ಭಯೋತ್ಪಾದನೆ: ಸರ್ವಪಕ್ಷ ನಿಯೋಗ ವಿದೇಶದಲ್ಲಿ ಸಾಧಿಸಿದ್ದೇನು?

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರದ ಬಳಿಕ ಭಾರತವು ಐರೋಪ್ಯ ದೇಶಗಳಿಗೆ ಕಳುಹಿಸಿದ ಸರ್ವ ಪಕ್ಷ ನಿಯೋಗವು ‘ಭಯೋತ್ಪಾದನೆಯ ವಿರುದ್ಧ ಅವರನ್ನು ಜಾಗೃತಗೊಳಿಸಿ’ ವಾಪಸಾಗಿದೆ. ಫ್ರಾನ್ಸ್, ಇಟಲಿ, ಡೆನ್ಮಾರ್ಕ್, ಬ್ರಿಟನ್, ಬೆಲ್ಜಿಯಂ ಮತ್ತು ಜರ್ಮನಿಗೆ ಭೇಟಿ ನೀಡಿದ ಹಿರಿಯ ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್ ನೇತೃತ್ವದ ಸರ್ವಪಕ್ಷ ನಿಯೋಗವು ಭಾರತಕ್ಕೆ ಮರಳಿದ್ದು, ‘‘ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎನ್ನುವುದನ್ನು ನಾವು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದೇವೆ. ಇಂತಹ ಯಾವುದೇ ಕೃತ್ಯವನ್ನು ಯುದ್ಧ ಕೃತ್ಯ ಎಂದು ಪರಿಗಣಿಸಲಾಗುವುದು. ಈ ಸಂದೇಶವನ್ನು ಯುರೋಪಿನಾದ್ಯಂತ ನಮ್ಮ ಸಹವರ್ತಿಗಳಿಗೆ ದೃಢವಾಗಿ ತಿಳಿಸಿದ್ದೇವೆ ಮತ್ತು ಅಂತರ್ರಾಷ್ಟ್ರೀಯ ಸಮುದಾಯವು ಅದನ್ನು ಗಂಭೀರವಾಗಿ ಪರಿಗಣಿಸಿದೆ’’ ಎಂದು ಸುದ್ದಿಗಾರರಿಗೆ ತಿಳಿಸಿದೆ. ಆಪರೇಷನ್ ಸಿಂಧೂರದ ಬಳಿಕ ಇಂತಹದೊಂದು ನಿಯೋಗವನ್ನು ವಿದೇಶಗಳಿಗೆ ಕಳುಹಿಸುವ ಅನಿವಾರ್ಯ ಭಾರತಕ್ಕೆ ಯಾಕೆ ಸೃಷ್ಟಿಯಾಯಿತು ಎನ್ನುವುದು ಗುಟ್ಟಿನ ವಿಷಯವಾಗಿ ಉಳಿದಿಲ್ಲ. ಪಾಕಿಸ್ತಾನದ ಗಡಿಭಾಗದಲ್ಲಿರುವ ಭಯೋತ್ಪಾದಕ ನೆಲೆಗಳ ವಿರುದ್ಧ ಭಾರತ ನಡೆಸಿದ ಕಾರ್ಯಾಚರಣೆ ಅಂತಿಮವಾಗಿ ಉಭಯ ದೇಶಗಳ ನಡುವಿನ ಸಂಘರ್ಷವಾಗಿ ಸ್ಫೋಟಗೊಂಡಿತು. ಈ ಸಂದರ್ಭದಲ್ಲಿ ಭಯೋತ್ಪಾದನೆಯ ಕುರಿತಂತೆ ಸಮಾನ ಅಭಿಪ್ರಾಯವಿರುವ ದೇಶಗಳು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವೇಳೆ ಭಾರತದ ಜೊತೆಗೆ ನಿಲ್ಲಬೇಕಾಗಿತ್ತು. ಕನಿಷ್ಠ ಭಾರತಕ್ಕೆ ನೈತಿಕ ಬೆಂಬಲವನ್ನಾದರೂ ಈ ಸಂದರ್ಭದಲ್ಲಿ ಘೋಷಿಸಬೇಕಾಗಿತ್ತು. ಆದರೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವೇಳೆ ಭಾರತ ಒಂಟಿಯಾಗಿತ್ತು. ಅಷ್ಟೇ ಅಲ್ಲ, ಅಮೆರಿಕದ ಅಧ್ಯಕ್ಷರ ಒತ್ತಡದ ಕಾರಣಕ್ಕಾಗಿ ಕದನ ವಿರಾಮಕ್ಕೆ ತಲೆಬಾಗುವ ಅನಿವಾರ್ಯತೆ ಸೃಷ್ಟಿಯಾಯಿತು. ಇದನ್ನು ಭಾರತ ಒಪ್ಪದೇ ಇದ್ದರೂ, ಕದನ ವಿರಾಮದಲ್ಲಿ ತನ್ನ ಪಾತ್ರವಿದೆ ಎಂದು ಅಮೆರಿಕ ಈಗಾಗಲೇ ಹಲವು ಬಾರಿ ಹೇಳಿಕೆಗಳನ್ನು ನೀಡಿದೆ. ಆಪರೇಷನ್ ಸಿಂಧೂರದಲ್ಲಿ ಯಾರು ಗೆದ್ದರು? ಯಾರು ಸೋತರು? ಎನ್ನುವುದಕ್ಕಿಂತ, ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಜಗತ್ತು ಯಾರ ಜೊತೆಗಿತ್ತು ಎನ್ನುವುದು ಬಹು ಮುಖ್ಯವಾಗುತ್ತದೆ. ಅಮೆರಿಕ ಸೇರಿದಂತೆ ಯುರೋಪ್ ದೇಶಗಳ ಭಯೋತ್ಪಾದನಾ ವಿರೋಧಿ ಹೋರಾಟಗಳ ಸಂದರ್ಭಗಳಲ್ಲಿ ಅವುಗಳ ಜೊತೆಗೆ ಭಾರತ ಗಟ್ಟಿಯಾಗಿ ನಿಂತಿತ್ತು. ಆದರೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನಾ ದಾಳಿಯ ವಿರುದ್ಧ ಭಾರತ ತೆಗೆದುಕೊಂಡ ಕಠಿಣ ನಿರ್ಧಾರಗಳ ಜೊತೆಗೆ ಜಗತ್ತಿನ ಯಾವುದೇ ದೇಶಗಳು ನಿಲ್ಲಲಿಲ್ಲ. ಕಳೆದ ಒಂದು ದಶಕದ ಮೋದಿ ನೇತೃತ್ವದ ವಿದೇಶಾಂಗ ನೀತಿಯ ಅತಿ ದೊಡ್ಡ ವೈಫಲ್ಯ ಇದು. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸೇನೆ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದೆ. ಆದರೆ ಸರಕಾರ ಮಾತ್ರ ವಿಫಲವಾಗಿದೆ. ಈ ವೈಫಲ್ಯವನ್ನು ಸರಿದೂಗಿಸುವುದಕ್ಕಾಗಿ ಆತುರಾತುರವಾಗಿ ಭಯೋತ್ಪಾದನೆಯ ವಿರುದ್ಧ ಇತರ ದೇಶಗಳನ್ನು ಜಾಗೃತಗೊಳಿಸಲು ಸರ್ವಪಕ್ಷ ನಿಯೋಗವನ್ನು ರಚಿಸಿ ಕಳುಹಿಸಿತ್ತು.
