ವಂದೇ ನಿರ್ಲಜ್ಜಂ!

ಲಜ್ಜೆಯೆನ್ನುವುದು ಅವರವರು ಪರಿಭಾವಿಸಿಕೊಂಡಂತೆ. ಎಲ್ಲ ಅವಮಾನಗಳನ್ನನುಭವಿಸಿಯೂ ತನಗೇನೂ ಆಗಿಲ್ಲವೆಂಬಂತೆ ವರ್ತಿಸುವವರಿದ್ದಾರೆ. ನಮ್ಮೂರಿನಲ್ಲೊಬ್ಬರು ತನಗೆ ಚಪ್ಪಲಿಯೇಟು, ಪೊರಕೆಯೇಟು ಬಿದ್ದಿರುವುದಾಗಿಯೂ ಸೆಗಣಿ ಎಸೆದಿದ್ದಾರೆಂದೂ ಆದರೆ ತನಗೆ ಎಂದೂ ಅವಮಾನವಾಗಿಲ್ಲವೆಂದೂ ಹೇಳಿಕೊಳ್ಳುತ್ತಿದ್ದರು. ಹಾಗಾದರೆ ಅವಮಾನವೆಂದರೇನು? ನನಗೆ ಅರ್ಥವಾಗಲಿಲ್ಲ.
ಈದೇಶಕ್ಕೆ ವಿಶಿಷ್ಟವಾದ ಒಂದು ಗುಣವನ್ನು ಹುಡುಕುತ್ತ ಹೊರಟರೆ ಪ್ರಾಯಃ ಅಪವಾದಗಳನ್ನು ಹೊರತುಪಡಿಸಿ ಕಾಣುವ ಗುಣವೆಂದರೆ ನಿರ್ಲಜ್ಜತನ. ಇದೊಂದೇ ಜಾತಿ-ಮತ-ಧರ್ಮ-ಭಾಷೆ- ಜನಾಂಗಗಳನ್ನು ಸಭ್ಯತೆ, ಸೌಜನ್ಯಗಳನ್ನು ಮೀರಿ ಶೋಭಿಸಬಲ್ಲ ಗುಣ. ಈ ಬಗ್ಗೆ ಯಾರು ಅಧ್ಯಯನ ಮಾಡಿದ್ದಾರೆಂಬ ಬಗ್ಗೆ ನನ್ನಲ್ಲಿ ಮಾಹಿತಿಯಿಲ್ಲ. ಆದರೆ ನಿತ್ಯ ಜೀವನದಿಂದ ಹಿಡಿದು ಅಂತರ್‌ರಾಷ್ಟ್ರೀಯ ವೇದಿಕೆಗಳ ವರೆಗೆ ಭಾರತೀಯರೆಂದು ಗುರುತುಪಡಿಸಲು ಯಾವ ಡಿಎನ್‌ಎ ಪರೀಕ್ಷೆಯೂ ಬೇಡ; ಸೂಕ್ಷ್ಮದರ್ಶಕವಾಗಲೀ ಭೂತಗನ್ನಡಿಯಾಗಲೀ ಬೇಡ. ಗ್ರಹಿಸುವ ಇಂದ್ರಿಯಗಳಿದ್ದರೆ ಸಾಕು.
