ಸಾವೆಂಬ ಅದ್ವೈತದ ಲಹರಿ

ಎಲ್ಲರೂ ಸಾಯುತ್ತಾರೆ. ಒಳ್ಳೆಯವರು ಯಾರು, ಕೆಟ್ಟವರು ಯಾರು ಎಂಬುದನ್ನು ಯಾರು ನಿರ್ಧರಿಸಬೇಕು? ಯಾರೇ ಆಗಲಿ ಸತ್ತಾಗ ಪುಣ್ಯಾತ್ಮ ಇನ್ನೂ ನಾಲ್ಕು ದಿನ ಬದುಕಬೇಕಾಗಿತ್ತು ಎಂದು ಸಮಾಜ ಅಂದುಕೊಂಡರೆ ಆ ಮೃತಾತ್ಮ ಒಳ್ಳೆಯವನದ್ದೆಂದೂ, ಹೋದನಾ ಒಳ್ಳೇದಾಯಿತು ಎಂದರೆ ಆತ ಕೇಡಿಗ ಎಂದೂ ತಿಳಿಯಬಹುದು. ಈ ಕಾಲದಲ್ಲಿ ಎಲ್ಲರೂ ಒಳ್ಳೆಯವರ ಪಾತ್ರವನ್ನು ಸೊಗಸಾಗಿ ನಟಿಸುತ್ತಾರೆ. ಎಲ್ಲರೂ ಹೊರನೋಟಕ್ಕೆ ನಾಯಕರೇ. ಅವರ ಬಣ್ಣ ಕಳಚಿಬಿದ್ದಾಗ ಮಾತ್ರ ಯಾರು ನಾಯಕರು, ಯಾರು ಖಳನಾಯಕರು ಎಂಬುದು ಗೊತ್ತಾದೀತು. ಸಾವಿಗೆ ಎಲ್ಲರೂ ಒಂದೇ. ಅದರ ತೂಕದ ಬಟ್ಟಿಗೆ ಭಿನ್ನತೆಯಿಲ್ಲ, ಭೇದವಿಲ್ಲ, ಅಂತರವಿಲ್ಲ. ಅಷ್ಟರ ಮಟ್ಟಿಗೆ ಅದು ಅದ್ವೈತ.
ಸಾಲುಸಾಲಾಗಿ ಹಬ್ಬಗಳು ಮೆರವಣಿಗೆ ಹೋಗುತ್ತಿವೆ/ಬರುತ್ತಿವೆ. ಎಲ್ಲಿ ನೋಡಿದರೂ ಜನರೇ. ಕಿವಿಗಡಚಿಕ್ಕುವ ಸದ್ದಿನಲ್ಲಿ ಎಲ್ಲ ರೋದನಗಳೂ ಅರಣ್ಯ ರೋದನಗಳೇ. ಭಾರತೀಯರೀಗ ಶ್ರೀಮಂತರಾಗಿರುವುದರಿಂದ ಅಸಂಖ್ಯಾತ ವಾಹನಗಳು ರಸ್ತೆಗಳನ್ನು ತುಂಬಿವೆ. ವಾಹನ ದಟ್ಟಣೆ (ಟ್ರಾಫಿಕ್ ಜಾಮ್) ಎಂಬುದು ಈಗ ಕ್ಲೀಶೆಯ ಪದ. ದಿನಪತ್ರಿಕೆಗಳಲ್ಲೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ದೇವರ ಪಾದ ಸೇರಿದವರ, ಆಸ್ಪತ್ರೆ ಸೇರಿದವರ ಸಂಖ್ಯೆಗಳೂ ಅಪಾರ. ದೇಶದ ಜನಸಂಖ್ಯೆ ಹೆಚ್ಚಾದಂತೆ ಸಾಯುವವರ ಸಂಖ್ಯೆ ಅದಕ್ಕನುಗುಣವಾಗಿ ಹೆಚ್ಚಾಗುತ್ತಲೇ ಇದೆ. ಇಷ್ಟಿಷ್ಟು ಸಂಖ್ಯೆಯ ‘ಭಕ್ತರ ಮೃತ್ಯು’ ಎಂಬ ಸುದ್ದಿ ಕೇಳಿದಾಗ ಈ ಭಕ್ತರಿಗೆ ಈ ವಿಶೇಷ ದಿನಗಳಲ್ಲೇ ಹೋಗಬೇಕಿತ್ತೇ ಎಂದನ್ನಿಸದಿರದು. ಇಷ್ಟೇ ಅಲ್ಲ, ಹೋಗುತ್ತ, ಬರುತ್ತ ವಾಹನ ಅಪಘಾತಗಳಲ್ಲಿ ಸಾಯುವವರ, ನೋಯುವವರ ಸಂಖ್ಯೆಯೂ ಕಿರಿದೇನಲ್ಲ. ಇದರಿಂದಾಗಿ, ಆಸ್ಪತ್ರೆಗಳಿಗೆ, ಸ್ಮಶಾನಗಳಿಗೆ, ರಾಜಕಾರಣಿಗಳಿಗೆ, ಸಾಮಾಜಿಕ ಕಾರ್ಯಕರ್ತರಿಗೆ, ಪೊಲೀಸರಿಗೆ, ವಿಮಾ ಕಂಪೆನಿಗಳಿಗೆ, ವಕೀಲರಿಗೆ, ನ್ಯಾಯಾಲಯಗಳಿಗೆ ಹೀಗೆ ಎಲ್ಲರಿಗೂ ಕೈತುಂಬ ಕೆಲಸ. ಹಬ್ಬಗಳಲ್ಲಿ, ದೇವರ ಸನ್ನಿಧಿಯಲ್ಲಿ ಸಾಯಬಾರದೆಂದು ಇಲ್ಲವಲ್ಲ!
