ಯಕ್ಷಗಾನದ ಮಾತು

ಯಕ್ಷಗಾನದ ಮಾತೆಂದರೆ ಗಂಧರ್ವಲೋಕದ ಹಾಡುಪಾಡು. ಅದನ್ನು ಭೂಮಿಗಿಳಿಸಿ ಇನ್ನೊಂದು ಲೋಕದ ಬದುಕು ಬಿನ್ನಾಣಗಳನ್ನು ಚಿತ್ರಿಸುವಾಗ ನಾವು ಆ ಎತ್ತರಕ್ಕೆ ಏರಬೇಕು ಮತ್ತು ನೋಟಕರನ್ನು, ಕೇಳುಗರನ್ನು ಅಲ್ಲಿಗೆ ಎತ್ತರಿಸಬೇಕು. ಹೋಗಲಿ, ನೆಲದಲ್ಲಿದ್ದರೂ ಚಿಂತೆಯಿಲ್ಲ. ಪ್ರಪಾತಕ್ಕಿಳಿಸಬಾರದು. ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಒಳ್ಳೆಯದು ಹರಿದಾಡುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಕೇಡು ಹರಿದಾಡುತ್ತಿದೆ. ಅನೇಕ ಕಲಾವಿದರು ಜನಪ್ರಿಯತೆಯ ಭ್ರಮೆಯಲ್ಲಿ ಆತ್ಮರತಿಗೆ ತುತ್ತಾಗುವುದರಲ್ಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಯಕ್ಷಗಾನವು ವ್ಯವಹರಿಸುತ್ತಿದೆಯೆನ್ನುವವರು ಈ ವ್ಯವಹಾರವು ಕಾಂಚಾಣವೈಭವಕ್ಕೆ ಬಲಿಯಾಗಬಾರದೆನ್ನುವ ಎಚ್ಚರವನ್ನು ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಯಕ್ಷಗಾನವನ್ನು ನೋಡುವುದು, ಕೇಳುವುದು ಸಭ್ಯರಿಂದ ದೂರವಾದ, ಗುಟ್ಟಾಗಿ ಮಾಡುವ, ವ್ಯವಹಾರವಾದೀತು.
ಯಕ್ಷಗಾನದಲ್ಲಿ ವೇಷದ, ಅಭಿನಯದ, ಹಾಗೆಯೇ ನಾಟ್ಯ, ಹಿಮ್ಮೇಳದ ಸಂಗೀತ, ಮಾತುಗಾರಿಕೆ (ಬೇಕೆಂದೇ ಮಾತುಗಾರಿಕೆಯನ್ನು ಕೊನೆಗೆ ಕಾಣಿಸಿದ್ದೇನೆ) ಈ ಅಂಗಗಳ ಪಾಲು ಇಷ್ಟಿಷ್ಟು ಎಂದು ಕರಾರುವಾಕ್ಕಾಗಿ ಅನುಪಾತದಂತೆ ನಿರ್ಧರಿಸುವುದು ಕಷ್ಟ ಮತ್ತು ತಪ್ಪು. ಬಹುಮುಖೀ ಲಕ್ಷಣಗಳಿರುವ ಯಾವುದೇ ಕಲೆಯಲ್ಲೂ ಪಿಎಚ್.ಡಿ. ನಿಬಂಧಗಳಂತೆ ಹಂಚುವಿಕೆ ಕಲೆಗೆಸಗುವ ಅಪಚಾರ. ಆದರೂ ಕಲೆಯ ಅಭಿವ್ಯಕ್ತಿಯಲ್ಲಿ ಈ ಪೋಷಕಾಂಶಗಳು ಕೊಡಬಲ್ಲ ಶಕ್ತಿ, ವಹಿಸುವ ಪಾತ್ರ ಮತ್ತು ಆ ಮೂಲಕ ಸಂಬಂಧಿಸಿದ ಕಲಾ ಸಂದರ್ಭದ ಆರೋಗ್ಯಕ್ಕೆ ಪೂರಕವಾಗುವ ವಿಧಾನಗಳು, ಮುಂತಾದವನ್ನು ವಿಮರ್ಶೆಯ ಅನುಕೂಲಕ್ಕಾಗಿ ಅನೌಪಚಾರಿಕವಾಗಿಯಾದರೂ ವಿವೇಚಿಸುವುದು, ವಿವರಿಸುವುದು ಸಾಂಪ್ರದಾಯಿಕವಾಗಿಯೂ ಪ್ರಾಯೋಗಿಕವಾಗಿಯೂ ಅಗತ್ಯವೆನ್ನಿಸುತ್ತದೆ. ಇಂತಹ ಪ್ರಯೋಗಗಳು ಬಹಳಷ್ಟು