ವಿಮಾನ ಪತನದಲ್ಲಿ ತಂದೆ, ಮಗ ಸಾವಿಗೀಡಾದ ಕೆಲವೇ ಕ್ಷಣಗಳ ಹಿಂದೆ ತೆಗೆದ ವೀಡಿಯೋ ವೈರಲ್

ಬ್ರೆಸಿಲಿಯಾ: ಬ್ರೆಝಿಲ್‌ನಲ್ಲಿ ತಂದೆ ಮತ್ತು ಮಗ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನವೊಂದು ಪತನವಾಗುವ ಕೆಲವೇ ಕ್ಷಣಗಳ ಹಿಂದೆ ವಿಮಾನದಲ್ಲಿ ತೆಗೆಯಲಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ.
ವೀಡಿಯೋದಲ್ಲಿ ಗಾರನ್ ಮೈಯ್ಯಾ (42) ಬಿಯರ್ ಸೇವಿಸುತ್ತಾ ಇರುವಾಗ ಆತನ 11 ವರ್ಷದ ಪುತ್ರ ವಿಮಾನದ ಪೈಲಟ್ ಸ್ಥಾನದಲ್ಲಿರುವುದು ಕಾಣಿಸುತ್ತದೆ. ಈ ಡಬಲ್ ಇಂಜಿನ್ ವಿಮಾನದ ಮೌಲ್ಯ 1.7 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದು ವಿಮಾನದಲ್ಲಿ ತೆಗೆದ ಈ ವೀಡಿಯೋವನ್ನು ಸ್ವತಃ ಗಾರನ್ ಜುಲೈ 29ರಂದು ಅಪಘಾತ ಸಂಭವಿಸುವುದಕ್ಕಿಂತ ಕೆಲವೇ ಕ್ಷಣಗಳ ಮೊದಲು ಪೋಸ್ಟ್ ಮಾಡಿದ್ದ ಎಂದು ವರದಿಯಾಗಿದೆ.
ನೋವಾ ಕಾಂಖ್ವಿಸ್ತಾದಿಂದ ಅವರು ಪ್ರಯಾಣ ಆರಂಭಿಸಿ ನಂತರ ವಿಮಾನಕ್ಕೆ ಇಂಧನ ತುಂಬಿಸಲು ಭೂಸ್ಪರ್ಶ ಮಾಡಿ, ಸಂಜೆ 5.30ಕ್ಕೆ ಮತ್ತೆ ಹಾರಾಟ ಮುಂದುವರಿಸಿದ ಎಂಟು ನಿಮಿಷಗಳಲ್ಲಿ ವಿಮಾನ ಪತನಗೊಂಡಿತ್ತು. ಈ ಸಂದರ್ಭ ಈ ಬೀಚ್‌ಕ್ರಾಫ್ಟ್ ಬೇರನ್ 58 ವಿಮಾನವನ್ನು ಯಾರು ಚಲಾಯಿಸುತ್ತಿದ್ದರೆಂಬುದು ಸ್ಪಷ್ಟವಾಗಿಲ್ಲ.
ವೀಡಿಯೋದಲ್ಲಿ ಗಾರನ್ ಎಲ್ಲವೂ ಸರಿಯಾಗಿದೆಯೇ ಎಂದು ಪ್ರಶ್ನಿಸುತ್ತಿರುವುದು ಮತ್ತು ಮಗನಿಗೆ ಸೂಚನೆ ನೀಡುತ್ತಿರುವುದು ಕೇಳಿಸುತ್ತದೆ.
“ಕೈ ಲಿವರ್ ಮೇಲಿರಲಿ, ಕೈ ಅಲ್ಲಿರಿಸು ಮತ್ತು ವೇಗದವನ್ನು ಗಮನಿಸು,” ಎಂದು ಆತ ಪೋರ್ಚುಗೀಸ್ ಭಾಷೆಯಲ್ಲಿ ಹೇಳುತ್ತಿರುವುದು ಕೇಳಿಸುತ್ತದೆ.
ಅವರ ಮೃತದೇಹಗಳು ಜುಲೈ 30ರಂದು ರಕ್ಷಣಾ ಕಾರ್ಯಕರ್ತರಿಗೆ ಸಿಕ್ಕಿವೆ. ಇಬ್ಬರ ಅಂತ್ಯಕ್ರಿಯೆ ಆಗಸ್ಟ್ 1 ರಂದು ನಡೆದ ಬೆನ್ನಿಗೇ ಗಾರನ್ ಪತ್ನಿ, 27 ವರ್ಷದ ಅನಾ ಪ್ರಿಡೊನಿಕ್ ಮತ್ತು ಮಲತಾಯಿ ಫ್ರಾನ್ಸಿಸ್ಕೋ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇಬ್ಬರೂ ಆತ್ಮಹತ್ಯೆಗೈದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ಘಟನೆ ಹಿಂದೆ ಗಾರನ್ ಪಾತ್ರ ಹಾಗೂ ಇತರ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬ್ರೆಝಿಲ್‌ನಲ್ಲಿ ಪೈಲಟ್ ಲೈಸನ್ಸ್ ಪಡೆಯಲು ವ್ಯಕ್ತಿಯೊಬ್ಬ ಹೈಸ್ಕೂಲ್ ಪದವೀಧರನಾಗಿರಬೇಕು ಹಾಗೂ ನ್ಯಾಷನಲ್ ಸಿವಿಲ್ ಏವ್ಯೇಷನ್ ಸೇಫ್ಟಿ ಏಜನ್ಸಿಯಲ್ಲಿ ನೋಂದಣಿ ಮಾಡಿರಬೇಕು.