ಸಾವಿನ ನ್ಯಾಯವನ್ನು ಬದುಕಿದವರು ಇತ್ಯರ್ಥಮಾಡುತ್ತಾರೆ. ಇದರಲ್ಲಿ ಯಾರ ಪಾಲು ಎಷ್ಟು ಎಂದು ತೀರ್ಮಾನ ಕೈಗೊಳ್ಳುವುದಕ್ಕೂ ಅವಕಾಶವಿದೆ. ಅದಕ್ಕೊಂದು ಕಾನೂನು. ಕಾನೂನಿನಲ್ಲಿ ಅಸಹಜ ಸಾವು ನೋವಿಗೆ ಕಾರಣರಾದವರನ್ನು ಶಿಕ್ಷಿಸಲು ಸಾಧನಗಳಿವೆ. ವೇಗ, ದುಡುಕು, ಅಜಾಗರೂಕತೆ, ನಿರ್ಲಕ್ಷ್ಯ, ದ್ವೇಷ, ಕೋಪ, ಮತ್ಸರ, ಉದ್ರೇಕ, ಖಿನ್ನತೆ ಹೀಗೆ ಸಾವಿರ ಕಾರಣಗಳು. ಒಂದೊಂದೂ ಒಂದೊಂದು ರೀತಿ. ಸ್ವತಃ ಸಾವುನೋವನ್ನು ಬಯಸಿದವರೂ ಇದ್ದಾರೆ. ಸಾವಿನ ಯತ್ನದಲ್ಲಿ ಯಶಸ್ವಿಯಾದರೆ ಮುಕ್ತಿ. ವಿಫಲರಾದರೆ ನೋವು, ಆರೋಪ, ಒಮ್ಮೊಮ್ಮೆ ಶಿಕ್ಷೆಯೂ.
ಜೀವಿಗಳಲ್ಲಿ ಮನುಷ್ಯರು ತಾವು ಬದುಕುವ ಜಗತ್ತಿನಲ್ಲಿ ಇತರರ ಜೀವನಿರ್ಣಯ ಮಾಡಬಲ್ಲರು. ಆದ್ದರಿಂದಲೇ ಮೂಕ ಪ್ರಾಣಿ-ಪಕ್ಷಿಗಳ ಸಂಖ್ಯೆ ಕ್ಷೀಣಿಸುತ್ತಲಿದೆ. ಹುಟ್ಟು ಸಾವುಗಳ ಉರುಳುವಿಕೆ ಬದುಕಿನ ಆಟವಾದರೆ ಸಮಾಜದೆದುರು ಇವು ಸಂಖ್ಯಾ ನಿರ್ಣಾಯಕ. ಹುಟ್ಟುವವರು ಕಡಿಮೆಯಾದರೆ ಸಾಮಾಜಿಕ ಕ್ಷಯ. ಸಾಯುವವರು ಕಡಿಮೆಯಾದರೆ ಜನಸಂಖ್ಯಾ ಸ್ಫೋಟ. ಮನುಷ್ಯರ ಈ ಹುಟ್ಟು ಸಾವುಗಳ ನಡುವಣ ಉಬ್ಬರ-ಇಳಿತದ ಯುದ್ಧದಲ್ಲಿ ಸದ್ಯಕ್ಕಂತೂ ಜನಗತ್ತಿನಾದ್ಯಂತ ಮತ್ತು ವಿಶೇಷವಾಗಿ ಭಾರತದಲ್ಲಿ ಹುಟ್ಟು ಜೈಸಿದೆ. ಆದ್ದರಿಂದಲೇ ಭಾರತವು ಜನಸಂಖ್ಯೆಯಲ್ಲಿ ವಿಶ್ವದ ಅಗ್ರಸ್ಥಾನವನ್ನೇರಿ ಅದನ್ನು ಕಾಪಾಡಿಕೊಂಡಿದ್ದರೆ ಪ್ರಕೃತಿ ವಿವಿಧ ರೂಪಗಳಲ್ಲಿ, ವಿವಿಧ ಕಾರಣ, ನೆಪಗಳ ಮೂಲಕ ಹುಟ್ಟು-ಸಾವಿನ ಈ ಸಮತೋಲವನ್ನು ಕಾಪಾಡುತ್ತಲಿದೆ. ಇದಕ್ಕೆ ಮನುಷ್ಯನ ಮೂರ್ಖತನವೂ ಬಹಳಷ್ಟು ಸಹಕಾರಿಯಾಗಿದೆ.
