"ಸಚಿವ ಸ್ಥಾನಮಾನ ನಾನು ಕೇಳಿರುವುದಲ್ಲ": ಸಚಿವ ಸ್ಥಾನಮಾನ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಹೇಶ್ ಜೋಶಿ ಪ್ರತಿಕ್ರಿಯೆ

ಮಹೇಶ್ ಜೋಶಿ
ಬೆಂಗಳೂರು: ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ನಾನು ಕೇಳಿರುವುದಲ್ಲ, ಕೇಳಿದ್ದು, ಕನ್ನಡ, ಕನ್ನಡಿಗ, ಕರ್ನಾಟಕದ ಕಾರ್ಯವನ್ನು ನಿರ್ವಹಿಸಲು ಅನುಕೂಲವಾಗುವಂತೆ, ಶಿಷ್ಟಾಚಾರ ಪರಿಪಾಲನೆಯಲ್ಲಿ ವಿನಾಯತಿಯನ್ನು ಮಾತ್ರ. ಸಚಿವ ದರ್ಜೆ ಸ್ಥಾನಮಾನ ನೀಡಿದ ಮೇಲೆಯೂ ಎಲ್ಲಿಯೂ ಅದರ ಗೌರವಕ್ಕೆ ಚ್ಯುತಿ ಬಾರದೆ ಹಾಗೆ ನಿರ್ವಹಿಸಿದ್ದೇನೆ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ನೀಡಲಾಗಿದ್ದ ರಾಜ್ಯ ಸಚಿವ ದರ್ಜೆ ಸ್ಥಾನಮಾನ ಮತ್ತು ಎಲ್ಲ ಸವಲತ್ತುಗಳನ್ನು ರಾಜ್ಯ ಸರಕಾರ ಶನಿವಾರ ವಾಪಸ್ ಪಡೆದಿತ್ತು.
ರವಿವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದ ಅವರು, ಸಚಿವ ದರ್ಜೆ ಸ್ಥಾನಮಾನವನ್ನು ಸರಕಾರವು ಕನ್ನಡ ಸಾಹಿತ್ಯ ಪರಿಷತ್ನ ಮಹತ್ವವನ್ನು ಪರಿಗಣಿಸಿ ನೀಡಿರುವ ಸೌಲಭ್ಯವೇ ಹೊರತು, ವೈಯುಕ್ತಿಕವಾದದ್ದಲ್ಲ. ಕನ್ನಡ ಸಾಹಿತ್ಯ ಪರಿಷತ್ ಪರಿಷತ್ ಕನ್ನಡಿಗರ ಧ್ವನಿಯಾಗಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ, ಅಧ್ಯಕ್ಷರಿಗೆ ದೊರಕುವ ಗೌರವವೆಂದರೆ ಕನ್ನಡಿಗರಿಗೆ ದೊರಕುವ ಗೌರವ. ಹೀಗಾಗಿ, ಏಕಾಏಕೀ ಕೆಲ ವ್ಯಕ್ತಿಗಳ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು, ಈ ಗೌರವವನ್ನು ಹಿಂಪಡೆಯುವ ಪ್ರಕ್ರಿಯೆ ನಡೆಸುವುದು ಕನ್ನಡಿಗರಿಗೆ ಮಾಡುವ ಅವಮಾನ ಎಂದು ಹೇಳಿದ್ದಾರೆ.







