Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಹಸಿರು ಉಸಿರಿನ ನಡುವೆ ಅಕ್ಷರ ಬಿತ್ತಿದ...

ಹಸಿರು ಉಸಿರಿನ ನಡುವೆ ಅಕ್ಷರ ಬಿತ್ತಿದ ‘ನಿರಂಜನ’

ನಾ. ದಿವಾಕರನಾ. ದಿವಾಕರ28 Feb 2025 9:33 AM IST
share
ಹಸಿರು ಉಸಿರಿನ ನಡುವೆ ಅಕ್ಷರ ಬಿತ್ತಿದ ‘ನಿರಂಜನ’

ಆಧುನಿಕ ಕನ್ನಡ ಸಾಹಿತ್ಯದಲ್ಲಿ ನವೋದಯದಿಂದ ಸತ್ಯೋತ್ತರ ಯುಗದ ದಲಿತ-ಬಂಡಾಯ ಸಾಹಿತ್ಯದವರೆಗಿನ ಅಕ್ಷರ ಕೃಷಿಯನ್ನು ಗಮನಿಸುವಾಗ ಒಂದು ಹೆಸರು ನೆನಪಾಗಲೇಬೇಕೆಂದರೆ ಅದು ‘ನಿರಂಜನ’ ಎಂದೇ ಗುರುತಿಸಲ್ಪಡುವ ಕುಳಕುಂದ ಶಿವರಾಯರು.

ಸ್ವಾತಂತ್ರ್ಯೋತ್ತರ ಭಾರತದ ಕನ್ನಡ ಸಾಹಿತ್ಯ ಲೋಕದಲ್ಲಿ ಆರಂಭದ ದಿನಗಳಿಂದಲೂ ವ್ಯವಸ್ಥಿತವಾಗಿ ರೂಪುಗೊಂಡಿರುವ ‘ಸಾಹಿತ್ಯ ಕೂಟ’ದ ಒಂದು ಬೌದ್ಧಿಕ ಪರಂಪರೆಯಲ್ಲಿ ಸಾಹಿತ್ಯ ಪರಿಚಾರಕರೂ ಸಹ ತತ್ವ, ಸಿದ್ಧಾಂತ ಮತ್ತು ಸಾಮಾಜಿಕ ಅಸ್ಮಿತೆಗಳ ಚೌಕಟ್ಟಿನೊಳಗೆ ಬಂಧಿಸಲ್ಪಟ್ಟಿರುವುದನ್ನು ವಿಷಾದದಿಂದಲೇ ಗುರುತಿಸಬೇಕಿದೆ. ಕಳೆದ ಐದು ದಶಕಗಳಲ್ಲಿ ಜಾತಿ ಅಸ್ಮಿತೆಯೂ ಇದರ ಒಂದು ಭಾಗವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಈ ಕೂಟ ವ್ಯವಸ್ಥೆಯ ಒಂದು ಭಾಗವಾಗಿಯೇ ಕನ್ನಡದ ವಿಮರ್ಶಾ ಲೋಕವೂ ಸಹ ತನ್ನದೇ ಆದ ಬೇಲಿಗಳನ್ನು ನಿರ್ಮಿಸಿಕೊಂಡಿರುವುದೂ ಸತ್ಯ. ನವೋದಯ, ನವ್ಯ, ಬಂಡಾಯ-ದಲಿತ ಇತ್ಯಾದಿಗಳ ವರ್ಗೀಕರಣದ ನಡುವೆ ಪ್ರಧಾನವಾಗಿ ಕೇಳಿಬರದ ಒಂದು ಸಾಹಿತ್ಯ ಪ್ರಕಾರ ಎಂದರೆ ಪ್ರಗತಿಶೀಲ ಸಾಹಿತ್ಯ. ಆದರೂ ಒಂದು ಚಳುವಳಿಯ ರೂಪದ ಪ್ರಗತಿಶೀಲ ಸಾಹಿತ್ಯ ಕೆಲವೇ ಸಾಹಿತಿಗಳ ಮೂಲಕ ಅಂದಿನ ಸಮಾಜದಲ್ಲಿನ ತಲ್ಲಣಗಳಿಗೆ, ಆತಂಕಗಳಿಗೆ ಸ್ಪಂದಿಸಿದ್ದನ್ನು ಮರೆಮಾಚಲಾಗುವುದಿಲ್ಲ. ಬಸವರಾಜ ಕಟ್ಟಿಮನಿ, ಅನಕೃ, ಚದುರಂಗ, ಕುಮಾರ ವೆಂಕಣ್ಣ ಮುಂತಾದವರೊಡನೆ ಈ ಪ್ರಗತಿಶೀಲ ವಾತಾವರಣದಲ್ಲಿ ಪ್ರಧಾನವಾಗಿ ಕಾಣುವುದು ಕುಳಕುಂದ ಶಿವರಾಯರು, ಅಂದರೆ ‘ನಿರಂಜನ’ರು.