ನೋವೆಂಬುದು ಬದುಕಿನುದ್ದಕ್ಕೂ ಮನುಷ್ಯನ ಸಹವರ್ತಿ. ತಾನು ಒಮ್ಮೆಯೂ ನೋವು ಪಟ್ಟಿಲ್ಲ ಎಂದುಕೊಳ್ಳುವ ಜೀವಿಯು ಇರಲಿಕ್ಕಿಲ್ಲ. ಆದರೆ ಸಾವು ಹುಟ್ಟಿನ ಬೆನ್ನು ಬಿಟ್ಟಿಲ್ಲ. ಅದು ಎಲ್ಲ ಕಡೆ ಜೀವಿಗಳನ್ನು ಒಮ್ಮೆ ಮಾತ್ರ ಕಾಡುತ್ತದೆ ಮತ್ತು ಜೀವಿಗಳನ್ನು ಇತರ ಎಲ್ಲ ಬಗೆಯ ನೋವಿನಿಂದ, ನೆಮ್ಮದಿಯಿಂದ, (ಕೆಲವೊಮ್ಮೆ ಅನುಕೂಲಗಳಿಂದಲೂ!) ಪಾರು ಮಾಡುತ್ತದೆ. ಭ್ರಷ್ಟಾಚಾರದಂತೆ ಈ ಸಾವುನೋವುಗಳೂ ಧರ್ಮಾತೀತ; ಜಾತ್ಯತೀತ. ಇವು ಶಾಶ್ವತ, ಸನಾತನ, ಅನಿವಾರ್ಯ ಕೊನೆ; ಲಾಗಾಯ್ತಿನಿಂದ ಬಂದ ಅನಿವಾರ್ಯ. ಸಹಜವಾಗಿ ಸಾಯುವುದಿದೆ; ಒಮ್ಮೊಮ್ಮೆ ಹೀಗೆ ಅಸಹಜವಾಗಿ ಇದರಲ್ಲಿ ಕಷ್ಟ-ನಷ್ಟ ಏನು ಬಂತು? ಭಾರತದಲ್ಲಿ ಸರದಿಯ ಸಾಲು ಎಂದೋ ಮರೆತುಹೋಗಿರುವುದರಿಂದ ಕ್ಯೂವಿನ ಹಂಗಿಲ್ಲ. ಆಗತಾನೇ ಕಣ್ಣು ಬಿಡುವ, ಕಣ್ಣುಬಿಟ್ಟ, ಬೆಳೆಯುವ ಮಗುವಿನಿಂದ ಶತಾಯುಷಿಗಳ ವರೆಗೆ ಯಾರು ಬೇಕಾದರೂ ಸಾವಿನ ಸಂಭ್ರಮದಲ್ಲಿ ಭಾಗವಹಿಸಬಹುದು. ರಾಜಕಾರಣಿಗಳಂತೂ ಇದರಲ್ಲಿ ತಮ್ಮ ಪಾತ್ರವಿಲ್ಲ ಮತ್ತು ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಯಥಾನುಶಕ್ತಿ ರಾಜಕೀಯದಲ್ಲಿ ಮುಂದುವರಿಯುತ್ತಿದ್ದಾರೆ. ಸತ್ತವರಲ್ಲಿ ತಮ್ಮ ಮತದಾರರೆಷ್ಟೆಂಬುದನ್ನು ಲೆಕ್ಕ ಹಾಕುತ್ತಾರೋ ಅಥವಾ ಅದೂ ಇಲ್ಲವೇನೋ?
