ತುಮಕೂರು ಡಿಸಿಸಿ ಬ್ಯಾಂಕ್ ಚುನಾವಣೆ| ಕೆ.ಎನ್.ರಾಜಣ್ಣ ಬಣಕ್ಕೆ ವಿಜಯ

ತುಮಕೂರು, ಆ.24 : ಇಂದು ನಡೆದ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರು ಹಾಗೂ ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಗುಂಪು ಭರ್ಜರಿ ಗೆಲುವು ಸಾಧಿಸಿದೆ.
ತುಮಕೂರು ಡಿಸಿಸಿ ಬ್ಯಾಂಕಿನ 14 ನಿರ್ದೇಶಕ ಸ್ಥಾನಗಳಲ್ಲಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ ಆರು ಎ ವರ್ಗದ ನಿರ್ದೇಶಕ ಸ್ಥಾನಗಳಿಗೆ ತಿಪಟೂರು, ಕುಣಿಗಲ್,ಗುಬ್ಬಿ, ಚಿಕ್ಕನಾಯಕನಹಳ್ಳಿ,ಪಾವಗಡ,ಶಿರಾ ತಾಲೂಕುಗಳ ವಿಎಸ್‌ಎಸ್‌ಎನ್ ಸದಸ್ಯರುಗಳಿಂದ ತಲಾ ಒಂದೊಂದು ಸ್ಥಾನ ಆಯ್ಕೆಯಾಗಬೇಕಿದ್ದು, ಇಂದು ಬೆಳಗ್ಗೆಯಿಂದಲೇ ಮತದಾನ ನಡೆದಿದೆ. ಸಂಜೆ ಐದು ಗಂಟೆಯ ವೇಳೆ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಣೆ ಮಾಡಿದ್ದಾರೆ.
ಇಂದು ಮತದಾನ ನಡೆದ ಕುಣಿಗಲ್ ತಾಲೂಕಿನಿಂದ ಬಿ.ಶಿವಣ್ಣ, ತಿಪಟೂರಿನಿಂದ ಶಾಸಕ ಕೆ.ಷಡಕ್ಷರಿ, ಶಿರಾದಿಂದ ಹಾಲಿ ನಿರ್ದೇಶಕ ಜಿ.ಎಸ್.ರವಿ, ಪಾವಗಡದಿಂದ ಶಾಸಕರು ಹಾಗು ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಚಿಕ್ಕನಾಯಕನಹಳ್ಳಿಯಿಂದ ಹಾಲಿ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್, ಗುಬ್ಬಿ ತಾಲೂಕಿನಿಂದ ಪ್ರಭು ಜಯಗಳಿಸಿದ್ದಾರೆ.
ಉಳಿದಂತೆ ತುಮಕೂರಿನಿಂದ ಕೆ.ಎನ್.ರಾಜಣ್ಣ, ತುರುವೇಕೆರೆಯಿಂದ ಎಂ.ಸಿದ್ದಲಿಂಗಪ್ಪ, ಮಧುಗಿರಿಯಿಂದ ಜಿ.ಜೆ.ರಾಜಣ್ಣ, ಕೊರಟಗೆರೆಯಿಂದ ಎಸ್.ಹನುಮಾನ್,ಟಿಎಪಿಸಿಎಂಎಸ್‌ನಿಂದ ಆರ್.ರಾಜೇಂದ್ರ, ಎಸ್.ಲಕ್ಷ್ಮೀನಾರಾಯಣ್, ಬಿ.ನಾಗೇಶ್‌ಬಾಬು, ಮಹಿಳಾ ಕ್ಷೇತ್ರದಿಂದ ಮಾಲತಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಚುನಾವಣಾ ಫಲಿತಾಂಶದ ನಂತರ ಮಾತನಾಡಿದ ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ಹಾಗೂ ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಚುನಾವಣೆಯಲ್ಲಿ ಗೆಲುವು ಪಡೆದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸಹಕಾರಿಗಳಿಗೆ ಪಕ್ಷವಿಲ್ಲ. ಹಾಗಾಗಿ ಗೆದ್ದವರೆಲ್ಲರೂ ನಮ್ಮವರೇ ಆಗಿದ್ದಾರೆ. ಮುಂದಿನ ಸೆಪ್ಟಂಬರ್ 2 ಅಥವಾ 4 ರಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಚುನಾವಣೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.







