ಮಧ್ಯಪ್ರದೇಶ ಚುನಾವಣೆಯ ಮೇಲೆ ಕಣ್ಣಿಟ್ಟು ಭೋಪಾಲ್ ನಲ್ಲಿ 5 ವಂದೇ ಭಾರತ್ ರೈಲುಗಳಿಗೆ ಪ್ರಧಾನ ಮಂತ್ರಿ ಚಾಲನೆ

ಭೋಪಾಲ್: ಮಧ್ಯಪ್ರದೇಶದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಭೋಪಾಲ್ ನಲ್ಲಿ ಒಂದೇ ದಿನ 5 ವಂದೇ ಭಾರತ್ ರೈಲುಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು.
ಮಧ್ಯಪ್ರದೇಶದ ಭೋಪಾಲ್ ನ ರಾಣಿ ಕಮಲಪತಿ ರೈಲು ನಿಲ್ದಾಣದಿಂದ ಭೋಪಾಲ್ ನಿಂದ ಇಂದೋರ್ ಮತ್ತು ಭೋಪಾಲ್ ನಿಂದ ಜಬಲ್ಪುರಕ್ಕೆ ಎರಡು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.
ಇನ್ನೂ ಮೂರು ವಂದೇ ಭಾರತ್ ರೈಲುಗಳಾದ -- ಮಡಗಾಂವ್ (ಗೋವಾ)-ಮುಂಬೈ ವಂದೇ ಭಾರತ್ ಎಕ್ಸ್ ಪ್ರೆಸ್, ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್, ಮತ್ತು ಹಟಿಯಾ-ಪಾಟ್ನಾ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ವರ್ಚುವಲ್ ಆಗಿ ಚಾಲನೆ ನೀಡಿದರು..
"ಈ ರೈಲುಗಳು ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಬಿಹಾರ ಹಾಗೂ ಜಾರ್ಖಂಡ್ ನಲ್ಲಿ ಸಂಪರ್ಕವನ್ನು ಸುಧಾರಿಸುತ್ತವೆ" ಎಂದು ಪ್ರಧಾನಿ ಮೋದಿ ಸೋಮವಾರ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ರೈಲ್ವೇ ಸಚಿವೆ ಅಶ್ವಿನಿ ವೈಷ್ಣವ್, ಮಧ್ಯಪ್ರದೇಶ ರಾಜ್ಯಪಾಲ ಮಂಗುಭಾಯ್ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬೆಳಗ್ಗೆ ಭೋಪಾಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರು ಹೆಲಿಕಾಪ್ಟರ್ ಮೂಲಕ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ತಲುಪಬೇಕಿತ್ತು, ಆದರೆ ಪ್ರತಿಕೂಲ ಹವಾಮಾನದಿಂದಾಗಿ ಅವರು ರಸ್ತೆ ಮೂಲಕ ಸ್ಥಳಕ್ಕೆ ತೆರಳಿದರು ಎಂದು ರಾಜ್ಯ ಬಿಜೆಪಿ ಮಾಧ್ಯಮ ಉಸ್ತುವಾರಿ ಆಶಿಶ್ ಅಗರವಾಲ್ ಹೇಳಿದ್ದಾರೆ.
ಪಕ್ಷದ "ಮೇರಾ ಬೂತ್ ಸಬ್ಸೆ ಮಜ್ಬೂತ್" ಅಭಿಯಾನದಡಿಯಲ್ಲಿ ತಮ್ಮ ಬೂತ್ ಗಳನ್ನು ಸಬಲೀಕರಣಗೊಳಿಸುವಲ್ಲಿ ಪರಿಣಾಮಕಾರಿ ಕೊಡುಗೆ ನೀಡಿದ ದೇಶಾದ್ಯಂತ ಆಯ್ಕೆಯಾದ 3,000 ಪಕ್ಷದ ಕಾರ್ಯಕರ್ತರೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಷ್ಣು ದತ್ ಶರ್ಮಾ ತಿಳಿಸಿದ್ದಾರೆ