ಸರ್ವಪಕ್ಷ ನಿಯೋಗದ ಹೊಣೆಗಾರಿಕೆ ಬಹುದೊಡ್ಡದಿತ್ತು. ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯ ಕುರಿತಂತೆ ಯುರೋಪ್ ಸೇರಿದಂತೆ ಪ್ರಬಲ ದೇಶಗಳನ್ನು ನಿದ್ರೆಯಿಂದ ಎಬ್ಬಿಸುವುದು ಇದರ ಕೆಲಸವಾಗಿತ್ತು. ಮುಖ್ಯವಾಗಿ ಈ ದೇಶಗಳು ಪಾಕಿಸ್ತಾನ ಭಯೋತ್ಪಾದನೆಯ ಬಗ್ಗೆ ನಿಜಕ್ಕೂ ನಿದ್ರಾವಸ್ಥೆಯಲ್ಲಿದೆಯೋ ಅಥವಾ ನಿದ್ರೆಯಲ್ಲಿದ್ದಂತೆ ನಟಿಸುತ್ತದೆಯೋ ಎನ್ನುವುದನ್ನು ಕಂಡುಕೊಳ್ಳಬೇಕಾಗಿತ್ತು. ನಿದ್ರೆಯಲ್ಲಿದ್ದರೆ ಎಚ್ಚರಿಸಬಹುದು, ಆದರೆ ನಿದ್ರೆಯಲ್ಲಿದ್ದಂತೆ ನಟಿಸುತ್ತಿದ್ದರೆ ಎಚ್ಚರಿಸುವುದು ಬಹಳ ಕಷ್ಟ. ಹಾಗೆಯೇ ನಿಯೋಗದ ವಿಶ್ವಾಸಾರ್ಹತೆಯೂ ತನ್ನ ಪರಿಣಾಮವನ್ನು ಬೀರುತ್ತದೆ. ಭಯೋತ್ಪಾದನಾ ವಿರೋಧಿ ನಿಲುವಿನ ಕುರಿತಂತೆ ಸ್ವತಃ ನಿಯೋಗದಲ್ಲಿದ್ದ ಸದಸ್ಯರು ಎಷ್ಟರ ಮಟ್ಟಿಗೆ ಪ್ರಾಮಾಣಿಕರಾಗಿದ್ದಾರೆ ಎನ್ನುವುದರ ಆಧಾರದಲ್ಲಿ ನಿಯೋಗವನ್ನು ಇತರ ದೇಶಗಳು ಗಂಭೀರವಾಗಿ ಸ್ವೀಕರಿಸುತ್ತವೆ. ಆದುದರಿಂದ, ಪಾಕಿಸ್ತಾನದ ಭಯೋತ್ಪಾದನೆಯ ಕುರಿತಂತೆ ಅತ್ಯಂತ ಭಾವಾವೇಷದಿಂದ ಮಾತನಾಡುವ ಈ ನಿಯೋಗದೊಳಗಿರುವ ಸದಸ್ಯರು, ಭಾರತದಲ್ಲಿ ಸಂಘಪರಿವಾರ ಪ್ರೇರಿತವಾದ ಭಯೋತ್ಪಾದನೆಯ ವಿರುದ್ಧ ಯಾವ ನಿಲುವನ್ನು ಹೊಂದಿದ್ದಾರೆ? ಗಾಂಧಿಯನ್ನು ಕೊಂದ ಭಯೋತ್ಪಾದಕ ಗೋಡ್ಸೆಯನ್ನು ಬೆಂಬಲಿಸುವ ಸಂಘಟನೆಗಳ ಜೊತೆಗೆ, ಹಿಂದೂರಾಷ್ಟ್ರಸ್ಥಾಪನೆಯಾಗಬೇಕು ಎಂದು ಆಗ್ರಹಿಸುವವರ ಜೊತೆಗೆ ಈ ನಿಯೋಗದೊಳಗಿರುವ ಸದಸ್ಯರ ನಿಲುವೇನು? ವಿಶ್ವ ಇದನ್ನೂ ಗಮನಿಸುತ್ತದೆ. ಸ್ವದೇಶದಲ್ಲಿ ಭಯೋತ್ಪಾದನಾ ಚಿಂತನೆಗಳಿಗೆ ನೀರೆರೆಯುತ್ತಾ ಯುರೋಪ್ ದೇಶಗಳಿಗೆ ಹೋಗಿ ಭಯೋತ್ಪಾದನೆಯ ವಿರುದ್ಧ ಉಪನ್ಯಾಸಗಳನ್ನು ಮಾಡಿದರೆ ಅವರದನ್ನು ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆಗಳು ಕಡಿಮೆ. ‘ಭಾಷಣಗಳಿಂದ ಬದಲಾವಣೆ’ಗಳನ್ನು ತರಲು