ಮಹಿಳಾ ಉದ್ದೇಶಿತ ಯೋಜನೆಗಳಿಗೆ 70,427 ಕೋಟಿ ರೂ. ಆಯವ್ಯಯ ನಿಗದಿ: ಸಿದ್ದರಾಮಯ್ಯ
"ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ ಸುಮಾರು 30,000 ಕೋಟಿ ರೂ. ವೆಚ್ಚ"

ಬೆಂಗಳೂರು, ಜು.7: ಪ್ರಸಕ್ತ (2023-24ನೇ) ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 70,427 ಕೋಟಿ ರೂ. ಆಯವ್ಯಯ ನಿಗದಿಪಡಿಸಲಾಗಿದೆ. ಅದೇರೀತಿ ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2023-24 ನೇ ಸಾಲಿನಲ್ಲಿ 51,229 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿಂದು ಅವರು ಬಜೆಟ್ ಮಂಡಿಸಿದ ಮುಖ್ಯಮಂತ್ರಿ, ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ ಸುಮಾರು 30,000 ಕೋಟಿ ರೂ. ವೆಚ್ಚವಾಗಲಿದ್ದು, ಇದು ಇಡೀ ದೇಶದಲ್ಲಿಯೇ ಅತೀ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಲಿದೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ ನಮ್ಮ ರಾಜ್ಯದ ಮಹಿಳೆಯರಿಗೆ ಬದುಕಿನ ನಿರ್ವಹಣೆಯನ್ನು ಇನ್ನಷ್ಟು ಸುಗಮಗೊಳಿಸಲು ಮತ್ತು ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದ್ದು, ಮಹಿಳೆಯರ ಖಾತೆಗೆ ನೇರವಾಗಿ ಮಾಸಿಕ 2,000 ರೂ.ಗಳನ್ನು ವರ್ಗಾಯಿಸಲಾಗುವುದು ಎಂದು ಸಿಎಂ ವಿವರಿಸಿದರು.
ವಿಶೇಷಚೇತನರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢತೆಯನ್ನು ಒದಗಿಸಲು ಇಲಾಖೆಯಲ್ಲಿ ನೋಂದಣಿಯಾಗಿರುವ ಸುಮಾರು 4,000 ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಒದಗಿಸಲಾಗುವುದು. ಇದಲ್ಲದೆ, ನೋಂದಣಿಯಾಗದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಮಹಿಳಾ ಉದ್ಯಮಿಗಳು ಆತಿಥ್ಯ, ಆರೈಕೆ ಮತ್ತು ಪ್ರವಾಸೋದ್ಯಮದಂತಹ ಸೇವಾ ವಲಯದಲ್ಲಿ ಹೆಚ್ಚಿನ ಅವಕಾಶ ಪಡೆಯುತ್ತಿದ್ದಾರೆ. ಆದ್ದರಿಂದ, ಸೇವಾ ವಲಯದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಶೇ.4 ರ ಬಡ್ಡಿ ದರದಲ್ಲಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಕೋಟಿ ರೂ.ಗಳಿಂದ ಐದು ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.
2023-24ನೇ ಸಾಲಿನಲ್ಲಿ 10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನು ಏಳು ಜಿಲ್ಲೆಗಳಲ್ಲಿ NGOಗಳ ಸಹಯೋಗದೊಂದಿಗೆ ಎರಡು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
ರಾಜ್ಯದಲ್ಲಿನ ಆಸಿಡ್ ದಾಳಿ ಸಂತ್ರಸ್ತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಇವರಿಗೆ ಸ್ವಯಂ ಉದ್ಯೋಗಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಐದು ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲು ಎರಡು ಕೋಟಿ ರೂ. ಅನುದಾನ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.