ಬೆಳೆದು ಬಂದಿದ್ದು ಅವೀಗ ಯಕ್ಷಗಾನ ಸಾಹಿತ್ಯದ ಭಾಗವೇ ಆಗಿವೆ. ಪಾರಂಪರಿಕವಾಗಿ ಅತ್ತ ಶುದ್ಧ ಅಥವಾ ಗ್ರಾಮ್ಯ ಅಥವಾ ದೇಸೀ ಜಾನಪದವೂ ಅಲ್ಲದ, ಇತ್ತ ಶಿಷ್ಟಮಾರ್ಗವೂ ಅಲ್ಲದ ಮಧ್ಯ ಮಾರ್ಗದಲ್ಲೇ ನಡೆದು ಬಂದ ಯಕ್ಷಗಾನವು ದೃಶ್ಯಮಾಧ್ಯಮವಾಗಿ ಬಯಲಾಟದ ಸ್ವರೂಪದಲ್ಲೂ, ಶ್ರಾವ್ಯ ಮಾಧ್ಯಮದಲ್ಲಿ ತಾಳಮದ್ದಳೆಯ ಸ್ವರೂಪದಲ್ಲೂ ಪ್ರಕಟವಾಗಿದೆ. ಮಾತೊಂದರ ಹೊರತು ಬಯಲಾಟಕ್ಕೂ ತಾಳಮದ್ದಳೆಗೂ ಮುಮ್ಮೇಳದಲ್ಲಿ ಹೋಲಿಕೆಯಿಲ್ಲ. ಹಿಮ್ಮೇಳದ ಸಂಗೀತವು ಎರಡರಲ್ಲೂ ಒಂದೇ ಪ್ರಾಧಾನ್ಯವನ್ನು ಹೊಂದಿದೆಯಾದರೂ ಬಯಲಾಟದಲ್ಲಿ ಬಳಸಿದಷ್ಟು ಪದ್ಯಗಳನ್ನು ತಾಳಮದ್ದಳೆಯಲ್ಲಿ ಬಳಸದಿರುವುದನ್ನು ಗಮನಿಸಬಹುದು. ಏರುಪದಗಳಲ್ಲಿ ಚೆಂಡೆಗೆ ಪ್ರಾಮುಖ್ಯ, ಉಳಿದೆಡೆ ಮದ್ದಳೆಗೆ. ಇವು ಸ್ವರ-ಧ್ವನಿಯಿಂದ ಮುನ್ನಡೆಸುವ, ನಿಯಂತ್ರಿಸುವ, ಭಾಗವತರ ಹಾಡಿನೊಂದಿಗೇ ಸಾಗುತ್ತವೆ, ಇದನ್ನು ಅರ್ಥಗಾರಿಕೆಯೊಂದಿಗೆ ಮುನ್ನಡೆಸಿ(ದರೆ) ಆಭಾಸವನ್ನು ಸೃಷ್ಟಿಸಬಹುದು. ತಾಳಮದ್ದಳೆಯಲ್ಲಿ ಭಾಗವತರ ಮತ್ತು ಒಟ್ಟಾರೆ ಹಿಮ್ಮೇಳದ ಅಂಶವು ಕೆಲವೇ ಬೌದ್ಧಿಕ ಕಲಾಸಕ್ತರ ಹೊರತಾಗಿ ಇತರರಿಗೆ ಮುಖ್ಯವಾಗದು. ಉಳಿದ ಪ್ರೇಕ್ಷಕರಿಗೆ ಮಾತೇ ಮಾಣಿಕ್ಯ.
ತಾಳಮದ್ದಳೆಯಲ್ಲಿ ಮಾತೇ ಪ್ರಧಾನ ಅಂದರೆ ಅದು ಏಕೈಕ ಅಭಿವ್ಯಕ್ತಿ ಮಾಧ್ಯಮದಂತೆ ಅನ್ನಿಸಿದರೂ ಒಳ್ಳೆಯ ಹಿಮ್ಮೇಳ (ಯಕ್ಷಗಾನದಲ್ಲಿ ಸಂಗೀತವೆಂದರೆ ಇದೇ ತಾನೆ!) ಇಲ್ಲದಿದ್ದರೆ ಒಳ್ಳೆಯ ಕಲಾವಿದರಿಗೆ ಮಾತೇ ಬಾರದು. ಮಾತು ಬಂದರೂ ಧ್ವನಿ, ಸ್ವರಭಾರ, ಭಾವ, ವಿಚಾರಕ್ಕೆ (ಕಲಾವಿದರಿಗೂ) ಪರಸ್ಪರ ತಾಳಮೇಳವಿಲ್ಲದೆ ಪರಸ್ಪರ ಪ್ರಸಂಗ ಸೊರಗಬಹುದು. ಸಮರ್ಥ ಹಿಮ್ಮೇಳವು ಮಾತುಗಾರಿಕೆಗೆ ಅಷ್ಟೇ ಸಮರ್ಥ ಉಡ್ಡಯಣ ಕೇಂದ್ರ. ಒಳ್ಳೆಯ ಹಿಮ್ಮೇಳವಿದ್ದಾಗ ಸಾಮಾನ್ಯ ಅರ್ಥಧಾರಿಯೂ ಅಸಾಮಾನ್ಯವಲ್ಲದಿದ್ದರೂ ಪೂರ್ವನಿರೀಕ್ಷಿತ ಅಥವಾ ಪೂರ್ವನಿರ್ಧರಿತ ಗುಣಮಟ್ಟದಿಂದ ಮೇಲಿನ ಮೆಟ್ಟಿಲುಗಳನ್ನೇರಿದ್ದನ್ನು ಕಂಡಿದ್ದೇನೆ. ರನ್ನದುಪ್ಪರಿಗೆಯನ್ನೇರಲರಿಯದೆ ಮೇರುಗಿರಿಯನೇರುವಂದದಿ!
