ತುಮಕೂರು: ಕಾರ್ಮಿಕರಿಂದ ಬರಿಗೈಯಲ್ಲಿ ಚರಂಡಿ ಶುಚಿಗೊಳಿಸಿದ ಹೊಳಕಲ್ಲು ಗ್ರಾ.ಪಂ.ಅಧಿಕಾರಿಗಳು; ಆರೋಪ

ತುಮಕೂರು: ತಾಲೂಕಿನ ಹೊಳಕಲ್ಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾರ್ಮಿಕರನ್ನು ಸುರಕ್ಷತಾ ಸಾಧನಗಳಿಲ್ಲದೆ ಚರಂಡಿಗೆ ಇಳಿಸಿ ಶುಚಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೌರಕಾರ್ಮಿಕರು ಕೆಲಸ ಮಾಡಲು ಅವರಿಗೆ ಅಗತ್ಯವಿರುವ ಸುರಕ್ಷತಾ ಸಾಧನಗಳನ್ನು ನೀಡಬೇಕು. ಮುಂಜಾಗ್ರತಾ ಕ್ರಮಗಳಿಲ್ಲದೆ, ಚರಂಡಿ ಸ್ವಚ್ಚಗೊಳಿಸಲು ಕಾರ್ಮಿಕರನ್ನು ಇಳಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶವಿದ್ದರೂ ಕೆಲ ಅಧಿಕಾರಿಗಳು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕಾರ್ಮಿಕರಿಂದ ಗ್ರಾಮದ ಚರಂಡಿ ಕ್ಲೀನ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಹೊಳಕಲ್ಲು ಗ್ರಾಮದ ಸರಕಾರಿ ಶಾಲೆಯ ಮುಂಭಾಗದಲ್ಲಿರುವ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಹೊಳಕಲ್ಲು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಗ್ರಾಮಪಂಚಾಯಿತಿಯ ಪೌರಕಾರ್ಮಿಕರು ರಜೆಯಲ್ಲಿದ್ದ ಕಾರಣ, ದೂರದ ಕೊರಟಗೆರೆಯಿಂದ ಇಬ್ಬರು ಕೆಲಸಗಾರರನ್ನು ಕರೆತಂದು ಸುರಕ್ಷತಾ ಸಾಧನಗಳಾದ ಗಮ್ ಬೂಟ್, ಕೈಗವಸು, ಮಾಸ್ಕ್ ಯಾವುದನ್ನೂ ನೀಡದೆ, ಚರಂಡಿಯನ್ನು ಸ್ವಚ್ಚಗೊಳಿಸಿದ್ದಾರೆ ಎನ್ನಲಾಗಿದೆ.
ಹೊಳಕಲ್ಲು ಗ್ರಾಮದಲ್ಲಿ ನಡೆದಿರುವ ಈ ಕೃತ್ಯ ಕಾರ್ಮಿಕ ಕಾನೂನುಗಳ ಉಲ್ಲಂಘನೆಯಾಗಿದ್ದು, ಮೇಲಾಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಂಬಂಧಪಟ್ಟ ಪಿಡಿಒ ಅವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿಗಳಿಗೆ ಸುರಕ್ಷತಾ ಸಾಧನಗಳಿಲ್ಲದೆ ಪೌರಕಾರ್ಮಿರನ್ನು ಸ್ವಚ್ಚತಾ ಕಾರ್ಯಗಳಿಗೆ ನಿಯೋಜಿಸಬಾರದಂತೆ ಆದೇಶ ನೀಡಬೇಕೆಂದು ಸಮೃದ್ಧಿ ತಂಡ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಒತ್ತಾಯಿಸಿದೆ.
ಪೌರಕಾರ್ಮಿಕರನ್ನು ಕೆಲಸಕ್ಕೆ ಇಳಿಸುವ ಮೊದಲು ಅವರಿಗೆ ಅಗತ್ಯವಿರುವ ಸುರಕ್ಷತಾ ಪರಿಕರಗಳನ್ನು ನೀಡಬೇಕು. ಆದರೆ ಹೊಳಕಲ್ಲು ಗ್ರಾಮಪಂಚಾಯಿತಿ, ನಾಗವಲ್ಲಿ ಗ್ರಾಮಪಂಚಾಯಿತಿಯಲ್ಲಿ ಅಲ್ಲಿನ ಅಧಿಕಾರಿಗಳು ಯಾವ ಅಗತ್ಯ ವಸ್ತುಗಳನ್ನು ನೀಡದೆ, ಕೇವಲ ಗುದ್ದಲ್ಲಿ ನೀಡಿ, ಬರಿಗೈನಲ್ಲಿಯೇ ಚರಂಡಿ ಸ್ವಚ್ಚಗೊಳಿಸಿದ್ದಾರೆ. ಇದು ಖಂಡನೀಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಾಗವಲ್ಲಿ ಮತ್ತು ಹೊಳಕಲ್ಲು ಗ್ರಾಮಪಂಚಾಯಿತಿ ಪಿಡಿಓ ಮತ್ತು ಕಾರ್ಯದರ್ಶಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು.
- ಗಂಗಸಂದ್ರ ರಾಜು ಉಪಾಧ್ಯಕ್ಷರು ಸಮೃದ್ದಿ ತಂಡ,ತುಮಕೂರು.