ಸಾಧ್ಯವಾಗುವುದೇ ಆಗಿದ್ದರೆ, ಮೋದಿಯ ಭಾಷಣಗಳಿಂದ ಈ ದೇಶದಲ್ಲಿ ಬದಲಾವಣೆಗಳು ತುಂಬಿ ತುಳುಕಬೇಕಾಗಿದ್ದವು. ಈ ನಿಯೋಗದೊಳಗಿರುವ ರಾಜಕೀಯ ನಾಯಕರ ಮಾತುಗಳನ್ನು ದೇಶದ ಜನರೇ ಎಷ್ಟರಮಟ್ಟಿಗೆ ನಂಬುತ್ತಾರೆ? ಎನ್ನುವ ಪ್ರಶ್ನೆಗೆ ಉತ್ತರ ವಿಲ್ಲದೇ ಇರುವಾಗ, ವಿದೇಶಗಳು ಇವರ ಮಾತುಗಳನ್ನು ಗಂಭೀರವಾಗಿ ಸ್ವೀಕರಿಸಬೇಕು ಎಂದೇನಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಆರೆಸ್ಸೆಸ್ನಂತಹ ಸಂಘಟನೆಗಳ ಉಗ್ರವಾದಿ ನಿಲುವುಗಳು, ಮಣಿಪುರದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ವ್ಯಾಪಾಕ ಹಿಂಸಾಚಾರ, ಕಾಶ್ಮೀರದಲ್ಲಿ ಮಾನವ ಹಕ್ಕುಗಳ ದಮನ ಇವೆಲ್ಲವುಗಳ ವಿರುದ್ಧ ಜಗತ್ತು ತನ್ನ ಆಕ್ಷೇಪಗಳನ್ನು ವ್ಯಕ್ತಪಡಿಸಿದಾಗ ಅದನ್ನು ಭಾರತ ಸಹಿಸಿರಲಿಲ್ಲ. ಇದೀಗ ತನ್ನ ಮಾತನ್ನು ಜಗತ್ತು ಆಲಿಸಬೇಕು ಮತ್ತು ತನ್ನನ್ನು ಬೆಂಬಲಿಸಬೇಕು ಎಂದು ಬಯಸುವಾಗ ಕೆಲವು ಬಿಕ್ಕಟ್ಟುಗಳು ಎದುರಾಗುತ್ತವೆ. ಈ ತೊಡಕು, ಬಿಕ್ಕಟ್ಟುಗಳನ್ನು ಮೀರಿ ನಾವು ಜಗತ್ತನ್ನು ತಲುಪಿದ್ದೇವೆ, ನಮ್ಮ ಮಾತುಗಳನ್ನು ಯುರೋಪ್ ದೇಶಗಳು ಗಂಭೀರವಾಗಿ ತೆಗೆದುಕೊಂಡಿದೆ ಎಂದು ಸರ್ವಪಕ್ಷ ನಿಯೋಗ ಹೇಳಿಕೊಂಡಿರುವುದು ನಿಜಕ್ಕೂ ಸಮಾಧಾನ ತರುವ ವಿಷಯ. ಇವುಗಳ ನಡುವೆಯೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಪಾಕಿಸ್ತಾನವನ್ನು ನೇಮಕ ಮಾಡಲಾಗಿದೆ. ಅಷ್ಟೇ ಅಲ್ಲ, ತಾಲಿಬಾನ್ ನಿರ್ಬಂಧ ಸಮಿತಿಯ 2025ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕೂ ಪಾಕಿಸ್ತಾನವನ್ನು ನೇಮಿಸಲಾಗಿದೆ. ಪಾಕಿಸ್ತಾನದ ವಿರುದ್ಧ ಭಾರತ ಕಳುಹಿಸಿದ ಸರ್ವಪಕ್ಷ ನಿಯೋಗದ ಸಂದೇಶವನ್ನು ಅಣಕಿಸುವಂತೆ ಈ ನೇಮಕಗಳು ನಡೆದಿವೆ. ಇದು ಸರ್ವಪಕ್ಷ ನಿಯೋಗಗಳು ವಿದೇಶಗಳಲ್ಲಿ ಸಂಪೂರ್ಣ ವಿಫಲವಾಗಿರುವುದನ್ನು ಹೇಳುತ್ತಿಲ್ಲವೆ?