ಮೊನ್ನೆ ದಿಲ್ಲಿಯಲ್ಲಿ ಬ್ರಿಕ್ಸ್ ಶಿಖರ ಸಮ್ಮೇಳನವು ನಡೆಯಿತು. ಭಾರತವು ಈ ಸಂಘಟನೆಯ 2026ರ ಅಧ್ಯಕ್ಷ. ಆದ್ದರಿಂದ ಈ ಬಾರಿಯ ಸಮ್ಮೇಳನವು ಭಾರತದಲ್ಲಿ ನಡೆಯಿತು. ಸಹಜವಾಗಿಯೇ ಇದು ದೇಶಾದ್ಯಂತ ಭರ್ಜರಿ ಪ್ರಚಾರ ಪಡೆಯಿತು. ಇದರಲ್ಲಿ ರಾಷ್ಟ್ರ ಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳು ಭಾಗವಹಿಸುತ್ತಾರೆ. ಆದರೆ ಭಾರತವು ಇದರಲ್ಲಿ ಅನಗತ್ಯ ಆತ್ಮರತಿಯನ್ನು ಪ್ರದರ್ಶಿಸಿತು. ಸಣ್ಣದಾದರೂ ಎಲ್ಲದಕ್ಕಿಂತ ನಿರ್ಲಜ್ಜ ವಿಚಾರವೆಂದರೆ ಸಮ್ಮೇಳನದಲ್ಲಿ ಪ್ರತಿನಿಧಿಗಳು ಮಾತನಾಡುತ್ತಿದ್ದರೆ ವಿದೇಶಾಂಗ ವ್ಯವಹಾರದ ಉನ್ನತ ಅಧಿಕಾರಿಯೊಬ್ಬರು ಮೂರು ದಿನ ಉಪವಾಸದಲ್ಲಿದ್ದವರಂತೆ ತಟ್ಟೆಯಲ್ಲಿ ಔಪಚಾರಿಕವಾಗಿ ಇಟ್ಟಿದ್ದ ಒಣಹಣ್ಣುಗಳನ್ನು ಗಬಗಬನೆ ತಿನ್ನುತ್ತಿದ್ದರು. ಸಾರ್ವಜನಿಕ ವೇದಿಕೆಯಲ್ಲದಿದ್ದರೂ ಒಳಾಂಗಣದಲ್ಲಿ ನಡೆಯುವ ಒಂದು ದೊಡ್ಡ ಸಮಾರಂಭ ಅಥವಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಅಥವಾ ಸಾಮಾಜಿಕ ಅಲ್ಲದೆ ದೇಶದ ಘನತೆ ಮತ್ತು ಮರ್ಯಾದೆಯನ್ನು ಎತ್ತಿ ಹಿಡಿಯಬೇಕಾದರೆ ನಡೆ-ನಡತೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂಬ ಕನಿಷ್ಠ ಸೌಜನ್ಯವನ್ನೂ ಈ ಮತ್ತು ಇಂತಹ ಅಧಿಕಾರಿಗಳು ತೋರಿಸಲಿಲ್ಲ. ಇವರಷ್ಟೇ ಅಲ್ಲ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಹೀಗೆಯೇ ನಡೆದುಕೊಂಡ ಒಂದು ವೀಡಿಯೊ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇವರೆಲ್ಲ ಸರಕಾರದ ಉನ್ನತ ಸ್ಥಾನದಲ್ಲಿರುವವರು ಮತ್ತು ಭಾರತೀಯ ವಿದೇಶಾಂಗ ಸೇವೆ ಎಂಬ ನಾಮಫಲಕವನ್ನು ಹಾಕಿಕೊಂಡವರು. ನೋಡಿದವರು, ಮುಖ್ಯವಾಗಿ ವಿದೇಶೀಯರು ಈ ಭಾರತೀಯ ನಿರ್ಲಜ್ಜತನಕ್ಕೆ ಸಾಕ್ಷಿಯಾದರು.
ಇದಕ್ಕೆ ಮುನ್ನುಡಿಯನ್ನು ಘನವೆತ್ತ ಭಾರತ ಸರಕಾರವು ಬರೆದಿತ್ತು. ದಿಲ್ಲಿಯ ವಿಮಾನ ನಿಲ್ದಾಣದಿಂದ ಮತ್ತು ಅತಿಥಿಗಳು ವಾಸ್ತವ್ಯದಲ್ಲಿದ್ದ ಕೇಂದ್ರಗಳಿಂದ ಸಮ್ಮೇಳನ ನಡೆಯುವ ಹಾದಿಬೀದಿಗಳ ಅಕ್ಕಪಕ್ಕದಲ್ಲಿ ಕೊಳಚೆ ಪ್ರದೇಶ ಮತ್ತು ತೀರಾ ಬಡವರು ಸ್ಲಮ್‌ಗಳಲ್ಲಿ ವಾಸಿಸುವುದು ಭಾರತದಲ್ಲಿ ವಿಶೇಷವೇನಲ್ಲ. ಎಷ್ಟೇ ದೊಡ್ಡ ಕಾರುಗಳಲ್ಲಿ ಭದ್ರತೆಯೊಂದಿಗೆ ಹೋಗುವ ಮುಖ್ಯಾತಿಮುಖ್ಯರು ಇವನ್ನು ನೋಡಿದರೆ ಭಾರತದ ಜಿಡಿಪಿ ಬೆಳವಣಿಗೆ ಶೇ. 