ಸಾವು ಎಲ್ಲಿ ಬರಬೇಕೋ, ಯಾವಾಗ ಬರಬೇಕೋ ಆಗ, ಅಲ್ಲಿ, ಬರುತ್ತದೆ; ಬಂದೇ ಬರುತ್ತದೆ. ಆರಂಭವಾದದ್ದು ಕೊನೆಯಾಗಲೇಬೇಕು. ಎಲ್ಲರನ್ನೂ ಒಂದುಗೂಡಿಸುವ ತಾತ್ವಿಕ ಶಕ್ತಿ ಸಾವೇ ತಾನೇ? ಲೋಕದಲ್ಲಿ ಇಷ್ಟೊಂದು ಸಾವು ನೋವು ಸಂಭವಿಸುತ್ತಿದ್ದರೂ ಮನುಷ್ಯ ತಾನು ಮಾತ್ರ ಶಾಶ್ವತವೆಂಬ ಅಹಂಕಾರದಲ್ಲಿ ಬದುಕುವುದೇ ಈ ಸೃಷ್ಟಿಯ ಬಹುದೊಡ್ಡ ವಿಚಿತ್ರ ಎಂದು ಧರ್ಮರಾಜ ಮಹಾಭಾರತದಲ್ಲಿ ಯಕ್ಷನ ಪ್ರಶ್ನೆಗೆ ಉತ್ತರಿಸುವಾಗ ಹೇಳಿದ್ದನಂತೆ. ಜನರ ಪ್ರವೃತ್ತಿಗಳನ್ನು ನೋಡಿ ಅವನು ಹೀಗೆ ಹೇಳಿದನೋ ಅಥವಾ ಅವನು ಹೇಳಿದ್ದರಿಂದ ಅವನ ಮಾತನ್ನು ಸತ್ಯವಾಗಿಸುವುದಕ್ಕೆ ಅದಕ್ಕನುಗುಣವಾಗಿ ಜನರು ಬದುಕುತ್ತಿದ್ದಾರೋ ಎಂದು ಒಮ್ಮೆಲೇ ಹೇಳುವುದು ಕಷ್ಟ. ಸಮಸ್ಯೆಗಳು ಎದುರಾದಾಗ ಅವುಗಳಿಗೆ ಉತ್ತರ ಅಂತಲ್ಲ, ಅವುಗಳಿಂದ ಪಾರಾಗಲು ಮತ್ತು ಜಾರಿಕೊಂಡು ನೆಮ್ಮದಿಯನ್ನು ಪಡೆಯಲು, ಪುರಾಣಗಳು ತುಂಬಾ ನೆರವಾಗುತ್ತವೆ. ಈ ಕಾರಣಕ್ಕಾಗಿ ನಮಗೆ ಪುರಾಣಗಳು ಬೇಕು.
ಸಾವು ತಾನಾಗಿ ಬರುವುದು ಬೇರೆ; ನಾವು ಅದನ್ನು ಬರಮಾಡಿಕೊಳ್ಳುವುದು ಬೇರೆ. ಸಾವು ಅನಿವಾರ್ಯವೆಂಬುದು ಸಾವಿಲ್ಲದ ಮನೆಯ ಸಾಸಿವೆ ತರುವ ಹೊತ್ತಿಗೆ ಕಿಸಾಗೌತಮಿಗೂ ಅರ್ಥವಾಗಿತ್ತು. ಅದು ಎಲ್ಲಿ ಅಡಗಿತ್ತೋ ಧುತ್ತನೇ ಪ್ರತ್ಯಕ್ಷವಾಗುತ್ತದೆ. ಸತ್ತವರು ಯಾರೂ ತಮ್ಮ ಜೀವನ ಚರಿತ್ರೆಯಲ್ಲಿ ತಾನು ಹೇಗೆ ಸತ್ತೆ, ಈ ಸಾವು ನ್ಯಾಯವೇ ಅಥವಾ ನೆಮ್ಮದಿ ತಂದಿತೇ ಎಂಬುದನ್ನು ಬರೆಯಲಾರರು. ಸ್ವಾನುಭವದಲ್ಲಿ ಬರೆಯಲಾಗದ ವಿಚಾರವೆಂದರೆ ಇದು ಮಾತ್ರ.
