ದಲಿತ ಸಿಎಂ ಯಾಕಾಗಬಾರದು? : ಕೆ.ಎನ್.ರಾಜಣ್ಣ

ತುಮಕೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲು ಜಾರಿಯಾದರೆ ನನ್ನ ಮಗಳು ಚುನಾವಣಾ ಕಣಕ್ಕೆ ಇಳಿಯುತ್ತಾಳೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲುಕು ದೊಡ್ಡೇರಿ ಹೋಬಳಿಯಲ್ಲಿ ಬುಧವಾರ ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಂತರ ಶಿವನಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ರಿ ರಶ್ಮಿ ರಾಜಣ್ಣ ರಾಜಕೀಯಕ್ಕೆ ಕಣಕ್ಕಿಳಿಯುವ ಬಗ್ಗೆ ಸುಳಿವು ನೀಡಿದರು.
2028ರ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಬಂದರೆ ನನ್ನ ಮಗಳನ್ನೇ ಮಧುಗಿರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ನುಡಿದರು.
ದಲಿತ ಮುಖ್ಯಮಂತ್ರಿ ಕುರಿತು ಮಾತನಾಡಿದ ರಾಜಣ್ಣ, ದಲಿತ ಸಿಎಂ ಯಾಕಾಗಬಾರದು? ಎಲ್ಲ ಸಮುದಾಯದವರಿಗೂ ನ್ಯಾಯ ನೀಡುವ ಪಕ್ಷ ಕಾಂಗ್ರೆಸ್. ನಮ್ಮ ಪಕ್ಷದಲ್ಲಿ ಎಲ್ಲ ಸಮುದಾಯದವರಿಗೂ ಅವಕಾಶ ಸಿಕ್ಕಿದ್ದು, ದಲಿತರು ಸಿಎಂ ಆದರೆ ತಪ್ಪೇನು? ಎಂದು ಪ್ರಶ್ನಿಸಿದರು.
ಶಾಸಕರ ವಿದೇಶ ಪ್ರವಾಸದ ಬಗ್ಗೆ ಮಾತನಾಡಿದ ಅವರು, ಕ್ಷೇತ್ರದ ಜನಪ್ರತಿನಿಧಿಗಳು ಅವರ ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸ ಹೋದರೆ ತಪ್ಪೇನು? ನಾನು ಹೋದಷ್ಟು ಫಾರಿನ್ ಟ್ರಿಪ್ ಯಾರೂ ಹೋಗಿಲ್ಲ. ಈ ವಿಚಾರದಲ್ಲಿ ನಾನು ಅದೃಷ್ಟವಂತ. ನಾನು ಜೊತೆಯಲ್ಲಿ ಯಾರನ್ನು ಕರೆದುಕೊಂಡು ಹೋಗಲ್ಲ. ಪ್ರವಾಸದಿಂದ ವಾಪಸ್ ಬಂದ ಮೇಲೂ ಹೇಳುವುದಿಲ್ಲ. ಇದು ನನ್ನ ಶೈಲಿ ಎಂದು ಹೇಳಿದರು.