7.8 ಇದೆಯೋ ಅಥವಾ ಶೇ. 2.6 ಇದೆಯೋ ಅಥವಾ ಇನ್ನೂ ಕಡಿಮೆಯಿದೆಯೋ ಎಂದು ಅಳೆಯಬಲ್ಲರು. ಆದ್ದರಿಂದ ಈ ಬಡವರ ಬವಣೆಯನ್ನು ನಿವಾರಿಸುವುದರ ಅಥವಾ ಅವರಿಗೆ ಬದಲಿ ಸೌಕರ್ಯಗಳ ವ್ಯವಸ್ಥೆಯನ್ನು ಮಾಡುವ ಪರಿಶ್ರಮಕ್ಕಿಂತ ರಸ್ತೆಯ ಎರಡೂ ಭಾಗಕ್ಕೆ ಆವರಣವನ್ನು ಹಾಕುವುದು ಸುಖವೆಂದು ಬಗೆದ ಈ ಸರಕಾರಗಳು (ಕೇಂದ್ರ ಮತ್ತು ದಿಲ್ಲಿ) ಇಕ್ಕಡೆಗಳಲ್ಲಿ ಅಡ್ಡ ಪರದೆಯನ್ನು ಹಾಕಿದವು. ಅಲ್ಲಿಗೆ ಅತಿಥಿ ಮಹೋದಯರುಗಳಿಗೆ ಭಾರತವೆಂದರೆ ಸುಖದ ಸ್ವರ್ಗ ಎಂಬ ಮನೋಭಾವ ಬರುತ್ತಿತ್ತು ಅಥವಾ ಹಾಗೆ ನಾವು ಭಾರತೀಯರು ತಿಳಿದುಕೊಂಡೆವು. ಬಡವರ ಬವಣೆಗೆ ಪರದೆಯೆಳೆಯುವುದು ನಿರ್ಲಜ್ಜತನವಲ್ಲವೆಂಬುದು ನಮ್ಮ ರಾಜಕಾರಣದ ಅನುಭವೀ ನಿರ್ಲಜ್ಜ ಸೂತ್ರ.
ಇದು ದೇಶವಿಡೀ ಕಂಡು ಅರಿತ ನಿರ್ಲಜ್ಜತನ. ಆದರೆ ನಿತ್ಯಜೀವನದಲ್ಲಿ ಇಂತಹ ಪ್ರಸಂಗಗಳು ಹತ್ತಾರು, ನೂರಾರು. ಸಭ್ಯತೆಯನ್ನು ಸೂಕ್ಷ್ಮದರ್ಶಕದ ಮೂಲಕ ಹುಡುಕಬೇಕು.
ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಈ ಬಗೆಯ ನಿರ್ಲಜ್ಜತನವನ್ನು ನಾವು ರೂಢಿಮಾಡಿಕೊಂಡಿದ್ದೇವೆ. ವಾಹನಗಳು ಅಡ್ಡಾದಿಡ್ಡಿ ಸಾಗುತ್ತವೆ. ಯಾವ ಕಾನೂನೂ ನಮ್ಮನ್ನು ಬಾಧಿಸುವುದಿಲ್ಲ. ಚತುಷ್ಪಥ ರಸ್ತೆ ಮಾತ್ರವಲ್ಲ, ಕಿರಿದಾದ ರಸ್ತೆಯಲ್ಲೂ ಎಡದಿಂದ ಮುನ್ನುಗುವುದು ನಮ್ಮ ಚಾಲಕರ ಸಹಜ ಹವ್ಯಾಸ. ಏಕಮುಖ ರಸ್ತೆಯಲ್ಲಿ ದ್ವಿಮುಖ ಚಲನೆ/ಚಾಲನೆ ಭಾರತೀಯ ವಾಹನ ಚಾಲಕರ ಸಂಪ್ರದಾಯ. ಯಾವುದೇ ಮುನ್ಸೂಚನೆಯಿಲ್ಲದೆ ಎಡಕ್ಕೆ ಬಲಕ್ಕೆ ವಾಹನಗಳನ್ನು ತಿರುಗಿಸುವುದೂ ಅಷ್ಟೇ ಸಹಜ. ನಮ್ಮ ವಾಹನಗಳಿಗೆ ಸೂಚನಾ ಫಲಕಗಳ ಗೊಡವೆಯೇ ಇಲ್ಲ. ರಸ್ತೆಗಳೆಂದರೆ ವಾಹನ ಚಾಲನೆಗೆ ಮಾತ್ರವಲ್ಲ, ನಮ್ಮ ಕಸ-ಕೊಳೆಗಳನ್ನು ಎಸೆಯುವ ಒಂದು ತಾಣವೂ ಹೌದು. ಅದನ್ನು ವಾಹನದಿಂದಲೇ ಎಸೆಯುವ ಪರಿಪಾಠ ನಮ್ಮದು. ಖಾಸಗಿ ವಾಹನಗಳನ್ನು ಕಿರಿದಾದ ರಸ್ತೆಗಳಲ್ಲಿ ಚಲಾಯಿಸುವಾಗ ರಸ್ತೆ ಬದಿಯಲ್ಲಿ ಏನೇ ಖರೀದಿಸ ಬೇಕಾದರೂ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಾರೆ. ಹಿಂದಿನಿಂದ ಬರುವ ವಾಹನಗಳಿಗೆ ಜಾಗ ನೀಡದೆ ನಿಲ್ಲಿಸುವುದೂ ಉಂಟು. ಇದರ ಪರಿಣಾಮವನ್ನು ಇತರರು ಅನುಭವಿಸುತ್ತಾರೆ; ವಿಘ್ನಸಂತೋಷಿಗಳಾದವರ ಸಡಗರಕ್ಕೆ ಎಲ್ಲೆಯಿಲ್ಲ.