ಯಕ್ಷಗಾನ ಬಯಲಾಟಕ್ಕೆ ಅಗತ್ಯವಿರುವ ಮತ್ತು ತಾಳಮದ್ದಳೆಗೆ ಅಗತ್ಯವಿಲ್ಲದ ಅಂಗಗಳನ್ನು ಗುರುತಿಸದೆ ತಾಳಮದ್ದಳೆಯ ಮಾತುಗಾರಿಕೆಯ ಅಂಶಗಳನ್ನು ಒಟ್ಟಾರೆ ಯಕ್ಷಗಾನಕ್ಕೆ ಅನ್ವಯಿಸಬಾರದು. ಆದರೆ ಕೆಲವೊಂದು ಕಲಾವಿಮರ್ಶೆಗಳಲ್ಲಿ ಮಾತೇ ಜ್ಯೋತಿರ್ಲಿಂಗವಾಗಿರುವ ಪ್ರತಿಭಾವಂತರಿಗೂ ಪಂಡಿತರಿಗೂ ಪಟ್ಟಕಟ್ಟುವ ಹಾಗೂ ಇತರ ವಿಭಾಗಗಳಲ್ಲಿ ಮುನ್ನೆಲೆಗೆ ಬಂದರೂ ಮಾತಿನ ಮೂಲಕ ವರ್ಚಸ್ಸನ್ನು ಬೀರದ ಕಲಾವಿದರಿಗೆ ಅಷ್ಟೇನೂ ಪ್ರಾಶಸ್ತ್ಯ ನೀಡದಿರುವುದೂ ಕಾಣುತ್ತದೆ. ಯಕ್ಷಗಾನ ಬಯಲಾಟದ ವಿವಿಧ ಅಂಗಗಳಲ್ಲಿ ಮಾತಿಗೇ ಅಗ್ರಪೂಜೆ ಸಲ್ಲಬೇಕೆಂಬಂತೆ ಮಾತನಾಡುವುದು ಕಲಾವಿಮರ್ಶೆಯ ವೈಪರೀತ್ಯ. ಮಾತೇ ಮುಖ್ಯ ಎಂಬಾಗ ವೇಷಕ್ಕೆ ಪೂರಕವಾದ ಅಭಿನಯ ಮತ್ತು ನಾಟ್ಯಕ್ಕಿಂತ ಮಾತೇ ಮುಖ್ಯ ಎಂಬ ಧ್ವನಿಯಿರುತ್ತದೆ. ಹಿಮ್ಮೇಳದ ಕುರಿತು ಪ್ರಸ್ತಾಪವಿಲ್ಲದಿದ್ದರೂ ಅದು ಏನಿದ್ದರೂ ಹಿಂದಿನ ಸಾಲಿಗೆ ಸೇರಿದ್ದು ಎಂಬ ಸೂಚನೆಯೂ ಗೋಚರಿಸುತ್ತದೆ.
ಭಾಗವತರು ಯಕ್ಷಗಾನದ ಸೂತ್ರಧಾರರಾಗಿದ್ದ ಕಾಲವೊಂದಿತ್ತು. ಬಯಲಾಟದಲ್ಲಿ ಅವರ ತಾಳಕ್ಕೆ ಎಲ್ಲರೂ ಕುಣಿಯುವುದು ಯಕ್ಷಗಾನದ ಸಂಪ್ರದಾಯ. ವ್ಯವಸ್ಥಾಪಕರ ತಾಳಕ್ಕೆ ಭಾಗವತರೂ ಸೇರಿ ಎಲ್ಲರೂ ಕುಣಿಯುವ ವರೆಗೆ ಪರಿಸ್ಥಿತಿ ಬದಲಾಗಿದೆ. ಭಾಗವತರು ಇದ್ದರೂ ಸರಿ ಇಲ್ಲದಿದ್ದರೂ ಸರಿ ಎಂಬಂತೆ ಕೆಲವರಾದರೂ ವರ್ತಿಸುವುದಿದೆ. ಪ್ರಸಂಗಕ್ಕೆ ಪದ್ಯವು ಅಗತ್ಯವಿಲ್ಲದಿದ್ದರೆ ಅಥವಾ ಪದ್ಯಗಳು ಪ್ರೇಕ್ಷಕನಿಗೆ ಅರ್ಥವಾಗುವುದಿಲ್ಲವಾದರೆ ಅಥವಾ ಅರ್ಥವಾಗುವ ಅಗತ್ಯವಿಲ್ಲದಿದ್ದರೆ ಜಾಗಟೆಯ, ಚಂಡೆಮದ್ದಳೆಗಳ, ಶ್ರುತಿ, ಚಕ್ರತಾಳಗಳ, ಅಬ್ಬರವನ್ನಷ್ಟೇ ಹೆಚ್ಚಿಸಿ ಯಾವ ಪ್ರಸಂಗಕ್ಕೆ ಯಾವ ಪದ್ಯವೂ ಆದೀತೆಂಬಂತೆ ಯಕ್ಷಗಾನ ಬದಲಾದೀತು. ಮಾತೂ ಇಲ್ಲದಿದ್ದರೆ ಆಗುವುದಿಲ್ಲವೇ- ಕಥಕ್ಕಳಿಯ ಹಾಗೆ ಎಂಬ ಹಂತಕ್ಕೆ ಈ ತರ್ಕವನ್ನೆಳೆಯಬಾರದು.
ಯಕ್ಷಗಾನದಲ್ಲಿ ಮಾತೇ ಮುಖ್ಯ ಎಂಬ ಮಾತನ್ನು ಕೆಲವು ಹಿರಿಯ ಕಲಾವಿದರು ಆಡುತ್ತಾರೆ. ತಾಳಮದ್ದಳೆಗೂ ಮಾತೇ ಸರ್ವತ್ರ ಸಾಧನವಲ್ಲದಿರುವಾಗ ಯಕ್ಷಗಾನ ಬಯಲಾಟಕ್ಕೆ ಇತರ ಅಂಗಗಳನ್ನು ಮರೆಮಾಚಿ ಮಾತು ಸರ್ವೋಚ್ಚ ಸಾಧನವೆಂಬಂತಾಗಬಾರದು. ಮಾತು ಭಾಷೆಯಷ್ಟೇ ಅಲ್ಲ; ಮಾತು ಸಾಹಿತ್ಯ; ಮಾತು ಜ್ಞಾನ.
