ಇರಾನ್ ನಿಂದ ದಾಳಿ | ಇದುವರೆಗೂ 550ಕ್ಕೂ ಹೆಚ್ಚು ಕ್ಷಿಪಣಿ–ಡ್ರೋನ್ ಗಳನ್ನು ತಡೆದ ಬಹ್ರೇನ್: ವರದಿ

Photo Credit : aljazeera.com
ಮನಾಮಾ: ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಯುದ್ಧ ಆರಂಭವಾದ ಬಳಿಕ ಬಹ್ರೇನ್ ದೇಶವನ್ನು ಗುರಿಯಾಗಿಸಿಕೊಂಡು ನಡೆದ 550ಕ್ಕೂ ಹೆಚ್ಚು ಇರಾನಿನ ದಾಳಿಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಬಹ್ರೇನ್ ಸೇನೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಒಂದು ತಿಂಗಳ ಅವಧಿಯಲ್ಲಿ 174 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 385 ಡ್ರೋನ್ ಗಳನ್ನು ತಡೆಹಿಡಿಯಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿದೆ. ದೇಶದ ನಾಗರಿಕ ಮೂಲಸೌಕರ್ಯ ಹಾಗೂ ಖಾಸಗಿ ಆಸ್ತಿಗಳನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಗಳನ್ನು ಸೇನೆ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಡ್ರೋನ್ ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಬಳಕೆ "ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಯುಎನ್ ಚಾರ್ಟರ್ ನ ಸ್ಪಷ್ಟ ಉಲ್ಲಂಘನೆ" ಆಗಿದ್ದು, "ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆ" ಎಂದು ಹೇಳಲಾಗಿದೆ.
ಶನಿವಾರ ಮುಂಜಾನೆ ಸಂಭವನೀಯ ದಾಳಿಗಳ ಬಗ್ಗೆ ಎಚ್ಚರಿಸಲು ಬಹ್ರೇನ್ ನಲ್ಲಿ ಎರಡು ಬಾರಿ ಎಚ್ಚರಿಕಾ ಸೈರನ್ ಗಳನ್ನು ಮೊಳಗಿಸಲಾಯಿತು. ಸಾರ್ವಜನಿಕರು ತಕ್ಷಣವೇ ಹತ್ತಿರದ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಆಂತರಿಕ ಸಚಿವಾಲಯ ಮನವಿ ಮಾಡಿದೆ.
ಇದೇ ವೇಳೆ, ಇರಾನ್ ನಡೆಸಿದ ಹಿಂದಿನ ದಾಳಿಯ ಪರಿಣಾಮವಾಗಿ ಉಂಟಾದ ಅಗ್ನಿ ಅವಘಡವನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.







