ಸಂಪುಟದಿಂದ ಕೆ.ಎನ್.ರಾಜಣ್ಣ ವಜಾ | ಮಧುಗಿರಿಯಲ್ಲಿ ಪ್ರತಿಭಟನೆ; ಬೆಂಬಲಿಗರ ಆಕ್ರೋಶ

ಮಧುಗರಿ : ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ವಜಾ ಮಾಡಿದ ವಿಚಾರಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ರಾಜಣ್ಣ ಅವರ ಅಭಿಮಾನಿಗಳು, ಬೆಂಬಲಿಗರು ಮಂಗಳವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡಿರುವುದರಿಂದ ಅಸಮಾಧಾನಗೊಂಡಿರುವ ಯುವ ಕಾರ್ಯಕರ್ತನೋರ್ವ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದವರು ಯುವಕನ್ನು ತಡೆದು ಸಮಾಧಾನಪಡಿಸಿದ್ದಾರೆ.
ಮಧುಗಿರಿಯಲ್ಲಿ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಟ್ಟಣದಾದ್ಯಂತ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕೆ.ಎನ್. ರಾಜಣ್ಣನವರ ಫೋಟೋ ಹಿಡಿದು ರಸ್ತೆಯುದ್ದಕ್ಕೂ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು, ಬಸ್‌ಗಳನ್ನು ತಡೆದು ಬಸ್ ಕೆಳಗೆ ಮಲಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸಂಪುಟದಿಂದ ರಾಜಣ್ಣನವರನ್ನು ವಜಾ ಮಾಡಿರುವುದು ತುಮಕೂರು ಜಿಲ್ಲೆಗೆ ಮಾಡಿದ ಅನ್ಯಾಯವಾಗಿದೆ. ಕೂಡಲೇ ಮುಖ್ಯಮಂತ್ರಿಗಳು ಮರುಪರಿಶೀಲಿಸಿ ಸರಿಪಡಿಸುವಂತೆಯೂ ಪ್ರತಿಭಟನಾಕಾರರು ಒತ್ತಾಯಿಸಿದರು.