ತಮ್ಮ ‘ನಿರಂಜನ’ ಕಾವ್ಯನಾಮದಿಂದಲೇ ಪ್ರಸಿದ್ಧರಾದ ಶಿವರಾಯರನ್ನು ಒಂದು ನಿರ್ದಿಷ್ಟ ಕಾಲಘಟ್ಟದ ಸಾಹಿತ್ಯಕ ಪ್ರಕಾರಕ್ಕೆ ಅಥವಾ ಚಳವಳಿಗೆ ಕಟ್ಟಿಹಾಕುವುದು ತಪ್ಪಾಗುತ್ತದೆ. ಅಂದಿನ ಸನ್ನಿವೇಶದಲ್ಲಿ ಸಮತಾವಾದ ಅಥವಾ ಮಾರ್ಕ್ಸ್‌ವಾದದ ಚಿಂತನೆಗಳಿಗೆ ಮುಕ್ತವಾಗಿ ತೆರೆದುಕೊಂಡಿದ್ದೇ ಅಲ್ಲದೆ, ಅದೇ ಸೈದ್ಧಾಂತಿಕ ಚೌಕಟ್ಟಿನೊಳಗೆ ಭಾರತದ ಸಮಸ್ತ ಶ್ರಮಜೀವಿ ವರ್ಗಗಳತ್ತ ನೋಡುವ ಒಂದು ಸಾಹಿತ್ಯಕ ದೃಷ್ಟಿಕೋನವನ್ನು ಬೆಳೆಸಿದವರಲ್ಲಿ ನಿರಂಜನ ಮುಂಚೂಣಿಯಲ್ಲಿ ಕಾಣುತ್ತಾರೆ. ಬಸವರಾಜ ಕಟ್ಟಿಮನಿ ನಗರ ಕೇಂದ್ರಿತ ಶ್ರಮಿಕರತ್ತ ಗಮನಹರಿಸಿದಂತೆ ನಿರಂಜನ ಹಳ್ಳಿಗಾಡಿನ ರೈತ ಬಾಂಧವರೆಡೆಗೆ ತಮ್ಮ ಅಕ್ಷರ ಕೃಷಿಯನ್ನು ಕೊಂಡೊಯ್ಯುತ್ತಾರೆ. ಸ್ವಾತಂತ್ರ್ಯ ಸಂಗ್ರಾಮವನ್ನು ಮತ್ತು ಆನಂತರದ ಸಮಾಜವನ್ನು ತಳಸಮಾಜದ ನಡುವೆ ನಿಂತು ನೋಡುವ ಒಂದು ಚಿಂತನಾ ಕ್ರಮವನ್ನು ನಿರಂಜನರ ಸಾಹಿತ್ಯದಲ್ಲಿ ಗುರುತಿಸಬಹುದು.

