ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಸ್ಪರ್ಶಿಸಿ ಮಹಿಳೆ ಮೃತ್ಯು, ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾದ ನೀರಿನ ಸೆಳೆತದ ನಡುವೆ ವಿದ್ಯುತ್ ಸ್ಪರ್ಶಗೊಂಡು ಮಹಿಳೆಯೊಬ್ಬರು ಇಂದು ದಿಲ್ಲಿಯ ರೈಲು ನಿಲ್ದಾಣದಲ್ಲಿ ಸಾವನ್ನಪ್ಪಿದ್ದಾರೆ.
ಪೂರ್ವ ದಿಲ್ಲಿಯ ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಅವರು ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳೊಂದಿಗೆ ಬೆಳಿಗ್ಗೆ 5:30 ರ ಸುಮಾರಿಗೆ ರೈಲು ನಿಲ್ದಾಣಕ್ಕೆ ಬಂದರು. ಮಹಿಳೆಯು ಕೊಚ್ಚೆಗುಂಡಿಗಳನ್ನು ತಪ್ಪಿಸಲು ವಿದ್ಯುತ್ ಕಂಬವನ್ನು ಹಿಡಿದಾಗ ಭಾರೀ ಪ್ರಮಾಣದ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ.
ಜೀವ ಉಳಿಸುವ ಪ್ರಯತ್ನದಲ್ಲಿ ದಾರಿಹೋಕರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸದಿಲ್ಲಿ ರೈಲು ನಿಲ್ದಾಣದ ನಿರ್ಗಮನ ಸಂಖ್ಯೆ ಒಂದರ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಸ್ಥಳಕ್ಕೆ ತಲುಪಿದಾಗ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ.
ಸಂತ್ರಸ್ತೆಯ ಸಹೋದರಿ, ಮಾಧ್ವಿ ಚೋಪ್ರಾ, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ಆರೋಪಿಸಿ ದೂರು ದಾಖಲಿಸಿದರು, ಅದರ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.