ಯಕ್ಷಗಾನ ಸಾಹಿತ್ಯವೆಂಬ ಪ್ರಕಾರವಿದೆಯೇ ಎಂಬ ಜಿಜ್ಞಾಸೆಯಿದೆ. ಯಕ್ಷಗಾನವೆಂದಾಗ ದೃಶ್ಯಕಾವ್ಯ ಬಯಲಾಟವನ್ನು ಶ್ರಾವ್ಯಕಾವ್ಯ ತಾಳಮದ್ದಳೆಯೊಂದಿಗಿಟ್ಟು ವಿವೇಚಿಸಬೇಕಾಗಿದೆ. ಕುಣಿತ, ಅಭಿನಯ, ಮುಂತಾದ ದೃಶ್ಯ ಪರಿಕರಗಳ ಪರಿಣತಿಯಿಲ್ಲದಿದ್ದರೂ ಮಾತಿನ ಮೂಲಕ (ಕೆಲವೊಮ್ಮೆ ಪ್ರಾಸಬದ್ಧ ಮಾತಿನ ಮೂಲಕವೇ!) ಯಕ್ಷಗಾನ ಬಯಲಾಟದಲ್ಲಿ ತಾರಾಮೌಲ್ಯವನ್ನು ಪಡೆದವರಿದ್ದಾರೆ. ಅಭಿನಯ, ನಾಟ್ಯ ಇವುಗಳ ಮೂಲಕವೇ ಹಿರಿತನವನ್ನು ಮತ್ತು ಜನಪ್ರಿಯತೆಯನ್ನು ಸಾಧಿಸಿದವರಿದ್ದಾರೆ. ಯಾವುದು ಹೆಚ್ಚು, ಯಾವುದು ಕಡಿಮೆ ಎನ್ನುವುದು ಇಲ್ಲಿ ಉದ್ದೇಶವಲ್ಲ. ಮಾತಿನ ವರಸೆಯಿಂದ ಪಾತ್ರವನ್ನು ಸಮರ್ಥವಾಗಿ ಚಿತ್ರಿಸಿದಾಗ ಯಕ್ಷಗಾನಕ್ಕೆ ಅಗತ್ಯವಾದ ಅಭಿನಯ, ನಾಟ್ಯ ಇವು ಪ್ರೇಕ್ಷಕರ ಅಂತರಂಗಕ್ಕಿಳಿಯದ್ದಿದೆ. ಇರುಳಿಡೀ ನಡೆಯುವ ಕಥೆಗೆ, ಪ್ರಸಂಗಕ್ಕೆ, ಸಮರ್ಥನೊಬ್ಬ ಎಷ್ಟು ಮಾತನಾಡಿದರೂ ಕೇಳುವವರಿದ್ದಾರೆ. ಅಂಥವರು ವಹಿಸುವ ಪಾತ್ರಗಳೇ ಬೇರೆ. ಅಭಿಮನ್ಯು, ಏಕಲವ್ಯ, ಮುಂತಾದ ಪುಂಡುವೇಷಗಳಿಗೆ, ಮಹಿಷಾಸುರ, ಮೈರಾವಣ ಮುಂತಾದ ಬಣ್ಣದ ವೇಷಗಳಿಗೆ, ಮಾತಿನ ಅಗತ್ಯವಿಲ್ಲ; ಅದನ್ನು ಬಯಸುವವರಿಲ್ಲವೆಂಬಂತಾಗಿದೆ. ಅಪರೂಪಕ್ಕೆ ಕಿರೀಟ ವೇಷಧಾರಿಯೊಬ್ಬರು ಪುಂಡುವೇಷವನ್ನು ವಹಿಸಿಯೂ ಮಾತಿನ ಮೂಲಕ ಪ್ರಖ್ಯಾತವಾದದ್ದಿದೆ. ಇಂಥಲ್ಲಿ ನಡುವೆ ನುಸುಳುವ ಪ್ರತಿಭೆ ಮಂಕಾಗುವುದುಂಟು!
