ಟೊಮೆಟೊ ಬೆಲೆ ತೀವ್ರ ಏರಿಕೆ: ತನ್ನ ಹೊಲದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ರೈತ
![ಟೊಮೆಟೊ ಬೆಲೆ ತೀವ್ರ ಏರಿಕೆ: ತನ್ನ ಹೊಲದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ರೈತ ಟೊಮೆಟೊ ಬೆಲೆ ತೀವ್ರ ಏರಿಕೆ: ತನ್ನ ಹೊಲದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ರೈತ](https://www.varthabharati.in/h-upload/2023/08/08/1178190-tomato.gif)
Photo credit: indiatoday.in
ಮುಂಬೈ: ದೇಶಾದ್ಯಂತ ಟೊಮೆಟೊ ಬೆಲೆ ತೀವ್ರ ಏರಿಕೆಯಾಗಿರುವುದರಿಂದ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ರೈತರೊಬ್ಬರು, ಕಳ್ಳತನ ತಡೆಯಲು ತಮ್ಮ ಹೊಲದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಟೊಮೆಟೊ ಬೆಲೆಯಲ್ಲಿ ತೀವ್ರ ಏರಿಕೆಯಾಗಿರುವುದರಿಂದ ಅವರು ಇಂತಹ ನಿರ್ಧಾರಕ್ಕೆ ಬಂದಿದ್ದಾರೆ ಎಂದು indiatoday.in ವರದಿ ಮಾಡಿದೆ.
ಮಹಾರಾಷ್ಟ್ರದಲ್ಲಿ ಟೊಮೆಟೊ ಬೆಲೆಯು ಪ್ರತಿ ಕೆಜಿಗೆ ಅಂದಾಜು ರೂ. 160 ಇದೆ.
ಭಾರತೀಯ ಗೃಹ ಬಳಕೆಯಲ್ಲಿ ಪ್ರಮುಖ ಆಹಾರ ಪದಾರ್ಥವಾಗಿ ಬಳಕೆಯಾಗುತ್ತಿರುವ ಟೊಮೆಟೊ ಬೆಲೆಯು ಕೆಲ ಸಮಯದ ನಂತರ ಮತ್ತೆ ಏರುಮುಖವಾಗಿದ್ದು, ಸರ್ಕಾರವು ಟೊಮೆಟೊವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ.
ನನ್ನ ಹೊಲದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ರೂ. 22,000 ವೆಚ್ಚ ಮಾಡಿದ್ದೇನೆ ಎಂದು ತಿಳಿಸಿರುವ ರೈತ ಶರದ್ ರಾವಟೆ, ಇದು ಈ ಹೊತ್ತಿನ ಅನಿವಾರ್ಯ ಎಂದೂ ಹೇಳಿದ್ದಾರೆ. ಟೊಮೆಟೊ ಬೆಲೆ ತೀವ್ರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸದ್ಯ ದುಬಾರಿಯಾಗಿರುವ ಟೊಮೆಟೊ ಕಳವು ಪ್ರಕರಣಗಳು ಬೆಳಕಿಗೆ ಬರತೊಡಗಿವೆ.
ಕರ್ನಾಟಕ ಪೊಲೀಸರ ಪ್ರಕಾರ, ಕರ್ನಾಟಕದ ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ರೂ. 21 ಲಕ್ಷ ಮೌಲ್ಯದ ಟೊಮೆಟೊವನ್ನು ಹೊತ್ತುಕೊಂಡು ತೆರಳುತ್ತಿದ್ದ ಟ್ರಕ್ ಒಂದು ಕಾಣೆಯಾಗಿದೆ ಎಂದು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಝಾರ್ಖಂಡ್ ನ ತರಕಾರಿ ಮಾರುಕಟ್ಟೆಯೊಂದರಲ್ಲಿ ಕಳ್ಳರು 40 ಕೆಜಿ ಟೊಮೆಟೊವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಆಗಸ್ಟ್ 1ರಂದು ಟೊಮೆಟೊದ ಸರಾಸರಿ ದರವು ಪ್ರತಿ ಕೆಜಿಗೆ ರೂ. 132.5 ಆಗಿದ್ದರೆ, ಕೇವಲ ಒಂದು ವಾರದ ಹಿಂದೆ ಅದರ ದರವು ಪ್ರತಿ ಕೆಜಿಗೆ ರೂ. 120 ಇತ್ತು.