Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ‘ಬನದ ಕರಡಿ’: ಸಾಹಿತ್ಯದ ಸಾಮಾಜಿಕ...

‘ಬನದ ಕರಡಿ’: ಸಾಹಿತ್ಯದ ಸಾಮಾಜಿಕ ಸಮೀಕ್ಷೆ

ಡಾ. ಎಚ್.ಎಸ್. ಅನುಪಮಾಡಾ. ಎಚ್.ಎಸ್. ಅನುಪಮಾ28 Oct 2025 12:27 PM IST
share
‘ಬನದ ಕರಡಿ’: ಸಾಹಿತ್ಯದ ಸಾಮಾಜಿಕ ಸಮೀಕ್ಷೆ

ಕೃತಿ: ಬನದ ಕರಡಿ ಮತ್ತು ಇತರ ಕಥೆಗಳು

ಲೇಖಕರು: ವಿನಯ ಗುಂಟೆ

ಮುಖಬೆಲೆ: 120 ರೂ.

ಪ್ರಕಾಶಕರು: ಕಾವ್ಯಮನೆ ಪ್ರಕಾಶನ,

ನಂ. 220, ‘ಶಿವನಿಲಯ’, ವೀರೇಂದ್ರ ಪಾಟೀಲ್ ಬಡಾವಣೆ, ಸೇಡಂ ರಸ್ತೆ, ಕಲಬುರ್ಗಿ-585105

ಮೊ: 8722039612

ಯುವಕವಿ ವಿನಯ ಗುಂಟೆ ಅವರ ಹತ್ತು ಕತೆಗಳಿರುವ ಸಂಕಲನ ‘ಬನದ ಕರಡಿ’. ಅದು ಈಗ ನಡೆಯುತ್ತಿರುವ ಸಾಮಾಜಿಕ ಸಮೀಕ್ಷೆ ಯಾಕೆ ಮುಖ್ಯ ಎಂದು ತೋರಿಸುವಂತೆ ವಾಸ್ತವ ಸಮಾಜದ ಚಿತ್ರಣವನ್ನು ಕಟ್ಟಿಕೊಟ್ಟಿರುವ ಉತ್ತಮ ಪುಸ್ತಕ. ತಮ್ಮ ಅನುಭವ ಲೋಕದ ಕಣ್ಣಿನಿಂದ ಬನದ ಕರಡಿಯ ಕಥಾಲೋಕ ಚಿತ್ರಿಸಿರುವ ವಿನಯ್, ಭರವಸೆಯ ಕತೆಗಾರರಾಗಿ ಹೊರ ಹೊಮ್ಮಿದ್ದಾರೆ. ನಯನಾಜೂಕು, ಹಿಂದೊಂದು ಮುಂದೊಂದು ಇಲ್ಲದೆ ಇದ್ದಿದ್ದನ್ನು ಇದ್ದಹಾಗೆಯೇ ಆಗಿಂದಾಗಲೇ ಮೋಕಳೀಕ ಮಾಡುವ ಅಂಚಿನಲ್ಲಿ ನಿಂತವರ ಹರಿತ ವಾಸ್ತವಪ್ರಜ್ಞೆಯ ಮಾತುಗಳಿಂದ ಓದುವವರ ಕಣ್ತೆರೆಸಿದ್ದಾರೆ.

