ಗಾಝಾ ಯುದ್ಧ ಮುಗಿದ ಅಧ್ಯಾಯ: ಡೊನಾಲ್ಡ್ ಟ್ರಂಪ್

PC: x.com/the_hindu
ವಾಷಿಂಗ್ಟನ್: ಯುದ್ಧವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಯೊಂದಿಗೆ ಗಾಝಾ ಯುದ್ಧ ಮುಕ್ತಾಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇಸ್ರೇಲ್ ಹಾಗೂ ಈಜಿಪ್ಟ್ ಗೆ ಭಾನುವಾರ ಪ್ರಯಾಣ ಬೆಳೆಸುವ ಮುನ್ನ ಮಾತನಾಡಿದ ಟ್ರಂಪ್, "ಇದು ತೀರಾ ವಿಶೇಷ ಕ್ಷಣ" ಎಂದರು.
"ಇದು ಅತ್ಯಂತ ವಿಶೇಷ ಕ್ಷಣವಾಗಲಿದೆ" ಎಂದು ಜಾಯಿಂಟ್ ಬೇಸ್ ಆ್ಯಂಡ್ರೂಸ್ ನಲ್ಲಿ ಏರ್ಫೋರ್ಸ್ ವನ್ ವಿಮಾನ ಏರುವ ಮುನ್ನ ಸುದ್ದಿಗಾರರಿಗೆ ತಿಳಿಸಿದರು. "ಈ ಕ್ಷಣಕ್ಕೆ ಪ್ರತಿಯೊಬ್ಬರಿಗೂ ರೋಮಾಂಚನವಾಗಿದೆ" ಎಂದು ಉದ್ಗರಿಸಿದರು.
ರಾಷ್ಟ್ರೀಯ ಕಾರ್ಯದರ್ಶಿ ಮಾರ್ಕೊ ರುಬಿಯೊ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಸಿಐಎ ಮುಖ್ಯಸ್ಥ ಜಾನ್ ರಾಟ್ಕ್ಲಿಫ್ ಅವರು ಅಧ್ಯಕ್ಷರ ಜತೆ ಪ್ರಯಾಣ ಬೆಳೆಸಿದ್ದಾಗಿ ಶ್ವೇತಭವನಪ್ರಕಟಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಅಂತ್ಯವಾಗಿದೆ ಎಂಬ ವಿಶ್ವಾಸ ನಿಮಗಿದೆಯೇ ಎಂಬ ಪ್ರಶ್ನೆಗೆ, "ಯುದ್ಧ ಮುಗಿದಿದೆ, ನಿಮಗೆ ಅರ್ಥವಾಗಿರಬೇಕಲ್ಲವೇ?" ಎಂದು ಉತ್ತರಿಸಿದರು.
"ಇದು ವಿಶೇಷ ಸಂದರ್ಭ; ಪ್ರತಿಯೊಬ್ಬರಿಗ ಸಂತಸವಾಗಿದೆ. ಈ ಮೊದಲು ಎಂದೂ ಘಟಿಸಿರಲಿಲ್ಲ. ಸಾಮಾನ್ಯವಾಗಿ ಒಬ್ಬರಿಗೆ ಸಂತಸವಾದರೆ ಮತ್ತೊಬ್ಬರಿಗೆ ಆಗುವುದಿಲ್ಲ. ಇದೇ ಮೊದಲ ಬಾರಿಗೆ ಪ್ರತಿಯೊಬ್ಬರಿಗೂ ಸಂತಸವಾಗಿದೆ; ಅವರಿಗೆ ರೋಮಾಂಚನವಾಗಿದೆ. ಇದು ಪಾಲ್ಗೊಳ್ಳಬೇಕಾದ ಸಂತಸದ ಕ್ಷಣದಲ್ಲಿ ನಾವಿದ್ದೇವೆ. ಈ ಮೊದಲು ಘಟಿಸದ ವಿಶೇಷ ಇದು" ಎಂದು ಪ್ರವಾಸದ ಮಹತ್ವವನ್ನು ವಿವರಿಸಿದರು.
ಇಸ್ರೇಲ್ ಹಾಗೂ ಈಜಿಪ್ಟ್ ನಲ್ಲಿ ನಡೆಯುವ ಶಾಂತಿ ಒಪ್ಪಂದ ಮತ್ತು ಒತ್ತೆಯಾಳುಗಳ ಬಿಡುಗಡೆಯನ್ನು ಸಂಭ್ರಮಿಸುವ ಸಮಾರಂಭಗಳಲ್ಲಿ ಟ್ರಂಪ್ ಭಾಗವಹಿಸುವ ನಿರೀಕ್ಷೆ ಇದೆ.