ಸರಕಾರದ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ವಿಕಲ ಚೇತನರಿಗೆ ಹೀಗೆ ಆಸನಗಳಲ್ಲಿ ಸಾಕಷ್ಟು ವಿಭಾಗಗಳಿದ್ದರೂ ಯಾರು ಎಲ್ಲಿ ಬೇಕಾದರೂ - ಚಾಲಕ, ನಿರ್ವಾಹಕರ ಆಸನಗಳನ್ನು ಹೊರತುಪಡಿಸಿ- ಕುಳಿತುಕೊಳ್ಳಬಹುದೆಂಬ ಅಲಿಖಿತ ಶಾಸನವಿದೆ. ಇವರೆಲ್ಲರ ನಡುವೆ ಸಂಸದರಿಗೆ, ಶಾಸಕರಿಗೆ ಎಂದೂ ಆಸನಗಳನ್ನು ಗುರುತಿಸಲಾಗಿದೆ. ಇವರು ಯಾವಾಗ ಬಸ್ಸುಗಳಲ್ಲಿ ಹೋಗುತ್ತಾರೋ ದೇವರೇ ಬಲ್ಲ. ಆದರೆ ಅವರ ಪ್ರತಿನಿಧಿಗಳಂತೆ ಪ್ರಭಾವಿ ಪಡ್ಡೆಗಳು ಪ್ರಯಾಣಿಸುವುದನ್ನು ನೋಡಿದ್ದೇವೆ. ಕಿಟಕಿ ಬದಿಯಲ್ಲಿ ಕುಳಿತವರು ರಸ್ತೆಗೆ ಉಗುಳುವುದು, ಕಸವನ್ನೆಸೆಯುವುದು ತಮ್ಮ ಅಧಿಕಾರವೆಂದೇ ಬಗೆದಿದ್ದಾರೆ. ರಸ್ತೆಯಲ್ಲಿ ಪ್ರಯಾಣಿಸುವ ಪಥಿಕರಿಗೆ ಹೀಗೆ ಪನ್ನೀರು ವರ್ಷಧಾರೆಯಾಗುವುದೂ ಉಂಟು! ಮನೆಯಲ್ಲಿರುವ ಕಸವನ್ನೇ ರಸ್ತೆಗೆಸೆಯುವಾಗ, ಮನೆಯಲ್ಲಿ ವಾಹನ ತೊಳೆದು ಕೊಳಕು ನೀರನ್ನು ರಸ್ತೆಗೆ ಹರಿಬಿಡುವಾಗ ಸಾರ್ವಜನಿಕ ಪ್ರಜ್ಞೆಯನ್ನು ತಪ್ಪಿಸುತ್ತೇವೆ. ನಮಗೆ ತೊಂದರೆಯಾಗದಿದ್ದರೆ ಸಾಕು!
