ಕೊರಟಗೆರೆ | ನಿಯಂತ್ರಣ ತಪ್ಪಿದ ಟಾಟಾ ಏಸ್; ಪಾದಚಾರಿಗಳಿಗೆ ಢಿಕ್ಕಿ, ಇಬ್ಬರು ಮೃತ್ಯು

ಕೊರಟಗೆರೆ : ಟಾಟಾ ಏಸ್ ವಾಹನ ಢಿಕ್ಕಿಯಾದ ಪರಿಣಾಮ ಇಬ್ಬರು ಪಾದಚಾರಿಗಳು ಮೃತಪಟ್ಟಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬೈರೇನಹಳ್ಳಿ ಬಸ್ ನಿಲ್ದಾಣದ ಸಮೀಪ ವರದಿಯಾಗಿದೆ.
ಮೃತರನ್ನು ನವೀನ್ (18) ಹಾಗೂ ನಕುಲ್ (17) ಎಂದು ಗುರುತಿಸಲಾಗಿದೆ. ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಗೌರಿಬಿದನೂರಿನಿಂದ ಮಧುಗಿರಿಯ ಕಡೆಗೆ ತೆರಳುತ್ತಿದ್ದ ಟಾಟಾ ಏಸ್ ವಾಹನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಢಿಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಬಳಿಕ ವಾಹನ ರಸ್ತೆ ಪಕ್ಕದಲ್ಲಿದ್ದ ಹೋಟೆಲ್‌ಗೆ ನುಗ್ಗಿದೆ. ಘಟನೆಯ ಸಂದರ್ಭದಲ್ಲಿ ಹೋಟೆಲ್‌ನೊಳಗಿದ್ದ ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಕೊರಟಗೆರೆ ಸಿಪಿಐ ಪುರುಷೋತ್ತಮ್ ಹಾಗೂ ಪಿಎಸ್‌ಐ ತೀರ್ಥೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.




