24ನೇ ರಾಷ್ಟ್ರೀಯ ಜೂನಿಯರ್ ಅತ್ಲೆಟಿಕ್‌ಗೆ ಚಾಲನೆ

ತುಮಕೂರು : ತುಮಕೂರು ಶಿಕ್ಷಣ,ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿ ಜಿಲ್ಲೆಯಾಗಿದ್ದು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಮಹಾತ್ಮ್ಮಾಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಆರಂಭವಾಗಿರುವ 24ನೇ ರಾಷ್ಟ್ರೀಯ ಜೂನಿಯರ್ ಅತ್ಲೆಟಿಕ್ ಕ್ರೀಡಾಕೂಟವನ್ನು ಡಾ. ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ತುಮಕೂರಿನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಅಲ್ಲದೆ, ಅಂತರ್‌ರಾಷ್ಟ್ರೀಯ ಹಾಕಿ ಕ್ರೀಡಾಂಗಣ ಹಾಗೂ ಈಜುಕೊಳ ನಿರ್ಮಿಸಲು ಈಗಾಗಲೇ ಜಾಗ ಗುರುತಿಸಲಾಗಿದೆ. ಮೇ 3ರಿಂದ ಅಂತರ್‌ರಾಷ್ಟ್ರೀಯ ಮಹಿಳಾ ಟೆನಿಸ್ ಕ್ರೀಡಾಕೂಟ ನಡೆಯಲಿದೆ. ಅಲ್ಲದೆ, ಇತ್ತೀಚೆಗೆ ನಡೆದ ಕರ್ನಾಟಕ ಕ್ರೀಡಾಕೂಟದ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ ಆಯವ್ಯಯದಲ್ಲಿ 3 ಕೋಟಿ ರೂ.ಈಗಾಗಲೇ ನೀಡಿದ್ದಾರೆ.ಈ ಎಲ್ಲಾ ಬೆಳವಣಿಗೆಯಿಂದಾಗಿ ತುಮಕೂರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಎ.24 ರಿಂದ 3 ದಿನಗಳು ನಡೆಯಲಿರುವ 24ನೇ ರಾಷ್ಟ್ರೀಯ 20 ವರ್ಷದೊಳಗಿನ ಜೂನಿಯರ್ ಅತ್ಲೆೆಟಿಕ್ ಕ್ರೀಡಾಕೂಟ ತುಮಕೂರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದ ಅವರು, ಅಮೆರಿಕದಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆಯುವ ಅಂತರ್‌ರಾಷ್ಟ್ರೀಯ ಅತ್ಲೆೆಟಿಕ್ ಕ್ರೀಡಾಕೂಟದ ದೃಷ್ಟಿಯಿಂದ ಈ ಕ್ರೀಡಾಕೂಟ ಅತ್ಯಂತ ಮಹತ್ವ ಪಡೆದಿದೆ. ಅಮೆರಿಕದಲ್ಲಿ ನಡೆಯುವ ಅಂತರ್‌ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತದ ಪ್ರತಿನಿಧಿಗಳನ್ನು ಈ ಕ್ರೀಡಾಕೂಟದಲ್ಲಿ ಆಯ್ಕೆ ಮಾಡಲಾಗುತ್ತದೆ. ಇದೊಂದು ಮಹತ್ವದ ವಿಷಯವಾಗಿದೆ ಎಂದು ಅವರು ವಿವರಿಸಿದರು.
ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ. ಜ್ಯೋತಿಗಣೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿದ ಅತ್ಲೀಟ್‌ಗಳಾದ ಪ್ರಿಯಾಮೋಹನ್, ರೀತುಶ್ರೀ, ಎಂ.ಕೃಷಿಕ್ ಅವರ ಪೋಷಕರನ್ನು ಗೌರವಿಸಲಾಯಿತು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ.,ಮಹಾನಗರಪಾಲಿಕೆ ಆಯುಕ್ತೆ ಶುಭಾ ಬಿ.,ರಾಜ್ಯ ಅಥ್ಲೆಟಿಕ್ ಸಂಸ್ಥೆ ಸ್ಪರ್ಧಾ ನಿರ್ದೇಶಕ ಸತ್ಯನಾರಾಯಣ್, ತುಮಕೂರು ಅತ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಪ್ರಭಾಕರ್ ಎ.ಎನ್. ಉಪಸ್ಥಿತರಿದ್ದರು.