ಸೃಜನಶೀಲ ಕ್ರಾಂತಿಯ ದನಿ

ತಮ್ಮ ಸಾಹಿತ್ಯಕ ಸೃಜನಶೀಲತೆಯನ್ನು ಸಮಾಜ ಮುಖಿಯಾಗಿಸುತ್ತಲೇ 13ನೇ ವಯಸ್ಸಿನಿಂದಲೇ ಅಕ್ಷರ ಕೃಷಿಯನ್ನು ಆರಂಭಿಸಿದ ನಿರಂಜನರ ಸಾಹಿತ್ಯಕ ವೈವಿಧ್ಯ ಅಪಾರ. ಅನುವಾದ, ಕಥೆ, ಕಾದಂಬರಿ, ಚಾರಿತ್ರಿಕ ಕಥನ, ವಿಶ್ವಕೋಶ, ಸಂಪಾದನೆ ಹೀಗೆ ವಿಸ್ತರಿಸಿಕೊಳ್ಳುವ ನಿರಂಜನರು ಸಾಮಾನ್ಯವಾಗಿ ನೆನಪಾಗುವುದು ಅವರ ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕಾದಂಬರಿಗಳಿಂದ. ಮಾಕ್ಸಿಂ ಗೋರ್ಕಿ ಅವರ ‘ಮದರ್’ ಕಾದಂಬರಿಯನ್ನು ಕನ್ನಡಕ್ಕೆ ‘ತಾಯಿ’ ಹೆಸರಿನಲ್ಲಿ ಹೊರತಂದ ನಿರಂಜನರಿಗೆ ಸಮತಾವಾದ ಕೇವಲ ಬೌದ್ಧಿಕ ವಾಹಿನಿಯಾಗಿರಲಿಲ್ಲ. ಅದು ಭಾರತದ ಜನಸಾಮಾನ್ಯರ ನಿತ್ಯಬದುಕಿನಲ್ಲಿ ಕಾಣಬೇಕಾದ ಒಂದು ದರ್ಶನದಂತೆ ಭಾವಿಸಿದ್ದರು. ಈ ಕಾರಣಕ್ಕಾಗಿಯೇ ಅವರ ಕೃತಿಗಳಲ್ಲಿ ತಳಸಮುದಾಯಗಳ ಬದುಕು, ಸ್ವಾತಂತ್ರ್ಯ ಹೋರಾಟದ ವಿಭಿನ್ನ ಜನಾಂದೋಲನಗಳು, ಗ್ರಾಮೀಣ ಭಾರತದ ರೈತಾಪಿಯ ಜೀವನ ಇವೆಲ್ಲವೂ ಮೇಳೈಸುತ್ತವೆ. ಕನ್ನಡದ ವಿಮರ್ಶಾ ಲೋಕದ ಕಾಣ್ಕೆಗೆ ಗೋಚರಿಸದ ನಿರಂಜನರ ಸಾಹಿತ್ಯವನ್ನು ಭವಿಷ್ಯದ ತಲೆಮಾರಿಗಾದರೂ ದಾಟಿಸುವ ಗುರುತರ ಜವಾಬ್ದಾರಿ ವರ್ತಮಾನದ ಜವಾಬ್ದಾರಿ ಎನ್ನುವುದು ಸತ್ಯ.

ನಿರಂಜನರು ರಚಿಸಿದ ಈಜಿಪ್ಟ್ ಕ್ರಾಂತಿಯ ಸುತ್ತ ಹೆಣೆದ ‘ಮೃತ್ಯುಂಜಯ’, ಕಯ್ಯೂರು ಹುತಾತ್ಮರ ವೀರೋಚಿತ ಹೋರಾಟವನ್ನು ದಾಖಲಿಸುವ ‘ಚಿರಸ್ಮರಣೆ’, ಅಮರಸುಳ್ಯ ದಂಗೆಯ ವಿಭಿನ್ನ ಆಯಾಮಗಳನ್ನು ತೆರೆದಿಡುವ ‘ಸ್ವಾಮಿ ಅಪರಂಪಾರ’ ಮತ್ತು ‘ಕಲ್ಯಾಣ ಸ್ವಾಮಿ’ ಈ ಕೃತಿಗಳು ಸಾರ್ವಕಾಲಿಕ ಶ್ರೇಷ್ಠತೆಯನ್ನು ಹೊಂದಿದ್ದರೂ, ಇವುಗಳನ್ನು ವಿಮರ್ಶಾತ್ಮಕವಾಗಿ ನೋಡಿ, ವರ್ತಮಾನದ ಸಾಹಿತ್ಯ ಜಗತ್ತಿನಲ್ಲಿ ಚರ್ಚೆಗೊಳಪಡಿಸುವ ಕೆಲಸಗಳು ಆಗಬೇಕಿವೆ. ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎನ್ನುವುದು ವಾಸ್ತವ. ರೈತ ಚಳವಳಿಗಳನ್ನು ಈಗಲೂ ವಕ್ರದೃಷ್ಟಿಯಿಂದಲೇ ನೋಡುವ ಭಾರತದ ರಾಜಕೀಯ ಚಿಂತನೆಗಳ ನಡುವೆ, ಸ್ವಾತಂತ್ರ್ಯಪೂರ್ವದ ತೆಲಂಗಾಣ, ತೇಭಾಗದಿಂದ ಸ್ವಾತಂತ್ರ್ಯೋತ್ತರದ ರೈತ ಹೋರಾಟಗಳವರೆಗೂ ತಮ್ಮ ಒಳನೋಟಗಳನ್ನು ಸಾಹಿತ್ಯಕ ನೆಲೆಯಲ್ಲಿ ಬಿಟ್ಟುಹೋಗಿರುವುದು ನಿರಂಜನರ ಕ್ರಾಂತಿಕಾರಕ, ಜನಮುಖಿ ಚಹರೆಯನ್ನು ನಮಗೆ ಪರಿಚಯಿಸುತ್ತದೆ.