ಯಕ್ಷಗಾನದ ಮಾತೆಂದರೆ ಮಹಾಮಾಯೆ ಎಂಬ ಚಿಂತನೆಯನ್ನು ಮನನಮಾಡಿದರೆ ಅಲ್ಲಿ ಮೂಡುವ ಸೂಚನೆ ಬೇರೆ. ಕಲೆಯ ಅರ್ಥ, ಉದ್ದೇಶ, ಅಭಿವ್ಯಕ್ತಿ ಇವನ್ನೆಲ್ಲ ಭಾಷೆ ಹೊರಹೊಮ್ಮಿಸಬಹುದು. ಕ್ಯಾಮರಾದ-, ಕುಂಚದ-, ವಾದನಗಳ-, ಹೀಗೆ ರಸಾಸ್ವಾದಿಗಳು ಸಂಕೇತಿಸುವ, ಪಡೆಯುವ ಭಾಷೆ, ಕಲೆಯ ಅಭಿವ್ಯಕ್ತಿಯ ಮಾದರಿ ಎಂಬರ್ಥದಲ್ಲಿ ತೊಡಗಿಸಿಕೊಳ್ಳುತ್ತದೆ. ಯಕ್ಷಗಾನದ ಭಾಷೆಯು ಧರ್ಮ, ನೀತಿ, ಮನೋರಂಜನೆ ಮುಂತಾದ ಅನೇಕ ಕ್ಷೇತ್ರಗಳಲ್ಲಿದೆ. ಯಕ್ಷಗಾನ ಬಯಲಾಟದಲ್ಲಿ ಕೆಲವೆಡೆ ಅನಿರ್ವಚನೀಯವಾದದ್ದನ್ನು ಅಭಿನಯದಿಂದ ಹೇಳುತ್ತಾರೆ. ಕೆಲವೊಮ್ಮೆ ಮಾತು ಅನುಚಿತವಾಗುತ್ತದೆ. ಅನುಚಿತ ಮಾತು ಬೇರೆ; ಮಾತು ಚೆನ್ನಾಗಿದ್ದರೂ ಅನುಚಿತವಾಗುವುದು ಬೇರೆ. ವೇಷಧಾರಿಗೆ ತನ್ನೊಳಗೊಂದು ಪಾತ್ರವಿದೆಯೆಂಬುದು ನೆನಪಿರಬೇಕು: ಆಗ ವೇಷ, ಅಭಿನಯ, ನಾಟ್ಯ ಇವೆಲ್ಲವೂ ಹಿಮ್ಮೇಳದಿಂದ ಪ್ರೇರಿತವಾಗಿ ಸ್ಫೂರ್ತಿಯುತವಾಗಿ, ಮಾತು ಹಿತಮಿತವಾಗಿ ರಸೋಲ್ಲಾಸಕ್ಕೆ ಪುಷ್ಟಿನೀಡಿ ಪ್ರೇಕ್ಷಕರನ್ನು ರಸಗಂಗೆಯಲ್ಲಿ ಮೀಯಿಸುತ್ತದೆ; ಇಲ್ಲವಾದರೆ ಸಮುದ್ರ ಮಥನದಲ್ಲೂ ನಗೆಗಡಲೇ ಗತಿ!
ಮಾತು ಹೇಗಿರಬೇಕೆಂದು ಕೇಳಹೋದರೆ ನೀವೊಮ್ಮೆ ಅರ್ಥ ಹೇಳಿ ಅಥವಾ ಪಾತ್ರ ವಹಿಸಿ ಎಂದಾರು. ನಾನೇರುವೆತ್ತರಕ್ಕೆ ನೀನೇರಬಲ್ಲೆಯಾ? ಎಂದು ಕೇಳಿಯಾರು. ಆದರೆ ಮಾತನ್ನು ಅಳೆಯುವುದು ಕೇಳುವವರು, ನೋಡುವವರು. ಅವರ ಅಭಿಪ್ರಾಯವೇ ಕೊನೆಗೂ ಕಲೆ-ಕಲಾವಿದನ ಯೋಗ್ಯತೆಯನ್ನು ನಿರ್ಧರಿಸುತ್ತದೆ. ಭಾಷಣಕ್ಕೂ, ಹರಿಕಥೆಗೂ, ಯಕ್ಷಗಾನದ ಮಾತುಗಾರಿಕೆಗೂ ಇರುವ ವ್ಯತ್ಯಾಸ, ಅಂತರ ಇವು ಕಲಾವಿದನಿಗೆ ಗೊತ್ತಿರಬೇಕು. ಎಲ್ಲ ಹಂತದ ಪ್ರೇಕ್ಷಕರಿದ್ದಾಗ ಮೌನವಾಗಿ ಕೇಳುವವರಿಗೂ, ಕೈಚಪ್ಪಾಳೆೆ, ಸಿಳ್ಳೆ ಹಾಕುವವರಿಗೂ ಇರುವ ವ್ಯತ್ಯಾಸವನ್ನು ಕಲಾವಿದ ಅರ್ಥಮಾಡಿಕೊಳ್ಳಬೇಕು. ಎಲ್ಲರಿಗೂ ಬೇಕಾದಂತೆ ಮಾತನಾಡುವುದು ಅಸಾಧ್ಯವಾದರೂ ಗುಣಗ್ರಾಹಿಗಳ ಮೆಚ್ಚುಗೆಗೆ ಪಾತ್ರವಾದರೆ ವಹಿಸಿದ ಪಾತ್ರ ಜೀವಂತವಿದ್ದೀತು. ಕಿರಿದರೊಳ್ ಪಿರಿದರ್ಥಂ ಹೇಳಲು ಸಾಧ್ಯವಿದ್ದರೆ ಕನ್ನಡಿಯಲ್ಲಿ ಕರಿಯನ್ನು ಕಾಣಿಸಲು ಸಾಧ್ಯವಿದ್ದರೆ ಪ್ರಸಂಗದ ನಡೆ ಸುಗಮವಾಗುತ್ತದೆ.