ರಸ್ತೆಬದಿಯಲ್ಲಿರುವ ಅಂಗಡಿಗಳಲ್ಲಿರುವವರು-ಗಿರಾಕಿಗಳೂ ಸೇರಿ- ಉಗುಳಬೇಕಾದಾಗಲೆಲ್ಲ ರಸ್ತೆಗೇ ಮುಖಮಾಡಿ ಉಗುಳುತ್ತಾರೆ. ಸಂತೆಯಲ್ಲಾಗಲೀ ಮಾರುಕಟ್ಟೆಯಲ್ಲಾಗಲೀ ನಮಗಿರುವ ಸ್ವಾತಂತ್ರ್ಯವನ್ನು ಬೇಕಾಬಿಟ್ಟಿ ಬಳಸುವುದರಲ್ಲಿ ಭಾರತೀಯರಿಗೆ ಅಗ್ರಸ್ಥಾನ.
ವಿದೇಶ ಪ್ರಯಾಣಮಾಡಿ ಬಂದ ನನ್ನ ಪರಿಚಯಸ್ಥರೊಬ್ಬರು ಹೇಳಿದ್ದಿದು: ‘‘ವಿದೇಶಗಳಲ್ಲಿ ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆದರೆ ದಂಡ ವಿಧಿಸುತ್ತಾರೆ! ನಾನು ಬ್ಯಾಗಿನಲ್ಲಿ ಈ ಕಸವನ್ನು ತುಂಬಿಸಿಕೊಂಡು ಬಂದು ನಮ್ಮ ವಿಮಾನ ನಿಲ್ದಾಣದಲ್ಲಿಳಿದ ತಕ್ಷಣ ನೆಲದಲ್ಲಿ ಎಸೆದೆ!’’ ಎಂದರು. ನಮ್ಮ ನೆಲ ಇರುವುದೇ ಅದಕ್ಕೆ; ಕಸ ತುಂಬಿಸುವುದಕ್ಕೆ, ಎಂದುಕೊಂಡೆ. ಬಹುಕಸಾ ವಸುಂಧರಾ!
ಶಾಲೆಯ ಮಕ್ಕಳಿಗೆ ಮನೆಯಲ್ಲಾಗಲೀ ಶಾಲೆಯಲ್ಲಾಗಲೀ ಶಿಸ್ತನ್ನು, ಸಭ್ಯತೆ ಯನ್ನು, ಸೌಜನ್ಯವನ್ನು ಹೇಳಿಕೊಡುವ ಪದ್ಧತಿಯೇ ಇಲ್ಲವಾಗಿದೆ. ಮಕ್ಕಳ ಕೈಯಲ್ಲಿ ಮೊಬೈಲು ಮತ್ತು ಕಿಂಚಿತ್ ಹಣ ಯಾವಾಗಲೂ ಇರುವುದರಿಂದ ಅವರು ಶಾಲೆಯಿಂದ ಮನೆಗೆ ಬರುವಾಗ ಚಲನಚಿತ್ರ ತಾರೆಗಳ ಮೂಲಕ ಪ್ರಚಾರವಾದ ತಂದ ನಮ್ಮ ಪ್ರಸಿದ್ಧ ‘ಕುರ್‌ಕುರೇ’ ಮುಂತಾದ ತಿಂಡಿಗಳನ್ನು ತಿನ್ನುತ್ತಲೇ ಬಂದು ಅದು ಮುಗಿದ ತಕ್ಷಣ ಅದರ ಪ್ಯಾಕೇಟನ್ನು ರಸ್ತೆಗೆ ಎಸೆಯುವ ಅದ್ಭುತ ಚಟವಿದೆ.