ಜಗಳಾಡಿ ಸತ್ತವರ ಕಥೆಗಳೇ ಹೆಚ್ಚು. ಸಹಜ ಸಾವು ಕಥೆಯಾಗುವುದಿಲ್ಲ. ಒಳ್ಳೆಯದು-ಕೆಟ್ಟದ್ದು ಎಂದು ನಾವು ವಿಭಜಿಸುವಾಗ ರಾಕ್ಷಸರು-ದೇವತೆಗಳು, ನಾಯಕ-ಖಳನಾಯಕ ಎಂದೆಲ್ಲ ಕಪ್ಪು-ಬಿಳುಪು ವಿಭಾಗಗಳನ್ನು ಮಾಡುತ್ತೇವೆ. ಇದು ನೋಡುವವರ ದೃಷ್ಟಿಯನ್ನವಲಂಬಿಸಿದೆಯೇ ಹೊರತು ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವುದು ಸಾಧ್ಯವಿಲ್ಲ. ಸರಿಯಾದದ್ದು ಧರ್ಮವಾದರೆ ತಪ್ಪಾದದ್ದು ಅಧರ್ಮ. ರಾಮ-ರಾವಣರಾಗಲೀ, ಕೌರವ-ಪಾಂಡವರಾಗಲೀ ತಾವು ಅನುಸರಿಸಿದ್ದು ಧರ್ಮ ಅಥವಾ ಅಧರ್ಮ ಎಂದು ಸ್ವತಃ ಬರೆದುಕೊಂಡದ್ದಿಲ್ಲ. ತನಗೆ ಸರಿಯೆಂದು ಕಂಡದ್ದನ್ನು ಮಾಡಿದವರಿಗೆ ಅದು ಕೇಡೆಂದು ಹೇಳುವವರಾಗಲೀ ಒಪ್ಪಿಸುವವರಾಗಲೀ ಯಾರು? ಕೆಟ್ಟದ್ದೆಂದು ಸಮಾಜ, ಜಗತ್ತು ತೀರ್ಪು ಕೊಟ್ಟಿದ್ದರೆ ಆನಂತರ ಹುಟ್ಟಿದವರು ಅದೇ ತಪ್ಪನ್ನು ಮಾಡುತ್ತಾರಲ್ಲ ಯಾಕೆ?
ಪ್ರಕೃತಿಯೆಂದು, ದೇವರೆಂದು, ಯಾವ ಹೆಸರಿನಿಂದಲಾದರೂ ಕರೆಯಿರಿ, ಎಲ್ಲ ಕಾಲದಲ್ಲೂ ನಿಯಂತ್ರಕ ಶಕ್ತಿಯೊಂದಿತ್ತು. ಧರ್ಮಗ್ಲಾನಿಯಾದಾಗಲೆಲ್ಲ ತಾನು ಯುಗಯುಗಗಳಲ್ಲಿ ಸಂಭವಿಸುತ್ತೇನೆಂದು ಅದರ ಬಾಯಲ್ಲಿ ಕಲ್ಪನಾ ಚಕ್ರವರ್ತಿಗಳು ಹೇಳಿಸಿದರು. ಅಂದರೆ ಧರ್ಮಗ್ಲಾನಿಯಾಗುತ್ತದೆಂಬುದು ಮಾತ್ರ ಶಾಶ್ವತವೇ?
ಕುತೂಹಲಕ್ಕಾಗಿ ಒಳಿತು ಕೆಡುಕುಗಳ ಚರಿತ್ರೆಯನ್ನು ಗಮನಿಸತೊಡಗಿದರೆ ತುಂಬಾ ವಿಚಿತ್ರಗಳು ಮೂಡುತ್ತವೆ. ಮಾಮೂಲಾಗಿ ಒಳ್ಳೆಯವರನ್ನು ದೇವತೆಗಳು ಎಂದೂ ಕೆಟ್ಟವರನ್ನು ರಾಕ್ಷಸರೆಂದೂ ಹೇಳುವುದು ವಾಡಿಕೆ. ಬೇರೇ ಬೇರೆ ಜಾತಿ, ಮತ, ಧರ್ಮಗಳಲ್ಲಿ ಇದು ಬೇರೆ ಬೇರೆ ರೀತಿಯಲ್ಲಿ ವರ್ಣಿತವಾಗಿದೆ. ಭಾರತೀಯ ಪುರಾಣಗಳಲ್ಲಿ ರಾಕ್ಷಸರೂ ದೇವತೆಗಳೂ ಕಶ್ಯಪನೆಂಬ ಒಬ್ಬ ತಂದೆಯ ಇಬ್ಬರು ಪತ್ನಿಯರ ಮಕ್ಕಳು. ದಿತಿಯ ಮಕ್ಕಳು ದೈತ್ಯರು; ಅದಿತಿಯ ಮಕ್ಕಳು ಆದಿತ್ಯರು ಎಂದು ಪುರಾಣ ಹೇಳುತ್ತದೆ. (ಅದು ಅದೈತ್ಯರು ಅಂದರೆ ಸಣ್ಣ ಮೈಕಟ್ಟಿನವರು ಯಾಕಲ್ಲ?); ಅವರನ್ನು ದೇವತೆಗಳೆಂದು ಹೆಸರಿಸಿದರು. ಒಳಿತು ಕೆಡುಕುಗಳು