ಹಿರಿಯ ವೇಷಧಾರಿಗಳ ನಾಟ್ಯಾಭಿನಯಪೂರ್ವಕ ಮಾತಿನಲ್ಲಿ ಕಾವ್ಯವನ್ನು ಕಾಣಬಹುದು. ಹಾಗೆಯೇ ತಾಳಮದ್ದಳೆಗಳ ಹಿರಿಯ ಅರ್ಥಧಾರಿಗಳ ಮಾತುಗಳಲ್ಲಿ ಭಾಷೆ ಹುಲ್ಲಿನಲ್ಲಿ ಹರಿವ ಹಾವಿನಂತೆ ಮೌನಸೂಕ್ಷ್ಮವಾಗಿರುತ್ತದೆ. ಕೆಲವಾದರೂ ಅರ್ಥಧಾರಿಗಳ ಪ್ರತಿಭೆ, ಪಾಂಡಿತ್ಯಗಳು ಅಸಾಧಾರಣವೆಂಬತ್ತಿವೆ. ಇವರೆಲ್ಲ ಪಾತ್ರ ಮತ್ತು ಭಾಷೆಗಳ ಗೌರವವನ್ನು ಕಾಪಾಡುತ್ತಿದ್ದರು. ಒಂದು ಪದದಲ್ಲಿ ಹೇಳಬಹುದಾದ್ದಕ್ಕೆ ಎರಡು ಪದಗಳನ್ನು ಬಳಸುತ್ತಿದ್ದದ್ದು ಅಪರೂಪ. ಕೆಲವೊಮ್ಮೆ ಪಾತ್ರ ವೈಭವವು ವಿವಾದಕ್ಕೆ ತಿರುಗಿದಾಗ ಇಬ್ಬರಲ್ಲೊಬ್ಬರು ಮಾತನ್ನು ಕಥಾಮುಖಕ್ಕೆ ಎಳೆದುತರುತ್ತಿದ್ದರು. ಅಂದರೆ ಯಕ್ಷಗಾನವು ಒಂದು ಸಂಸ್ಕೃತಿ ಮತ್ತು ಕಲಾವಿದರು ಅದರ ಅನಭಿಷಿಕ್ತ ಪ್ರತಿನಿಧಿಗಳು ಎಂಬುದನ್ನು ನೆನಪಿಸುತ್ತಿದ್ದರು.
ಯಕ್ಷಗಾನದಲ್ಲಿ ಹಾಸ್ಯವೆಂಬುದು ಹಾಸುಹೊಕ್ಕಾಗಿರುವುದು ಅದರ ಮನೋರಂಜಕ ಅಗತ್ಯಕ್ಕೆಂದೇ ತಿಳಿದಿದ್ದೇನೆ. ಉತ್ತರಕುಮಾರನಂತಹ ಪಾತ್ರವಿರುವ ಪ್ರಸಂಗದಲ್ಲಿ ಪ್ರತ್ಯೇಕವಾದ ಹಾಸ್ಯಪಾತ್ರ ನಿಜಕ್ಕೂ ಅಗತ್ಯವಿರುವುದಿಲ್ಲವಾದರೂ ಅಲ್ಲೂ ಒಬ್ಬ ವಿದೂಷಕನಿರುತ್ತಾನೆ. ಹಾಸ್ಯವಿಲ್ಲದೆ ಯಕ್ಷಗಾನ ಬಯಲಾಟವಂತೂ ಇಲ್ಲ. ನಟನೆ, ಕುಣಿತ, ಭಾವ ಎಲ್ಲವೂ ನಗಿಸುವುದನ್ನೇ ಗುರಿಯಾಗಿಸಿಕೊಂಡಿರುತ್ತವೆ. ತಾಳಮದ್ದಳೆಯಲ್ಲಿ ಇದನ್ನು ಇತರ ಪಾತ್ರಗಳು ಮಾತಿನ ವೈಖರಿಯಲ್ಲಿ ಸಮದೂಗಿಸುತ್ತಾರೆ. ತಿಳಿಹಾಸ್ಯದ ಅಂಗದ, ಉತ್ತರಕುಮಾರ ಮುಂತಾದ ಪಾತ್ರಗಳು ಗಾಂಭೀರ್ಯದೊಂದಿಗೆ ಹಾಸ್ಯಸುಧೆಯನ್ನು ಸುರಿಸುತ್ತವೆ. ಮಾತೆಂದರೆ ಹಾಸ್ಯಾಸ್ಪದವಾಗದ, ನಗೆಪಾಟಲಾಗದ, ಗಾಂಭೀರ್ಯವನ್ನೂ ಕಥಾಪ್ರಸ್ತುತತೆಯನ್ನೂ ಕಳೆದುಕೊಳ್ಳದೆ ನಗುಬರಿಸುವ ಸಾಂದರ್ಭಿಕ ಚಿತ್ರಣ; ಅಪಹಾಸ್ಯವಲ್ಲ. ಪ್ರತಿಭಾವಂತರಿಂದ ಮಾತ್ರ ಇದು ಸಾಧ್ಯ.
ಯಕ್ಷಗಾನದ ಮೌಲ್ಯಗಳು ಕುಸಿಯುತ್ತಿವೆ ಅಥವಾ ಶಿಥಿಲವಾಗುತ್ತಿವೆಯೆಂಬುದು ಈಗ ಕೇಳಿಬರುತ್ತಿರುವ ಸಾಮಾನ್ಯ ಟೀಕೆ. ಮಾತಿನ ಬಗ್ಗೆ ಮಾತ್ರ ಚರ್ಚೆಯನ್ನು ಇಲ್ಲಿ ಕೇಂದ್ರೀಕರಿಸಿರುವುದರಿಂದ, ಮಾತಿನ ಶಾಸ್ತ್ರೀಯತೆ ಇಲ್ಲಿ ಗೌಣವಾಗಿರುವುದರಿಂದ, ಇತರ ಅಂಗೋಪಾಂಗಗಳನ್ನು ವಿವರಿಸುತ್ತಿಲ್ಲ.