ಸಿಕ್ಕಿಬಿದ್ದವರಷ್ಟೇ ಕಳ್ಳರು ಎಂಬ ಉಕ್ತಿಗನುಸಾರವಾಗಿ ನಮ್ಮ ಜನರು ಎಲ್ಲಿ ಹೋದರೂ ಕಾನೂನನ್ನು ಉಲ್ಲಂಘಿಸಿಯೂ ಸಿಕ್ಕಿಬೀಳದೆ ಪಾರಾಗಿ ಬಂದು ಅದೊಂದು ಹಿರಿಮೆಯೆಂದು, ಸಾಹಸವೆಂದು ಬಹಿರಂಗವಾಗಿ ಘೋಷಿಸಿಕೊಳ್ಳುತ್ತಾರೆ. (ಈಚೆಗೆ ಸ್ವತಂತ್ರ ಭಾರದ್ವಾಜ್ ಎಂಬಾತ ತಾನು ಕೈಗೊಂಡ ಹೀನ ಅಪರಾಧವನ್ನು ಸಾರ್ವಜನಿಕವಾಗಿ ಶ್ಲಾಘಿಸಿಕೊಂಡ. ದಸ್ತಗಿರಿಯಾಗಿ ತಾತ್ಕಾಲಿಕ ಜಾಮೀನಿನ ಮೇಲೆ ಬಿಡುಗಡೆಗೊಂಡ.) ಏನೇ ಮಾಡಿದರೂ ಅದು ಲಜ್ಜಾಹೀನವಲ್ಲವೆಂಬ ಪ್ರಮೇಯವನ್ನು ನಾಗರಿಕತೆ ನಮಗೆ ತಿಳಿಸಿದೆ. ಭ್ರಷ್ಟಾಚಾರ ಆರೋಪಿಗಳು ತಮಗೇನೂ ಆಗಿಲ್ಲವೆಂಬಂತೆ ನಡೆದುಕೊಳ್ಳುತ್ತಾರೆ. ಸಾರ್ವಜನಿಕರೂ ಅವರನ್ನು ದೂಷಿಸುವುದಿಲ್ಲ. ಭ್ರಷ್ಟರಿಂದಲಾದರೂ ಅವರವರ ಕೆಲಸವಾದರೆ ಆಯಿತಲ್ಲ!
ಬರೆಹ ಮತ್ತು ಬದುಕು ಬೇರೆಬೇರೆ ಎಂಬ ನಿಲುವು ನಮ್ಮ ಅನೇಕ ಸಾಹಿತಿಗಳನ್ನು ನಿರ್ಲಜ್ಜರಾಗುವುದಕ್ಕೆ ಸಹಕರಿಸಿದೆ. ಬಲವಂತದಿಂದ ಅಭಿನಂದನ ಭಾಷಣಗಳನ್ನು, ಲೇಖನಗಳನ್ನು ಸಿದ್ಧಪಡಿಸಿಕೊಳ್ಳುವುದು ಈಗ ಕ್ಲೀಷೆಯಾಗಿದೆ. ವಿಮರ್ಶೆಗಳ ನಿರ್ಲಜ್ಜತನದ ಮೇಲೆ ಒಂದು ಪ್ರತ್ಯೇಕ ಮಹಾಪ್ರಬಂಧವನ್ನು ಸಿದ್ಧಪಡಿಸಬಹುದು. ಕೃತಿಚೌರ್ಯವು ಯಾರನ್ನೂ ಬಾಧಿಸುವುದಿಲ್ಲ. ಬದುಕಿನಲ್ಲಿ ನೈತಿಕವಾಗಿ, ವ್ಯಾವಹಾರಿಕವಾಗಿ ಹೇಗೇ ಇರಲಿ, ಬರೆಹದಲ್ಲಿ ಸಭ್ಯನಾದರೆ, ಪ್ರಚಾರಪಡೆದರೆ ಸಾಕೆಂಬುದಕ್ಕೆ ಬೇಕಷ್ಟು ಉದಾಹರಣೆಗಳಿವೆ. ಅಲ್ಲಮನ ಕ್ಷಮೆ ಕೋರಿ ಹೇಳುವುದಾದರೆ ‘ಶಬ್ದದ ಲಜ್ಜೆ’ಯೆಂದರೆ ಇದೇಯೇನೋ?
