ಚೀನಾ ಜತೆ ಒಪ್ಪಂದ ಬಳಿಕ ಭಾರತದ ಜತೆ ದೊಡ್ಡ ವ್ಯಾಪಾರ ಒಪ್ಪಂದದ ಸುಳಿವು ನೀಡಿದ ಟ್ರಂಪ್

PC: x.com/KyivPost
ವಾಷಿಂಗ್ಟನ್: ಚೀನಾ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿರುವುದನ್ನು ಗುರುವಾರ ಪ್ರಕಟಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶೀಘ್ರವೇ ಭಾರತದ ಜತೆ 'ಅತಿ ದೊಡ್ಡ ವ್ಯಾಪಾರ ಒಪ್ಪಂದ" ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ.
"ಚೀನಾ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಈಗಷ್ಟೇ ಸಹಿ ಮಾಡಿದ್ದೇವೆ. ಎಲ್ಲರೊಂದಿಗೂ ನಾವು ಒಪ್ಪಂದ ಮಾಡಿಕೊಳ್ಳುವುದಿಲ್ಲ. ಆದರೆ ನಾವು ಕೆಲ ಒಳ್ಳೆಯ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಮುಂದಿನ ದಿನಗಳಲ್ಲಿ ಬಹುಶಃ ಭಾರತದ ಜತೆಗೆ ದೊಡ್ಡ ಒಪ್ಪಂದ ಮಾಡಿಕೊಳ್ಳಲಿದ್ದೇವೆ" ಎಂದು ಟ್ರಂಪ್ ಶ್ವೇತಭವನದಲ್ಲಿ ನಡೆದ ಸಮಾರಂಭದ ಬಳಿಕ ಹೇಳಿದರು.
"ನಾವು ಭಾರತವನ್ನು ಅನಾವರಣಗೊಳಿಸಲಿದ್ದೇವೆ. ಚೀನಾ ಜತೆಗಿನ ಒಪ್ಪಂದದಲ್ಲಿ ನಾವು ಚೀನಾವನ್ನು ಅನಾವರಣಗೊಳಿಸಲು ಆರಂಭಿಸಿದ್ದೇವೆ. ಇವು ನಿಜವಾಗಿಯೂ ಸಾಧ್ಯವಿರಲಿಲ್ಲ. ಎಲ್ಲ ದೇಶಗಳ ಜತೆಗಿನ ಸಂಬಂಧ ಉತ್ತಮವಾಗಿದೆ" ಎಂದರು. ಅದರೆ ಚೀನಾ ಜತೆಗಿನ ಒಪ್ಪಂದದ ವಿವರಗಳನ್ನು ನೀಡಲು ನಿರಾಕರಿಸಿದರು.
ಎಲ್ಲ ದೇಶಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.