ಮಾತುಗಾರಿಕೆ ಹಾದಿ ತಪ್ಪುತ್ತಿದೆಯೇ? ಇದನ್ನು ಸಾಮಾನ್ಯೀಕರಿಸುವುದು ತಪ್ಪಾಗುತ್ತದೆ. ಒಳ್ಳೆಯ ಮಾತುಗಾರಿಕೆ ಅಂದೂ ಇತ್ತು; ಇಂದೂ ಇದೆ. ಆದರೆ ಇಂದು ಯಕ್ಷಗಾನ ಹಾದಿತಪ್ಪಿದೆಯೆಂದರೆ ಅದು ತಪ್ಪಿದ್ದಲ್ಲ, ತಪ್ಪಿದ್ದು ನಾವು, ಕಲಾವಿದರು ಮತ್ತು ವೀಕ್ಷಕರು. ನಮ್ಮ ಜಾಯಮಾನಕ್ಕೆ, ಚಿಂತೆ-ಚಿಂತನೆಗೆ ಯಕ್ಷಗಾನವನ್ನು ಒಗ್ಗಿಸಿದಾಗ, ಬಗ್ಗಿಸಿದಾಗ, ಅದು ತನ್ನ ಲಕ್ಷಣಗಳನ್ನು ಸ್ವಲ್ಪಮಟ್ಟಿಗಾದರೂ ಕಳೆದುಕೊಳ್ಳುತ್ತದೆ. ಒಂದೇ ಅರ್ಥ, ಭಾವಗಳನ್ನೊಳಗೊಳ್ಳುವ ಹತ್ತಾರು ಪದಗಳು ಸಮಾನಾರ್ಥಕೋಶವಾಗುವುದಲ್ಲದೆ ಭಾಷಾನೈಪುಣ್ಯವಾಗುವುದಿಲ್ಲ. ವಾಕ್ಚಾತುರ್ಯದಲ್ಲಿ ಎದುರಾಳಿಯ ಮಾತಿನ ವೇಗವನ್ನೂ ಓಘವನ್ನೂ ತಡೆಗಟ್ಟಿದರೆ ಅದು ಪಾತ್ರಧಾರಿಯ ವೈಯಕ್ತಿಕ ಗೆಲುವಾಗಬಹುದೇ ಹೊರತು ಪಾತ್ರದ ಗೆಲುವಾಗುವುದಿಲ್ಲ. ಅನ್ವೇಷಕ ಸೃಜನಶೀಲನೊಬ್ಬ ಪರಂಪರೆಯೊಳಗಿನಿಂದಲೇ ಮತ್ತು ಕೆಲವು ಬಾರಿ ಅನೇಕ ಹಿರಿಯ ಪಾತ್ರಧಾರಿಗಳೂ ಸಮಯೋಚಿತವೆಂಬಂತೆ ವರ್ತಮಾನದ ಉದಾಹರಣೆಗಳನ್ನು ಪ್ರಸ್ತುತಪಡಿಸುತ್ತಾರೆ. ಅದು ಪ್ರೇಕ್ಷಕರಿಗೆ ಇಷ್ಟವಾಗುವುದು, ಯಕ್ಷಗಾನಕ್ಕೆ ಇಷ್ಟವಾಗುವುದು ಬೇರೆ.
ಯಕ್ಷಗಾನದಲ್ಲಿ ಶೃಂಗಾರರಸವನ್ನು ಶೃಂಗರಿಸಿ ಬಳಸುವುದರಲ್ಲಿ ಸುಖವಿದೆ. ಆದರೆ ದ್ವಂದ್ವಾರ್ಥದಲ್ಲಿ ಬಳಸಿ ಅಶ್ಲೀಲವಾಗಿಸುವುದು ಜನಪದವಾಗಿಸುವುದಿಲ್ಲ; ಬದಲಾಗಿ ಲಜ್ಜಾಹೀನತೆಯ ಮೂಲಕ ಬತ್ತಲಾಗಿಸುತ್ತದೆ. ಹಾಸ್ಯಪಾತ್ರಗಳಂತೂ ಜನ್ಮಸಿದ್ಧ ಹಕ್ಕೆಂಬಂತೆ ಇವನ್ನು ಮಾರಾಟಕ್ಕಿಡುತ್ತಾರೆ. ನಮ್ಮ ಸಮಾಜದಲ್ಲಿ ಇನ್ನೂ ಉಳಿದಿರಬಹುದಾದ ಸಾರ್ವಜನಿಕ ಮರ್ಯಾದೆಯನ್ನು ಮೂರಾಬಟ್ಟೆಗಿಳಿಸಿ ಅವಮಾನಿಸುವುದು ಯಕ್ಷ (ಗಾನ) ದೇವತೆಗೆ ಇಷ್ಟವಾಗಲಾರದು.