ನೆರೆಯ ಕಾಲೇಜೊಂದರಲ್ಲಿ ಕೆಲವು ಉಪನ್ಯಾಸಕರು ಶಿಸ್ತುಕ್ರಮವನ್ನು ಎದುರಿಸುತ್ತಿದ್ದರು. ಆಗ ಅವರ ಪ್ರಾಂಶುಪಾಲರು- ಅವರೋ ಸೇನಾ ನಿವೃತ್ತರು- ಈ ಉಪನ್ಯಾಸಕರನ್ನು ನಿರ್ಲಜ್ಜರೆಂದೇ ಉಲ್ಲೇಖಿಸುತ್ತಿದ್ದರು. ಅದಕ್ಕೆ ಸರಿಯಾಗಿ ಆ ಉಪನ್ಯಾಸಕರುಗಳು ಶಿಸ್ತುಕ್ರಮದ ಶಿಕ್ಷೆಯಿಂದ ಪಾರಾಗಲು ಬಗೆಬಗೆಯ (ಕು)ತಂತ್ರಗಳನ್ನು ಹೂಡುತ್ತಿದ್ದರು. ಅವರಲ್ಲೊಬ್ಬರು ನನಗೆ ಒಂದು ಕಾಲದಲ್ಲಿ ಪರೋಕ್ಷವಾಗಿ ಉಪನ್ಯಾಸಕರಾಗಿದ್ದರು. ಅವರಿಗೆ ದುರ್ನಡತೆಗಾಗಿ ದಂಡ ವಿಧಿಸಿದಾಗ ಪ್ರಕರಣವು ಮೇಲ್ಮನವಿಗೊಂಡು ಶಿಕ್ಷಣ ಮೇಲ್ಮನವಿ ಪ್ರಾಧಿಕಾರದ ಮುಂದೆ ಬಂದಾಗ ನಾನು ಆಡಳಿತ ಮಂಡಳಿಯ ಪರವಾಗಿ ವಕೀಲನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಇದನ್ನರಿತ ಉಪನ್ಯಾಸಕರು ಅವರನ್ನು ಮುಂದಿಟ್ಟುಕೊಂಡು ನನ್ನಲ್ಲಿ ಬಂದು ಸದ್ರಿಯವರು ನನಗೆ ಉಪನ್ಯಾಸಕರಾಗಿದ್ದುದರಿಂದ ಅವರಿಗೆ ನೆರವಾಗಿ ಅವರನ್ನು ಗೆಲ್ಲಿಸಬೇಕೆಂದು ಕೋರಿದರು. ‘‘ಈ ಕೆಲಸ ಮಾಡಿದರೆ ನಾನು ಎದುರಿಸಬೇಕಾದ ಮೊದಲ ಪ್ರಶ್ನೆ ‘ನಿಮಗೆ ಪಾಠ ಹೇಳಿದ ಆ ಅಯೋಗ್ಯ ಶಿಕ್ಷಕ ಯಾರು?’ ಎಂದಲ್ಲವೇ’’ ಎಂದು ಕೇಳಿದೆ. ಅವರಿಗೇನೂ ನಾಚಿಕೆಯಾದಂತಿರಲಿಲ್ಲ. ಕೋಪ, ಬಿಗುಮಾನದಿಂದ ಅವರು ತೆರಳಿದರು.
ಇಂತಹ ಹತ್ತಾರು ಸಂಗತಿಗಳಿವೆ. ಲಜ್ಜೆಯೆನ್ನುವುದು ಅವರವರು ಪರಿಭಾವಿಸಿಕೊಂಡಂತೆ. ಎಲ್ಲ ಅವಮಾನಗಳನ್ನನುಭವಿಸಿಯೂ ತನಗೇನೂ ಆಗಿಲ್ಲವೆಂಬಂತೆ ವರ್ತಿಸುವವರಿದ್ದಾರೆ. ನಮ್ಮೂರಿನಲ್ಲೊಬ್ಬರು ತನಗೆ ಚಪ್ಪಲಿಯೇಟು, ಪೊರಕೆಯೇಟು ಬಿದ್ದಿರುವುದಾಗಿಯೂ ಸೆಗಣಿ ಎಸೆದಿದ್ದಾರೆಂದೂ ಆದರೆ ತನಗೆ ಎಂದೂ ಅವಮಾನವಾಗಿಲ್ಲವೆಂದೂ ಹೇಳಿಕೊಳ್ಳುತ್ತಿದ್ದರು. ಹಾಗಾದರೆ ಅವಮಾನವೆಂದರೇನು? ನನಗೆ ಅರ್ಥವಾಗಲಿಲ್ಲ.
ಈ ವಿಚಾರಗಳನ್ನು ಹೇಳುವಾಗ ನಮ್ಮ ರಾಜಕಾರಣಿಗಳು ಇವೆಲ್ಲ ತಮಗೆ ಅನ್ವಯಿಸುವುದಿಲ್ಲವೆಂದು ಭಾವಿಸುತ್ತಾರೆ. ರಾಜಕಾರಣದಲ್ಲಿ ನಿರ್ಲಜ್ಜೆಯೇ ಭೂಷಣ. ಯಾರು ಎಷ್ಟು ನಿರ್ಲಜ್ಜೆಯಿಂದ ವರ್ತಿಸುತ್ತಾರೆ ಅಷ್ಟೂ ಅವರು ಲೋಕಪ್ರಿಯರು. ಅತ್ಯಾಚಾರದ ಅಪರಾಧಿ ಹೊರಗೆ ಬಂದಾಗ ಆತನಿಗೆ ಸಿಕ್ಕುವ ಗೌರವ, ಸನ್ಮಾನಗಳು ಪ್ರಾಮಾಣಿಕರಿಗೆ ಸಿಗುವುದಿಲ್ಲ.
