ಇರಾನ್ ಮೇಲೆ ಮೂರು ದಿನಗಳ ಇಸ್ರೇಲ್ ದಾಳಿ; 244 ಮಂದಿ ಮೃತ್ಯು, 1,200 ಕ್ಕೂ ಹೆಚ್ಚು ಮಂದಿಗೆ ಗಾಯ

PC: x.com/Bit_Montie
ಟೆಹ್ರಾನ್:ಇಸ್ರೇಲ್ ಮೂರು ದಿನಗಳಿಂದ ಇರಾನ್ ಮೇಲೆ ನಡೆಸುತ್ತಿರುವ ದಾಳಿಯಲ್ಲಿ ಕನಿಷ್ಠ 224 ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ನ ಆರೋಗ್ಯ ಸಚಿವಾಲಯ ಹೇಳಿದೆ.
"ಯಹೂದಿ ಆಡಳಿತ ನಡೆಸಿದ 65 ಗಂಟೆಗಳ ಆಕ್ರಮಣದಲ್ಲಿ 1277 ಮಂದಿ ಗಾಯಗೊಂಡಿದ್ದಾರೆ. 224 ಮಂದಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ಹುತಾತ್ಮರಾಗಿದ್ದಾರೆ" ಎಂದು ಸಚಿವಾಲಯದ ವಕ್ತಾರ ಹೊಸೇನ್ ಕೆರ್ಮನ್ಪೋರ್ ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ. ಮೃತಪಟ್ಟವರಲ್ಲಿ ಶೇಕಡ 90ಷ್ಟು ನಾಗರಿಕರು ಎಂದು ಸ್ಪಷ್ಟಪಡಿಸಿದ್ದಾರೆ.
ಅಗ್ರ ಮಿಲಿಟರಿ ಸಿಬ್ಬಂದಿ ಮತ್ತು ಅಣುಸ್ಥಾವರ ವಿಜ್ಞಾನಿಗಳು ಸೇರಿದಂತೆ ದೇಶದ ಗುಪ್ತಚರ ವಿಭಾಗದ ಮುಖ್ಯಸ್ಥ ಮೊಹ್ಮದ್ ಕಝೇಮಿ ಮತ್ತು ಇತರ ಇಬ್ಬರು ಜನರಲ್ಗಳು ಮೃತಪಟ್ಟಿರುವುದನ್ನು ಇರಾನ್ ನ ರೆವಲ್ಯೂಶನರಿ ಗಾರ್ಡ್ ಪ್ರಕಟಿಸಿದೆ.
ಶುಕ್ರವಾರದ ಬಳಿಕ ಇರಾನ್ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದು, 390 ಮಂದಿ ಗಾಯಗೊಂಡಿದ್ದಾಗಿ ಇಸ್ರೇಲ್ ಹೇಳಿದೆ. ಇಸ್ಲಾಮಿಕ್ ದೇಶದ ಮೇಲಿನ ಇಸ್ರೇಲ್ ದಾಳಿಗೆ ವಿನಾಶಕಾರಿ ಪ್ರತಿಕ್ರಿಯೆ ನೀಡಲಾಗುವುದು ಎಂದು ಇರಾನ್ ನ ಮಿಲಿಟರಿ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.
"ಈ ವಿನಾಶಕಾರಿ ಪ್ರತಿಕ್ರಿಯೆ ಎಷ್ಟು ವಿಸ್ತೃತ ವ್ಯಾಪ್ತಿಯದ್ದಾಗಿರುತ್ತದೆ ಎಂದರೆ, ಇಸ್ರೇಲಿನ ಎಲ್ಲ ಆಕ್ರಮಿತ ಸ್ಥಳಗಳ ಮೇಲೆ ದಾಳಿ ನಡೆಯಲಿದೆ" ಎಂದು ಸಶಸ್ತ್ರ ಪಡೆಗಳ ವಕ್ತಾರ ಕರ್ನಲ್ ರೆಝಾ ಸಯ್ಯದ್ ಸ್ಪಷ್ಟಪಡಿಸಿದ್ದಾರೆ.