ಜಾತಿ ಹಿಡಿದೇ ಹಂಗಿಸುವ, ಬಯ್ಯುವ, ಕಸಿಯುವ, ಕಡಿಯುವ ಸಂದರ್ಭಗಳು ಎಷ್ಟೆಲ್ಲ ವೇಷಗಳಲ್ಲಿ, ಸಂದರ್ಭಗಳಲ್ಲಿ ಬರಬಹುದು ಎಂದು ತೋರಿಸಿಕೊಟ್ಟಿರುವ ಈ ಸಂಕಲನದ ಕತೆಗಳು, ತರತಮ ಪ್ರಜ್ಞೆಯನ್ನೇ ಉಸಿರಾಡುವ ಭಾರತೀಯರ ಸಾಮಾಜಿಕ, ಸಾಂಸ್ಕೃತಿಕ, ಭಾವುಕ ಲೋಕಗಳ ಅನಾವರಣ ಮಾಡುತ್ತವೆ. ಹೆಡ್‌ಮಾಷ್ಟ್ರೇ ಇರಲಿ, ಕಲಾಯಿ ಮಾಡುವವರೇ ಇರಲಿ, ಊರ ‘ದೊಡ್ಡ ಜಾತಿ’ಯ ಜನರೇ ಆಗಿರಲಿ - ದಿನದ ಇಪ್ಪತ್ನಾಲ್ಕು ಗಂಟೆಯೂ ಅವರ ಧಮನಿಗಳಲ್ಲಿ ಹರಿಯುವುದು ಜಾತಿ ತಾರತಮ್ಯವೆಂಬ ನಂಜೇ ಹೊರತು ಮನುಷ್ಯಪ್ರೇಮವೆಂಬ ನೆತ್ತರಲ್ಲ ಎನಿಸಿಬಿಡುವಂತೆ ‘ಬನದ ಕರಡಿ’ಯ ಕಥಾಲೋಕವಿದೆ. ಅಸ್ಪಶ್ಯರೆನಿಸಿಕೊಂಡ ಸಮುದಾಯವನ್ನೂ ತರತಮ ಜಾತಿಪ್ರಜ್ಞೆ ಆವರಿಸಿರುವುದನ್ನು ದೊಕ್ಲೋರ ತಿಮ್ಮಿಯನ್ನು ತುಚ್ಛವಾಗಿ ಕಾಣುವ ‘ಉಪ್ಪರಿಗೆ ದೇವರು’ ಕತೆ ಎತ್ತಿ ತೋರಿಸುತ್ತದೆ. ಜಾತಿ, ಧರ್ಮದ ಗೋಡೆಗಳ ನಡುವೆಯೂ ಅಲ್ಲಿಲ್ಲಿ ನುಸುಳುವ ಕೇವಲ ಮಾನವೀಯತೆಯ ಸೆಳಕುಗಳು ಮಿಂಚಿನಂತೆ ಬೆಳಕು ಸೂಸುತ್ತವೆ. ಉಪ್ಪರಿಗೆ ದೇವರು, ಬನದ ಕರಡಿ, ತೋಪಿ ಮತ್ತು ತಟ್ಟೆ, ಅಪ್ಪನ ಚಪ್ಪಲಿ ಕತೆಗಳು ಎದೆಯಾಳದಲ್ಲಿ ಕುಳಿತುಬಿಡುತ್ತವೆ. ಮುನ್ನುಡಿ ಬರೆದ ಚ. ಹ. ರಘುನಾಥ ಗುರುತಿಸಿರುವಂತೆ ‘ಕ್ರಾಸ್ ಚೆಕ್’ ಕತೆಯು ತೇಜಸ್ವಿಯವರ ‘ತಬರನ ಕತೆ’ಯ ಆಧುನಿಕ ಆವೃತ್ತಿಯಂತೆ ಭಾಸವಾಗುತ್ತದೆ. ಕ್ರಾಸ್ ಚೆಕ್, ಸಿರಿ, ಸಪ್ನೀರು ಕತೆಗಳ ಹಸಿವಿನ ಲೋಕ ಆಳದ ವಿಷಾದ ಹುಟ್ಟಿಸಿ ಈಗಲೂ ಇನ್ನೂ ಹೀಗಿದೆಯೇ ಎಂದು ಕಂಗಾಲು ಮಾಡಿಬಿಡುತ್ತದೆ.

