ಮಾದಕ ಅಂಶವಿರುವ ಮಾತ್ರೆಗಳು, ಸಿರಿಂಜ್ ಮಾರಾಟ ಆರೋಪ: 7 ಜನರ ಬಂಧನ

ಸಾಂದರ್ಭಿಕ ಚಿತ್ರ
ತುಮಕೂರು : ಶಾಲಾ, ಕಾಲೇಜುಗಳ ಬಳಿ ಟೈಡಾಲ್ ಮಾತ್ರೆಗಳು, ಇಂಜಕ್ಷನ್ ಸಿರಿಂಜ್ಗಳನ್ನು ಮಾರಾಟ ಮಾಡುತಿದ್ದ ಆರೋಪದಡಿ ಮೆಡ್ಪ್ಲಸ್ ಸಿಬ್ಬಂದಿ ಸಹಿತ ಆರಕ್ಕೂ ಹೆಚ್ಚು ಜನರನ್ನು ಬಂಧಿಸಿರುವ ತುಮಕೂರು ಪೊಲೀಸರು, ಬಂಧಿತರಿಂದ ಸಾಕಷ್ಟು ಪ್ರಮಾಣದ ಟೈಡಾಲ್ ಮಾತ್ರೆ ಮತ್ತು ಸಿರಿಂಜ್ಗಳನ್ನು ವಶಪಡಿಸಿಕೊಂಡಿರುವುದು ವರದಿಯಾಗಿದೆ.
ಮಾದಕ ದ್ರವ್ಯವಿರುವ ಟೈಡಾಲ್ ಮಾತ್ರೆಗಳ ಸಿಪ್ಪೆಗಳು ನಗರದ ಪಾರ್ಕ್ಗಳು, ಶಾಲಾ, ಕಾಲೇಜುಗಳ ಬಳಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಅಕ್ರಮ ಮಾತ್ರೆಗಳ ಮಾರಾಟ ಜಾಲವನ್ನು ಭೇದಿಸಲು ಮುಂದಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳನ್ನು ಮೆಡ್ಪ್ಲ್ಲಸ್ ಸಿಬ್ಬಂದಿ ಭಾನುಪ್ರಕಾಶ್ ಬಿನ್ ಲಿಂಗಣ್ಣ(32), ಮೆಡಿಕಲ್ ರೆಫ್ ರಾಘವೇಂದ್ರ ಬಿನ್ ನಾರಾಯಣಮೂರ್ತಿ(43), ಆಟೋ ಪ್ಲಾಸ್ಟ್ ಕಂಪೆನಿ ಸಿಬ್ಬಂದಿ ಅಭಿಷೇಕ್ ಬಿನ್ ಶಿವಕುಮಾರ್ (23), ಮುಹಮ್ಮದ್ ಸೈಫ್ ಬಿನ್ ಲೇಟ್ ಮುಹಮ್ಮದ್ ತಾಜುದ್ದೀನ್(22), ಸೈಯದ್ ಲುಕ್ಮಾನ ಬಿನ್ ನೌಷಾದ್(23), ಅಫ್ತಾಬ್ ಬಿನ್ ಹಮ್ಜು (23), ಗುರುರಾಜ್ ಎಚ್.ಎಸ್.ಬಿನ್ ಶಾಮಣ್ಣ (28)ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 30 ಸಾವಿರ ರೂ.ಗಳಿಗೂ ಹೆಚ್ಚು ಬೆಲೆ ಬಾಳುವ ಟೈಡಾನ್ ಮಾತ್ರೆಗಳು, ಸಿರಿಂಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಚರಣೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಮರಿಯಪ್ಪ ಹಾಗೂ ಬಿ.ಎಸ್. ಅಬ್ದುಲ್ಖಾದರ್ ಮಾರ್ಗದರ್ಶನದಲ್ಲಿ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್.ಚಂದ್ರಶೇಖರ್ ಹಾಗೂ ತಿಲಕ್ಪಾರ್ಕ್ ಪೊಲೀಸ್ ವೃತ್ತ ನಿರೀಕ್ಷಕ ಪುರುಷೋತ್ತಮ್, ಹೊಸಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಭಾರತಿ ಮತ್ತು ಎಎಸ್ಐ ಅಂಜೀನಪ್ಪ,ಸಿಬ್ಬಂದಿ ಮಂಜುನಾಥ್, ಕೆ.ಟಿ.ನಾರಾಯಣ, ತಿಲಕ್ ಪಾರ್ಕ್ ಠಾಣೆಯ ನಿಝಾಮುದ್ದೀನ್, ಮಧು, ಸುನಿಲ್, ನಧಾಫ್, ಲೋಕೇಶ್ಪಾಲ್ಗೊಂಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಪ್ರಶಂಸಿದ್ದಾರೆ.
ನಶೆ ಬರಿಸುವ ಮಾತ್ರೆಗಳ ಸೇವನೆಯಿಂದ ಯುವ ಜನತೆ ಮತ್ತು ವಿದ್ಯಾರ್ಥಿಗಳ ಶರೀರಕ್ಕೆ ಮತ್ತು ಮೆದುಳಿಗೆ ಹಾನಿಯುಂಟಾಗಿ ಅವರ ಜೀವನ ಹಾಳಾಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳ ಮೇಲೆ ನಿಗಾವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸಾರ್ವಜನಿಕರು, ಪೋಷಕರಲ್ಲಿ ಮನವಿ ಮಾಡಿದ್ದಾರೆ.