ಭಾರತಕ್ಕೆ ಅದ್ಭುತವಾದ ಪೌರಾಣಿಕ ಪರಂಪರೆಯಿದೆ. ಇದೇ ನಮ್ಮ ನಿರ್ಲಜ್ಜರ ಮೂಲವಿರಬಹುದು. ಅಹಲ್ಯೆಯನ್ನು ಭ್ರಷ್ಟಗೊಳಿಸಿದ ದೇವೇಂದ್ರ, ತುಳಸಿಯನ್ನು ಕುಲಟೆಯಾಗಿಸಿದ ವಿಷ್ಣು, ಗೋಪಿಯರು ಸ್ನಾನಮಾಡುವಾಗ ವಿಹರಿಸಿದ ಶ್ರಿಕೃಷ್ಣ, ಮೋಹಿನಿಯನ್ನು ಹಿಂಬಾಲಿಸಿದ ಶಿವ, ದ್ರೌಪದಿ ವಸ್ತ್ರಾಪಹಾರವಾಗುವಾಗ ಧರ್ಮದ ಹೆಸರಿನಲ್ಲಿ ಮೌನಕ್ಕೆ ಶರಣಾದ ಪಾಂಡವರು, ಹೀಗೆ ನಿರ್ಲಜ್ಜರ ಸಾಲೇ ಇದೆ. ಇವರೆಲ್ಲರೂ ಪೂಜನೀಯರು. ಆದ್ದರಿಂದ ಇವರನ್ನು ಬೆಂಬಲಿಸುವ, ಸಮರ್ಥಿಸುವ ದಂಡೇ ಇದೆ. ನದೀಮೂಲ, ಋಷೀಮೂಲ, ಸ್ತ್ರೀಮೂಲವನ್ನು ಹುಡುಕಬಾರದೆಂದವರು ನಿರ್ಲಜ್ಜೆಯ ಮೂಲವನ್ನು ಹುಡುಕಬಾರದೆಂದು ಹೇಳಲಿಲ್ಲವಾದ್ದರಿಂದ ಈ ಪರಂಪರೆಯ ಮೂಲವನ್ನು ಶೋಧಿಸಬಹುದು. ಬೇಕಷ್ಟು ಲಜ್ಜೆಯಿರುವವರು ನಿರ್ಲಜ್ಜರಾಗುವುದು ಹೇಗೆ ಮತ್ತು ಯಾವಾಗ?
ನಮ್ಮ ಮನೆಯ ಪಕ್ಕದಲ್ಲೊಂದು ದೇವಾಲಯವಿದೆ. ಅಲ್ಲಿ ಇದು ಪವಿತ್ರ ದೇವಾಲಯ, ಪ್ರವಾಸೀ ತಾಣವಲ್ಲ ಎಂಬ ಫಲಕವಿದೆ. ಪ್ರವಾಸಿಗರು ಅದರಲ್ಲೂ ಯುವಮಂದೆ ಬಹುಪಾಲು ಮೊಣಕಾಲ ಮೇಲೆಯೇ ಚಡ್ಡಿ ಧರಿಸಿಬರುವವರು. ಅವರಿಗೆ ದೇವಾಲಯದ ಆವರಣದಲ್ಲಿ ಪ್ರವೇಶಾವಕಾಶಕ್ಕಾಗಿ ಪಂಚೆಯನ್ನು ಬಾಡಿಗೆಗೆ ನೀಡುತ್ತಾರೆ. ಅದನ್ನು ಧರಿಸಿ ದೇವರ ಭೇಟಿ ಮಾಡಿ ಬಂದು ಅದನ್ನು ಶುಲ್ಕದೊಂದಿಗೆ ಮರಳಿಸುತ್ತಾರೆ. ದೇವರೆದುರು ನಿರ್ಲಜ್ಜರಾಗಬಾರದಲ್ಲ! ಹೀಗೆ ನಿರ್ಲಜ್ಜತನವನ್ನು ದೇವರೆದುರು ಮುಚ್ಚಿಕೊಳ್ಳುವುದು ಆ ದೇವರು ನೋಡುವುದಿಲ್ಲವೇ?
(ಅಂಕಣಕಾರರು ಸಾಹಿತಿ, ಹಿರಿಯ ವಕೀಲರು)






