಾನೆಂದು ಹೇಳಿಕೊಳ್ಳುವುದು ಯಾವ ವ್ಯಕ್ತಿತ್ವ? ಹೇಳಲಾಗದು. ಅವರ ಬಾಲ್ಯ ಬಡತನದ್ದು. ಆದರೆ ಅದು ಬಹಿರಂಗವಾಗಿ ಘೋಷಿಸುವ ಸಾಧನೆಯೇನೂ ಅಲ್ಲ. 94ರ ವಯಸ್ಸಿನಲ್ಲಿ ಅಗಲಿದ ಭೈರಪ್ಪನವರು ತುಂಬಿದ ಬದುಕನ್ನು ಬಾಳಿದರು. ಅವರು ಈ ಕಾಲದ ಒಂದು ಮಹತ್ವದ ಸಂಗತಿಯೆಂದರೆ ತಪ್ಪಲ್ಲ. ವಿವಾದಗಳನ್ನು ಮೀರಿಯೂ ನೆನಪಿನಲ್ಲಿರಬಲ್ಲ ವ್ಯಕ್ತಿ ಅವರೂ, ಅವರ ಸಾಕಷ್ಟು ಕೃತಿಗಳೂ.