ಭಾಷೆ, ವಸ್ತು, ನಿರೂಪಣೆ, ಪಾತ್ರ ಪೋಷಣೆ, ಜೀವಅಜೀವ ಪರಿಸರದ ಚಿತ್ರಣ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿರುವ ಸಂಕಲನ ಇದು. ಕಡಜ, ಗುಬ್ಬಿ, ಬೂದುಗ ಮರ, ಸಿಡಿಲು, ಮಿಂಚು, ಅಮವಾಸ್ಯೆಯ ಕತ್ತಲೆ, ಬೀಡಿ, ಬಾಡು, ಎಣ್ಣೆ, ಬಿಕ್ಕೆಹಣ್ಣೇ ಮೊದಲಾಗಿ ಗ್ರಾಮೀಣ ಜೀವಲೋಕ ಸಂಪದ್ಭರಿತವಾಗಿ ಮೈದಳೆದಿದೆ. ‘ಬೆಂಕಿರೋಗಕ್ಕೆ ತುತ್ತಾದ ಅಡಕೆ ಮರದಂತೆ ಕಾಣ್ತಿದ್ದಳು’; ‘ಅಂದು ಅಮಾವಾಸ್ಯೆಯಾದ ಕಾರಣ ತಿಂಗಳಿಂದ ಗುಡಿಸಿಲೊಳಗೇ ಇರುತ್ತಿದ್ದ ಲೋಕದ ಅಷ್ಟೂ ಕತ್ತಲು ಹೊರಸಂಚಾರ ಹೊರಟಂತಿತ್ತು’; ‘ಹೆಂಗೋ ಬೆಳೆದ್ವಿ, ತಿಪ್ಪೇಲಿದ್ದ ಕುಂಬ್ಳದಂಗೆ’ ಮುಂತಾದ ಉಪಮೆ, ರೂಪಕಗಳ ಗ್ರಾಮೀಣ ಭಾಷೆಯು ಸಹಜವಾಗಿ ಮೈದುಂಬಿಕೊಂಡಿದ್ದು ಕತೆಗಳಿಗೆ ಹೊಸತನದ ಉಸಿರು ತುಂಬಿದೆ. ಇಲ್ಲಿರುವ ಅವ್ವೆಯರು, ಅಜ್ಜಿಯರು ಬಳಸುವ ಬೈಗುಳದ, ಕೋಪದ ಭಾಷೆ ಬಲು ಚೇತೋಹಾರಿಯಾಗಿದೆ. (‘ಊರುಸಾಬ್ರಿ ಕಟ್ಕಂಡು ತಲ್ಡ್ ಮ್ಯಾಲೆ ಮಣ್ಣಾಕಂಡ್ ಹೋದ’; ‘ನಿನ್ನ ತಟ್ಟೇನ ಅದ್ಯಾವ ಬೇವರ್ಸಿ ಕದ್ಕಂಣ್ಣೋ? ಅವ್ನ ಮಕ್ಕೆ ನನಪ್ನ ಸ್ಯಾಟ ಸಿಗಾಕ..!) ಮುಂತಾದ ಈ ಮೊದಲು ಕೇಳಿರದಿದ್ದ ‘ಸಾಪ್ನೆ’ಯ ಮಾತುಗಳು ನಕ್ಕು ಸುಸ್ತಾಗುವಂತೆ ಮಾಡುತ್ತವೆ.

ಬೋಟಿ, ಪೀಲ, ತೋಪಿ, ದುಬ್ಬಿ, ರಾಮಿ, ಪಾಪಿ, ಮಾರ, ಮೂಗ ಮುಂತಾಗಿ ಕತೆಗಳಲ್ಲಿ ಬರುವ ಹೆಸರುಗಳೂ ವಿಶಿಷ್ಟವಾಗಿವೆ. ಒಂದು ಕತೆಯಲ್ಲಿ ಬರುವ ಕೆಲ ಹೆಸರುಗಳನ್ನು ಉಲ್ಲೇಖಿಸುವುದಾದರೆ ‘ಉಪ್ಪರಿಗೆ ದೇವರು’ ಕತೆಯ ಗಂಡಸರ ಹೆಸರುಗಳಿವು: ಕಂಬಹನುಮ, ಗಂಗಹನುಮ, ಮುತ್ತಹನುಮ, ಚಿಕ್ಕಹನುಮ, ದೊಡ್ಡಹನುಮ, ಚೆನ್ನಹನುಮ, ವೆಂಕಟಹನುಮ. ಬರೆವಾಗ ಮತ್ತು ಕರೆಯುವಾಗ ಇಲ್ಲಿನ ‘ಹ’ ಲಯವಾಗುತ್ತವೆ. ಹೆಸರು ಮತ್ತದನ್ನು ಇಟ್ಟ/ಕರೆಯುವ ಕಾರಣಗಳನ್ನೂ ಕೊಟ್ಟಿರುವುದರಿಂದ ಆ ಪರಿಸರದ ಅಸಲಿ ಚಿತ್ರಣ ಸಿಗುತ್ತದೆ.