ಒಂದು ದಾಖಲಾರ್ಹ ಕೃತಿಯ ಮೂಲಕ

ಈ ದೃಷ್ಟಿಯಿಂದಲೇ ಸಮಕಾಲೀನ ರೈತ ಹೋರಾಟಗಳಲ್ಲಿ ಸಕ್ರಿಯವಾಗಿರುವ ಹಾಸನದ ಎಚ್. ಆರ್. ನವೀನ್ ಕುಮಾರ್ ಅವರು ತಮ್ಮ ‘ಕದನ ಕಣ’ದ ಮುಂದುವರಿಕೆಯಾಗಿ, ಕರ್ನಾಟಕದ ಅನ್ನದ ಕಣದಲ್ಲಿ ನಿರಂಜನ ಅವರ ‘ರೈತ ಮುಖಿ’ ಸಾಹಿತ್ಯವನ್ನು ಪರಿಚಯಿಸುವ ಮಹತ್ತರ ಪ್ರಯತ್ನವನ್ನು ಮಾಡಿದ್ದಾರೆ. ನಿರಂಜನರು ಪ್ರತಿನಿಧಿಸಿದ್ದ ‘ಪ್ರಗತಿಶೀಲ’ ಎಂಬ ಸಾಹಿತ್ಯ ಪ್ರಕಾರದೊಳಗೇ ಅವರಲ್ಲಿದ್ದ ರೈತಪರ ಕಾಳಜಿ ಮತ್ತು ರೈತರ ಬದುಕಿನ ಒಳಸುಳಿಗಳನ್ನು ನಿರಂಜನರ ಕಥೆಗಳು ಹೇಗೆ ವಿಭಿನ್ನ ಆಯಾಮಗಳಲ್ಲಿ ಬಿಂಬಿಸುತ್ತವೆ ಎನ್ನುವುದನ್ನು ಹೊರತೆಗೆಯಲು ನವೀನ್ ಕುಮಾರ್ ಪ್ರಯತ್ನಿಸಿದ್ದಾರೆ. ನವ ಉದಾರವಾದಿ ಆರ್ಥಿಕತೆಯಲ್ಲಿ ಭಾರತೀಯ ರೈತರು ಆಳ್ವಿಕೆಯೊಡನೆ ನಿರಂತರ ಸಂಘರ್ಷದಲ್ಲಿರುವ ಈ ಹೊತ್ತಿನಲ್ಲಿ, ನಿರಂಜನರ ಕಥೆಗಳಲ್ಲಿನ ಒಳನೋಟಗಳನ್ನು ವರ್ತಮಾನದಲ್ಲಿಟ್ಟು ನೋಡುವುದು ಅಗತ್ಯವೂ ಹೌದು.

