ಉಕ್ರೇನ್ ನ 5 ಜೆಟ್ ಯುದ್ಧವಿಮಾನ ನಾಶ : ರಶ್ಯ ರಕ್ಷಣಾ ಇಲಾಖೆ ಹೇಳಿಕೆ
ಸಾಂದರ್ಭಿಕ ಚಿತ್ರ
ಮಾಸ್ಕೋ: ಉಕ್ರೇನ್ ನ ಪೊಲ್ಟಾವ ಪ್ರದೇಶದಲ್ಲಿನ ಮೈರೊರೊಡ್ ವಿಮಾನ ನಿಲ್ದಾಣದಲ್ಲಿದ್ದ ಉಕ್ರೇನ್ ನ 5 ಎಸ್ಯು-27 ಜೆಟ್ ಯುದ್ಧವಿಮಾನಗಳನ್ನು ಇಸ್ಕಾಂಡರ್ ಎಮ್ ಕ್ಷಿಪಣಿಗಳ ಮೂಲಕ ನಾಶಗೊಳಿಸಿದ್ದು 2 ವಿಮಾನಗಳನ್ನು ಹಾನಿಗೊಳಿಸಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಮಂಗಳವಾರ ಹೇಳಿದ್ದು ವಿಮಾನ ನಿಲ್ದಾಣದಲ್ಲಿ ಬೆಂಕಿಯ ಜ್ವಾಲೆ ಮತ್ತು ಹೊಗೆಯ ಕಾರ್ಮೋಡ ಆಗಸಕ್ಕೆ ವ್ಯಾಪಿಸುತ್ತಿರುವ ವೀಡಿಯೊವನ್ನು ಬಿಡುಗಡೆಗೊಳಿಸಿದೆ.
ಮೈರೊರೊಡ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆದಿರುವುದನ್ನು ಉಕ್ರೇನ್ ವಾಯುಪಡೆಯ ಅಧಿಕಾರಿ ಯೂರಿಯ್ ಇಹ್ನಾಟ್ ದೃಢಪಡಿಸಿದ್ದಾರೆ. ದಾಳಿ ನಡೆದಿದೆ ಮತ್ತು ಸ್ವಲ್ಪ ಹಾನಿ ಸಂಭವಿಸಿದೆ. ಆದರೆ ಶತ್ರುಗಳು ಹೇಳುವಷ್ಟರ ಮಟ್ಟಿನ ಹಾನಿ ಸಂಭವಿಸಿಲ್ಲ. ಈ ರೀತಿಯ ದಾಳಿ ಆಕ್ರಮಣ ಆರಂಭವಾದಂದಿನಿಂದಲೂ ನಡೆಯುತ್ತಿದೆ ಎಂದವರು ಹೇಳಿದ್ದಾರೆ. ದಾಳಿಗೂ ಮುನ್ನ ಉಕ್ರೇನ್ ವಿಮಾನ ನಿಲ್ದಾಣದ ಮೇಲೆ ರಶ್ಯದ ವಿಚಕ್ಷಣ (ಸ್ಥಳ ಶೋಧನೆ) ಡ್ರೋನ್ ಹಾರಾಟ ನಡೆಸಲು ಯಶಸ್ವಿಯಾಗಿದೆ. ಇಂತಹ ಡ್ರೋನ್ಗಳನ್ನು ಹೊಡೆದುರುಳಿಸಲು ನಮ್ಮ ಬಳಿ ಸಾಕಷ್ಟು ವ್ಯವಸ್ಥೆಗಳಿಲ್ಲ ಎಂದು ಉಕ್ರೇನ್ನ ಉನ್ನತ ಅಧಿಕಾರಿಯೊಬ್ಬರು ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.