ಸಂಕಲನದ ಶೀರ್ಷಿಕೆ ಕತೆ ‘ಬನದ ಕರಡಿ’ ತನ್ನ ಹೆಸರಿನ ಕಾರಣದಿಂದ ಲಂಕೇಶರ ಅವ್ವನನ್ನು ನೆನಪಿಸಿದರೆ ಲೇಖಕರ ತಪ್ಪಲ್ಲ. ಅದು ನಮ್ಮ ಕಲ್ಪನೆಯ ಬಡತನ. ಬನದ ಕರಡಿ ಕತೆಯ ಅಮ್ಮ ಮಕ್ಕಳಿಗೆ ತಲೆನೋವಾದ, ಕೆರೆಗೆ ಬಿದ್ದವಳ ಜೀವ ತೆಗೆಯಬಾರದಿತ್ತಾ ಎಂದು ಕೆರೆಯನ್ನೇ ಶಪಿಸುವಷ್ಟು ಮಕ್ಕಳಿಗೆ ರೇಜಿಗೆ ಹುಟ್ಟಿಸಿರುವ ಅಮ್ಮ. ಕಟುಮನದ, ಕಟು ಮಾತಿನ ಕುಡುಕಿ. ಆದರೆ ಅದಕ್ಕೆ ಕಾರಣ ಕೊಡಲಾಗಿದೆ. ಆ ಕಾರಣಗಳು ಅವಳ ಕಟುಕತನಕ್ಕೆ ಸಮರ್ಥನೆ ಒದಗಿಸುವಂತಿವೆಯಾದರೂ ಒಪ್ಪಲು ಕಷ್ಟವಾಗುತ್ತದೆ.