ಈ ನೆಲೆಯಲ್ಲಿ ನವೀನ್ ಕುಮಾರ್ ಅವರ ಪ್ರಯತ್ನ ಶ್ಲಾಘನೀಯ-ಸ್ವಾಗತಾರ್ಹ. ಸುಮಾರು 150 ಪುಟಗಳ ಪುಟ್ಟ ಕೃತಿಯೊಳಗೆ ನಿರಂಜನರ ಕಥೆಗಳಲ್ಲಿ ಬರುವ ರೈತಾಪಿಯ ಬದುಕು, ವ್ಯಕ್ತಿತ್ವ ಹಾಗೂ ಸಾಮಾಜಿಕ-ಆರ್ಥಿಕ ಪರಿಸರವನ್ನು ಪರಿಚಯಿಸುವ ಕೆಲಸವನ್ನು ನವೀನ್ ಮಾಡಿದ್ದಾರೆ. ಈ ವೇಳೆಗಾಗಲೇ ವಿಮರ್ಶೆಗೊಳಗಾಗಬೇಕಾಗಿದ್ದ ಈ ಕಥೆಗಳನ್ನು ಮರು ಓದಿಗೆ ಒಪ್ಪಿಸುವ ಮೂಲಕ ನವೀನ್ ಕುಮಾರ್, ನಿರಂಜನರ ಸೈದ್ಧಾಂತಿಕ ಚಿಂತನಾಧಾರೆಯನ್ನೂ ಈ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ. ‘‘ರೈತರಿಗಾಗಿ ನಿರಂಜನ ಯಾಕೆ?’’ ಎಂಬ ಪ್ರವೇಶಿಕೆಯ ಮೂಲಕ ಆರಂಭಿಸುವ ನವೀನ್ ಕುಮಾರ್, ಈ ಅಧ್ಯಾಯದಲ್ಲೇ ನಿರಂಜನರ ಬಾಲ್ಯ ಮತ್ತು ಕಮ್ಯುನಿಸ್ಟ್ ಹೋರಾಟಗಳ ಹಿನ್ನೆಲೆ, ಭೂಗತ ಬದುಕು, ಅದರ ನಡುವೆ ನಡೆಸಿದ ಕೃಷಿ ಬೇಸಾಯ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅವರು ತೊಡಗಿಕೊಂಡ ಮಾರ್ಕ್ಸ್‌ವಾದಿ-ಜನಪರ ಆಂದೋಲನಗಳು ಇವೆಲ್ಲವನ್ನೂ ಪರಿಚಯಿಸಿರುವುದು, ಸಾಹಿತ್ಯಾಸಕ್ತರಿಗೆ ಮತ್ತು ಅಧ್ಯಯನಶೀಲ ಸಂಶೋಧಕರಿಗೆ ನೆರವಾಗುವಂತಿದೆ.

‘ಪ್ರಗತಿಶೀಲ’ ಎಂಬ ಕಡಿಮೆ ವ್ಯಾಪ್ತಿಯಿಂದ ದಾಟಿ ನೋಡಿದಾಗ ನಿರಂಜನ ನಮಗೆ ಕ್ರಾಂತಿಕಾರಿ ಸಾಹಿತಿ-ಬರಹಗಾರ-ಅಂಕಣಕಾರರಾಗಿ ಕಾಣಲು ಸಾಧ್ಯ. ಆದರೆ ಕನ್ನಡ ಸಾಹಿತ್ಯದಲ್ಲಿ ಈ ಒಂದು ‘ಪ್ರಕಾರ’ ಈವರೆಗೂ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲವಾದ್ದರಿಂದ, ದಲಿತ-ಬಂಡಾಯ ಸಂದರ್ಭದ ಕ್ರಾಂತಿಕಾರಿ ಸಾಹಿತ್ಯವೂ ಸಹ ‘ಬಂಡಾಯ’ ಎಂಬ ಬ್ರಾಕೆಟ್‌ನ ಒಳಗೇ ನಿರ್ವಚಿಸಲ್ಪಟ್ಟಿದೆ. ಇದು ನಿರಂಜನರ ಕಾಲಘಟ್ಟಕ್ಕೂ ಸತ್ಯ. ಸಹಜವಾಗಿಯೇ ನವೀನ್ ಕುಮಾರ್ ನಿರಂಜನರ ‘ಚಿರಸ್ಮರಣೆ’, ‘ಮೃತ್ಯುಂಜಯ’ ‘ಕಲ್ಯಾಣಸ್ವಾಮಿ-ಸ್ವಾಮಿ ಅಪರಂಪಾರ’ ಕೃತಿಗಳನ್ನು ಪರಿಚಯಿಸುವ ಮೂಲಕ ಈವರೆಗಿನ ಹೆಜ್ಜೆಗಳೊಂದಿಗೆ ಹೆಜ್ಜೆ ಹಾಕಿದ್ದಾರೆ. ಆದರೆ ನವೀನ್ ಕುಮಾರ್ ಅವರ ಈ ಕೃತಿ ಮುಖ್ಯವಾಗುವುದು ಇಲ್ಲಿ ಪ್ರಕಟಿಸಲಾಗಿರುವ ನಿರಂಜನರ ರೈತ ಕಥೆಗಳು ಮತ್ತು ಅವುಗಳ ಪ್ರಸ್ತುತತೆಗಾಗಿ.