ಯಕ್ಷಗಾನದಲ್ಲಿ ಜಾತಿ-ಮತ-ಧರ್ಮಗಳನ್ನು ಮೀರಿದ ಕಲೆ ಮತ್ತು ಕಲಾವಿದರಷ್ಟೇ ಮುಖ್ಯ. ಕೂದಲೆಳೆ ಸೀಳಿದಂತೆ ಅಲ್ಲಿ ಜಾತೀಯವಾದ, ಮತೀಯವಾದ ಭಾವನೆ, ವಿಚಾರಗಳಿಗೆ ಪ್ರಾಧಾನ್ಯವಿಲ್ಲ, ಇರಕೂಡದು. ವಿಚಾರಶೀಲತೆಯ ಹೆಸರಿನಲ್ಲಿ ಯಕ್ಷಗಾನವನ್ನು ಮನತಣಿಸುವ, ವಿವೇಕವನ್ನು ಜಾಗೃತಗೊಳಿಸುವ, ಕಲೆಯಾಗಿ ಕಾಣುವ ಬದಲು ಶೋಷಣೆ, ದಬ್ಬಾಳಿಕೆಗಳ ಅಥವಾ ಅದಕ್ಕೆ ವಿರೋಧವಾದ, ಕ್ಷೇತ್ರವಾಗಿ ಕಾಣುವುದು ಆಕ್ಷೇಪಾರ್ಹ. ಇವೆಲ್ಲ ಯಕ್ಷಗಾನವೆಂಬ ಬೃಹತ್ ರಂಗಸ್ಥಳದಲ್ಲಿ ಕಾಣಕೂಡದು. ಅಲ್ಲಿ ಬುದ್ಧಿಭಾವಗಳ ಸಮ್ಯಕ್ದರ್ಶನದ ಪ್ರಕೃತಿ ಕಾಣಬೇಕು. ಈಚೀಚೆಗೆ ಇದಕ್ಕೆ ಬದಲಾಗಿ ಜಾತಿ-ಮತಗಳ ಹೊಗಳಿಕೆ-ತೆಗಳಿಕೆ ವಿಜೃಂಭಿಸುವುದನ್ನೂ ಕಾಣಬಹುದು. ಹೀಗಾದರೆ ಇನ್ನು ಬಪ್ಪಬ್ಯಾರಿ-ಉಸ್ಮಾನ್ ಬ್ಯಾರಿಗಳಿಗೆ ಯಕ್ಷಗಾನದ ರಂಗಮಂಚವನ್ನು ಹತ್ತುವುದು ಅಸಾಧ್ಯವಾಗಬಹುದು. ದೈವಗಳು, ಭೂತಗಳು ಕೃತಿಸ್ವಾಮ್ಯ ಮಾತ್ರವಲ್ಲ ಏಕಸ್ವಾಮ್ಯದ ಕಾನೂನು ಪ್ರಕ್ರಿಯೆಗಳಿಗೆ ತುತ್ತಾಗಬಹುದು.
ಯಕ್ಷಗಾನದ ಮಾತೆಂದರೆ ಗಂಧರ್ವಲೋಕದ ಹಾಡುಪಾಡು. ಅದನ್ನು ಭೂಮಿಗಿಳಿಸಿ ಇನ್ನೊಂದು ಲೋಕದ ಬದುಕು ಬಿನ್ನಾಣಗಳನ್ನು ಚಿತ್ರಿಸುವಾಗ ನಾವು ಆ ಎತ್ತರಕ್ಕೆ ಏರಬೇಕು ಮತ್ತು ನೋಟಕರನ್ನು, ಕೇಳುಗರನ್ನು ಅಲ್ಲಿಗೆ ಎತ್ತರಿಸಬೇಕು. ಹೋಗಲಿ, ನೆಲದಲ್ಲಿದ್ದರೂ ಚಿಂತೆಯಿಲ್ಲ. ಪ್ರಪಾತಕ್ಕಿಳಿಸಬಾರದು. ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಒಳ್ಳೆಯದು ಹರಿದಾಡುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಕೇಡು ಹರಿದಾಡುತ್ತಿದೆ. ಅನೇಕ ಕಲಾವಿದರು ಜನಪ್ರಿಯತೆಯ ಭ್ರಮೆಯಲ್ಲಿ ಆತ್ಮರತಿಗೆ ತುತ್ತಾಗುವುದರಲ್ಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಯಕ್ಷಗಾನವು ವ್ಯವಹರಿಸುತ್ತಿದೆಯೆನ್ನುವವರು ಈ ವ್ಯವಹಾರವು ಕಾಂಚಾಣವೈಭವಕ್ಕೆ ಬಲಿಯಾಗಬಾರದೆನ್ನುವ ಎಚ್ಚರವನ್ನು ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಯಕ್ಷಗಾನವನ್ನು ನೋಡುವುದು, ಕೇಳುವುದು ಸಭ್ಯರಿಂದ ದೂರವಾದ, ಗುಟ್ಟಾಗಿ ಮಾಡುವ, ವ್ಯವಹಾರವಾದೀತು. ಕೆಂಪು ದೀಪ ದೂರದಲ್ಲಿದ್ದರೂ ಸರಿಯೆ; ಹತ್ತಿರವಾದರೂ ಸರಿಯೆ; ಅಪಾಯ ಶತಸಿದ್ಧ. ಹಾಗಾಗದಂತೆ ಜಾಗರೂಕತೆ ವಹಿಸುವ ಕರ್ತವ್ಯ ಸಂಬಂಧಿಸಿದ ಎಲ್ಲರದ್ದು.
(ಮುಂಬಯಿ ಯಕ್ಷಗಾನ ಸಮ್ಮೇಳನ-2026ರ ಸವಿಸಂಪುಟ ‘ಯಕ್ಷಗಾನ ಮುಂಬೆಳಗು’ವಿನಲ್ಲಿ ಪ್ರಕಟವಾದ ಲೇಖನದ ಆಯ್ದ ಭಾಗ)
(ಅಂಕಣಕಾರರು ಸಾಹಿತಿ, ಹಿರಿಯ ವಕೀಲರು)