ಬಹುತೇಕ ಕತೆಗಳು ಊಹಿಸಲಾರದ ಲೋಕವನ್ನು ಅನಾವರಣಗೊಳಿಸುತ್ತ ಆರಂಭವಾಗಿ ಅಚಾನಕ್ ತಿರುವು ಪಡೆದು ಓದುವವರ ಅರಳಿದ ಕಣ್ಣೊಳಗೆ ಮುಗಿತಾಯ ಕಾಣುತ್ತವೆ. ಎಂದರೆ ಇದು ಹೀಗೇ ಎಂದು ಮುಗಿತಾಯವಾಗದೆ ಓದುವವರ ಕಲ್ಪನೆಗೆ ಮುಕ್ತಾಯವನ್ನು ಬಿಡುತ್ತವೆ. ‘ಖಾಸ್‌ಬಾಗ್’ ಮತ್ತು ‘ಮೀಸೆ ಬಣ್ಣದ ಹುಡುಗ’ ಎಂಬ ಎರಡು ಕತೆಗಳಲ್ಲಿ ಮಾತ್ರ ಕತೆಗಾರರ ಆಶಯವು ಸ್ಪಷ್ಟವಾಗಿ ಮುನ್ನಡೆಯ ಚಿಂತನೆಯಾಗಿ ಕಾಣಿಸುತ್ತದೆ. ಈ ಕತೆಗಳ ಮುಸ್ಲಿಮ್ ಮಹಿಳೆಯರು ಸ್ಥಾಪಿತ ಚೌಕಟ್ಟುಗಳ ಮೀರಿ ಪರಿಸ್ಥಿತಿ ನಿಭಾಯಿಸುತ್ತಾರೆ. ಆದರೆ ಮಿಕ್ಕ ಕತೆಗಳು ವಸ್ತುಸ್ಥಿತಿಯನ್ನು ತಿಳಿಸುತ್ತವೆಯೇ ಹೊರತು ಆಶಯದ ಹೊರದಾರಿ ಅಥವಾ ಬಿಡುಗಡೆಗಾಗಿನ ಪ್ರತಿರೋಧದ ಪ್ರಯತ್ನಗಳನ್ನು ಅಷ್ಟಾಗಿ ಕಾಣಿಸುವುದಿಲ್ಲ. ಹಾಗಾಗಿ ಲವಲವಿಕೆಯಿಂದ ಕತೆಗಳು ಓದಿಸಿಕೊಂಡರೂ ಆಶಯರೂಪದಲ್ಲಿ ಸ್ವಲ್ಪ ನಿರಾಶೆ ಮೂಡಿಸುತ್ತವೆ ಎನ್ನುವುದನ್ನು ಹೇಳದೆ ಇರಲಾಗದು. ಇಲ್ಲಿರುವ ಹೆಣ್ಣುಲೋಕ ಗಂಡನ ಬಳಿ ಮೈಮುರಿಯುವಂತೆ ಬಡಿತ ತಿನ್ನುವ, ಅನುಮಾನಕ್ಕೊಳಗಾಗುವ, ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದರೂ ಅದೊಂದು ವಿಷಯವೇ ಅಲ್ಲವೆಂಬಂತೆ ‘ಊಫಿಟ್’ ಕೇಳಲ್ಪಡುವ, ಕ್ಷಮಯಾ ಧರಿತ್ರಿಯರಾಗಿ ಮಾಮೂಲಿನಂತೆ ಚಿತ್ರಿಸಲ್ಪಡುವ ಲೋಕವೇ ಆಗಿದೆ. ಬನದ ಕರಡಿಯ ಪಾಪಮ್ಮ, ಖಾಸಬಾಗಿನ ಮಲ್ಲಿಕಾ, ಸಪ್ನೀರಿನ ಬೋಟಜ್ಜಿ ಮುಂತಾಗಿ ಕೆಲ ಮಹಿಳೆಯರು ಕಷ್ಟದ ಬೆಂಕಿಯನುಂಡು ಉಂಡು ತಾವೇ ಬೆಂಕಿಕೆಂಡವಾಗಿ ಬದಲಾಗಿ ಸುಡುವಷ್ಟಾಗಿದ್ದಾರೆ. ಸ್ವಾಯತ್ತರಾಗಿದ್ದಕ್ಕೆ ಬೆಲೆ ತೆತ್ತಿದ್ದಾರೆ. ಅದು ಬಿಟ್ಟರೆ ಬಹುತೇಕ ಹೆಣ್ಣುಜೀವಗಳು ಪೊರೆಯುವ, ಸೇವಿಸುವ, ಸೇವೆ ಮಾಡುವ ಪಾತ್ರಗಳಾಗೇ ಉಳಿದುಕೊಂಡಿದ್ದು ಅಮಾನವೀಯ ಅನ್ಯಾಯಕ್ಕೆ ಒಳಗಾಗಿ ಓದುವವರಲ್ಲಿ ಸಂಕಟ ಹುಟ್ಟಿಸುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ ಕಾವ್ಯಸಂಜೆ-ಕಾವ್ಯಮನೆಗಳ ಒತ್ತಾಸೆಗಳ ಜೊತೆಗೆ ಅರಳುತ್ತಿರುವ ವಿನಯ ಗುಂಟೆ ಎಂಬ ಕಥನ ಪ್ರತಿಭೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು ಭರವಸೆ ಮೂಡಿಸುತ್ತದೆ. ಮೊದಲ ಸಂಕಲನದ ಕತೆಗಳನ್ನೇ ನಾನಾ ನೆಲೆಗಳಿಂದ ಪರಿಶೀಲಿಸಲು ಸಾಧ್ಯವಾಗುವಷ್ಟು ಗಾಢ ವಿವರಗಳಿಂದ ಸಮೃದ್ಧಗೊಳಿಸಿದ್ದಾರೆ. ಅವರ ಸಂವೇದನೆಯು ಹೊಸ ದಿಗಂತಗಳತ್ತ ಕಥನ ಲೋಕವನ್ನು ವಿಸ್ತಾರಗೊಳಿಸಿಕೊಳ್ಳುವಷ್ಟು ಸಶಕ್ತವಾಗಿದೆ. ನಗರವಾಸಿಯಾಗಿರುವ ಹಳ್ಳಿಮನಸ್ಸಿನ ವಿನಯ ಗುಂಟೆ ತಮ್ಮ ಭಾವಲೋಕವನ್ನು ಮುಕ್ತವಾಗಿಟ್ಟುಕೊಳ್ಳಲಿ; ಹೊಸಹೊಸ ಪ್ರಯೋಗಗಳಿಗೆ ಅಕ್ಷರವನ್ನು, ಭಾಷೆಯನ್ನೂ ಒಡ್ಡಲಿ; ಆ ಮೂಲಕ ಈ ಕಾಲಕ್ಕೊಂದು ಸಾಕ್ಷಿಯೆನ್ನುವಂತೆ ಅವರ ಬರಹ ಮೂಡಲಿ ಎಂದು ಆಶಿಸುತ್ತೇನೆ.

ಕಾವ್ಯಮನೆ ಪ್ರಕಾಶನ ಹೊರತಂದಿರುವ ಪುಸ್ತಕವನ್ನು ಕೊಂಡು, ಓದಿ, ಚರ್ಚಿಸಿ ಯುವ ಪ್ರತಿಭೆಗೆ ಶುಭ ಹಾರೈಸೋಣವೇ?

share
ಡಾ. ಎಚ್.ಎಸ್. ಅನುಪಮಾ
ಡಾ. ಎಚ್.ಎಸ್. ಅನುಪಮಾ
Next Story
X