ಇಷ್ಟು ಸ್ಪಷ್ಟ ವಿಭಜನೆಯಾಗಿ ಪ್ರತ್ಯೇಕಿಸಿ ಇರಲಾರದು. ರೂಪದಲ್ಲಿ ವಿಶೇಷ ವ್ಯತ್ಯಾಸವಿರತಕ್ಕದ್ದಲ್ಲ. ಗುಣ, ಸ್ವಭಾವ ಬೇರೆಬೇರೆಯಿರಬಹುದು. ಇಷ್ಟೇ ಅಲ್ಲ, ಈ ಕಶ್ಯಪನೆಂಬ ಮಹಾರಾಯನಿಗೆ ಇನ್ನೂ ಅನೇಕ ಪತ್ನಿಯರಿದ್ದರಂತೆ. ದನು ಎಂಬವಳ ಮಕ್ಕಳು ದಾನವರಾದರಂತೆ. ತರ್ಕಗಳನ್ನು ಬದಿಗಿಟ್ಟು ಓದುವುದಕ್ಕೆ ಪುರಾಣಗಳು ಬಹು ಸೊಗಸು. ಅವು ಕಲ್ಪನಾತೀತವಾಗಿ ಮನಸ್ಸಿನಲ್ಲಿ ವಿಹರಿಸುತ್ತವೆ. ಬುದ್ಧಿಯನ್ನು ಕುರುಡಾಗಿಸುವುದೂ ಇದೆ. ಯಾರು ರಾಕ್ಷಸರು? ಯಾರು ದೇವತೆಗಳು? ಯಾರು ದಾನವರು? ಒಬ್ಬನೇ ತಂದೆಯ ಮಕ್ಕಳು; ತಾಯಂದಿರು ಬೇರೆ ಬೇರೆ. ಪ್ರಾಯಃ ಇವೆಲ್ಲ ಗುಣವಾಚಕ ಪದಗಳು. ರಾವಣನನ್ನು ದಾನವನೆಂದೋ, ರಾಕ್ಷಸನೆಂದೋ ಹೇಳುತ್ತೇವೆ. ಹೇಳಿ ಕೇಳಿ ಅವನು ಚಯುರ್ವೇದ ಪಾರಂಗತ ಬ್ರಾಹ್ಮಣ. ಅವನೆಂದಲ್ಲ, ಕಶ್ಯಪನ ಸಂತತಿಯೆಲ್ಲರೂ ಬ್ರಾಹ್ಮಣರೇ. ನಾವು ದೇವತೆಗಳೆಂದೂ ರಾಕ್ಷರೆಂದೂ, ದಾನವರೆಂದೂ ಉಲ್ಲೇಖಿಸುವ ಎಲ್ಲರೂ ಒಂದೇ ಜಾತಿ, ಒಂದೇ ಕುಲ. ಇದು ಕಾಲಾನುಕ್ರಮದಲ್ಲಿ ಅವರವರ ಹುಟ್ಟುಸಾವುಗಳ ಮತ್ತು ಅವುಗಳ ನಡುವಣ ಬದುಕಿನ ರೀತಿ-ನೀತಿಗನುಗುಣವಾಗಿ ಪ್ರತ್ಯೇಕ ಕುಲ, ವಂಶ, ಜಾತಿ, ವರ್ಗಗಳಾಗಿರಬೇಕು. ಹಿರಣ್ಯಕಶಿಪು (ಈತ ತನ್ನ ತಮ್ಮ ಹಿರಣ್ಯಾಕ್ಷನೊಂದಿಗೆ ಜಯ-ವಿಜಯರ ಎರಡನೆಯ ಅವತಾರಗಳೆಂದು ಕಥೆ ಕಟ್ಟಲಾಗಿದೆ!), ರಾವಣ (ಈತ ತಮ್ಮ ಕುಂಭಕರ್ಣನೊಂದಿಗೆ ಜಯವಿಜಯರ ಎರಡನೆಯ ಅವತಾರ!), ಕಂಸ, ಮಾಗಧ ಅಷ್ಟೇ ಅಲ್ಲ, ನರಕಾಸುರ, ಮಹಿಷಾಸುರ ಮುಂತಾದವರ ಹಿನ್ನೆಲೆಯನ್ನು ಪ್ರತ್ಯೇಕಗೊಳಿಸಲಾಗಿದೆ. (ಮಹಾಭಾರತದಲ್ಲಾದರೂ ಶಿಶುಪಾಲ-ದಂತವಕ್ತ್ರರೂ ಈ ಜಯವಿಜಯರ ತ್ರಿಜನ್ಮದ ಪಟ್ಟಿಯಲ್ಲಿ ಅವಕಾಶ ಪಡೆದರು. ದಂತವಕ್ತ್ರ ಯಾಕೆಂದು ನನಗೆ ಇನ್ನೂ ಅರ್ಥವಾಗಿಲ್ಲ. ಆತ ಬಹಳ ಚಿಕ್ಕ ವ್ಯಕ್ತಿತ್ವ. ತ್ರಿಜನ್ಮಗಳನ್ನು ಮುಗಿಸುವುದಕ್ಕೆ ಅವಸರವಸರವಾಗಿ ಆಯ್ದುಕೊಂಡಿರಬೇಕು!) ಹಾಗೆ ನೋಡಿದರೆ ಎಲ್ಲರೂ ಶಾಪಗ್ರಸ್ತರು. ಸಾವೆಂಬುದು ಅವರಿಗೆ ಮೂಲಕ್ಕೆ ಮರಳಲು ಒಂದು ದಾರಿ.
