2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ : ಕೆ.ಎನ್.ರಾಜಣ್ಣ

ಕೆ.ಎನ್.ರಾಜಣ್ಣ
ತುಮಕೂರು : ʼಡಿ.ಕೆ.ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ ಸಚಿವ ಆಗುವುದಿಲ್ಲ. ಡಿಕೆಶಿ ಸಂಪುಟದಲ್ಲಿ ನನಗೆ ಸ್ಥಾನ ಬೇಡವೇ ಬೇಡ. ನನಗೆ ಸಾಕು, ಇನ್ನೊಬ್ಬರಿಗೆ ಅವಕಾಶ ಕೊಡಲಿ. ನಾನು 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲʼ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಸಹಕಾರ ಮಹಾಮಂಡಳದ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ನಾನು ಯಾವತ್ತೂ ಅಧಿಕಾರ ಹುಡುಕಿ ಹೋದವನಲ್ಲ. ಅಧಿಕಾರ ಬೇಕು ಎಂದು ಸಂಪೂರ್ಣ ಅಪೇಕ್ಷೆ ಪಡುವವನೂ ಅಲ್ಲ. ಅಧಿಕಾರ ಬಂದರೆ ಏನೆಲ್ಲಾ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದೇನೆ. ನಾನು ಸಚಿವನಾಗಿದ್ದಾಗ ಜಾರಿ ಮಾಡಿದ್ದ ತಿದ್ದುಪಡಿ ಜಾರಿಯಾದರೆ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತದೆ. ಸೊಸೈಟಿಗಳಲ್ಲೂ ನಾನು ಮೀಸಲಾತಿ ವ್ಯವಸ್ಥೆ ಜಾರಿ ಮಾಡಿದ್ದೇನೆ ಎಂದರು.
ಸಿಎಂ ಮತ್ತು ಡಿಸಿಎಂ ದುಬಾರಿ ವಾಚ್ಗಳ ಕುರಿತು ವಿರೋಧ ಪಕ್ಷದ ಟೀಕೆಯ ಬಗ್ಗೆ ಮಾತನಾಡಿದ ರಾಜಣ್ಣ, ವಿರೋಧ ಪಕ್ಷದವರಿಗೆ ವಿರೋಧ ಮಾಡುವುದಕ್ಕೆ ಬೇರೆ ವಿಚಾರ ಇಲ್ಲ. ವಾಚ್, ಊಟದ ಬಗ್ಗೆ ಆರೋಪ ಮಾಡುತ್ತಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.
ಇಂಡಿಗೋ ಸ್ಥಗಿತಕ್ಕೆ ಮೋದಿ ಒಬ್ಬರನ್ನೇ ದೂಷಿಸಬೇಡಿ :
ಇಂಡಿಗೋ ವಿಮಾನ ಹಾರಾಟ ಸ್ಥಗಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಇಂಡಿಗೋ ವಿಚಾರವಾಗಿ ಮೋದಿಯವರನ್ನು ಮಾತ್ರ ದೂಷಿಸಬಾರದು. 8 ಗಂಟೆ ಕೆಲಸದ ಬದಲು 12 ಗಂಟೆ ಕೆಲಸ ಮಾಡಿಸಿದ್ದಾರೆ. 200 ಜನ ಪೈಲೆಟ್ಸ್ ಕೊರತೆ ಇದೆ. ಹಾಗಾಗಿ ಸಮಸ್ಯೆ ಉಂಟಾಗಿದೆ ಎಂದರು.