ಎಚ್.ಆರ್. ನವೀನ್ ಕುಮಾರ್ ನಿರಂಜನರ ರೈತ ಕಥೆಗಳನ್ನು ಹೊರತೆಗೆದು ಓದುಗರ ಮುಂದಿಟ್ಟಿರುವುದು ಮಹತ್ವದ ಸಾಹಿತ್ಯಕ ಸೇವೆ. ನಾವು ನಿರಂಜನರನ್ನೇ ಇನ್ನೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳಬೇಕಿದೆ, ವಿಮರ್ಶಿಸಬೇಕಿದೆ, ಅವರೊಂದಿಗೆ ಸೈದ್ಧಾಂತಿಕವಾಗಿ ಮುಖಾಮುಖಿಯಾಗಬೇಕಿದೆ. ಇದು ಸ್ಥಾಪಿತ ಸಾಹಿತ್ಯ ವಲಯದಿಂದ ಆಗದೆ ಹೋದರೂ, ಸಾಮಾಜಿಕ ನೆಲೆಯಲ್ಲಿ ಯುವ ಸಮೂಹ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ. ಪರ್ವಕಾಲದಲ್ಲಿರುವ ವಿಕಸಿತ ಭಾರತಕ್ಕೆ ಇದು ಅತ್ಯವಶ್ಯವಾದ ಒಂದು ಹಾದಿಯೂ ಆಗಿದೆ. ಈ ನೆಲೆಯಲ್ಲಿ ನಿಂತಾಗ, ನವೀನ್ ಕುಮಾರ್ ಅವರ ‘ರೈತರಿಗಾಗಿ ನಿರಂಜನ’ ಪುಸ್ತಕವು ಒಂದು ಚಾರಿತ್ರಿಕ ದಾಖಲೆಯಾಗಿ ಉಳಿಯಲಿದೆ. ಇದನ್ನು ಹೋರಾಟ ನಿರತರಷ್ಟೇ ಅಲ್ಲದೆ, ಸಾಮಾಜಿಕ ಕಳಕಳಿ ಇರುವ, ಅನ್ಯಾಯಗಳ ವಿರುದ್ಧ ಹೋರಾಡುವ ಮನಸ್ಸಿರುವ ಪ್ರತೀ ವ್ಯಕ್ತಿಯೂ ಓದಬೇಕಿದೆ, ಚರ್ಚಿಸಬೇಕಿದೆ ಮತ್ತು ನಿರಂಜನರ ಚಿಂತನೆಗಳನ್ನು ಮುಂದೊಯ್ಯಬೇಕಿದೆ.

‘ರೈತರಿಗಾಗಿ ನಿರಂಜನ’ ಈ ದೃಷ್ಟಿಯಿಂದ ಒಂದು ಪ್ರಶಂಸಾರ್ಹ ಬೌದ್ಧಿಕ ಕ್ರಿಯೆ. ಯುವ ಲೇಖಕ ಎಚ್.ಆರ್. ನವೀನ್ ಕುಮಾರ್ ಅಭಿನಂದನಾರ್ಹರು.

share
ನಾ. ದಿವಾಕರ
ನಾ. ದಿವಾಕರ
Next Story
X