ಪುರಾಣಯುಗದಿಂದ ಚರಿತ್ರೆಯ ಯುಗಕ್ಕೆ ಬಂದಾಗ ಈ ಪೌರಾಣಿಕ ವ್ಯಕ್ತಿಗಳೆಲ್ಲ ಸತ್ತುಹೋದವರೇ. ಭೀಷ್ಮರೆಂಬವರಿಗೆ ಇಚ್ಛಾಮರಣದ ವರ. ಅವರಿಗೂ ಸಾವು ಬೇಕೆನಿಸಿತ್ತು. ಚಿರಂಜೀವಿಗಳೆಂದು ಉಳಿದವರು ಏನು ಪಾಪ ಮಾಡಿದರೋ? ಅವರು ಉಲ್ಲೇಖಿಸುವುದಕ್ಕೆ ಪೌರಾಣಿಕ ವ್ಯಕ್ತಿಗಳು. ನಮ್ಮ ನಡುವೆ ಇದ್ದಾರೆಂದು ನಂಬಿಕೊಳ್ಳಬೇಕಂತೆ. ಈ ಪೈಕಿ ಅಶ್ವತ್ಥಾಮನೆಂಬವನೊಬ್ಬ ಕುಮಾರವ್ಯಾಸನ ಕಾಲದಲ್ಲಿ ಒಮ್ಮೆ ಪ್ರತ್ಯಕ್ಷನಾದನೆಂಬ ಕಥೆಯಿದೆ. ಓದುವುದಕ್ಕೆ, ಕೇಳುವುದಕ್ಕೆ ಖುಷಿ.
ಈ ಬಗ್ಗೆ ಒಂದು ಪ್ರಕ್ಷಿಪ್ತ ಕಥೆಯಿದೆ. (ಮೇಲೆ ಹೇಳಿದ ಎಲ್ಲ ಕಥೆಗಳೂ ಪ್ರಕ್ಷಿಪ್ತವೇ. ಅವುಗಳ ಮೌಲ್ಯವಷ್ಟೇ ನಮಗೆ ಬೇಕಾದ್ದು!) ಸಮುದ್ರಮಥನವಾದ ಮೇಲೆ ರಾಕ್ಷಸರು/ದಾನವರು ಸೃಷಿಕರ್ತ ಬ್ರಹ್ಮನಲ್ಲಿ ಹೋಗಿ ತಾವೂ ದೇವತೆಗಳೂ ಒಬ್ಬನೇ ತಂದೆಯ ಮಕ್ಕಳಾದರೂ ದೇವತೆಗಳಿಗೆ ಮಾತ್ರ ಅಮೃತ ಕರುಣಿಸಲಾಯಿತು, ಆ ಮೂಲಕ ತಮಗೆ ವಿಷವುಣಿಸಲಾಯಿತೆಂದು ದೂರಿದರಂತೆ. ಆಗ ಬ್ರಹ್ಮ ಮುಂದೆ ಕಲಿಯುಗವೆಂಬುದು ಬರಲಿದೆ, ಆಗ ಎರಡೂ ಕಡೆಯವರನ್ನು ಮಿಶ್ರಮಾಡಿ (ನಮ್ಮ ಐಪಿಎಲ್ ಪಂದ್ಯಗಳ ಮಾದರಿಯಲ್ಲಿ) ಸಮುದ್ರ ಮಥನವಲ್ಲದಿದ್ದರೂ ಸಮಾಜಮಥನ ಮಾಡಲಿದೆಯೆಂದೂ ಭರವಸೆ ನೀಡಿದನಂತೆ. ಈ ಸಮಾಜಮಥನ ಈಗ ನಡೆಯುತ್ತಲಿದೆ. ಇದರ ಫಲಿತಾಂಶ ಕಾಲಾನುಕಾಲಕ್ಕೆ ಗೊತ್ತಾಗುತ್ತದೆ. ದೇವರಂತೂ ಸಂಭವಿಸುವುದನ್ನು ಮರೆತಿದ್ದಾನೆಂದು ಕಾಣುತ್ತದೆ. ಅಥವಾ ಆತನ ದೃಷ್ಟಿಯಲ್ಲಿ ಈಗ ಆಗುತ್ತಿರುವುದು ಧರ್ಮಗ್ಲಾನಿಯಲ್ಲದೇ ಇರಬಹುದು. ಇದು ಒಂದು ಧರ್ಮದ ಕಥೆಯಲ್ಲ; ಎಲ್ಲರದ್ದೂ. ಹೆಸರು, ಇತಿಹಾಸ, ಪುರಾಣ ಬೇರೆ ಬೇರೆ.
