ಉತ್ತರ ಪ್ರದೇಶ 5 ವರ್ಷಗಳಲ್ಲಿ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ರಾಜ್ಯವಾಗಲಿದೆ: ಆದಿತ್ಯನಾಥ್

ಲಖನೌ: ಉತ್ತರ ಪ್ರದೇಶವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅವರು ರಾಜ್ಯಕ್ಕೆ 'ಯುಪಿ ಫಾರ್ ಯುಪಿ, ಯುಪಿ ಫಾರ್ ಇಂಡಿಯಾ, ಯುಪಿ ಫಾರ್ ಗ್ಲೋಬಲ್' ಅನ್ನು ರೂಪಿಸಿದ್ದಾರೆ.
ಈಗ ಉತ್ತರ ಪ್ರದೇಶಕ್ಕೆ ತನ್ನ ಎಲ್ಲಾ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಸಮಯ ಬಂದಿದೆ. ಉತ್ತರ ಪ್ರದೇಶವು ರಾಷ್ಟ್ರದ ಬಹು ಆಯಾಮದ ಬೆಳವಣಿಗೆಗೆ ತನ್ನನ್ನು ತಾನು ಅತ್ಯಂತ ಪ್ರಮುಖ ನೆಲೆಯಾಗಿ ಸ್ಥಾಪಿಸಲಿದೆ. ಯುಪಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ವಲಯವಾರು ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಕಾರ್ಯತಂತ್ರಗಳನ್ನು ರೂಪಿಸಲಾಗುವುದು ಎಂದು ಆದಿತ್ಯನಾಥ್ ಹೇಳಿದ್ದಾರೆ.
ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಮುಖ್ಯಮಂತ್ರಿ ಆದಿತ್ಯನಾಥ್ ಅವರು ಐದು ವರ್ಷಗಳ ಕಾಲಾವಧಿಯನ್ನು ನಿಗದಿಪಡಿಸಿದ್ದಾರೆ. 2027ರ ವೇಳೆಗೆ ಉತ್ತರ ಪ್ರದೇಶ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ರಾಜ್ಯವಾಗಲಿದೆ ಎಂದು ಹೇಳಿದ್ದಾರೆ. ಶುಕ್ರವಾರ ರಾಜ್ಯದ ಆದಾಯ-ಖರ್ಚು ಮತ್ತು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.





