ಮತದಾರರ ಪಟ್ಟಿ ಸಿದ್ಧವಾಗಿದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲೇ : ಕೆ.ಎನ್.ರಾಜಣ್ಣ

ತುಮಕೂರು : ಲೋಕಸಭಾ ಚುನಾವಣೆಯಲ್ಲಿ ಮತಕಳವು ನಡೆದಿದೆ. ಆದರೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಗ ಎಲ್ಲರೂ ಕಣ್ಣುಮುಚ್ಚಿ ಕುಳಿತಿದ್ದರೇ? ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಕಳವಿನ ವಿಚಾರ ಮಾತನಾಡಲು ಹೋದರೆ ಮಾತನಾಡಬೇಕಾಗುತ್ತದೆ. ಅದು ಬೇರೆ–ಬೇರೆ ಆಗುತ್ತದೆ. ಲೋಕಸಭಾ ಚುನಾವಣೆ ನಡೆದದ್ದು, ಮತಪಟ್ಟಿ ಸಿದ್ಧಪಡಿಸಿದ್ದು, ನಮ್ಮ ಸರಕಾರದ ಅವಧಿಯಲ್ಲೇ. ಎಲ್ಲರೂ ಆಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದರು ಎಂದರು.
ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನೆ ಇದ್ದೇವಲ್ಲ ಎಂಬ ಬಗ್ಗೆ ನಾಚಿಕೆ ಆಗಬೇಕು. ನಮ್ಮ ಕಣ್ಣು ಮುಂದೆ ಅಕ್ರಮಗಳು ನಡೆದಿರುವುದನ್ನು ನೋಡಿದರೆ, ನಮಗೆ ಅವಮಾನ ಆಗಬೇಕು. ಆಗ ಸುಮ್ಮನೆ ಇದ್ದು, ಈಗ ಹೇಳುತ್ತಿದ್ದೇವೆ. ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದೆ ಎಚ್ಚರಿಕೆಯಿಂದ ಇರುತ್ತೇವೆ ಎಂದು ತಿಳಿಸಿದರು.
ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ವಿವಿಧ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ಹೇಳಿದಂತೆ ನಡೆಯುವಂತಿದ್ದರೆ ರಾಜಕಾರಣಿಗಳು ಏಕೆ ಇರಬೇಕು. ಎಲ್ಲ ಸ್ವಾಮೀಜಿಗಳು ಸೇರಿಕೊಂಡು ತೀರ್ಮಾನ ಮಾಡಬಹುದಿತ್ತಲ್ಲವೇ? ಸ್ವಾಮೀಜಿಗಳು ಹೇಳಿದಂತೆ ರಾಜಕಾರಣ ಮಾಡಲಾಗುತ್ತದೆಯೇ? ಅದೇ ರೀತಿ ನಡೆಯುತ್ತದೆಯೇ? ಎಂದು ಅವರು ಕುಟುಕಿದರು.