ಇಂದು ಸಮಾಜದಲ್ಲಿ ಬದುಕುವವರನ್ನು ಈ ಪಟ್ಟಿಯಲ್ಲಿ ಹೇಗೆ ವಿಭಾಗಿಸಬಹುದು? ಒಳಿತು ಕೆಡುಕುಗಳ ನಡುವಣ ಯುದ್ಧದಲ್ಲಿ ಸಾಯುವವರೆಲ್ಲ ಕೆಟ್ಟವರೆಂದೂ ಗೆದ್ದವರು ಒಳ್ಳೆಯವರೆಂದೂ ತರ್ಕಿಸಬಹುದು. ಏಕೆಂದರೆ ಪುರಾಣವನ್ನೂ ಚರಿತ್ರೆಯನ್ನೂ ಬರೆಯುವವರು ಹೀಗೆ ಗೆದ್ದು ಉಳಿದವರು.
ಇಲ್ಲಿ ದೇವತೆಗಳೂ ಇದ್ದಾರೆ, ರಾಕ್ಷಸರೂ ಇದ್ದಾರೆ, ದಾನವರೂ ಇದ್ದಾರೆ. ನಮ್ಮನ್ನಾಳುವವರಲ್ಲಿ ಮತ್ತು ಬೃಹತ್ ಉದ್ಯಮಿಗಳಲ್ಲಿ ಇವರಲ್ಲಿ ಬಹುಪಾಲು ಸೇರಿಕೊಂಡಿದ್ದಾರೆಂದು ನನಗನ್ನಿಸುತ್ತದೆ. ಇವರು ಪುರಾಣ ವ್ಯಕ್ತಿಗಳಂತೆ ನೂರಾರು, ಸಾವಿರಾರು ವರ್ಷ ಬದುಕಲಾರರು. ಆದರೆ ಸಮಾಜಕ್ಕೆ ದಿಕ್ಕು ತೋರಿಸುವ ಬದಲು ದಿಕ್ಕು ತಪ್ಪಿಸಿ ಬಾಳಬಲ್ಲರು. ಸಾವಷ್ಟೇ ಅವರಿಂದ ನಿಷ್ಪಾಪಿ ಪ್ರಜೆಗಳನ್ನು ಪಾರು ಮಾಡಬಲ್ಲುದು.
ಎಲ್ಲರೂ ಸಾಯುತ್ತಾರೆ. ಒಳ್ಳೆಯವರು ಯಾರು, ಕೆಟ್ಟವರು ಯಾರು ಎಂಬುದನ್ನು ಯಾರು ನಿರ್ಧರಿಸಬೇಕು? ಯಾರೇ ಆಗಲಿ ಸತ್ತಾಗ ಪುಣ್ಯಾತ್ಮ ಇನ್ನೂ ನಾಲ್ಕು ದಿನ ಬದುಕಬೇಕಾಗಿತ್ತು ಎಂದು ಸಮಾಜ ಅಂದುಕೊಂಡರೆ ಆ ಮೃತಾತ್ಮ ಒಳ್ಳೆಯವನದ್ದೆಂದೂ, ಹೋದನಾ ಒಳ್ಳೇದಾಯಿತು ಎಂದರೆ ಆತ ಕೇಡಿಗ ಎಂದೂ ತಿಳಿಯಬಹುದು. ಈ ಕಾಲದಲ್ಲಿ ಎಲ್ಲರೂ ಒಳ್ಳೆಯವರ ಪಾತ್ರವನ್ನು ಸೊಗಸಾಗಿ ನಟಿಸುತ್ತಾರೆ. ಎಲ್ಲರೂ ಹೊರನೋಟಕ್ಕೆ ನಾಯಕರೇ. ಅವರ ಬಣ್ಣ ಕಳಚಿಬಿದ್ದಾಗ ಮಾತ್ರ ಯಾರು ನಾಯಕರು, ಯಾರು ಖಳನಾಯಕರು ಎಂಬುದು ಗೊತ್ತಾದೀತು. ಸಾವಿಗೆ ಎಲ್ಲರೂ ಒಂದೇ. ಅದರ ತೂಕದ ಬಟ್ಟಿಗೆ ಭಿನ್ನತೆಯಿಲ್ಲ, ಭೇದವಿಲ್ಲ, ಅಂತರವಿಲ್ಲ. ಅಷ್ಟರ ಮಟ್ಟಿಗೆ ಅದು ಅದ್ವೈತ.
(ಅಂಕಣಕಾರರು ಸಾಹಿತಿ, ಹಿರಿಯ ವಕೀಲರು)