ಇದೀಗ ಸರ್ವಪಕ್ಷ ನಿಯೋಗ ತನ್ನ ಕೆಲಸವನ್ನು ಮುಗಿಸಿ ಭಾರತಕ್ಕೆ ವಾಪಸಾಗಿದೆ. ಈ ನಿಯೋಗವನ್ನು ಯಾವ ಕಾರಣಕ್ಕೂ ಭಾರತ ಸರಕಾರ ಬರ್ಖಾಸ್ತು ಮಾಡಬಾರದು. ಭಾರತದೊಳಗೆ ಹಿಂದುತ್ವದ ಹೆಸರಿನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯ ಕುರಿತಂತೆ ದೇಶದ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಈ ನಿಯೋಗವನ್ನು ಸರಕಾರ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಹಿಂದುತ್ವವಾದಿ, ಗೋಡ್ಸೆವಾದಿ, ಕೇಸರಿ ಭಯೋತ್ಪಾದಕರ ವಿರುದ್ಧ, ಪಂಜಾಬ್ನಲ್ಲಿ ಖಾಲಿಸ್ತಾನಿ ಭಯೋತ್ಪಾದಕರು, ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಭಯೋತ್ಪಾದಕರು, ಮಣಿಪುರದಲ್ಲಿ ಬುಡಕಟ್ಟು ವಿರೋಧಿ ಉಗ್ರವಾದಿ ಸಂಘಟನೆಗಳು, ಛತ್ತೀಸ್ಗಡದಲ್ಲಿ ನಕ್ಸಲ್ವಾದಿ ಭಯೋತ್ಪಾದಕರ ವಿರುದ್ಧ ಅಭಿಪ್ರಾಯ ರೂಪಿಸುವ ಕೆಲಸವನ್ನು ಈ ಸರ್ವಪಕ್ಷ ಸಮಿತಿಯು ಮುಂದುವರಿಸಬೇಕು. ಇದೇ ಸಂದರ್ಭದಲ್ಲಿ, ಮಣಿಪುರದ ಜನತೆಯೇ ಸೇರಿ ಒಂದು ಸರ್ವಪಕ್ಷ ನಿಯೋಗವನ್ನು ರಚಿಸಿ ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಬಗ್ಗೆ ಭಾರತಾದ್ಯಂತ ಸಂಚರಿಸಿ ಜಾಗೃತಿಯನ್ನು ಬಿತ್ತುವ ಕೆಲಸವನ್ನು ಮಾಡಬೇಕು. ಭಾರತ ಸರಕಾರವನ್ನು ಭೇಟಿ ಮಾಡಿ, ಪ್ರಧಾನಿ ನರೇಂದ್ರಮೋದಿಯ ಜೊತೆಗೆ ಮಾತುಕತೆ ನಡೆಸಿ ಅಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಅರಿವು ಮೂಡಿಸುವ ಕೆಲಸ ಈ ನಿಯೋಗ ಮಾಡಬೇಕು. ವಿವಿಧ ಧರ್ಮ, ಸಿದ್ಧಾಂತಗಳ ಹೆಸರಿನಲ್ಲಿ ಭಾರತವನ್ನು ಕಿತ್ತು ತಿನ್ನುತ್ತಿರುವ ಭಯೋತ್ಪಾದನೆ, ಉಗ್ರವಾದವನ್ನು ಚಿವುಟಿ ಹಾಕುವ ಮೂಲಕ ಭಾರತವು ಜಗತ್ತಿಗೆ ಭಯೋತ್ಪಾದನೆಯನ್ನು ಎದುರಿಸುವ ಮಾದರಿಯೊಂದನ್ನು ಹಾಕಿಕೊಡಬೇಕು.