ಡಾ.ಶಿವಕುಮಾರ ಸ್ವಾಮೀಜಿಗಳ ಜೀವನ ಎಲ್ಲರಿಗೂ ಸ್ಫೂರ್ತಿ : ರಾಜ್ಯಪಾಲ ಗೆಹ್ಲೋಟ್

ತುಮಕೂರು: ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಲಿಂಗೈಕ್ಯ ಡಾ.ಶಿವಕುಮಾರ ಮಹಾಶಿವಯೋಗಿಗಳ ಜೀವನ ಪಯಣ, ಸೇವೆ, ಸಮರ್ಪಣಾ ಬದುಕು, ಈ ನಾಡಿನ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನ ಶ್ರೀಸಿದ್ಧಗಂಗಾ ಮಠದಲ್ಲಿ ಶ್ರೀಶಿವಕುಮಾರ ಮಹಾಶಿವಯೋಗಿಗಳ 6ನೇ ಪುಣ್ಯ ಸಂಸ್ಮರಣೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಳ ಜೀವನ ಮತ್ತು ಉನ್ನತ ಚಿಂತನೆಯ ತತ್ವವನ್ನು ಅನುಸರಿಸಿ, ಇತರರನ್ನು ಅದೇ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸಿದ ಶಿವಕುಮಾರ ಸ್ವಾಮೀಜಿ ಅವರ ಸೇವೆಯನ್ನು ಮೆಚ್ಚಿ ಹಲವಾರು ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದ ಪ್ರಶಸ್ತಿಗಳು ದೊರೆತಿದೆಯಲ್ಲದೆ, ಭಾರತ ಸರಕಾರವು ಅವರಿಗೆ 2015ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ಹೇಳಿದರು.
ವಿಶ್ವ ಸಹೋದರತ್ವ, ವಿಶ್ವ ಶಾಂತಿ, ಸಮಾನತೆ ಹಾಗೂ ಸಾಮರಸ್ಯವನ್ನು ಪ್ರೇರೇಪಿಸುವ ಭಾರತೀಯ ಸಂಸ್ಕೃತಿಯು ಅನಂತವಾದುದು. ನಮ್ಮ ಸಂತರು ಅನಾದಿ ಕಾಲದಿಂದಲೂ ನಿರಂತರವಾಗಿ ಭಾರತೀಯ ಸಂಸ್ಕೃತಿಯನ್ನು ರಕ್ಷಿಸುತ್ತಿದ್ದಾರೆ. ನಮ್ಮ ಧರ್ಮದ ಏಕತೆ, ಸಮಗ್ರತೆ ಮತ್ತು ಸನಾತನ ಧರ್ಮದ ಪರಂಪರೆಯನ್ನು ಶ್ರೀಮಂತಗೊಳಿಸಲು ಸಾಧು-ಸಂತರು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.ಸಾಧುಗಳು,ಸಂತರು,ಆಚಾರ್ಯರು ಮತ್ತು ಋಷಿಮುನಿಗಳು ವಿಶ್ವ ವೇದಿಕೆಯಲ್ಲಿ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಧ್ವಜವನ್ನು ಹಾರಿಸಿದ್ದಾರೆ. ಪ್ರಸ್ತುತ ಪ್ರಪಂಚದ ಅನೇಕ ದೇಶಗಳು ಆಧ್ಯಾತ್ಮಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಭಾರತದ ಕಡೆಗೆ ನೋಡುತ್ತಿವೆ. ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ "ಮಹಾ ಕುಂಭ ಮೇಳ" ಒಂದು ಉದಾಹರಣೆಯಾಗಿದೆ ಎಂದು ತಿಳಿಸಿದರು.
ತ್ರಿವಿಧ ದಾಸೋಹದ ಮೂಲಕ 111 ವರ್ಷಗಳ ಕಾಲ ಮಾನವೀಯತೆಯ ಶ್ರೇಯೋಭಿವೃದ್ಧಿಗಾಗಿ ಡಾ.ಶಿವಕುಮಾರ ಸ್ವಾಮೀಜಿಯವರ ಆರನೇ ಪುಣ್ಯತಿಥಿಗೆ ಆಗಮಿಸುವ ಮೂಲಕ ಪೂಜ್ಯರ ದರ್ಶನ ಮತ್ತು ಆಶೀರ್ವಾದ ಪಡೆಯುವ ಅವಕಾಶ ನನಗೆ ದೊರತಿರುವುದು ಸಂತಸ ತಂದಿದೆ. ಧಾರ್ಮಿಕತೆ, ಧರ್ಮನಿಷ್ಠೆ ಮತ್ತು ಸಕಾರಾತ್ಮಕ ಶಕ್ತಿಯ ಪುಣ್ಯ ಭೂಮಿಯಾಗಿರುವ ಶ್ರೀ ಸಿದ್ದಗಂಗಾ ಮಠವು ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಸೇವೆ ಸಲ್ಲಿಸಿರುವ ಜಾನಪದ ಜಂಗಮ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾಡೋಜ ಡಾ: ಗೊ.ರು.ಚನ್ನಬಸಪ್ಪ ಅವರಿಗೆ ಸಿದ್ಧಗಂಗಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಹಾಗೂ ಬಿ.ಸುರೇಶ್‍ಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಮೇಘಾಲಯದ ಹಿರಿಯ ಅಧಿಕಾರಿ ಬ್ರಹ್ಮದತ್ ಸೇರಿದಂತೆ ಶ್ರೀಮಠದ ಆಡಳಿತಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು, ಅಸಂಖ್ಯಾತ ಭಕ್ತಾಧಿಗಳು ಉಪಸ್ಥಿತರಿದ್ದರು.







